ಶನಿವಾರ, ಆಗಸ್ಟ್ 25, 2012


           "ಮೆರಗಿನ ಡೇರೆಯೊಳಗೆ"...


    ಬರೆದುಬಿಡು ಮೌನ ನಿನ್ನ ಪ್ರೀತಿಯ ಹಾಡು
    ಬಿರಿದ ಎದೆಬದಿಯ ನಲ್ಮೆಯಾ ಗೂಡು
    ಮರೆತುಬಿಡು ಅವನ ಕಣ್ಣ ಬೆಳಕಿನ ಧ್ಯಾನ
    ಅರಿತು ನೀನೇ ಹೃದಯದ ಒಲ್ಮೆಯಾ ಕವನ

    ಅರಳೋ ನೆರಳಿನ ಪ್ರೀತಿಯೊಳಗೆ
    ಕೊಳಲ ದನಿಯ ಮೌನ ಬೆಸುಗೆ
    ಬರೆಯೋ ಒಲವಿನ ರೇಖೆಯೊಳಗೆ
    ಹರಡಿ ನೆರೆದ ಬಿಂದು ಮಳಿಗೆ!

    ಮರಳಿ ಬೆರೆಯುವ ನಿನ್ನೆಗಳಿಗೆ
    ನೆನಪ ನೋವಿನ ದಿವ್ಯ ಲೇಪನ
    ಮಿಡಿವ ಸ್ವರಗಳ ಸಾರದೊಳಗೆ
    ಸುರುಳಿ ಕನಸಿನ ಭವ್ಯ ತನನನ...

    ಬೆಸೆದ ಮನಸಿನ ಮಡಿಕೆಯೊಳಗೆ
    ಹೆಸರ ಕೊರೆಯುವ ಸಣ್ಣ ಯೋಚನೆ
    ಉಸಿರ ಮೆರಗಿನ ಡೇರೆಯೊಳಗೆ
    ಬೆಳಕು ತುಂಬುವ ಚೆಂದ ಕಲ್ಪನೆ...!!


                                  ~‘ಶ್ರೀ’
                                    ತಲಗೇರಿ

ಭಾನುವಾರ, ಆಗಸ್ಟ್ 19, 2012


                 "ಹೇಮಚಂದ್ರಾ"....
                              ..ರಾಗ ಸಂಜೆಯ ಬೆಳಕಿನ ಬಣ್ಣದ ಶೇಷ ಪ್ರವರ...


        ಅಂದು ಚಿತ್ರಕಲಾ ಸ್ಪರ್ಧೆ.ಬಗೆಬಗೆಯ ಬಣ್ಣಗಳಲ್ಲಿ ಮಿಂದೆದ್ದ ಬಿಳಿಯ ಕಾಗದಗಳೆಲ್ಲವೂ ಹೊಸವಸ್ತ್ರ ತೊಟ್ಟಂತೆ ಸಂಭ್ರಮಿಸುತ್ತಿದ್ದವು.ಬಿಡುವಿಲ್ಲದಷ್ಟು ದುಡಿದ ಕುಂಚಗಳೆಲ್ಲವೂ ಮನೆಯಲ್ಲಿ ವಿಶ್ರಮಿಸುತ್ತಿದ್ದರೆ,ಅವುಗಳಿಂದ ಚಿತ್ರಿಸಲ್ಪಟ್ಟ ಚಿತ್ರಗಳೆಲ್ಲವೂ ಇಲ್ಲಿ ತಮ್ಮತನವನ್ನು ಪ್ರಸ್ತುತಪಡಿಸಲು ಹೆಣಗುತ್ತಿದ್ದವು.ಇದು ಮೂವತ್ತು ವರ್ಷ ವಯಸ್ಸಿನೊಳಗಿನವರು ಮಾತ್ರ ಭಾಗವಹಿಸಬಹುದಾದ ಸ್ಪರ್ಧೆಯಾಗಿತ್ತು.ಯಂತ್ರದಂತೆ ದುಡಿವ ನೂರಾರು ಜನ,ಅನೇಕ ಕಲಾರಸಿಕರು ಮನಸ್ಸಿನ ಸಂತೋಷಕ್ಕೆ ಹಪಹಪಿಸಿ ಬಂದು,ಆ ಎಲ್ಲಾ ಚಿತ್ರಗಳನ್ನು ವೀಕ್ಷಿಸ್ತಾ ಇದ್ದಾರೆ.ಅನೆಕ ವಿಚಿತ್ರ ಚಿತ್ರಗಳೂ,ಅಷ್ಟೇ ವಿಶಿಷ್ಟ ಚಿತ್ರಗಳೂ ಅಲ್ಲಿದ್ದವು.ಬಂದ ಎಲ್ಲ ವೀಕ್ಷಕರಿಗೂ ಸ್ಪರ್ಧಿಗಳು ತಮ್ಮ ತಮ್ಮ ಚಿತ್ರದ ಬಗ್ಗೆ ವಿವರಿಸ್ತಾ ಇದ್ದರು.ಆದರೆ,ಇಷ್ಟೆಲ್ಲಾ ಇದ್ದಾಗ್ಯೂ ಒಂದು ಚಿತ್ರ ಮಾತ್ರ ಎಲ್ಲರ ಗಮನವನ್ನು ಸೆಳೆಯುತ್ತಾ ಇತ್ತು.ಆ ಚಿತ್ರಕ್ಕೆ ಯಾವ ವಿವರಣೆಕಾರನೂ ಇರಲಿಲ್ಲ.ಅದೊಂದು ಅತ್ಯಂತ ಅಪರೂಪದ ಚಿತ್ರ,ಅಷ್ಟೇ ವಿಶಿಷ್ಟ ಕೂಡಾ!ಆ ಚಿತ್ರದಲ್ಲಿ ನೀಲಿ ಆಗಸದ ತುಂಬ ಕಪ್ಪು ಮೋಡಗಳು ತುಂಬಿಕೊಂಡಿವೆ..ಜಗತ್ತಿಗೇ ಬೆಳಕು ಕೊಡಬೇಕಾದ ಭಾಸ್ಕರ ಮೇಣದ ಬತ್ತಿಯಂತೆ ಕರಗಿಹೋಗುತ್ತಿದ್ದಾನೆ.ತನ್ನದೇ ಝಳಕ್ಕೆ ತಾನು ಕರಗುತ್ತಿದ್ದಾನೋ ಅಥವಾ ಭೂಮಿಯ ತಾಪಕ್ಕೋ ಎನ್ನುವುದು ಪ್ರಶ್ನೆಯಾಗಿ ನಿಂತಿದೆ.ಮರಗಳ ತುಂಬ ಎಲೆಗಳು ತುಂಬಿಕೊಂಡಿರಬೇಕಾಗಿದ್ದ ಜಾಗದಲ್ಲಿ ಕರಗುವ ಗಡಿಯಾರಗಳು ತೂಗಾಡುತ್ತಿವೆ...ಚಿಗುರುತ್ತಿರುವ ಹಸಿರೆಲೆಗಳ ಜಾಗದಲ್ಲಿ ಪುಟ್ಟ ಪುಟ್ಟ ಗಡಿಯಾರಗಳು ಜನ್ಮತಳೆಯುತ್ತಿರುವಂತೆ ಚಿತ್ರಿಸಲಾಗಿದೆ.ಹರಿಯುವ ನೀರು ಒಮ್ಮೊಮ್ಮೆ ಹಿಮ್ಮುಖವಾಗಿಯೂ,ಜೊತೆಜೊತೆಗೇ ಮುಮ್ಮುಖವಾಗಿಯೂ ಹರಿಯುವಂತೆ ಚಿತ್ರಿಸಿ,ಅವೆರಡೂ ಸ್ವಲ್ಪ ದೂರದಲ್ಲಿ ಮಿಲನಗೊಂಡು ಮತ್ತೊಂದು ನದಿ ಸೃಷ್ಟಿಯಾಗಿ ಮುಂದೆ ಸಾಗಿದೆ.ಅದು ಇನ್ನೂ ಹಲವಾರು ನದಿಗಳೊಂದಿಗೆ ಸಂಗಮಿಸಿ,ಮಹಾಸಾಗರವೇ ಸೃಷ್ಟಿಸಲ್ಪಟ್ಟಿದೆ.ಹಾಗೆ ಸೃಷ್ಟಿಸಲ್ಪಟ್ಟ ಮಹಾಸಾಗರದಲ್ಲಿ ಅಲೆಗಳಾ ಹೊಸಮೋಡಿ ಶುರುವಾಗಿದೆ.ಜೊತೆ ಜೊತೆಗೇ ಮರದಲ್ಲಿ ತೂಗಾಡುತ್ತಿರುವ ಗಡಿಯಾರಗಳಿಂದ ಕರಗಿಬಿದ್ದ ಮೇಣದ ಹನಿಗಳು ಭೂಮಿಯ ಬಿರುಕುಗಳನ್ನು ಸೇರಿ,ಭೂತಲೋಕದ ಗೋರಿಯೊಳಗೆ ಹುದುಗಿಹೋಗುತ್ತಿವೆ.ಪಕ್ಕದಲ್ಲೇ ಇರುವ ಮಣ್ಣಿನ ರಸ್ತೆಯೊಳಗೆ ಒಂದು ಬಂಡಿ ಹೋಗುತ್ತಾ ಇದೆ.ಆದರೆ,ಎತ್ತುಗಳ ಬದಲಾಗಿ ಮನುಷ್ಯರನ್ನು ಆ ಬಂಡಿಗೆ ಕಟ್ಟಲಾಗಿದೆ.ಯಾವುದೋ ಒಬ್ಬ ವಿಚಿತ್ರ ಯಂತ್ರ ಮಾನವ ಆ ಬಂಡಿಯ ಸಾರಥಿಯಾಗಿದ್ದಾನೆ.ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಿರುವ ಬೇಲಿಗಳಿಗೆ ಮರದ ಗೂಟದ ಬದಲಾಗಿ ಮನುಷ್ಯರನ್ನೇ ಹಿಡಿದು ಕಟ್ಟಲಾಗಿದೆ.ಅವರನ್ನು ಮೊಣಕಾಲಿನವರೆಗೆ ಮಣ್ಣಿನಲ್ಲಿ ಹೂಳಲಾಗಿದೆ.ಇದೊಂಥರ ಹಳ್ಳಿಯ ಚಿತ್ರವಾಗಿದ್ದು,ಉಳಿದರ್ಧ ಭಾಗದಲ್ಲಿ ನಿಧಾನವಾಗಿ ಕತ್ತಲಾವರಿಸತೊಡಗಿದೆ.ಆವರಿಸಿದ ತಮಸ್ಸನ್ನು ಕಳೆಯಲೋ ಎಂಬಂತೆ ಒಬ್ಬ ಪುಟ್ಟ ಮುಗ್ಧ ಬಾಲಕಿ ತನ್ನ ಕೈಯಲ್ಲಿ ಹಣತೆ ಹಿಡಿದು ನಿಂತಿದ್ದಾಳೆ.ಆದರೆ,ಆ ಬಾಲಕಿ ಹಿಂದೆ ಸರಿಯುತ್ತಾಳೋ,ಮುಂದುವರೆಯುತ್ತಾಳೋ ಎನ್ನುವುದು ಮತ್ತೊಂದು ಪ್ರಶ್ನೆಯೆಂಬಂತೆ ಗೋಚರಿಸುತ್ತಿದೆ...ಇವಿಷ್ಟು ಆ ಚಿತ್ರದಲ್ಲಿ ಕಂಡುಬರುತ್ತಿರುವ ಅಂಶಗಳು...ವ್ಹಾ..ವ್ಹಾ..ಎಂತಹ ಅದ್ಭುತ ಚಿತ್ರ,ಅದೆಂಥಹ ರಮ್ಯ ಕಲ್ಪನೆ!ಬಣ್ಣಗಳೊಡನೆ ಹೊಸ ಆಟವೋ ಎಂಬಂತಿದೆಯಲ್ಲಾ ಈ ಚಿತ್ರ..ಹೀಗೇ..ಹೀಗೇ..ಬಂದ ವೀಕ್ಷಕರೆಲ್ಲಾ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ತಾ ಇದ್ದಾರೆ.ಅವರಲ್ಲಿ ಒಬ್ಬ,ಈ ಚಿತ್ರ ಬಿಡಿಸಿದಾತನನ್ನು ಪ್ರಶ್ನಿಸುತ್ತಾನೆ...ದಯವಿಟ್ಟು ಈ ಚಿತ್ರದ ಅರ್ಥವನ್ನು ವಿವರಿಸುತ್ತೀರಾ?..ಅದಕ್ಕೆ ಆತ,ಕ್ಷಮಿಸಿ..ಒಬ್ಬ ಕಲಾವಿದನ ಶ್ರಮ ಆತನ ಚಿತ್ರದಲ್ಲಿ ಬಿಂಬಿಸಲ್ಪಡುತ್ತದೆ.ಒಬ್ಬ ಕಲಾವಿದನ ಮನದಾಳದ ಭಾವನೆಗಳು ಎಲ್ಲರಿಗೂ ಅರ್ಥವಾಗಬೇಕೆಂಬುದೇ ಆತನ ಉದ್ದೇಶ.ಅದಕ್ಕೆಂದೇ ಆತ ತನ್ನೆಲ್ಲ ಪ್ರಯತ್ನಗಳನ್ನು ಮಾಡುತ್ತಾನೆ.ಅದು ಸಾಮಾನ್ಯರಿಗೂ ಅರ್ಥವಾಗದಿದ್ದಲ್ಲಿ ಆ ಕಲಾವಿದ ಕೈಗೆಟುಕದ ನಕ್ಷತ್ರವಾಗಿ ಮಾರ್ಪಾಡಾಗುತ್ತಾನೆ.ಆದರೆ ನಾನು,ಆ ನಕ್ಷತ್ರವಾಗೋದಿಕ್ಕೆ ಬಯಸೋದಿಲ್ಲಾ..ಆರಿಹೋದರೂ ಸರಿಯೇ,ಕೈಯಲ್ಲಿ ಹಿಡಿಯಬರುವ ಪುಟ್ಟ ಹಣತೆಯಾಗಲಿಚ್ಛಿಸುತ್ತೇನೆ...ನನ್ನ ಈ ಚಿತ್ರದಲ್ಲಿ ಅಂಥಾದ್ದೇನೂ ಇಲ್ಲ!ಮೂರ್ಖನ ಮನಸಿನಾಳದ ಒಂದೆರಡು ತುಡಿತಗಳಷ್ಟೇ ಚಿತ್ರಿತವಾಗಿವೆ.ದಯವಿಟ್ಟು ಸಹೃದಯಿಗಳಾಗಿ ಈ ಚಿತ್ರವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿ...ಸೂಕ್ಷ್ಮವಾಗಿ ಅವಲೋಕಿಸಿದಾಗ ನನ್ನ ಚಿತ್ರದ ಪ್ರತಿ ಬಣ್ಣವೂ ತಮ್ಮೆಲ್ಲರಿಗೂ ಸ್ಪಂದಿಸುತ್ತಿರುವುದು ಗೋಚರವಾಗುತ್ತದೆ.ದಯವಿಟ್ಟು ಕ್ಷಮಿಸಿ,ನಾನು ಇದರ ಅರ್ಥವನ್ನು ವಿವರಿಸುವುದಿಲ್ಲ.ನಾನೇ ಎಲ್ಲವನ್ನು ಹೇಳಿದರೆ ತಮ್ಮ ಭಾವನೆಗಳಿಗೆ ಅವಕಾಶವೆಲ್ಲಿ?ಅವರವರ ಮನಸಿಗೆ ಅನಿಸಿದ ಅರ್ಥಗಳನ್ನೇ ನನ್ನ ಚಿತ್ರ ಸ್ಫುರಿಸಬಹುದು..ಅದು ತಮಗೇ ಅರ್ಥವಾಗುತ್ತದೆ!ಪ್ರತಿಯೊಬ್ಬರ ವ್ಯಕ್ತಿತ್ತ್ವವನ್ನು ಬಿಂಬಿಸುವ ಕನ್ನಡಿಯಾಗಿಯೂ ನನ್ನ ಚಿತ್ರ ಪ್ರತಿನಿಧಿಸಲ್ಪಡಬಹುದು.ಅವರವರ ಎದೆಯಾಳದ ಭಾವವೇ ಅವರವರ ಮನದ ಆಲೋಚನೆಗಳಾಗಿ ವ್ಯಕ್ತವಾಗುತ್ತವೆ.ಅದನ್ನೇ ಅವರು ನನ್ನ ಚಿತ್ರದಲ್ಲಿ ಕಾಣುತ್ತಾರೆ...ಎಂದು ಹೇಳಿ,ಅವರೆಲ್ಲರಿಗೂ ಆತ ವಂದಿಸುತ್ತಾನೆ.ಅವನ ವಿನಯಕ್ಕೂ,ದಿಟ್ಟತನದ ಆ ಉತ್ತರಕ್ಕೂ,ಆತನಲ್ಲಿ ಇರುವ ಆತ್ಮವಿಶ್ವಾಸಕ್ಕೂ,ಆತನ ಮಾತಿನ ಪ್ರೀತಿಗೂ ಜನ ಮಂತ್ರಮುಗ್ಧರಾಗಿದ್ದರು.ಆತನನ್ನು ಮನದುಂಬಿ ಹರಸಿದರು.ಆತನ ಚಿತ್ರದಲ್ಲಿ ಅದೆಂಥದ್ದೋ ಒಂದು ಸೌಂದರ್ಯವಿತ್ತು.ಆದರೆ ಆತ...ಹುಚ್ಚನಂತೆ ಕಾಣುತ್ತಿದ್ದ.ಆ ಚಿತ್ರವನ್ನು ಬಿಡಿಸಿದವನು ಆತನೇನಾ ಎನ್ನುವಂತಿದ್ದನಾತ.ಆದರೆ ಆ ಸಾಧಾರಣತೆಯಲ್ಲೇ ಅಸಾಧಾರಣ ವ್ಯಕ್ತಿತ್ತ್ವ ಎಲೆಮರೆಯ ಕಾಯಂತೆ ಅವ್ಯಕ್ತವಾಗಿತ್ತು.ಈಗ ಚಿತ್ರಕಲಾ ಫಲಿತಾಂಶ ಎಂಬ ಘೋಷಣೆಯಾದ ಕೂಡಲೇ ಎಲ್ಲರ ಗಮನ ಅತ್ತ ಸೆಳೆಯಲ್ಪಟ್ಟಿತು.ಈ ಸುಂದರ ಸಂಜೆಯ ಜಿಟಿಜಿಟಿ ಮಳೆಯ ವೇಳೆ ತಮ್ಮೆಲ್ಲರಿಗೂ ಫಲಿತಾಂಶವನ್ನು ತಿಳಿಸಲು ಸಂತೋಷಿಸುತ್ತಿದ್ದೇವೆ...ಈ ಸ್ಪರ್ಧೆಯ ವಿಜೇತ ಚಿತ್ರ..."ಕಾಲ ಕರಗುವ ಹೊತ್ತು"...ವಿಜೇತರ ಹೆಸರು..‘ಅಭಿನವ್’...ಎಂದು ಘೋಷಿಸಲಾಯಿತು.ಕಿವಿಗಡಚಿಕ್ಕುವ ಕರತಾಡನದ ಸದ್ದಿನಲ್ಲಿ ಬಹುಮಾನವನ್ನು ತೆಗೆದುಕೊಳ್ಳಲಿಕ್ಕೆ ಆತ ವೇದಿಕೆಗೆ ಬಂದ.ಎಲ್ಲರೂ ಅಂದುಕೊಂಡಂತೆಯೇ ಆತ ಪ್ರಥಮ ಬಹುಮಾನ ಗಳಿಸಿದ್ದ.

