ಮಾತು ಬರಿದಾದ ಸಮಯ......
.....ಮೌನ ಮುರಿಯುವುದು ಹೃದಯ....
ಮನಸಿನ ಭಾವಗಳಿ೦ದ ಕವಿತೆ ಕವಿತೆ ಕಟ್ಟಿ,ಲಹರಿಯಿ೦ದಲೇ ಹೃದಯ ತಟ್ಟಿ,ಎ೦ದೋ ಮುನಿಸಿಹ ಕನಸ ಮತ್ತೆ ಗುರಿಯೆಡೆಗೆ ಅಟ್ಟಿ,ಸವಿಯ ಸೊಗಡಿನ ತುಟಿಯ ಮೀರಿ ಹರಿಯುವ ಶಬ್ದ ಗ೦ಗೆಗೆ ಕಾದ ಸಮಯ...ಆದರಿನ್ನೂ ತನ್ನರಿವ ಮರೆತು ಕುಳಿತಿದೆ ಪ್ರಣಯ....ಕಾಯೋ ಗು೦ಗಿನಲಿ ಮ೦ಕಾಗಿ,ಮಾಯೋ ಗಾಯದಲಿ ಸೋ೦ಕಾಗಿ...ಮೆಚ್ಚಿ ಸಹಿಸಿದೆ ನೋವ....ಬೆಚ್ಚಿಬಿದ್ದರೂ,ತುಚ್ಛವಾದರೂ,ನೆಚ್ಚಿ ಕುಣಿಸಬಯಸಿದೆ ಸಾವ...!
ಮರಳಿ ಮರಳಿ ನಡೆವ ದಾರಿಯಲಿ ಕಲ್ಲು ಮುಳ್ಳುಗಳು ಮಲಗುವುದು ಕಡಿಮೆ...ಅರಳಿ ಅರಳಿ,ತ೦ಗಾಳಿಗೆ ಹಿತವಾಗಿ ನರಳಿ,ಕರೆವ ಸುಮಗಳದ್ದೇ ಕಾರುಬಾರು ದಾರಿಬದಿಯಲಿ;ತೋರಿ ಕೊ೦ಚ ಹಿರಿಮೆ!..ಎಲ್ಲ ಹಸಿರು...ಹೊಸತು ಉಸಿರು...ಅಲ್ಲಲ್ಲಿ ದೊರೆವ ಹಕ್ಕಿಗಳ ಸೂರು...ಪುಟ್ಟ ಕಾಲ್ಗಳು ನಡೆವ ಹೊತ್ತಿಗೆ,ನೆಟ್ಟ ದೃಷ್ಟಿಯು ಗುರಿಯ ಸೆಳೆಯತೊಡಗೆ...ನಿನ್ನೆಯ ನೆನಪುಗಳು ಸೋಕೆ ಹಾಗೇ...ನಾಳಿನ ಕಲ್ಪನೆಗಳು ಮೂಡಿ ಮಾಗೆ..ಮಾತು ಮರೆವುದು ತನ್ನ,ಮುಟ್ಟಿ ಎಬ್ಬಿಸುತ ಹೃದಯವನ್ನ...ಅನುಭವದ ಸ್ಫೂರ್ತಿಯಿ೦ದ ರಾಗವಾಗುವುದು ಹೃದಯ;ಮುರಿಯುತ ಮೌನವನ್ನ...ಹಸಿದ ವಯಸಿಗೆ,ಕುಸಿದ ಮನಸಿಗೆ,ಬಸಿದ ಕ೦ಬನಿಗಳಿಗೆ ಪ್ರೀತಿ ಪಡೆವ ದಾರಿ ತೋರಿ...ಮೃದುಲತನವ ಮುದ್ದು ಮಾಡಿ,ಆಗುವುದು ನಾರಿಯೊಳಗಣ ನಾರಿ...ನಡೆವ ದಾರಿಯಲಿ ದೊರೆತ ಶವಗಳನು ನೋಡಿ,ಹೃದಯದಿ೦ದ ಹೃದಯಕೊ೦ದು ನಮನ...ತನುಗಳಿಗೆ ಎರಡು ಹನಿ ಕಣ್ಣೀರ ಸುರಿಸಿ ಒದ್ದೆಯಾಗುವ ನಯನ...ಇದುವೇ ಪಯಣ!!...
ಮನುಷ್ಯ ಸತ್ತರೂ,ಹುಟ್ಟಿ ಬ೦ದರೂ,ನೋವ ತಿ೦ದರೂ,ಜೀವ ಬತ್ತಿದರೂ ಮಾತುಗಳು ಅಪ್ಪುವವು ಮೌನ...ನೀರವತೆಯ ತೊರೆವುದು ಹೃದಯದಿ೦ದ ಮನ...ನನ್ನೊಳಗೆ ನಾನಾಗಿ,ಸ್ಫೂರ್ತಿಯ ಗೂಡಾಗಿ,ಗುಟುಕು ನೀಡದಿದ್ದರೂ,ಬದುಕಿರುವ ಹೃದಯದೊಳಗಣ ಭಾವ,ಪ್ರೀತಿ ಚು೦ಬನವ ನೀಡಿ,ಸಾವಿಗಾಗಿ ಹಾತೊರೆವ ತನುವನೂ,ಮತ್ತೆ ಬದುಕಿಸುವ ರೀತಿ;ಪದಗಳಿಗೆ ನಿಲುಕದ ಸ೦ಗತಿ....ಅ೦ಥ ಹೃದಯವೇ ನನ್ನನಾವರಿಸಲಿ ಆಗಿ ಜನುಮದಾ ಸ೦ಗಾತಿ....ಹೃದಯವಾಗಲು ಪಡಬೇಕಿಲ್ಲ ಭೀತಿ...ಹುಟ್ಟಿಕೊ೦ಡರೆ ಸಾಕು ನನ್ನಲ್ಲೂ ಭರವಸೆಯಾಗೋ ಪ್ರೀತಿ....!!ಪ್ರೇಮದಲ್ಲಿನ ಮೋಹ ತೊಲಗಿ,ನಿರ್ಮಲತೆ ಉಳಿದುಕೊ೦ಬುದೇ ಪ್ರೀತಿಯ ನೀತಿ!!...
~‘ಶ್ರೀ’
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