ಶನಿವಾರ, ಮಾರ್ಚ್ 26, 2011


ಮರೆಯಾದ ಕ್ಷಣದಿ೦ದ.....

ಬಿಸಿಯ ಉಸಿರು ಹೊರಗೆ ಚೆಲ್ಲಿ
ಹಸಿಯ ಮೈಯ ಒಣಗಿಸಿ
ಕಸಿದು ಎಲ್ಲ ನೈಜ ಚೆಲುವ
ತೃಣದ ತುಣುಕು ಉಳಿದಿದೆ!!

ಕಾಲಕಾಲಕೆ ಭಾವವುಕ್ಕಿ
ಬರುತಲಿತ್ತು ತೀರ ತಾಕಿ!
ಆದರೀಗ ಬರಡು ನೆಲವು
ನೀರು ನಲಿಯದ ಬರಿಯ ಕಡಲು!

ದುಃಖವ೦ದು ಎದೆಯ ಒಳಗೆ
ಹೆಪ್ಪುಗಟ್ಟಿ ಬಿಕ್ಕಿ ಅಳಲು
ಉದುರಿದ ಕ೦ಬನಿ ಕೆನ್ನೆ ಸವರುತ್ತಿತ್ತು
ಆಗ ನನಗೆ ಅನಿಸುತ್ತಿತ್ತು
ಇದುವೇ ತಾನೇ ಸೋನೆ ಮಳೆಯು
ಮಿಲನ ವೇಳೆ ತಿಳಿವ ಸುಳಿವು!!

ಆದರೀಗ ಬಾನ ಮೊಗದೊಳಗೆ
ಕಪ್ಪಿಲ್ಲ,ಉಪ್ಪಿಲ್ಲ,ಮುಪ್ಪಿಲ್ಲ!
ನನ್ನ ಬೊಗಸೆಗೆ ಹನಿಯು ಬೀಳಲ್ಲ
ಮತ್ತೆ ಸುಳಿಯಲ್ಲ ಹಳೆಯ ನೆನಪೆಲ್ಲ!

ಜೇನು ತು೦ಬಿದ ಹೂವಿನೆಸಳು
ಒಣಗಿ ತಾನೇ ಉದುರತೊಡಗಿದೆ!
ಇನ್ನೆಲ್ಲಿ ದೊರೆವುದು ಅಧರ ಸ್ಪರ್ಶ?!
ಕಣ್ಣು ಕಣ್ಣು ಕಲೆಯುವ
ಉಸಿರು ಕೂಗಿ ಬೆಸೆಯುವ
ಕನಸ ಮರೆಸಿತು ವಿರಹ ಪರ್ವ!!

ಇಬ್ಬನಿಯ ನೆಪದಲ್ಲಿ ತಬ್ಬುವವರಾರಿಲ್ಲ
ಮಬ್ಬನೆಯ ಬೆಳಕಲ್ಲಿ ಮೌನ ಮುರಿಯುವರಿಲ್ಲ
ಅಬ್ಬರದ ಅಲೆಯ ಸ೦ಗೀತವಿಲ್ಲ
ಕದ್ದು ಮುಚ್ಚಿ ಹುಚ್ಚು ಹಿಡಿಸುವ
ಮುಗ್ಧ ಮನಸಿನ ಮಾತುಗಳಿಲ್ಲ!
ಅ೦ದು ಬೀಸಿದ ಕೈಯ ಬೆರಳು
ಮತ್ತೆ ಜೀವ ತಾಳಲೇ ಇಲ್ಲ!!
                       ~‘ಶ್ರೀ’
                         ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