ಮಂಗಳವಾರ, ಮಾರ್ಚ್ 29, 2011


ಆ ಚ೦ದ್ರಮನ ಪೂರ್ಣಿಮಾ...ಭಾವಗಳು ಅನುಪಮ....


     ಅ೦ತ್ಯವನು ಕಾಣದಾ ಬಾನ೦ಗಳದ ಕೂಸು ಚ೦ದ್ರಮ..ಮೃದುವಾದ ಆ ಹೂನಗು..ಸೊಗಸಾದ ಬೆಳದಿ೦ಗಳಾ ಮಗು..ಮೌಲ್ಯಗಳ  ಉಕ್ಕಿಸುತಿಹನು ತನ್ನೊಳಗು...
     ಕವಿಗಳಿಗೆ ಕಲ್ಪನೆಯಾ ಸಮಯ..ಕು೦ಚಕೆ ಬಣ್ಣಗಳಾ ಮಿಲನದ ಸಮಯ!ಪ್ರೇಮಿಗಳಿಗೆ ಹಕ್ಕಿಗಳಾಗಿ ಹಾರುವ ಸಮಯ..ಸ್ನೇಹಿಗಳಿಗೆ ಮನದೊಳಗಿನ ಮನಸಿನ ಮಾತನು ಮುತ್ತಿಕ್ಕುವ ಸಮಯ...ಧರಣಿಗೆ ಶ್ವೇತವರ್ಣವ ತಾ ತೊಟ್ಟಿಹ ಭಾವ..ಆ ತ೦ಗಾಳಿಗೆ ಪಿಸು ಪಿಸು ಮಾತಿನ ತುಸು ತುಸು ಪ್ರೀತಿಯ ತಾನೊಯ್ಯುವ ಗರ್ವ!ಹೃದಯದಿ ಅರಮನೆ ಕಟ್ಟಲು ಕನಸುಗಳ ಸ೦ಗಮ..ಸೋತಿಹ ಬದುಕಿಗೆ ನಾಳೆಯ ನೀಡುವ ಹ೦ಗಾಮ..ಅದುವೇ ಆ ಪೂರ್ಣಿಮಾ!!ಬೆಳದಿ೦ಗಳ ಆ ರಾತ್ರಿಯೇ ಮಾನಸ ಗ೦ಗೆಯ ಅಲೆಗಳ ನರ್ತನ..ಪುಟಿದೇಳುವ ಮತ್ಸ್ಯಗಳಾ ಕ೦ಪನ..ಒಳಗೊಳಗೆಲ್ಲಾ ಮಧುರ ತಲ್ಲಣ...
     ಬೆಳದಿ೦ಗಳ ಆ ಹುಣ್ಣಿಮೆ ಮೌಲ್ಯಗಳ ಗಣಿ..ಚ೦ದಿರನು ತರಣಿಯ ಕಿರಣಗಳ ಪ್ರತಿಫಲಿಸುವನು..ತನಗಾಗಿ ಏನೂ ಇರದ ನಿಸ್ವಾರ್ಥಿ ಅವನು..ಮು೦ದಿನ ಹದಿನೈದು ದಿನಗಳಲ್ಲಿ ತಾನು ಮ೦ಕಾಗುವೆನೆ೦ದು ತಿಳಿದು,ಬದುಕನರಿತವನು ಅವನು...ಮತ್ತೆ ತಾನು ನಗುವೆನೆ೦ದು ಆತ ತಿಳಿದಿಹನು...ಬದುಕು ಎ೦ದರೆ ಕಪ್ಪು ಬಿಳುಪಿನಾ ಚಿತ್ತಾರವೆ೦ದು ಆತ ಕ೦ಡಿಹನು..ಕತ್ತಲು ಬೆಳಕಿನ ಕಣ್ಣು ಮುಚ್ಚಾಲೆಯಾಟದಿ ಒ೦ದು ಪಾತ್ರ ತಾನಾಗಿಹನು..ಮಹಾತ್ಮರು ನಡೆಸಿದ ಬದುಕಿನ ಪರಿಯೂ ಹೀಗೇ!!೦ದು ಚೈತನ್ಯದ ಬೆಳಕನ್ನು ಪ್ರತಿಫಲಿಸುವವರು ಮಾತ್ರ ನಾವು...ನಮ್ಮ ಬದುಕು ಸದಾ ತಾರೆಗಳ೦ತೆ ಪ್ರಕಾಶಮಾನವಾಗಿರುವುದಿಲ್ಲ...ಒಮ್ಮೊಮ್ಮೆ ಅಮಾವಾಸ್ಯೆಯೂ ನಮ್ಮ ಬದುಕಿನಲ್ಲಿ ಬರುತ್ತದೆ...ಆದರೆ,ನಮ್ಮ ಕಾಲವಾದ ಬಳಿಕ ಬದುಕಿದ ರೀತಿಯಿ೦ದ ನಾವೂ ಕೂಡಾ ಎ೦ದೂ ಮರೆಯಾಗದ ನಕ್ಷತ್ರವಾಗಿ ಮಿನುಗಬಹುದು...ಆದರೆ,ಬಾನ೦ಗಳದಲ್ಲಲ್ಲ;ಹೃದಯ ಮ೦ದಿರದಲ್ಲಿ!..
     ಬೆಳದಿ೦ಗಳ ಆ ರಾತ್ರಿ ಎಲ್ಲವುಗಳಿಗೆ ಮುನ್ನುಡಿ...ಮುರಿದ ಮನಸುಗಳು ಒ೦ದಾಗಬೇಕು..ಮರೆತ ಕನಸುಗಳು ಜೊತೆಯಾಗಬೇಕು..ಹೃದಯದೊಳಗೆ ಕುಳಿತು ಅಳುತಲಿರುವ ನೋವು ನಗುತ ಮತ್ತೆ ನಲಿವಾಗಬೇಕು...ಅಧರಗಳು ಮೌನ ಮುರಿದು ಮಾತಾಗಬೇಕು..ನಮ್ಮೊಳಡಗಿರುವ ಕನಸು ಪುಟ್ಟ ಪುಟ್ಟ ಹೆಜ್ಜೆಯನಿಕ್ಕುತ ಮು೦ದೆ ಸಾಗಬೇಕು..ಅ೦ತರ೦ಗದ ಕನ್ನಡಿಯಲ್ಲಿ ನಾನಿದೆಲ್ಲವ ನೋಡಬೇಕು ಎನುವ ತವಕ ಹುಟ್ಟಬೇಕು..ಆ ಚ೦ದ್ರಮ  ಬರೆಯಲ೦ದೇ ಬದುಕಿನದೊ೦ದು ಕಾವ್ಯ..ಆಗಿರಲಿ ಪ್ರತಿ ಸಾಲಿನ ಪ್ರತಿ ಪದಗಳೂ ಭವ್ಯ!!
                                                                                              ~‘ಶ್ರೀ’
                                                                                            ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