                                                        ** ** **                            

          ಬಹುಮಾನಿತನಾದ ಅಭಿನವ್ ತನ್ನ ಮನೆಗೆ ಹೋಗಲಿಕ್ಕೆ ದಾರಿಯಲ್ಲಿ ನಡೆದುಬರುತ್ತಿದ್ದ..ಒಂದು ಕೈಯಲ್ಲಿ ಪ್ರಶಸ್ತಿ ಪತ್ರ,ಪದಕ ಮತ್ತು ಒಂದು ಸ್ಮರಣಿಕೆ ಇತ್ತು.ಇನ್ನೊಂದು ಕೈಯಲ್ಲಿ ಕೊಡೆಯನ್ನು ಹಿಡಿದಿದ್ದ.ಸಣ್ಣದಾಗಿ,ಹಿತವಾಗಿ ಮಳೆ ಬರುತ್ತಲಿತ್ತು.ಈತ ನಿಧಾನವಾಗಿ ಹೆಜ್ಜೆ ಹಾಕುತ್ತಲಿದ್ದ.ಅಷ್ಟರಲ್ಲಿ ಇದ್ದಕ್ಕಿದ್ದಂತೆ ಮಳೆ ಜೋರಾಗಿ ಬರತೊಡಗಿತು.ಜೊತೆಗೆ ಬೀಸುವ ಗಾಳಿಯ ರಭಸವೂ ಕ್ಷಣದಿಂದ ಕ್ಷಣಕ್ಕೆ ಜಾಸ್ತಿಯಾಯಿತು.ಈತ ಮುದುರಿಕೊಂಡು,ಗಟ್ಟಿಯಾಗಿ ಕೊಡೆಯನ್ನು ಹಿಡಿದುಕೊಂಡು ಬರುತ್ತಿದ್ದ.ಆದರೆ ಗಾಳಿಯ ರಭಸಕ್ಕೆ ಕೈಲಿದ್ದ ಕೊಡೆ ಹಾರಿಹೋಯಿತು.ಜೋರಾದ ಮಳೆ ಬೇರೆ ಬರುತ್ತಲಿದ್ದರಿಂದ,ಆತನ ಮೈ ಒದ್ದೆಯಾಗತೊಡಗಿತು.ತಕ್ಷಣ ಆತ ಆಲ್ಲೇ ರಸ್ತೆಯ ಪಕ್ಕದಲ್ಲೇ ಇದ್ದ ಮನೆಯೊಳಗೆ ಹೊಕ್ಕಿದ.ಮನೆಯ ಬಾಗಿಲು ಹಾಕಿತ್ತು.ಆ ಮನೆಯ ಹಜಾರದಲ್ಲೇ ನಿಂತುಕೊಂಡ.ಮಳೆ ನಿಲ್ಲುವ ಸೂಚನೆಗಳಿಲ್ಲ.ಮನೆಗೆ ಹೋಗಲಿಕ್ಕೆ ಬೇರೆ ದಾರಿ ಇರಲಿಲ್ಲ.ಮನೆಗೆ ಹೋಗಿಯೂ ಮಾಡುವುದೇನೂ ಇಲ್ಲ!ಯಾಕಂದ್ರೆ ಮನೆಯವರ ಲೆಕ್ಕದಲ್ಲಿ ತಾನೊಬ್ಬ ನಿಷ್ಪ್ರಯೋಜಕ..ಎಂದು ಯೋಚಿಸ್ತಾ ನಿಂತಿದ್ದ.

                                                        ** ** **

          ಅಭಿನವ್ ಒಬ್ಬ ಸಾಮಾನ್ಯ ಕುಟುಂಬದ ಯುವಕ.ಬಡತನ ಮನೆಯಲ್ಲಿ ಮನೆಮಾಡಿತ್ತು.ಈತನ ತಂದೆ ಖಾಸಗಿ ಸಂಸ್ಥೆಯ ಗುಮಾಸ್ತ.ತಾಯಿ ಮನೆಗೆಲಸ ಮಾಡಿಕೊಂಡು ಅವರಿವರ ಮನೆಯ ಕಸಮುಸುರೆ ತೆಗೆಯುತ್ತಿದ್ದಳು.ತಂದೆಯ ಸಂಬಳದಲ್ಲಿ,ತಾಯಿಯ ಅಲ್ಪಸ್ವಲ್ಪ ಆದಾಯದಲ್ಲೇ ಜೀವನ ನಡೆಯಬೇಕಾಗಿತ್ತು.ಬಾಡಿಗೆ ಮನೆಯಲ್ಲಿ ಇವರ ವಾಸ.ಇರುವ ಒಬ್ಬ ಮಗನಿಗೆ ಚೆನ್ನಾಗಿ ಓದಿಸಿ,ದೊಡ್ಡ ಉದ್ಯೋಗಧರನನ್ನಾಗಿ ಮಾಡಬೇಕೆಂಬ ಇಚ್ಛೆಯೇ,ಎಲ್ಲ ತಂದೆತಾಯಿಯರಂತೆ ಇವರಿಗೂ ಇತ್ತು.ಆದರೆ,ಅವರ ಮಗ ಓದುವುದಕ್ಕೇ ಮನಸ್ಸು ಮಾಡಲಿಲ್ಲ.ಆತನಿಗೆ ಅದರಲ್ಲಿ ಆಸಕ್ತಿಯೇ ಇಲ್ಲವಾಗಿತ್ತು.ತಂದೆತಾಯಿ ಪ್ರತಿದಿನವೂ ಆತನಿಗೆ ಬುದ್ಧಿ ಹೇಳುತ್ತಿದ್ದರು.ಅವರೆದುರು ತಲೆತಗ್ಗಿಸಿ ನಿಂತಿರುತ್ತಿದ್ದ.ಆದರೆ ಆತನ ಲೋಕವೇ ಬೇರೆಯದಾಗಿತ್ತು.ಆತ ಎಲ್ಲರಂತಲ್ಲ.ಕೊನೆಕೊನೆಗೆ ತಂದೆತಾಯಿಯರು ಬೇರೆ ದಾರಿಯಿಲ್ಲದೇ,ಆತ ಮಾಡುವ ಕೆಲಸಕ್ಕೆ ಎರಡು ಮಾತನ್ನಲಿಲ್ಲ;ತಮ್ಮಷ್ಟಕ್ಕೇ ತಾವೇ ಸುಮ್ಮನಾದರು.ಆದರೆ ಮನಸಿನೊಳಗಿನ ನೋವು,ಮನಸ್ಸಿನಲ್ಲೇ ಮಡುಗಟ್ಟಿಕೊಂಡಿತ್ತು.ಆದರೆ,ಅವರ ಮಗ ಇದಾವುದರ ಅರಿವಿಲ್ಲದ ಮುಗ್ಧನಾಗಿದ್ದ.ಆತನಿಗೆ ತಿಳಿದಿರುವುದು ಒಂದೇ..ಅದು ಚಿತ್ರಕಲೆ..ಚಿಕ್ಕವನಿದ್ದಾಗ ಆಟವಾಡಲು ಶುರುಮಾಡಿದಂದಿನಿಂದ ಅವನ ಆಟ ಕೇವಲ ಬಣ್ಣಗಳೆಂಬ ಬಣ್ಣಗಳ ಜೊತೆಯಲ್ಲಿ ಮಾತ್ರವೇ ಆಗಿತ್ತು.ಆತನಿಗೆ ಹೇಗೆ ಬಣ್ಣಗಳ ಬಗ್ಗೆ ಆಸಕ್ತಿಯೋ,ಅಂತೆಯೇ ಬಣ್ಣಗಳಿಗೂ ಈತನನ್ನು ಕಂಡರೆ ಏನೋ ಒಂಥರದ ವಿಶೇಷ ಒಲವು ಅನಿಸುತ್ತದೆ.ಯಾಕೆಂದರೆ ಆತ ಗೀಚಿದ ಪ್ರತಿ ರೇಖೆಯೂ ಚಿತ್ರವಾಗುತ್ತಿತ್ತು.ಇಟ್ಟ ಬಣ್ಣದ ಪ್ರತೀ ಚುಕ್ಕಿಯೂ ಅರ್ಥ ಕಟ್ಟಿಕೊಡುತ್ತಿತ್ತು.ಆತ,ಆತನ ಕಾಯಕದಲ್ಲಿ ಅಭಿನವನಷ್ಟೇ ಅಲ್ಲ,’ಅಭಿಜಾತ’ನೂ ಆಗಿಹೋಗಿದ್ದ...

                                                        ** ** **                        

          ತಾನೊಬ್ಬ ನಿಷ್ಪ್ರಯೋಜಕ ಎಂದು ತನ್ನಲ್ಲೇ ತಾನು ತಾನಾಗಿಯೇ ಸುಮ್ಮನೆ ಯೋಚಿಸುತ್ತಿರುವಾಗ..ಇಲ್ಲ,ನನ್ನೊಳಗೊಂದು ಶಕ್ತಿಯಿದೆ,ನಾನು ನಿಷ್ಪ್ರಯೋಜಕನಲ್ಲ,ನನಗೂ ಯಾವುದೋ ಒಂದು ಮೌಲ್ಯವಿದೆ;ಆದರೆ,ನನ್ನ ಮೌಲ್ಯ ಈ ಜಗತ್ತಿಗೆ ತಿಳೀತಾ ಇಲ್ಲ.ಆಸ್ವಾದಿಸುವ ಕಣ್ಣುಗಳು,ಜೊತೆಜೊತೆಗೇ ಸ್ಪಂದಿಸುವ ಹೃದಯವಿದ್ದರೆ ತಾನೇ ಅಸ್ವಾದನೆ ಸಾಧ್ಯ!ನಿಜ,ನನ್ನತನವನ್ನು ಮೊದಲು ನಾನೇ ಅರ್ಥೈಸಿಕೊಳ್ಳಬೇಕು,ಅಲ್ಲವಾ?..ಎಂದು ಆಲೋಚಿಸುತ್ತಾ ಅಭಿನವ್ ನಿಂತಿದ್ದ.ಜೋರಾಗಿ ಮಳೆ ಸುರಿಯುತ್ತಿದೆ.ಶ್ರಾವಣದ ಸಂಜೆಯ ಮಳೆಯ ಕಂಪು ಹಿತವಾಗೇನೋ ಇತ್ತು;ಆದರೆ,ಅಷ್ಟೇ ಬಿರುಸಾಗಿಯೂ ಇತ್ತು.ಮಳೆಯ ರಭಸ ಕ್ಷಣದಿಂದ ಕ್ಷಣಕ್ಕೆ ಏರುಪೇರಾಗುತ್ತಲಿತ್ತು.ಹಜಾರದಲ್ಲಿ ಹಾಗೇ ತಿರುಗಾಡುತ್ತಾ,ಅಭಿನವ್ ಕಿಟಕಿಯ ಬಳಿ ಬಂದ.ಸೂಕ್ಷ್ಮವಾಗಿ ಆಲಿಸತೊಡಗಿದ...ಗೆಜ್ಜೆಯ ದನಿ..ಧೋ ಧೋ ಎಂದು ಸುರಿವ ಮಳೆಯ ಆರ್ಭಟದಲ್ಲಿ ನೂಪುರಸ್ವರನಾದ ಈತನ ಕಿವಿಯ ಬಳಿ ಸುಳಿಯಲೇ ಇಲ್ಲವಾಗಿತ್ತು.ಆದರೆ,ಈಗ..ಆಲಿಸತೊಡಗಿದ..ಗೆಜ್ಜೆಯ ದನಿಯೇ ಮಧುರ,ಆಹಾ!ತಾಳಕ್ಕೆ ತಕ್ಕಂತೆ ಬೀಳುತ್ತಿದ್ದ ಹೆಜ್ಜೆಗಳಿಗನುಗುಣವಾಗಿ ಗೆಜ್ಜೆ ಲಜ್ಜೆಯಿಂದ ಬಳುಕುತ್ತಿತ್ತು.ಕುಲುಕುಲು ಕುಲುಕುವಿಕೆಯಿಂದ ನಾದ ನಿನಾದ ಪಸರಿಸುತ್ತಿತ್ತು.ನಿಧಾನವಾಗಿ ಕಣ್ಣುಮುಚ್ಚಿಕೊಂಡು ಆಲಿಸತೊಡಗಿದ.ಇದ್ದಕ್ಕಿದ್ದಂತೆ,ಯಾರಿರಬಹುದು ನರ್ತಿಸುತ್ತಿರುವವರು,ಎಂಬ ಆಲೋಚನೆ ಆತನನ್ನು ಪ್ರಶ್ನಿಸತೊಡಗಿತು.ಕಣ್ತೆರೆದು,ಕಿಟಕಿಯಲ್ಲಿ ಇಣುಕಿ ಹುಡುಕತೊಡಗಿದ..ಈ ಹುಚ್ಚು ಮಳೆಯಿಲ್ಲಿ ವಿಚಲಿತಗೊಂಡಿರೆ,ನಾಚಿ ನುಲಿಯುವ ಗೆಜ್ಜೆಗಳ ಪರಿಯೇನು!

                                                        ** ** **

           ಕಿಟಕಿಯಲ್ಲಿ ಇಣುಕುತ್ತಿದ್ದಾನೆ.ಸದಾ ಹೊಸತನಕ್ಕಾಗಿ ಹಂಬಲಿಸುವ ಆತನ ಕಂಗಳು ಹುಡುಕುತ್ತಿವೆ ಹೊಸತೇನನ್ನೋ!ಅದೊಂದು ಕತ್ತಲೆ ತುಂಬಿದ ಕೋಣೆ.ಒಂದು ಪುಟ್ಟ ಹಣತೆಯನ್ನು ಹಚ್ಚಿಟ್ಟಿದ್ದಾರೆ.ಆ ಪುಟ್ಟ ಹಣತೆಯೇ ಕೋಣೆಯ ತುಂಬ ಬೆಳಕು ಬೀರುವ ಪ್ರಯತ್ನವನ್ನು ಮಾಡುತ್ತಿದೆ.ಆದರೆ,ಇಡೀ ಜಗತ್ತಿಗೇ ಬೆಳಕು ಕೊಡಲು ಸೂರ್ಯನಿಗೇ ಸಾಧ್ಯವಾಗದ್ದು,ಈ ಪುಟ್ಟ ಹಣತೆಗೆ ಸಾಧ್ಯವೇ?ಯಾಕೆಂದರೆ,ಆ ಕೋಣೆಯೇ ಆ ಹಣತೆಯ ಪ್ರಪಂಚ ಅಲ್ಲವೇ?ಮಧುರ ಗಂಭೀರ ಶಾಂತ ವಾತಾವರಣದಲ್ಲಿ ಚಿನ್ನದ ಹೊಳಪಂತೆ ಬೆಳಕಿನ ಕಿರಣಗಳು ಗೋಡೆಗಳಲ್ಲಿ ಫಲಿಸುತ್ತಿವೆ.ಕತ್ತಲು ಬೆಳಕಿನ ಸಂಚಲನದಾಟದಲ್ಲಿ ಗೆಜ್ಜೆಯ ದನಿಯೇ ಸಾಕ್ಷಿಯಾಗಿದೆ.ಚಿನ್ನದ ನೀರಲ್ಲಿ ತೋಯ್ದಿದೆಯೋ ಎಂಬಂತಿಹ ನಟರಾಜನ ವಿಗ್ರಹ..ಆಹಾ!ಅದೆಂಥ ದೈವಕಳೆ!..ಆ ನಟರಾಜನ ಭಂಗಿಯೋ,ಅದೆಂಥ ಮೋಹಕ!..ಎಲ್ಲಿ ಎಲ್ಲಿ,ಗೆಜ್ಜೆ ಕಟ್ಟಿಹ ಪಾದಗಳೆಲ್ಲಿ?ಹುಡುಕುತ್ತಿದ್ದಾನೆ ಹಣಕಿ,ಹಣಕಿ..ಒಂದೆಡೆ ಏನೋ ಒಂಥರದ ದಿಗಿಲು,ಇನ್ನೊಂದೆಡೆ ಯಾರೆಂದು ನೋಡುವ ಸಹಜ ಕುತೂಹಲ!..ಯಾರೋ ಮನಸ್ಫೂರ್ತಿಯಾಗಿ ನರ್ತಿಸುತ್ತಿದ್ದಾರೆಂಬುದು ಈಗ ಸ್ಪಷ್ಟವಾಗತೊಡಗಿತ್ತು.ಗೆಜ್ಜೆಯ ದನಿ ಹತ್ತಿರವಾದಂತೆ ಅನಿಸತು.ನೋಡುತ್ತಿದ್ದಾನೆ..ಒಬ್ಬಳು ಯುವತಿ ಹೆಜ್ಜೆಹಾಕುತ್ತಿದ್ದಾಳೆ;ಗೆಜ್ಜೆಯ ಲಯ ತಪ್ಪದಂತೆ!

