ಭಾನುವಾರ, ಆಗಸ್ಟ್ 21, 2016

                                                  "ಅರ್ಧ ಅರ್ಧವೇ ಆವರಿಸು"...

     ಮೊದಲೇ ಹೇಳಿಬಿಡುತ್ತೇನೆ ಹುಡುಗೀ.. ಇವು ದಿನರಾತ್ರಿ ಸರಿವ, ಪೋಲಿ ಹುಡುಗನ ಸರಣಿ ಸ್ವಪ್ನದ ಕಂತುಗಳ ತುಣುಕುಗಳಲ್ಲ.. ಎಲ್ಲೋ ಮುಚ್ಚಿಟ್ಟ ನಕ್ಷತ್ರದೆದೆಯಿಂದ ಸ್ರವಿಸಿದ ಹಾಲ್ನೊರೆಯ ಹಸೀ ಸುಳ್ಳುಗಳೂ ಅಲ್ಲ!. ಪ್ರಾಯದ ಹರಿವಾಣದಲ್ಲಿ ಹಚ್ಚಿಟ್ಟ ಕಿರುಹಣತೆಗಳ ಹೊಂಬೆಳಕಿಗೆ ಚಿತ್ರ ಬರೆವ ಧೀಮಂತ ನೆರಳುಗಳ ಪಲ್ಲವಿಯಿದು..ಬಿಸಿಯೆದೆಯ ಅದೆಷ್ಟೋ ಕಂಪನಗಳಿಗೂ ಆರದೇ ಉಳಿದ ನನ್ನದೆಂಬುವ ಪ್ರೀತಿ ಬಿಂದುಗಳ ಜೋಡಿ ಜೋಡಿ ಕನವರಿಕೆಗಳ ತುಸು ತಲ್ಲಣವಿದು.. ನನಗೂ ನಿನಗೂ ಇಲ್ಲೊಂದು ಕತೆಯ ಕಟ್ಟುತಿದೆ ನೋಡು, ಗೊತ್ತಿಲ್ಲದೇ ಹುಟ್ಟಿಕೊಂಡ ಪದಪುಂಜಗಳ ಬಿಡಿಬಿಡಿಯ ಲಹರಿಗಳು ಒಟ್ಟಾಗಿ ಹರಿದಂಥ ಹಾಡು...

     ಗೆಳತೀ.. ಚಂದ್ರಮನ ಮೈಯಿಂದ ಜಾರಿದ ಬೆವರಿಗೆ ಆಯಸ್ಕಾಂತೀಯ ಗುಣವಿದೆಯೆಂದು ತಿಳಿದಿದ್ದೇ ಅದು ನಿನ್ನ ಹೆರಳುಗಳಲ್ಲಿ ಹೆಪ್ಪುಗಟ್ಟಿ ಮತ್ತೆ ಕರಗಿ ಮೈಯೆಲ್ಲಾ ಚದುರಿದಾಗ..ಮುಗಿಲ ದಿಬ್ಬಗಳು ಒಂದಾಗಿ ನಿನ್ನ ಮುಟ್ಟಲು ರಾಯಭಾರಿಯ ಅಟ್ಟಿದಾಗ ನಾ ಸುಮ್ಮನಿರುವುದು ಶಾಸ್ತ್ರ ಸಮ್ಮತವೇನೇ ಹುಡುಗೀ..!

                          ಸ್ವಪ್ನಗಳಿಗೆ ಸೇತುವೆಯ ಕಟ್ಟು ಗೆಳತಿ
                          ಈ ಸಂಜೆ ಕಿರಣಗಳ ಹಗ್ಗ ಹೊಸೆಯುತ್ತ..
                          ನನ್ನೆದೆಯ ಅಂಗಳದಿ ನಡೆದಾಡು ಗೆಳತಿ
                          ಅದಕಿರಲಿ ತಂಪು ಜಡಿಮಳೆಯ ಸಂಗೀತ...

     ಬಿಟ್ಟುಬಿಡೆಂದು ನಟ್ಟ ನಡುವೆ ಅಲ್ಲಲ್ಲಿಯೇ ಕನವರಿಸುವಾಗ, ಕದ್ದು ಕದ್ದು ಪಿಸುಮಾತ ಉಸುರಿದ್ದವಂತೆ ಸುತ್ತಲಿದ್ದ ಮಿಂಚುಹುಳುಗಳು..ಕತ್ತಲೆಯ ಹಂಗಿನಲ್ಲೂ ಕಡು ಶಾಪ ಕರಗಿದಂತೆ ಉರಿದುರಿದು ಮೆರೆದ ಮೇಣದ ಬತ್ತಿಯ ಬಿಸಿ ಗಂಧಕ್ಕೆ ರೆಕ್ಕೆ ಸುಟ್ಟಿದ ಪತಂಗಗಳು ಕೊರಗಲಿಲ್ಲವಂತೆ! ಬೆಳಕಿನೆದೆಯಲ್ಲಿ ಈಜುವುದು ಒಪ್ಪಂದವಿರದ ಹಕ್ಕೆಂದು ನೆನಪಾಗಿ ಉಳಿದವಂತೆ!.. ಇನ್ನು, ಇಷ್ಟು ವರ್ಷಗಳ ಕಾಲ ನಿನ್ನ ಮುಂಗುರುಳ ಜೋಕಾಲಿಯನು ಜೀಕಿದ್ದ ತಂಗಾಳಿಗೆ ನನ್ನ ಬೆರಳುಗಳ ಮೇಲೆ ಹೊಸದಾದ ಹೊಟ್ಟೆಕಿಚ್ಚಂತೆ... ನನ್ನುಸಿರ ಮೊಗೆಮೊಗೆದು ನಿನ್ನೆದೆಗೆ ತುಂಬುವ ಹೊಸ ಹುನ್ನಾರದ ರೂವಾರಿ ತಂಗಾಳಿಗೀಗ ನಮ್ಮಿಬ್ಬರಲೂ ಒಂದಾಗೋ ತವಕವಂತೆ.. ಸದಾ ಹಸಿವೆಂದು ಭೋರ್ಗರೆವ ಕಡಲ ಮೊರೆತಕ್ಕೆ, ನಮ್ಮ ಹೆಜ್ಜೆಗಳು ಕೂಡಿ, ಅದರ ತೀರದಲ್ಲಿ ಮೆಲ್ಲ ಮೆಲ್ಲ ಗುರುತು ಬಿಟ್ಟಾಗ, ಕಿರು ಬೆರಳಿಂದ ಹೆಬ್ಬೆರಳ ತನಕ ಹಬ್ಬಿಕೊಂಡ ಪುಟ್ಟ ಪುಟ್ಟ ಆಸೆಗಳ ಭಾಷೆ ಅರ್ಥವಾಯಿತಂತೆ! ಕಡಲೂ ತನ್ನ ಒಳಹರಿವ ನಿರಂತರತೆಗೆ ದನಿಯಾದ ನದಿಗಳ ಕುರಿತು ಪದ್ಯ ಬರೆಯುತ್ತೇನೆಂದು ಸದ್ಯ ಪ್ರೀತಿಯಲ್ಲಿ ಮತ್ತೊಮ್ಮೆ ಒದ್ದೆಯಾಗಲು ಕಾಯುತ್ತಿದೆಯಂತೆ!..

