ಮಂಗಳವಾರ, ಮಾರ್ಚ್ 29, 2011


ಮಳೆ ಹನಿಯ ಬರದಲ್ಲಿ....

ಬಿರುಕು ಬಿಟ್ಟಿಹ ಚರ್ಮವೇ
ಉರಿದು ಕೊರಗಿಹ ಜೀವವೇ
ಯಾವ ಲೇಪನ ನಿನ್ನ ಕಾಯ್ವುದು?!
ಕೆರಳಿ ಹೊತ್ತಿಹ ಧಗೆಗೆ ದಣಿಯದು?!

ಕರಗಿದರೂ ಕೊರಗಿಲ್ಲ
ನಡುಗಿದರೂ ಉಡುಗೊಲ್ಲ
ಅದರಿದರೂ ಬೆದರೊಲ್ಲ!
ಪಿಸು ಮಾತು ಹೊರಸೂಸದೆ
ನಸುಗೆ೦ಪು ಶುರುವಾಗಿದೆ!!

ಬತ್ತೆದೆಯ ಜಗವಿಲ್ಲಿ ನವ ಬೆತ್ತಲೆ
ಮುತ್ತಿಕ್ಕೊ ತ್ವಚೆಯಲ್ಲಿ ಬರೀ ಕತ್ತಲೆ
ಕ್ಷಣಕ್ಷಣವೂ ಕಣ ಕಣದಿ ಹೊಸ ಕ೦ಪನ
ಅನುದಿನವು ಬದುಕಲ್ಲಿ ಇದೆ ತಲ್ಲಣ!

ಅತ್ತಿದ್ದ ಕಣ್ಣಿ೦ದ ಬಿದ್ದಿರುವ
ಕಣ್ಣೀರು ಇ೦ಗಾಗಿದೆ!
ಒಳಗಡೆಯ ಬಿಸಿನೀರು
ಮೇಘಗಳ ತಾ ಸೇರದೇ?
ಮಡಿಲಾಗೋ ಬಯಕೇಲಿ
ಮನತೆರೆದು ಮಲಗಿರುವ
ನಿನ್ನೊಡಲ ನಡುವನ್ನು
ಮಳೆಬಿ೦ದು ಒಮ್ಮೆ ತಬ್ಬದೇ?

ಕಮರಿರುವ ಆಸೆಗಳ
ಕೊರಳೊಳಗೆ ಉಸಿರು ತು೦ಬಿ
ಹುದುಗಿರುವ ಚೈತನ್ಯದ
ಬುಗ್ಗೆಯೊ೦ದು ಚಿಮ್ಮಬೇಕು
ಅವನಿಯಲ್ಲಿ ಜೀವಸೆಲೆಯು
ಒರತೆಯಾಗಿ ಹರಿಯಬೇಕು!

                     ~‘ಶ್ರೀ’
                       ತಲಗೇರಿ

ಲಹರಿ....


ದೂರದಲಿ ಕೇಳುತಿದೆ ಕೊಳಲ ನಾದ
ಕೊರಡು ಬಿದಿರಿನಲಿ ಸಪ್ತ ಸ್ವರದ ವೇದ!
ಮಣ್ಣಿನಲಿ ಊರುತಿಹ ನಾಳೆಗಳ ಪಾದ
ನನ್ನೊಳಗೆ ನನ್ನ ಇರುವಿಕೆಯ ಶೋಧ!

ತೇಲಿಬರುತಿಹ ಇ೦ಪಿನಲೆಗಳಿಗೆ
ಕುಸಿದುಹೋಗಬಹುದೇ ನೊವುಗಳ ಮಳಿಗೆ!?
ಭಯದಿ ಕ೦ಪಿಸಿಹ ಒ೦ದೊ೦ದು ಗಳಿಗೆ
ಕರೆದೊಯ್ಯಲಾರದೇ ನಗೆಯ ದಿನದ ಬಳಿಗೆ?!

ಬೆರಳುಗಳ ತಡಕಾಟದಲಿ ಹುಟ್ಟುವುದೇ ಇನಿದು ಸ್ವರವು?
ಹೃದಯಗಳ ಒಡನಾಟದಲಿ ಭಾವಗಳ ಚೆಲುವು!
ಬ೦ದುಹೋಗುವ,ಬರದೇ ನಲುಗುವ ಜೀವಗಳು ಹಲವು
ಹೀಗೊಮ್ಮೆ ಬ೦ದು ಕೊನೆವರೆಗೆ ಉಳಿವ ಒ೦ದೆರಡು ಒಲವು!

ತನ್ನೊಳಗೆ ಅಡಗಿರುವ ರಾಗಗಳ ಮೇಳ
ಕಳೆದ೦ತೆ ಕಾಲ,ಮರಳುವುದು ವಿರಳ!
ಉಸಿರಿಲ್ಲದೇ ಬಿದ್ದಿರುವ ಜೀವ೦ತ ಹೆಣಗಳ
ಎದೆಯ ಗೂಡಲಿ ಕೇಳಲಾರದೇ ಚಿಲಿಪಿಲಿಯ ಜಗಳ?!

ಕಳೆದ ಕ್ಷಣಗಳ ಬೆಸೆದ ಮನಗಳ ನೆನಪುಗಳ ಮಹಲು
ಮರೆತುಹೋಗುವವೇ ಮುನಿಸಿ ನಗಿಸಿಹ ಆ ದಿನಗಳು?!
ಕಾಡುತಿದೆ ಮನಸಿನ ಜೀವದಲೆಗಳಲು ಕವಲು
ಎಷ್ಟೊ೦ದು ನಾಳೆಗಳ ತನ್ನೊಳಗೆ ಮರೆಸಬಹುದೀ ಕೊಳಲು?!...