                                                        ** ** **

           ಹಳದಿ ಬಣ್ಣದ ಭರತನಾಟ್ಯದ ವಸ್ತ್ರವನ್ನು ಧರಿಸಿದ್ದಾಳೆ.ದೀಪದ ಬೆಳಕು ಆ ವಸ್ತ್ರದ ಮೇಲೆ ಬಿದ್ದು,ಇನ್ನಷ್ಟು ಶೋಭಾಯಮಾನವಾಗಿ ಕಾಣುತ್ತಿದೆ.ಡಾಬು,ತೋಳ್ಬಂದಿಗಳು ಥಳಥಳಿಸುತ್ತಿವೆ.ಕಿವಿಯೋಲೆಗಳೂ ಕೂಡ ನಾದಕ್ಕೆ ಮಿಡಿಯುತ್ತಿವೆ.ಅವಳು ಹಾಕುತ್ತಿರುವ ಕೈಯ ಪ್ರತಿ ಮುದ್ರೆಯಲ್ಲಿಯೂ ಪ್ರಭುತ್ವವಿದೆ.ಇಡುವ ಪ್ರತಿ ಹೆಜ್ಜೆಯಲ್ಲಿಯೂ ದಿಟ್ಟತೆಯಿದೆ;ಇದು ನನ್ನದು ಎಂಬ ಸ್ಪಷ್ಟ ಆತ್ಮವಿಶ್ವಾಸವಿದೆ.ಪರಿಪೂರ್ಣತೆಯೆಡೆಗಿನ ಪಯಣದ ಎಲ್ಲ ಕುರುಹುಗಳು ಅಲ್ಲಿವೆ.ಆತನಿಗೇ ತಿಳಿಯದಂತೆ ಏನೋ ಒಂದು ಉತ್ಸಾಹ ಆತನಲ್ಲಿ ಚಿಗುರತೊಡಗಿತ್ತು.ನೃತ್ಯದ ಪರಿಚಯ ಆತನಿಗೆ ಅಷ್ಟೇನೂ ಇಲ್ಲದಿದ್ದರೂ,ಯಾವುದೋ ಒಂದು ತಿಳಿಯದ ಅಮೂರ್ತ ಸಂಗತಿಯೊಂದು ಆತನನ್ನು ಪ್ರೇರೇಪಿಸುತ್ತಲಿತ್ತು.ಆತ ತಡಮಾಡಲಿಲ್ಲ.ಕಾಗದಕ್ಕಾಗಿ ಅತ್ತ ಇತ್ತ ಹುಡುಕಿದ.ಅವಳ ಚಿತ್ರವನ್ನು ಬರೆಯಲೇಬೇಕೆಂಬ ಅದಮ್ಯ ಆಕಾಂಕ್ಷೆ..ಎಲ್ಲಿ,ಎಲ್ಲಿಂದ ತರಲಿ ಕಾಗದವನ್ನು?ಕುಂಚವನ್ನು,ಮೆರಗಿನ,ಬೆರಗಿನ ಬಣ್ಣವನ್ನು?ತಡಕಾಡುತ್ತಿದ್ದಾನೆ..ಥಟ್ಟನೆ ನೆನಪಾಯಿತು.ತನ್ನದೇ ಪ್ರಶಸ್ತಿ ಪತ್ರವಿದೆಯಲ್ಲಾ!ಆ ಪ್ರಶಸ್ತಿ ಪತ್ರದ ಹಿಂದಿನ ಭಾಗ ಬಿಳಿಯಾಗಿದೆ.ಅದು ಸಾಕು,ಈ ಅಪೂರ್ವ ದೃಶ್ಯಕಾವ್ಯವನ್ನು ಸೆರೆಹಿಡಿಯಲಿಕ್ಕೆ!ತನ್ನ ಕಿಸೆಯಲ್ಲಿದ್ದ ಲೇಖನಿಯನ್ನು ತೆಗೆದು ಕಿಟಕಿಯೆಡೆಗೆ ಓಡಿದ.ಅವಳು ನರ್ತಿಸುತ್ತಲೇ ಇದ್ದಾಳೆ.ಒಂದು ಕಾಲು ಮೇಲೆತ್ತಿ,ಒಂದು ಕೈಯ ಮೇಲೆ ಇನ್ನೊಂದು ಕೈಯಿಟ್ಟು,ನಟರಾಜನ ವಿಗ್ರಹದ ನಿಲುವಿನಂತೆಯೇ ಕಣ್ಮುಚ್ಚಿ ನಿಂತಿದ್ದಾಳೆ;ಅಭಿನವನಿಗೆ ಚಿತ್ರರೂಪದರ್ಶಿಯೋ ಎಂಬಂತೆ!..ಅವಳನ್ನೇ ತದೇಕಚಿತ್ತದಿಂದ ಆತ ನೋಡತೊಡಗಿದ.ಆ ರೂಪವನ್ನು ಮನದಲ್ಲಿ ತುಂಬಿಕೊಂಡ.ಸರಸರನೆ ಬಿಳಿಯ ಕಾಗದದಲ್ಲಿ ರೇಖೆಗಳನ್ನೆಳೆಯತೊಡಗಿದ.ಆಕೆಯ ರೇಖಾಚಿತ್ರ ಕೇವಲ ಐದಾರು ನಿಮಿಷಗಳಲ್ಲಿ ಸಿದ್ಧವಾಯಿತು.ಮತ್ತೊಮ್ಮೆ ಆ ಭಂಗಿಯಲ್ಲಿ ನಿಂತ ಅವಳನ್ನು ಅವಲೋಕಿಸಿದ..ನೀಳವಾದ ಜಡೆ,ಕಪ್ಪಾದ ದಟ್ಟನೆಯ ಕೂದಲು,ಚೆಂದದ ಹಣೆ,ತೆಳ್ಳನೆಯ ಹುಬ್ಬುಗಳು..ಮುಚ್ಚಿರುವ ಕಣ್ರೆಪ್ಪೆಗಳಲ್ಲೂ,ಹಣೆಯ ಮುಂಬದಿಗೆ ತೂಗುಯ್ಯಾಲೆಯಾಡುತ್ತಿರುವ ಮುಂಗುರುಳಿನಲ್ಲೂ ಸೌಂದರ್ಯವಿತ್ತು.ಆ ಮುಖಕ್ಕೆ ಒಪ್ಪುವಂಥ ಎಳಸು ಎಳಸಾದ ಮೂಗು.ಬಿರಿದ ಚೆಂಗುಲಾಬಿಯಂಥ ತುಟಿಗಳು..ಮುದ್ದಾದ ಗಲ್ಲ,ಸಣ್ಣ ನಡು,ತುಂಬು ತೊಡೆಗಳು..ಇದೆ ಎಲ್ಲವೂ ಇದೆ..ಆದರೆ,ಆತನಿಗೆ ಇದವುದರ ಬಗ್ಗೆಯೂ ಪರಿವೆಯೇ ಇಲ್ಲ.ಅವಳು ಈಗ ಕಣ್ಣು ತೆರೆದು ನಿಂತಿದ್ದಾಳೆ..ಅವನಿಗೆ ಕಾಣುತ್ತಿರುವುದೀಗ ಆ ಮೊಗದಲ್ಲಿನ ಎಂದೂ ಮಾಸದಂತಿಹ ಆ ಮುಗ್ಧತೆ,ಸ್ಫುರಿಸುತ್ತಿರುವ ಸೌಂದರ್ಯಕ್ಕೆ ಮೆರಗು ಕೊಡುತ್ತಿರುವ ಮಂದಹಾಸ,ಜೊತೆಜೊತೆಗೇ ಕಣ್ರೆಪ್ಪೆಗಳ ನಾಜೂಕು..ಅದೆಂಥ ಆನಂದವಿದೆ ಅವಳ ಮೊಗದಲ್ಲಿ!ನಿಜಕ್ಕೂ ಇಂತಹ ಆನಂದವನ್ನು ಹೊಂದಲು ಸಾಧ್ಯಾನಾ?ಅಥವಾ ಇದೆಲ್ಲಾ ನನ್ನ ಭ್ರಮಾಲೋಕದ ಸ್ವಪ್ನ ತಪಸ್ಸಿನ ತಮಸ್ಸೋ!ಅಪೂರ್ವ ಆನಂದ,ಹಿಂದೆಂದೂ ಯಾರ ಮೊಗದಲ್ಲೂ ಕಂಡಿರದ ಪ್ರಸನ್ನತೆ,ಪ್ರಶಾಂತತೆ...ಈಗ ಹೊರಗಿನ ಮಳೆಯೂ ಶಾಂತವಾಗಿತ್ತು.ನೀರವ ಮೌನದಲ್ಲೂ ಇಂತಹ ಸೌಂದರ್ಯವಿದೆಯೇ?ನೀರಸವೆಂದುಕೊಂಡ ಮೌನದ ಪರಿಧಿಯಲ್ಲೂ ರಸಕಾವ್ಯ ಸೌರಭದ ಪರ್ವವಿದೆಯೇ?ಅರ್ಥವಾಗುತ್ತಲೇ ಇಲ್ಲವಲ್ಲ ಈ ಮೌನದ ಮಂದ ಮಂದ ಚೆಂದ ಸಂವಾದ!ಅರ್ಥವಿಲ್ಲದ ವ್ಯರ್ಥ ಕ್ಷಣವೆಂದುಕೊಳ್ಳಬೇಕಾಗಿದ್ದ ಕ್ಷಣವೂ ಕೂಡ ಬದುಕಿನ ಸುಪ್ರಭಾತವಾಗುವಂತೆ ಸನ್ನಿಹಿತವಾಗುತ್ತಿದೆಯಲ್ಲಾ!ಸರಿದ ಸದ್ದಿನ ಸುದ್ದಿಯ ಸರಹದ್ದಿನಲ್ಲಿ ಅಭೂತಪೂರ್ವ ಕ್ಷಣಗಳೇ ಬೇಲಿಯ ಗೂಟಗಳಾಗಿವೆಯಲ್ಲಾ!..ಎಂದು ಯೋಚಿಸುತ್ತಾ ಆತ ನಿಧಾನವಾಗಿ ಮನೆಯತ್ತ ಹೆಜ್ಜೆ ಹಾಕಿದ.ಕೈಯಲ್ಲಿ ಹಿಡಿದ ಅವಳ ಚಿತ್ರ ಹಾಗೇ ಕೈಯಲ್ಲೇ ಇತ್ತು..ಆದರೆ,ಇತ್ತ ಆತ ಸ್ಪರ್ಧೆಯಲ್ಲಿ ಗೆದ್ದ ಪ್ರಶಸ್ತಿ ಸ್ಮರಣಿಕೆ ಮಾತ್ರ ಆತನ ಬರವನ್ನು ಕಾಯ್ತಾ,ಅವಳ ಮನೆಯ ಹಜಾರದಲ್ಲಿ ಕುಳಿತಿತ್ತು..ಅದೂ ಮೌನವಾಗಿ,ತಾನೂ ಮೌನದರಗಿಣಿಯೆಂಬಂತೆ!...

                                                          ** ** **

             ಅಭಿನವ್ ಮೆಲ್ಲಮೆಲ್ಲನೆ ಹೆಜ್ಜೆಹಾಕುತ್ತಾ ಮನೆ ಸೇರಿದನು.ಮನೆ ಸೇರುತ್ತಲೇ ಆತನ ಅಮ್ಮ ಎದುರಾದಳು.ಅಮ್ಮಾ..ಅಮ್ಮಾ..ಸ್ಪರ್ಧೆಯಲ್ಲಿ ನಾನು ಪ್ರಥಮ ಬಹುಮಾನ ಪಡೆದುಕೊಂಡೆ..ಆಶೀರ್ವದಿಸಮ್ಮಾ..ಎನ್ನುತ್ತಾ ಅವಳ ಕಾಲಿಗೆರಗಿದನು.ತನಗಿಂತಲೂ ಎತ್ತರಕ್ಕೆ ಬೆಳೆದ ಮಗ,ಕಾಲಿಗೆರಗಿದ್ದನ್ನು ಕಂಡು ಅವಳ ಹೃದಯ ತುಂಬಿಬಂತು.ಊರಿಗೆ ಅರಸನಾದರೂ ತಾಯಿಗೆ ಮಗನೇ ಅಲ್ಲವೇ ಎಂಬುದನ್ನು ನೆನಪಿಸಿಕೊಳ್ಳುತ್ತಾ ಆಕೆ ಆತನನ್ನು ಎಬ್ಬಿಸುತ್ತಾಳೆ.ಏಳಪ್ಪಾ ಏಳು..ಖುಷಿಯಾಯ್ತಪ್ಪ,ಒಳ್ಳೇದಾಗ್ಲಿ..ಅಂತ ಸ್ವಲ್ಪ ಬೇಸರದಲ್ಲೇ ಹೇಳಿದಳು.ಯಾಕಮ್ಮಾ,ನಾನ್ ಗೆದ್ದುಬಂದಿದ್ದೀನಿ ಅಂದ್ರೂ ನಿನಗೆ ಸಂತಸ ಆಗ್ತಾ ಇಲ್ವಾ?ಏನಮ್ಮಾ,ನೀನು?!ಆತ ಪ್ರಶ್ನಿಸುತ್ತಾನೆ.ಅಭಿ..ನನ್ ಕಂದಾ..ನೀನು ಗೆದ್ದಿರೋದು ಸಂತೋಷಾನೇ ಕಣಪ್ಪಾ..ಆದರೆ ಪುಟ್ಟಾ,ಇದರಿಂದ ಹೊಟ್ಟೆಯೆಂಬ ಹೊಟ್ಟೆಗೆ ಹಿಟ್ಟು ಬೀಳಲ್ಲ ಅಲ್ಲವೇನಪ್ಪಾ?ಬಾಡಿಗೆಯ ಪುಟ್ಟ ಗುಡಿಸಲು ಅಷ್ಟೈಶ್ವರ್ಯಗಳ ಇಂದ್ರಭವನ ಆಗುವುದಿಲ್ಲ,ಅಲ್ಲವೇನಪ್ಪಾ?ಇದರ ಬದಲು,ನೀನು ಬೇರೆ ಏನೋ..ಡಾಕ್ಟರ್ ಅಥವಾ ಎಂಜಿನಿಯರ್,ಅಥವಾ ಓದಿ ಅತ್ತ್ಯುತ್ತಮ ಉದ್ಯೋಗದಲ್ಲಿದ್ದಿದ್ದರೆ,ಸುಖದ ಜೀವನ ನಮ್ಮದಾಗ್ತಾ ಇತ್ತು ಅಲ್ಲವೇನಪ್ಪಾ?ಸ್ವಲ್ಪ ಯೋಚಿಸು..ಎಂದು ಸ್ವಲ್ಪ ಅಳುಕುತ್ತಲೇ ನುಡಿಯುತ್ತಾಳೆ.ಅಮ್ಮಾ,ತಪ್ಪಾಗಿ ಅರ್ಥೈಸಿಕೊಳ್ಳಬೇಡ..ನಿಜ,ದುಡಿವ ಯಂತ್ರವಾಗಿ,ಬರಡು ಹೃದಯದ ವಾರಸುದಾರನಾಗಿ,ಹಣವೆಂಬ ಹಣಕ್ಕಾಗಿ,ಹೆಣದಂತೆ ಬದುಕಬಹುದಿತ್ತು..ಅದನ್ನೇ ನೀವು ಸುಖವೆಂದು ಕರೆಯುತ್ತಿರುವುದು..ಸುಖದ ಮರೀಚಿಕೆಯ ಹುಡುಕಾಟದಲ್ಲಿ ಪ್ರತಿನಿತ್ಯ ನರಳುವುದಕ್ಕಿಂತ,ನಮ್ಮಲ್ಲೇ ಇರುವ ಸಂತೋಷವನ್ನು ಹುಡುಕಿಕೊಂಡು,ಇದ್ದುದರಲ್ಲೇ ಸುಖಪಡಬಹುದು,ಅಲ್ಲವೇ?ನೀನು ಹೇಳಿದಂತೆ ಆಗಿದ್ದರೆ,ನಾನು ಮನಸ್ಸಿಲ್ಲದ ಮನಸ್ಸಿನಿಂದ ಸ್ವತಂತ್ರವಲ್ಲದ ಯಂತ್ರವಾಗಿ ಅತಂತ್ರವಾಗಿರಬೇಕಾಗಿತ್ತು...ಅಮ್ಮಾ,ಪ್ರೀತಿ ತುಂಬಿಹ ಪ್ರತೀ ಪುಟ್ಟ ಗೂಡೂ ಅರಮನೆಯೇ ಅಲ್ಲವೇನಮ್ಮಾ?ಹೊಟ್ಟೆಯನ್ನು ಕೊಟ್ಟವನೇ ತಟ್ಟೆಗೂ ಅನ್ನವೆಂಬ ಅನ್ನವನ್ನು ಕೊಡುತ್ತಾನೆ ಎನ್ನುವುದು ಅಸತ್ಯವೆನ್ನುತ್ತೀಯೇನಮ್ಮಾ?ಪುಟ್ಟ ಗುಬ್ಬಿ,ಬಿದ್ದ ಬಿದ್ದ ಕೂಳು ತಿನ್ನುವ ಕಾಗೆ ಇವೆಲ್ಲವೂ ಯಾವ ಡಾಕ್ಟರ್ ಅಥವಾ ಎಂಜಿನಿಯರುಗಳಲ್ಲವಲ್ಲವೇನಮ್ಮಾ!ಇದೊಂದು ಮೊಂಡುವಾದ ಅನ್ನಿಸಬಹುದಮ್ಮಾ,ಆದರೆ ದಾರಿಯಿಲ್ಲಮ್ಮಾ,ಬೇರೆ ದಾರಿಯೇ ಇಲ್ಲವಮ್ಮಾ,ನನ್ನನ್ನು ನಾನು ಸಮರ್ಥಿಸಿಕೊಳ್ಳಲೇಬೇಕಾಗಿದೆ.ಯಾಕಂದ್ರೆ ಕಲೆಗೆ ನುಡಿಯುವ ಒಂದೊಂದು ತಾತ್ಸಾರದ ಚುಚ್ಚುಮಾತಿಗೂ ನನ್ನ ಮನಸೆಂಬ ಮನಸು ಉಸಿರು ಹಿಸುಕಿದಂತಾಗಿ ನಲುಗುತ್ತಮ್ಮಾ...ನನ್ನೊಳಗೆ ನಾನಿಲ್ಲದೇ,ಇಷ್ಟವಿಲ್ಲದ್ದಕ್ಕಾಗಿ ಪ್ರತಿಷ್ಠೆಯ ಬದುಕು ನಡೆಸುವುದು ನನ್ನಿಂದ ಸಾಧ್ಯವಾಗುತ್ತಿಲ್ಲವಮ್ಮಾ..ಕ್ಷಮಿಸಿಬಿಡು..ಮುಗ್ಧವಾಗಿ ನುಡಿಯುತ್ತಾನೆ.ಆತನ ಮಾತಿನಿಂದ ತಾಯಿಗೆ ಅಳು ಉಕ್ಕಿಬರುತ್ತದೆ.ಆದರೆ ಮಗನೆದುರು ತೋರಿಸಿಕೊಳ್ಳಲಾಗದೇ,ಮುಖ ತಿರುಗಿಸಿ ನಿಲ್ಲುತ್ತಾಳೆ.ನಿಧಾನವಾಗಿ ಹೇಳುತ್ತಾಳೆ..ಪುಟ್ಟಾ..ನೀನು ಬಿಡಿಸುವ ಪ್ರತೀ ಚಿತ್ರವೂ ಬಣ್ಣಗಳಲ್ಲಿ ಮಿಂದೇಳುತ್ತದೆ.ನಿನ್ನ ಚಿತ್ರದಲ್ಲಿ ಬರುವ ಬೊಂಬೆಗಳೂ ಬಣ್ಣಬಣ್ಣದ ವಸ್ತ್ರ ಧರಿಸಿ ನಲಿಯುತ್ತವೆ..ನೀನು ಚಿತ್ರಿಸುವ ಪ್ರತೀ ಚಿತ್ರವೂ ಹೊಸತನದಿಂದ ಕೂಡಿ ಗರ್ವದಿಂದ ಬೀಗುತ್ತದೆ..ನಿರ್ಜೀವ ರೇಖೆಗಳೂ ಜೀವಂತ ಚಿತ್ರದಂತೆ ಬಣ್ಣಬಣ್ಣದ ಬಟ್ಟೆ ತೊಟ್ಟು ಬೀಗುತ್ತಿರುತ್ತವೆ...ಆದರೆ ಇಲ್ಲಿ,ಕಟು ವಾಸ್ತವ ಪ್ರಪಂಚದಲ್ಲಿ,ನಿನ್ನ ತಾಯಿ ನಾನು,ಮಾನ ಮುಚ್ಚುವ ಬಟ್ಟೆಗಾಗಿ ಕ್ಷಣಕ್ಷಣ ಪರಿತಪಿಸುತ್ತಿದ್ದೇನೆ...ತೇಪೆ ಹಚ್ಚಿದ ಚಿಂದಿ ಬಟ್ಟೆಯೇ ಹಬ್ಬದ ಸೀರೆಯಾಗುತ್ತದೆ ನನಗೆ!ದಾರಿಹೋಕರ,ಕಾಮುಕರ ಕಾಮದ ನೋಟಕ್ಕೆ ಕೊರಗಿ ಕೊರಗಿ ಪ್ರತೀ ಕ್ಷಣ ಚಿತ್ರಹಿಂಸೆಯನುಭವಿಸುತ್ತಾ ಬದುಕುತ್ತಿದ್ದೀನಪ್ಪಾ...ಹೇಳಿಕೊಳ್ಳಲೂ ಆಗದೇ,ಹೇಳದೆಯೇ ಇರಲೂ ಆಗದೇ,ಬೇಗುದಿಯಲ್ಲೇ ಹೊರಳಾಡುತ್ತಿದ್ದೀನಿ ಕಣೋ,ಒಮ್ಮೊಮ್ಮೆ ಅನಿಸುತ್ತದೆ ನೀನು ಬಿಡಿಸುವ ಚಿತ್ರವೇ ಆಗಿಬಿಡಬೇಕೆಂದು!..ಎನ್ನುತ್ತಾ ಆತನನ್ನು ನೋಡಿದರು.ಆತನ ಕಂಗಳಿಂದ ಎರಡು ಹನಿ ಕಣ್ಣೀರು ಕೆನ್ನೆಗಳ ಮೇಲೆ ಹಾಗೇ ಜಾರಿಹೋಯಿತು;ಮತ್ತೆ ನಿನ್ನನ್ನು ಸೇರುವುದಿಲ್ಲವೆಂಬಂತೆ!ಅಮ್ಮಾ..ಎಂದು ನುಡಿದವನೇ,ತನ್ನ ಪುಟ್ಟ ಕೋಣೆಯೊಳಗೆ ಓಡಿದ.ಅದು ಅವನದೇ ಪ್ರಪಂಚ...ಇತ್ತ ಅಮ್ಮ,ಆತ ಅತ್ತ ಹೋದ ಕೂಡಲೇ,ದುಃಖವನ್ನು ತಡೆಯಲಾರದೇ ಬಿಕ್ಕಳಿಸಿ ಅತ್ತಳು..

