ಶ್ರೀ ಎಸ್ ಎಲ್ ಭೈರಪ್ಪನವರ ಕಾದಂಬರಿ ‘ಗ್ರಹಣ’. ಗ್ರಹಣದ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ರೂಪುಗೊಂಡಂತಹ ಕಾದಂಬರಿ ಇದು. ಮನೋವೈಜ್ಞಾನಿಕ ವಿಷಯಗಳ ಜೊತೆಗೆ ಧರ್ಮದ ತಳಹದಿಯೊಟ್ಟಿಗೆ ಮತ್ತೆ ಒಂದಷ್ಟು ನಂಬಿಕೆಗಳ ಪ್ರಶ್ನೆಗಳು ಸೇರಿಕೊಂಡಂತಹ ವಿಶೇಷ ಕೃತಿ. ವಿಭಿನ್ನ ಕಥಾವಸ್ತು, ಧರ್ಮದ ಬಗೆಗಿನ ವಿಶ್ಲೇಷಣೆ, ಸ್ವಾವಲಂಬನೆಯ ಪರಿಕಲ್ಪನೆ, ಅಂತಃಸತ್ವಗಳ ದೃಢತೆ ಮುಂತಾದವುಗಳು ಇಲ್ಲಿನ ಪ್ರಮುಖ ಅಂಶಗಳು.
ಗ್ರಹಣದ ಬಗೆಗಿನ ವೈಜ್ಞಾನಿಕ ಉಪನ್ಯಾಸದೊಂದಿಗೆ ಆರಂಭವಾಗುವ ಕತೆ ಮುಂದೆ ಇನ್ನಷ್ಟು ಆಳಕ್ಕಿಳಿಯುತ್ತದೆ. ಮುಖದ ತೇಜಸ್ಸಿಗೆ ವರ್ಣ ಕಾರಣವಲ್ಲ, ಕಲಿತ ವಿದ್ಯೆ ಕಾರಣ ಅನ್ನುತ್ತಾ ಶ್ರೀಯುತರು ಜ್ಞಾನದ ಮಹತ್ತತೆಯನ್ನು ಹೇಳಿದ್ದಾರೆ. ವಿಜ್ಞಾನವನ್ನು ಎಷ್ಟೇ ನಂಬಿದರೂ ಭಾರತೀಯರ ಮನಸ್ಸಿನಲ್ಲಿರುವ ಗ್ರಹಣದ ಪರಿಕಲ್ಪನೆ, ಸಂಬಂಧಗಳ ವಿಷಯ ಬಂದಾಗ ವಿಜ್ಞಾನಕ್ಕಿಂತ ನಂಬಿಕೆಗಳಿಗೆ ಒತ್ತುಕೊಡುವ ಜನಾಂಗದ ಮನಃಸ್ಥಿತಿ ಇಲ್ಲಿ ವ್ಯಕ್ತ. ಒಂದೊಮ್ಮೆ ದ್ವೇಷಿಸಿದವರೂ ಮುಂದೊಮ್ಮೆ ಆಪ್ತರಾಗಬಹುದಾದ ಸಾಧ್ಯತೆಯನ್ನು ಹೇಳಿದ್ದಾರೆ. ಆಶ್ರಮ ಪದ್ಧತಿಯ ವಿಶ್ಲೇಷಣೆ ಇದರ ಮೂಲ ಕಥಾವಸ್ತುವಾಗಿದೆ. ಅದರಲ್ಲೂ ಸನ್ಯಾಸ ಮತ್ತು ಗಾರ್ಹಸ್ಥ್ಯದ ನಡುವಣ ತಾಕಲಾಟಗಳು ಪ್ರತಿಬಿಂಬಿಸಲ್ಪಟ್ಟಿವೆ.
