ಶುಕ್ರವಾರ, ಅಕ್ಟೋಬರ್ 23, 2015

"ಅಮಲು"...

    "ಅಮಲು"...

ಪಾರಿಜಾತದಾ ಕೇರಿಯಲಿ
ಪರಿಪರಿಯ ಪರಿಧಿಯಲಿ
ನಿನ್ನ ಹಂಗೆನಗೆ..
ಹರಿದ ಎದೆ ಭಿತ್ತಿಯನು
ಹೊಲಿದುಕೊಡುವೆಯಾ ನನಗೆ..
ಒಮ್ಮೆ ಹೀಗೇ...

ಕವಳದಾ ತುಟಿಗಳಲಿ
ಹವಳಗಳನು ಅಳೆವವಳೇ
ಹೇಳಲಾರೆಯಾ ನನಗೆ ಸೋಜಿಗದ ಲೆಕ್ಕ..
ತುಸು ತುಸುವೇ ರಂಗಿನಾ ಗುಂಗು
ಹಂಚುವೆಯಾ ನನಗೂ
ಅರಳಿಸೆಯಾ ಕುಂಚ,ವಿರಹದಾ ಬಳಿಕ..
ಕಟ್ಟುವೆನು ಪ್ರೀತಿ ಸುಂಕ...

ಬಿದಿರು ಕೋಲಿನ ಒರಟಿಗೆ
ಹರಿತ ಸ್ವರಗಳ ಹದವಿಡುವವಳೇ
ಒಸರಲಿದೆ ತನಿಗವನ..
ಮೊದಲ ಬದಲಿನ ಒಗಟಿಗೆ
ನೀನೇ ತಾನೇ ಅದಿರು
ಬೇಕೀಗ ಖಾಸಗಿತನ..
ನವಿರು ಹಂಬಲಕೆ...

ಬಿಡಿಯ ಬಡಿತದ ಸೊಗಡಿನಲ್ಲಿ
ಹಕ್ಕು ನಿನ್ನದು ಬಿಡಾರ ಹೂಡಲು..
ಮಸುಕು ಕವಿದರೂ ಮತ್ತೆ ಮನಸಿನಲ್ಲಿ
ಒಮ್ಮೆ ನೋಡು,ಹೆಸರಿಡದೆ ನಾ ಕರೆದಾಗಲೂ..
ನೀನೇನೇ ಜೀವನದಾ ಅಮಲು...

                                ~‘ಶ್ರೀ’
                                    ತಲಗೇರಿ

ಭಾನುವಾರ, ಅಕ್ಟೋಬರ್ 11, 2015

"ನೇಹಿಗ"...

      "ನೇಹಿಗ"...

ಒಂದು ಹೆದ್ದಾರಿಯಾ ಬದಿಗೆ
ಮೈಚಾಚಿ ಮೆರೆಯುತ್ತಿತ್ತು ಅರಮನೆ..
ಮುಚ್ಚಿದಾ ಬಾಗಿಲ ಫಲಕದಾ ಮೇಲೆ
ಬರೆದಿತ್ತು..
ತಟ್ಟಬೇಡಿರಿ ಕದವ,ಭಿಕ್ಷುಕರು ನೀವು
ನನಗೆ ಸರಿಸಮರಲ್ಲ..

ದಾರಿಹೋಕನ ಧ್ಯಾನಕೀಗ
ಹೂಬಿಡುವ ಸಮಯ..
ಮಗ್ಗಲು ಬದಲಿಸಿತು
ಕುತೂಹಲದ ಖಯಾಲಿ..
ಬಾಗಿಲಿಗೆ ಬಂದು ದೂಡಿದೆ;
ತೆರೆದುಕೊಂಡಿತು,ಚಿಲಕ ಹಾಕಿರಲಿಲ್ಲ..

ಅತಿಥಿಯೆಂದು ನೀ ತುತ್ತನಿಡಲಿಲ್ಲ;
ನೀರ ಕರೆಯಿಲ್ಲ..
ಹಂಗೆಂದರೆ ನಾ ಮೆಟ್ಟಿದಾ ನೆಲ ಮಾತ್ರ..
ನೀನೆಸೆದ ತಾತ್ಸಾರಕೆ,ಹಂಚಿಕೊಳಬಲ್ಲೆ ನಾನು
ಜೀವ ತುಂಬಿದಾ ಒಲವ ನಗೆ ಜೇನು..