     ಹುಡುಗೀ.. ಋತುಮಾನವೆಲ್ಲ ನಿನ್ನದೇ ಗುಂಗಿನಲಿ ಬೀಗಬೇಕೆಂದು ಕಾದು ಕುಳಿತವನು ನಾನು.. ಮುದ್ದು ಮುದ್ದು ಅಂತರದಲ್ಲಿ ಅದೇನೋ ಸೆಳೆತ.. ಇದ್ದರೂ ಇಲ್ಲದಂತೆ, ಒಮ್ಮೊಮ್ಮೆ ಉಬ್ಬು ತಗ್ಗುಗಳಲ್ಲೆಲ್ಲಾ ಅಲೆದಲೆದು ಇಳಿದಿಳಿದು ಬಸವಳಿದು, ಕಣಿವೆಯಲ್ಲರಳಿದ ಹೂವ ಕಿಸೆಯಲ್ಲಿ ಜೋಪಾನವಾಗಿಟ್ಟು, ಬೊಗಸೆಯಲ್ಲೇ ತಬ್ಬುವ ಭಾಗ್ಯ ತೊದಲಿದಾ ತಕಧಿಮಿತಾ.. ಪೂರ್ತಿ ದಕ್ಕುವ ಪರಿಚಯದ ದಿಕ್ಕಾಗಬೇಡ ಹುಡುಗೀ..ಮೊಗ್ಗು ಮುಸುಕಿದ ಇಡಿಯ ಪಲ್ಲಂಗದಿ ಅರ್ಧ ಅರ್ಧವೇ ಆವರಿಸು.. ಅರಳುವಾಗಲೂ ಇರಲಿ ಅಲ್ಪ ವಿರಾಮ...


 ~`ಶ್ರೀ'
     ತಲಗೇರಿ 

ಬುಧವಾರ, ಆಗಸ್ಟ್ 3, 2016

"ಪ್ರಕ್ರಿಯೆ"...

ಧರೆಯೊಳಗೆ ಅಧರವನ್ನಿಟ್ಟು
ಎಂದೋ ಕದ್ದ ಗುಲಾಬಿ ಪಕಳೆಗೆ
ಬಿಂಕ ತುಂಬಿದ ಕಾಲ..
ದಾರಿ ತುಂಬ ಸುಳಿವು
ಅಲೆದಿದ್ದು ಯಾಕೆ!..
ದುಂಬಿಗೀಗ ತಿಳಿದಿಹುದು
ಅರೆ ಒಗರು ಜೇನ
ನೀನಲ್ಲಿ ಮೆತ್ತಿದ್ದು...

ತಗ್ಗಿನಲೂ ಉಬ್ಬುಗಳ
ಕಾಯ್ದುಕೊಳ್ಳುವಿಕೆ ಹೊಸತಲ್ಲ
ಪ್ರಕೃತಿಗೆ...
ಬಣ್ಣದಾ ಹನಿ
ಜಾರಿದಾ ಬಳಿಕವೂ
ಹಗ್ಗದಂತೆ ಹುರಿಗೊಳಿಸಿ
ಮೈಗಂಟಿಕೊಂಬುದರ
ತಾತ್ಪರ್ಯವೇನು!
ಕಣಿವೆಯ ಅಂಚುಗಳ
ತೀಡಿತೇ ಮಳೆಬಾನು...

ಕಳೆದದ್ದು ಹುಡುಕುವುದು
ಕಳೆದುಹೋದದ್ದರಲ್ಲಲ್ಲ;
ಉಳಿದುಕೊಂಡಿದ್ದರಲ್ಲಿ!..
ಬೆಳಕು ತೀರಿದ್ದು
ಕಾವು ಇಳಿಯಿತೆಂದಲ್ಲ;
ಟಿಸಿಲೊಡೆವ ಗಳಿಗೆಗೆ
ಮತ್ತೆ ಅಣಿಯಾಗಲೆಂದು..
ಯಾರೋ ಬಚ್ಚಿಟ್ಟ ಹಿತವಿದೆ
ಅಲ್ಲೂ ಇಲ್ಲೂ;
ಕಪ್ಪಿನಲಿ ಕರಗಿರುವ
ಕಸುವ ಹುಡುಕುವುದರಲ್ಲಿ..
ಮೈಬಿರಿದು, ತೊದಲಿಗೆ
ಬಿಡಿಬಿಡಿಯ ಕಡಲಾಗುವುದರಲ್ಲಿ..
ಹಗಲು ಹರೆಯದಿ ಕೊಟ್ಟ
ಕಲೆಯಿಹುದು ಚಂದ್ರನಲ್ಲೂ..!

                        ~‘ಶ್ರೀ’
                          ತಲಗೇರಿ

ಮಂಗಳವಾರ, ಆಗಸ್ಟ್ 2, 2016

ಮಳೆಗಾಲದಲ್ಲಿ ನಾ ಕಂಡ ‘ಗ್ರಹಣ’

    ಶ್ರೀ ಎಸ್ ಎಲ್ ಭೈರಪ್ಪನವರ ಕಾದಂಬರಿ ‘ಗ್ರಹಣ’. ಗ್ರಹಣದ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ರೂಪುಗೊಂಡಂತಹ ಕಾದಂಬರಿ ಇದು. ಮನೋವೈಜ್ಞಾನಿಕ ವಿಷಯಗಳ ಜೊತೆಗೆ ಧರ್ಮದ ತಳಹದಿಯೊಟ್ಟಿಗೆ ಮತ್ತೆ ಒಂದಷ್ಟು ನಂಬಿಕೆಗಳ ಪ್ರಶ್ನೆಗಳು ಸೇರಿಕೊಂಡಂತಹ ವಿಶೇಷ ಕೃತಿ. ವಿಭಿನ್ನ ಕಥಾವಸ್ತು, ಧರ್ಮದ ಬಗೆಗಿನ ವಿಶ್ಲೇಷಣೆ, ಸ್ವಾವಲಂಬನೆಯ ಪರಿಕಲ್ಪನೆ, ಅಂತಃಸತ್ವಗಳ ದೃಢತೆ ಮುಂತಾದವುಗಳು ಇಲ್ಲಿನ ಪ್ರಮುಖ ಅಂಶಗಳು.

   ಗ್ರಹಣದ ಬಗೆಗಿನ ವೈಜ್ಞಾನಿಕ ಉಪನ್ಯಾಸದೊಂದಿಗೆ ಆರಂಭವಾಗುವ ಕತೆ ಮುಂದೆ ಇನ್ನಷ್ಟು ಆಳಕ್ಕಿಳಿಯುತ್ತದೆ. ಮುಖದ ತೇಜಸ್ಸಿಗೆ ವರ್ಣ ಕಾರಣವಲ್ಲ, ಕಲಿತ ವಿದ್ಯೆ ಕಾರಣ ಅನ್ನುತ್ತಾ ಶ್ರೀಯುತರು ಜ್ಞಾನದ ಮಹತ್ತತೆಯನ್ನು ಹೇಳಿದ್ದಾರೆ. ವಿಜ್ಞಾನವನ್ನು ಎಷ್ಟೇ ನಂಬಿದರೂ ಭಾರತೀಯರ ಮನಸ್ಸಿನಲ್ಲಿರುವ ಗ್ರಹಣದ ಪರಿಕಲ್ಪನೆ, ಸಂಬಂಧಗಳ ವಿಷಯ ಬಂದಾಗ ವಿಜ್ಞಾನಕ್ಕಿಂತ ನಂಬಿಕೆಗಳಿಗೆ ಒತ್ತುಕೊಡುವ ಜನಾಂಗದ ಮನಃಸ್ಥಿತಿ ಇಲ್ಲಿ ವ್ಯಕ್ತ. ಒಂದೊಮ್ಮೆ ದ್ವೇಷಿಸಿದವರೂ ಮುಂದೊಮ್ಮೆ ಆಪ್ತರಾಗಬಹುದಾದ ಸಾಧ್ಯತೆಯನ್ನು  ಹೇಳಿದ್ದಾರೆ. ಆಶ್ರಮ ಪದ್ಧತಿಯ ವಿಶ್ಲೇಷಣೆ ಇದರ ಮೂಲ ಕಥಾವಸ್ತುವಾಗಿದೆ. ಅದರಲ್ಲೂ ಸನ್ಯಾಸ ಮತ್ತು ಗಾರ್ಹಸ್ಥ್ಯದ ನಡುವಣ ತಾಕಲಾಟಗಳು ಪ್ರತಿಬಿಂಬಿಸಲ್ಪಟ್ಟಿವೆ.

