ಬುಧವಾರ, ಜನವರಿ 10, 2018

ಮಹಾಮಾಯಿಯ ಸನ್ನಿಧಾನದಲ್ಲಿ...

ಈ ಪ್ರಕೃತಿಯಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಲ್ಲ ಒಂದು ಸಮಯದಲ್ಲಿ ಹುಟ್ಟು ಸಾವಿನ ಬಗೆಗಿನ ವಿಶ್ಲೇಷಣೆ ಹುಟ್ಟೇ ಹುಟ್ಟುತ್ತದೆ. ಭೌತಿಕ ಜಗತ್ತಿನ ಆತ್ಮರತಿಗಳನ್ನ ಇನ್ನಷ್ಟು ಮತ್ತಷ್ಟು ದಿನ ಪಡೆಯಲೇಬೇಕು ಅನ್ನುವುದು ಯಾವತ್ ಕಾಲದ ಆಸೆಯಾದರೆ , ವಯಸ್ಸೆನ್ನುವುದು ಅದೆಲ್ಲಕ್ಕೂ ತೆರೆ ಎಳೆಯುವ ಮಹಾ ಕಲಾವಿದ.. ನಿಯಮಗಳ ಪರೀಕ್ಷೆಯಾದಲ್ಲಿ ಬಹುಶಃ ಒಂದು ವ್ಯವಸ್ಥೆಯಲ್ಲೇ ಏರುಪೇರಾಗುವ ಸಂಭವಗಳೇ ಜಾಸ್ತಿ.. ಹೀಗೆ ಸಾವಿನ ಪರಿಕಲ್ಪನೆಯನ್ನಿಟ್ಟುಕೊಂಡು ಶ್ರೀ ಚಂದ್ರಶೇಖರ ಕಂಬಾರ ಅವರಿಂದ ರಚಿತವಾದ ನಾಟಕ `ಮಹಾಮಾಯಿ'..

     ಮನುಷ್ಯನ ಅಥವಾ ಜೀವಿಯ ಸಾವಿನ ಮುನ್ಸೂಚನೆ ಮೊದಲೇ ತಿಳಿದಿದ್ದಲ್ಲಿ , ಉಳಿಸುವ ಎಲ್ಲಾ ವ್ಯರ್ಥ ಪ್ರಯತ್ನಗಳನ್ನ ಬಹುಶಃ ಬಿಟ್ಟುಬಿಡಬಹುದು.. ಅಥವಾ ಬದುಕಿನ ಮುನ್ಸೂಚನೆ ದೊರೆತಲ್ಲಿ , ಶತಾಯಗತಾಯ ಪ್ರಯತ್ನಿಸಿ ನಾಳೆಗಳನ್ನ ಕಟ್ಟಿಕೊಡಬಹುದು.. ಒಂದು ವೇಳೆ ಸಾವು ಹತ್ತಿರದಲ್ಲಿದೆ ಅಂತ ತಿಳಿದಿದ್ದರೂ , ಅದನ್ನು ಮುಂದೂಡುವ ಎಲ್ಲ ಅರ್ಥಪೂರ್ಣ ಪ್ರಯತ್ನಗಳಿದ್ದರೆ ಫಲಿಸುತ್ತವೆಯೇ? ಅಥವಾ ಸಾವಿನ ಜೊತೆ ನಿರಂತರ ಮಾತುಕತೆಯಲ್ಲಿದ್ದು ದಿನ ಕಳೆಯುವವರ ಮನಃಸ್ಥಿತಿಯಾದರೂ ಹೇಗಿದ್ದೀತು..? ಕೊನೆಯ ಹಂತದಲ್ಲೂ ಬದುಕಿನ ಭರವಸೆಯೊಂದು ಸಿಕ್ಕಾಗ ಮಾರ್ಪಾಡುಗಳೇನಾಗಬಹುದು; ದೈಹಿಕವಾಗಿ ಮತ್ತು ಮಾನಸಿಕವಾಗಿ.. ! ಹೀಗೆ ಸಾವಿನ ಅಧಿದೇವತೆಯಾದಂಥ ಮಹಾಮಾಯಿಯ ಜೊತೆಗಿನ ಸಂಘರ್ಷದ ಕತೆಯೇ ಈ ನಾಟಕ.. ಆಳ್ವಾಸ್ ರಂಗ ಅಧ್ಯಯನ ಕೇಂದ್ರದವರಿಂದ ೧೦೫ ಪ್ರದರ್ಶನಗಳನ್ನ ಕಂಡು , ಇನ್ನೂ ಹಲವಾರು ಕಡೆ ಪ್ರದರ್ಶನಗೊಳ್ಳಬೇಕಿರುವ ನಾಟಕ ಅಂದರೆ ಉತ್ಪ್ರೇಕ್ಷೆಯೇನಲ್ಲ.. ರಂಗ , ನಾಟಕ , ಬಣ್ಣ ಇವೆಲ್ಲಕ್ಕೂ ಇಂದಿನ ಕಾಲಘಟ್ಟದಲ್ಲಿ ಬೇರೆಯದೇ ಮಾಧ್ಯಮ ದೊರೆತಿದ್ದರೂ , ಒಂದು ನಾಟಕ ಇಷ್ಟು ಪ್ರದರ್ಶನಗಳನ್ನ ಕಾಣುತ್ತದೆ ಅಂತಾದಲ್ಲಿ ಅದರ ಗಟ್ಟಿತನವನ್ನ ಊಹಿಸಲೇಬೇಕು.. ಇನ್ನೂ ಈಗಷ್ಟೇ ರಂಗವನ್ನ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಾ ಇವರು ಅನ್ನುವ ಅಭಿನಯ ಪ್ರತಿಯೊಬ್ಬರಲ್ಲೂ ಕಾಣ್ತಿತ್ತು.. ಪುಷ್ಪಗಂಧಿ ಅನ್ನುವ ಪಾತ್ರ ರಾಜಕುಮಾರಿಯ ಸಖಿಯಾಗಿ , ಛೇಡಿಸುವ ನಮ್ಮೆಲ್ಲ ಗೆಳೆಯ ಗೆಳತಿಯರನ್ನ ನೆನಪಿಸಿದರೆ , ರಾಜಕುಮಾರಿಯ ಪಾತ್ರ ಒಂದೆಡೆ ಅದೆಷ್ಟೇ ವೈಭೋಗವಿದ್ದರೂ ಅದೆಲ್ಲವನ್ನು ಬಿಟ್ಟು ಹೊರಡುವ , ಕೊನೆಗೆ ಪ್ರೇಮದ ತಹತಹಿಕೆಯಲ್ಲಿ ಕನವರಿಸುವ ನಮ್ಮದೇ ಜಗತ್ತಿನ ಒಬ್ಬಳು ಹುಡುಗಿಯಂತೆ ತೋರಿದರೆ , ವಿದೂಷಕ ಮತ್ತು ಅವನ ಹೆಂಡತಿಯ ಪಾತ್ರಧಾರಿಗಳು ನವಿರು ಹಾಸ್ಯದ ಕಚಗುಳಿ ಇಡುತ್ತಾರೆ.. ಇನ್ನು ವೈದ್ಯನ ಪಾತ್ರದಲ್ಲಿ ಮೊದಮೊದಲು ಅಂಜಿಕೆ , ಅಸಹಾಯಕತೆ ನಿಧಾನವಾಗಿ ಹೋಗುತ್ತಾ , ದೃಢ ಮನಸ್ಸು ಆವರಿಸಿಕೊಳ್ಳುವ ಬಗೆ ಮತ್ತು ಕೊನೆಗಿನ ಚಾತುರ್ಯ ಎಲ್ಲಾ ಚೆನ್ನಾಗಿ ಬಿಂಬಿತ.. ಆಗಾಗ ಕರ್ತವ್ಯದ ಸೂಚನೆ ಕೊಡುವ ಕಠೋರ ಮುದುಕಿಯ ಪಾತ್ರ ನಮ್ಮೆಲ್ಲರೊಳಗಿನ ಧ್ವನಿಯಂತೆ ಕಾಣುತ್ತದೆ.. ಹಾಗೇ ಒಂದು ಗುಂಪು ವಿಚಿತ್ರ ಪಾತ್ರಗಳದ್ದು; ಅವು ನಗಿಸ್ತವೆ ಮತ್ತು ಒಟ್ಟುಕುಟುಂಬವನ್ನ ನೆನಪಿಸ್ತವೆ.. ಇನ್ನು ಸಾವಿನ ಅಧಿದೇವತೆಯಾದ ಮಹಾಮಾಯಿಯ ಪಾತ್ರ..ಗಾಂಭೀರ್ಯ,ಕ್ರೌರ್ಯ, ಕಾಠಿಣ್ಯ ಜೊತೆಗೆ ಮಮತೆಯನ್ನೂ ಒಳಗೊಂಡಂಥ ಪಾತ್ರ ಅದು.. ಇಡೀ ಕತೆಯಲ್ಲಿ ಸಾವಿನ ಬಗೆಗೆ ಭಯ ಹುಟ್ಟಿಸುವ, ತನ್ನದೇ ಅಂತಿಮ ಡಿಂಡಿಮ ಧ್ವನಿ ಅಂತ ಎಲ್ಲರ ಎದೆಯಲ್ಲೂ ನರ್ತಿಸುವ ಪಾತ್ರದಲ್ಲಿ ಸ್ನೇಹಾ ಭಯಂಕರವಾಗಿಯೇ ಅಭಿನಯಿಸಿದ್ದಾರೆ.. ಪ್ರವೇಶವೇ ಚೆಂದ.. ಹೊಗೆಯಾಡುವ ಸ್ಮಶಾನದ ಭಾವ.. ಮುಖದಲ್ಲಿ ಕ್ರೌರ್ಯ , ಎದೆಯಲ್ಲಿ ವಾತ್ಸಲ್ಯ.. ಸೃಷ್ಟಿ ನಿಯಮಗಳ ಪರಿಪಾಲನೆಯ ಸೂಚನೆ ಕೊಡೋ ಮಾರ್ಗದರ್ಶಕಿ ಹೀಗೇ ಹೀಗೇ.. ಇವೆಲ್ಲಕ್ಕೂ ಆ ಸಂಪೂರ್ಣ ಸನ್ನಿವೇಶಗಳನ್ನ ಕಟ್ಟಿಕೊಟ್ಟಿದ್ದು ಬೆಳಕಿನ ಸಂಯೋಜನೆ; ಅಬ್ಬಾ !! ಬೆಳಕಿನ ಸಂಯೋಜನೆಯನ್ನ ನೋಡಲಿಕ್ಕಾದರೂ ನಾಟಕಕ್ಕೆ ಬರಲೇಬೇಕು ಅನ್ನುವಷ್ಟು ಚೆಂದ.. ಬೇರೆ ಬೇರೆ ಬಣ್ಣಗಳನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದು ಇಡೀ ರಂಗ ಸ್ಥಳ ಕಲಾಕೃತಿಯಂತೆ ಗೋಚರಿಸುತ್ತಿತ್ತು.. ಇನ್ನು ಹಾಡುಗಾರಿಕೆ ಮತ್ತು ಸಂಗೀತ ಹಿತವಾಗಿತ್ತು.. ಇವೆಲ್ಲವನ್ನ ತೆರೆಯ ಮೇಲೆ ತಂದಂಥವರು ಜೀವನ್ ರಾಂ ಸುಳ್ಯ.. ಇವರ ನಿರ್ದೇಶನದಲ್ಲಿ ಅಚ್ಚುಕಟ್ಟುತನ ಎದ್ದು ಕಾಣ್ತಿತ್ತು.. ಕೊನೆಯಲ್ಲಿ ಅವರ ಮಾತುಗಳಲ್ಲಿ ಅವರ ಹಳೆಯ ದಿನಗಳ ಮೆಲುಕಿತ್ತು..

