ಅದೊಂದು ಕಾಲಘಟ್ಟ.. ಪುರುಷ ಪ್ರಧಾನ ಸಮಾಜ.. ಹೆಣ್ಣು , ಅದೊಂದು ಚೌಕಟ್ಟಿನ ಚಿತ್ರ ಮಾತ್ರವೇ ಆಗಬೇಕು ಅನ್ನುವ ಅಲಿಖಿತ ನಿಶ್ಚಿತ ಕೌಟುಂಬಿಕ ಸಂವಿಧಾನ.. ಎಲ್ಲಾ ವ್ಯವಸ್ಥಿತ ಕಾಲದ ಸಮಾಜದಲ್ಲಿ ಬಹುಶಃ ಇದೊಂದು ತುಂಬಾನೇ ಚರ್ಚಿತ ವಿಷಯ.. ಅಬಲೆ ಅನ್ನುವಂಥ ಒಂದಷ್ಟು ನೆಪಗಳ ಪೊಳ್ಳು ಪೊರೆಯೊಳಗೆ ಹುದುಗಿಕೊಂಡ ವ್ಯವಸ್ಥೆಯಲ್ಲಿ ಪದೇ ಪದೇ ಒಂದು ಧ್ವನಿ ಯಾರಿಗೂ ಕೇಳುವುದೇ ಇಲ್ಲ... ಅದೆಷ್ಟೋ ತಲೆಮಾರುಗಳ ಕೂಗು; ಕ್ಷೀಣ ತೀಕ್ಷ್ಣ ಎಲ್ಲಾ ಹಂತಗಳಲ್ಲಿ ಜಾಲಾಡಲ್ಪಟ್ಟ ಗಂಟಲಿನ ಮೊರೆತ.. ಒತ್ತಾಯದ ಬದುಕು ಹೆಣ್ಣು ಗಂಡೆಂಬುದ ನೋಡದೇ ಎಲ್ಲರನ್ನೂ ಹಿಂಸಿಸುವಂಥದ್ದು.. ಆದರೂ ಕೆಲವೊಮ್ಮೆ ಒಂದು ವರ್ಗ ಮಾತ್ರವೇ ಅದರ ಹಿಡಿತಕ್ಕೆ ಸಿಲುಕುವುದು ಬಹುಶಃ ಎಲ್ಲಾ ಕಾಲಘಟ್ಟದ ದುರಂತವೇನೋ ! ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ತೆಳು ಗೆರೆಯನ್ನ ಗಮನಿಸುವ ಸೂಕ್ಷ್ಮಮತಿ, ಕೂರದ ಕಾಲದ ಬಗಲಿಗೆ ಜೋತುಬಿದ್ದ ನಮ್ಮಕಣ್ಣುಗಳಿಗಿಲ್ಲ.. ಹೀಗೆ , ಬಾಡಿದ ಹೂಗಳ ಅರೆಗಂದು ಬಣ್ಣದ ನೆರಿಗೆಗಳ ಕಥಾನಕವೇ ಅಕ್ಕು ...
ಇದೆಲ್ಲಿಯದೋ ದೂರದ ಕತೆಯಲ್ಲ , ಈಗಲೂ ಅದೆಷ್ಟೋ ಹಳ್ಳಿಗಳ ನಿತ್ಯ ಅಜ್ಞಾತ ಸಂಘರ್ಷ.. ಹರೆಯಕ್ಕೆ ರೆಕ್ಕೆ ಬಹಳ; ಅದರಲ್ಲೂ ಹೆಣ್ಣಿನ ಬಯಕೆಗಳಲ್ಲಿ ಸಣ್ಣಪುಟ್ಟ ಸಂಗತಿಗಳೇ ಅಧಿಕ.. ಕನ್ನಡಿಯೊಂದು ಆಪ್ತಮಿತ್ರ.. ಎಲ್ಲ ಕಾಲಕ್ಕೂ ಜೊತೆಯಾಗಬಲ್ಲ ಗೆಳತಿ.. ಶೀರ್ಷಿಕೆಯಿರದ ಒಂದಷ್ಟು ಆಸೆಗಳ ಪಟ್ಟಿಮಾಡುವಾಗಲೆಲ್ಲಾ ಕೈಬೆಸೆದ ನೆರಳು ಹ್ಞೂಂ ಅಂತಿರಬೇಕು.. ಮತ್ತು ಹಟವೊಂದು ಹೆಣ್ಣಿಗೆ ಹುಟ್ಟು ಕೊಟ್ಟ ಬಳುವಳಿಯೇನೋ ಅನ್ನುವಂತಿರುತ್ತದೆ.. ಈ ಗುಣಗಳ ಮೂರ್ತರೂಪವೇ ಈ ಕಥಾನಕದ ಅಮ್ಮಚ್ಚಿ... ಲಹರಿ ತಂತ್ರಿ ಅನ್ನುವವರ ಮಾಗಿದ ಅಭಿನಯ ಅವರೆಲ್ಲೋ ನಮ್ಮದೇ ಮನೆಯ ಹುಡುಗಿಯೆನ್ನುವಷ್ಟು ಆಪ್ತವಾಗಿಸುತ್ತದೆ.. ಅಮ್ಮಚ್ಚಿ ಬಯಲ ಹೂವು.. ತನ್ನದೇ ಲೋಕದಲ್ಲಿ ತಂಗಾಳಿಯಂಥ ಕನಸಿನಲ್ಲಿ ಚಿಟ್ಟೆಯ ರೆಕ್ಕೆಯ ಮೆದುವಾದ ಸ್ಪರ್ಶದ ಕುರಿತಾಗಿ ಹಾತೊರೆಯುತ್ತಿದ್ದಂಥವಳು.. ಮಿಡತೆಯ ಕಾಲಿಗೆ ಸಿಕ್ಕಿ ಮನೆಯೊಳಗೆ ಬಂದು ಬಿದ್ದಂಥದು.. ಇನ್ನು , ಅದೆಷ್ಟೋ ವಸಂತಗಳನ್ನ ಒಂಟಿಯಾಗಿ ಕಳೆದ ಸುಕ್ಕು ಚರ್ಮವೊಂದಿದೆ.. `ಪುಟ್ಟಮ್ಮತ್ತೆ' ; ನಿರ್ಭಾವ ಜಾಗೃತಿಯ ಕಲಿಸುವಂಥವಳು.. ಎದೆ, ಕಲ್ಲಾದಲ್ಲಿ ಪ್ರಾಯದ ಹಸಿವನ್ನೂ ಮೀರಿ ನಿಲ್ಲಬಹುದೆನ್ನೋ ಗಟ್ಟಿಗಿತ್ತಿ.. ಸಾವಿಗಿಂತ ಬದುಕಿನ ಪ್ರೀತಿ , ಮಾತೃತ್ವದ ರೀತಿಯನ್ನ ನೆಚ್ಚಿ ಉಳಿದಂಥವಳು.. ಎಲ್ಲಾ ಏರಿಳಿತಗಳ, ಅದೆಷ್ಟೋ ಹಗಲಿರುಳುಗಳ ಮೂಕಸಾಕ್ಷಿಯಾಗಿಯೇ ಉಳಿದುಹೋದಂಥವಳು.. ಋಣಕ್ಕೆ ಬಿದ್ದ , ಮತ್ತು ತಿಳಿಯದೆಯೇ ಮಿಡತೆಗೆ ಬಾಗಿಲು ತೆಗೆದವಳು; ಕಾಲನ ಕ್ರೂರ ಹವೆಗೆ ಜರ್ಝರಿತಳು.. ರಾಧಾಕೃಷ್ಣ ಉರಾಳರಲ್ಲಿ ಪುಟ್ಟಮ್ಮತ್ತೆ ಬಹುಶಃ ಪರಕಾಯ ಪ್ರವೇಶ ಮಾಡಿರಲೇಬೇಕು ಅನ್ನುವಷ್ಟು ಏಕೀಭೂತರು.. ಇನ್ನು , ಮಾನಸಿಕ ಸ್ತಿಮಿತ ಕಳೆದುಕೊಂಡಂಥವಳು.. ಪುರುಷ ಡಾಂಭಿಕತೆಯನ್ನ ಮತ್ತು ಸಮಾಜದ ಕಾಠಿಣ್ಯತೆಯನ್ನ ಸವಿಸ್ತಾರವಾಗಿ ತೆರೆದಿಡಬಲ್ಲಂಥವಳು; ಅವಳೇ `ಅಕ್ಕು' .. ಸೋಗು ಹಾಕುತ್ತಲೇ ಸಾಗ ಹಾಕುತ್ತ , ಮದದ ಜಾತ್ರೆಯಲ್ಲಿ ದಿಗಿಲನ್ನೇ ಆಮದು ಮಾಡಿಕೊಂಡು ಭ್ರಮರಗಳ ರೆಕ್ಕೆ ಮುರಿದವಳು, ಹಾರದೇ ಉಳಿದವಳು.. ಮತ್ತೆ , ಇದ್ದೂ ಇಲ್ಲದವಳು.. ಇವಳು ಗೋಡೆಗಿಷ್ಟು ಹಬ್ಬಿ ಮುಗುಳು ಹಡೆವ ಹಸಿ ಹಂಬಲದವಳು..ಬರೀ ಹಂಬಲದವಳಾಗೇ ಉಳಿದವಳು.. ಅಕ್ಕುವಾಗಿ ಮತ್ತು ನಿರ್ದೇಶಕಿಯಾಗಿ ಚಂಪಾಶೆಟ್ಟಿಯವರು ಕಾಡುತ್ತಲೇ ಉಳಿದುಹೋಗುತ್ತಾರೆ.. ಕ್ಷಣ ಕ್ಷಣದ ಮುಖಭಾವದಲ್ಲೂ ಕಟ್ಟಿಕೊಟ್ಟ ರೀತಿ ತುಂಬಾ ತುಂಬಾ ಚೆಂದ... ಎಲ್ಲಾ ಸಹಕಲಾವಿದರೂ ಇಡೀ ಕತೆಯ ಓಘಕ್ಕೆ ಮತ್ತು ಪಾತ್ರಕ್ಕೆ ಬೆನ್ನೆಲುಬಾಗಿ ನಿಂತವರು... ನೆರಳು ಬೆಳಕಿನ ಸಂಯೋಜನೆ, ಒಂದಷ್ಟು ಅದ್ಭುತ ಕಲಾಕೃತಿಗಳನ್ನು ಕಟ್ಟಿಕೊಟ್ಟಿಕೊಡುತ್ತದೆ.. ಕಾಶಿನಾಥ್ ಪತ್ತಾರ್ ಅವರ ಹಿನ್ನೆಲೆ ಸಂಗೀತ ಮಾನವೀಯ ನೆಲೆಯನ್ನ ಜಾಗೃತಗೊಳಿಸುತ್ತ ಸಾಗುತ್ತದೆ..
ವೈದೇಹಿ ಅವರ ಸಣ್ಣ ಕತೆಗಳನ್ನ ಆಧರಿಸಿ ಹುಟ್ಟಿಕೊಂಡ ಕಥಾನಕ ಈ ಅಕ್ಕು ; ಅಲ್ಲೇ ಹೇಳಿದಂತೆ ಶವಕೆ ಇಡಲೆಂದೇ ಕೆಲ ಹೂಗಳು ಅರಳುತ್ತವೆ.. ! ಕೊನೆಯದಾಗಿ ಒಂದು ಮಾತು; ರಂಗಶಂಕರ ತುಂಬಿತ್ತು... ರಂಗಭೂಮಿಯ ಘಮಲಿಗೆ ಬದುಕಿನ ಆ ಪುಟ್ಟ ಭಾಗವೊಂದು ತುಂಬಾನೇ ಆಪ್ತವಾಗಿತ್ತು...
~`ಶ್ರೀ'
ತಲಗೇರಿ