   ಸನ್ಯಾಸಿಯಂತೆ ಜೀವನ ನಡೆಸಿದಾತ ಇದ್ದಕ್ಕಿದ್ದಂತೆ ಮದುವೆಯಾಗುತ್ತೇನೆಂದರೆ ಅದು ತಪ್ಪಾಗುತ್ತದೆಯೇ? ಅದು ಚಿಂತಿಸುವವರ ಮನಃಸ್ಥಿತಿಗಳ ಮೇಲೆ ನಿರ್ಧರಿಸಲ್ಪಡುತ್ತದೆ. ಒಂದು ಕೆಲಸ ಮಾಡುವಾಗ ಅದಕ್ಕೊಂದು ಪ್ರೇರಣೆ, ನೈತಿಕ ಸ್ಥೈರ್ಯ ಮತ್ತು ಒಂದು ಶಕ್ತಿಶಾಲಿ ಹಿನ್ನೆಲೆ ಬೇಕು ಎನ್ನುತ್ತಾ ಬಹುಶಃ ಅದಕ್ಕಾಗಿಯೇ ದೇವರ ಅಸ್ತಿತ್ವ ಬಲವಾಯಿತೇನೋ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಪ್ರತಿಯೊಂದು ಕ್ರಿಯೆಗೂ ಒಂದು ನಿಮಿತ್ತವಿರಬೇಕು. ಎಲ್ಲ ಕ್ರಿಯೆಗಳಲ್ಲೂ ಒಂದು ಇನ್ನೊಂದನ್ನು ಉದ್ದೀಪಿಸುವಂತಿರುತ್ತವೆ; ಪರೋಕ್ಷ ಅಥವಾ ಅಪರೋಕ್ಷವಾಗಿ.. ದೇವರು ಅನ್ನುವುದು ನಮ್ಮ ಅಜ್ಞತೆಯನ್ನು ಮುಚ್ಚಿಕೊಳ್ಳುವ ಒಂದು ಒಣಮಾತು ಅನ್ನುತ್ತಾ ಒಂದು ವಿಭಿನ್ನ ವಾದವನ್ನು ಮಂಡಿಸುತ್ತಾರೆ. ಹಿಮಾಲಯ ಅನ್ನುವುದು ಕೇವಲ ಭೌತವಸ್ತುವಾಗದೆಯೇ ಅಹಂಕಾರವನ್ನು ಮೆಟ್ಟಿ ನಿಲ್ಲುವ ಒಂದು ಪ್ರಚಂಡ ಶಕ್ತಿ, ಇಂತಹ ಶಕ್ತಿಯನ್ನೇ ದೈವತ್ವವೆನ್ನಬಹುದೆಂಬ ಅರ್ಥಕ್ಕೆ ಇಲ್ಲಿ ನೆಲೆಯಿದೆ. ಮಾಡುವ ಕೆಲಸಕ್ಕೆ ಪ್ರತಿಯಾಗಿ ಏನನ್ನಾದರೂ ಪಡೆಯಬಹುದು, ಇಲ್ಲದಿದ್ದಲ್ಲಿ ಅದು ಅಹಂಕಾರಕ್ಕೆಡೆ ಮಾಡಬಹುದು ಎಂಬ ಸಂಶಯವನ್ನೂ ಹೊರಹಾಕಿ, ಸೇವೆ ಎನ್ನುವುದು ಪವಿತ್ರವಾದದ್ದು, ಆದರೆ ಅದಕ್ಕೆ ಮತಧರ್ಮವೆಂಬ ಆಧಾರ ಬೇಕೆ? ಇದ್ಯಾವುದೂ ಇಲ್ಲದೆಯೂ ಸೇವೆ ಇರಲಾರದೇ, ಇರಬಾರದೇ ಎಂದು ಪ್ರಶ್ನಿಸುತ್ತಾರೆ. ದಯವಿಲ್ಲದ ಧರ್ಮವಿಲ್ಲ ಧರ್ಮವಿಲ್ಲದ ದಯವೂ ಇಲ್ಲ, ಪರೋಪಕಾರಕ್ಕೆ ಅಧ್ಯಾತ್ಮದ ಆಧಾರವೇ ಬೇಕಿಲ್ಲ, ಸಹಕಾರ ಅನ್ನೋದು ಕೆಳವರ್ಗದ ಪ್ರಾಣಿಗಳಲ್ಲಿಯೂ ಇರುತ್ತದೆ ಅನ್ನುವ ಮಾತು, ಮಾನವನ ಹೆಚ್ಚುವಂತಿಕೆಯ ಜಂಭಕ್ಕೆ ಕಡಿವಾಣ ಹಾಕುತ್ತದೆ.

   ಸನ್ಯಾಸವೆಂದರೆ ಸಾಗರ, ಮಾತೃ ಗರ್ಭದಿಂದ ಹೊರಬಂದು ಮಗುವಿನಂತೆ ಹರಿದು, ಗೃಹಸ್ಥನಾಗಿ ಹರವಿಕೊಂಡು, ವಾನಪ್ರಸ್ಥನಂತೆ ಸಮುದ್ರ ತಟದಲ್ಲಿ ಹರಿದು, ಅನಂತರ ಮಹಾಜಲದಲ್ಲಿ ತನ್ನ ಪ್ರತ್ಯೇಕತೆಯನ್ನು ಅಳಿಸಿಹಾಕುತ್ತದೆ ಈ ನದಿ. ಸನ್ಯಾಸವೆಂದರೆ ಐಕ್ಯತೆಯ ಅಥವಾ ಸಂಗಮದ ಸಮಯ. ತನ್ನ ಅಸ್ತಿತ್ವವನ್ನು ಇನ್ನೊಂದು ಮಹಾನ್ ಅಸ್ತಿತ್ವದೊಂದಿಗೆ ಬೆರೆಸಿ ಆ ಶಕ್ತಿಯಲ್ಲಿ ಲೀನವಾಗುವ ಪ್ರಕ್ರಿಯೆ. ಉಗಮವು ಯಾವಾಗಲೂ ಕೆಳಗಿನ ಪಾತ್ರಕ್ಕಿಂತ ಸಣ್ಣದು, ಬೆಟ್ಟ ಗುಡ್ಡಗಳ ಸಾವಿರಾರು ಜಿನುಗು ಸ್ಥಳಗಳ ನೀರು ಕೂಡಿ ಹರಿದು ಕೆಳಗಿನ ವಿಸ್ತಾರದಿಂದ ನದಿ ಎಂಬ ಹೆಸರನ್ನು ಪಡೆಯುತ್ತದೆ. ಈ ಜಿನುಗುಗಳಲ್ಲಿ ಎದ್ದು ಕಾಣುವಂಥದ್ದನ್ನು ಗುರುತಿಸಿ ಅದಕ್ಕೆ ಮೂಲದ ಪಟ್ಟ ಕಟ್ಟುತ್ತೇವೆ. ಇಷ್ಟೇ ನಮ್ಮ ತಿಳಿವಳಿಕೆ ಎಂದು ತಿಳಿಸುತ್ತಾರೆ. ಶುದ್ಧ ನೀತಿಯ, ಆತ್ಮ ಸಾಕ್ಷಿಯ ಜೀವನ ನಡೆಸುವುದು ಸಂಸಾರಿಗೆ ಸಾಧ್ಯವಿಲ್ಲ; ಅದಕ್ಕೇ ಅದನ್ನು ಬಂಧನವೆನ್ನುತ್ತಾರೆ ಅನ್ನುವಾಗ ಅರ್ಥಕ್ಕೀಗ ರೆಕ್ಕೆ ಮೂಡುತ್ತದೆ. ಗೆಲುವು ಸೋಲುಗಳು ಕೇವಲ ಭಾಸಗಳು ಅನ್ನುವ ಸತ್ಯ ಇಲ್ಲಿ ಹೇಳಲ್ಪಟ್ಟಿದೆ. ಸನ್ಯಾಸ ಅನ್ನುವುದನ್ನು ಪ್ರತಿಯೊಬ್ಬ ಸಂಸಾರಿಯೂ ಪಾಲಿಸತಕ್ಕದ್ದು, ಅದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ.