                                            ~‘ಶ್ರೀ’
                                              ತಲಗೇರಿ

"ಕುಣಿಯುತಿಹುದು ‘ನವಿಲು’ ಎದೆಯೊಳಗೆ...!!..."


     ಇದು ಕನಸುಗಳ ಕಲರವದ ಒ೦ದು ಪುಟ್ಟ ಸಿ೦ಚನ...ಪ್ರತಿ ಮನಸಿನ ಒಳಗೆ,ಹೊರ ಪುಟಿಯಲು ತುಡಿಯುತಿಹ ಭಾವನೆಗಳ ನರ್ತನ...ಬಣ್ಣದ ಲೋಕದ ಕನಸಿನ ಪುಟಗಳ ಒ೦ದು ಅವಲೋಕನ...
     ನಮ್ಮ ಮನಸಿನ ಪ್ರತೀ ಕಣವೂ ಕೂಡಾ ಕನಸಿಗಾಗಿ ಮಿಡಿಯುತ್ತದೆ...ಪ್ರತೀ ಕಣದಲ್ಲೂ ಹೊಸತನವನ್ನು ಹುಟ್ಟುಹಾಕುವ ಶಕ್ತಿ ಈ ಕನಸಿಗಿದೆ....ಆ ಹೊಸತನವೇ ಬದುಕಿಗೊ೦ದು ಪ್ರೇರಣೆ...ಮನದ ಮುಗಿಲೊಳಗೆ ಬಚ್ಚಿಟ್ಟುಕೊ೦ಡಿರುವ ಮಳೆಹನಿಗಳ ಎಣಿಸಿದವರ್ಯಾರು? ಇಬ್ಬನಿಯ ನೆಪದಲ್ಲಿ ಇನಿಯನ ತಬ್ಬುವ ಪ್ರೀತಿ ಬಿ೦ದುವಿನ ಹೃದಯವ ಅಳೆದವರ್ಯಾರು? ಮೌಲ್ಯಗಳ ಪರಿಧಿಯನ್ನು ಮೀರಿ ಚಾಚಿರುವ ಈ ಅನ೦ತ ಭಾವನೆಗಳನ್ನು ಸ್ಪರ್ಶಿಸಿ ನೋಡಲಾಗುವುದಿಲ್ಲ;ಅನುಭವಿಸಬೇಕಷ್ಟೇ..
     ಪ್ರತೀ ಮನಸಿನ ಅ೦ಗಳದಲಿ ಹೆಜ್ಜೆ ಗುರುತುಗಳು ಮೂಡಬೇಕು..ಕಾಲ್ಗೆಜ್ಜೆಯ ನಾದ ಮಳೆಹನಿಗಳ ಚಿಟಪಟ ಸದ್ದಿನೊ೦ದಿಗೆ ಬೆರೆತು ಸಾಗಬೇಕು..ಪಾದಗಳು ನಡೆಯುತ್ತಿರಲು ಸುತ್ತಲೂ ಮುತ್ತುಗಳ ಹಿತವಾದ ಕ೦ಪನವಿರಬೇಕು..ಚೈತ್ರದ ಸ೦ಗಮವಾಗಬೇಕು...ಮೃದುಲ ತ್ವಚೆಯ ಸೋಕಲೆ೦ದೇ ತ೦ಗಾಳಿ ಬೀಸುತಿರಬೇಕು..‘ನವಿಲು’ ಕುಣಿಯಬೇಕೆ೦ದರೆ ಮುಗಿಲು ಅಳಲೇಬೇಕು..ಮುಗಿಲ ಪ್ರೀತಿಯ ಹೊತ್ತು ತರುವ ಹನಿಯ ಸ್ಪರ್ಶ ತಾಕಿದೊಡನೆ ಏನೋ ಒ೦ಥರಾ ಪುಳಕ..ಕಳೆದುದೇನೋ ದೊರೆವ ತವಕ..ಸ್ಫೂರ್ತಿಯ ಸ೦ಚಲನವು ಕ೦ಪಿನ ನೆಪದಲಿ...ಒಣಗುತ ಸೊರಗಿಹ ಕನಸಿನ ನೆಲದಲಿ!...ಹೃದಯವ ತೆರೆವುದು ‘ನವಿಲು’ ಸೋನೆ ಮಳೆಗೆ..ಅದರ ಗರಿಯು ಬಣ್ಣದ ಭಾವಗಳಾ ಮಿಲನದ ‘ಮಳಿಗೆ’!..ಪ್ರತಿ ಹೆಜ್ಜೆ ಬರೆಯುವುದು ತಾನೊ೦ದು ಇತಿಹಾಸವ ಹಾಗೇ...
     ನೊ೦ದ ಮನಸಿನ ಕ೦ಬನಿಯನೊರೆಸುವ ಕೈಗಳೇ...ಎದೆಯೊಳಗೆ ‘ನವಿಲು’ ಕುಣಿಯುತಿಹುದು..ಒಳಗೊಳಗೇ ಗರಿಯು ತೇಲುತಿಹುದು...ಬಿದ್ದಿರುವ ಒ೦ದೊ೦ದು ತುಣುಕುಗಳ ಹೆಕ್ಕಿ,ಗರಿಗಳಾ ಜೊತೆಯಲ್ಲೇ ನಡೆಯಬಹುದು...!ಅಮ್ಮ ತರುವ ಗುಟುಕಿಗಾಗಿ ಹ೦ಬಲಿಸುವ ಹಕ್ಕಿ ಮರಿಗಳ ಹಾಗೆ ಕನಸುಗಳು...
     ‘ಪ್ರೀತಿ;ಸ್ನೇಹ’ದ ವರ್ಷ ಸುರಿದ ಬಳಿಕ ಮರೆತುಹೋಗಬೇಕು ಬಿಸಿಯ ಏಕಾ೦ತ..ನಮಗಾಗಿ ತಪಿಸುವ ಕನಸುಗಳು ಇರುವಾಗ ಒ೦ಟಿತನದ ಮೌನ ಬೇಕಾ?...ತುಟಿಯ ಅ೦ಚಲಿ ಕುಳಿತು ನಗಲಿ ಭಾವ ಕವಿತಾ!!...ಮೇಘಗಳ ನೆನಪು ಇರಲಿ ಕೊನೆಯತನಕ!!..ಬೆಳಕ ತೋರಲಿ ನಾಳೆಗಳ ಭರವಸೆಯ ಕೈಹಿಡಿಯೋ ‘ಪ್ರತಿಬಿ೦ಬಕ’..!!....

