ವಾಹಿನಿ....
ಪುಟ್ಟ ಗಾಜಿನ ಬಿಲ್ಲೆಯೊಳಗೆ
ಕಾ೦ಬ ಬಿ೦ಬಕೆ ನೆಲೆಯ ಸೋಗೆ?!
ಕಟ್ಟು ಬಿದ್ದಿಹ ಚೌಕದೊಳಗೆ
ನನ್ನ ಕಾಣುವ ತುಡಿತ ಹೀಗೆ!!
ಮಣ್ಣು ಸೇರುವ ಕಣ್ಣಿನೊಳಗೆ
ಬಣ್ಣಭರಿತ ಕನಸಿಗಾಸರೆ
ಎಲ್ಲ ಚೆಲುವಿನ ಮಾಯೆಯೊಳಗೆ
ಕಣ್ಣ ಭಾಷೆಗೆ ಭಾವಬೆಸುಗೆ!
ನಿನ್ನೆ ಕೊಟ್ಟ ಮುರುಕು ತಲ್ಪದಿ
ಅತ್ತು ಕರೆದ ನೆನಪ ಜೀವವು
ನಾಳೆ ಎನುವ ಮನದ ಗೂಡಿಗೆ
ಕಾಳು ತರುವ ಬಯಕೆ ಬಿ೦ದಿಗೆ!!
ಸತ್ಯವಿದುವು ಮಿಥ್ಯ ಜಗದಲಿ
ನಿತ್ಯ ಜರುಗುವ ಕವಲು ಸಾವು
ಆತ್ಮ ಎ೦ಬುದು ಸೇರಿಹೋಪ
ಅ೦ತ್ಯ ಆದಿಯು ಇರದ ನದಿಯು
ಎಲ್ಲ ಗುಣಗಳ ಗಣಿಯು ಆಗಿ
ನಗ್ನ ಮನದಲೊ೦ದು ಜೋಪಡಿ
ಕಾಮ ಬಿ೦ಬವ ಅರಿತು ಫಲಿಸಿ
ನಾನು ಆಗಿಹೆನೇ ಕನ್ನಡಿ?!
‘ಶ್ರೀ’
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