ಸೋಮವಾರ, ಜೂನ್ 7, 2021

ನೆನಪಿನ ಹಂಗಿಗೆ ನಾಲ್ಕು ಸಾಲು...


 ನೆನಪಿನ ಹಂಗಿಗೆ ನಾಲ್ಕು ಸಾಲು...



ಸಖೀ ರಾಧೆ,


ಅದೆಷ್ಟು ವಸಂತಗಳು ಹೂ ಮುಡಿದು ಕೂತವು, ಅದೆಷ್ಟು ಮೇಘಮಾಲೆ ನಭವನ್ನು ಅಲಂಕರಿಸಿದವು, ಅದೆಷ್ಟು ಮರಗಳು ಎಲೆಯುದುರಿಸಿ ನಿಂತವು ಕೃಷ್ಣನಿಲ್ಲದೇ? ಇದು ನಾನು ಬರೆಯುತ್ತಿರುವ ನಾಲ್ಕನೇ ಪತ್ರ ನಿನಗೆ. ನಮ್ಮ ಬೃಂದಾವನದ ದಿನಗಳನ್ನು ನೆನಪಿಸುವ ಸಲುವಾಗಿಯೇ ಪತ್ರ ಬರೆಯುತ್ತಿದ್ದೇನೆ. ಬೃಂದಾವನದ ಹಾದಿಯ ಇಕ್ಕೆಲಗಳಲ್ಲಿ ದುಂಬಿಯ ಗೀಗೀಪದ ಅದ್ಯಾವ ಹಾಡುಗಾರನಿಗಿಂತ ಕಡಿಮೆಯಿತ್ತು ಹೇಳು, ಎಲ್ಲಾ ಸ್ವರಗಳನೂ ಅವಕೆ ಹೇಳಿಕೊಟ್ಟವರಾರು ಅಂತ ನೀನೊಮ್ಮೆ ವಿಸ್ಮಯದಿಂದ ಕೇಳಿದ್ದು ನೆನಪಿದೆಯಾ? ನಿನ್ನ ಮೂಗಿನ ತುದಿಗೊಂದು ದುಂಬಿ ಬಂದು ಕೂತಿದ್ದು, ನೀನು ಹೆದರಿ ಕಿರುಚಿದ್ದು, ಅದು ನಿನ್ನತ್ತ ಮತ್ತೆ ಮತ್ತೆ ಬಂದಂತೆಲ್ಲಾ ಓಡಿಹೋಗಿ ನನ್ನ ಹಿಂದೆ ನೀ ಅಡಗಿ ನಿಂತಿದ್ದು, ಗಾಳಿಯಲ್ಲೇ ರೆಕ್ಕೆಬಡಿಯುತ್ತಾ ಅದು ಕೊನೆಗೊಮ್ಮೆ ನನ್ನ ಬೆರಳುಗಳ ಸ್ಪರ್ಶಿಸಿ ಓಡಿಹೋಗಿದ್ದು ನೆನಪಿದೆಯಾ ನಿನಗೆ? ನಾನೇನು ಮಾಡಿದೆ ಎಂದು ಬೆನ್ನ ಹಿಂದಿಂದ ನನ್ನ ಹೆಗಲುಗಳನ್ನು ಗಟ್ಟಿ ಹಿಡಿದು ಇಣುಕಿ ನೋಡಿದ್ದೆಯಲ್ಲಾ, ನಿನ್ನ ನುಣುಪು ಕದಪುಗಳು ತಾಕಿ ಬೆಣ್ಣೆ ಕಳ್ಳ ಕೃಷ್ಣನೇ ಕರಗುತ್ತಿದ್ದ. ಸಂಭಾವಿತ ನಾನು, ಸುಳ್ಳೆಲ್ಲಾ ಹೇಳುವುದೇ ಇಲ್ಲ, ನಂಬಲೇಬೇಕು ನೀನು, ಏನಂತೀಯಾ ಹೌದಾ ಅಲ್ಲವಾ! ಯಾವ ಭಯವೂ ಇಲ್ಲದೇ ನನ್ನ ಭುಜಗಳಿಗೆ ತಲೆಯಿಟ್ಟು ಪುಟ್ಟ ಕಂದಮ್ಮನಂತೆ ಮಲಗುವುದನ್ನು ಅದ್ಯಾರು ಕಲಿಸಿದರು ನಿನಗೆ? ಅಷ್ಟು ನಂಬಿಕೆಯೇನು ಈ ಮಾಯಾವಿಯ ಮೇಲೆ! ಬಹುಶಃ ಸ್ನೇಹವೆಂದರೆ ಇದೇ ಇರಬೇಕು, ಪ್ರೇಮಕ್ಕೂ ಮೊದಲು ಸ್ನೇಹವಾಗಬೇಕಲ್ಲವಾ ಸಖೀ.. ಬೃಂದಾವನ ಈ ಎಲ್ಲವುಗಳ ಆರಂಭವಾಗಿತ್ತಾ? ಅಥವಾ ಗೋಕುಲದಲ್ಲೇ ಈ ಸಮಾಗಮಕ್ಕೆ ನಾಂದಿಯಾಗಿತ್ತಾ...