     ಒಟ್ಟಿನಲ್ಲಿ ಡಿಜಿಟಲ್ ಮಾಧ್ಯಮಗಳಿಂದ ಯಾವತ್ತೂ ಸಿಗದ ಅನುಭವಗಳು ಈ ರಂಗಭೂಮಿಯದ್ದು.. ಒಂದಷ್ಟು ಹೊತ್ತು ನಾವು ಮತ್ತು ರಂಗದಲ್ಲಿ ನಡೆಯುತ್ತಿರುವ ಕತೆ ಇವೆರಡರ ಜೊತೆ ಕಳೆದುಹೋಗಬೇಕಿದ್ದಲ್ಲಿ ಇಂತಹ ನಾಟಕಗಳನ್ನ ಆಗಾಗ ನೋಡಲೇಬೇಕು.. ಮತ್ತೆಲ್ಲಾದರೂ ಮಹಾಮಾಯಿ ನಾಟಕದ ಪ್ರದರ್ಶನವಿದ್ದಲ್ಲಿ ಖಂಡಿತಾ ಹೋಗಿ, ರಂಗದ ಆಸ್ವಾದನೆ ರಂಗದ ಇದಿರಲ್ಲೇ ಚೆಂದ..

~`ಶ್ರೀ'
    ತಲಗೇರಿ

ಮುಂಬೈಯಿಂದ ರಥಬೀದಿಗೆ ಬಂದ `ಬಣ್ಣದ ಕಾಲು'...ನಾಗರಿಕತೆಯ ವಿಕಾಸವಾದಂತೆ ಹಳ್ಳಿಗಳು ಪಟ್ಟಣಗಳು ಮಹಾನಗರಗಳು ಅನ್ನುತ್ತಾ , ಭೌಗೋಳಿಕ ಭಿನ್ನ ಪ್ರದೇಶಗಳು ಸೃಷ್ಟಿಯಾಗ್ತಾ ಹೋದವು.. ಒಂದೇ ಭೂಮಿ , ಆದರೆ ಅಲ್ಲಿನ ಮನಃಸ್ಥಿತಿ , ಆಹಾರ ಪದ್ಧತಿ , ಜೀವನ ಶೈಲಿ ಮತ್ತು ಪ್ರಾಕೃತಿಕ ಭಿನ್ನತೆಗಳು ಎಲ್ಲಕ್ಕೂ ಅದರದ್ದೇ ಆದ ವಾತಾವರಣವನ್ನ ಕಟ್ಟಿಕೊಟ್ಟವು.. ಮಹಾನಗರದ ರಸ್ತೆಗಳ ನಿಯಾನ್ ದೀಪಗಳಿಗೂ, ಹಳ್ಳಿಯ ಗುಡಿಸಲಿನ ಲಾಟೀನು ಮತ್ತು ಚಿಮಣಿ ಬುರುಡೆಗಳಿಗೂ ಬಹುಶಃ ತಾಳೆ ಮಾಡಲು ಆಗದೇ ಇರುವಷ್ಟು ಅಂತರವೇನೋ! ಎರಡೂ ಬೆಳಕನ್ನು ಕೊಡುತ್ತವೆ ಅನ್ನುವುದು ಮಾತ್ರ ಎರಡಕ್ಕೂ ಇರುವ ಸಾಮ್ಯತೆ.. ಒಂದು ವೈಭೋಗದ ಸಂಕೇತವಾದರೆ ಇನ್ನೊಂದು ಪುರಾತನ ಜೀವನ ಪದ್ಧತಿಯ ಮೂಕ ಸಾಕ್ಷಿ.. ಹೀಗೆ ಮುಂಬೈ ಮಹಾನಗರದ ಪುಟ್ಟ ಪ್ರಪಂಚ ಮತ್ತು ಗೋಕರ್ಣದ ರಥಬೀದಿಯ ದೊಡ್ಡ ಜಗತ್ತಿನ ಸಮೀಕರಣವೇ `ಬಣ್ಣದ ಕಾಲು'

ಜಯಂತ ಕಾಯ್ಕಿಣಿ ಅನ್ನುವ ಈ ಜಾದೂಗಾರ ನನ್ನ ಮಟ್ಟಿಗೆ ಯಾವತ್ತೂ ಒಂದು ಪಿಳಿಪಿಳಿ ಕಂಗಳನ್ನ ಸದಾ ತೆರೆದಿಡುವಂತೆ ಮಾಡಬಲ್ಲ ವಿಸ್ಮಯದ ಮೂಟೆ.. ಅವರ ಪುಸ್ತಕಗಳನ್ನ ಓದುವುದಕ್ಕೆಂದು ಕೈಗೆತ್ತಿಕೊಳ್ಳುವಷ್ಟರಲ್ಲೇ ಪುಟಾಣಿ ನಗೆಯೊಂದು ಪ್ರಶಾಂತವಾಗಿ ತುಟಿಗಳಲ್ಲಿ ಅರಳುತ್ತದೆ.. ಬದುಕಿನ ದಿವ್ಯತೆಯನ್ನ ನಮ್ಮದೇ ಮನೆಯ ಪುಟ್ಟ ಪೋರನೊಬ್ಬ ಹಾಗೆ ಹೀಗೆಲ್ಲ ಓಡಾಡಿ ಹೇಳಿದಷ್ಟು ಮುದ್ದು ಮುದ್ದು.. ಅವರದೇ ಗೆಳೆಯ ಎಸ್ ಮಂಜುನಾಥ್ ಹೇಳಿದಂತೆ ಭಗ್ನ ಬದುಕಿನ ಅದೆಷ್ಟೋ ಜೀವಂತ ವಿವರಗಳು ಇವರಿಗೆ ಗೊತ್ತು ಮತ್ತು ಅವುಗಳಲ್ಲೇ ಈ ಬದುಕು ಒಂದು ದಿವ್ಯ ಎಂದು ಹೊಳೆಸುತ್ತಾರೆ.. ಬದುಕಿನ ಪರಿಶುದ್ಧ ಆವೃತ್ತಿಗಳಾದ ಇವರ ಕತೆಗಳ ಚೆಂದ ಓದುವುದರಿಂದ ಮಾತ್ರವೇ ದಕ್ಕಲಿಕ್ಕೆ ಸಾಧ್ಯ.. ಅಂಥ ಒಂದು ಓದು ನನಗೆ ಸಿಕ್ಕಿದ್ದಕ್ಕೆ ಕೆಲವು ಸಾಲುಗಳಲ್ಲಿ ನನಗೆ ದಕ್ಕಿದ್ದನ್ನ ಹೀಗೆ ತೆರೆದಿಡಲು ಹೊರಟಿದ್ದೇನೆ..

`ಬಣ್ಣದ ಕಾಲು' , ಒಟ್ಟು ೧೩ ಕತೆಗಳ ಸಂಕಲನ..ಒಂದೇ ಪುಸ್ತಕದಲ್ಲಿ ಎರಡು ಭಾಗಗಳಲ್ಲಿ ಕತೆಗಳನ್ನ ಪ್ರಸ್ತುತಪಡಿಸಲಾಗಿದೆ.. ಮೊದಲನೇ ಕತೆ `ಬಣ್ಣದ ಕಾಲು' ,‌ಇದರಲ್ಲಿ ಮುಂಬೈ ನಗರದ ನಿಬಿಡತೆಯ ಬಗ್ಗೆ ಮತ್ತು ಸಣ್ಣ ಸಣ್ಣ‌ ಖೋಲಿಗಳಲ್ಲಿ ಬದುಕು ನೂಕುವವರ ಚಿತ್ರಣವಿದೆ. ಮಹಾನಗರದ ಕನಸು ಕಂಡ ಪುಟ್ಟ ಪೋರನೊಬ್ಬ ಅಲ್ಲಿ ತನ್ನ ಗೆಳೆಯನಿಗಾಗಿ ಬಣ್ಣದ ಕಾಲು ತರುವ ಕನಸು ಕಾಣುತ್ತಾನೆ. ಮಗನ‌ ಕೀಟಲೆಗಳನ್ನು ಸಹಿಸಲಾರದೇ ಅವನನ್ನು ರಿಮಾಂಡ್ ಹೋಮಿಗೆ ಸೇರಿಸುವ ತವಕ ಈ ಪುಟ್ಟ ಹುಡುಗನ ತಂದೆ ತಾಯಿಯರದ್ದು.. ಮಹಾನಗರದ ಗಡಿಬಿಡಿ ತಂದೆ ಮತ್ತು ಮಗ ಇಬ್ಬರನ್ನೂ ಬೆಚ್ಚಿಬೀಳಿಸುತ್ತದೆ.. ಪುಟ್ಟ ಕನಸುಗಳನ್ನ ಬೆನ್ನಟ್ಟಿದವರ ಕತೆ ಇದು. ಇನ್ನು ಎರಡನೇ ಕತೆ ಚೌತಿ ಚಂದ್ರ.. ಬಸ್ಸಿನ ಡ್ರೈವರನೊಬ್ಬ ತನ್ನ ನಿತ್ಯದ ಚಾಕರಿಯಿಂದ ಬೇಸತ್ತು ತನ್ನ ಒಳಮನಸ್ಸಿನ ತುಡಿತದ ಬಾಲ ಹಿಡಿದು ಊರಿಗೆ ಬಂದಾಗ , ಅಲ್ಲಿನ‌ ಅವನ ಪ್ರಶ್ನೆಗಳಿಗೆ ಸಿಗುವಂಥ ಉತ್ತರ ಮತ್ತು ಆ ಉತ್ತರ ಕೊಟ್ಟ ವ್ಯಕ್ತಿಗೂ ವೃತ್ತಿಗೂ ಇರುವಂಥ ಸಂಬಂಧಗಳು, ಮಾನವೀಯ ತುಡಿತಗಳು ಮತ್ತು ಅನಿರೀಕ್ಷಿತ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಇನ್ನು ಮುಂದಿನ‌ ಕತೆ ಸೇವಂತಿ‌ ಹೂವಿನ ಟ್ರಕ್ಕು.. ವಯಸ್ಸಾಗಿ ಓಡಾಡಲು ಆಗದೇ ಇರುವವಳೊಬ್ಬಳ ಕತೆ; ಮುದುಕಿ ಮತ್ತು ಆ ಮನೆಯವರು ಇಬ್ಬರೂ ಒಬ್ಬರಿಗೊಬ್ಬರು ಋಣದ ನೆರಳಿನಲ್ಲಿರುವವರು.. ಇಬ್ಬರ ಮನಸ್ಸಿನಲ್ಲಿಯೂ ನಡೆಯುವ ಜವಾಬ್ದಾರಿಯ ಕದನ ಮತ್ತು ಪೀಕಲಾಟದ ವ್ಯಥೆ ಈ ಕತೆ.. ನಾಲ್ಕನೆಯ ಕತೆಯ ಹೆಸರು ಅಪರೂಪ.. ಅಂಗವೈಫಲ್ಯದಿಂದ ಸಮಾಜದ ಕಣ್ಣಿನಿಂದ ದೂರವೇ ಉಳಿಯುತ್ತಿದ್ದ ಹುಡುಗಿಯ ಭಾವಚಿತ್ರ ತೆಗೆಯುವ ಒಂದು ಸಣ್ಣ ಅಂಶವಿಟ್ಟುಕೊಂಡ ಕತೆಯ ಅಂತ್ಯ ಎಂಥವರನ್ನೂ ಒಂದು ಕ್ಷಣ ವಿಚಲಿತರನ್ನಾಗಿಸುತ್ತದೆ. ಆದರೆ ಆ ಹುಡುಗಿ ಒಂದು ಚೆಂದ ಶಿಶುವಿನಂತೆ ಉಳಿದುಬಿಡುತ್ತಾಳೆ ಅದೇ ಮಂದಹಾಸದಲ್ಲಿ!.. ಮತ್ತೊಂದು ಕತೆ `ಹೊಸ್ತಿಲು'.. ಇಲ್ಲಿ ಸಾಂಸಾರಿಕ ಬದುಕನ್ನು ಕಟ್ಟಿಕೊಡುತ್ತಾ , ಸತ್ಯತೆಯ ಹುಡುಕಾಟ ಮತ್ತು ಪ್ರೀತಿಯ ಹಂಬಲ ವ್ಯಕ್ತವಾಗಿದೆ.. ಇನ್ನು ಮೊದಲನೇ ಭಾಗದ ಕೊನೆಯ ಕತೆ ದಿಟ್ಟಿಬೊಟ್ಟು , ಒಬ್ಬ ಕಲಾವಿದನ ಬದುಕನ್ನ ಒಂದು ಕಡೆಯಲ್ಲಿ ಹೇಳ್ತಾ , ಸಮಾಜದ ಚಿಂತಕನೊಬ್ಬ ಆಸ್ಪತ್ರೆಯಲ್ಲಿ ಮರುಗುವ ಕಥಾನಕ ಇದು.. ಖಾಯಿಲೆ ಕೂಪದಲ್ಲೂ ಬದುಕು ಜಡೆ ಹೆಣೆದ ಪುಟ್ಟ ಬಾಲೆಯಂತೆ ಮತ್ತು ಜಡೆ ಹೆಣೆವ ಅಮ್ಮನಂತೆ ಜೀವಂತವಾಗಬಲ್ಲದು ಅನ್ನುತ್ತದೆ ಈ ಕತೆ..