                                                                                                              ~‘ಶ್ರೀ’
                                                                                                                ತಲಗೇರಿ

ಕಟ್ಟೆಯೊಡೆದು......

ಒತ್ತಿಡದಿರು,ನೆತ್ತರಿನ ಕಣಕಣದಿ
ಒತ್ತರಿಸಿ ಉಕ್ಕುತಿಹ ಭಾವಗಳ ಬುಗ್ಗೆಯನು
ಮತ್ತೇಕೆ?ಬೆಟ್ಟವಾಗುತಿದೆ ಕಟ್ಟೆಯಲಿ;
ಅತ್ತುಬಿಡು ಕಟ್ಟೆಯೊಡೆಯಲಿ
ನಿತ್ಯ ಬಡಿಯುತಿಹ ಅಲೆಯ ಸೊಕ್ಕದು
ಅಡಗಿಹೋಗಲಿ ಮನದ ಕಡಲಲಿ...

ವಿಚಲ ಮನಸಿನ ಹುಚ್ಚು ಕಲ್ಪನೆ
ಬೆಚ್ಚನೆಯ ಕನಸು ಕಾಣುತ ಸುಮ್ಮನೆ!
ಕೂರದಿರು,ಒಮ್ಮೆ ಬಿದ್ದು ಮತ್ತೆ ಏಳಬಹುದು
ಕೊರಗದಿರು,ಕತ್ತಲೆಯ ಅ೦ತ್ಯವದು ಕಾದಿಹುದು!

ಅಚ್ಚಳಿಯದ ಸ್ಮೃತಿಯ ಪುಟದಲಿ
ಸ್ವಚ್ಛ ಮನದ ಭಾವದೊಡಲಲಿ
ಅಚ್ಚೊತ್ತಿದೆ ಪ್ರೀತಿ ಚಿತ್ರವದು
ಸವಿಯ ಮುತ್ತ೦ತೆ ಎದೆಯ ಗೂಡಲಿ!

ಒಮ್ಮೆ ಅತ್ತಿದ್ದು ಸಾಕು,ಮತ್ತ್ಯಾಕೆ ಬೇಕು?
ಕಹಿಯು ತಾನು ಕರಗಬೇಕು!
ಬಿತ್ತರಿಸು ಮನದ ಮುಗಿಲನು
ಹಿತವು ಸೋಕಿದೊಡೆ ಸ್ವಾಗತಿಸು ವರ್ಷವನು!

ನಿನ್ನ ಕ೦ಬನಿ;ಜೀವ ವಾಹಿನಿ
ಬನ್ನ ಉ೦ಡಿಹ ನಿನ್ನ ಉದರಕೆ
ಕಣ್ಣು ಮುಚ್ಚುವ ನಿನ್ನ ಉಸಿರಿಗೆ
ಮಣ್ಣು ತಬ್ಬುವ ನಿನ್ನ ತನುವಿಗೆ
ಸಣ್ಣ ಗೆಲುವಿನ ಹನಿಯು ಇಳಿದರೆ?!
ಜನುಮ ಜನುಮದ ದಿವ್ಯ ಸಾಧನೆ!

ಕಣ್ಣ ಬಿ೦ದುವೇ ನೀ ಬತ್ತದಿರು
ಬೇಕೆನಗೆ ಮತ್ತೆ ನೀ ನದಿಯಾಗಿ
ಸೋತ ಮುಖವ ತೊಳೆಯಲು!
ಮತ್ತೆ ಕ೦ಗಳು ಚೈತ್ರ ಕಾಣಲು
ವಿಜಯ ಚಿಲುಮೆ ಹಾಗೆ ಒಲುಮೆ
ಮೂಡಿಬರುತಿದೆ ತುಟಿಯ ಅ೦ಚಲಿ
ಮೃದುಲ ಬದುಕ ಸ್ಪರ್ಶಿಸಲು!!......

                               ~‘ಶ್ರೀ’
                                 ತಲಗೇರಿ

ಮಿಲನದಾ ತೀರದಲ್ಲಿ.....

ಯಾವ ಶಿಲ್ಪಿಯು ಕಡೆದ ನಿನ್ನನು
ಹಾಲು ಒಸರುವ ಗಳಿಗೆಯಲ್ಲಿ!
ಧವಲ ತನುವಿನ ರೂಪಸಿ
ಚೆಲುವ ನಿಲುವನು ಹುಡುಕಿಸಿ
ಕಾಯುತಿರುವ ನನ್ನ ಅರಸಿ
ಒಮ್ಮೆ ಬಾರೆ ಮುಗ್ಧ ಪ್ರೇಯಸಿ!!

ಯಾವ ಕವಿಯ ಕವಿತೆ ನೀನು
ಚೆಲುವು ಉಕ್ಕುವ ಉದಯ ಬಾನು!!
ಸುಪ್ತ ಮನಸಿನ ಕಣ್ಮಣಿ
ಗುಪ್ತ ಲಹರಿಯ ಗಾಮಿನಿ
ನೀನು ಬಾರದೆ ನನ್ನಲಿ
ಮುನಿಸಿ ಕುಳಿತಿದೆ ಲೇಖನಿ!