ಸನ್ಯಾಸಿಯಂತೆ ಜೀವನ ನಡೆಸಿದಾತ ಇದ್ದಕ್ಕಿದ್ದಂತೆ ಮದುವೆಯಾಗುತ್ತೇನೆಂದರೆ ಅದು ತಪ್ಪಾಗುತ್ತದೆಯೇ? ಅದು ಚಿಂತಿಸುವವರ ಮನಃಸ್ಥಿತಿಗಳ ಮೇಲೆ ನಿರ್ಧರಿಸಲ್ಪಡುತ್ತದೆ. ಒಂದು ಕೆಲಸ ಮಾಡುವಾಗ ಅದಕ್ಕೊಂದು ಪ್ರೇರಣೆ, ನೈತಿಕ ಸ್ಥೈರ್ಯ ಮತ್ತು ಒಂದು ಶಕ್ತಿಶಾಲಿ ಹಿನ್ನೆಲೆ ಬೇಕು ಎನ್ನುತ್ತಾ ಬಹುಶಃ ಅದಕ್ಕಾಗಿಯೇ ದೇವರ ಅಸ್ತಿತ್ವ ಬಲವಾಯಿತೇನೋ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಪ್ರತಿಯೊಂದು ಕ್ರಿಯೆಗೂ ಒಂದು ನಿಮಿತ್ತವಿರಬೇಕು. ಎಲ್ಲ ಕ್ರಿಯೆಗಳಲ್ಲೂ ಒಂದು ಇನ್ನೊಂದನ್ನು ಉದ್ದೀಪಿಸುವಂತಿರುತ್ತವೆ; ಪರೋಕ್ಷ ಅಥವಾ ಅಪರೋಕ್ಷವಾಗಿ.. ದೇವರು ಅನ್ನುವುದು ನಮ್ಮ ಅಜ್ಞತೆಯನ್ನು ಮುಚ್ಚಿಕೊಳ್ಳುವ ಒಂದು ಒಣಮಾತು ಅನ್ನುತ್ತಾ ಒಂದು ವಿಭಿನ್ನ ವಾದವನ್ನು ಮಂಡಿಸುತ್ತಾರೆ. ಹಿಮಾಲಯ ಅನ್ನುವುದು ಕೇವಲ ಭೌತವಸ್ತುವಾಗದೆಯೇ ಅಹಂಕಾರವನ್ನು ಮೆಟ್ಟಿ ನಿಲ್ಲುವ ಒಂದು ಪ್ರಚಂಡ ಶಕ್ತಿ, ಇಂತಹ ಶಕ್ತಿಯನ್ನೇ ದೈವತ್ವವೆನ್ನಬಹುದೆಂಬ ಅರ್ಥಕ್ಕೆ ಇಲ್ಲಿ ನೆಲೆಯಿದೆ. ಮಾಡುವ ಕೆಲಸಕ್ಕೆ ಪ್ರತಿಯಾಗಿ ಏನನ್ನಾದರೂ ಪಡೆಯಬಹುದು, ಇಲ್ಲದಿದ್ದಲ್ಲಿ ಅದು ಅಹಂಕಾರಕ್ಕೆಡೆ ಮಾಡಬಹುದು ಎಂಬ ಸಂಶಯವನ್ನೂ ಹೊರಹಾಕಿ, ಸೇವೆ ಎನ್ನುವುದು ಪವಿತ್ರವಾದದ್ದು, ಆದರೆ ಅದಕ್ಕೆ ಮತಧರ್ಮವೆಂಬ ಆಧಾರ ಬೇಕೆ? ಇದ್ಯಾವುದೂ ಇಲ್ಲದೆಯೂ ಸೇವೆ ಇರಲಾರದೇ, ಇರಬಾರದೇ ಎಂದು ಪ್ರಶ್ನಿಸುತ್ತಾರೆ. ದಯವಿಲ್ಲದ ಧರ್ಮವಿಲ್ಲ ಧರ್ಮವಿಲ್ಲದ ದಯವೂ ಇಲ್ಲ, ಪರೋಪಕಾರಕ್ಕೆ ಅಧ್ಯಾತ್ಮದ ಆಧಾರವೇ ಬೇಕಿಲ್ಲ, ಸಹಕಾರ ಅನ್ನೋದು ಕೆಳವರ್ಗದ ಪ್ರಾಣಿಗಳಲ್ಲಿಯೂ ಇರುತ್ತದೆ ಅನ್ನುವ ಮಾತು, ಮಾನವನ ಹೆಚ್ಚುವಂತಿಕೆಯ ಜಂಭಕ್ಕೆ ಕಡಿವಾಣ ಹಾಕುತ್ತದೆ.