ದ್ವೇಷ ಮತ್ಸರ ಮೋಹದಾಸೆಗಳ ಸಂಗ್ರಾಮದಲಿ
ನಿನ್ನ ಹೃದಯದಾ ತುಂಬೆಲ್ಲ ಗೀರುಗಳು..
ಕೊಡಲೆಂದೇ ಬಂದಿಹೆ,ಅದಕೊಂದು ವಿನ್ಯಾಸ..
ನೀ ಬಯಸದಿದ್ದರೇನಂತೆ!..
ಅರ್ಥಗಟ್ಟೀತು ಬೆವರು,ಆವಿಯಾಗುವಾ ಮುನ್ನ..
ನಿನ್ನಲ್ಲೇ ತಂಗೀತು ತನಿಗಂಪು ರಸವು..

ಹಲವು ನದಿಗಳು ಸೇರದೇನೇ
ಹುಟ್ಟೀತು ಹೇಗೆ ಉಕ್ಕುವಾ ಕಡಲು..
ಈಗಷ್ಟೇ ನಾ ತೆರೆದ ಕಿಟಕಿಗಳಲಿ,ನುಸುಳೀತು ಬೆಳಕು
ಚಿಗುರೀತು ನಿನ್ನೆದೆಯಲ್ಲಿ ಬಿತ್ತಿದಾ ಬೀಜ
ಮಣ್ಣಿಗೂ ಬೇರಿಗೂ ಎಷ್ಟೋ ಜನುಮದ ಬಂಧ..

ಮಸಣ ಮೌನವ ಕಳೆದು
ಚಿಲಿಪಿಲಿಯ ಕರೆತಂದ
ನೀನ್ಯಾರೆಂಬ ನಿನ್ನ ಪ್ರಶ್ನೆಗಿಲ್ಲಿದೆ  ಉತ್ತರ..
ಪದಗಳನು ಹೆಕ್ಕುತಾ,ಭಾವಗಳನು ಚೆಲ್ಲುತಾ
ಅಲೆಮಾರಿಯಂತೆ ಎದೆಯೆದೆಗೆ ನಡೆವಾ
ನಾನು ‘ಕವಿ’ಯು....!!

                                  ~‘ಶ್ರೀ’
                                    ತಲಗೇರಿ

ಶನಿವಾರ, ಅಕ್ಟೋಬರ್ 3, 2015

"ಹ್ರಸ್ವ..."

        "ಹ್ರಸ್ವ..."

ಬಿಸಿಲ ಬನದಲಿ ಹಾಯಿದೋಣಿಗೆ
ಮೈದಡವುತಿರುವ ಅಲೆಗಳಲ್ಲೇ ಸಂಭ್ರಮ..
ಹೆಗಲಿಗೇರಿದಾ ಮುಗಿಲ ತೊದಲಿಗೆ
ಗಗನ,ನಂಟು ಬೆಸೆಯುವ ಮಾಧ್ಯಮ..

ಶೀತಗಾಳಿಯ ಸಲಿಗೆಗೆಲ್ಲಾ
ಬರೆದು ಇಟ್ಟಿದೆ ಗಳಿಗೆಯಾ ಸಹಿಯನು;
ನಾವೆಯನು ಧ್ವನಿಸುವಾ ಆ ಬಿಳಿಯ ಧ್ವಜವು..
ಮಾತು ಸರಿಯದ ಕೊರಳ ತುಂಬ
ತಂತು ಕಂಪನ,ಜನ್ಯ ಶ್ರಾವಣ..

ರಂಗು ಕುಸುರಿಯಾ ಚಿಟ್ಟೆಯಂತೆ
ಹ್ರಸ್ವವೆಂದೂ ಎಲ್ಲ ಋತುಮಾನ..
ಬತ್ತಿಹುದು ಒಡನಾಡಿ ಕಡಲು
ಗೆದ್ದಲಿಗೂ ಎದೆಯ ಕೊಟ್ಟಿವೆ
ದೋಣಿಯಾ ದಳಗಳು..

ಉಸುಕ ಹಸೆಯ ಚಾದರದಿ
ಡೇರೆ ಹೂಡಿವೆ ಆಸೆಗಳ ವಿನ್ಯಾಸಗಳು..
ಮತ್ತೊಮ್ಮೆ ಹರೆಯವಾ
ಎದುರುನೋಡುತಿದೆ ಆ ಬಿಳಿಯ ಧ್ವಜವು..
ಕಡಲಿನಾ ಪ್ರೀತಿಯಲಿ...

                                  ~‘ಶ್ರೀ’
                                     ತಲಗೇರಿ