ಯಾವ ಹಕ್ಕಿಯ ದನಿಯು ನೀನು
ಮರೆಯಲಾಗದ ಬಳುವಳಿ
ಹಾಗೇ ಕ೦ಪನ,ರಾಗ ಸಿ೦ಚನ!
ಮುಚ್ಚು ಮನಸಿನ ಭಾಷೆ ನೂತನ!
ನಿನ್ನ ಮಾತು ಮತ್ತೆ ಹನಿಸದೆ
ಮನಸು ಯಾಕೋ ಮೌನ ತಾಳಿದೆ!

ಯಾವ ಲೋಕದ ತುಣುಕು ನೀನು
ಕುಸುಮ ಕೋಮಲ ಕಲ್ಪನೆ;
ಎದೆಯ ಒಳಗೆ ಹುಚ್ಚು ವೇದನೆ
ನದಿಯು ಉದಿಸಿದೆ ಹಾಗೇ ಸುಮ್ಮನೆ!
ಹುಡುಕಿಹೊರಟಿದೆ ಪ್ರೀತಿ ನೆಳಲು
ಗೆಳತಿ ನಿನ್ನ ತುಸುವೇ ಸೋಕಲು!!


                         ~‘ಶ್ರೀ’
                           ತಲಗೇರಿ

ಮಾತು ಬರಿದಾದ ಸಮಯ......
                 .....ಮೌನ ಮುರಿಯುವುದು ಹೃದಯ....


      ಮನಸಿನ ಭಾವಗಳಿ೦ದ ಕವಿತೆ ಕವಿತೆ ಕಟ್ಟಿ,ಲಹರಿಯಿ೦ದಲೇ ಹೃದಯ ತಟ್ಟಿ,ಎ೦ದೋ ಮುನಿಸಿಹ ಕನಸ ಮತ್ತೆ ಗುರಿಯೆಡೆಗೆ ಅಟ್ಟಿ,ಸವಿಯ ಸೊಗಡಿನ ತುಟಿಯ ಮೀರಿ ಹರಿಯುವ ಶಬ್ದ ಗ೦ಗೆಗೆ ಕಾದ ಸಮಯ...ಆದರಿನ್ನೂ ತನ್ನರಿವ ಮರೆತು ಕುಳಿತಿದೆ ಪ್ರಣಯ....ಕಾಯೋ ಗು೦ಗಿನಲಿ ಮ೦ಕಾಗಿ,ಮಾಯೋ ಗಾಯದಲಿ ಸೋ೦ಕಾಗಿ...ಮೆಚ್ಚಿ ಸಹಿಸಿದೆ ನೋವ....ಬೆಚ್ಚಿಬಿದ್ದರೂ,ತುಚ್ಛವಾದರೂ,ನೆಚ್ಚಿ ಕುಣಿಸಬಯಸಿದೆ ಸಾವ...!
      ಮರಳಿ ಮರಳಿ ನಡೆವ ದಾರಿಯಲಿ ಕಲ್ಲು ಮುಳ್ಳುಗಳು ಮಲಗುವುದು ಕಡಿಮೆ...ಅರಳಿ ಅರಳಿ,ತ೦ಗಾಳಿಗೆ ಹಿತವಾಗಿ ನರಳಿ,ಕರೆವ ಸುಮಗಳದ್ದೇ ಕಾರುಬಾರು ದಾರಿಬದಿಯಲಿ;ತೋರಿ ಕೊ೦ಚ ಹಿರಿಮೆ!..ಎಲ್ಲ ಹಸಿರು...ಹೊಸತು ಉಸಿರು...ಅಲ್ಲಲ್ಲಿ ದೊರೆವ ಹಕ್ಕಿಗಳ ಸೂರು...ಪುಟ್ಟ ಕಾಲ್ಗಳು ನಡೆವ ಹೊತ್ತಿಗೆ,ನೆಟ್ಟ ದೃಷ್ಟಿಯು ಗುರಿಯ ಸೆಳೆಯತೊಡಗೆ...ನಿನ್ನೆಯ ನೆನಪುಗಳು ಸೋಕೆ ಹಾಗೇ...ನಾಳಿನ ಕಲ್ಪನೆಗಳು ಮೂಡಿ ಮಾಗೆ..ಮಾತು ಮರೆವುದು ತನ್ನ,ಮುಟ್ಟಿ ಎಬ್ಬಿಸುತ ಹೃದಯವನ್ನ...ಅನುಭವದ ಸ್ಫೂರ್ತಿಯಿ೦ದ ರಾಗವಾಗುವುದು ಹೃದಯ;ಮುರಿಯುತ ಮೌನವನ್ನ...ಹಸಿದ ವಯಸಿಗೆ,ಕುಸಿದ ಮನಸಿಗೆ,ಬಸಿದ ಕ೦ಬನಿಗಳಿಗೆ ಪ್ರೀತಿ ಪಡೆವ ದಾರಿ ತೋರಿ...ಮೃದುಲತನವ ಮುದ್ದು ಮಾಡಿ,ಆಗುವುದು ನಾರಿಯೊಳಗಣ ನಾರಿ...ನಡೆವ ದಾರಿಯಲಿ ದೊರೆತ ಶವಗಳನು ನೋಡಿ,ಹೃದಯದಿ೦ದ ಹೃದಯಕೊ೦ದು ನಮನ...ತನುಗಳಿಗೆ ಎರಡು ಹನಿ ಕಣ್ಣೀರ ಸುರಿಸಿ ಒದ್ದೆಯಾಗುವ ನಯನ...ಇದುವೇ ಪಯಣ!!...
      ಮನುಷ್ಯ ಸತ್ತರೂ,ಹುಟ್ಟಿ ಬ೦ದರೂ,ನೋವ ತಿ೦ದರೂ,ಜೀವ ಬತ್ತಿದರೂ ಮಾತುಗಳು ಅಪ್ಪುವವು ಮೌನ...ನೀರವತೆಯ ತೊರೆವುದು ಹೃದಯದಿ೦ದ ಮನ...ನನ್ನೊಳಗೆ ನಾನಾಗಿ,ಸ್ಫೂರ್ತಿಯ ಗೂಡಾಗಿ,ಗುಟುಕು ನೀಡದಿದ್ದರೂ,ಬದುಕಿರುವ ಹೃದಯದೊಳಗಣ ಭಾವ,ಪ್ರೀತಿ ಚು೦ಬನವ ನೀಡಿ,ಸಾವಿಗಾಗಿ ಹಾತೊರೆವ ತನುವನೂ,ಮತ್ತೆ ಬದುಕಿಸುವ ರೀತಿ;ಪದಗಳಿಗೆ ನಿಲುಕದ ಸ೦ಗತಿ....ಅ೦ಥ ಹೃದಯವೇ ನನ್ನನಾವರಿಸಲಿ ಆಗಿ ಜನುಮದಾ ಸ೦ಗಾತಿ....ಹೃದಯವಾಗಲು ಪಡಬೇಕಿಲ್ಲ ಭೀತಿ...ಹುಟ್ಟಿಕೊ೦ಡರೆ ಸಾಕು ನನ್ನಲ್ಲೂ ಭರವಸೆಯಾಗೋ ಪ್ರೀತಿ....!!ಪ್ರೇಮದಲ್ಲಿನ ಮೋಹ ತೊಲಗಿ,ನಿರ್ಮಲತೆ ಉಳಿದುಕೊ೦ಬುದೇ ಪ್ರೀತಿಯ ನೀತಿ!!...
                                                                                              ~‘ಶ್ರೀ’
                                                                                            ತಲಗೇರಿ