   ಮನುಷ್ಯನಿಗೆ ಬದುಕುವುದಕ್ಕೆ ಪೊರೆಯ ಅಗತ್ಯ ಬೇಕೇ? ಎಂದು ಕೇಳುತ್ತಾ, ಬಿರುದನ್ನು ಸ್ವೀಕರಿಸಿದವನು ತನ್ನ ಸ್ವಂತ ಹೆಸರನ್ನು ಕಳೆದುಕೊಂಡಂತೆಯೇ ಅನ್ನುತ್ತಾರೆ. ಹೆಸರಿನೊಂದಿಗೆ ವ್ಯಕ್ತಿತ್ವವನ್ನು ತಳುಕು ಹಾಕಿ ಆತ್ಮವಿಮರ್ಶೆ ಮಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮಗುವಿಗೆ ಹೆಸರಿಡುವಾಗ ಯಾರೂ ಅದರ ಒಪ್ಪಿಗೆಯನ್ನು ಕೇಳುವುದಿಲ್ಲ, ಮಗುವಿನೊಂದಿಗೆ ಹೆಸರೂ ಬೆಳೆಯುತ್ತದೆ, ಹೆಸರಿನೊಂದಿಗೆ ಮಗುವೂ.. ವ್ಯಕ್ತಿತ್ವ ಮತ್ತು ಹೆಸರು ಅವಿಭಾಜ್ಯವಾಗುತ್ತದೆ; ಹೆಸರು ಬದಲಾದರೆ ವ್ಯಕ್ತಿತ್ವ ಬದಲಾದಂತೆ ಅನ್ನುತ್ತಾ ಪ್ರತಿಯೊಬ್ಬರ ಬದುಕಿನಲ್ಲಿ ಹೆಸರೆನ್ನುವುದು ಅಸ್ತಿತ್ವದ ಕುರುಹೇ? ಎಂಬುದನ್ನು ಯೋಚಿಸುವಂತೆ ಮಾಡುತ್ತಾರೆ.

  ಒಂದು ವಿಭಿನ್ನ ಮನೋರೋಗವನ್ನು ಕತೆಯಲ್ಲಿ ಸಮರ್ಥವಾಗಿ ಬಳಸಲಾಗಿದೆ. ಮೋಹ ಮನಸ್ಸನ್ನು ಮುಚ್ಚುವಂಥದ್ದು ಪ್ರೀತಿ ಮನಸ್ಸನ್ನು ತೆರೆಯುವಂಥದ್ದು. ತುಂಬಿದ ಎಲ್ಲ ಕರಿಮೋಡ ಮಳೆ ತರಿಸುವುದಿಲ್ಲ; ಇದ್ದ ಮೋಡ ಮುಂದೆ ಸಾಗುತ್ತದೆ, ಹೊಸ ಮೋಡ ಬರುತ್ತದೆ ಅನ್ನುತ್ತಾ ಯೋಚನೆಗಳ ಪ್ರಕ್ರಿಯೆಯನ್ನು ಅವುಗಳಿಂದುಂಟಾಗುವ ಸನ್ನಿವೇಶಗಳನ್ನು ಬಣ್ಣಿಸಿದ್ದಾರೆ. ಮಳೆಯಲ್ಲಿ ನಿಂತ ಕೈ ಗಡಿಯಾರ ಮತ್ತೆ ಸದ್ದು ಮಾಡಲಿಲ್ಲ ಅನ್ನುತ್ತಾ ಆ ಕತೆಯಲ್ಲಿನ ಒಂದು ಪಾತ್ರದ ಸಂಬಂಧದ ಪರಿಸ್ಥಿತಿಯನ್ನು ಹೇಳಿದ ಪರಿ ಚೆಂದ.

  ಹೀಗೆ, ಗ್ರಹಣ ಅನ್ನುವುದು ಒಂದಷ್ಟು ಹೊತ್ತಿನ ಮಂಕೇ? ಎಂದು ವಿಶ್ಲೇಷಣೆಗೊಳಪಡಿಸಿದ, ಆಶ್ರಮ ಪದ್ಧತಿಯ ಕೊನೆಯ ಸ್ತರವಾದ ಸನ್ಯಾಸಕ್ಕೆ ಧುಮುಕಿ ಮತ್ತೆ ಗೃಹಸ್ಥನಾಗುವ ಬಯಕೆ ಏನೆಲ್ಲಾ ಪರಿವರ್ತನೆಗಳನ್ನು ತರಬಲ್ಲದು, ಅದರ ಪರಿಣಾಮಗಳೇನಾಗಬಹುದು, ಪ್ರಕೃತಿ ನಿಯಮದ ವಿಶೇಷತೆಗಳೇನು, ಧರ್ಮಕ್ಕೆ ಯಾವ ವ್ಯಾಖ್ಯಾನ ಕೊಡಬಹುದು ಎಂಬಿತ್ಯಾದಿ ಪ್ರಶ್ನಾವಳಿಗಳ ಒಟ್ಟು ಮೊತ್ತ ಗ್ರಹಣ. ಕೆಲವರಿಗೆ ಕತೆ ಅಪೂರ್ಣವೆನಿಸಿದರೆ ಕೆಲವರಿಗೆ ಪೂರ್ಣ ಅನಿಸಬಹುದು. ಯಾವುದೇ ಕತೆಯಲ್ಲಾದರೂ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಅಂತ್ಯ ಇರುತ್ತದೆ. ಆ ಅಂತ್ಯಕ್ಕೂ ಒಂದು ಅರ್ಥ ಇರುತ್ತದೆ. ನನಗೀ ಕತೆ ಅಪೂರ್ಣವಾದಂತೆ ಕಂಡಿಲ್ಲ, ತಾವೂ ಒಮ್ಮೆ ಓದಿ, ಅಭಿಪ್ರಾಯ ಹಂಚಿಕೊಳ್ಳಿ...

                                                                                                                               ~‘ಶ್ರೀ’
                                                                                                                                  ತಲಗೇರಿ

"ಯಾನ"ದ ಜೊತೆ ಮಳೆಗಾಲದ ಸಂಜೆ...

     ಶ್ರೀ ಎಸ್ ಎಲ್ ಭೈರಪ್ಪನವರಿಂದ ರೂಪುಗೊಂಡಂತಹ ಕಾದಂಬರಿ ‘ಯಾನ’..ನನ್ನ ಬುದ್ಧಿಮಟ್ಟಕ್ಕೆ ನಿಲುಕಿದಷ್ಟನ್ನು ತಮ್ಮೊಂದಿಗೆ ಹಂಚಿಕೊಳ್ಳುವಾಸೆ, ಅದಕ್ಕಾಗಿಯೇ ಈ ಲೇಖನ..