ಇನ್ನು ಭಾಗ ಎರಡರಲ್ಲಿನ ಮೊದಲ ಕತೆ ಸ್ವಪ್ನದೋಷ.. ಸಂಸಾರವಿದ್ದೂ ಕೆಲಸದ ನಿಮಿತ್ತ ದೂರ ಇರುವವನೊಬ್ಬ ಮತ್ತು ಚಿನ್ನದ ಬಳೆಯ ಕನಸು ಕಾಣುವ ಅವನ ಹೆಂಡತಿ.. ಇಲ್ಲಿ ಹೆಣ್ಣು ಇರಬಹುದಾದ ವಿವಿಧ ಪಾತ್ರಗಳಲ್ಲಿ ಆಕೆ ಅವನಿಗೆ ಎದುರಾಗುತ್ತಾಳೆ.. ಸ್ವಾವಲಂಬನೆಯ ಪ್ರತಿಜ್ಞೆಯಾಗಿ ಕತೆ ಉಳಿದುಹೋಗುತ್ತದೆ.. ಮುಂದಿನ ಕತೆ ಟ್ರೈಸಿಕಲ್.. ಬಾಲ್ಯವನ್ನ ಕೆದಕುವ ಮತ್ತು ನೆರೆಹೊರೆಗಳ ಆತ್ಮೀಯತೆಯನ್ನ ವರ್ಷಾನುವರ್ಷಗಳವರೆಗೂ ಕಾಪಿಡುವ ಕತೆ..ಮುಗ್ಧತೆಯೆದುರು ಸ್ವಾರ್ಥ ಕರಗಬೇಕು ಅನ್ನುವುದನ್ನ ಸೂಕ್ಷ್ಮವಾಗಿ ಕಟ್ಟಿಕೊಡುವ ಕತೆಯಿದು.. ಗಾಳಿಮರದ ನೆಳಲು ಅನ್ನುವ ಕತೆಯಲ್ಲಿ ಜೈಲಿಗೆ ಹೋದ ಗಂಡನನ್ನ ಕಾಣಲು ಹಾತೊರೆಯುವ ಮತ್ತು ಅವನ ಬರುವಿಕೆಯಲ್ಲಿ ಮಾಯವಾಗುವ ಅಸೂಯೆ ಮತ್ತು ಅವನೆಡೆಗಿನ ತಹತಹಿಕೆ, ಚಡಪಡಿಕೆಗಳ ಕತೆಯಲ್ಲಿ ಅವ ಒಂದು ಕ್ಷಣದ ಗಾಳಿಯಂತೆ ಬಂದುಹೋಗುತ್ತಾನೆ.. ಇನ್ನು ತೀರ ಎನ್ನುವ ಕತೆಯಲ್ಲಿ ಸಾವು ಅಪರಿಚಿತರನ್ನೂ ಬಂಧುಗಳನ್ನಾಗಿಸುತ್ತದೆ; ಸತ್ತುಬಿದ್ದ ಮೀನಿಗೆ ಜೀವ ಬರಲಿ ಎಂದು ಗೋಳಾಡುವವರ ಕತೆ, ಆದರೆ ಕೊನೆಗೆ ಎಲ್ಲರೂ ಅವರವರ ದಾರಿ ಹಿಡಿಯಲೇಬೇಕು, ಬದುಕು ಎಂದಿನಂತೆ ಮಾಮೂಲಿಯಾಗಿಬಿಡುತ್ತದೆ ಅನ್ನುತ್ತದೆ ಈ ಕತೆ.. ಚುಕ್ಕಾಣಿ ಅನ್ನೋ ಕತೆಯಲ್ಲಿ ಯಾರದೋ ಆಗಮನದಲ್ಲಿದ್ದವರಿಗೆ ಇನ್ನ್ಯಾರದ್ದೋ ಆಗಮನವಾಗಿ, ಸಮುದ್ರದಲ್ಲಿನ ಅಲೆಗಳು ಇನ್ಯಾವುದರದ್ದೋ ಮುನ್ಸೂಚನೆಯಂತೆಲ್ಲಾ ಭಾಸವಾಗಿ ಕೊನೆಗೆ ಆಸೆಯ ಲಾಂಚು ಮರಳಿ ಬಂದು ನಿಟ್ಟುಸಿರುಬಿಡುತ್ತದೆ.. ಮತ್ತೊಂದು ಕತೆ `ಬಿಡು ಬಿಡು ನಿನ್ನಯ..' , ಇದು ಮಾಸ್ತರರಿಬ್ಬರ ಕತೆ.. ಪ್ರಕೃತಿಯನ್ನ ಉಳಿಸಿಕೊಳ್ಳಬೇಕು ಅನ್ನುವವರೊಬ್ಬರಾದರೆ, ಅವರನ್ನ ಕಂಡರೆ ಭುಸುಗುಡುವ ಇನ್ನೊಬ್ಬರು.. ಇಬ್ಬರ ಬದುಕೂ ಬದಲಾದಾಗ ಇಬ್ಬರಲ್ಲೂ ಚಡಪಡಿಕೆ.. ಕೊನೆಗೆ ವೃದ್ಧಾಪ್ಯದಲ್ಲೂ ದ್ವೇಷದ ಕಿಚ್ಚಿದ್ದವನಲ್ಲಿ ನಿಸ್ತೇಜ ಬೂದಿ ಮಾತ್ರ ಇದ್ದಂತೆನಿಸತೊಡಗುತ್ತದೆ.. ಆಕ್ರೋಶವೆಲ್ಲ , ದೈನ್ಯತೆಯ ದನಿಯಾಗಿ ಬದಲಾದಂತನಿಸುತ್ತದೆ.. ವಿಕೃತ ಗೆಲುವಿನ ಆನಂದದಲ್ಲಿದ್ದವನೊಬ್ಬ ಕಳೆದುಕೊಂಡ ಬದುಕಿಗಾಗಿ ಹಲುಬುವ ಒಳದನಿಯಲ್ಲಿ ಸೋತುಹೊಗುತ್ತಾನೆ.. ಇನ್ನು ಕೊನೆಯ ಕತೆ ಚಂದ್ರಶಾಲೆ..  ಜಾತ್ರೆಯ ಸಂದರ್ಭವೊಂದನ್ನ ತೆಗೆದುಕೊಂಡು ಅಲ್ಲಿನ ಮೂರು ಭಿನ್ನ ವ್ಯಕ್ತಿಗಳ ಕುರಿತಾಗಿ ಕತೆಯಿದೆ.. ರಥಬೀದಿಯೇ ಈ ಎಲ್ಲಾ ಕತೆಗಳು ಸಂಧಿಸುವ ಜಾಗ..  ತೇರೊಂದು ಕಡೆ ಕದಲದೇ ನಿಂತಿದ್ದರೆ ತೇರನ್ನೇ ತನ್ನ ಗಂಡ ಎನ್ನುವವಳೊಂದು ಕಡೆ , ತೇರನ್ನ ನೋಡಲು ಬರುವಳೇನೋ ಎಂದು ಇಷ್ಟದ ಹುಡುಗಿಗೆ ಕಾದು ಕೂತಂಥವನೊಬ್ಬ , ಇನ್ನು ಕುಂಕುಮದ ಅಂಗಡಿಯಲ್ಲಿ ಕೂತಿರಬೇಕಾದವನೊಬ್ಬ ಬೆಟ್ಟದಲ್ಲಿ ಬಳೆಯೊಂದಿಗೆ ಪಾಳು ಗೋಡೆಗಳ ನಡುವೆ ಉಬ್ಬಸ ಬಂದಂತೆ ಆಡುತ್ತಿದ್ದ .. ಹೀಗೆ ಬೇರೆ ಬೇರೆ ಬಣ್ಣ ಆ ಜಾತ್ರೆಗೆ.. !

ಇವಿಷ್ಟು ಕತೆಗಳ ಸಾರಾಂಶಗಳಾದರೆ , ವಿವರಗಳನ್ನ ಓದಿಯೇ ಅನುಭವಿಸಬೇಕು.. ಅದರಲ್ಲೂ ನನ್ನಂಥವನಿಗೆ ನನ್ನ ಊರಿನಲ್ಲಿ ನಡೆದಿರಬಹುದಾದ ಸಾಧ್ಯತೆಗಳನ್ನ ಹೀಗೆಲ್ಲಾ ಕಾಣಬಹುದಾ ಅನ್ನುವ ಅಚ್ಚರಿಯನ್ನ ಉಳಿಸಿಕೊಳ್ಳುವ ಸಂಕಲನ ಇದು..ಸಣ್ಣ ಸಣ್ಣ ಸಂಗತಿಗಳನ್ನ ನಾವು ಗಮನಿಸುವುದು ತುಂಬಾನೇ ಕಡಿಮೆ, ಅದಕ್ಕೆಂದೇ ಬಹುಶಃ ಹತಾಶರಾಗಿ ನರಳುತ್ತೇವೆ ಬದುಕಿನ ಪುಟ್ಟ ಖುಷಿಗಾಗಿ.. ಕಾಯ್ಕಿಣಿಯವರ ಕತೆಗಳಲ್ಲಿ ಎಲ್ಲಕ್ಕೂ ಜೀವವಿದೆ, ಕೈಮುರಿದ ಕುರ್ಚಿ, ರಾತ್ರಿ ಪಾಳಿಯ ಬಸ್ಸು , ಇಂಜೆಕ್ಷನ್ನಿನ ವಾಸನೆ ಸೂಸುವ ಅಸ್ಪತ್ರೆ , ಉಪ್ಪುಗಾಳಿ , ಕಂಕುಳ ಬೆವರು , ರಸ್ತೆ ಬದಿಯ ಅಂಗಡಿ, ಕದ್ದುತಂದ ಸೀಯಾಳ, ರಾತ್ರಿ ಕಳ್ಳ ಚಂದ್ರ.. ಹೀಗೇ ಹೀಗೇ.. ಯಾಂತ್ರಿಕತೆಯ ಈ ಹೊಸ್ತಿಲಲ್ಲಿ ಮತ್ತು ಹೊತ್ತಿನಲ್ಲಿ ಬರಮಾಡಿಕೊಳ್ಳಬಹುದಾದ ಬರಹಗಳು ಶ್ರೀ ಜಯಂತ ಕಾಯ್ಕಿಣಿ ಅವರದ್ದು..