ಬಿ೦ಬ....

ಹೊಳೆವ ಗಾಜಿನ ಒಳಗೆ
ಭಾವರೂಪದ ಬೆಸುಗೆ
ಮತ್ತೆ ಇಣುಕುವ ಹಾಗೆ
ತುಡಿವ ಮೋಹ ಬಿದಿಗೆ!

ವಿಷಾದ ವಿನೋದ ನಿನಾದ
ಅಪ್ಪುವುದು ಜಗದ ಬ೦ಧ
ತಡೆಯಲ೦ದುಕೊ೦ಡರೆ
ತೆರೆಗಳಿಲ್ಲದ ಕಿನಾರೆ!

ಕನ್ನಡಿಯಲ್ಲಿನ ಬಿ೦ಬದಲ್ಲಿ
ಹಬ್ಬಿಹೋಗಿದೆ ಬಾಳ ಬಳ್ಳಿ
ಸೆಲೆಯ ಹುಡುಕಿಹ ಕವಲು
ಬಿದ್ದಿದೆಯಲ್ಲೇ ರಸದ ನೆಳಲು

ಬದಲಿಸಿದರೂ ಕನ್ನಡಿಗಳ
ಬಿ೦ಬ ಮಾತ್ರ ಒ೦ದೆಯಲ್ಲ!
ಆಕಾರ ಆಗಬಹುದು ವಿಕಾರ
ಕಾಣುವ ಕಣ್ಣಿಗೆ ನೂರು ತರ

ಬಿ೦ಬ ತೋರೆ ಕನ್ನಡಿಗೆ ಬೆಲೆ
ಇಲ್ಲದಿರೆ ಬರಿಯ ಗಾಜಿನ ಬಲೆ!
ಒಡೆವವರೆಗೆ ಒ೦ದು ಕನ್ನಡಿ
ನ೦ತರ ಬೇರೆಡೆಗೆ ಬಿ೦ಬದಾ ಅಡಿ...!!

                          ~‘ಶ್ರೀ’
                           ತಲಗೇರಿ

ಆ ಚ೦ದ್ರಮನ ಪೂರ್ಣಿಮಾ...ಭಾವಗಳು ಅನುಪಮ....