    ಬರೆಯುವಿಕೆಯನ್ನ ತಪಸ್ಸಂತೆ ಸ್ವೀಕರಿಸಿದವರಲ್ಲಿ ಶ್ರೀಯುತರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಬಹುಶಃ ಇಂಥದ್ದೊಂದು ವಸ್ತುವನ್ನು ಇಷ್ಟು ಸಮರ್ಥವಾಗಿ ಇವರು ಮಾತ್ರವೇ ಬರೆಯಲಿಕ್ಕೆ ಸಾಧ್ಯ ಅನಿಸುತ್ತದೆ. ವಿಭಿನ್ನ ದೃಷ್ಟಿಕೋನದಲ್ಲಿ ಎಲ್ಲಿಯೂ ಲಯ ತಪ್ಪದಂತೆ ಒಂದು ವಿಷಯವನ್ನು ಮಂಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಕಾದಂಬರಿಯಲ್ಲಿ ಎಲ್ಲವುಗಳ ಸಮಾಗಮವಿದೆ. ಅವರೇ ಹೇಳಿರುವಂತೆ, ಇದು ಕೇವಲ ವಿಜ್ಞಾನದ ಕತೆಯಲ್ಲ; ಯಾವುದೇ ವರ್ಗಕ್ಕೂ ಸೇರುವುದಿಲ್ಲ. ಮನುಷ್ಯನ ಅನುಭವಗಳ ಶೋಧದ ಗುಚ್ಛ ಇದು, ಅಸ್ತಿತ್ವದ ಹುಡುಕಾಟ ಇದು. ಒಂದಷ್ಟು ನಂಬಿಕೆಗಳನ್ನ ಪ್ರಶ್ನಿಸುತ್ತಲೇ ಅದರಾಳಕ್ಕೆ ನಮ್ಮನ್ನೂ ಇಳಿಸಿ, ಮತ್ತೆ ಅಲ್ಲೇ ಉತ್ತರವನ್ನೂ ದೊರಕಿಸುವ ಅವರ ಪಾಂಡಿತ್ಯಕ್ಕೆ ಯಾರಾದರೂ ಶರಣಾಗಲೇಬೇಕು. ಒಂದು ಕಾದಂಬರಿ ಬರೆಯುವಾಗ ಪೂರ್ವಭಾವಿಯಾಗಿ ಒಂದಷ್ಟು ಸಂಶೋಧನೆಗಳಿರುತ್ತವಲ್ಲಾ, ಬಹುಶಃ ಮತ್ತ್ಯಾರೂ ಒಂದು ಕಾದಂಬರಿಗಾಗಿ ಇಷ್ಟು ಆಳಕ್ಕಿಳಿಯುವುದಿಲ್ಲವೇನೋ; ಕೇವಲ ಆಳವಲ್ಲ, ವಿಸ್ತಾರಕ್ಕೂ ಕೂಡ...

    ಅಸ್ತಿತ್ವದ ಹುಡುಕಾಟದ ಈ ಕತೆ ಒಂದು ವಿಶಿಷ್ಟ ವಿಷಯದೊಂದಿಗೆ ಶುರುವಾಗುತ್ತದೆ. ಅಕ್ಕ ಮತ್ತು ತಮ್ಮನ ನಡುವಿನ ಮದುವೆ..! ಅಲ್ಲಿಂದಲೇ ಕಾದಂಬರಿ ನನ್ನನ್ನ ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿತು. ಮೇಲ್ನೋಟಕ್ಕೆ ನಮ್ಮ ನಂಬಿಕೆಗಳಿಗೆ ವಿರುದ್ಧವಾಗಿರುವಂತೆ ತೋರಿದರೂ ಕೊನೆಯಲ್ಲಿ ಇದಕ್ಕೆ ನ್ಯಾಯ ಒದಗಿಸುತ್ತಾರೆ. ನಮ್ಮೆಲ್ಲರ ಮನಸುಗಳ ಪಾವಿತ್ರ್ಯವನ್ನ ಎತ್ತಿ ಹಿಡಿಯುತ್ತಾ ಭಾರತೀಯತೆಯನ್ನ ಮತ್ತೆ ಮತ್ತೆ ಪ್ರತಿಬಿಂಬಿಸುತ್ತಾರೆ. ಕರ್ತವ್ಯ ಮತ್ತು ನೈತಿಕತೆಯ ವಿಷಯ ಬಂದಾಗ ಕರ್ತವ್ಯವನ್ನೇ ಮೊದಲಾಗಿಸಿ, "ಕ್ಷೇತ್ರೇ ಕ್ಷೇತ್ರೇ ಧರ್ಮಂ ಕುರು" ಎಂಬ ತತ್ತ್ವಕ್ಕೆ ಒತ್ತು ಕೊಡುತ್ತಾರೆ. ಒಂದು ವಿಶಿಷ್ಟ ಕರ್ತವ್ಯವನ್ನು ಪೂರೈಸಬೇಕಾದ ಹೆಣ್ಣೊಬ್ಬಳಿಗೆ ನೈತಿಕತೆ ಮತ್ತು ಕರ್ತವ್ಯದ ಬಗೆಗಿನ ದ್ವಂದ್ವಕ್ಕೆ ಸಮರ್ಥ ಧ್ವನಿ ಈ ಕಾದಂಬರಿಯಲ್ಲಿದೆ. ಕೇದಾರನಾಥನನ್ನು ಬಣ್ಣಿಸುತ್ತಾ ಒಂದಷ್ಟು ವರ್ಷಗಳ ಹಿಂದಿನ ಭಾರತದ ಭೌಗೋಳಿಕ ಸ್ಥಿತಿ ಮತ್ತು ಇಂದಿನ ಭಾರತದ ಪರಿಸ್ಥಿತಿಯನ್ನ ಹೇಳುತ್ತಾರೆ. ವಾಣಿಜ್ಯೀಕರಣದ ಸ್ಪರ್ಶದಿಂದ ಪವಿತ್ರ ಕ್ಷೇತ್ರಗಳಲ್ಲಾಗುವ ಬದಲಾವಣೆಗೆ ಮನಸ್ಸು ದುಃಖಿಸುತ್ತದೆ. ಜೊತೆಗೆ ವೈಜ್ಞಾನಿಕತೆಯ ಇಂದಿನ ಯುಗದಲ್ಲೂ ಅಪ್ಪಟ ಭಾರತೀಯ ನಾರಿಯೋರ್ವಳ ಮನಃಸ್ಥಿತಿ ಹೇಗಿರುತ್ತದೆ ಅನ್ನುವುದನ್ನ ಕತೆಯುದ್ದಕ್ಕೂ ಹೇಳುತ್ತಾ ಸಾಗುತ್ತಾರೆ; ಅದು ಭಾರತದ ಪೂಜನೀಯ ಸ್ಥಾನಕ್ಕೆ ಪುಷ್ಟಿ ಕೊಡುತ್ತದೆ. ಇಲ್ಲಿನ ನಾರಿ ಎಂದಿಗೂ ಪ್ರಬುದ್ಧಳು, ಮಾನಸಿಕವಾಗಿ ಹಾಗೇ ದೈಹಿಕವಾಗಿ ಅಷ್ಟೇ ಗಟ್ಟಿಗಳು ಅನ್ನುತ್ತಾ ಅವಳ ಮಹತ್ತತೆಯನ್ನ ಗಹನತೆಯನ್ನ ಪಾವಿತ್ರ್ಯತೆಯನ್ನ ಪ್ರತಿಧ್ವನಿಸುತ್ತಾರೆ.