ಕೆಂಪು, ಬಿಳಿ, ಗುಲಾಬಿ ಹೀಗೆ ಥರಥರದ ಹೂಗಳು ಬೃಂದಾವನದ ತುಂಬೆಲ್ಲಾ. ಆದರೆ, ನಮಗೆ ಇಷ್ಟವಾಗುತ್ತಿದ್ದುದು ನೀಲಿ, ಹಳದಿ ಹೂಗಳೇ. ನೀನು ನೀನಿಷ್ಟಪಡುವ ನೀಲಿ ಹೂಗಳನ್ನು ನನ್ನ ರುಮಾಲಿಗೆ ಸಿಕ್ಕಿಸಿ, ಕಣ್ಣುಗಳ ಪಕ್ಕದಲ್ಲಿ ಅದೆಂಥದ್ದೋ ನಿನ್ನಿಷ್ಟದ ಬಳ್ಳಿಗಳ ಬಿಡಿಸಿ, ಚಪ್ಪಾಳೆ ತಟ್ಟಿ ಖುಷಿಪಡುತ್ತಿದ್ದೆಯಲ್ಲಾ, ನಾನು ಹಳದಿ ಹೂಗಳ ಕಿವಿಯೋಲೆ ಮಾಡಿ ನಿನಗೆ ತೊಡಿಸುವ ಅಂತ ಬಂದರೆ ಪೂರ್ತಿ ಕೂದಲು ಕಿವಿಯ ಮೇಲೆ ಹರಡಿಕೊಂಡು ಸತಾಯಿಸುತ್ತಿದ್ದೆಯಲ್ಲಾ, ಅದು ಆಮೇಲೆ ನನ್ನುಸಿರು ನಿನ್ನೆದೆ ಬಡಿತ ಎರಡೂ ಇಬ್ಬರಿಗೂ ಕೇಳಿಸುವಷ್ಟು ಗಾಢ ಮೌನಕ್ಕೆ ಕಾರಣವಾಗುತ್ತಿತ್ತು. ಅದೆಂಥ ಗಾಢ ಮೌನವೆಂದರೆ ಇಡೀ ಜಗತ್ತು ಸ್ತಬ್ಧವಾದಂತೆ. ನಿನ್ನೆದುರು ನನಗೆಂಥ ಲಜ್ಜೆ ಎನ್ನುತ್ತಿದ್ದ ನೀನು ತಕ್ಷಣವೇ ತಲೆ ತಗ್ಗಿಸಿ ಕಿವಿಯ ಮೇಲೆ ಹರಡಿಕೊಂಡಿದ್ದ ಕೂದಲುಗಳನ್ನು ಸರಿಸಿ, ಪ್ರತೀ ಸಲವೂ ಹೊಸದಾಗಿ ಸ್ಪರ್ಶಕ್ಕೆ ಕಾಯುವಂತೆ ಉತ್ಕಟ ಸ್ಥಿತಿಯಲ್ಲಿ ಕೂರುತ್ತಿದ್ದುದನ್ನು ನಾನು ಮರೆತಿಲ್ಲ. ಮೂಗಿನ ಹೊಳ್ಳೆಗಳು ಅದುರುತ್ತಿದ್ದವು. ಕೈ ಬೆರಳುಗಳು ಕೂತ ಕಲ್ಲುಗಳನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಿದ್ದವು. ಕಣ್ಣುಗಳು ಅರ್ಧವಷ್ಟೇ ತೆರೆದು ಇಷ್ಟೇ ಇಷ್ಟು ಮಾತ್ರ ನನ್ನೆಡೆಗೆ ನೋಡುತ್ತಿದ್ದವು. ಆಗ ಮಾತ್ರ ನೀನು ಶೃಂಗಾರ ಭಾವದ ಅಪ್ರತಿಮ ರೂಪಕದಂತೆ ಗೋಚರಿಸುತ್ತಿದ್ದೆ. ಕೇಳಬಹುದು, ಹೆಣ್ಣು ಬರೀ ಶೃಂಗಾರಕ್ಕೆ ಮಾತ್ರ ಸೀಮಿತವಾ ಅಂತ. ಸೃಷ್ಟಿಯ ಪ್ರತಿಯೊಂದರ ಅರ್ಧವೂ ಸಂಪೂರ್ಣವಾಗಬೇಕಾದರೆ ಸ್ತ್ರೀ ತತ್ವ ಬೇಕೇ ಬೇಕು. ನೆನಪಿದೆಯಲ್ಲವಾ ನಿನಗೆ, ಹಿಂದೊಮ್ಮೆ ಹೀಗೇ ನಾನು ನಿನ್ನ ತೊಡೆಗಳ ಮೇಲೆ ತಲೆಯಿಟ್ಟು ಮಲಗಿದ್ದಾಗ ಸರ್ಪವೊಂದು ನಿನ್ನ ಪಕ್ಕದಲ್ಲೇ ತಲೆಯಾಡಿಸುತ್ತಾ ಇದ್ದರೂ ನೀನು ನನ್ನ ನಿದ್ದೆಗೆ ಭಂಗವಾಗಬಾರದೆಂದು ಸ್ಥಿರವಾಗಿಯೇ ಕೂತಿದ್ದು, ಎಲ್ಲಿತ್ತು ಆ ಧೈರ್ಯ.. !

ನನಗೆ ಒಮ್ಮೊಮ್ಮೆ, ಈ ವಸಂತದಲ್ಲಿ ಅರಳುವ ಹೂಗಳಿಗೆಲ್ಲಾ ನೀನೇ ನಿನ್ನ ನಗುವನ್ನು ಹಂಚಿ ಬಂದಿರಬಹುದಾ ಅನ್ನುವ ಅನುಮಾನ. ಆ ಕೋಕಿಲಗಳೆಲ್ಲಾ ನೀನು ನಿದ್ದೆಯಲ್ಲಿ ಕನವರಿಸುವುದನ್ನೇ 'ಕುಹೂ ಕುಹೂ' ಎಂದು ಕಲಿತುಕೊಂಡವಾ ಅಂತ. ನೀನೊಮ್ಮೆ ತಲೆಯಾಡಿಸಿ ಕಣ್ಣು ಮಿಟುಕಿಸಿದಾಗಲೆಲ್ಲಾ ಈ ತಂಗಾಳಿ ತಾನಾಗೇ ಹುಟ್ಟಿಕೊಳ್ಳುತ್ತದಾ, ನೀನು ಬಲಗಡೆ ಇಳಿಬಿಟ್ಟ ಕೂದಲು ನಯವಾಗಿ ನಿನ್ನ ತುಟಿಗಳ‌ ಪಕ್ಕ ಚೂರು ಮೇಲೆ ತಾಗಲೋ ಬೇಡವೋ ಎಂಬಂತೆ ನಟಿಸುವ ಸಲುವಾಗಿಯೇ ಏನೋ ಗಾಳಿಗೆ ಅಷ್ಟೊಂದು ತುಂಟತನವಾ ಅಥವಾ ನನ್ನನ್ನು ವಿಚಲಿತನನ್ನಾಗಿಸಲು ನೀನು ತಂಗಾಳಿಯೊಂದಿಗೆ ಮಾಡಿಕೊಂಡ ಒಪ್ಪಂದವಾ, ಸತ್ಯ ಸತ್ಯ ಹೇಳಿಬಿಡಬೇಕು‌ ನೋಡು! ಕೃಷ್ಣನನ್ನು ವಿಚಲಿತಗೊಳಿಸುವುದಾ, ಅಷ್ಟಕ್ಕೆಲ್ಲಾ ನಿಯಂತ್ರಣ ತಪ್ಪುವವನಾ ನೀನು ಅಂತ ಮುಖವೂದಿಸಿಕೊಂಡು ನೋಡಬೇಡ. ಸಮಭಾವ ಸಮಚಿತ್ತ ಸಮಸ್ತ ನೀನು ಅಂತ ಅಂದವಳೇ ನೀನು ! ಈಗ ಹಾಗೆಲ್ಲಾ ನೋಡಿ ಮತ್ತೆ ನಾನು ಹಲ್ಲುಗಿಂಜಿದಾಗ ನಿನ್ನ ಹುಸಿ ಮುನಿಸಿನ ನಸು ನಗುವಿನಲ್ಲಿ ಕೃಷ್ಣ ಕಾಲ ಕಾಲಗಳನ್ನೂ ದಾಟಿ, ಕೇವಲ ಹೊಡೆಯಲು ಓಡಿಸಿಕೊಂಡು ಬರುವ ರಾಧೆಯ ಸಖನಾಗಿ ಅಷ್ಟೇ ಉಳಿದುಕೊಳ್ಳಲು ಸಜ್ಜಾಗಿಬಿಡುತ್ತಾನೆ ನೋಡು ! ಇಂಥ ಸಂದರ್ಭದಲ್ಲೇ ನೋಡು ಮಳೆ ಬರುವುದು...