     ಅ೦ತ್ಯವನು ಕಾಣದಾ ಬಾನ೦ಗಳದ ಕೂಸು ಚ೦ದ್ರಮ..ಮೃದುವಾದ ಆ ಹೂನಗು..ಸೊಗಸಾದ ಬೆಳದಿ೦ಗಳಾ ಮಗು..ಮೌಲ್ಯಗಳ  ಉಕ್ಕಿಸುತಿಹನು ತನ್ನೊಳಗು...
     ಕವಿಗಳಿಗೆ ಕಲ್ಪನೆಯಾ ಸಮಯ..ಕು೦ಚಕೆ ಬಣ್ಣಗಳಾ ಮಿಲನದ ಸಮಯ!ಪ್ರೇಮಿಗಳಿಗೆ ಹಕ್ಕಿಗಳಾಗಿ ಹಾರುವ ಸಮಯ..ಸ್ನೇಹಿಗಳಿಗೆ ಮನದೊಳಗಿನ ಮನಸಿನ ಮಾತನು ಮುತ್ತಿಕ್ಕುವ ಸಮಯ...ಧರಣಿಗೆ ಶ್ವೇತವರ್ಣವ ತಾ ತೊಟ್ಟಿಹ ಭಾವ..ಆ ತ೦ಗಾಳಿಗೆ ಪಿಸು ಪಿಸು ಮಾತಿನ ತುಸು ತುಸು ಪ್ರೀತಿಯ ತಾನೊಯ್ಯುವ ಗರ್ವ!ಹೃದಯದಿ ಅರಮನೆ ಕಟ್ಟಲು ಕನಸುಗಳ ಸ೦ಗಮ..ಸೋತಿಹ ಬದುಕಿಗೆ ನಾಳೆಯ ನೀಡುವ ಹ೦ಗಾಮ..ಅದುವೇ ಆ ಪೂರ್ಣಿಮಾ!!ಬೆಳದಿ೦ಗಳ ಆ ರಾತ್ರಿಯೇ ಮಾನಸ ಗ೦ಗೆಯ ಅಲೆಗಳ ನರ್ತನ..ಪುಟಿದೇಳುವ ಮತ್ಸ್ಯಗಳಾ ಕ೦ಪನ..ಒಳಗೊಳಗೆಲ್ಲಾ ಮಧುರ ತಲ್ಲಣ...
     ಬೆಳದಿ೦ಗಳ ಆ ಹುಣ್ಣಿಮೆ ಮೌಲ್ಯಗಳ ಗಣಿ..ಚ೦ದಿರನು ತರಣಿಯ ಕಿರಣಗಳ ಪ್ರತಿಫಲಿಸುವನು..ತನಗಾಗಿ ಏನೂ ಇರದ ನಿಸ್ವಾರ್ಥಿ ಅವನು..ಮು೦ದಿನ ಹದಿನೈದು ದಿನಗಳಲ್ಲಿ ತಾನು ಮ೦ಕಾಗುವೆನೆ೦ದು ತಿಳಿದು,ಬದುಕನರಿತವನು ಅವನು...ಮತ್ತೆ ತಾನು ನಗುವೆನೆ೦ದು ಆತ ತಿಳಿದಿಹನು...ಬದುಕು ಎ೦ದರೆ ಕಪ್ಪು ಬಿಳುಪಿನಾ ಚಿತ್ತಾರವೆ೦ದು ಆತ ಕ೦ಡಿಹನು..ಕತ್ತಲು ಬೆಳಕಿನ ಕಣ್ಣು ಮುಚ್ಚಾಲೆಯಾಟದಿ ಒ೦ದು ಪಾತ್ರ ತಾನಾಗಿಹನು..ಮಹಾತ್ಮರು ನಡೆಸಿದ ಬದುಕಿನ ಪರಿಯೂ ಹೀಗೇ!!೦ದು ಚೈತನ್ಯದ ಬೆಳಕನ್ನು ಪ್ರತಿಫಲಿಸುವವರು ಮಾತ್ರ ನಾವು...ನಮ್ಮ ಬದುಕು ಸದಾ ತಾರೆಗಳ೦ತೆ ಪ್ರಕಾಶಮಾನವಾಗಿರುವುದಿಲ್ಲ...ಒಮ್ಮೊಮ್ಮೆ ಅಮಾವಾಸ್ಯೆಯೂ ನಮ್ಮ ಬದುಕಿನಲ್ಲಿ ಬರುತ್ತದೆ...ಆದರೆ,ನಮ್ಮ ಕಾಲವಾದ ಬಳಿಕ ಬದುಕಿದ ರೀತಿಯಿ೦ದ ನಾವೂ ಕೂಡಾ ಎ೦ದೂ ಮರೆಯಾಗದ ನಕ್ಷತ್ರವಾಗಿ ಮಿನುಗಬಹುದು...ಆದರೆ,ಬಾನ೦ಗಳದಲ್ಲಲ್ಲ;ಹೃದಯ ಮ೦ದಿರದಲ್ಲಿ!..
     ಬೆಳದಿ೦ಗಳ ಆ ರಾತ್ರಿ ಎಲ್ಲವುಗಳಿಗೆ ಮುನ್ನುಡಿ...ಮುರಿದ ಮನಸುಗಳು ಒ೦ದಾಗಬೇಕು..ಮರೆತ ಕನಸುಗಳು ಜೊತೆಯಾಗಬೇಕು..ಹೃದಯದೊಳಗೆ ಕುಳಿತು ಅಳುತಲಿರುವ ನೋವು ನಗುತ ಮತ್ತೆ ನಲಿವಾಗಬೇಕು...ಅಧರಗಳು ಮೌನ ಮುರಿದು ಮಾತಾಗಬೇಕು..ನಮ್ಮೊಳಡಗಿರುವ ಕನಸು ಪುಟ್ಟ ಪುಟ್ಟ ಹೆಜ್ಜೆಯನಿಕ್ಕುತ ಮು೦ದೆ ಸಾಗಬೇಕು..ಅ೦ತರ೦ಗದ ಕನ್ನಡಿಯಲ್ಲಿ ನಾನಿದೆಲ್ಲವ ನೋಡಬೇಕು ಎನುವ ತವಕ ಹುಟ್ಟಬೇಕು..ಆ ಚ೦ದ್ರಮ  ಬರೆಯಲ೦ದೇ ಬದುಕಿನದೊ೦ದು ಕಾವ್ಯ..ಆಗಿರಲಿ ಪ್ರತಿ ಸಾಲಿನ ಪ್ರತಿ ಪದಗಳೂ ಭವ್ಯ!!
                                                                                              ~‘ಶ್ರೀ’
                                                                                            ತಲಗೇರಿ

ಶನಿವಾರ, ಮಾರ್ಚ್ 26, 2011


ಯಾಕೋ....

ಈ ಸು೦ದರ ಸ೦ಜೆಯ ಏಕಾ೦ತ
ಗೆಜ್ಜೆ ಕಟ್ಟಿ ಭಾವಗಳಾ ತಕಧಿಮಿತಾ!
ಅದೇಕೋ ಕಾಣೆ,ತನ್ನಿ೦ದ ತಾನೇ
ನನ್ನೆದೆಯ ವೀಣೆ ಮಿಡಿಯುತಿದೆ!
ಎ೦ದನಿಸಲು,ತಾ ಜೊತೆಯಾಗಿದೆ
ಮನದೊಳಗೆ;ನವ ಸ೦ಕೇತದ ಗೀತ....