ಸನ್ಯಾಸವೆಂದರೆ ಸಾಗರ, ಮಾತೃ ಗರ್ಭದಿಂದ ಹೊರಬಂದು ಮಗುವಿನಂತೆ ಹರಿದು, ಗೃಹಸ್ಥನಾಗಿ ಹರವಿಕೊಂಡು, ವಾನಪ್ರಸ್ಥನಂತೆ ಸಮುದ್ರ ತಟದಲ್ಲಿ ಹರಿದು, ಅನಂತರ ಮಹಾಜಲದಲ್ಲಿ ತನ್ನ ಪ್ರತ್ಯೇಕತೆಯನ್ನು ಅಳಿಸಿಹಾಕುತ್ತದೆ ಈ ನದಿ. ಸನ್ಯಾಸವೆಂದರೆ ಐಕ್ಯತೆಯ ಅಥವಾ ಸಂಗಮದ ಸಮಯ. ತನ್ನ ಅಸ್ತಿತ್ವವನ್ನು ಇನ್ನೊಂದು ಮಹಾನ್ ಅಸ್ತಿತ್ವದೊಂದಿಗೆ ಬೆರೆಸಿ ಆ ಶಕ್ತಿಯಲ್ಲಿ ಲೀನವಾಗುವ ಪ್ರಕ್ರಿಯೆ. ಉಗಮವು ಯಾವಾಗಲೂ ಕೆಳಗಿನ ಪಾತ್ರಕ್ಕಿಂತ ಸಣ್ಣದು, ಬೆಟ್ಟ ಗುಡ್ಡಗಳ ಸಾವಿರಾರು ಜಿನುಗು ಸ್ಥಳಗಳ ನೀರು ಕೂಡಿ ಹರಿದು ಕೆಳಗಿನ ವಿಸ್ತಾರದಿಂದ ನದಿ ಎಂಬ ಹೆಸರನ್ನು ಪಡೆಯುತ್ತದೆ. ಈ ಜಿನುಗುಗಳಲ್ಲಿ ಎದ್ದು ಕಾಣುವಂಥದ್ದನ್ನು ಗುರುತಿಸಿ ಅದಕ್ಕೆ ಮೂಲದ ಪಟ್ಟ ಕಟ್ಟುತ್ತೇವೆ. ಇಷ್ಟೇ ನಮ್ಮ ತಿಳಿವಳಿಕೆ ಎಂದು ತಿಳಿಸುತ್ತಾರೆ. ಶುದ್ಧ ನೀತಿಯ, ಆತ್ಮ ಸಾಕ್ಷಿಯ ಜೀವನ ನಡೆಸುವುದು ಸಂಸಾರಿಗೆ ಸಾಧ್ಯವಿಲ್ಲ; ಅದಕ್ಕೇ ಅದನ್ನು ಬಂಧನವೆನ್ನುತ್ತಾರೆ ಅನ್ನುವಾಗ ಅರ್ಥಕ್ಕೀಗ ರೆಕ್ಕೆ ಮೂಡುತ್ತದೆ. ಗೆಲುವು ಸೋಲುಗಳು ಕೇವಲ ಭಾಸಗಳು ಅನ್ನುವ ಸತ್ಯ ಇಲ್ಲಿ ಹೇಳಲ್ಪಟ್ಟಿದೆ. ಸನ್ಯಾಸ ಅನ್ನುವುದನ್ನು ಪ್ರತಿಯೊಬ್ಬ ಸಂಸಾರಿಯೂ ಪಾಲಿಸತಕ್ಕದ್ದು, ಅದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ.
ಮನುಷ್ಯನಿಗೆ ಬದುಕುವುದಕ್ಕೆ ಪೊರೆಯ ಅಗತ್ಯ ಬೇಕೇ? ಎಂದು ಕೇಳುತ್ತಾ, ಬಿರುದನ್ನು ಸ್ವೀಕರಿಸಿದವನು ತನ್ನ ಸ್ವಂತ ಹೆಸರನ್ನು ಕಳೆದುಕೊಂಡಂತೆಯೇ ಅನ್ನುತ್ತಾರೆ. ಹೆಸರಿನೊಂದಿಗೆ ವ್ಯಕ್ತಿತ್ವವನ್ನು ತಳುಕು ಹಾಕಿ ಆತ್ಮವಿಮರ್ಶೆ ಮಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮಗುವಿಗೆ ಹೆಸರಿಡುವಾಗ ಯಾರೂ ಅದರ ಒಪ್ಪಿಗೆಯನ್ನು ಕೇಳುವುದಿಲ್ಲ, ಮಗುವಿನೊಂದಿಗೆ ಹೆಸರೂ ಬೆಳೆಯುತ್ತದೆ, ಹೆಸರಿನೊಂದಿಗೆ ಮಗುವೂ.. ವ್ಯಕ್ತಿತ್ವ ಮತ್ತು ಹೆಸರು ಅವಿಭಾಜ್ಯವಾಗುತ್ತದೆ; ಹೆಸರು ಬದಲಾದರೆ ವ್ಯಕ್ತಿತ್ವ ಬದಲಾದಂತೆ ಅನ್ನುತ್ತಾ ಪ್ರತಿಯೊಬ್ಬರ ಬದುಕಿನಲ್ಲಿ ಹೆಸರೆನ್ನುವುದು ಅಸ್ತಿತ್ವದ ಕುರುಹೇ? ಎಂಬುದನ್ನು ಯೋಚಿಸುವಂತೆ ಮಾಡುತ್ತಾರೆ.