ನನಗೋ ಮಳೆಗಾಲವೆಂದರೆ ಕೆಸರು ಕಾಲಲ್ಲಿ ಮನೆಯೊಳಗೆ ಮೆಲ್ಲಗೆ ಹೆಜ್ಜೆಯಿಡುತ್ತಾ ಮನೆ ತುಂಬ ಪಾದದ ಗುರುತು ಮೂಡಿಸುವುದು, ಬರೀ ನನ್ನ ಮನೆಯೊಂದೇ ಅಲ್ಲ ಹ್ಞ! ಯಾರಾದರೂ ಹೊಡೆಯಲು ಓಡಿಸಿಕೊಂಡು ಬಂದು ಕೆಸರು ತಾಗಿ ಜಾರಿ ಬಿದ್ದರೆ ಓಡಿಹೋಗಿ ಅವರಿಗೆ ಕೈಕೊಟ್ಟು ಎಬ್ಬಿಸಿ, ಮತ್ತೆ ಮುಟ್ಟಾಟ ಶುರು ನೋಡು, ನೀನು ಅಯ್ಯೋ ಇವನಾಟವೇ ಅಂತ ಹಣೆ ಚಚ್ಚಿಕೊಂಡು ನಗುತ್ತಿದ್ದೆಯಲ್ಲಾ. ನನ್ನ ಕತೆ ಬಿಡು, ಮಳೆಗಾಲವೆಂದರೆ ರಾಧೆಗೆ ಸಮಸ್ತ ವಿಶ್ವವೇ ರಂಗಮಂಚ ಹಾಗೂ ರಾಧೆ ಅಲ್ಲಿನ ಅಮೋಘ ನರ್ತಕಿ. ನೆಲಕ್ಕೆ ಬಿದ್ದ ಮಳೆಹನಿಗಳೂ ರಾಧೆಯ ಪಾದ ಸ್ಪರ್ಶದಿಂದ ಪುಳಕಿತವಾಗುತ್ತಿದ್ದವು. ಅವಿರತವಾಗಿ ಸುರಿವ ಮಳೆಯಲ್ಲಿ ನೀನು ನರ್ತಿಸುವಾಗ ನಿನ್ನ ಗೆಜ್ಜೆಗಳ ಮೇಲೆ ಕೂತು ಆಮೇಲೆ ಮತ್ತೆ ಆಚೆ ಸಿಡಿಯುವುದಕ್ಕೆ ಹನಿಗಳು ಹಾತೊರೆಯುತ್ತಿದ್ದವು. ಕಾರ್ಮೋಡಗಳಿಗೋ ನಿನ್ನನ್ನು ಪೂರ್ತಿ ಒದ್ದೆಯಾಗಿಸುವ ತವಕ. ಒಂದೇ ಸಮನೆ ತನ್ನೆಲ್ಲಾ ಹನಿಗಳನ್ನು ನಿನ್ನ ಮೇಲೆಯೇ ಸುರಿಯುವಂತೆ ಮಾಡುತ್ತಿವೆಯಾ ಅಂತೆಲ್ಲಾ ಅನ್ನಿಸುವಂಥ ವಾತಾವರಣವಿರುತ್ತಿತ್ತು ನೋಡು‌. ಆ ಮಳೆ ಹನಿಗಳೋ, ಹಣೆಯಿಂದ ಶುರುಮಾಡಿ ರಾಧೆಯ ಅಂಗದ ಸಂಗದಲಿ ಕಚಗುಳಿಯಿಡುತ್ತಾ ರಾಧೆಯನ್ನು ಮೆದುವಾಗಿಸುತ್ತಿದ್ದವು. ಮಳೆಯ ಮಣ್ಣಿನ ಸಮ್ಮೋಹಕ ಪರಿಮಳ ನಿನ್ನ ಮೈಯಿಂದ ಸ್ಫುರಿಸುತ್ತಿತ್ತು. ನನಗೀಗ ತಿಳಿಯಿತು ನೋಡು, ಈ ಮಯೂರಗಳು ಮಳೆ ಬಂದ ಕೂಡಲೇ ಗರಿಬಿಚ್ಚಿ ನರ್ತಿಸುವುದು ಇದೇ ಕಾರಣಕ್ಕೆ; ರಾಧೆಯನ್ನು ಪ್ರಾರ್ಥಿಸುತ್ತವೆ, ರಾಧೆಯನ್ನು ಆಹ್ವಾನಿಸುತ್ತವೆ ಎಂದೂ ಕೂಡ ಹೊಳೆಯದಷ್ಟು ದಡ್ಡನಪ್ಪಾ ಕೃಷ್ಣ! ನಾನಂದು ತೊಡಿಸಿದ ಗೆಜ್ಜೆಯ ಕಳಚಿಲ್ಲ ತಾನೇ? ಹೀಗೆಲ್ಲಾ ಹೇಳಿ ಯಾಕೆ ವಿರಹವನ್ನು ನೆನಪಿಸುತ್ತೀಯಾ ಅಂತ ದೀನಳಾಗಿ ನೋಡಬೇಡ ನೀನು, ಅಪರಾಧಿ ಭಾವ ಕಾಡುತ್ತದೆ.. ಸತಾಯಿಸಿದವರೇ ಸಮಾಧಾನಿಸುವುದು ಈ ಪ್ರೇಮದ ಮುದ್ದು ಮುದ್ದು ಲಕ್ಷಣ ನೋಡು!

ಅದೊಂದು ಋತು ಬರುತ್ತದೆ ರಾಧೆ, ಎಲ್ಲಾ ದೇಶಗಳಲ್ಲೂ ಆಯಾ ಸಮಯಕ್ಕೆ; ವೃಕ್ಷ ಸಂಕುಲ ತನ್ನ ಎಲೆಗಳನ್ನು ಉದುರಿಸಿ ಬೋಳು ಬೋಳಾಗುತ್ತದೆ. ಹಕ್ಕಿಗಳೆಲ್ಲಾ ಇನ್ನೆಲ್ಲೋ ವಲಸೆ ಹೋಗುತ್ತವೆ. ಅದೆಲ್ಲಿಂದಲೋ ಅಮ್ಮ ಹೆಕ್ಕಿ ತಂದ ಕಸ ಕಡ್ಡಿಗಳಿಂದ ಕಟ್ಟಿಕೊಂಡ ಗೂಡಲ್ಲಿ ಅಮ್ಮನದೇ ತುತ್ತು ತಿಂದು ಬೆಳೆದ ಹಕ್ಕಿ ಮರಿಗಳ ಚಿಲಿಪಿಲಿ ಇದ್ದಕ್ಕಿದ್ದಂತೆ ಕಾಣೆಯಾಗುತ್ತದೆ. ಕಟ್ಟಿಕೊಂಡ ಗೂಡಿನಲ್ಲಿ ಖಾಲಿತನ ತುಂಬಿಕೊಳ್ಳುತ್ತದೆ. ನೀನೊಮ್ಮೆ ಕೇಳಿದ್ದೆ ನೆನಪಿದೆಯಾ, ನಮ್ಮ ಇಡೀ ಬಾಲ್ಯವನ್ನು ಕಳೆದಂಥ ಮನೆಯನ್ನು ಬಿಟ್ಟುಹೋಗುವುದೆಂದರೆ ಅಷ್ಟು ಸುಲಭವಾ ಕೃಷ್ಣ ಅಂತ. ಅಸ್ತಿತ್ವದ ಹೋರಾಟದಲ್ಲಿ, ಬದುಕಿನ ಬೇರೆ ಬೇರೆ ಹಂತಗಳಲ್ಲಿ ಮೋಹವನ್ನು ಬಿಡುವುದು ಅತೀ ಅಗತ್ಯ ರಾಧೆ. ಏನೂ ಇಲ್ಲದಂತೆ ಬಂದವರು ಏನೂ ಇಲ್ಲದಂತೆ ಹೋಗುವುದನ್ನೂ ಕಲಿಯಬೇಕಲ್ಲವಾ? ಗೂಡು ಇದ್ದಷ್ಟು ಹೊತ್ತು ಮನೆ. ಮುಂದೆ ಇನ್ನ್ಯಾವುದೋ ಮರ ಕಾಯುತ್ತಿರಬಹುದು, ಅದಕ್ಕೂ ಒಂಟಿತನ ಸಾಕಾಗಿ ಈ ಹಕ್ಕಿಗಳ ಬರವು, ಇರುವು ಮುಪ್ಪಿನಲ್ಲಿ ಸಂಭ್ರಮಕ್ಕೆ ಪ್ರಾಯ ಬಂದಂತೆ ಆಗಬಹುದು ಅಲ್ಲವಾ? ಅವತ್ತೊಂದು ದಿನ ರಣ ರಣ ಬಿಸಿಲು, ಕೂರಲು ಎಲ್ಲೂ ನೆರಳಿರದೇ ನಾವಿಬ್ಬರೂ ಚಡಪಡಿಸುತ್ತಿರುವಾಗ, ನಾನೊಮ್ಮೆ ಕೊಳಲು ತೆಗೆದು ಊದಿದಾಗ ಪಾತರಗಿತ್ತಿಗಳ ಗುಂಪೊಂದು ಬಂದು ಸೂರ್ಯನ ಕಿರಣಗಳಿಗೆ ಅಡ್ಡಲಾಗಿ‌ ನಿಂತು ನಾವದರ ನೆರಳಿನಲ್ಲಿ ನಿಂತಿದ್ದು ಈಗಲೂ ಅಸಂಭವವೆಂಬಂತೆಯೇ ಭಾಸವಾಗುತ್ತದೆ ನನಗೆ. ನೀನೋ ನನ್ನನ್ನು ಮಾಂತ್ರಿಕನೆಂಬಂತೆ ಅನುಮಾನದ ದೃಷ್ಟಿಯಿಂದ ನೋಡಿದ್ದೆ. ಈಗ ತಿಳಿದಿದೆಯಲ್ಲವಾ ರಾಧೆ...

ಕಾಲವೇ ನಾನು, ಕಾಲದ ಸಮಸ್ತ ಋತುಗಳು ನಾನು, ಆ ಋತುಗಳ ಭಿನ್ನ ಭಿನ್ನ ವಾತಾವರಣ ನಾನು, ಹವಾಮಾನ ನಾನು, ಚಲನೆ ಸಂಚಲನೆ ನಾನು, ಕಣ ನಾನು, ಮಣ್ಣು ನಾನು, ಫಲ ನಾನು, ಉದುರಿಬಿದ್ದ ಹಳದಿ ಎಲೆ ನಾನು, ಸ್ಮೃತಿ ವಿಸ್ಮೃತಿ ನಾನು, ಗತಿ ಮಿತಿ‌ ಪ್ರಗತಿ ನಾನು, ಪ್ರಕೃತಿ ನಾನು, ಅದನ್ನು ಜೀವಿಸುವ ಸಂಸ್ಕೃತಿ ನಾನು, ಗಂಧ ನಾನು, ಜುಳು ಜುಳು ಮಂದ ನಿನಾದ ನಾನು, ಅಂದ ಬಂಧ ಸಂಬಂಧ ನಾನು, ಕಂದನ ಅಳು ನಾನು, ಅಮ್ಮನ ಎದೆ ನಾನು, ಲಾಭ ಲೋಭ ವಿಪ್ರಲಂಭ ನಾನು, ಅರ್ಥ ಕಾಮ‌ ಸಾಮ‌ ನಾನು, ಸಂಗಾತ ನಾನು, ವಿರಹ ನಾನು, ಅಖಂಡ ಅಭಂಗ ಅಶರೀರಿ ನಾನು, ಕಾರಣದ ಕಾರಣ ನಾನು, ಹೂರಣದ ಹೂರಣ ನಾನು, ರಸ ವಿರಸ ಸಮರಸ ನಾನು, ಇದ್ಯಾವುದೂ ಅಲ್ಲದ ತೂತು ಬಿದಿರಿನ ಹುಡುಗ ನಾನು, ಇನ್ನೂ ಒಂದು ಮಾತು; ರಾಧೆಯಿಲ್ಲದೇ ಅಪೂರ್ಣ ನಾನು..

