ಮಿಲನದಾ ತೀರದಲ್ಲಿ.....
ಯಾವ ಶಿಲ್ಪಿಯು ಕಡೆದ ನಿನ್ನನು
ಹಾಲು ಒಸರುವ ಗಳಿಗೆಯಲ್ಲಿ!
ಧವಲ ತನುವಿನ ರೂಪಸಿ
ಚೆಲುವ ನಿಲುವನು ಹುಡುಕಿಸಿ
ಕಾಯುತಿರುವ ನನ್ನ ಅರಸಿ
ಒಮ್ಮೆ ಬಾರೆ ಮುಗ್ಧ ಪ್ರೇಯಸಿ!!
ಯಾವ ಕವಿಯ ಕವಿತೆ ನೀನು
ಚೆಲುವು ಉಕ್ಕುವ ಉದಯ ಬಾನು!!
ಸುಪ್ತ ಮನಸಿನ ಕಣ್ಮಣಿ
ಗುಪ್ತ ಲಹರಿಯ ಗಾಮಿನಿ
ನೀನು ಬಾರದೆ ನನ್ನಲಿ
ಮುನಿಸಿ ಕುಳಿತಿದೆ ಲೇಖನಿ!
ಯಾವ ಹಕ್ಕಿಯ ದನಿಯು ನೀನು
ಮರೆಯಲಾಗದ ಬಳುವಳಿ
ಹಾಗೇ ಕ೦ಪನ,ರಾಗ ಸಿ೦ಚನ!
ಮುಚ್ಚು ಮನಸಿನ ಭಾಷೆ ನೂತನ!
ನಿನ್ನ ಮಾತು ಮತ್ತೆ ಹನಿಸದೆ
ಮನಸು ಯಾಕೋ ಮೌನ ತಾಳಿದೆ!
ಯಾವ ಲೋಕದ ತುಣುಕು ನೀನು
ಕುಸುಮ ಕೋಮಲ ಕಲ್ಪನೆ;
ಎದೆಯ ಒಳಗೆ ಹುಚ್ಚು ವೇದನೆ
ನದಿಯು ಉದಿಸಿದೆ ಹಾಗೇ ಸುಮ್ಮನೆ!
ಹುಡುಕಿಹೊರಟಿದೆ ಪ್ರೀತಿ ನೆಳಲು
ಗೆಳತಿ ನಿನ್ನ ತುಸುವೇ ಸೋಕಲು!!
~‘ಶ್ರೀ’
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