    ಜಗತ್ತಿನಲ್ಲಿ ಅದೆಷ್ಟೇ ಧರ್ಮಗಳಿದ್ದರೂ, ಎಲ್ಲ ನಂಬಿಕೆಗಳೂ ಆಯಾ ಕಾಲಘಟ್ಟಕ್ಕೆ, ಆಯಾ ಪರಿಸ್ಥಿತಿಗೆ ತಕ್ಕಂತೆ ಪುನರ್ರಚನೆಗೊಳ್ಳುತ್ತವೆ. ಆ ಧರ್ಮಗಳ ಹೊರತಾಗಿಯೂ ಕೆಲವೊಮ್ಮೆ ನಂಬಿಕೆಗಳು ಅಸ್ತಿತ್ವ ಪಡೆಯುತ್ತವೆ. ಪರಿಸ್ಥಿತಿಗೆ ತಕ್ಕಂತೆ, ಮನಃಸ್ಥಿತಿಗೆ ತಕ್ಕಂತೆ ಒಂದು ವಿಷಯ/ವಸ್ತು ವಿಭಿನ್ನ ಅರ್ಥವನ್ನು, ವಿಭಿನ್ನ ದೃಷ್ಟಿಕೋನವನ್ನು ಪಡೆಯುತ್ತದೆ. ಅದಕ್ಕೆ ಉದಾಹರಣೆಯೆಂಬಂತೆ ಅರಳು ಮಲ್ಲಿಗೆಯಂತೆ ಕಂಡ ನಕ್ಷತ್ರ ಇನ್ನೊಮ್ಮೆ ಉರಿವ ಜ್ವಾಲೆಯಾಗಿ ಕಾಣುವಿಕೆಯನ್ನ ಹೇಳಿದ್ದಾರೆ. ಇದು ಒಂದೇ ವ್ಯಕ್ತಿಯ ಬೇರೆ ಬೇರೆ ಮನಃಸ್ಥಿತಿ ಮತ್ತು ಸನ್ನಿವೇಶಗಳಲ್ಲಿನ ಎರಡು ವಿಭಿನ್ನ ದೃಷ್ಟಿಕೋನಗಳು. ಅನಂತದ ಬಗೆಗಿನ ಆಸಕ್ತಿ, ಅನಂತತೆಯಲ್ಲೇ ಕೊನೆಗೊಳ್ಳುತ್ತದೆ. ಆಸಕ್ತಿ ಅಥವಾ ಮಗ್ನತೆ ಕೊನೆಯಲ್ಲಿ ನಮ್ಮನ್ನೇ ತಾನಾಗಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಇಲ್ಲಿನ ಪ್ರತಿ ಪಾತ್ರವೂ ಒಂದೊಂದು ಭಾವವಾಗಿ ರೂಪುಗೊಂಡಿದ್ದು.. ವೈಜ್ಞಾನಿಕತೆ ಅನ್ನುವುದು ಅನಂತದ ಹೊರತಾಗಿಲ್ಲ; ಅದೂ ಕೂಡ ಪೂರ್ಣತೆ ಮತ್ತು ಶೂನ್ಯತೆಗಳ ಹುಡುಕಾಟದಲ್ಲಿದೆ..

    ಭೂಮಿಯಿಂದ ಆಚೆ ಬಂದಾಗ, ಹಿಮಾಲಯದಲ್ಲಿನ ಅವಘಡಗಳು ಬೆಂಗಳೂರಿನ ಸ್ವಂತ ಮನೆಯಲ್ಲಾಗುವ ಅವಘಡದಂತೆ ಏಕರೂಪವಾಗುತ್ತದೆ. ಒಂದು ಪರಿಧಿಯಿಂದಾಚೆಗೆ ಎಲ್ಲವೂ ಏಕತ್ವದಲ್ಲಿ ಸಂಗಮಿಸುತ್ತವೆ. ಪ್ರಜ್ಞೆ ಮತ್ತು ನೋವು ಒಂದಕ್ಕೊಂದು ಸಂಬಂಧಿಸಿದವುಗಳು.. ಇಲ್ಲಿ ಎಲ್ಲವೂ ನಮ್ಮ ಮನಃಸ್ಥಿತಿಗೆ ಸಂಬಂಧಿಸಿದ್ದು.. ನಮ್ಮ ಮನಃಸ್ಥಿತಿಗೆ ತಕ್ಕಂತೆ ಬದಲಾಗುತ್ತವೆ; ರೂಪುಗೊಳ್ಳುತ್ತವೆ.. ಒಂದಕ್ಕೊಂದು ಪರೋಕ್ಷವಾಗಿಯೋ ಅಪರೋಕ್ಷವಾಗಿಯೋ, ಆದರೆ ಪೂರಕವಾಗಿ.. ! ಎಲ್ಲಕ್ಕೂ ಒಂದು ಅಂತ್ಯ ಅನ್ನುವುದು ಇದ್ದೇ ಇದೆ; ಅದೇ ತರ ವೈಭವ ಅನ್ನುವುದು ಒಂದು ಸಲ ನೇಪಥ್ಯಕ್ಕೆ ಸರಿದ ಮೇಲೆ ಜನರ ಮನಸ್ಸಿನಿಂದಲೂ ಕ್ರಮೇಣ ಅದು ಮರೆಯಾಗುತ್ತದೆ, ಅದೇ ತರ ನಮ್ಮೆಲ್ಲರ ಬೇರೆ ಬೇರೆ ಸ್ತರಗಳ ಸ್ಥಿತಿಗಳು..

    ಸೂರ್ಯನನ್ನು ಸತ್ಯದ ನೆಲೆಯಾಗಿರಿಸಿಕೊಂಡು ಅದರ ಮೂಲವನ್ನು ಹುಡುಕುತ್ತಾ, ಕಪ್ಪು ರಂಧ್ರದಲ್ಲಿನ ವಿಸ್ಮಯವನ್ನ ಹೆಣ್ಣೊಳಗಿನ ಭಾವಕ್ಕೆ ಏಕೀರ್ಭವಿಸುತ್ತಾ, ತತ್ತ್ವಜ್ಞಾನ ಮತ್ತು ಭೌತವಿಜ್ಞಾನಗಳೊಂದಿಗೆ ಸಮೀಕರಿಸಿಕೊಂಡು ಹೋಗುವಿಕೆಯ ಚೆಂದವನ್ನ ನಾವಾಗೇ ಅನುಭವಿಸಬೇಕು. ನನ್ನೊಳಗೇ ನಾನಾಗಿ, ನಾನೇ ನನ್ನೊಳಗಾಗುವ ಪ್ರಕ್ರಿಯೆ, ಹಾಗೆಯೇ ಮೆದುಳು ಭೌತ ವಸ್ತುವೇ ಅಥವಾ ಭೌತ ವಸ್ತು ಎನ್ನುವುದು ಬುದ್ಧಿಯ ರೂಪವೇ ಎನ್ನುವಂತಹ ಸಿದ್ಧಾಂತ.. ಸತ್ಯವೆಂದರೇ ಬರಿ ಭಾವವೇ? ಅಂತ ಪ್ರಶ್ನಿಸುತ್ತಾ, ಸಾರ್ವಕಾಲಿಕ ಮತ್ತು ಸಾರ್ವದೇಶಿಕ ಸತ್ಯವೆಂಬುದಿಲ್ಲ ಅನ್ನುವುದನ್ನ ಅನಾವರಣಗೊಳಿಸುತ್ತಾರೆ. ಅರಿವಿನ ಅರಿವಿಲ್ಲದೇ ಅಪೂರ್ಣ ಎಲ್ಲಾ, ಒಲಿಯದ ಪ್ರಕೃತಿಯಿಂದ ವಿಮುಖನಾದಾಗ ಮಾತ್ರವೇ ಅಧ್ಯಾತ್ಮದ ಅಗತ್ಯ ಕಾಣುವುದು ಅನ್ನುತ್ತಾ, ನಾವು ಭಾರತೀಯರು ಗಂಡು ಹೆಣ್ಣಿನ ಮಿಲನವನ್ನು ಕೇವಲ ಭೌತಿಕ ಕ್ರಿಯೆಯಾಗಿ ಕಾಣುವುದಿಲ್ಲ, ಅದು ಕೇವಲದ ಭೌತಿಕತೆ ಅಲ್ಲಾ, ಅದು ಆತ್ಮಗಳಿಗೆ ಸಂಬಂಧಿಸಿದ್ದು ಅನ್ನುವುದನ್ನ ಸೂಚ್ಯವಾಗಿ ಹೇಳಿದ್ದಾರೆ.. ಹೀಗೇ ಭೌತವಿಜ್ಞಾನ, ತತ್ತ್ವಜ್ಞಾನ, ಖಗೋಳ, ಭೂಗೋಳ, ಮನಃಶ್ಶಾಸ್ತ್ರ ಹೀಗೆ ಹತ್ತು ಹಲವು ಮಜಲುಗಳ ಪ್ರಬುದ್ಧ ಅಂಶಗಳನ್ನು ಒಂದೇ ಕಡೆ ಕಲೆ ಹಾಕಿದ್ದು ಈ ಕಾದಂಬರಿಯಲ್ಲಿ ಕಂಡುಬರುತ್ತದೆ.. ನಿಮ್ಮಲ್ಲೂ ಯಾರಿಗಾದರೂ ‘ಯಾನ’ದ ಬಗೆಗೆ ಹೇಳಿಕೊಳ್ಳಬೇಕೆನಿಸಿದರೆ ದಯವಿಟ್ಟು ಹಂಚಿಕೊಳ್ಳಿ, ಹೊಸ ಜಗತ್ತಿಗೆ ಮತ್ತೆ ಮತ್ತೆ ತೆರೆದುಕೊಳ್ಳುತ್ತಾ ಇರೋಣ... :) :) :)

                                                                                                                                       ~‘ಶ್ರೀ’
                                                                                                                                          ತಲಗೇರಿ

ಎಚ್ಚೆಸ್ವಿ ಕಥಾಲೋಕದಲ್ಲೊಂದಷ್ಟು ಹೊತ್ತು...

     ‘ಎಚ್ಚೆಸ್ವಿ ಅವರ ಈವರೆಗಿನ ಕತೆಗಳು’ ಅನ್ನುವ ಪುಸ್ತಕದಲ್ಲಿ ಎಚ್ಚೆಸ್ವಿ ಅವರು ಬರೆದಂಥ ಕತೆಗಳನ್ನ ಕಲೆಹಾಕಲಾಗಿದೆ. ಆ ಪುಸ್ತಕದ ಜೊತೆ ನಾನು ಕಳೆದ ಕ್ಷಣಗಳನ್ನು ಹೀಗೆ ಹಂಚಿಕೊಂಬಾಸೆ...

     ಸುಮಾರು ಮೂವತ್ತು ವರ್ಷಗಳಿಗಿಂತಲೂ ಹಳೆಯದಾದ ಕತೆಗಳು ಈ ಪುಸ್ತಕದಲ್ಲಿರುವುದರಿಂದ, ಇಂದಿನ ಓದುಗನಿಗೆ ಒಂದು ಹೊಸ ಅನುಭವ ದಕ್ಕುತ್ತದೆ. ಕ್ರಾಂತಿಗಳೆಲ್ಲಾ ವೈಯಕ್ತಿಕ ಒತ್ತಡಗಳ ಮೂಲದಿಂದಾನೇ ಹುಟ್ಟುತ್ತವೋ ಏನೋ ಯಾರಿಗೆ ಗೊತ್ತು ಅನ್ನುತ್ತಾ ಅಂತರ್ಜಾತೀಯ ವಿವಾಹವಾಗಲು ಯೋಚಿಸುವ ಒಬ್ಬ ವ್ಯಕ್ತಿಯ ಬಗೆಗೆ ಹೇಳಿದ್ದಾರೆ. ಪ್ರವಾಹವನ್ನು ಪ್ರೇಮಕ್ಕೆ ಹೋಲಿಸಿ, ಕೊನೆಯಲ್ಲಿ ಕ್ಷಣ ಕ್ಷಣಕ್ಕೆ ಅವಳು ದೂರಾಗುತ್ತಿದ್ದಳು ಅನ್ನುವಾಗ ನಾವೇ ನಮ್ಮ ಸ್ವಂತದ್ದೇ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಅನ್ನುವ ಭಾವ ಆವರಿಸಿಕೊಳ್ಳುತ್ತದೆ. ಪ್ರವಾಹ ಇಳಿಯುವುದು ಹೇಗೆ ಒಳ್ಳೆಯದೋ ಹಾಗೇ ಕೆಲವೊಮ್ಮೆ ದೂರಾಗುವ ಪ್ರೀತಿ ಕೂಡಾ ಭವಿಷ್ಯದ ಹಿತಕ್ಕಾಗಿ ಎಂಬುದನ್ನ ಸೂಚ್ಯವಾಗಿ ತಿಳಿಸಿದ್ದಾರೆ.

     ಅವರ ಇನ್ನೊಂದು ಕತೆಯಲ್ಲಿ, ಹೆಣವೊಂದು ದೇವಸ್ಥಾನದ ಎದುರಿಗಿದ್ದರೂ ಜನರು ತಮ್ಮದೇ ಧಾಟಿಗಳಲ್ಲಿ ಅದನ್ನು ವಿಶ್ಲೇಷಿಸಿ, ತಮ್ಮ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳುವತ್ತ ಗಮನ ಹರಿಸುತ್ತಾರೆ, ಶವ ಸಂಸ್ಕಾರಕ್ಕಾಗಿ ಒಟ್ಟಾದ ಹಣ ಅವಳ ಹಸಿವನ್ನು ನೀಗಿಸಲೂ ಸಹಾಯ ಮಾಡುತ್ತದೆ. ಅಸಹಾಯಕತೆ, ಆಸೆ ಕೊನೆಗೆ ಗಟ್ಟಿಯಾಗಿ ಅಳುವಲ್ಲಿಗೆ ಕಾಡುವ ವಿಷಯವಾಗಿ ಉಳಿಯುತ್ತದೆಯಷ್ಟೆ..

    ‘ತಲೆಗೊಂದು ಕೋಗಿಲೆ’ ಎನ್ನುವ ಕತೆಯಲ್ಲಿ ಊಹೆಯೆಂಬುದು ಕಟ್ಟುವಿಕೆಗೆ ಸಹಕಾರಿಯಾಗುತ್ತದೆ, ಆದರೆ ಯೋಚನೆ ಏನನ್ನೂ ಕಟ್ಟಲಾರದು ಎಂದು ಹೇಳುತ್ತಾರೆ. ಊಹೆ ಸುಳ್ಳನ್ನು ಅಲಂಕರಿಸುತ್ತದೆ, ಸತ್ಯವನ್ನು ಸುಳ್ಳಿನ ಕೋಟೆಯಲ್ಲಿಟ್ಟು ಕಾಪಾಡುತ್ತದೆ. ಪ್ರಾಣಿ ಪಕ್ಷಿಗಳ ಹೆಸರನ್ನು ಬರೆದಿಟ್ಟ ಹಲಗೆಗಳು ಯಾರಿಗಾಗಿ ಮತ್ತು ಯಾತಕ್ಕಾಗಿ ಇವೆ ಎಂದು ಕೇಳುತ್ತಾ ಅಸ್ತಿತ್ವದ ಬಗೆಗೆ ವಿಶ್ಲೇಷಿಸಿದ್ದಾರೆ.

     ಮನಸ್ಸಿನಲ್ಲಿರುವ ಆಸೆಗಳೇ ಕನಸುಗಳಾಗುತ್ತವೆ ಎಂಬುದು ‘ಉಳಿಕೆ’ ಕತೆಯಲ್ಲಿ ವ್ಯಕ್ತವಾಗಿದೆ. ಕಣ್ಣಿಗೆ ಕಾಣುವುದಷ್ಟೇ ಸತ್ಯ ಎನ್ನುವುದೂ ಸೂಚ್ಯ. ಬೆಳಕಿನಲ್ಲಿ ಕಲ್ಪನೆ ಬೆಳೆಯಲಾರದು, ಕತ್ತಲಿನಲ್ಲಿ ಮಾತ್ರವೇ ಕಲ್ಪನೆ ಬೆಳೆಯುವುದು, ಯಾಕಂದ್ರೆ ಕತ್ತಲೆಗೆ ನಿರ್ದಿಷ್ಟ ರೂಪು ಇರುವುದಿಲ್ಲ.. ಆದರೆ ಬೆಳಕಿನಲ್ಲಿ ಜಗತ್ತು ಸೀಮಿತವಾಗುತ್ತದೆ ಎಂಬುದು ಅತ್ಯಂತ ಆಳದ ವಿಷಯ. ಮರವೊಂದು ಉದುರಿದಾಗ ಅದರಲ್ಲಿ ಗೂಡು ಕಟ್ಟಿದ್ದ ಹಕ್ಕಿಗಳೆಲ್ಲಾ ಹಾರಿಹೋಗುತ್ತವೆ ಅನ್ನುವಾಗ ಸಂಬಂಧಗಳ ಪದರಗಳು ಒಂದೊಂದೇ ಕಳಚಿಕೊಂಡಂತಾಗುತ್ತದೆ.