                                                           ** ** **

            ಅಮ್ಮನಾಡಿದ ಮಾತುಗಳಿಂದ ಬೇಸರದಿ ಓಡಿಬಂದು,ಅಭಿನವ್ ತನ್ನ ಕೋಣೆಯಲ್ಲಿ ಬರೀ ನೆಲದ ಮೇಲೆ ಮಲಗಿ ಯೋಚಿಸತೊಡಗುತ್ತಾನೆ..ಅಮ್ಮಾನಾಡಿದ ಮಾತುಗಳು ನಿಜ..ನಾನು ಕಲ್ಪನೆಯ ವಿಲಾಸದಲ್ಲೇ ಕನಸು ಕಾಣುವವನು...ಆದರೆ,ಅಪ್ಪ ಅಮ್ಮ ವಾಸ್ತವದ ವಿದ್ಯಮಾನಗಳ ಜಿದ್ದಿನ ಹೋರಾಟದಲ್ಲಿ ಹೋರುವವರು..ನನ್ನದು ಕೇವಲ ಕನಸುಗಳೊಂದಿಗಿನ ಸರಸ ಮಾತ್ರ..ಆದರೆ,ಅವರದು ಬದುಕೆಂಬ ಬದುಕಿನ ಭೀಕರತೆಯೊಂದಿಗಿನ ಭಯಂಕರ ಸೆಣಸು..ಅಲ್ಲವೇ?ಕಲೆ ನನ್ನನ್ನೇ ಕೊಲ್ಲುತ್ತಾ ಇದೆಯಾ?...ಎನ್ನುತ್ತಾ,ತಾನು ಬಿಡಿಸಿಕೊಂಡು ಬಂದಿದ್ದ ಅವಳ ಚಿತ್ರವನ್ನು ನೋಡತೊಡಗಿದನು.ಅವಳ ಮುಖದಲ್ಲಿನ ಮಂದಹಾಸ,ಮತ್ತೆ ಆತನನ್ನು,ಕಲೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಂತೆ ಮಾಡುತ್ತಿದೆ..ಎಲ್ಲವನ್ನೂ ಮರೆಯುತ್ತಾನೆ..ಈಗ ಕೇವಲ ಅವಳ ಚಿತ್ರದ್ದೇ ಯೋಚನೆ..ಹೌದು,ಚಿತ್ರವನ್ನು ಪೂರ್ತಿಗೊಳಿಸಬೇಕು.ರೇಖೆಯ ಅಂಚು ಕೂಡ ಬಣ್ಣದ ಪ್ರಪಂಚವಾಗಬೇಕಿದೆ...ಎಂದು ಅಂದುಕೊಳ್ಳುತ್ತಾ,ಅವಳ ದೊಡ್ಡದಾದ ಚಿತ್ರವನ್ನು ಬಿಡಿಸಲು ತೊಡಗುತ್ತಾನೆ.ರಾತ್ರಿಯಿಡೀ ಅವಳ ಚಿತ್ರದ ಕೆಲಸವೇ!..ಆದರೆ,ಅವಳ ಮನೆಯಲ್ಲಿ ಬಿಟ್ಟುಬಂದ ಪ್ರಶಸ್ತಿ ಸ್ಮರಣಿಕೆಯ ನೆನಪು ಎಳ್ಳಷ್ಟೂ ಆತನಿಗೆ ಆಗಲೇ ಇಲ್ಲ..ಅಲ್ಲೀಗ ಶ್ರಾವಣದ ತುಂಬು ಸಂಜೆಯ ಖಾಲಿ ಏಕಾಂತ..ಅದನ್ನು ತುಂಬಲೆಂಬಂತೆ ಘಮಘಮಿಸುವ ಪರಿಮಳದ ಅವಳ ನೆನಪುಗಳ ಗುನುಗುನಿಸುವ ಸಂಗೀತ...

                                                           ** ** **

            ಬೆಳಕು ಹರಿಯಿತು..ಹಕ್ಕಿಪಿಕ್ಕಿಗಳ ಕಲರವದಿಂದ ಭೂಮಿ ಗೆಲುವಾಯಿತು...ಮುಂಜಾನೆಯ ಎಳೆಬಿಸಿಲ ಕಿರಣಗಳು ಮಜವಾಗಿದ್ದವು..ನಿತ್ಯಕರ್ಮಗಳನ್ನು ಮುಗಿಸಿಕೊಂಡು,ಸ್ನಾನ ಮಾಡಿದ ಅಭಿನವ್,ಮತ್ತೆ ಚಿತ್ರದ ಬಗ್ಗೆ ಯೋಚಿಸಲಾರಂಭಿಸಿದ.ಹೌದು ಚಿತ್ರವನ್ನು ಪೂರ್ಣಗೊಳಿಸಬೇಕು..ಎಂದುಕೊಳ್ಳುತ್ತಾ,ತನ್ನ ಕೋಣೆಗೆ ಹೋಗಿ,ಅರ್ಧಂಬರ್ಧವಾಗಿದ್ದ ಚಿತ್ರವನ್ನೂ,ಚಿತ್ರ ಬಿಡಿಸಲು ಬೇಕಾದ ಬಣ್ಣ,ಕುಂಚಗಳೆಲ್ಲವನ್ನೂ ತೆಗೆದುಕೊಂಡು,ಮನೆಯ ಹಿಂಬದಿಗೆ ಇರುವ ಸಣ್ಣ ಕೈತೋಟದೆಡೆಗೆ ಹೋದ.ಅಲ್ಲಿ ಚಿತ್ರ ಬಿಡಿಸಲು ನೆರವಾಗುವ ಉಪಕರಣಕ್ಕೆ ಕಾಗದವನ್ನು ಅಂಟಿಸಿ,ಚಿತ್ರದ ಉಳಿದ ಭಾಗಕ್ಕೆ ಬಣ್ಣ ಹಚ್ಚಲಾರಂಭಿಸಿದ...ಕಣ್ಮುಚ್ಚಿ ಸ್ವಲ್ಪ ಹೊತ್ತು ನಿನ್ನೆ ಕಂಡ ಆ ದೃಶ್ಯವನ್ನು ಮತ್ತೆ ನೆನಪಿಸಿಕೊಂಡ...ಆ ದೃಶ್ಯ ಆತನ ಮನದಲ್ಲಿ ಅಚ್ಚೊತ್ತಿತ್ತು.ಚಿತ್ರಿಸತೊಡಗಿದ...ಚಿತ್ರಿಸುತ್ತಾ ಚಿತ್ರಿಸುತ್ತಾ ಅವಳು ಆತನನ್ನು ಸಂಪೂರ್ಣವಾಗಿ ಆವರಿಸಿಕೊಳ್ಳತೊಡಗಿದಳು.ಅವಳಲ್ಲಿ ಏನೋ ಒಂದು ಅಪರೂಪದ ವಿಭಿನ್ನ ಸೌಂದರ್ಯವಿದೆ...ಬಾಹ್ಯ ಸೌಂದರ್ಯವಿದೆ,ನಿಜ..ಆದರೆ,ಅವಳಿಗಿಂತ ಸುಂದರಿಯರನೇಕರನ್ನು ನಾನು ನೋಡಿದ್ದೇನೆ.ಆದರೆ ಅವರ್ಯಾರನ್ನೂ ಚಿತ್ರಿಸಬೇಕೆಂದು ನನಗನಿಸಿದ್ದೇ ಇಲ್ಲ..ನಾನಂದುಕೊಂಡಿದ್ದೆ ನನ್ನ ಬಾಳ ಸಂಗಾತಿಯನ್ನು ಮಾತ್ರ ಚಿತ್ರಿಸಬೇಕೆಂದು!ಆದರೆ ಇಂದು...!?ಎಲ್ಲರಂತಲ್ಲ ಇವಳು ಅಂತ ಅನಿಸುತ್ತಿದೆಯಲ್ಲಾ!ಆತ್ಯಂತಿಕವಾದ ಸೌಂದರ್ಯವೊಂದಿದೆ ಅವಳಲ್ಲಿ;ಅದು ಆಂಗಿಕ ಸೌಂದರ್ಯಕ್ಕಿಂತ ಸಮುನ್ನತವಾಗಿದೆ!ಅವಳ ತೆಳ್ಳನೆಯ ದೇಹ ನನ್ನನ್ನು ಮೋಹಿಸುತ್ತಿಲ್ಲ..ಆದರೆ,ಅದರೊಳಗಿನ ಗೇಹ ನನ್ನನ್ನು ಪ್ರೀತಿಸುತ್ತಿದೆಯಲ್ಲಾ...ಅಂತರಂಗದೊಳಗಿನ ಸೌಂದರ್ಯವೊಂದು ಪದೇ ಪದೇ ಸೆಳೆಯುತ್ತಲೇ ಇದೆ ನನ್ನನ್ನು!ಯಾರಿರಬಹುದು ಅವಳು..ನೆನಪಿಸಿಕೊಳ್ಳಲು ಪದರಗಳೊಂದೊಂದನ್ನೇ ಸರಿಸಿ ಸರಿಸಿ,ನೆನಪಿನಾಚೆಗೆ ಇಣುಕತೊಡಗುತ್ತಾನೆ..ಸಾವಿರ ಸಾವಿರ ಸಲ ಅವಳನ್ನು ನೋಡಿದ್ದೇನೆ ಎಂದನಿಸುತ್ತಿದೆಯಲ್ಲಾ!..ಆಕೆ ನರ್ತಿಸುತ್ತಿದ್ದ ಕೋಣೆಯಲ್ಲಿ ಅವಳದೇ ಚಿತ್ರವೊಂದಿತ್ತು...ಅದರ ಕೆಳಗೆ ‘ವಿನೀತಾ’ ಎಂಬ ಮೂರಕ್ಷರದ ಹೆಸರೊಂದು ಅಸ್ಪಷ್ಟವಾಗಿ ಕಂಡಿದ್ದು,ಈತನ ನೆನಪಿನ ಸುರುಳಿಯಿಂದ ಈಚೆ ಇಣುಕತೊಡಗಿತು.ಹೌದು,ಅವಳ ಹೆಸರು‘ವಿನೀತಾ’..ಅವಳು ವಿನೀತಾ ಅಷ್ಟೇ ಅಲ್ಲ,ನನ್ನಿಂದ ಪದೇಪದೇ ಸ್ತುತಿಸಲ್ಪಟ್ಟು,‘ವಿನುತಾ’ಕೂಡ ಆಗಿದ್ದಾಳಲ್ಲವೇ?..ಎಂದು ಅಂದುಕೊಳ್ಳುತ್ತಾ,ತುಟಿಗಳ ಮೇಲೆ ಕಿರುನಗೆ ಲಾಸ್ಯವಾಡುತ್ತಿರುವಾಗಲೇ,ಮತ್ತೆ ಬಣ್ಣ ಹಚ್ಚುವುದರಲ್ಲಿ ತಲ್ಲೀನನಾದ..

                                                       ** ** **

           ವಿನೀತಾ ತನ್ನ ಮನೆಯ ಬಾಗಿಲನ್ನು ತೆರೆದು,ದಿನನಿತ್ಯದಂತೆ ಹಜಾರವನ್ನು ಗುಡಿಸತೊಡಗುತ್ತಾಳೆ.ಪೊರಕೆಯಿಂದ ನೆಲವನ್ನು ಸ್ವಚ್ಛಗೊಳಿಸುತ್ತಿರುವಾಗ ಅವಳು ಗುಡಿಸಿದ ಕಸಗಳೆಲ್ಲವೂ ಅಭಿನವ್ ಬಿಟ್ಟುಹೋಗಿದ್ದ ಸ್ಮರಣಿಕೆಯ ಬುಡವನ್ನು ಮುತ್ತಿಕೊಂಡವು.ಹಾಗೇ ಗುಡಿಸುತ್ತಾ ಗುಡಿಸುತ್ತಾ ಪೊರಕೆಯನ್ನು ಆಚೀಚೆ ಆಡಿಸುವಾಗ ಆ ಗಾಳಿಯ ಹೊಯ್ದಾಟಕ್ಕೆ ಕಸಗಳೆಲ್ಲವೂ ಮತ್ತೆ ಸರಿದುನಿಂತವು;ಕೇವಲ ಅವನ ಹೆಸರು ಮಾತ್ರ ಕಾಣಿಸುವಂತೆ!.."ಅಭಿನವ್"....ಹೆಸರನ್ನು ಕಂಡೊಡನೆಯೇ ಏನೋ ಒಂಥರದ ಸಿಹಿತಲ್ಲಣ..ಆಹ್ಲಾದಕ ತಂಗಾಳಿ ಮುದವಾಗಿ ಅವಳ ಮುಖ ಸವರಿಹೋದಂತೆ ಅನಿಸಿತು.ಹೃದಯದಲ್ಲಿ ಅವರ್ಣನೀಯ ಆನಂದ..ನಿಧಾನವಾಗಿ ಆ ಕಸಗಳೆಲ್ಲವನ್ನೂ ಪೂರ್ತಿ ಬದಿಗೆ ಸರಿಸಿ,ಆ ಸ್ಮರಣಿಕೆಯನ್ನು ಎತ್ತಿಕೊಳ್ಳುತ್ತಾಳೆ.ಆ ಹೆಸರಿನ ಮೇಲೆ ಕೈಯಾಡಿಸುತ್ತಾಳೆ...ಅವನ ಹೆಸರು,ವಿಳಾಸ ಎಲ್ಲ ಇರುವ ಒಂದು ಚೀಟಿಯನ್ನು ಆ ಸ್ಮರಣಿಕೆಗೆ ತೂಗಿಬಿಡಲಾಗಿತ್ತು.ಅದನ್ನು ಓದಿಕೊಂಡು,ಆತನನ್ನು ನೋಡಿ ಸ್ಮರಣಿಕೆಯನ್ನು ಆತನಿಗೆ ಕೊಟ್ಟುಬರಲು ಆತನ ಮನೆಯೆಡೆಗೆ ಹೆಜ್ಜೆಹಾಕಿದಳು.ಬೆಳ್ಳಂಬೆಳಿಗ್ಗೆಯೇ ಬಿಳಿಯ ಮೋಡಗಳು ಆಕೆಗೆ ಕೊಡೆಯಂತೆ ಸಾಲುಸಾಲಾಗಿ ಹರಡಿಕೊಂಡಿದ್ದವು...ಮಧುಮೃದುಲ ತಂಗಾಳಿ ಬಳುಕಿ ಬಳುಕಿ ಚಾಮರವ ಬೀಸುತ್ತಿತ್ತು.ಸರಸರನೆ ಆತನ ಮನೆಯತ್ತ ನಡೆದಳು.