~`ಶ್ರೀ'
    ತಲಗೇರಿ

ಶಹರದ ಹೊಕ್ಕುಳೊಳಗೆ.. -೪

ಶಹರದ ಹೊಕ್ಕುಳೊಳಗೆ-೪
                         ... ಕದಡಿದ ನಗೆಯ ಬಿಂಬಗಳ ಹುಡುಕಾಟ...
     ಮುಗಿಲು ತಲುಪುವ ಹುರುಪಿನ ಎತ್ತರೆತ್ತರದ ಕಟ್ಟಡದ ಕೋಣೆಗಳಿಗೆ ಒಂದೆರಡು ಚಿಕ್ಕ ಕಿಟಕಿ , ಒಂದು ಬಾಗಿಲು..ಅಂತಸ್ತಿನ ಮೇಲೊಂದು ಅಂತಸ್ತು ಜೊತೆಗೆ ತಾರಸಿ.. ನಾಲ್ಕು ಗೋಡೆಗಳ ಮೈಗೆ ಬಿಸಿಲ‌‌ ನಾಚಿಸುವ ಬಣ್ಣ.. ಅಲ್ಲೇ ಒಂದಷ್ಟು ತೇಪೆ.. ಅಲ್ಲಿ ನಡೆದಾಡಿಕೊಂಡ ಕೈಕಾಲುಗಳ ಕತೆಗಳಲ್ಲಿ ನಗೆಯೆಂಬುದೊಂದು ಮರೀಚಿಕೆ.. ಹಣೆಯ ಮೇಲಿನ‌ ನೆರಿಗೆಗಳು ಒತ್ತೊತ್ತಾಗಿ ನಿಲ್ಲುತ್ತವೆ; ಕೆನ್ನೆಯೆಂಬುದಕ್ಕೆ ಇಲ್ಲಿ ವ್ಯಾಯಾಮವಿಲ್ಲ.. ಕಂಗಳು ಗಣಕಯಂತ್ರ ಮತ್ತು ಜಂಗಮವಾಣಿಯ ಪರದೆಗಳ ಪಿಕ್ಸೆಲ್ಗಳ ಜೊತೆಗಿನ ಸಂಭಾಷಣೆಯಲ್ಲಿ ತಮ್ಮ ಬಹುತೇಕ ಆಯಸ್ಸು ಕಳೆಯುತ್ತವೆ.. ರಾತ್ರಿಯೂಟಕ್ಕೆ ಬೆಳಗಿನ ತಿಂಡಿ, ಮಧ್ಯಾಹ್ನಕ್ಕೆ ಊಟದಂತಿರದ ಊಟ.. ಇನ್ನು ಬೆಳಿಗ್ಗೆ ಮತ್ತು ಸಂಜೆಯಲ್ಲಿ ಮೂಡ್ ಇದ್ದರೆ ಚಹಾ, ಕಾಫೀ ಹಾಗೇ ಒಂದಷ್ಟು ಚುರುಮುರಿ.. ಇಲ್ಲಾ , ತಳ್ಳುಗಾಡಿಯ ಮುಂದೆ ತನ್ನ ಅವಧಿಗಾಗಿ ಪೆಚ್ಚಾಗಿ ಕಾಯುವಿಕೆ.. ಚಪ್ಪರಿಸಿ ತಿನ್ನುವ ನಾಲಿಗೆಗೆ ಎಂದೂ ತೀರದ ರುಚಿ.. ಶಹರದ ಎಲ್ಲ ಕಟ್ಟಡದ ಗೋಡೆಗಳಿಗೂ ವಿಚಿತ್ರ ವಿಚಿತ್ರ ಕತೆಗಳ ಸೋಂಕು ತಗುಲಿರುತ್ತದೆ..
    
     ದಿನ ಬೆಳಿಗ್ಗೆ ಕೆಲಸಕ್ಕೆ ಹೋಗುವ ಮುಖದಲ್ಲಿ ಅದೆಷ್ಟೋ ನೆನಪುಗಳು ಸತ್ತ ಸೂತಕದ ಛಾಯೆ ಅಥವಾ ಭವಿಷ್ಯದ ಬೀಗದ ಕೈ ಹುಡುಕುವ ಚಿಂತೆ.. ದಪ್ಪ ದಪ್ಪ‌ ‌ಕನ್ನಡಕ ಹೊತ್ತ ಚಿಕ್ಕ ಮಕ್ಕಳ ಮೂಗಿನ ಅಳಲಿಗಿಲ್ಲಿ ನಾವು ಜಾಣ ಕಿವುಡರು.. ಕೇಜಿಗಟ್ಟಲೆ ಪುಸ್ತಕ ಹೊತ್ತ ಎರಡು ಕಾಲಿನ ಗಾಡಿಯೊಂದು ವಾಲುತ್ತಾ ವಾಲುತ್ತಾ ಶಾಲೆ ಸೇರಿಕೊಳ್ಳುತ್ತದೆ.. ( ಈ ಶಾಲೆ ಅನ್ನೋ ಶಬ್ದ ಸ್ವಲ್ಪವೇ ದಿನದಲ್ಲಿ ಶಬ್ದಕೋಶದಲ್ಲಿ ಮಾತ್ರ ಅಸ್ತಿತ್ವ ಪಡೆದು ವಿಷಾದದ ನಗೆಯೊಂದ ಬೀರುತ್ತದೆ ) ದೂರದರ್ಶನದ ಮುಂದೆ ಕುಳಿತ ಆತ್ಮವೊಂದು ಅಲ್ಲಿನ ಧಾರಾವಾಹಿಗಳ ಪಾತ್ರದ ವಿಮರ್ಶೆ ಮಾಡುತ್ತಾ ಅವುಗಳ ಕಣ್ಣೀರಿಗೆ ಇಲ್ಲಿ ಬೊಬ್ಬೆ ಹೊಡೆಯುತ್ತದೆ.. ಹೊರಗೆ ಹೋದಂಥ ಆಕೃತಿಗಳು ಟ್ರಾಫಿಕ್ಕಿನಲ್ಲಿ ಜೊತೆಗೆ ಸಿಕ್ಕಸಿಕ್ಕಲ್ಲಿ , ತಮ್ಮ‌ ಭಾಷಾಪಾಂಡಿತ್ಯ ಮೆರೆಯುವ ಎಲ್ಲ ಕಸರತ್ತು ನಡೆಸುತ್ತದೆ.. ಊರಿನ ನೆನಪಾದಾಗ ಭಾವುಕವಾಗುವ ಜೀವಗಳು ಇಲ್ಲಿ ಬಹುಶಃ ಬಹಳಷ್ಟಿವೆ.. ಅನಿವಾರ್ಯತೆ ಎಂಬ ನಾಟಕದಲ್ಲಿ ಕೈಗೆ ಸಿಕ್ಕ ಬಣ್ಣ ಮೆತ್ತಿಕೊಂಡು ರಂಗಸ್ಥಳಕ್ಕೆ ಧುಮುಕಿದವರು ನಾವುಗಳು.. ಇಂದಿಗೂ ನಮ್ಮ ನಮ್ಮ ಪಾತ್ರದ ಸ್ಪಷ್ಟ ಚಿತ್ರಣ ನಮ್ಮ ಕಣ್ಣ ರೆಪ್ಪೆಗಳ ಅಡಿಯಲ್ಲೇ ನಜ್ಜುಗುಜ್ಜಾಗಿ ನರಳುತ್ತಿದೆ.. ಸಮಾಜದ ವ್ಯವಸ್ಥಿತ ಫಿತೂರಿಯೊಳಗೆ ಸಸಾರಕ್ಕೆ ನಮ್ಮನ್ನ ನಾವು ತಳ್ಳಿಕೊಂಡು ಸಂಸಾರ ನಡೆಸುತ್ತಿರುವಂಥ ಅಕ್ಷರಸ್ಥ ಸಾಮಾನ್ಯ ಪ್ರಜೆಗಳು..
     ಇನ್ನು ಕೆಲಸ ಸಿಗದೇ ಬೇರೆ ಬೇರೆ ಊರಿನಿಂದ ಸಣ್ಣ ಸಣ್ಣ ಕೋರ್ಸ್ಗಳನ್ನ ಮಾಡಲಿಕ್ಕೆಂದು ಬರುವವರ ಅನುಭವಗಳು ಬದುಕಿನ ಇನ್ನೊಂದು ಮಗ್ಗುಲನ್ನೇ ಪರಿಚಯಿಸಿಬಿಡುತ್ತವೆ..ಈ ಎಲ್ಲಾ ಹೋರಾಟಗಳು ಮೂರು ಹೊತ್ತಿನ ಊಟ ಮತ್ತು ಕಣ್ತುಂಬ ನೆಮ್ಮದಿಯ ನಿದ್ರೆಗಾಗಿ.. ಬಹುಶಃ ಇವೆಲ್ಲವನ್ನೂ ದಕ್ಕಿಸಿಕೊಳ್ಳುವ ಓಟದಲ್ಲಿ ಎಲ್ಲರೊಂದಿಗೆ ಓಡುತ್ತಾ ಓಡುತ್ತಾ ಓಟದ ಮುಕ್ತಾಯದ ಗೆರೆ ಕಾಣಲಾಗದೇ ಕಕ್ಕಾಬಿಕ್ಕಿಯಾಗುತ್ತೇವಲ್ಲಾ ; ಅಲ್ಲಿಗೆ ಕೂದಲಿಗೆ ಬಣ್ಣ ಹಚ್ಚುವ ಸಮಯ ಬಂದಿರುತ್ತದೆ.. ಓಟದ ಮಧ್ಯ , ರಸ್ತೆಯ ಪಕ್ಕ ನಮ್ಮ ಹಳೆಯ ಸ್ನೇಹವೊಂದು ನಮ್ಮ ಕುಟುಂಬದ ಜೊತೆ ನಿಂತು ಕೈಬೀಸಿತ್ತೇನೋ ; ಗಮನಿಸಲೇ ಇಲ್ಲ.. ಒಂದು ಕಿರುನಗೆ ನಮ್ಮ‌‌ ಜೊತೆಯೇ ಓಡುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನ ಪರಿಚಯಿಸುತ್ತಿತ್ತೇನೋ ; ಆ ಕಡೆ ತಿರುಗುವುದನ್ನೇ ಮರೆತುಬಿಟ್ಟೆವಲ್ಲಾ... ನಾವೇ ಚಿಕ್ಕವರಿದ್ದಾಗ ನೆಟ್ಟಿದ್ದ ಗಿಡವೊಂದು ಈಗ ಹಣ್ಣು ಕೊಡಲು ಹಂಬಲಿಸುತ್ತಿತ್ತೇನೋ, ಗುರುತೇ ಹತ್ತಲಿಲ್ಲ.. ಈಗ ಮೈಲಿಗಲ್ಲುಗಳು ದಾಟಿಹೋದವು ; ಎಲ್ಲೂ ನಮ್ಮ ಹೆಸರಿಲ್ಲ.. ಬರೀ ದೂರದ ಅಳತೆಗಷ್ಟೇ ಅದನ್ನ ಬಳಸಿಕೊಂಡೆವು.. ದೂರ ಮುಗಿಯಲೇ ಇಲ್ಲ.. ಹತಾಶ ಸಂಜೆಯಲ್ಲಿ ಹಪಹಪಿಸುತ್ತೇವೆ, ಕಾಲು ಸೋತಿದ್ದು ಅರಿವಾಗುತ್ತದೆ.. ಕೈಕೊಟ್ಟು ನಿಲ್ಲೋಣವೆಂದರೆ ಯಾರೊಬ್ಬರ ಹೆಗಲಿಗೂ ನಮ್ಮ ಬೆವರಿನ ಕಲೆಯಿಲ್ಲ..
     ಮಹಾನಗರಕ್ಕೆ ಬಹಳಷ್ಟು ಬಣ್ಣದ ನೆರಳುಗಳಿವೆ..ಗಡಿಬಿಡಿಯನ್ನ ಬಗಲಿಗೇ ಜೋತುಹಾಕಿಕೊಂಡು ಏಳುವ ನಗರ, ಮಧ್ಯಾಹ್ನದ ಹೊತ್ತಿಗೆ ಹೊಟ್ಟೆಗಿಷ್ಟು ಬೀಳಲೆಂದು ಹಾತೊರೆಯುತ್ತದೆ.. ಸಂಜೆಯಾಗುತ್ತಿದ್ದಂತೆ ಎಣ್ಣೆಯ ಕಮಟು ವಾಸನೆಯನ್ನ ಸೂಸುತ್ತ ನಿಯಾನ್ ದೀಪಗಳ ಮಾದಕತೆಗೆ ಮೈಮುರಿಯುತ್ತದೆ.. ಬೀದಿಗಳಲ್ಲಿ ಬೆಳಕು ಮಾರಾಟಕ್ಕೆ ಸಿಗುತ್ತದೆ; ಕತ್ತಲೆಯಲ್ಲಿ ಯಾರಿಗೂ ಗೊತ್ತಿರದೇ ಸಣ್ಣ ಸಣ್ಣ ನರಳುವಿಕೆಯ ಹಂಚಿಕೊಂಡಂತೆ.. ರಾತ್ರಿ ಬೆಳಗಾಗುತ್ತದೆ, ಕೀಲುಗಳು ಎಂದಿನಂತೆ ಸಹಕರಿಸುತ್ತವೆ; ಒಮ್ಮೊಮ್ಮೆ ಶಪಿಸಿಕೊಳ್ಳುತ್ತ.. ಮಹಾನಗರ ಎಂದಿನಂತೆ ಎಲ್ಲವನ್ನೂ ಬಚ್ಚಿಟ್ಟುಕೊಂಡ ತಟಸ್ಥ ಗುಟ್ಟಂತೆ ಉಳಿದುಬಿಡುತ್ತದೆ.. ಶಹರದ ಹೊಕ್ಕುಳೊಳಗೆ ನಗೆಯ ಬಿಂಬಗಳ ಹುಡುಕಾಟ ಮತ್ತೆ ಮತ್ತೆ ನಡೆಯುತ್ತಲೇ ಇರುತ್ತದೆ; ಅಷ್ಟಿಷ್ಟು ವಿರಾಮದ ಆಚೆಗೂ..