ರಾಧೇ, ಬೃಂದಾವನದ ತೋಪಿನಲ್ಲಿ ಉದುರಿಬಿದ್ದ ನವಿಲುಗರಿಗಳನೆಲ್ಲಾ ತಂದು ಶೇಖರಿಸೆಯಾ? ಕೃಷ್ಣನ ಪತ್ರ ಬರುತ್ತದೆ; ಪತ್ರದ ಎಲ್ಲಾ ಮೂಲೆಗಳಲ್ಲೂ ಗರಿಗಳ‌ನ್ನಿಟ್ಟು ಶೃಂಗರಿಸೆಯಾ? ಮಂಕಾಳಿ ಗೌರಿ ಲಕುಮಿಯರಿಗೆ ನನ್ನ ಪತ್ರವನ್ನು ಓದಿ ಹೇಳೆಯಾ? ಎಲ್ಲೇ ನಿನ್ನ ಕೃಷ್ಣ, ಬರಲೇ ಇಲ್ಲ ಎಂದು ಆಡಿಕೊಂಡು ಕಿಚಾಯಿಸುವ ನಿನ್ನ ಗೆಳತಿಯರೆದುರು ಪತ್ರ ಹಿಡಿದು ನಡೆಯಲಾರೆಯಾ? ಸುಸ್ತಾಗಿದೆ ಕೃಷ್ಣಾ ಅನ್ನದಿರು.. ನಮ್ಮ ನಮ್ಮ ಪಾಲಿನ ಬದುಕನ್ನು ಬದುಕಲೇಬೇಕಲ್ಲವಾ, ಕೃಷ್ಣ ಬರೀ ಅಕ್ಷರಗಳ ಕಳುಹಿಸಿಕೊಡುತ್ತಿಲ್ಲ, ಪ್ರಾಮಾಣಿಕವಾಗಿ ಹುಟ್ಟಿಕೊಂಡ ಭಾವಗಳ ಬಿಂಬಗಳೆಲ್ಲವನ್ನೂ ಕಳುಹಿಸುತ್ತಿದ್ದಾನೆ. ಕೃಷ್ಣ ಬರುತ್ತಾನೆ, ಇಂದಲ್ಲ ನಾಳೆ.. ರಾಧೆ ಕಾಯುತ್ತಾಳೆ ತಪಸ್ವಿನಿಯಂತೆ.. ಕೃಷ್ಣ ಬರುತ್ತಾನೆ ಅನುರಾಗಿಯಾಗಿ, ರಾಧೆ ಕಾಯುತ್ತಾಳೆ ವಿರಾಗಿಯಂತೆ.. ಕೃಷ್ಣ ಬರುತ್ತಾನೆ ಕೊಳಲ ಧೂಳು ಒರೆಸಿಕೊಡು ಎನ್ನುವ ಪುಟ್ಟ ಮಗುವಿನ ಹಟವಾಗಿ, ರಾಧೆ ಕಾಯುತ್ತಾಳೆ ಮಡಿಲು ತುಂಬದ ಹೆಣ್ಣಂತೆ.. ಇಲ್ಲ, ಕೃಷ್ಣ ಬರುತ್ತಾನೆ ಕೃಷ್ಣನಂತೆ, ರಾಧೆ ಕಾಯುತ್ತಾಳೆ ರಾಧೆಯಂತೆ.. ಜಗತ್ತಿನಲ್ಲೀಗ ಪ್ರೇಮದ ಸಂಜೆಗಳು ರಾತ್ರಿಗಾಗಿ ಕಾಯುತ್ತವೆ.. ರಾಸಕ್ಕಾಗಿ ಕಾಯುತ್ತವೆ..


ಇಂತಿ ನಿನ್ನ
ಗೊಲ್ಲ



- 'ಶ್ರೀ'
 ತಲಗೇರಿ