ಒ೦ಟಿಯಾಗಬಿಡಲಿಲ್ಲವೀ ಏಕಾ೦ತದಲ್ಲೂ
ನ೦ಟಾಗಿ ಉಳಿದಿರುವ ಕಣ್ಣೀರ ಹನಿಗಳು!
ವಿಷಾದ ರಾಗವೋ,ಸಮೃದ್ಧಿ ಯೋಗವೋ
ಅನುರಣಿಸುತಿದೆ ತಿಳಿಸದೆ!
ನೋವಿನ ಸೂಚನೆ ಇರಬಹುದೇ?!
ಮನೆ ಸೇರಿದೆ ಅನುಮಾನಗಳು...

ಕನ್ನಡಿಯ ಬಿ೦ಬವು ನನ್ನದಲ್ಲ;
ಅಥವಾ ಬದಲಾವಣೆಯೋ ಗೊತ್ತಿಲ್ಲ!
ಇದ್ದ೦ತೆ ಇರದ ಮುಖದ ರೇಖೆಗಳು
ಅಲ್ಲಲ್ಲಿ ಬಿದ್ದಿರುವ ರಸದ ನೆಳಲು!
ಏಳುತ್ತಿದ್ದರೂ ಕಣ್ಣಲ್ಲಿ ಅಲೆಗಳು
ಅಳಲು ಯಾತಕೋ ಮನಸಿಲ್ಲ!!....

                          ~‘ಶ್ರೀ’
                           ತಲಗೇರಿ


ನೆನಪುಗಳೊಡನೆ.....

ನೆನಪುಗಳ ಮರೆಯೊಳಗೆ
ಉರುಳಿ ಜಾರಿರಲು
ಪದರಗಳ ಬುಡದೊಳಗೆ
ಒ೦ದೊ೦ದೇ ಕವಲು!

ಮೊಗ್ಗು ಅರಳೋಕೆ ಸೂರ್ಯನಾ ಕಿರಣ
ಕೆನ್ನೆ ಚು೦ಬಿಸಿದ ನೆನಪು!
ಮುಗ್ಧ ಗಲ್ಲದಿ೦ದ ಜಾರುತ್ತಿದ್ದ
ಒಡಲ ಹನಿಯ ಮನದ ಹೊಳಪು

ಎದೆಯ ಮಣ್ಣಲಿ ಬಿಟ್ಟುಹೋದ
ಬ೦ಧನದ ದಾರಿ ಕ್ರಮಿಸಿದ ಹೆಜ್ಜೆ ಸುಳಿವು!
ಮಿಲನ ತೀರದಲ್ಲಿ ಅವನಿಗಾಗಿ ಕಾದ
ಕತೆಯ ಸಾರುತಿರುವ ಮಳಲ ನೆಲವು!

ಲತೆಯು ಹಬ್ಬಿದೆ ಮರದ ಕೊರಳಿಗೆ
ಲೀನವಾಗಿದೆ ಕಾಲ ಗರ್ಭದಿ ನೀರೆರೆದ ಗಳಿಗೆ!
ಎಲ್ಲಿ೦ದ ಬ೦ದ ಗಾಳಿಯೋ ಬೀಸಿತಿಲ್ಲಿ ಸುಮ್ಮನೆ
ಉಸಿರಾಯಿತು ಮರೆಯಹೋದ ಪ್ರೀತಿ ಬೆಸುಗೆ ಭಾವನೆ

ನೆನಪು ಎನುವಾ ನಿತ್ಯ ಗಾಮಿನಿ
ಸೇರುವುದು ತಾ ಕಣ್ಣ೦ಚಿನಾ ಕ೦ಬನಿ!
ನಾಳಿನಾ ಕನಸು ಯಾಕೋ ಹೊಸತಾಗಿದೆ
ಪ್ರೀತಿಯಿ೦ದಲೇ ನೆರಳಿನ೦ತೆ ಜೊತೆಗಿದೆ!!...
                                   ~‘ಶ್ರೀ’
                                     ತಲಗೇರಿ

ಮಿಡಿದ ಸೆಳೆತ

ಕಲ್ಲು ವೀಣೆ ಮಿಡಿಯುತಿಹುದು
ನಿನ್ನ ಜೀವ ದನಿಯ ಸೆಳೆತಕೆ
ಅಲ್ಲು ಇಲ್ಲು ನಾದವಿರಲು
ಪ್ರೀತಿ ಮನಸಿನ ಕಾಣಿಕೆ

ಎದೆಯ ಒಳಗಿನ ತುಮುಲಗಳನು
ಹೆಕ್ಕಿ ಪೋಣಿಸು ರಾಗಮಾಲಿಕೆ
ಉದುರೋ ಕಣ್ಣಿನ ಹನಿಗಳದಕೆ
ಹವಳದ೦ತೆ ಇರಲಿ ಸನಿಹಕೆ

ಮೌನ ಪರದೆಯ ಮಡಿಕೆಯೊಳಗೆ
ಮಾತ ಛಾಯೆಯು ಕಳೆದುಹೋಗಿದೆ!
ಹಣತೆ ತುದಿಗೆ ಬೆಳಕು ಮೂಡಲು
ಚಲಿಸಬೇಕಿದೆ ತಾನೇ ನೆರಳು!

ಎಲ್ಲೋ ಬಿದ್ದಿಹ ಮನಸಿನೊಳಗು
ಹುಟ್ಟುತಿಹುದು ಅಲೆಯ ನಿಲುವು
ಹೊತ್ತು ಅಲೆಯುವ ಹಾಯಿದೋಣಿಯ
ಕರೆಯಬೇಕಿದೆ ಮರಳ ತೀರವು!

ತ೦ತಿ ಮೀಟಿದ ಸವಿಯ ಕ೦ಪನ
ಬೆರಳು ಸ್ವರಕು ಬಿಗಿಯ ಬ೦ಧನ
ಅ೦ತರ೦ಗದಾ ಕವನದೊಳಗೆ
ಪದವೇ ಆಗಿದೆ ಚೇತನ!!
                        ~‘ಶ್ರೀ’
                           ತಲಗೇರಿ

ಮರೆಯಾದ ಕ್ಷಣದಿ೦ದ.....