                                                        ** ** **

          ಆತನ ಮನೆಯ ಹತ್ತಿರ ಬಂದಾಗ ಮತ್ತೊಮ್ಮೆ ವಿಳಾಸ ನೋಡಿಕೊಂಡಳು.ಹೌದು,ಅದೇ ವಿಳಾಸ..ಚಪ್ಪಲಿ ಕಳಚಿಟ್ಟು,ಬಾಗಿಲ ಹತ್ತಿರ ಬಂದು,ಮನೆಯ ಬಾಗಿಲು ತಟ್ಟಿದಳು.ಒಬ್ಬರು ಸ್ವಲ್ಪ ವಯಸ್ಸಾದವರು ಹೊರಗೆ ಬಂದರು.ಅವಳನ್ನು ನೋಡುತ್ತಿದ್ದಂತೆಯೇ,ಆಘಾತಗೊಂಡವರಂತೆ ಚಡಪಡಿಸಿದರು.ಸರ್..ಕರೆದಳಾಕೆ.ತಕ್ಷಣ ಸಾವರಿಸಿಕೊಂಡು,ಯಾರು,ಯಾರಮ್ಮಾ ನೀನು?ಯಾರ್ ಬೇಕಾಗಿತ್ತು?..ಎಂದು ಪ್ರಶ್ನಿಸಿದರು.ಸರ್,ಅಭಿನವ್..ಇದ್ದಾರಾ?..ಈಗ ಅವರು ಗರಬಡಿದವರಂತೆ ನಿಂತುಬಿಟ್ಟರು.ಯಾರು..ಯಾರು,ಅಭಿನವ್ ಬೇಕಾ?ಏಕೆ?ತೊದಲುತ್ತಾ ಪ್ರಶ್ನಿಸಿದರು ಅಭಿನವ್ ತಂದೆ.ಏನಿಲ್ಲ,ಅವರು ನಮ್ಮನೆ ಹಜಾರದಲ್ಲಿ ಈ ಪ್ರಶಸ್ತಿ ಪದಕ ಮತ್ತು ಸ್ಮರಣಿಕೆಯನ್ನು ಬಿಟ್ಬಂದಿದ್ದಾರೆ.ಅದಿಕ್ಕೇ ಅವ್ರಿಗೆ ಕೊಡೋಣಾಂತ ತಗೊಂಡ್ ಬಂದೆ.ಇದನ್ನು ಅವ್ರಿಗ್ ಕೊಟ್ಬಿಡ್ತೀರಾ?..ಅಂತ ಹೇಳಿ ಪದಕ ಮತ್ತು ಸ್ಮರಣಿಕೆಯನ್ನು ಕೊಟ್ಟಳು.ಈಗ ಅಭಿನವನ ತಂದೆಯವರಿಗೆ ಪ್ರಾಣಹೋಗುವುದೊಂದೇ ಬಾಕಿ!ಉಸಿರನ್ನು ಯಾರೋ ಹಿಸುಕಿ ಹಿಸುಕಿ ಗಹಗಹಿಸಿ ನಕ್ಕು,ಅಟ್ಟಹಾಸ ಮೆರೆಯುತ್ತಿರುವಂತೆ ತೋರಿತು.ಹ್ಞಾ...ಅಭಿನವ್ ಅಲ್ಲೀಗ್ ಬಂದಿದ್ನಾ?..ಯಾ..ಯಾಕೆ..ಯಾಕೆ?...ಪ್ರಶ್ನಿಸಿದರು.ಏನೋ ಗೊತ್ತಿಲ್ಲ,ಅವರು ಬಂದಿದ್ದನ್ನು ನಾನು ನೋಡಿಲ್ಲ ಸರ್..ಆದ್ರೆ ನಮ್ಮನೆ ಹಜಾರದಲ್ಲಿ ಇದು ಇತ್ತು.ಇದರಲ್ಲಿ ತಮ್ಮ ಮನೆಯ ವಿಳಾಸ ನೋಡಿದೆ,ಅದಿಕ್ಕೇ ತೆಗೆದುಕೊಂಡು ಬಂದೆ.ದಯವಿಟ್ಟು ತಗೊಳ್ಳಿ...ಎಂದು ನುಡಿದು,ಅವುಗಳನ್ನು ಅವರ ಕೈಲಿಡಲು ಮುಂದೆ ಬಂದಳು.ಸರಿ ಸರಿ..ಕೊಡು ಕೊಡು,ನಾನ್ ಕೊಡ್ತೀನಿ ಅವನಿಗೆ...ಅಂದರು.ಸರ್...ಅಭಿನವ್ ಅವ್ರಿಲ್ವಾ?..ಅಂತ ಆಕೆ ಕೇಳಿದಳು.ಇ..ಇಲ್ಲ..ಇಲ್ಲ..ಅವ್ನಿಲ್ಲಮ್ಮ..ಅಂತ ಹೇಳಿ ಧಡ್ಡನೆ ಬಾಗಿಲು ಹಾಕಿಕೊಂಡರು.ಅಯ್ಯೋ,ಅಭಿನವ್ ಸಿಗ್ಲೇ ಇಲ್ವಲ್ಲಾ..ಅವರ ಹೆಸರನ್ನು ನೋಡಿದ ಕ್ಷಣದಿಂದ ಒಂದೇ ಸಮನೆ ಅವರನ್ನು ಒಮ್ಮೆ ನೋಡಬೇಕೆಂಬ ಪ್ರಬಲ ಆಕಾಂಕ್ಷೆ..ಅಂತ ಅಲ್ಲೇ ಚಡಪಡಿಸುತ್ತಾ,ಆ ಕಡೆ ಈ ಕಡೆ ನೋಡುತ್ತಾ ನಿಂತುಬಿಟ್ಟಳು.ಆಗ ಮನೆಯೊಳಗೆ ಅಭಿನವನ ಅಮ್ಮ,ಯಾರ್ರೀ ಅದು ಬಂದಿದ್ದು?ಅಂತ ಕೇಳಿದಾಗ,ಅದು..ಅದು...ಆ ವೇಶ್ಯೆ ಬಂದಿದ್ಳು ಕಣೇ..ಅಂದರು ಅಭಿನವ್ ತಂದೆ.ಹ್ಞಾ..!ಏನು?ಅವಳಾ..ಅವಳ್ಯಾಕ್ರೀ ಇಲ್ಲೀಗ್ ಬಂದಿದ್ಲು?ಹೇಳ್ರೀ..ಕೇಳ್ತಾ ಇದ್ದಾಳೆ ಅಭಿನವ್ ಅಮ್ಮ.ಈ ಮಾತುಗಳು ವಿನೀತಾಳ ಕಿವಿಯ ಮೇಲೂ ಬಿದ್ದವು.ಮುಂದೆ ಅವರು ಮಾತನಾಡಿಕೊಂಡಿದ್ದ್ಯಾವುದೂ ಅವಳ ಕಿವಿಗೆ ಬೀಳಲೇ ಇಲ್ಲ.ಅಳುತ್ತಾ ಓಡಿದಳು.ಅವಳ ಚಪ್ಪಲಿ ಮಾತ್ರ ಅಭಿನವ್ ಮನೆಯ ಬಾಗಿಲು ಕಾಯುತ್ತಲೇ ಇತ್ತು.ಅವಳು ಅಭಿಯ ಮನೆಯಿಂದ ಹೊರಬೀಳುತ್ತಿದ್ದಾಗಲೇ ಅವಳಿಗೆ ಭೈರಾಗಿಯೊಬ್ಬ ಎದುರಾದ.ಇವಳು ಆತನನ್ನು ನೋಡಿದೊಡನೆಯೇ,ಯಾವುದೋ ಒಂದು ವಾತ್ಸಲ್ಯದ ಹಸ್ತ ಕೈಚಾಚಿ ಕರೆವಂತೆ ಅನಿಸತೊಡಗಿತು.ಕೆನ್ನೆ ಮೇಲೆ ಜಾರಿಹೋಗುತ್ತಿರುವ ಕಣ್ಣೀರನ್ನು ಒರೆಸಿಕೊಂಡು,ಆತನನ್ನೇ ನೋಡುತ್ತಾ ನಿಧಾನವಾಗಿ ಹೆಜ್ಜೆಹಾಕತೊಡಗಿದಳು.ಅವಳನ್ನು ನೋಡಿದ ಆ ಭೈರಾಗಿಯ ಎದೆಯಲ್ಲಿ ಎಂಥದ್ದೋ ಅವ್ಯಕ್ತ ಅಲೆಗಳ ಭೋರ್ಗರೆತ ಭುಗಿಲೆದ್ದಿತು.ಆದರೆ,ಅದನ್ನು ತನ್ನಲ್ಲೇ ಅಡಗಿಸಿಕೊಳ್ಳಲು ಪ್ರಯತ್ನಿಸುತ್ತಾ ಅಭಿನವ್ ಇದ್ದಲ್ಲಿ ನಡೆದುಬಂದ ಆ ಭೈರಾಗಿ...

                                                                ** ** **

            ಅಭಿನವ್ ಚಿತ್ರ ಬಿಡಿಸುವುದರಲ್ಲಿಯೇ ಮಗ್ನನಾಗಿದ್ದ.ಅವಳ ಚಿತ್ರವನ್ನು ಬಿಡಿಸುತ್ತಾ ಬಿಡಿಸುತ್ತಾ ಅವಳ ಚಿತ್ರ ಪೂರ್ಣವಾಗುವುದರೊಳಗಾಗಿ ಆತ ಅವಳಲ್ಲಿ ಏನೋ ಒಂಥರದ ದಿವ್ಯತ್ತ್ವವನ್ನು ಕಂಡಿದ್ದ.ಆತ ಅವಳನ್ನು ಸಂಪೂರ್ಣವಾಗಿ ಪ್ರೀತಿಸತೊಡಗಿದ್ದ.ಭೈರಾಗಿ ಅಭಿನವನತ್ತ ನಡೆದುಬಂದ.ಭೈರಾಗಿ ಅಭಿನವನ ಹಿಂದೆ ಬಂದು ನಿಂತು,ಚಿತ್ರವನ್ನೇ ಸೂಕ್ಷ್ಮವಾಗಿ ನೋಡುತ್ತಾ,ಕ್ಷಣಕಾಲ ಭ್ರಮೆ ಹಿಡಿದವನಂತೆ ನಿಂತುಬಿಟ್ಟ.ನಂತರ,ಕೊಂಚ ಸುಧಾರಿಸಿಕೊಂಡು...ಈ ಚಿತ್ರದಲ್ಲಿ ಕೇವಲ ಮಾದಕತೆ ತುಂಬಿದೆ...ಅವಳು ನಿಂತ ಆ ಭಂಗಿಯಲ್ಲಿ ಮೋಹದ ಮದವುಕ್ಕಿ ಬರುತ್ತಿರುವಂತೆ ಕಾಣುತ್ತಿದೆ...ಎಂದು ನುಡಿದಾಗ,ಅಭಿನವ್ ಸರ್ರನೆ ಹಿಂದೆ ತಿರುಗಿದ.ಸ್ವಾಮೀಜಿ...ಎನ್ನುತ್ತಾ ಅವರ ಕಾಲಿಗೆರಗಿದ.ಏಳಪ್ಪಾ ಏಳು..ಏನಪ್ಪಾ ಇದು,ನೀನು ಬಿಡಿಸಿರೋ ಈ ಚಿತ್ರದಲ್ಲಿ ಹೆಣ್ತನದ ನಯ ನಾಜೂಕು,ನಾಚಿಕೆಗಳೆಲ್ಲವನ್ನೂ ತ್ಯಜಿಸಿ ನಿಂತು,ಉದ್ರೇಕಕ್ಕೆ ಒಳಗಾಗಿ ಈ ಯುವತಿ ಪ್ರಣಯಕ್ಕೆ ಆಹ್ವಾನಿಸುತ್ತಿರುವಂತೆ ಚಿತ್ರಿಸಿದ್ದೀಯಲ್ಲಾ?ಕಣ್ಣುಗಳನ್ನೇ ಚಿತ್ರಿಸಿಲ್ಲವಲ್ಲಪ್ಪಾ,ಕಣ್ಣುಗಳನ್ನು ಚಿತ್ರಿಸದೆಯೇ ಇಷ್ಟೊಂದು ಮಾದಕವಾಗಿರುವ ಇದು ಕಣ್ಣುಗಳನ್ನು ಚಿತ್ರಿಸಿದ ಮೇಲೆ ಹೇಗೆ ಕಾಣಬಹುದು?ಹೆಣ್ಣನ್ನು ಈ ರೀತಿ ಅಶ್ಲೀಲವಾಗಿ ಚಿತ್ರಿಸುತ್ತಾರೆಯೇ?ಇದು ಧರ್ಮವೇ,ಏನಿದರ ಮರ್ಮ?ಏನಿದು ಕಂದಾ?...ಸ್ವಾಮೀಜಿ ಪ್ರಶ್ನಿಸಿದರು.ಸ್ವಾಮೀಜಿ..ದಯವಿಟ್ಟು ಮನ್ನಿಸಿ..ಸೌಂದರ್ಯವೆನ್ನುವುದು ಆಸ್ವಾದಿಸುವ ಕಣ್ಣುಗಳಲ್ಲಿದೆ ಅಲ್ಲವೇ?ಹಾಗೆ ಯೋಚಿಸಿದಲ್ಲಿ,ಬೇಲೂರಿನ ಶಿಲಾಬಾಲಿಕೆಯನ್ನು ಅಶ್ಲೀಲವಾಗಿ ಕೆತ್ತಿದ್ದಾರೆ ಎನ್ನಲಾದೀತೇ?ಸಿಂಧೂ,ಹರಪ್ಪಾ,ಮೊಹಾಂಜೊದಾರೋ ಇತ್ಯಾದಿ ಇತ್ಯಾದಿ ನಾಗರಿಕತೆಗಳೆಲ್ಲದರಲ್ಲೂ ಈ ತರಹದ ವಿಗ್ರಹಗಳನ್ನೋ ಕಲಾಕೃತಿಗಳನ್ನೋ ನಾವು ಕಾಣುತ್ತೇವೆ.ಇವೆಲ್ಲಕ್ಕೂ ಅಶ್ಲೀಲವೆಂಬ ಪದವನ್ನೇ ಬಳಸಬಹುದೇ?ಆದರೆ,ಸ್ವಾಮೀಜಿ,ಇವೆಲ್ಲವೂ ಅಶ್ಲೀಲಭಾವದಿಂದ ರಚಿಸಲ್ಪಟ್ಟವುಗಳಲ್ಲ.ಈ ಅಶ್ಲೀಲತೆಯನ್ನು ಮೀರಿದ ಆತ್ಯಂತಿಕವಾದ ಸೌಂದರ್ಯವೊಂದಿದೆ.ಅದನ್ನೇ ನಮ್ಮ ಹಿರಿಯರು ಮತ್ತು ಈಗಲೂ ನಾವೂ ಕೂಡ ಆರಾಧಿಸುತ್ತಿರುವುದು.ಈ ಎಲ್ಲ ಬಾಹ್ಯ ಕಟ್ಟಳೆಗಳನ್ನು ಮೀರಿದ ಆ ದಿವ್ಯತ್ತ್ವ ದೇದೀಪ್ಯಮಾನವಾದದ್ದು.ಅದು ತಾನಾಗಿ ಬರುವಂಥದ್ದಲ್ಲ.ಯಾವುದೊ ಒಂದು ಕೈಂಕರ್ಯವನ್ನು ಮನಸ್ಫೂರ್ತಿಯಾಗಿ ಮಾಡಿದಾಗ ಸ್ಫುರಿಸುವಂಥಾದ್ದೇ ಈ ಅಂತರಂಗದ ಬೆಳಕು..ನನಗೆ ಅವಳ ಮೊಗದಲ್ಲಿ ಅಪೂರ್ವ ಆನಂದದ ತೇಜಸ್ಸು ಕಂಡಿತು;ಪರಿಪೂರ್ಣ ಸಂತೃಪ್ತಿಯ ಸಂಕೇತದಂತೆ!..ಆದರೆ ತಮಗೆ ಅವಳಲ್ಲಿನ ಪ್ರಣಯದ ಗುಂಗು ಕಾಡಿತು...ನನಗೆ ಕಂಡಿದ್ದನ್ನೇ ನಾನು ಪರಮಾನಂದದ ಉಚ್ಛಸ್ಥಾನ ಎನ್ನಬೇಕೆನಿಸುತ್ತಿದೆ!ನನ್ನ ಚಿತ್ರ ವ್ಯಕ್ತಿತ್ತ್ವದ ಕನ್ನಡಿಯಾಗಿ ಕೆಲಸ ಮಾಡುತ್ತದೆಂದು ಹೇಳಿಕೊಂಡಿದ್ದೆ..ಹಾಗೇ ಅಂದುಕೊಂಡಿದ್ದೆ.ಆದರೆ..ಆದರೆ,ಸ್ವಾಮೀಜಿ..ಈಗ ಎಲ್ಲವೂ ವ್ಯತಿರಿಕ್ತ ಅನಿಸುತ್ತಿದೆಯಲ್ಲಾ?ಅಶ್ಲೀಲತೆಯ ಚೌಕಟ್ಟು ಮೀರಿದ ಸುಶೀಲ ಆರಾಧನೆಯೇ ಸುಳ್ಳಾಯಿತೇ ಸ್ವಾಮೀಜಿ?ಆತ್ಯಂತಿಕವಾಗಿ ಸೃಜಿಸಿ,ಅಲೆ ಅಲೆಯಾಗಿ ಮೆದುವಾಗಿ ಹೃದಯ ತಾಕುವ ಈ ಅನುಭೂತಿಯನ್ನೇ ಅಲ್ಲವೇ ನಾವು "ಆನಂದ" ಎಂದಿರುವುದು?ಮಧುರ ಮೃದುಲ ನಾದವೆನ್ನಬೇಕಾಗಿತ್ತು ಈ ಅನುಭವದ ಅನುಭಾವವನ್ನು,ಅಲ್ಲವೇ ಸ್ವಾಮೀಜಿ?ಕವಿ,ಚಿತ್ರಕಾರ ಅಥವಾ ಯಾವುದೇ ಒಬ್ಬ ಕಲಾವಿದನಿಗೆ,ಈ ಎಲ್ಲ ಅಶ್ಲೀಲತೆಯ ಪರಿಧಿ ಮೀರಿದ ಭಾವಸಾಗರದ ಕಲಾಕೃತಿಯನ್ನು ರಚಿಸಲು ಸಾಧ್ಯ..ಅದಕ್ಕಾಗಿಯೇ ಅಲ್ಲವೇ,ಒಬ್ಬ ನಿಜವಾದ ಕಲಾವಿದನಿಂದ ರಚಿತವಾದ ಕಲಾಕೃತಿ ರಸಾಭಿವ್ಯಂಜಕವಾಗಿ ಸಾವಿರಾರು ವರುಷಗಳ ಕಾಲ ಶೋಭಿಸುತ್ತದೆ.ಪರಿಪೂರ್ಣವಾಗಿ ಚಿರಾಯುವಾಗುತ್ತದೆ...ಅಲ್ಲವೇ ಸ್ವಾಮೀಜಿ?ಆದರೀಗ ಏನು ಮಾಡಲಿ,ನಾನು ಪರಿಪೂರ್ಣನಲ್ಲ.ವಿರಕ್ತ ಭೋಗಿಯಲ್ಲೂ ಕಾಮದ ವಿನ್ಯಾಸ ಭಾವವರಳಲಿಕ್ಕೆ ಪ್ರಚೋದಿಸುತ್ತಿರುವ ಈ ಚಿತ್ರವನ್ನೇನು ಮಾಡಲಿ,ದಯವಿಟ್ಟು ಹೇಳಿ ಸ್ವಾಮೀಜಿ..ಅಭಿನವ್ ಅಳತೊಡಗಿದನು.ಹ್ಹಹ್ಹಹ್ಹಾ..ಕಂದಾ!..ವಿಚಲಿತನಾಗ್ಬೇಡ..ಸುಮ್ಮನೆ ಬೇಕಂತಲೇ ನಿನ್ನನ್ನು,ನಿನ್ನ ಸತ್ತ್ವವನ್ನು ತಿಳಿದುಕೊಳ್ಳಲೋಸುಗ ಈ ಮಾತುಗಳನ್ನಾಡಿದೆ.ನಿನ್ನ ಮೇಲೆ ನಿನಗೇ ನಂಬಿಕೆ ಇಲ್ಲವಾ?ಇಲ್ಲ ಕಣಪ್ಪಾ,ನಿನ್ನ ಈ ಚಿತ್ರದಲ್ಲಿ ಯಾವುದೋ ಒಂದು ಅಮೂರ್ತವಾದ ದೈವೀಕಳೆ ಉಕ್ಕುತ್ತಾ ಇದೆ.ಕಲೆಗೆ ಕೇವಲ ರೂಪದರ್ಶಿಯಾಗಿ ಅವಳು ಉಳಿದಿಲ್ಲ;ನಿನ್ನ ಮನಸಿನ ಭಾವಕ್ಕೆ ಹಿಡಿದ ಕನ್ನಡಿಯಂತೆ ಅವಳು ತೋರುತ್ತಿದ್ದಾಳೆ.ತುಂಬು ಮನಸ್ಸಿನಿಂದ ಚಿತ್ರಿಸಿದ ಈ ಚಿತ್ರ ನಿನ್ನ ಬಣ್ಣದ ಬದುಕಿನ ಶ್ರೇಷ್ಠ ಚಿತ್ರವಾಗುವುದರಲ್ಲಿ ಸಂದೇಹವೇ ಇಲ್ಲ.ಚಿತ್ರದ ಪ್ರತೀ ರೇಖೆಯಲ್ಲೂ ಅಷ್ಟೊಂದು ಪರಿಪೂರ್ಣತೆಯಿದೆ.ನಿನ್ನ ಬಗೆಗೆ ಆತ್ಯಂತಿಕವಾದ ಆರಾಧನಾ ಭಾವವೊಂದು ಎಲ್ಲರಲ್ಲೂ ಸ್ಫುರಿಸುವಂತೆ ಮಾಡುತ್ತಿದೆ ಈ ಚಿತ್ರ..ನಿಜಕ್ಕೂ ಅಭೂತಪೂರ್ವ ಅಪರೂಪ ಕಣಪ್ಪಾ ಇದು..ಅಷ್ಟೇ ಏಕೆ,ಏನೆಲ್ಲ ರಹಸ್ಯಗಳನ್ನು ಬಿಚ್ಚಿಡುವ ಸಾಹಸಿಯಂತೆ ಕಾಣುತ್ತಿದೆ ನನಗೆ!..ಪ್ರಶಾಂತಚಿತ್ತನಾಗಿ ಆ ಭೈರಾಗಿ ನುಡಿದನು.ಹೌದು,ಸ್ವಾಮೀಜಿ..ನಾನು ಮನಸ್ಫೂರ್ತಿಯಾಗಿ ಈ ಕನ್ಯೆಗೆ ಶರಣಾಗಿಬಿಟ್ಟಿದ್ದೇನೆ..ಕೇವಲ ನಾನಷ್ಟೇ ಅಲ್ಲ,ನನ್ನ ಬಣ್ಣ,ಕುಂಚ,ಕೊನೆಕೊನೆಗೆ ಕಾಗದ ಕೂಡ ಅವಳಲ್ಲಿ ಶರಣಾಗಿದೆ...ಕಾಣದ ಯಾವುದೋ ಬಂಧವೊಂದು ನನ್ನನ್ನು ಅವಳತ್ತ ಸೆಳೆಯುತ್ತಿದೆ.ಇದು ಮನಸ್ಸಿನ ವ್ಯಾಪಾರವೇ ಹೊರತು,ಮೋಹದ ವ್ಯವಹಾರವಲ್ಲ ಸ್ವಾಮೀಜಿ..ಅವಳನ್ನೇ ಸಂಗಾತಿಯಾಗಿ ಸ್ವೀಕರಿಸಬೇಕೆಂಬ ಹಂಬಲ ಕೂಡ ಆಗ್ತಾ ಇದೆ.ನನ್ನ ತಂದೆತಾಯಿಯರಿಗೆ ತಾವೇ ದಯವಿಟ್ಟು ಹೇಳಬೇಕು ಸ್ವಾಮೀಜಿ..ಪ್ರಾರ್ಥಿಸುತ್ತಾನೆ ಅಭಿನವ್.ಮಗೂ,ನಿಜ ಕಣಪ್ಪಾ.. ಮನವೆಂಬ ಮಾಯಾವಿ ಬಯಸಿಬಿಡುತ್ತದೆ ಏನನ್ನೋ ಒಂದು ಕ್ಷಣದಲ್ಲಿ!ಅದೆಷ್ಟು ಪ್ರಬಲವೆಂದರೆ ನಮ್ಮ ಬದುಕಿನ ಗತಿಯನ್ನೇ ಬದಲಿಸಿಬಿಡುವಂತೆ;ನಮ್ಮ ಬದುಕಿನ ಸ್ಥಿತಿಯನ್ನೇ ಬದಲಿಸಿಬಿಡುವಂತೆ!ನಮ್ಮತನವೇ ಬಿಕರಿಯಾಗಿ,ಕನಸುಗಳೆಲ್ಲವೂ ಭಿಕಾರಿಯಾಗುವಂತೆ ಮಾಡಿಬಿಡುತ್ತದೆ ಈ ಚಂಚಲೆ!..ನಿನ್ನ ತಂದೆತಾಯಿಯರನ್ನು ಕರೆಯಪ್ಪಾ,ಒಪ್ಪಿಸುತ್ತೇನೆ ಅವರನ್ನು!ಸಂಸಾರದಿಂದ ದೂರ ಸರಿದರೂ ನಿಮ್ಮನ್ನು ಸಂಸಾರಿಗಳನ್ನಾಗಿ ಮಾಡುವ ಸೋಗು ಹಾಕಬೇಕಿದೆಯೀಗ!..ಎಂದು ಏನನ್ನೋ ನೆನಪಿಸಿಕೊಳ್ಳುವವರಂತೆ ನುಡಿದರು.ಅಭಿನವ್ ಅತೀ ಉತ್ಸಾಹದಿಂದ ಮನೆಯತ್ತ ಓಡಿದ.ಅಷ್ಟರಲ್ಲಾಗಲೇ ಅಭಿನವ್ ಮಾತಾಡುತ್ತಾ,ಮಾತಾಡುತ್ತಲೇ ಅವಳ ಚಿತ್ರವನ್ನು ಪೂರ್ತಿಗೊಳಿಸಿಬಿಟ್ಟಿದ್ದ...

