ಶನಿವಾರ, ಫೆಬ್ರವರಿ 15, 2014

"ಮೃಗಜಲದ ಬಿಂಬದಲಿ"....

      "ಮೃಗಜಲದ ಬಿಂಬದಲಿ"....

ಮರಳುಗಾಡಲಿ ತಾನೇ ಅರಳಿರುವ ಹೂವೇ
ಅಂತಃಸತ್ತ್ವವನು ಹೀರಿ,ಬಯಕೆಗಳ ಮೀರಿ..
ಮೃಗಜಲದ ಬಿಂಬದಲಿ ಮಾಯೆಯಾ ಪರಿವೆ
ಹುಡುಕಿಹೊರಟಿಹೆ ನೀನೆ ಬೇರಿನಾ ಕವಲುದಾರಿ..

ಬಿಸಿಲ ಬಿಸಿ ಚಟಕೆ ತೆರೆದ ಹರವು
ಎದೆಯ ತುದಿ ಜಿನುಗಿದ್ದ ಇಬ್ಬನಿಯ ಸಾವು..
ಮುಗಿಲ ಸಂಕಟಕೆ ಮೊರೆತ ಹಲವು
ಆಗಾಗ,ತಾನೇ ಹುಟ್ಟುವುದು ಚಂದಿರನ ಶವವು..

ಮೂರು ಹೆಜ್ಜೆಗಳ ದೀರ್ಘ ಪಯಣಕೆ
ಗುರುತು ಮೂಡಿಸದೆ ಹಸಿವ ಮರಳ ಬೀದಿ
ಹಾರೋ ಕಣಗಳ ಹೊಸ ಸಂಚಿನಾಟಕೆ
ಕೊನೆಯ ಎಳೆವುದು ಧರಣಿ ತನ್ನ ಸೆಳೆತದಿ...

ಕನಸ ಬೆಳ್ಳಕ್ಕಿ ಕಟ್ಟಿಹುದೇ ಸೇತು
ಕೂಡಿಕೊಳಲು ಗಾಳಿ ತಾ ಮುಗಿಲ ಬಳಗ..
ಕಲ್ಲೆದೆಯ ಒಳಗೆಲ್ಲೋ ಜೀವತಂತು
ಮೀಟುವುದ ತುಸು ಕೇಳಬಲ್ಲೆಯಾ ಅಂತರಂಗ...

ಮರಳುಗಾಡಲಿ ತಾನೇ ಅರಳಿರುವ ಹೂವೇ
ಹಂಚಬಲ್ಲೆಯಾ ಕೊಂಚ ದಿವ್ಯ ಸೌರಭ..
ನಡೆವ ಹಾದಿಯ ತುಂಬ ನನ್ನ ಸಲುವೆ
ಒಲಿಸಿಕೊಡುವೆಯಾ ಒಲವೇ ಸಣ್ಣ ಆರಂಭ..

                              ~‘ಶ್ರೀ’
                                ತಲಗೇರಿ

ಭಾನುವಾರ, ಫೆಬ್ರವರಿ 2, 2014

"ಹಸಿವು.."

     "ಹಸಿವು.."

ಖಾಲಿ ಹಾಳೆಯ ಮೇಲೆ ಮೂಡಿದೆ
ಬರೆವ ಬೆರಳಿನ ಮೋಟು ನೆರಳು..
ಬಿದಿರ ತೂತಲಿ ಗಾಳಿ ಸಾಗಿದೆ
ಶ್ರುತಿಯ ಹಿಡಿಯಲು ನಿರತ ಕೊಳಲು..

ಕತ್ತಲೆಯ ನಿಬಿಡ ಏಕಾಂತ
ಬಯಸುವುದು ಬೆಳಕಿನಾ ಸಂಗೀತ..
ಹಬ್ಬಿರುವ ಲತೆಯ ಸೆಳೆತ
ಮರದೊಳಗೆ ಬೆಳೆಸುವುದು ಬಿಗಿತ..

ಕಣ್ಣೆವೆಯ ತುದಿಯ ಬಣ್ಣಕೂ
ಕನಸಿನೊಂದಿಗೆ ತಾ ಬೆರೆವ ತವಕ
ಮಣ್ಣೆದೆಯ ಪ್ರಸವ ಗಂಧಕೂ
ನೀರಹನಿಗಳ ನಾಜೂಕು ಪುಳಕ

ಜಾರಿರುವ ಸೆರಗ ಕಂಪನ
ಮದನ ಮಳೆಯ ಮೊದಲ ಗುರುತು
ಇಂದ್ರಿಯದ ಅದಿರ ಉತ್ಖನನ
ಬಿಸಿಯುಸಿರ ಸುಳಿಯೊಳಗೆ ಬೆರೆತು..

ಹಸಿದ ಉದರದ ಒಂಟಿ ಕೂಗು
ಹಾಡಾಗಿದೆ ಜೋಗಿಯಾ ತಂಬೂರಿ ತಂತಿಯಲಿ..
ಮನದ ಬಯಕೆಗೆ ನೂರು ಸೋಗು
ತಂಗಿಹುದು ಹಸಿವು ಈ ಬದುಕ ಸೀಸೆಯಲಿ..

                                   ~‘ಶ್ರೀ’
                                     ತಲಗೇರಿ