~`ಶ್ರೀ'
    ತಲಗೇರಿ

ಶಹರದ ಹೊಕ್ಕುಳೊಳಗೆ.. -೩

ಶಹರದ ಹೊಕ್ಕುಳೊಳಗೆ-೩
                         ... ಕದಡಿದ ನಗೆಯ ಬಿಂಬಗಳ ಹುಡುಕಾಟ...
     ಮಹಾಪಟ್ಟಣವೊಂದಕ್ಕೆ ಮುಖಾಮುಖಿಯಾಗುವುದೆಂದರೆ ಬಹುಶಃ ನಮ್ಮೊಳಗಿನ ಹಲವು ಪಾತ್ರಗಳಿಗೆ ನಾವೇ ಪ್ರಶ್ನೆ ಕೇಳಿ, ಮತ್ತೆ ನಾವೇ ಉತ್ತರ ಕಂಡುಕೊಳ್ಳಲು ಹೆಣಗುವ ಒಂದು ಚಿಕ್ಕ ಪ್ರಕ್ರಿಯೆಯಷ್ಟೇ! ಒಂದಷ್ಟು ವರ್ಷಗಳ ಕಾಲ ಊರಿನ ಮನೆಗಳಲ್ಲಿ ವಾರಸ್ದಾರಿಕೆ ನಡೆಸುತ್ತಾ , ಊರಿನ ಹಾದಿಗಳಲ್ಲಿ ಸಿಕ್ಕ ಸಿಕ್ಕವರನ್ನೆಲ್ಲಾ ಮಾತನಾಡಿಸುತ್ತಾ, ಕೈಲೊಂದು ಚಿಕ್ಕ ಕೋಲು ಹಿಡಿದು , ಅದ್ಯಾವುದೋ ಸರಿಯಾಗಿ ರಾಗ ಬರದ ಹಾಡೊಂದ ಗುನುಗುತ್ತಾ ಹೊರಟ ನಾವು ಈ ಪಟ್ಟಣದ ಹಾದಿಗಳಲ್ಲಿ ಮೂಕರಾಗುತ್ತೇವೆ.. ರಸ್ತೆಯ ಎರಡೂ ಕಡೆಗಳಲ್ಲಿನ ವಾಹನಗಳು ಅವುಗಳದೇ ಭಾಷೆಯಲ್ಲಿ ಮಾತನಾಡಿಸುತ್ತವೆ; ನಾವು ಯಂತ್ರಗಳಲ್ಲವಲ್ಲ!.. ಮಹಾನಗರದ ಬೀದಿಗಳು ಅದೆಷ್ಟೇ ಪರಿಚಿತವಾಗಿದ್ದರೂ ಅಪರಿಚಿತವೇ..ಊರ ದಿಬ್ಬಗಳ ಏರಿಳಿಯುತ್ತಿದ್ದ ಅದೇ ಮುಖಗಳು, ಇಲ್ಲಿನ ಯಾವ ಸಮತಟ್ಟು ರಸ್ತೆಗಳಲ್ಲೂ ಕಾಣಸಿಗುವುದಿಲ್ಲ.. ನಮ್ಮೆಲ್ಲ ನೆನಪುಗಳು ಎಂದಿಗೂ ನಮ್ಮಮೊದಲ ಊರಿನ ವ್ಯಕ್ತಿಗಳ ಮೇಲೆಯೇ ಕಟ್ಟಲ್ಪಡುತ್ತದೆ.. `ಇವರು ಅವರಂತೆ' ಅನ್ನುವ ಆ ವಾಕ್ಯವೊಂದು ಸದಾ ಅಚ್ಚು ತೆಗೆದಿಟ್ಟಂತೆ !.. ಹೀಗೆ ಕಟ್ಟಲ್ಪಟ್ಟ ನೆನಪುಗಳು ಅದೆಷ್ಟು ಆವೃತ್ತಿಗಳಲ್ಲಿ ಪರಿಷ್ಕರಣೆಗೊಳ್ಳುತ್ತಲೇ ಹೋಗುತ್ತವೆಯೋ..
     ಬದುಕಿನ ಹೋರಾಟಕ್ಕೆ ಅಣಿಯಾದವರಂತೆ, ಯುದ್ಧಭೂಮಿಯೆಂಬಂತೆ ನಾವೀ ಮಹಾನಗರವನ್ನ ಪ್ರವೇಶಿಸುತ್ತೇವೆ. ದಿನನಿತ್ಯದ ಶಸ್ತ್ರಾಭ್ಯಾಸದಲ್ಲೇ ಸೋಲಿನ ನೆರಳನ್ನ ಇದಿರುಗೊಳ್ಳುತ್ತ ಪರಿತಪಿಸುತ್ತೇವೆ.. ಯಾಕೆ?.. ಬಹುಶಃ, ಆತುಕೊಳ್ಳುವ ಹೆಗಲುಗಳ, ಅಥವಾ ಸುತ್ತಲೂ ನಿಂತು ಧೈರ್ಯತುಂಬುವ ಕೌಟುಂಬಿಕತೆಯ ಕೊರತೆಯೇ?!.. ಮನುಷ್ಯ ಸಂಬಂಧಗಳ ನಿಜವಾದ ವಿಶ್ಲೇಷಣೆಗೆ ನಗರದಂತಹ ಪುಟವೊಂದು ಬಿಟ್ಟರೆ ಬೇರೆ ದೊರಕಲಾರದೇನೋ!..ಅದೆಷ್ಟೋ ಜಗತ್ತುಗಳು ಒಂದು ಪುಟ್ಟ ಪ್ರದೇಶದಲ್ಲಿ ಸೇರುತ್ತವೆ.. ಇಡೀ ಜಗತ್ತು ಏಕೀರ್ಭವಿಸುತ್ತದೆ.. ಇಲ್ಲಿನ ಬಹುತೇಕ ಸಂಬಂಧಗಳಿಗೆ ಒಂದು ನಿರ್ದಿಷ್ಟ ಮೇರೆಯಿರುತ್ತದೆ.. ನಮ್ಮವರು ಅನ್ನಿಸುವ ಜೀವಗಳು ಎಲ್ಲೋ ಬೆರಳೆಣಿಕೆಯಷ್ಟು; ಜಗತ್ತಿನ ಸುಗಂಧ ದ್ರವ್ಯಗಳ ಪ್ರಚಾರಕ್ಕಾಗಿ ಆಚೆ ಈಚೆ ಓಡಾಡುವ ದೇಹಗಳೇ ಹಲವು ಎನಿಸಿಬಿಡುತ್ತವೆ.. ಇಂಥ ಒಂದು ಪರಿಸರದಲ್ಲಿಯೇ ಅಮ್ಮನ ಕೈತುತ್ತು, ಅಪ್ಪನ ಸವೆದ ಚಪ್ಪಲಿ, ಮನೆಯ ಮೂಲೆಯಲ್ಲಿ ಚಳಿಯಲ್ಲಿ ಕುಯ್ ಗುಡುತ್ತಿದ್ದ ನಾಯಿ, ಈಗ ಭೂಮಿಯ ಇನ್ಯಾವುದೋ ಭಾಗದಲ್ಲಿ ಇರುವ ಅಕ್ಕ ಅಣ್ಣ ತಮ್ಮ ತಂಗಿ‌ಯರ ತರಹೇವಾರಿ ಜಗಳಗಳು, ಗದ್ದೆಯ ಅಂಚಿನ ವಿಹಾರ, ಕೊಕ್ಕರೆಗಳ ಒಂಟಿ ಕಾಲು, ಅರ್ಧ ಮುರಿದ ಸೇತುವೆ, ಯಾವುದೇ ನಿರ್ದಿಷ್ಟ ಆಕಾರವಿಲ್ಲದ ದೇವರ ಮೂರ್ತಿ, ಕೆಸರಿನಲ್ಲಿ ಕಲ್ಲು ಹೊಡೆಯುವ ಚೇಷ್ಟೆ, ಗಾಳಕ್ಕೆ ಸಿಕ್ಕಿಸುವ ನಂಜುಳ, ಫಟಕ್ಕನೆ ಎಳೆದಾಗ ಸಿಕ್ಕಿಕೊಂಡ ಮೀನು, ಕಲ್ಲು ಪೊಟರೆಗಳಲ್ಲಿ ಪುಟುಪುಟು ಅನ್ನುತ್ತಾ ಮರೆಯಾಗೋ ಏಡಿಗಳು, ಹುಣಸೇಮರ, ಜೊತೇಲ್ ಪಾಟಿಚೀಲ ಹಿಡ್ದು ಬರ್ತಿದ್ ಗೆಳೆಯರ ತಂಡ ಎಲ್ಲವೂ ಎಲ್ಲವೂ ಬಹುವಾಗಿ ಆವರಿಸಿಕೊಂಡುಬಿಡುತ್ತವೆ..
     ಹೀಗೇ ಮನಸ್ಸಿನ ಅದ್ಯಾವ್ದೋ ಅಡ್ಡಾದಿಡ್ಡಿ ಮೂಲೆಯಲ್ಲಿ ಅಜ್ಞಾತವಾಗಿ ಹುದುಗಿದ್ದ ಈ ನೆನಪುಗಳಿಗೆ ಹೊಸ ಜಾತ್ರೆ ಶುರುವಾಗೋದು ಈ ಮಳೆಯಲ್ಲಿ.. ! ರೋಮಗಳ ತುದಿಗೋ ಇಲ್ಲಾ ತೆಳು ಧೂಳಿನ ರಸ್ತೆಯ ಬೊಗಸೆಗೋ ಹನಿಯೊಂದು ಬಿದ್ದಾಗ ಕತ್ತೆತ್ತಿ ನೋಡುವ ನಾವು ಸೇರುವುದು ಯಾವುದೋ ಸೂರನ್ನಾದರೂ, ಈ ನೆನಪುಗಳು ಒಮ್ಮೊಮ್ಮೆಇರುವೆಗಳಂತೆ ಸಾಲಲ್ಲಿ , ಕೆಲವೊಮ್ಮೆ ಸಿಕ್ಕಸಿಕ್ಕ ಕಡೆಗಳಲ್ಲೆಲ್ಲಾ ನುಗ್ಗಿಬಿಡುತ್ತವೆ ಹೃದಯದ ಮುಖ್ಯ ಬೀದಿಗೆ.. ಸಂಜೆ ಸಮಯಕ್ಕೆ ಶುರುವಾಗುವ ಮಳೆಗಂತೂ ಅದೇನು ಖಯಾಲಿಯೋ..! ನಾಲ್ಕು ಪುಟಾಣಿ ಗೋಡೆಗಳ ಯಾವುದೋ ಮೂಲೆ ಅಥವಾ ಮಧ್ಯದಲ್ಲಿ , ಬೆಳದಿಂಗಳಂಥ ದೀಪಗಳಿದ್ದರೂ ಕತ್ತಲೆಯನ್ನೇ ಹಚ್ಚಿಕೊಂಡು ಕೂತು ಒಂದು ಕಪ್ ಚಹಾ ಅಥವಾ ಕಾಫಿಯನ್ನ ನೆನೆನೆನೆದು ಕೊರಗುವ ಪರದೇಶಿ ಬದುಕು ಬಹುಶಃ ಬ್ಯಾಚುಲರ್ ಎನಿಸಿಕೊಂಡವರ ಕರ್ಮ‌ಸಿದ್ಧಾಂತ ಅಥವಾ ನಿಧಾನಕ್ಕೆ ಸಂಪಾದಿಸಿಕೊಂಡ ಹಕ್ಕು ಎನ್ನಬಹುದೇನೋ!..
     ನಗರದ ಮನೆಗಳ ತಾರಸಿಯಲ್ಲಿ ಮನುಷ್ಯನ ಅದೆಷ್ಟು ಕತೆಗಳು ಓದಲಾಗದಂತೆ ಬಿದ್ದಿವೆಯೋ.. ಏಕಾಂತ ಮತ್ತು ಏಕಾಂಗಿತನದ, ಹರೆಯ ಮತ್ತು ಪ್ರಣಯದ ಅದೆಷ್ಟು ಸಂಚಿಕೆಗಳು ನಿರಂತರವಾಗಿ ಪ್ರಸಾರವಾಗಿವೆಯೋ, ತಾರಸಿ ಕೇವಲ ತಟಸ್ಥ ಮಾಧ್ಯಮ.. ಈ ನಗರವೋ ಧೀಮಂತ ಮೌನಿ..ಹೆಣ್ಣಿನಂತೆ! ಆಳಕ್ಕೆ ಇಳಿದಂತೆ ಇನ್ನಷ್ಟು ಮತ್ತಷ್ಟು ಕುತೂಹಲ ಹುಟ್ಟಿಸಿ, ತನ್ನ ತೆಕ್ಕೆಗೆ ಎಳೆದುಕೊಳ್ಳುವ ಚಾಲಾಕಿ.. ಒಮ್ಮೊಮ್ಮೆ ಕಾಲೆಳೆಯುತ್ತ , ಇನ್ನೊಮ್ಮೆ ಕುಪ್ಪಳಿಸುತ್ತ ಸಾಗಿದಾಗಲೆಲ್ಲ‌ ಸಲವೂ ವಿಸ್ಮಯಗಳು ಎದುರಾಗುತ್ತಲೇ ಇರುತ್ತವೆ.. ನಗರ ಪೂರ್ತಿ ಸ್ವಾತಂತ್ರ್ಯದ ಬಂಧೀಖಾನೆ, ಅಂದುಕೊಳ್ಳುವವರಿಗೆ; ಗಡಿಗಳಿಲ್ಲದ ನಕ್ಷೆ, ಅಪ್ಪಿಕೊಳ್ಳುವವರಿಗೆ..ಇನ್ನು ಕೆಲವರಿಗೆ ಬೆರಳು ತಾಕದ ಆಕಾಶ..!!