    ಸಾಯುವ ಕನಸೂ ಕೂಡ ಕೆಲವೊಮ್ಮೆ ಸುಂದರವಾಗಿ ಕಾಣುತ್ತದೆ ಎಂದಾಗ, ಬದುಕಿನ ಬಗೆಗಿನ ಒಬ್ಬ ವ್ಯಕ್ತಿಯ ದ್ವೇಷ ಅನಾವರಣವಾಗುತ್ತದೆ. ಅವನು ಬದುಕಿನ ಕ್ರೂರ ಆಘಾತಕ್ಕೆ ಸಿಲುಕಿ ಅದೆಷ್ಟು ನಲುಗಿರಬಹುದು ಎಂಬುದು ತಿಳಿಯುತ್ತದೆ. ಅಸಹಾಯಕತೆ, ಬಡತನ ಇದ್ದರೂ ಕೂಡ ಬಿಡದ ಸ್ವಾಭಿಮಾನ ಒಂದು ವಿಶಿಷ್ಟ ಅಂಶವಾಗಿ ಸ್ಥಾನ ಪಡೆದ ಕತೆ ‘ಚಂಬಣ್ಣನ ಬೊಂಬೆ ವ್ಯಾಪಾರ’. ಇಲ್ಲಿ ಹಣ ಕೂಡ ಗೌಣವಾಗಿದೆ ಸ್ವಾಭಿಮಾನದ ಇದಿರು..

    ‘ಅದೇ ಮುಖ’ ಎಂಬ ಕತೆಯಲ್ಲಿ ಚೌಕವನ್ನ ಚೌಕದ ಪಾಲಿಗೆ ಬಿಟ್ಟು ಚಲಿಸಲಾಗದೆ ಹೆಜ್ಜೆ ಕಿತ್ತಿಡಲಾಗದೆ ಇರುವ ಮರವನ್ನ ತಮ್ಮ ತಮ್ಮಲ್ಲೇ ಚೌಕಟ್ಟು ನಿರ್ಮಿಸಿಕೊಂಡು ಅದರಲ್ಲೇ ಒದ್ದಾಡುವ ಜನರ ಮನಃಸ್ಥಿತಿಯಯ ಚಿತ್ರಣವಿದೆ. ಯಾವುದೇ ಒಬ್ಬ ವ್ಯಕ್ತಿ, ಯಾವುದೋ ಒಂದು ಪ್ರದೇಶವನ್ನ ಅಥವಾ ಸಂಬಂಧವನ್ನ ಅತಿಯಾಗಿ ಹಚ್ಚಿಕೊಳ್ಳುವುದೆಂದರೆ ಅದು ಮಣ್ಣಿನಲ್ಲಿ ಸಿಕ್ಕಿಕೊಂಡ ಮರದ ಹಾಗೆ ಭಯಂಕರ ಹಿಂಸೆ, ಕೆಲವೊಮ್ಮೆ ಬಿಡಿಸಿಕೊಳ್ಳುವುದರಲ್ಲಿ ಮತ್ತು ಕ್ಷಮಿಸುವುದರಲ್ಲಿ ಬದುಕಿನ ಅರ್ಥ ಹುದುಗಿರಬೇಕು ಅಲ್ಲವೇ ಎಂದು ಪ್ರಶ್ನಿಸುತ್ತಾರೆ.

    ‘ಪುಟ್ಟಾರಿಯ ಮತಾಂತರ’ ನನ್ನನ್ನು ತುಂಬಾನೇ ಕಾಡಿದ ಕತೆ. ಸಂಬಂಧ ಎಂದರೇನು ಎಂಬ ಪ್ರಶ್ನೆಗೆ ಹಚ್ಚಿಕೊಂಡರೆ ಉಂಟು, ಬಿಟ್ಟರೆ ಇಲ್ಲ ಎಂಬ ಅತ್ಯಂತ ಸಮರ್ಪಕ ಉತ್ತರವನ್ನು ಕೊಟ್ಟಿದ್ದಾರೆ.  ನೆನಪುಗಳ ಮಹತ್ವವನ್ನು ಹೇಳುತ್ತಾ, ನೆನಪುಗಳು ಬೆಳೆಯದ ಯಾವ ವಸ್ತುವೂ ಸ್ವಂತದ್ದಾಗುವುದಿಲ್ಲವೇನೋ ಅನ್ನುತ್ತಾರೆ. ಧರ್ಮ ಶಾಸ್ತ್ರಗಳು ಒಬ್ಬ ಮನುಷ್ಯನ ಬದುಕನ್ನು ಕಟ್ಟಬೇಕು, ಮನಃಶಾಂತಿಯನ್ನು ನೀಡಬೇಕು. ಸಂತಸರಹಿತ ಧರ್ಮ ಆಚರಣೆ ಮತ್ತು ಕಟ್ಟಳೆಗಳು ಬದುಕಿನ ಅರ್ಥದಿಂದ ಬಲು ದೂರ ಎಂಬುದು ಸೂಕ್ಷ್ಮವಾಗಿ ಹೇಳಲ್ಪಟ್ಟಿದೆ.

    ಎಚ್ಚೆಸ್ವಿ ಅವರ ಪ್ರತಿಯೊಂದು ಕತೆಯಲ್ಲಿಯೂ ಹಳ್ಳಿಯ ಪರಿಸರದ ಸೊಗಡಿದೆ. ಮನುಷ್ಯ ಸಂಬಂಧಗಳ ವಿವಿಧ ಸ್ತರಗಳ ಜೀವನಾಡಿಯಂತೆ  ಅವರ ಕತೆಗಳಲ್ಲಿನ ಪಾತ್ರಗಳು ಮಿಡಿಯುತ್ತವೆ. ವಿಭಿನ್ನ ಮನಃಸ್ಥಿತಿಯ ಸಂವೇದಿನಿಯಾಗಿ ನಿಲ್ಲುತ್ತವೆ. ಒಂದಷ್ಟು ಕತೆಗಳು ಮೇಲ್ನೋಟಕ್ಕೆ ಸಾಮಾನ್ಯವಾಗಿರುವಂತೆ ಕಂಡರೂ  ಆಳ ಬೇರೆಯದೇ ಇದೆ. ಮೇಲ್ಪದರ ಕಳಚಿ ಒಳಗಿಳಿದರೆ ಅದರ ಅನುಭೂತಿಯೇ ಬೇರೆ. ಹಲವಾರು ವಿಷಯಗಳು ಅವ್ಯಕ್ತವಾಗಿಯೂ ವ್ಯಕ್ತವಾಗಿರುವುದು ಅವರ ಕತೆಗಳ ಸೌಂದರ್ಯ. ಹೀಗಾಗಿ ಅವರ ಪ್ರತೀ ಕತೆಯೂ ತನ್ನ ಪ್ರತ್ಯೇಕತೆಯನ್ನ ಉಳಿಸಿಕೊಂಡಿದೆ...

                                                                                                                                             ~‘ಶ್ರೀ’
                                                                                                                                                 ತಲಗೇರಿ