ಲಹರಿ....
ದೂರದಲಿ ಕೇಳುತಿದೆ ಕೊಳಲ ನಾದ
ಕೊರಡು ಬಿದಿರಿನಲಿ ಸಪ್ತ ಸ್ವರದ ವೇದ!
ಮಣ್ಣಿನಲಿ ಊರುತಿಹ ನಾಳೆಗಳ ಪಾದ
ನನ್ನೊಳಗೆ ನನ್ನ ಇರುವಿಕೆಯ ಶೋಧ!
ತೇಲಿಬರುತಿಹ ಇ೦ಪಿನಲೆಗಳಿಗೆ
ಕುಸಿದುಹೋಗಬಹುದೇ ನೊವುಗಳ ಮಳಿಗೆ!?
ಭಯದಿ ಕ೦ಪಿಸಿಹ ಒ೦ದೊ೦ದು ಗಳಿಗೆ
ಕರೆದೊಯ್ಯಲಾರದೇ ನಗೆಯ ದಿನದ ಬಳಿಗೆ?!
ಬೆರಳುಗಳ ತಡಕಾಟದಲಿ ಹುಟ್ಟುವುದೇ ಇನಿದು ಸ್ವರವು?
ಹೃದಯಗಳ ಒಡನಾಟದಲಿ ಭಾವಗಳ ಚೆಲುವು!
ಬ೦ದುಹೋಗುವ,ಬರದೇ ನಲುಗುವ ಜೀವಗಳು ಹಲವು
ಹೀಗೊಮ್ಮೆ ಬ೦ದು ಕೊನೆವರೆಗೆ ಉಳಿವ ಒ೦ದೆರಡು ಒಲವು!
ತನ್ನೊಳಗೆ ಅಡಗಿರುವ ರಾಗಗಳ ಮೇಳ
ಕಳೆದ೦ತೆ ಕಾಲ,ಮರಳುವುದು ವಿರಳ!
ಉಸಿರಿಲ್ಲದೇ ಬಿದ್ದಿರುವ ಜೀವ೦ತ ಹೆಣಗಳ
ಎದೆಯ ಗೂಡಲಿ ಕೇಳಲಾರದೇ ಚಿಲಿಪಿಲಿಯ ಜಗಳ?!
ಕಳೆದ ಕ್ಷಣಗಳ ಬೆಸೆದ ಮನಗಳ ನೆನಪುಗಳ ಮಹಲು
ಮರೆತುಹೋಗುವವೇ ಮುನಿಸಿ ನಗಿಸಿಹ ಆ ದಿನಗಳು?!
ಕಾಡುತಿದೆ ಮನಸಿನ ಜೀವದಲೆಗಳಲು ಕವಲು
ಎಷ್ಟೊ೦ದು ನಾಳೆಗಳ ತನ್ನೊಳಗೆ ಮರೆಸಬಹುದೀ ಕೊಳಲು?!...
~‘ಶ್ರೀ’
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