                                                              ** ** **

            ಅಭಿನವನ ತಂದೆತಾಯಿ ಅವನ ಜೊತೆ ಬಂದು,ಸ್ವಾಮೀಜಿಗಳಿಗೆ ವಂದಿಸಿ ನಿಂತರು.ಅಯ್ಯ..ಏನೋ ಬರಹೇಳಿದಿರಂತೆ..ಎಂದು ಹೇಳಿ,ಏಕೆ ಎನ್ನುವಂತೆ ನೋಡಿದರು.ಆಗ ಆ ಭೈರಾಗಿಯು,ನೋಡಿ..ನಿಮ್ಮ ಮಗ ನನ್ನನ್ನು ನಿಮ್ಮ ಕುಟುಂಬದ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಮಾಡುತ್ತಿದ್ದಾನೆ.ಬೇಸರಿಸಿಕೊಳ್ಳಬೇಡಿ..ನೇರವಾಗಿ ವಿಷಯವನ್ನು ತಿಳಿಸಿಬಿಡುತ್ತೇನೆ.ಈ ಚಿತ್ರವನ್ನು ನೋಡಿ...ಎಂದು ಅಭಿನವ್ ಬಿಡಿಸಿದ್ದ ಚಿತ್ರವನ್ನು ತೋರಿಸಿದನು.ಆ ಚಿತ್ರವನ್ನು ನೋಡುತ್ತಿದ್ದಂತೆಯೇ ಅಭಿನವ್ ತಂದೆತಾಯಿ ಹೃದಯ ಸ್ತಂಭಿಸಿದಂತೆ ನಿಂತುಬಿಟ್ಟರು.ಅಭಿನವ್ ತಂದೆ,ಅಯ್ಯ..ಏನಿದು?ಅಭಿನವ್ ಏನೋ ಇದು?ಇ..ಇವಳು..ಇವಳು..ತಡಬಡಿಸುತ್ತಿದ್ದಾರೆ.ಪಪ್ಪಾ, ಇವಳು ಯಾರೂಂತ ಗೊತ್ತಿಲ್ಲಪ್ಪಾ,ಆದರೆ,ಆದರೆ..ನನ್ನ ಮಿಡಿತದ ಪ್ರತೀ ಸದ್ದಿನಲ್ಲೂ ಈಗ ಅವಳ ಸುದ್ದಿಯಿದೆ ಎಂದನಿಸುತ್ತಿದೆ...ತಲೆತಗ್ಗಿಸಿ ನುಡಿಯುತ್ತಾನೆ.ಏ..ಏ..ಏನೋ...ಎನ್ನುತ್ತಾ,ಅವನ ಕೆನ್ನೆಗೆ ಬಾರಿಸಲು ಮುಂದೆ ಬರುತ್ತಾರೆ ಅಭಿನವ್ ತಂದೆ.ಆಗ ಆ ಭೈರಾಗಿ ಅವರನ್ನು ಹಿಡಿದು ನಿಲ್ಲಿಸುತ್ತಾನೆ.ನಿಲ್ಲಿ,ನಿಲ್ಲಿ ರಾಯರೇ...ಏನು ಮಾಡ್ತಾ ಇದ್ದೀರಿ?ಅವನು ನಿಮ್ಮ ಮಗ..ಹಿಂದೆ ಮುಂದೆ ಯೋಚಿಸದೇ,ಹೀಗೆ ಕೋಪದ ಕೈಗೆ ಬುದ್ಧಿಯನ್ನು ಕೊಡುವುದೆಷ್ಟು ಸರಿ,ರಾಯರೇ?...ಅವನು ಹೇಳುವಷ್ಟರಲ್ಲೇ,ಅವನ ಮಾತುಗಳನ್ನು ತುಂಡರಿಸಿಬಿಟ್ಟಿರಲ್ಲಾ,ಅವನು ಹೇಳುವುದನ್ನೊಮ್ಮೆ ಸಂಪೂರ್ಣವಾಗಿ ತಾಳ್ಮೆಯಿಂದ ಕೇಳಿ ರಾಯರೇ,ನೀನ್ ಹೇಳಪ್ಪಾ ಕಂದಾ..ಎಂದು ಅಭಿನವನತ್ತ ನೋಡಿದನು.ಪಪ್ಪಾ,ಪಪ್ಪಾ..ನನಗೇ ಗೊತ್ತಿಲ್ಲದಂತೆ ನಾನವಳನ್ನು ತುಂಬಾ ಪ್ರೀತಿಸುತ್ತಿರುವಂತೆ,ಮನಸಿನ ತುಂಬಾ ಅವಳ ಗೆಜ್ಜೆಯ ನಾದ ತುಂಬುತ್ತಿರುವಂತೆ,ನನಗೂ ಅವಳಿಗೂ ಎಷ್ಟೋ ವರುಷಗಳ ಬಾಂಧವ್ಯವಿರುವಂತೆ ಅನ್ನಿಸ್ತಾ ಇದೆ,ಪಪ್ಪಾ,ನಾನೇನ್ ಮಾಡ್ಲಿ?..ಅಭಿನವ್ ಮುಗ್ಧನಾಗಿ ನುಡಿಯುತ್ತಾನೆ.ಏ..ಏ..ಅಭಿ..ಅವ್ಳು..ಅವಳ್ಳ್ಯಾರು ಗೊತ್ತೇನೋ ನಿಂಗೆ?ಗೊತ್ತೇನೋ?..ಅವ್ಳು..ಅವ್ಳು..ವೇಶ್ಯೆ ಕಣೋ..!ಅಂಥವಳನ್ನು ನೀನು..ಛೀ..ಮೂರು ಕಾಸು ಸಂಪಾದಿಸುವ ಯೋಗ್ಯತೆ ಇಲ್ಲದ ನಿನಗೆ ಪ್ರೇಮ..ಥೂ..ಎನ್ನುತ್ತಾ ಅಳತೊಡಗಿದರು ಅಭಿನವ್ ತಂದೆ.ರಾಯರೇ ಸಮಾಧಾನಿಸಿಕೊಳ್ಳಿ,ಸಮಾಧಾನಿಸಿಕೊಳ್ಳಿ..ಅಷ್ಟೊಂದು ಭಾವತೀವ್ರತೆಗೆ ಒಳಗಾಗಬೇಡಿ..ಸೈರಿಸಿಕೊಳ್ಳಿ..ಅವಳು ವೇಶ್ಯೆಯೆಂದು ನೀವು ಹೇಗೆ ಹೇಳುತ್ತೀರಿ,ನಿಮಗೆ ಹೇಗೆ ಗೊತ್ತು?ನಾನೀಗ ಭೈರಾಗಿ ಎನ್ನುವುದಕ್ಕಿಂತ,ಒಬ್ಬ ಮನುಷ್ಯನಾಗಿ ಈ ಮಾತುಗಳನ್ನು ಹೇಳಲಿಕ್ಕೆ ಇಚ್ಛಿಸುತ್ತೇನೆ.ನೀವ್ಯಾರಾದರೂ ಆಕೆ ಅನೈತಿಕವಾದವಳೆಂಬುದನ್ನು ಕಣ್ಣಾರೆ ಕಂಡು ಅವಲೋಕಿಸಿದ್ದೀರಾ,ಇಲ್ಲ ಅಲ್ಲವೇ?ಎಲ್ಲರೂ ಅಂದಂತೆಯೇ ನೀವೂ ಅಂದುಬಿಟ್ಟಿರಿ ಅಲ್ಲವೇ?ಸತ್ಯದ ಪರಿಶೋಧನೆ ಆಗಿದೆಯೇ?..ಪ್ರಶ್ನಿಸುತ್ತಾನೆ ಆ ಭೈರಾಗಿ.ಆಗ ಅಭಿನವ್ ತಂದೆ,ಏನ್ ಏನ್ ಹೇಳ್ತಿದ್ದೀರಾ ತಾವು?..ಅಂಗೈ ಹುಣ್ಣಿಗೆ ಕನ್ನಡಿ ಬೇರೆ ಬೇಕಾ?ಅಯ್ಯ..ಊರಿಗೆ ಊರೇ ಅವಳ ತಾಯಿಯ ಗುಣಗಾನ ಮಾಡುತ್ತದೆ.ಅವಳ ತಾಯಿ ವೇಶ್ಯೆಯೆಂದ ಮೇಲೆ ಅವಳೂ ಅದರಿಂದ ಹೊರತಾಗಿರುತ್ತಾಳೆಯೇ?ಇದಕ್ಕಿಂತ ಹೆಚ್ಚಿನ ಸಾಕ್ಷಿಯೇನು ಬೇಕು?ಮತ್ತೆಲ್ಲಿಯ ಸತ್ಯಶೋಧನೆ ಸ್ವಾಮೀಜಿ?ನಿಮಗೇನು ಗೊತ್ತು ಅವಳ ಬಗ್ಗೆ?..ಖಾರವಾಗಿಯೇ ಪ್ರಶ್ನಿಸುತ್ತಾರೆ.ಅಸಹನೆ ಎದ್ದು ಕಾಣುತ್ತಿತ್ತು.ಆಗ ಆ ಭೈರಾಗಿ ಖೇದದಿಂದ ನುಡಿಯುತ್ತಾನೆ.ರಾಯರೇ,ಇದೆ..ಯಾರಿಗೂ ತಿಳಿಯದ ಸತ್ಯ ಒಂದಿದೆ.ನಿಮ್ಮೆಲ್ಲರ ನಂಬಿಕೆಗಳನ್ನು ಅಲ್ಲಾಡಿಸುವ ಸತ್ಯವೊಂದಿದೆ.ಭೂತಲೋಕದೊಳಗೆ ಹೂತುಹೋಗಿದ್ದ ಸತ್ಯದ ಅಸ್ಥಿಪಂಜರಕ್ಕೆ ಮತ್ತೆ ರಕ್ತಮಜ್ಜೆಗಳನ್ನು ತುಂಬಿಕೊಡುವ ಪ್ರಯತ್ನ ಈಗ ಶುರುವಾದಂತೆ ಕಾಣುತ್ತಿದೆ...ಹೇಳಿಬಿಡುತ್ತೇನೆ..ನನ್ನೊಳಗೆ ಇಪ್ಪತ್ತು ವರ್ಷಗಳಿಂದ ಮಡುಗಟ್ಟಿಕೊಂಡಿದ್ದ ರಹಸ್ಯವೊಂದು ಇಂದು ರಹದಾರಿಯ ಬದಿಯ ಹಾಸಾಗಿ ಹೋಗಲಿ..ಎಂದು ಒಂದೇ ಸಮನೆ ನುಡಿದು,ಎರಡು ಕ್ಷಣ ಕಣ್ಮುಚ್ಚಿ ಕಣ್ತೆರೆದನು.ಎಲ್ಲರಿಗೂ ದಿಗ್ಭ್ರಮೆ!ಏನಿದು,ಈ ಸ್ವಾಮೀಜಿ ಏನು ಹೇಳುತ್ತಿದ್ದಾರೆಂದೇ ಅರ್ಥವಾಗುತ್ತಿಲ್ಲವಲ್ಲಾ ಎಂದು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ,ಯೋಚಿಸುತ್ತಾ ನಿಂತಿದ್ದಾರೆ.ಆ ಭೈರಾಗಿಯೇ ಮುಂದುವರೆದು ಹೇಳಿದನು..ನೀವಂದುಕೊಂಡಂತೆ ಆಕೆ ವೇಶ್ಯೆಯಲ್ಲ,ಅವಳ ತಾಯಿಯೂ ವೇಶ್ಯೆಯಲ್ಲ!ಸಮಾಜದ ದೃಷ್ಟಿಯಲ್ಲಿ ಅವಳ ತಾಯಿ,ಅನೈತಿಕ ಹೆಣ್ಣೆಂಬಂತೆ ಬಿಂಬಿಸಲ್ಪಟ್ಟಳು.ಆದರೆ ,ಅವಳು ಅಪರಂಜಿಯಂಥವಳು..ಒಬ್ಬ ವ್ಯಕ್ತಿಯ ಪ್ರೀತಿಗಾಗಿ ತನ್ನ ಇಡೀ ಜೀವನವನ್ನೇ ಧಾರೆಯೆರೆದವಳು..ಯಾವ ಸಮಾಜ ಹೆಣ್ಣನ್ನು ತಾಯಿಯೆಂದು ಪೂಜಿಸುತ್ತಿತ್ತೋ,ಅದೇ ಸಮಾಜ ಅವಳಿಗೆ ಹೀಗೇ ಹೀಗೇ ವೇಶ್ಯೆಯೆಂಬ ಪಟ್ಟ ಕಟ್ಟಿತು.ಆದರೆ ಅವಳೆಂದೆಂದಿಗೂ ಆ ವ್ಯಕ್ತಿಯ ಪ್ರೀತಿಗೆ ಮೋಸ ಮಾಡಲೇ ಇಲ್ಲ.ತನ್ನ ಇಡೀ ಜೀವನವನ್ನು ಕೇವಲ ಆತನ ನೆನಪಿನಲ್ಲಿಯೇ ಕಳೆದಳು.ಹೇಳುತ್ತಾರೆ ಎಲ್ಲರೂ..ನೆನಪುಗಳೇ ಮಧುರ ಮಧುರವೆಂದು..ನಿಜ,ಒಂಥರಾ ಮಧುರವೇ ಆಗಿರಬಹುದು..ಆದರೆ..ಅದೇ ನೆನಪುಗಳು ಒಂದು ಹೆಣ್ಣಿಗೆ ವೇಶ್ಯೆಯೆಂಬ ಪಟ್ಟ ಕಟ್ಟಿತೆಂದರೆ ನೀವು ನಂಬ್ತೀರಾ?ನಿಜ,ಆಕೆ ಆತನ ಜೊತೆ ಕಳೆದ ಕ್ಷಣಗಳ ನೆನಪುಗಳ ಮಹಲು ಕಟ್ಟಿಕೊಂಡು,ಅದರಲ್ಲಿಯೇ ಜೀವಿಸಿದಳು.ಒಬ್ಬ ಹೆಣ್ಣಾಗಿ ತನ್ನ ಸರ್ವಸ್ವವೆಲ್ಲವನ್ನೂ ಆತನಿಗೊಬ್ಬನಿಗೇ ಅರ್ಪಿಸಿದರೂ,ವೇಶ್ಯೆಯೆಂಬ ಆಪಾದನೆ ಅವಳನ್ನು ತಟ್ಟದೇ ಇರಲಿಲ್ಲ.ಆದರೆ ಇದ್ಯಾವುದಕ್ಕೂ ಅಂಜದ ಆಕೆ ಒಬ್ಬ ಮಾದರಿ ಪ್ರೇಯಸಿಯಾಗಿ,ತಾಯಿಯಾಗಿ,ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ನೈತಿಕ ಹೆಣ್ಣಾಗಿ ಬದುಕಿದಳು.ಪ್ರಕೃತಿಯ ಪ್ರತೀ ಅಂಶದಲ್ಲೂ ಹೆಣ್ತನವಿದೆ.ಪುರುಷನೂ ಕೂಡ ಇದರಿಂದ ಹೊರತಾಗಿಲ್ಲ;ಹೆಣ್ಣೇ ಪ್ರಕೃತಿ,ಪ್ರಕೃತಿಯೇ ಹೆಣ್ಣು..ಅವಳು ಒಂಟಿಯೆಂದು ತಿಳಿದ ಕಾಮುಕರು ಅವಳನ್ನು ಬಯಸಿಬಂದಾಗ,ಆಕೆ ಎಲ್ಲವನ್ನೂ ನಿರಾಕರಿಸಿ,ಪ್ರೀತಿಗಿಂತ ಔನ್ನತ್ಯವಾದುದ್ಯಾವುದೂ ಇಲ್ಲವೆಂದು ಸಾರಿ ಸಾರಿ ಹೇಳಿದಾಗ,ಅವಕಾಶವಾದಿಗಳ  ಕುತಂತ್ರದಿಂದ ಅವಳಿಗೆ ದೊರಕಿದ್ದು ಈ ಸಮಾಜದಲ್ಲಿ ವೇಶ್ಯೆಯೆಂಬ ಪಟ್ಟ.