ಒಂದು ವಿಭಿನ್ನ ಮನೋರೋಗವನ್ನು ಕತೆಯಲ್ಲಿ ಸಮರ್ಥವಾಗಿ ಬಳಸಲಾಗಿದೆ. ಮೋಹ ಮನಸ್ಸನ್ನು ಮುಚ್ಚುವಂಥದ್ದು ಪ್ರೀತಿ ಮನಸ್ಸನ್ನು ತೆರೆಯುವಂಥದ್ದು. ತುಂಬಿದ ಎಲ್ಲ ಕರಿಮೋಡ ಮಳೆ ತರಿಸುವುದಿಲ್ಲ; ಇದ್ದ ಮೋಡ ಮುಂದೆ ಸಾಗುತ್ತದೆ, ಹೊಸ ಮೋಡ ಬರುತ್ತದೆ ಅನ್ನುತ್ತಾ ಯೋಚನೆಗಳ ಪ್ರಕ್ರಿಯೆಯನ್ನು ಅವುಗಳಿಂದುಂಟಾಗುವ ಸನ್ನಿವೇಶಗಳನ್ನು ಬಣ್ಣಿಸಿದ್ದಾರೆ. ಮಳೆಯಲ್ಲಿ ನಿಂತ ಕೈ ಗಡಿಯಾರ ಮತ್ತೆ ಸದ್ದು ಮಾಡಲಿಲ್ಲ ಅನ್ನುತ್ತಾ ಆ ಕತೆಯಲ್ಲಿನ ಒಂದು ಪಾತ್ರದ ಸಂಬಂಧದ ಪರಿಸ್ಥಿತಿಯನ್ನು ಹೇಳಿದ ಪರಿ ಚೆಂದ.
ಹೀಗೆ, ಗ್ರಹಣ ಅನ್ನುವುದು ಒಂದಷ್ಟು ಹೊತ್ತಿನ ಮಂಕೇ? ಎಂದು ವಿಶ್ಲೇಷಣೆಗೊಳಪಡಿಸಿದ, ಆಶ್ರಮ ಪದ್ಧತಿಯ ಕೊನೆಯ ಸ್ತರವಾದ ಸನ್ಯಾಸಕ್ಕೆ ಧುಮುಕಿ ಮತ್ತೆ ಗೃಹಸ್ಥನಾಗುವ ಬಯಕೆ ಏನೆಲ್ಲಾ ಪರಿವರ್ತನೆಗಳನ್ನು ತರಬಲ್ಲದು, ಅದರ ಪರಿಣಾಮಗಳೇನಾಗಬಹುದು, ಪ್ರಕೃತಿ ನಿಯಮದ ವಿಶೇಷತೆಗಳೇನು, ಧರ್ಮಕ್ಕೆ ಯಾವ ವ್ಯಾಖ್ಯಾನ ಕೊಡಬಹುದು ಎಂಬಿತ್ಯಾದಿ ಪ್ರಶ್ನಾವಳಿಗಳ ಒಟ್ಟು ಮೊತ್ತ ಗ್ರಹಣ. ಕೆಲವರಿಗೆ ಕತೆ ಅಪೂರ್ಣವೆನಿಸಿದರೆ ಕೆಲವರಿಗೆ ಪೂರ್ಣ ಅನಿಸಬಹುದು. ಯಾವುದೇ ಕತೆಯಲ್ಲಾದರೂ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಅಂತ್ಯ ಇರುತ್ತದೆ. ಆ ಅಂತ್ಯಕ್ಕೂ ಒಂದು ಅರ್ಥ ಇರುತ್ತದೆ. ನನಗೀ ಕತೆ ಅಪೂರ್ಣವಾದಂತೆ ಕಂಡಿಲ್ಲ, ತಾವೂ ಒಮ್ಮೆ ಓದಿ, ಅಭಿಪ್ರಾಯ ಹಂಚಿಕೊಳ್ಳಿ...
~‘ಶ್ರೀ’
ತಲಗೇರಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