ಗುರುವಾರ, ಜನವರಿ 30, 2014

"ಒಳ ಕಿಟಕಿಯಲಿ.."

ತಮ್ಮೆಲ್ಲರ ಪ್ರೀತಿ ಹೀಗೇ ಇರುತ್ತದೆಂಬ ಭರವಸೆಯೊಂದಿಗೆ...ನನ್ನ ಕಾವ್ಯಜೀವನದ ೨೦೦ನೇ ಕವಿತೆ....

 "ಒಳ ಕಿಟಕಿಯಲಿ.."

ಕತ್ತಲೆಯೆ ಕೊಡು ನನಗೆ
ನಿನ್ನೆದೆಯ ನಡು ಛಾಯೆ..
ಬೆಳಕ ಪುಳಕದ ಒಳಗೆ
ತಂಪ ಕೊಡಲಿ ಹೊಸ ಮಾಯೆ...

ಭ್ರಾಂತಿ ನೂಲಿನ ಬೆಸುಗೆಯಿಂದಲಿ
ಹೊಲಿದು ತೊಟ್ಟಿಹ ಮೋಹದರಿವೆ..
ಹರಿತ ನೆರಿಗೆಯ ಅಂಚುಗಳಲಿ
ಅಲೆದು ಕಳೆದಿದೆ ನಿಜದ ಪರಿವೆ..

ನನ್ನೆದೆಯ ಒಳಕಿಟಕಿಯಲಿ
ಹೊಂಚುಹಾಕಿದೆ ಬೆಳಕ ಕಿರುಬಾಣ..
ಸುಳಿವಿರದ ನವ ಸೆಳೆತದಲಿ
ಮುಳುಗಿಹೋಗದೆ ತೇಲೀತೇ ಹರಿವಾಣ..

ಮರದ ಆಟಿಕೆಯ ಮನಸಿನೊಳಗೆ
ರಂಧ್ರ ಕೊರೆಯಲೇ ಭಾವ ತೂರಲು..
ಬೆರೆವ ಒಲವಿನ ತೈಲದೊಳಗೆ
ಅದ್ದಿ ತೆಗೆಯಲೇ ಎಲ್ಲ ಕೀಲು..

ದಿನವು ತೀರದ ದಾಹದೊಳಗೆ
ವಿರಹವನು ಬೆರೆಸಿ ತುಳುಕಿಸಲೇ..
ಕತ್ತಲೆಯೇ ನೀ ಸುಳಿಯೆ ಬಳಿಗೆ
ಆಗಾಗ ತಿಳಿಯಲಿ ಬೆಳಕಿನಾ ಬೆಲೆ...

                             ~‘ಶ್ರೀ’
                               ತಲಗೇರಿ


ಶನಿವಾರ, ಜನವರಿ 4, 2014

"ರದ್ದಿ ಕಾಗದ"...

       "ರದ್ದಿ ಕಾಗದ"...

ತಾಜಾ ಹಾಳೆಗಳ ನಡುವೆ
ರದ್ದಿ ಕಾಗದವು ನಾನು...
ಹಗಲ ಹೊಳಪಿನ ನಡುವೆ
ಇದ್ದರೂ ಇರದ ಬದುಕೆನಲೇನು..

ಪುಟ್ಟ ಕೈಗಳಲಿ ದೋಣಿಯಾಗಿ
ಸಲಿಲದೊಡನೆ ಸಲಿಗೆಯೊಡನೆ ತೇಲಿಸಾಗಿ
ಮುಟ್ಟೋ ಸುಳಿಗಳಲಿ ದಿಟ್ಟವಾಗಿ
ಸೇರಿಕೊಳಲೇ ದೂರಸಾಗರ ಒಂಟಿಯಾಗಿ..

ಚುಕ್ಕಿ ದಿರಿಸ ತೊಟ್ಟ ಪಟವಾಗಿ
ಗಾಳಿಯೊಡನೆ ನಿತ್ಯ ಬೆಳೆವ ಹಟವಾಗಿ
ಹಕ್ಕಿಯುಸಿರು ಬೆರೆವ ಎದೆಯಾಗಿ
ತಬ್ಬಿಕೊಳಲೇ ಮುಗಿಲ ಮಡಿಲ ಮುಗ್ಧವಾಗಿ..