ಆದರೂ ಬದುಕಿದಳು.ಎದೆತಟ್ಟಿ ನಿಂತು,ಒಂಟಿ ಹೆಣ್ಣಾಗಿಯೂ,ಸಮಾಜದಲ್ಲಿ ತನ್ನ ಶೀಲವನ್ನು ಕಾಪಾಡಿಕೊಂಡು,ಅದು ತನ್ನ ಪ್ರೇಮಿಗೆ ಮಾತ್ರ ಸೀಮಿತ ಎಂಬಂತೆ ಬದುಕಿದಳಲ್ಲಾ,ಆಕೆಯ ಪ್ರೀತಿಗೇನು ಹೇಳಲಿ?ಅವಳ ಪ್ರಿಯಕರ ಅವಳನ್ನು ಮದುವೆಯಾಗುವುದರಲ್ಲಿದ್ದ.ಆಕೆಯನ್ನು ತನ್ನ ಸಂಗಾತಿಯೆಂದು ಮನಸ್ಫೂರ್ತಿ ಒಪ್ಪಿಕೊಂಡಿದ್ದ.ಆದರೆ ಕಾಲನ ಕ್ರೂರ ಆಘಾತಕ್ಕೆ ಸಿಲುಕಿ,ಅವಳಿಂದ ಆತ ದೂರವಾದ.ಮಧುರ ಬಂಧ ಬಲವಂತದಿಂದ ಹರಿಯಲ್ಪಟ್ಟಿತು..ಅವರ ಮದುವೆಯನ್ನು ಮನೆಯವರು ವಿರೋಧಿಸಿದರು.ಕಾರಣ ಜಾತಿ!ಆದರೆ,ಅಷ್ಟರೊಳಗಾಗಲೇ,ಆಕೆ ದೈಹಿಕವಾಗಿಯೂ,ಮಾನಸಿಕವಾಗಿಯೂ ಎಲ್ಲವನ್ನೂ ಆತನೊಂದಿಗೆ ಹಂಚಿಕೊಂಡುಬಿಟ್ಟಿದ್ದಳು.ಮದುವೆ ಆಗಲು ಸಾಧ್ಯವಿಲ್ಲ ಎಂದು ಗೊತ್ತಾಗುವುದರೊಳಗಾಗಿ,ಅವಳ ಬಸಿರಿನಲ್ಲಿ ಮಗು ಬೆಳೆಯುತ್ತಿತ್ತು...ಈ ಇಬ್ಬರು ಗಂಡುಹೆಣ್ಣಿನ ಸಂಭ್ರಮದ ಮಿಲನಕೂಟ ಪರ್ವದ ಪರಮ ಔನ್ನತ್ಯ ಶಿಖರದ ತುದಿಯಲ್ಲಿ,ಪರಮೋನ್ನತ ಸ್ಥಿತಿಯಲ್ಲಿ ಕಾಮ,ಕ್ರೋಧ,ಲೋಭ,ಮೋಹ,ಮದ,ಮಾತ್ಸರ್ಯಗಳು ದಹಿಸಿ,ನೀರೂ ಕೂಡ ಸುಟ್ಟು ನಿಷ್ಕಲ್ಮಶವಾಗುವ ಪರಿಪೂರ್ಣ ಸಮ್ಮಿಲನದ ಗತಿಯ ವೇಳೆಯಲ್ಲಿ ರಕ್ತದ ಸಾಕ್ಷಿಯಾಗಿ ಹುಟ್ಟಿದ ಮಗುವಿಗೂ ವೇಶ್ಯೆ ಅನ್ನೋ ಪಟ್ಟ!..ಚೆನ್ನಾಗಿದೆ ರಾಯರೇ,ಈ ಸಮಾಜದ ಬಹಿರ್ಮುಖಿ ಚಿಂತನೆ!..ಅಂತರಂಗದ ಬಸುಕಿಗೆ ಬೆಲೆಯೇ ಇಲ್ಲವಾ?ಮನೆಯಲ್ಲಿ ಬೇರೆ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎಂದು ತಿಳಿದ ಆಕೆಯ ಪ್ರೇಮಿ ಅವಳ ಹತ್ತಿರ,ಬಾ ಓಡಿಹೋಗಿ,ಮದುವೆಯಾಗಿ,ಬೇರೆಡೆ ಜೀವಿಸೋಣ ಎಂದಾಗ,ಆಕೆ ಸಮ್ಮತಿಸಲೇ ಇಲ್ಲ...ಹಿರಿಯರೆಲ್ಲರ ಆಶೀರ್ವಾದ ಪಡೆದೇ,ಅವರ ಸಮ್ಮುಖದಲ್ಲೇ ಮದುವೆಯಾದರೆ ಮಾತ್ರ ಮದುವೆ;ಇಲ್ಲದಿದ್ದಲ್ಲಿ ಮದುವೆಯೇ ಬೇಡ..ಇದು ಅವಳ ದಿಟ್ಟ ಉತ್ತರವಾಗಿತ್ತು.ಪರಿಪರಿಯಾಗಿ ಆತ ಬೇಡಿಕೊಂಡ.ಗೋಗರೆದ..ಸಮಾಜದ ದೃಷ್ಟಿಯಲ್ಲಿ ಹೆಣ್ಣೊಬ್ಬಳು ಅನುಭವಿಸಬೇಕಾದ ಕಷ್ಟಗಳ ಬಗೆಗೆ ತಿಳಿಸಿ ತಿಳಿಸಿ ಹೇಳಿದ.ಆದರೆ ಆಕೆ ಎಲ್ಲವುದಕ್ಕೂ ಸಿದ್ಧವಾದಂತೆ ದಿಟ್ಟತನದ ನಿಲುವು ಹೊಂದಿದ್ದಳು.ಆತ ಅವಳ ಪ್ರೀತಿಗೆ ಮೋಸ ಮಾಡಲಿಲ್ಲ...ಅವಳೂ ಆತನಿಗೆ ಮೋಸ ಮಾಡಲಿಲ್ಲ...ಆದರೆ,ಪರಿಸ್ಥಿತಿ ಅವರನ್ನು ದೂರ ಮಾಡಿಬಿಟ್ಟಿತು.ಹುಚ್ಚು ಹರೆಯ,ಬದುಕಿನ ಮಗ್ಗುಲನ್ನು ಬದಲಿಸಿತು.ಅವಳು ಗರ್ಭದಲ್ಲಿ ಆತನ ವಂಶದ ಕುಡಿಯನ್ನು ಹೊತ್ತಳು;ಹೆಣ್ಣಿನ ಜೀವನದ ಸಾರ್ಥಕ್ಯ ಅಡಗಿರುವುದೇ ತಾಯ್ತನದಲ್ಲಿ ಎನ್ನುವುದು ಅವಳ ಬದುಕಿನ ಪ್ರಬಲ ನಂಬಿಕೆ...ಇತ್ತ,ಈತ ತನ್ನೊಲವಿನ ಸಖಿ ತನಗೆ ಸಿಗುವುದಿಲ್ಲವೆಂದು,ವೈರಾಗ್ಯದತ್ತ ಹೊರಳಿದ.ಎಲ್ಲವನ್ನೂ ತ್ಯಜಿಸಿ ನಿಂತು,ಇಪ್ಪತ್ತು ವರ್ಷಗಳಿಂದ ಭೈರಾಗಿಯಾಗಿ,ಈಗ ನಿಮ್ಮ ಮುಂದೆ ನಿಂತಿದ್ದಾನೆ...!ಹ್ಞಾ..ಹ್ಞಾ...ಅಯ್ಯ..ಏನ್ ಹೇಳ್ತಾ ಇದ್ದೀರಿ...ಅಂದ್ರೆ?..ಹೌದು,ಅವಳನ್ನು ಪ್ರೀತಿಸಿದ ವ್ಯಕ್ತಿ ಮತ್ತ್ಯಾರೋ ಅಲ್ಲ,ಅದು ನಾನೇ..ಆ ಹುಡುಗಿ ಇನ್ನ್ಯಾರೋ ಅಲ್ಲ..ನನ್ನದೇ ರಕ್ತದ ಅಂಶ..ಅವಳು ನನ್ನ ಮಗಳು‘ವಿನೀತಾ’...ಪವಿತ್ರ ಪ್ರೀತಿಯ ಉತ್ತುಂಗದಲ್ಲಿ ಸೃಜಿಸಿದವಳು;ಪರಮ ಪವಿತ್ರಳು..ನಾನು ಭೈರಾಗಿಯಾದರೂ,ಯಾವುದೋ ಒಂದು ಕಾಣದ ವಾತ್ಸಲ್ಯ,ನನಗೆ ಅವಳ ಮೇಲೆ ಇನ್ನೂ ಹಾಗೆಯೇ ಇದೆ.ಬದುಕಿನೆಲ್ಲ ಮೌಲ್ಯಕ್ಕಿಂತ ಕಾಣದ್ದೊಂದು ಪ್ರೀತಿಯಿದೆಯಲ್ಲ,ಅದು ಅನಂತವಾದದ್ದು...ಕರುಳಬಂಧ ಹೊಕ್ಕಳ ಬಳ್ಳಿಯಂತಲ್ಲ!ಅದು ಚಿರಂತನ..ಈಗ ಹೇಳಿ,ಆಕೆ ವೇಶ್ಯೆಯ ಒಡಲ ವಲ್ಲಿಯೇ?..ಎಂದು ಹೇಳುತ್ತಿರುವಾಗ,ಇಪ್ಪತ್ತು ವರ್ಷಗಳಿಂದ ಕಲ್ಲಾಗಿದ್ದ ಹೃದಯ ಸರಸರನೆ ಕರಗಿ ಕಣ್ಣೀರಾಯಿತು!..ಎಲ್ಲರೂ ಸ್ತಂಭಿತರಾಗಿದ್ದಾರೆ.ಒಬ್ಬರಲ್ಲೂ ನಾಲಿಗೆ ಹೊರಳುತ್ತಿಲ್ಲ.ಗುಡುಗು ಮಿಂಚು ಕಾರ್ಮೋಡಗಳಿಂದ ಆರ್ಭಟಿಸಿದ ಮಳೆ ನಿಂತುಹೋದಂತೆಯೇ!ತಪ್ತವಾಯಿತು ಎಲ್ಲರ ಹೃದಯ,ಬದುಕಿನ ಮರ್ಮಗಳ ಸೆರೆಮನೆಯಲ್ಲಿ ಖೈದಿಯಾಗಿ,ಆ ಭೈರಾಗಿ ಪರದಾಡಿದ ಪರಿಯ ನೆನೆದು!ಪ್ರೀತಿ,ಎಂತಹ ತ್ಯಾಗಕ್ಕೂ ಸಿದ್ಧವಾಗಿಬಿಡುತ್ತದಲ್ಲವಾ,ಇದೆಂಥಹಾ ಪರಿ?ಬಿರಿಬಿರಿವ ಮಲ್ಲಿಗೆಯ ಮೊಗ್ಗು ಹಿಗ್ಗಿಹಿಗ್ಗಿ ಸುಗ್ಗಿಯಾದಂತಷ್ಟೇ ಬದುಕಲ್ಲ...ಕ್ಷಣಕಳೆದು,ಒಣಗೊಣಗಿ ಮುದುಡಿಹೋಗುವ ಎಸಳುಗಳ ಸಂತೆಯೂ ಹೌದು!ಭ್ರಮೆಗಳೆಲ್ಲವನ್ನೂ ಸಾಲಿನಲ್ಲಿಟ್ಟು ಸಂಭ್ರಮಿಸುವಾಗ ಮರೀಚಿಕೆಯ ನೆನಪೇ ಆಗುವುದಿಲ್ಲವಾ?ಕಳೆದುಳಿವ ಸೊಗಡೇ ಬದುಕಿನ ಬೆಡಗೇ? ಬಾಡಿಗೆಗೆ ಬಿಕರಿಯಾಗುವ ಕನಸುಗಳನ್ನು ಕತ್ತಲಲ್ಲಿಟ್ಟು,ಬಟ್ಟೆ ಬಿಚ್ಚಿ,ಹುಚ್ಚು ಹುಚ್ಚಾಗಿ ನಗುವ ಸಮಾಜದ ಸೊಕ್ಕಿಗೇನೆನ್ನಬೇಕು?ಬದಲಾವಣೆಯ ಬದುಕಿನಲ್ಲಿ ಬಗೆಬಗೆಯ ಮುಖವಾಡ ತೊಟ್ಟು,ಅದರಲ್ಲೇ ಎಲ್ಲವನ್ನು ಅಡಗಿಸಿಕೊಳ್ಳುವ ಮನುಷ್ಯರೆಲ್ಲರೂ,ಮುಖವಾಡ ಕಳಚಿಟ್ಟರೆ,ಕೇವಲ ರಕ್ತ,ಮಾಂಸ,ಅಸ್ಥಿಯ ಭಿತ್ತಿಯಂತೇ ಅಲ್ಲವೇ?ಮೇಲಿಲ್ಲ,ಕೀಳಿಲ್ಲ;ಒಂದೆಲ್ಲವೂ,ಒಂದೆಲ್ಲರೂ!!ಅಭಿನವ್ ಯೋಚಿಸುತ್ತಿದ್ದಾನೆ.ತಕ್ಷಣ ಆತನಿಗೆ ಏನೋ ಅನಿಸಿತು...ಆ ಭೈರಾಗಿಯ ಪಾದಕ್ಕೆರಗಿ,ಎಲ್ಲರ ಮೌನವನ್ನು ಮುರಿದನು.ಸ್ವಾಮೀಜಿ..ತಾವು ನನಗೆ ಮಹಾತ್ಮರಂತೆ ಗೋಚರಿಸುತ್ತಿದ್ದೀರಿ..ಎಲ್ಲರ ಬದುಕಿನ ಮನೆಯಲ್ಲೂ ಕಗ್ಗತ್ತಲೆಯ ಪಡಸಾಲೆಯೊಂದಿದೆ,ಬದಲಾವಣೆಯ ಹಣತೆ ಹಿಡಿದಾಗ,ಬೆಳಕಿನೆಡೆಗೆ ಮುಖ ತಿರುಗಿಸಿ ಹೆಜ್ಜೆ ಹಾಕಬೇಕು ಎಂಬುದಕ್ಕೆ ತಮ್ಮ ಬದುಕು ಒಂದು ನಿದರ್ಶನ..ಹರಸಿರಿ..ವಿನೀತಾ ಇನ್ನು ಎಂದೆಂದೂ ನನ್ನವಳು...ಎಂದು ಅಭಿನವ್ ಹೇಳಿದನು.ಅಭಿನವನ ತಂದೆತಾಯಿ ಆ ಭೈರಾಗಿಯ ಕಾಲಿಗೆರಗಿದರು.ಮೇಲ್ನೋಟಕ್ಕೆ ಅನೈತಿಕವೆಂಬಂತೆ ಕಂಡುಬಂದರೂ,ಅದರಾಳದಲ್ಲಿನ ಅಪ್ರತಿಮ ಪ್ರೀತಿಯ ಅನಂತತೆಯ ಇದಿರು,ಅವಳ ಈ ಬದುಕು,ಕಲ್ಲು ಅಹಲ್ಯೆ ರಾಮನ ಪಾದಸ್ಪರ್ಶದಿಂದ ಜೀವ ತಳೆದುಬಂದು ಪವಿತ್ರವಾದಂತೆ ಅನಿಸತೊಡಗಿತು!ಅಭಿನವನ ತಂದೆ,ಅಯ್ಯ...ದಯವಿಟ್ಟು ಕ್ಷಮಿಸಿಬಿಡಿ..ಎಂದು ಕಣ್ಣಂಚಿನಲ್ಲಿ ನೀರು ತುಂಬಿಕೊಂಡರು.ಆ ಭೈರಾಗಿ ಅಭಿನವನ ಹತ್ತಿರ,ಕಂದಾ..ಈ ಚಿತ್ರ ಅತ್ಯಂತ ವಿಶಿಷ್ಟವಾದದ್ದು..ದೃಶ್ಯಕಾವ್ಯರೂಪವಾದ ಈ ಚಿತ್ರ ಅವಳ ಬದುಕಿನ ಕತೆಯಾಗಿದೆ.ಇದಕ್ಕೆ ಏನೆಂದು ಹೆಸರಿಸುತ್ತೀಯಾ?..ಎಂದು ಪ್ರಶ್ನಿಸಿದನು.ಆಗ ಸ್ವಲ್ಪ ಹೊತ್ತು ಅಭಿನವ್ ಹಾಗೇ ಯೋಚಿಸುತ್ತಾ ನಿಂತುಬಿಟ್ಟನು..