~`ಶ್ರೀ'
    ತಲಗೇರಿ

ಶಹರದ ಹೊಕ್ಕುಳೊಳಗೆ.. -೨

ಶಹರದ ಹೊಕ್ಕುಳೊಳಗೆ-೨
                         ... ಕದಡಿದ ನಗೆಯ ಬಿಂಬಗಳ ಹುಡುಕಾಟ...
     ಬೆಳಿಗ್ಗೆ ಮಧ್ಯಾಹ್ನ ಅಥವಾ ಸಂಜೆಗಳ ವ್ಯತ್ಯಾಸವಿಲ್ಲದೇ ತಳ್ಳುಗಾಡಿಯ ಮೇಲೊಂದಿಷ್ಟು ಆಗಷ್ಟೇ ನೀರು ಚಿಮುಕಿಸಿದ ಹಸಿಸೊಪ್ಪು , ತರಕಾರಿಗಳ ಮಳಿಗೆ ಸಿದ್ಧಪಡಿಸಿ, ಯಾವುದೋ ಹೊಚ್ಚ ಹೊಸ ರಾಗದಲ್ಲಿ ಅರ್ಥವೂ ಆಗದಂತೆ ಅರಚುವ ಆತನೊಬ್ಬನು ಶಹರದ ಬೀದಿಗಳಲ್ಲಿ ಓಡಾಡುತ್ತಾನೆ.. ಅರೆ ಮುರಿದ ತಕ್ಕಡಿಯಲ್ಲಿ ಅರ್ಧರ್ಧ ಕೇಜಿಯ ವ್ಯಾಪಾರ ನಡೆಯುತ್ತದೆ ಚೌಕಾಸಿಯ ಸಮಕ್ಷಮದಲ್ಲಿ... ಇನ್ನೊಂದಷ್ಟು ಕಡೆ ತರಕಾರಿ ಹಣ್ಣುಗಳು ಬೈಯುತ್ತಲೇ ಸ್ನಾನಮಾಡಿ ಪಾರದರ್ಶಕ ವಸ್ತ್ರ ತೊಟ್ಟು ವ್ಯಾಪಾರಕ್ಕಿಳಿಯುತ್ತವೆ ! ಮೊಣಕಾಲು ಅಥವಾ ಅದಕ್ಕಿಂತ ಇನ್ನೂ ಒಂಚೂರು ಉದ್ದದ ಬಟ್ಟೆಯ ಹೆಣ್ಣು ಗಂಡುಗಳು ತಾವೇ ತಳ್ಳುಗಾಡಿಗಳಲ್ಲಿ ತುಂಬಿಕೊಂಡು ತಂಪುಕೋಣೆಗಳಲ್ಲಿ ವಾಯುವಿಹಾರದ ನೆಪ ಹೇಳುತ್ತಾ ಅಲೆಯುತ್ತಾರೆ.. ಸೂರ್ಯನ ಬೆಳಕಿನಲ್ಲಿ ತಿರುಗುವ ವಸ್ತುಗಳಿಗಿಂತ, ಮಂದ ಹಳದಿ ಬೆಳಕಿನ ಇಲ್ಲಾ ಗಾಜಿನ ಉಪಸ್ಥಿತಿ ಇದ್ದಲ್ಲಿ ಬೆಲೆ ಜಾಸ್ತಿ!..ಇನ್ನು ಅವನೊಬ್ಬನಿದ್ದಾನೆ ಹಳದಿ ಮತ್ತು ಹಸಿರು ಅಥವಾ ಕಪ್ಪು ಮೈಯ ರಥದ ಸಾರಥಿ.. ಗಲ್ಲಿಗಲ್ಲಿಗಳಲ್ಲಿ ಮೂರು ಚಕ್ರದ ಗಾಡಿ ಹಿಡಿದು ನುಗ್ಗುತ್ತಾನೆ.. ಅವನಿಗೆ ತಾನಾಗಿ ಮಾತಿಗಿಳಿವ ಹಂಬಲವಿಲ್ಲ.. ಆದರೆ ನಾವೇ ಅವನ ಮಾತನಾಡಿಸಿದರೆ, ಅವನ ಕತೆಗಳಿಗೆ ಬರವಿಲ್ಲ.. ಬಹುಶಃ ಅವನಿಗೂ ನಿತ್ಯ ರಸ್ತೆಯ ಜೊತೆ ಸವೆಸುವ ಸಮಯದ ಜಿಡ್ಡು ಹಿಡಿದಿರಬೇಕು.. ಸಿಕ್ಕಸಿಕ್ಕಲ್ಲಿ ತಾತ್ಸಾರದ ಜಿಗುಪ್ಸೆಯ ಒಂಟಿತನದ ಹಾರನ್ ಒತ್ತುತ್ತಾನೆ.. ಆದರೆ ಅವನೂ ನಗುತ್ತಾನೆ; ನಮ್ಮ ಒಂದು ಸಣ್ಣ ನಗೆಗೆ..!
     ಈ ನಗರದ ಬೀದಿಗಳಲ್ಲಿ ಅದೆಷ್ಟೋ ಜನ ಓಡಾಡುತ್ತಾರೆ. ದಪ್ಪ ಸಪೂರ ಉದ್ದ ಗಿಡ್ಡ ಮತ್ತು ಹಲವು ಚರ್ಮದವರು.. ಯಾರು ಯಾರಿಗೂ ಪರಿಚಿತರಲ್ಲ ; ಆದರೂ ಸಂಬಂಧಿಗಳೇ ಅನ್ನೋದು ಈ ನಗರಕ್ಕೆ ಮಾತ್ರವೇ ಗೊತ್ತು.. ನಂದಿನಿ ಹಾಲಿನ  ಬಸಪ್ಪ , ಪೇಪರ್ ತರುವ ರಮೇಶ, ಕುಡಿಯುವ ನೀರಿನ ಕ್ಯಾನಿನ ನಾಗೇಶ, ಮನೆಗೆಲಸದ ವೆಂಕ್ಟಮ್ಮ ಹೀಗೇ ಹೀಗೇ.. ಎಲ್ಲರೂ ಒಂದೇ ಮನೆಗೆ ಬೇರೆ ಬೇರೆ ಸಮಯಕ್ಕೆ ಬರುತ್ತಾರೆ, ತಂತಮ್ಮ ಕೆಲಸ ಮುಗಿಸಿ ಹೊರಡುತ್ತಾರೆ.. ಇನ್ನು 20 ರೂಪಾಯಿಗೆ 3 ಅಥವಾ 4 ತಟ್ಟೆ ಇಡ್ಲಿ ಕೊಡುವ ಗೂಡು ಹೋಟೆಲ್ಲಿನ ಅಂಕಲ್,
ದಿನಸಿ ಸಾಮಾನಿನ ಅಂಗಡಿಯ ಶೆಟ್ರು , ಚಪ್ಪಲಿ ಅಂಗಡಿಯ ರಹೀಂ ಸಾಬ್, ದರ್ಜಿ ಗಜಾನನ, ಬೇಕರಿಯ ಸತೀಶಣ್ಣ ಎಲ್ಲರೂ ಒಂದೇ ನಗರದ ಬೇರೆ ಬೇರೆ ಬೀದಿಯ ಪಾಲುದಾರರು..
    ಬಹುಶಃ ನಮಗೇ ತಿಳಿಯದೆಯೇ, ಸಾವಿರಾರು ಗ್ರಾಹಕರಲ್ಲಿ ನಾವೊಬ್ಬರಾಗಿದ್ದರೂ, ಈ ಎಲ್ಲ ವ್ಯಾಪಾರಿಗಳ ತಲೆಯಲ್ಲಿ ನಮ್ಮ ಹೆಸರು ಉಳಿದಿರುತ್ತವೆ.. ಯಾರೂ ಗೊಡವೆಗೇ ಹೋಗದ ಆತ್ಮೀಯತೆಯೊಂದು ಸೇತುವಾಗಿರುತ್ತದೆ.. ಕೆಲವಷ್ಟು ಪರಿಚಯಗಳು ಹಾಗೆಯೇ, ಆಕಾಶದಲ್ಲಿ ತಾನಾಗೇ ಪ್ರತ್ಯಕ್ಷವಾಗುವ ಗಾಳಿಪಟದ ಹಾಗೆ.. ಯಾರು ಇದರ ರೂವಾರಿ, ಯಾಕಾಗಿ ಅದರ ಉಸ್ತುವಾರಿ ಅನ್ನುವುದರ ಕಿಂಚಿತ್ತೂ ಯೋಚನೆಯಿಲ್ಲದೆ ಗಾಳಿ ಇರುವ ತನಕ ಗಾಳಿಪಟ ಹಾರುತ್ತಿರುತ್ತದೆ.. ಯಾವುದೋ ಒಂದು ಕ್ಷಣದಲ್ಲಿ ಕಣ್ಮರೆಯಾಗುತ್ತದೆ ; ಆದರೂ ಮನಸ್ಸಲ್ಲೊಂದು ಪುಟ್ಟ ಜಾಗವನ್ನ ತನ್ನ ಹೆಸರಿಗೆ ಬರೆಸಿಕೊಳ್ಳುವ ಜಾಣ್ಮೆಯೇ ವಿಸ್ಮಯ.. ಇಲ್ಲಿ ನಗರದ ಯಾವ ಸಂಬಂಧಗಳಿಗೂ ಹೆಸರಿಲ್ಲ ; ಅವುಗಳ ಅವಧಿ ಮನೆ ಬದಲಾಗುವ ತನಕ ಅಥವಾ ಮನಸ್ಸು..!
     ಇನ್ನು ಪಾರ್ಕಿನ ಗೆಳೆಯರ ಬಗ್ಗೆ ಹೇಳದಿದ್ದರೆ ಹೇಗೆ, ಅಲ್ವಾ? ಉದ್ಯಾನವನದಲ್ಲಿ ಕೆಲವೊಮ್ಮೆ ಸಮಾನ ಮನಃಸ್ಥಿತಿಯ ದೇಹಗಳು ಭೇಟಿಯಾಗುತ್ತವೆ.. ಸೊಕ್ಕಿನಿಂದ ಹಿಡಿದು ಸುಕ್ಕುಗಟ್ಟಿದವರಿಗೂ ಉದ್ಯಾನವನ ಒಂಥರಾ ಸಮಾಧಾನದ ಸ್ಥಳ.. ಎತ್ತರೆತ್ತರದ ಕಾಂಕ್ರೀಟ್ ಕಟ್ಟಡದ ಮಧ್ಯೆ ಮತ್ತೆ ಮತ್ತೆ ಊರಿನ ಒಂದು ಭಾಗವನ್ನ ಮರುಕಳಿಸುವ ವ್ಯವಸ್ಥಿತ ಹಸಿರು ಜಾಗಕ್ಕೆ ಒಂದೈದತ್ತು ನಿಮಿಷದಿಂದ ಹಿಡಿದು ಒಂದೂವರೆ ಎರಡು ತಾಸುಗಳ ತನಕವೂ ಇದ್ದು ಆರೋಗ್ಯ ಪಡೆದುಕೊಳ್ಳುವ ಬಳಗವಿದೆ.. ಸುದ್ದಿ ಚಾವಡಿಯೆಂದೇ ಹೇಳಬಹುದೇನೋ ಕೆಲವೊಮ್ಮೆ; ಹಳೆ ತಲೆಮಾರುಗಳು ತಮ್ಮ ಯೌವನದ ದಿನದಿಂದ ಶುರುಮಾಡಿ ಇಂದಿನ ಯುವಪೀಳಿಗೆಯ ಕುರಿತು ನಿಟ್ಟುಸಿರು ಬಿಟ್ಟಾಗ ಒಂದು ಸಣ್ಣ ವಿರಾಮ.. ಹೊಸತಲೆಮಾರಿಗೆ ಪಾರ್ಕುಗಳ ಉಪಯೋಗ ಪಿಸುಮಾತುಗಳ ವಿಲೇವಾರಿ ಮತ್ತು ಇನ್ನೊಂದಿಷ್ಟು ಸರಕುಗಳ ಆಮದಿಗೆ ಮಾತ್ರವೇ! ಇನ್ನು ಕೆಲವರಿಗೆ ಲೇಖನಿಯ ತುದಿಗೆ ಅಕ್ಷರಗಳ ಇಳಿಸಲು ಸ್ಫೂರ್ತಿ ಕೊಡುವ ಜಾಗ.. ಇಲ್ಲಿ ನಾಳೆಯ ನೀರಸ ಯೋಚನೆಗಳಿವೆ, ಪ್ರಸ್ತುತ ವಿದ್ಯಮಾನದ ಚಿಂತನೆಗಳಿವೆ, ನಿನ್ನೆಯ ಊಹಾಪೋಹಗಳೂ ಇವೆ.. ಇಲ್ಲಿನ ಬೆಂಚುಗಳು ಬಹುಶಃ ಎಲ್ಲಕ್ಕೂ ಸಾಕ್ಷಿಯಾಗುತ್ತವೆ; ಆದರೂ ಕರಗುವುದಿಲ್ಲ..