ಹಸಿದ ಉದರದ ತಂಪಿಗಾಗಿ
ತಂತಿ ಮೀಟುತ,ಸದ್ದಿನೊಡನೆ ಏಕವಾಗಿ
ಅಲೆವ ಜೋಗಿಯ ಸಲುವಾಗಿ
ಅನ್ನ ಹಿಡಿಯಲೇ ತುತ್ತಿನೂಟದ ಎಲೆಯಾಗಿ..

ರದ್ದಿ ಕಾಗದವೇ ನಾ ಆದರೇನು,..
ಚೆಲುವು ನಾಚಬೇಕು ನನ್ನ ಇದಿರು..
ಬೀಡುಬಿಟ್ಟ ಮೌನ ತಾಕದೇನು,..
ಕನಸ ತಟದ ಹೊಸತು ಕದಿರು...!

                          ~‘ಶ್ರೀ’
                            ತಲಗೇರಿ

ಶುಕ್ರವಾರ, ಜನವರಿ 3, 2014

"ಯೌವನದ ಮೂಸೆಯೊಳು"...

      "ಯೌವನದ ಮೂಸೆಯೊಳು"...

ಕತ್ತಲೆಯ ಪದರಿನಲಿ ತುಂಬು ಮೌನ
ಮೆತ್ತನೆಯ ಮಂಚದಲಿ ರತಿಯ ಧ್ಯಾನ..
ಕಲ್ಪನೆಯ ಸರಪಳಿಗೆ ಹಲವು ಕೊಂಡಿ
ಭ್ರಮೆಗಳಲೇ ಹೊಳೆವ ಪುಟ್ಟ ಬೆಳಕಿಂಡಿ..

ಮೌನದೊಳಗೆ ಸದ್ದಿಲ್ಲ,ಖಾಲಿ ಏಕಾಂತ
ಏಕಾಂತದೊಳಗು ನೆನಪ ಲಯ ತಾಳ ಮಿಡಿತ!
ಶೂನ್ಯದೊಳು ಬೆರೆತೀತೇ ಚಪ್ಪಾಳೆಯಾ ಸದ್ದು
ತುಡಿತವದು ಮೊದಲಾಯ್ತು ಶೂನ್ಯದಲೇ ಚಪ್ಪಾಳೆಯೆದ್ದು..

ನಿಶೆಯೊಳಗೆ ರೆಪ್ಪೆಗಳಲಿ ಬಣ್ಣದಾ ಸಾಲು
ನೆನಪುಗಳ ಜೊತೆ ಕಳೆವಾಗ ತಿಳಿನೀರ ಕಡಲು..
ಕನವರಿಸಿದ ಕನಸುಗಳ ಲೆಕ್ಕ ತಲೆದಿಂಬಿಗಿಲ್ಲ
ನಾಜೂಕು ಸಂಚಲನ ಇನ್ನು ನನ್ನೊಳಗೇ ಎಲ್ಲ..

ಬಿಸಿಯುಸಿರ ಗೊಣಗಾಟ ಕತ್ತಲಿನ ಛಾಯೆಯಲಿ
ನೂರೆಂಟು ಏರಿಳಿತ ಹಸಿಮನದ ಮೂಲೆಯಲಿ..
ಯೌವನದ ಮೂಸೆಯೊಳು ಎಲ್ಲ ಕರಗುವ ಮುನ್ನ
ಮಿಣುಕು ದೀಪಕೆ ತೆರೆದ ಮೈಗೂ ಚಿನ್ನದಾ ಬಣ್ಣ..

ಕತ್ತಲೆಯ ಪದರಿನಲಿ ತುಂಬು ಮೌನ
ಮೌನದಲಿ ಸೃಜಿಸೀತೇ ಸೃಷ್ಟಿಯಾ ತನನ..
ಮೋಹದಾ ಸೆಳೆತಕೆ ವಾಸ್ತವಕೂ ಮಂಪರು
ಭ್ರಮೆಗಳಲೇ ಇಣುಕೀತೇ ಬೆಳಕು ಒಂಚೂರು...


                                  ~‘ಶ್ರೀ’
                                    ತಲಗೇರಿ