                                                              ** ** **

           ಅಭಿನವನ ಮನೆಯಲ್ಲೇ ಬಿಟ್ಟುಹೋದ ಚಪ್ಪಲಿಗಳ ನೆನಪಾಗಿ,ಅದನ್ನು ತರಲೆಂದು ವಿನೀತಾ ಪುನಃ ಹಿಂದಿರುಗಿಬಂದಾಗ,ಅಭಿನವನ ಮನೆಯ ಹಿಂಬದಿಗೆ ಜೋರು ಮಾತು ಕೇಳಿಬರುತ್ತಿದುದರಿಂದ,ಅದೇನೆಂದು ತಿಳಿಯಲು ಅಲ್ಲಿಗೆ ಬಂದಳು.ಯಾವುದೋ ಅದೃಶ್ಯ ಹಸ್ತವೊಂದು ಹಿಡಿದು ನಿಲ್ಲಿಸಿದಂತಾಗಿ,ತನ್ನ ಬಗ್ಗೆಯೇ ನಡೆಯುತ್ತಿದ್ದ ಚರ್ಚೆಯನ್ನಾಲಿಸುತ್ತಾ,ಮರೆಯಲ್ಲಿ ನಿಂತುಬಿಟ್ಟಳು.ಭೈರಾಗಿಯ ಒಂದೊಂದು ಮತುಗಳೂ ಅವಳ ಹೃದಯದಲ್ಲಿ ಒಂದೊಂದು ಭದ್ರವಾದ ಗೋಡೆಯನ್ನು ಕಟ್ಟುವ ಇಟ್ಟಿಗೆಗಳಂತೆ ಭಾಸವಾಗತೊಡಗಿದವು.ಭೈರಾಗಿ ಎಲ್ಲವನ್ನೂ ಹೇಳಿದ ನಂತರ,ಅನಾಥೆ ಎಂದುಕೊಂಡವಳಿಗೆ ಬಾಂಧವ್ಯದ ಹೊಸ ಬೇರೊಂದು ಎದೆಯಾಳಕ್ಕಿಳಿದು ಆ ಗೋಡೆಗಳನ್ನು ಇನ್ನಷ್ಟು ಗಟ್ಟಿಗೊಳಿಸಿ,ಪ್ರೀತಿಯರಮನೆಯ ಕೋಟೆ ಕಟ್ಟಿದಂತೆ ಅನಿಸತೊಡಗಿತು.ಎದೆಯೊಳಗೆ ಸಿಹಿಕಂಪನ,ತವಕ ತಲ್ಲಣ!ಸ್ವಪ್ನಲೋಕದ ಕಲ್ಪನೆಯೇ?..ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡಳು.ಅಷ್ಟರಲ್ಲಿ ಅಭಿನವ್,ಸ್ವಾಮೀಜಿ,ಸ್ವಾಮೀಜಿ..ಈ ಕಲಾಕೃತಿಗೆ ಹೊಂದುವ ಹೆಸರು ಸಿಕ್ಬಿಡ್ತು..."ಹೇಮಚಂದ್ರಾ"..ಸ್ವಾಮೀಜಿ.."ಹೇಮಚಂದ್ರಾ"..ಈ ಚಿತ್ರದ ಹೆಸರು "ಹೇಮಚಂದ್ರಾ"..ಎನ್ನುತ್ತಾ,ಉತ್ಸಾಹದಿಂದ ನಲಿಯತೊಡಗಿದನು.ಆಗ ಆ ಭೈರಾಗಿಯು,"ಹೇಮಚಂದ್ರಾ",ಹಿತವಾಗಿದೆ ಶೀರ್ಷಿಕೆ;ಶುಭವಾಗಲಿ..ಎಂದು ನುಡಿಯುತ್ತಿರುವಾಗ,ಉತ್ಸಾಹದಿಂದ ಕುಣಿಯುತ್ತಿದ್ದ ಅಭಿನವ್ ಥಟ್ಟನೆ ನಿಂತುಬಿಟ್ಟನು.ಮರೆಯಲ್ಲಿ ನಿಂತಿದ್ದ ವಿನೀತಾಳನ್ನು ಆತ ನೋಡಿದನು.ಅವಳೆಡೆಗೆ ಸೆಳೆಸೆಳೆವ ಶಕ್ತಿಯನ್ನು ತಡೆಹಿಡಿಯಲೆತ್ನಿಸಿದ;ಸಾಧ್ಯವಾಗಲಿಲ್ಲ...‘ಹೇಮ’ಎಂದರೆ‘ಸ್ವರ್ಣ’..ಚಂದಿರನು ಎಂದೂ ಬೆಳದಿಂಗಳ ಮಗು..ಬೆಳ್ಳಿ ಬಟ್ಟಲು ಕಲಕಲ ನಗುವ ನಗು...ಬಿಳಿಹಾಲ ಬೆಳದಿಂಗಳ ಉಕ್ಕಿಸುವ ಕಡಲು ಒಳಗೊಳಗೂ..ಆದರೆ,ನನ್ನ ಈ ಬೆಳದಿಂಗಳ ಹುಡುಗಿ,ಚಂದ್ರನ ತಂಪಿನ,ಚಿನ್ನದ ಹೊಳಪಿನ ಬಾಲೆ..ಬೆಳ್ಳಿಯ ಚಂದಿರ ಎಲ್ಲರಿಗೂ ತಿಳಿದವನು..ಆದರೆ ಈಕೆಯೇ ವಿಶಿಷ್ಟಳು..ಅಂತೆಯೇ ಅವಳ ಈ ಚಿತ್ರ!ಸ್ವರ್ಣ ಶಶಿಯ ಕಾಂತಿ,ಎಲ್ಲ ಭ್ರಾಂತಿಯ ತಮಸ್ಸನ್ನು ತೊಳೆಯಲಿ...ವಿನೂತನಳು ಇವಳು..ಅದಕ್ಕೇ ಇವಳು ‘ಹೇಮಚಂದ್ರಾ’..ಎನ್ನುತ್ತಾ,ಅವಳಲ್ಲಿ ಬಂದು,ಅವಳ ಕೈಹಿಡಿದನು.ಅವಳ ಕಂಗಳಲ್ಲಿ ಉಕ್ಕುತ್ತಿದ್ದ ಆನಂದಕ್ಕೆ ಪಾರವೇ ಇರಲಿಲ್ಲ.ಪಾರಮ್ಯದ ಪರಿಧಿ ದಾಟಿದಾಗ ಸ್ಫುರಿಪ ತೇಜಸ್ಸು ಅವಳ ಕಂಗಳಲ್ಲಿ ಬೆಳಗುತ್ತಿತ್ತು.ಅರ್ಥವಾಗದ ದಿವ್ಯ ಭವ್ಯ ಧ್ಯಾನವೊಂದು ಮೊಗವನ್ನು ಆವರಿಸಿಕೊಂಡಿತ್ತು.ಜೊತೆಜೊತೆಗೆ ಕಣ್ಣಂಚಲ್ಲಿ ಮುತ್ತಂತೆ ಸಾಲಾಗಿ ಕುಳಿತ ಹನಿಹನಿ ಹನಿಗಳು...ಹೆಣ್ಣು ಜೀವದ ಆಭರಣವೆಂಬ ಲಜ್ಜೆಯಿಂದ ಕದಪುಗಳು ಕೆಂಪೇರಿದ್ದವು...ಅವಳನ್ನು ಬರಸೆಳೆದು ಅಪ್ಪಿಕೊಂಡು,ಅಭಿನವ್ ಅವಳ ಹಣೆಗೊಂದು ಮುತ್ತಿಟ್ಟನು.ಇತ್ತ...ಪ್ರತೀ ಹೃದಯದಲ್ಲೂ ಕವಿಯಿದ್ದಾನೆ;ಕಲಾವಿದನಿದ್ದಾನೆ...ಹೆಣ್ಣೆಂಬ ನಯ ನಾಜೂಕು,ಬೆಳಕಿನ ದೇವತೆಯನ್ನು ಆರಾಧಿಸುವ ದಿನದಂದಿನಿಂದ ಅವನ ಕಲೆ ಪಕ್ವವಾಗುತ್ತಾ ಹೋಗುತ್ತದೆ.ಪ್ರತೀ ಕಣದಲ್ಲೂ ಹೆಣ್ತನವಿದೆ...ಬಿರಿದಿದೆಯಿಲ್ಲಿ ಎದೆಗರ್ಭದ ಪ್ರೀತಿಯ ಸಿರಿಯ ಪರಿ..ತೆರೆದಿದೆ ಅಂತರಂಗದ ಕೊಳಲಿನ ಕರೆಗೆ ಒಲವಿನ ದಾರಿ..ಎನ್ನುತ್ತಾ,ಆ ಭೈರಾಗಿ ಮನೆಯ ಇನ್ನೊಂದು ಬದಿಯಿಂದ ನಡೆದುಹೋದ.ಹೋಗುತ್ತಾ,ಅವಳ ಚಪ್ಪಲಿಗಳನ್ನು ಕಂಡು ಮಂದಹಾಸ ಸೂಸಿದ...ಅಭಿನವನ ಚಪ್ಪಲಿಗಲ ಜೊತೆಗೆ ಅವಳ ಚಪ್ಪಲಿಗಳೂ ಜೊತೆಯಾಗಿದ್ದವು.ಚಪ್ಪಲಿಗಳೂ ಕೂಡ ಅವನ ಜೊತೆ ಹೆಜ್ಜೆ ಹಾಕಲು ನಿರ್ಧರಿಸಿದಂತಿದ್ದವು..ಸನಿಸನಿಹದ ಹೆಜ್ಜೆಗಾಗಿ ತವಕಿಸುತ್ತಿದ್ದವು..!ಕಳಚಿಕೊಂದಿತು ಸರಪಣಿಯ ಕೊನೆಯ ಕೊಂಡಿ..ಹುಡುಕಿಹೊರಟಿದೆ ಬದುಕಿನ ಒಂಟಿ ಹಾದಿಯ ಬೀದಿಲಿ ಹೊಸ ಸಂಬಂಧವನ್ನು,ಸುಮ್ಮನೆ ಈ ಬಂಡಿ..ಎನ್ನುತ್ತಾ,ಆ ಭೈರಾಗಿ ಹೊರಟುಹೋದ.ಜೋರಾಗಿ ಗಾಳಿ ಬೀಸಿತು.ಅಭಿನವ್ ಚಿತ್ರಿಸಿದ್ದ ಹೇಮಚಂದ್ರಾ ಅಭಿನವನ ಕಾಲಿನಲ್ಲಿ ಬಂದು ಬಿದ್ದಿತು.ಅಭಿನವ್ ಅದನ್ನೆತ್ತಿಕೊಂಡ.ಅದನ್ನು ನೋಡುತ್ತಲೇ ವಿನೀತಾ ವಿಸ್ಮಿತಳಾದಳು..ಇದು ಕೇವಲ ಆರಾಧನೆಯಲ್ಲ;ಎಲ್ಲರಿಗೂ ದಕ್ಕದ,ಪರಮ ಸೌಂದರ್ಯದ ಪರಿಪೂರ್ಣ ಉಪಾಸನೆ..ಸಾರ್ಥಕವಾಯಿತು ಈ ಜನ್ಮ..ಈ ಅದ್ಭುತ ಕಲಾವಿದನ ಕೈಯಲ್ಲಿ ನಾನೂ ಕುಂಚವಾಗಿಬಿಡಲೇ?..ನಿಮ್ಮ ಕಲೆಗೆ ನಾನು ವಿನೀತಳು..ಎನ್ನುತ್ತಾ,ವಿನೀತಾ ಅಭಿನವನ ಕಾಲುಗಳಿಗೆ ಹಣೆ ತಾಕಿಸಿದಳು ಮತ್ತು ಎದ್ದುನಿಂತು ಅವನನ್ನು ಬಿಗಿಯಾಗಿ ಅಪ್ಪಿಕೊಂಡು,ಅವನೆದೆಗೆ ತಲೆ ಒರಗಿಸಿಕೊಂಡಳು.ಅವನು ಅವಳ ತಲೆಯನ್ನು ನೇವರಿಸತೊಡಗಿದನು...ಅಭಿನವನ ತಂದೆತಾಯಿ ವಿಸ್ಮಯದಿಂದ ನೋಡುತ್ತಿದ್ದಾರೆ...ಅತ್ತ ಎಲ್ಲೋ ಒಂದು ಕಡೆ ಭೈರಾಗಿ ಗುನುಗುನಿಸುತ್ತಲೇ ಇದ್ದ...ಜಗತ್ತಿನ ಪ್ರೀತಿ ಕಾವ್ಯ ಚರಿತೆಯ ಪುಸ್ತಕಕ್ಕೆ ಮತ್ತೊಂದು ಪುಟದ ಕವಿತೆ ಸೇರಿಹೋಯಿತು...ಖಾಲಿ ಖಾಲಿ ಹಾಳೆಯಲ್ಲಿ ಇನ್ನು ಮುಂದೆ ಸಾಲು ಸಾಲು ಅಕ್ಷರಗಳ ಸಂಗಮದ ಹಂಗಾಮ...ಖಾಲಿ ಪುಟದ ಮೇಲೆ ಬಣ್ಣಬಿದ್ದರೂ ಕೂಡ,ಆ ಬಣ್ಣಕ್ಕೊಂದು ಅರ್ಥ ಬರುತ್ತದೆ...ಖಾಲಿ ಕಾಗದವೂ ಒಂಟಿತನದಿಂದ ಜಂಟಿತನಕ್ಕೆ ನಂಟಾಗುತ್ತದೆ.ಖಾಲಿ ಬದುಕಿಗೂ ನಾಳಿನ ಕಾಲುದಾರಿಯ ಕಾಯುವ ಮನಸ್ಸಾಗುತ್ತದೆ.ಖಾಲಿತನವೇ ಎಲ್ಲವನ್ನೂ ತುಂಬಿಕೊಡುವ ಗಾಳಿಯಾಗುತ್ತದೆ...ಶೂನ್ಯದಲ್ಲಿನ ಪರಿಪೂರ್ಣತೆಯೆಂದರೆ ಇದೇನಾ?ಪ್ರಕೃತಿಯ ಎರಡು ಜೀವಗಳ ಮಿಲನ,ಪ್ರಕೃತಿಯಿಂದಲೇ ರಚಿಸಲ್ಪಟ್ಟ ಅಪೂರ್ವ ಕಥನ ಕವನ..ಬರಿಯ ರೇಖೆಗೂ ಎರಡು ಬಿಂದು ಬೇಕು...ಅದೇ ಪ್ರೀತಿ!ಬಡ ಜೋಗಿಗೂ ಬಿಡಲಿಲ್ಲ ನೋಡು,ಸಂಸಾರದಾ ಹಾಡು..ಖಾಲಿಯಲ್ಲ ಯಾವುದೂ!..ಶೂನ್ಯವನ್ನೂ ತುಂಬುವುದು ಒಂಟಿ ಕೈಯ ಚಪ್ಪಾಳೆಯ ಶೂನ್ಯದಾ ಸದ್ದು..ಬಹುದೂರದವರೆಗೂ ಭೈರಾಗಿ ಗೊಣಗುತ್ತಲೇ ಇದ್ದ...ದೂರದ ದೇವಸ್ಥಾನದಲ್ಲಿ ಮಧ್ಯಾಹ್ನದ ಪೂಜಾಶಂಖನಾದ ಹೊಮ್ಮಿತು...ಸತ್ಯದ ಮಹಾಸಾಕ್ಷಿಯೆಂಬಂತೆ;"ಕ್ಷೇತ್ರೇ ಕ್ಷೇತ್ರೇ ಧರ್ಮಂ ಕುರು" ಎಂಬ ದಿವ್ಯ ನಿನಾದ ಝೇಂಕಾರದೊಂದಿಗೆ...


                                                         ** ** **



                                                                                                             ~‘ಶ್ರೀ’
                                                                                                               ತಲಗೇರಿ

ಶನಿವಾರ, ಆಗಸ್ಟ್ 18, 2012


              "ಪ್ರೀತಿಯ ಪರಿಚಯಕೆ"...


     ನನ್ನೆದೆ ಪುಟದೊಳಗೆ ಸಖೀ
     ನಿನ್ನದೇ ಬರವಣಿಗೆ
     ಪ್ರೀತಿಯ ಪರಿಚಯಕೆ ಸಖೀ
     ಪದಗಳ ಮೆರವಣಿಗೆ..

     ಮೀಟಿದ ರಾಗದ ಎಳೆಯ
     ಭೇಟಿಯು ನಿನ್ನದೇ ಕ್ಷಣವು
     ಗೀಚಿದ ಶಾಯಿಯ ಗೆರೆಯ
     ತಿದ್ದಲು ನಿನ್ನದೇ ಒಲವು
     ಪ್ರೀತಿಯ ಪರಿಚಯಕೆ ಸಖೀ
     ಹೃದಯದ ಕನವರಿಕೆ..

     ದಾಟಿದ ದಾರಿಯ ಕವಲು
     ನೀಡಿದೆ ಪ್ರೀತಿಯ ನೆರಳು
     ಸುರಿಯುವ ಸೋನೆಯ ಮಳೆಗೆ
     ನೆನೆದಿದೆ ನೆನಪಿನ ಮಹಲು
     ಪ್ರೀತಿಯ ಪರಿಚಯಕೆ ಸಖೀ
     ಕನಸಿನ ಚಡಪಡಿಕೆ..


                               ~‘ಶ್ರೀ’
                                 ತಲಗೇರಿ