~`ಶ್ರೀ'
    ತಲಗೇರಿ
    

ಶಹರದ ಹೊಕ್ಕುಳೊಳಗೆ.. -೧

ಶಹರದ ಹೊಕ್ಕುಳೊಳಗೆ.. -೧
                         ... ಕದಡಿದ ನಗೆಯ ಬಿಂಬಗಳ ಹುಡುಕಾಟ...
     ಕಾಂಕ್ರೀಟ್ ಕಾಡು..ಕಪ್ಪು ಬಣ್ಣವನ್ನು ಉಗಿ ಮಾಡಿ‌ ದಪ್ಪದಪ್ಪಗೆ ಹರಡಿದಂಥ ಹೊಗೆಯ ಪದರ..ಟ್ರಾಫಿಕ್ ಲೈಟಿನ ಎದುರುಗಡೆ ಒಂದೇ ಸಮನೆ ಬೊಬ್ಬಿರಿವ ಹಾರನ್ ಗಳು..ಆ ಭಾಷೆ ಈ ಭಾಷೆಯ ಅಚ್ಚ ಬೈಗುಳಗಳು..ಇಷ್ಟೇ ಇಷ್ಟೇ ಈ ಶಹರವೆಂಬ ದೊಡ್ಡಹೊಟ್ಟೆಯ ಹಣೆಬರಹ.. ಹೊಟ್ಟೆಪಾಡಿಗಾಗಿ ಇಲ್ಲಿ ಜೋತುಬೀಳಬೇಕಷ್ಟೇ, ಇಲ್ಲದಿದ್ದಲ್ಲಿ ಇಲ್ಲ್ಯಾಕೆ ಬರುತ್ತಿದ್ದೆ.. ಇಂತಹ ಅದೆಷ್ಟೋ ಮಾತುಗಳನ್ನ ದಿನನಿತ್ಯ ಕೇಳ್ತೀವಿ; ಅಷ್ಟೇ ಅಲ್ಲ , ಆಡ್ತೀವಿ.. ಶಹರ ಅಂದ್ರೆ ಇಷ್ಟೇನಾ? ಜರ್ಝರಿತ ರೋಗಿಷ್ಟ ದರಿದ್ರ ಅಶುದ್ಧ ವಾಂಛೆಗಳ ಅಸಹ್ಯ ಅನಾತ್ಮ ಕಸದ ತೊಟ್ಟಿ ಅನ್ನುವಷ್ಟರ ಮಟ್ಟಿಗೆ ಮೂಗುಮುರಿಯುತ್ತಲೇ ಕಾಲಚಕ್ರದ ನಿಟ್ಟುಸಿರಿನ ಇದಿರು ಕೈಕಟ್ಟಿ ನಿಲ್ಲುತ್ತೀವಲ್ಲಾ! ಇಷ್ಟೇನಾ ಶಹರ ಅಂದ್ರೆ?! ಅಲ್ಲ....
     ಒರಟು ತೊಗಟೆಯಷ್ಟನ್ನೇ ಕೆಕ್ಕರಿಸಿ ನೋಡುತ್ತಾ, ಒಳಗಿನ ರುಚಿಯ ಬಗೆಗೆ ದಾಖಲೆಯಿಲ್ಲದೇ ಮಾತನಾಡುವ ಖಯಾಲಿ ಇಂದಿನದಲ್ಲ.. ಪ್ರಕೃತಿಯ ಪರಿಭಾಷೆಯ ಉಕ್ತಿಗಳಲ್ಲಿ ಈ ಶಹರವೂ ಒಂದು..ವಾಸದ ಕೋಣೆಯಿಂದ ಹೊರಗೆ ಕಾಲಿಡುತ್ತಿದ್ದಂತೆಯೇ ಮುಖಕ್ಕೆ ರಾಚುವ ಸೂರ್ಯನ ಶ್ವಾಸಕ್ಕೆ ಬೈಯುತ್ತಲೇ ಬೀದಿಗಿಳಿಯುವ ನಾವು, ಎಳೆಬಿಸಿಲ ಮೆಲುದನಿಗೆ ಕಿವಿಗೊಟ್ಟಿದ್ದು ಎಂದು?! ಟ್ರಾಫಿಕ್ಕಿನ ರಗಳೆಯಲ್ಲಿ ಸುತ್ತಮುತ್ತಲು ಒಮ್ಮೆಯಾದರೂ ಕಣ್ಣು ಹರಿಸಿದ್ದೀವಾ..ಪಕ್ಕದ ಆಟೋದಲ್ಲಿ ಪಿಳಿಪಿಳಿ ಕಂಗಳ ಪುಟಾಣಿ, ಬೊಚ್ಚುಬಾಯಿಯಲ್ಲಿ ಆಗಷ್ಟೇ ಹುಟ್ಟುತ್ತಿರುವ ಮೊಗ್ಗು ಹಲ್ಲುಗಳನ್ನ ತೋರಿಸುತ್ತಿರಬಹುದು.. ದಿನಪತ್ರಿಕೆ ಮಾರುತ್ತ ,ಅರ್ಧ ಹರಿದ ಅಂಗಿಯ ಗುಂಡಿಗಳಲ್ಲಿ ಕನಸುಗಳ ಭದ್ರಪಡಿಸುತ್ತಿರುವ ಆ ಗಾಢ ಬಣ್ಣದ ಚರ್ಮದ ಹುಡುಗನ ಹೆಸರನ್ನೆಂದಾದರೂ ಕೇಳಿದ್ದೀವಾ.. ಧೂಮಪಾನ ಶ್ವಾಸಕೋಶದ ಕೋಣೆಗಳನ್ನ ಬಿಂಜಲು ಕಟ್ಟುವಂತೆ ಆವರಿಸುತ್ತದೆಂದು ಅರಿವಿದ್ದರೂ ಟ್ರಾಫಿಕ್ಕಿನ ಹೊಗೆಯಲ್ಲೇ ಬಿಳಿವಸ್ತ್ರ ತೊಟ್ಟು ,ಸಂಬಾಳಿಸುವ ಆ ಮನುಷ್ಯನೊಬ್ಬನಿಗೆ ಒಂದು ಧನ್ಯವಾದದ ನೋಟ ತಲುಪಿದೆಯಾ..
     ದಾರಿಯಂಚಲ್ಲಿ ನಡೆವಾಗ ಮೆತ್ತನೆಯ ಒಂದು ಸ್ಪರ್ಶಕ್ಕಾಗಿ ಹಾತೊರೆದ ಪುಟಾಣಿ ನಾಯಿಮರಿಯ ಹೆಜ್ಹೆ ಸದ್ದು ನಮ್ಮ ಬಿರುಸಿನ ಹೆಜ್ಜೆಗಳಲ್ಲಿ ಕರಗಿಹೋಯಿತೇನೋ.. ಆಗಷ್ಟೇ ಮೈದಳೆದ ಬೇಲಿಬದಿಯ ಹೂವ ಗೆಳೆತನಕ್ಕೆ ಹಾತೊರೆಯುತ್ತಿರುವ ಚಿಟ್ಟೆಯ ಗೋಗರೆತ ನಮ್ಮ ಅಟ್ಟಹಾಸದ ತರಂಗಗಳಲ್ಲಿ ಉಸಿರುಗಟ್ಟಿ ಸತ್ತಿರಬಹುದು..ಅಪರೂಪಕ್ಕೆ ಕಾಣಸಿಗುವ ಮರದ ಟೊಂಗೆಯ ಎಲೆಗೊಂಚಲುಗಳಲ್ಲಿ ಕುಳಿತು ವೀಕ್ಷಕರ ಹಂಗಿಲ್ಲದೇ ಹಾಡಿದ ಹಕ್ಕಿಯ ದನಿಯನ್ನ ಗಮನಿಸಲೇ ಇಲ್ಲವಲ್ಲ... ನಮ್ಮ ಪ್ರೀತಿಯ ನಿವೇದನೆಗೆ ಇಷ್ಟುದ್ದ ಮಲ್ಲಿಗೆ ದಂಡೆಯನಿತ್ತು , ಚಂದ್ರನ ರಾತ್ರಿಗಳಿಗೆ ಬೆಳದಿಂಗಳ ಪನ್ನೀರ ಘಮ ತುಂಬಿದವನ ಹಗಲುಗಳು ಬೆವರ ಹನಿಗಳ ಬಿಕ್ಕಳಿಗೆ ಹಾಗೇ ಇಂಗಿಹೋಗುತ್ತದೆ...