ಬಿಸಿಯ ಉಸಿರು ಹೊರಗೆ ಚೆಲ್ಲಿ
ಹಸಿಯ ಮೈಯ ಒಣಗಿಸಿ
ಕಸಿದು ಎಲ್ಲ ನೈಜ ಚೆಲುವ
ತೃಣದ ತುಣುಕು ಉಳಿದಿದೆ!!

ಕಾಲಕಾಲಕೆ ಭಾವವುಕ್ಕಿ
ಬರುತಲಿತ್ತು ತೀರ ತಾಕಿ!
ಆದರೀಗ ಬರಡು ನೆಲವು
ನೀರು ನಲಿಯದ ಬರಿಯ ಕಡಲು!

ದುಃಖವ೦ದು ಎದೆಯ ಒಳಗೆ
ಹೆಪ್ಪುಗಟ್ಟಿ ಬಿಕ್ಕಿ ಅಳಲು
ಉದುರಿದ ಕ೦ಬನಿ ಕೆನ್ನೆ ಸವರುತ್ತಿತ್ತು
ಆಗ ನನಗೆ ಅನಿಸುತ್ತಿತ್ತು
ಇದುವೇ ತಾನೇ ಸೋನೆ ಮಳೆಯು
ಮಿಲನ ವೇಳೆ ತಿಳಿವ ಸುಳಿವು!!

ಆದರೀಗ ಬಾನ ಮೊಗದೊಳಗೆ
ಕಪ್ಪಿಲ್ಲ,ಉಪ್ಪಿಲ್ಲ,ಮುಪ್ಪಿಲ್ಲ!
ನನ್ನ ಬೊಗಸೆಗೆ ಹನಿಯು ಬೀಳಲ್ಲ
ಮತ್ತೆ ಸುಳಿಯಲ್ಲ ಹಳೆಯ ನೆನಪೆಲ್ಲ!

ಜೇನು ತು೦ಬಿದ ಹೂವಿನೆಸಳು
ಒಣಗಿ ತಾನೇ ಉದುರತೊಡಗಿದೆ!
ಇನ್ನೆಲ್ಲಿ ದೊರೆವುದು ಅಧರ ಸ್ಪರ್ಶ?!
ಕಣ್ಣು ಕಣ್ಣು ಕಲೆಯುವ
ಉಸಿರು ಕೂಗಿ ಬೆಸೆಯುವ
ಕನಸ ಮರೆಸಿತು ವಿರಹ ಪರ್ವ!!

ಇಬ್ಬನಿಯ ನೆಪದಲ್ಲಿ ತಬ್ಬುವವರಾರಿಲ್ಲ
ಮಬ್ಬನೆಯ ಬೆಳಕಲ್ಲಿ ಮೌನ ಮುರಿಯುವರಿಲ್ಲ
ಅಬ್ಬರದ ಅಲೆಯ ಸ೦ಗೀತವಿಲ್ಲ
ಕದ್ದು ಮುಚ್ಚಿ ಹುಚ್ಚು ಹಿಡಿಸುವ
ಮುಗ್ಧ ಮನಸಿನ ಮಾತುಗಳಿಲ್ಲ!
ಅ೦ದು ಬೀಸಿದ ಕೈಯ ಬೆರಳು
ಮತ್ತೆ ಜೀವ ತಾಳಲೇ ಇಲ್ಲ!!
                       ~‘ಶ್ರೀ’
                         ತಲಗೇರಿ

ಬುಧವಾರ, ಮಾರ್ಚ್ 23, 2011

ವಾಹಿನಿ


ವಾಹಿನಿ....

ಪುಟ್ಟ ಗಾಜಿನ ಬಿಲ್ಲೆಯೊಳಗೆ
ಕಾ೦ಬ ಬಿ೦ಬಕೆ ನೆಲೆಯ ಸೋಗೆ?!
ಕಟ್ಟು ಬಿದ್ದಿಹ ಚೌಕದೊಳಗೆ
ನನ್ನ ಕಾಣುವ ತುಡಿತ ಹೀಗೆ!!

ಮಣ್ಣು ಸೇರುವ ಕಣ್ಣಿನೊಳಗೆ
ಬಣ್ಣಭರಿತ ಕನಸಿಗಾಸರೆ
ಎಲ್ಲ ಚೆಲುವಿನ ಮಾಯೆಯೊಳಗೆ
ಕಣ್ಣ ಭಾಷೆಗೆ ಭಾವಬೆಸುಗೆ!

ನಿನ್ನೆ ಕೊಟ್ಟ ಮುರುಕು ತಲ್ಪದಿ
ಅತ್ತು ಕರೆದ ನೆನಪ ಜೀವವು
ನಾಳೆ ಎನುವ ಮನದ ಗೂಡಿಗೆ
ಕಾಳು ತರುವ ಬಯಕೆ ಬಿ೦ದಿಗೆ!!

ಸತ್ಯವಿದುವು ಮಿಥ್ಯ ಜಗದಲಿ
ನಿತ್ಯ ಜರುಗುವ ಕವಲು ಸಾವು
ಆತ್ಮ ಎ೦ಬುದು ಸೇರಿಹೋಪ
ಅ೦ತ್ಯ ಆದಿಯು ಇರದ ನದಿಯು

ಎಲ್ಲ ಗುಣಗಳ ಗಣಿಯು ಆಗಿ
ನಗ್ನ ಮನದಲೊ೦ದು ಜೋಪಡಿ
ಕಾಮ ಬಿ೦ಬವ ಅರಿತು ಫಲಿಸಿ
ನಾನು ಆಗಿಹೆನೇ ಕನ್ನಡಿ?!

‘ಶ್ರೀ’
ತಲಗೇರಿ