     ಬದುಕು ಹೋರಾಟ ಎಂಬುದರ ನಿಜವಾದ ಅಭಿವ್ಯಕ್ತಿ ಬಹುಶಃ ಶಹರಗಳಲ್ಲಿ ಮಾತ್ರವೇ ನ್ಯಾಯಯುತವಾಗಿ ದಕ್ಕುತ್ತದೆಂದು ಅನಿಸುತ್ತದೆ! ತೇಪೆ ಹಚ್ಚಿದರೂ ಹರಿದು ಗಾಢ ಚರ್ಮ‌ ಕಿಸಕ್ಕನೆ ನಗುವ ದಂಟುಕೋಲಿನ ಅವಳು , ಅರ್ಧ ಉರಿದ ಸಿಗರೇಟಿಗೆ ಇನ್ನಷ್ಟು ಪ್ರಾಯ ಕೊಡಲು ತನ್ನುಸಿರ ಸವೆಸುತಿರುವ ಸಾಲು ಎಲುಬಿನ ಅವನು.. ದಪ್ಪ ದಪ್ಪ ಅಂಗೈಗಳಲ್ಲಿ ಚಿಲ್ಲರೆಗಳ ಬೆವರ ವಾಸನೆಗೆ ಒಂದೊತ್ತಿನ‌ ತುತ್ತು ನುಂಗುತ್ತಾರೆ.. ಅದರಲ್ಲೂ ಕೆಲವೊಮ್ಮೆ ನಾಯಿಗಳಿಗೆ ಹಂಚುತ್ತಾರೆ.. ! ಅರೆ ಬರೆ ನೆರಳ ಮರದಡಿಯಲ್ಲಿ ಅವನೊಬ್ಬ ನಿಂತಿರುತ್ತಾನೆ ಚಿಕ್ಕ ಕೈಗಾಡಿ ಅಥವಾ ಸೈಕಲ್ಲಿನ ಮೇಲೆ ಒಂದಷ್ಟು ಎಳನೀರು ಹೇರಿಕೊಂಡು.. ಪರಮಜ್ಞಾನಿಯಂತೆ ಆತ ನೀರು ಗಂಜಿಗಳ ಎಳನೀರು ತೆಗೆದುಕೊಡುವಾಗ ಕೆಕ್ಕರಿಸಿ ನೋಡುತ್ತೇವೆ ; ಅವನ ಗಂಟಲಲಿ ಬತ್ತಿದ ನೀರ ಬಗ್ಗೆ ಕೇಳುವುದೇ ಇಲ್ಲ !.. ಅವ ಮೆತ್ತನೆಯ ದನಿಯಲ್ಲಿ ಅಲ್ಲಿ‌ ನಿಂತಷ್ಟು ಹೊತ್ತಿನ ಬಿಸಿಲ ಬಾಡಿಗೆಗೆ ಗೋಗರೆವಾಗ ನಮ್ಮ ಧ್ವನಿಗೆ ಎತ್ತರದ ಅಲಂಕಾರ! ನೆಲದ ಮೇಲೆ ಒಂಚೂರು ದಪ್ಪನೆಯ ಹೊದಿಕೆ ಹಾಸಿ ಅದರ ಮೇಲೊಂದಿಷ್ಟು ತರಕಾರಿ ಹಣ್ಣುಗಳ ಕೂಡಿಟ್ಟು ಅದನ್ನು ಮುಟ್ಟುವ ಕೈಗಳಿಗಾಗಿ ಇದಿರು ನೋಡುತ್ತಿರುವ ಆಕೆಯ ಮನಸ್ಸಿನಲ್ಲಿ ಯಾರಿರಬಹುದು..?! ತನ್ನ‌ ನಾಳೆಗಳ ರೂಪಿಸಲು ಈಗ ತೊಟ್ಟಿಲಲ್ಲಿ ಮಲಗಿರುವ ಕಂದ ಅಥವಾ ಜಾರುವ ಚಡ್ಡಿಯ ಎಳೆದೆಳೆದು ಮೂಗಿನ‌ ಸಿಂಬಳ ಒರೆಸುತ್ತ ಹರಿದ ಚಪ್ಪಲಿಗೆ ಬಳ್ಳಿ ಕಟ್ಟಿ ಕಾಲು ತೂರುತ್ತ ನಡೆವ ಸರ್ಕಾರಿ ಶಾಲೆಯ ಸಮವಸ್ತ್ರಧಾರಿ ಕುರುಚಲು ತಲೆಗೂದಲ ಪುಟಾಣಿ ತಮ್ಮ‌..?! ಬೇಲಿ ತುದಿಗೆಲ್ಲಾ ರಾತ್ರಿ ಯಾರೋ ಅಂಟಿಸಿದ್ದ ಮೊಗ್ಗುಗಳ ಕಿತ್ತು, ಈಗ ಕನಸುಗಳ ಹೆಣೆಯುತ್ತಾ ಒಂದೊಂದೇ ಮೊಗ್ಗುಗಳ ಪೋಣಿಸುವ ತಂಗಿಯೋ ಇಲ್ಲಾ ಹೆಸರಿಸದ ನೆಂಟರೋ!.. ಇನ್ನು , ಟೀ ಅಂಗಡಿಗಳಲ್ಲಿ ಅಕ್ಕಪಕ್ಕದ ದೇಹಗಳಿಗೆ ಚಹಾ ವಿತರಿಸುವ ಆತನೊಬ್ಬನಿದ್ದಾನೆ ಅಲ್ವಾ! ಒಂದು ಕೈಯಲ್ಲಿ ೪ ಅಥವಾ ೫ ಬಿಸಿ ಚಹಾ ಲೋಟಗಳ ಹಿಡಿದು ರಸ್ತೆಗಳ‌ ಪಟಪಟನೆ ದಾಟುತ್ತ ಯಾವ್ಯಾವಾಗಲೋ ಒಬ್ಬೊಬ್ಬನೇ ನಗುವ ಆತನ ಹೆಸರು ಕೇಳಿದ ನೆನಪೇ ಇಲ್ಲ‌ ನಂಗೆ.. ಕೇವಲ‌ ಚಹಾ ಖಾಲಿಯಾದ ಆ ಲೋಟ ಮಾತ್ರವೇ ಉಳಿದುದು.. ಅಲ್ಲಿ ಅವನೂ ಮತ್ತು ಅಕ್ಕಪಕ್ಕದಲ್ಲಿದ್ದವರಲ್ಲಿ ಇದ್ದ ನಾನೂ ರಸ್ತೆಯ ವಿರುದ್ಧ ತುದಿಗಳಿಗೆ ಮುಖಮಾಡುತ್ತೇವೆ.. ಚಹಾದ ಬಿಸಿ ನನ್ನ ಎದೆಗೂಡುಗಳ ಬೆಚ್ಚಗಾಗಿಸುತ್ತದೆ.. ಅವನ ನಿಟ್ಟುಸಿರ ಬಿಸಿಗೆ ಚಹಾದ ಬೀಜಗಳು ಮಾತ್ರವೇ ಬಲ್ಲವೇನೋ ಇಲ್ಲಾ ಲೋಟ ತೊಳೆವಾಗ ಚೂರೇ ಚೂರು ಉಳಿದ ಎಂಜಲು ಚಹಾದೊಂದಿಗೆ ಅರಬ್ಬೀ ಸಮುದ್ರ ಸೇರುತ್ತವೇನೋ !!

~`ಶ್ರೀ'
    ತಲಗೇರಿ