ಕಟ್ಟೆಯೊಡೆದು......
ಒತ್ತಿಡದಿರು,ನೆತ್ತರಿನ ಕಣಕಣದಿ
ಒತ್ತರಿಸಿ ಉಕ್ಕುತಿಹ ಭಾವಗಳ ಬುಗ್ಗೆಯನು
ಮತ್ತೇಕೆ?ಬೆಟ್ಟವಾಗುತಿದೆ ಕಟ್ಟೆಯಲಿ;
ಅತ್ತುಬಿಡು ಕಟ್ಟೆಯೊಡೆಯಲಿ
ನಿತ್ಯ ಬಡಿಯುತಿಹ ಅಲೆಯ ಸೊಕ್ಕದು
ಅಡಗಿಹೋಗಲಿ ಮನದ ಕಡಲಲಿ...
ವಿಚಲ ಮನಸಿನ ಹುಚ್ಚು ಕಲ್ಪನೆ
ಬೆಚ್ಚನೆಯ ಕನಸು ಕಾಣುತ ಸುಮ್ಮನೆ!
ಕೂರದಿರು,ಒಮ್ಮೆ ಬಿದ್ದು ಮತ್ತೆ ಏಳಬಹುದು
ಕೊರಗದಿರು,ಕತ್ತಲೆಯ ಅ೦ತ್ಯವದು ಕಾದಿಹುದು!
ಅಚ್ಚಳಿಯದ ಸ್ಮೃತಿಯ ಪುಟದಲಿ
ಸ್ವಚ್ಛ ಮನದ ಭಾವದೊಡಲಲಿ
ಅಚ್ಚೊತ್ತಿದೆ ಪ್ರೀತಿ ಚಿತ್ರವದು
ಸವಿಯ ಮುತ್ತ೦ತೆ ಎದೆಯ ಗೂಡಲಿ!
ಒಮ್ಮೆ ಅತ್ತಿದ್ದು ಸಾಕು,ಮತ್ತ್ಯಾಕೆ ಬೇಕು?
ಕಹಿಯು ತಾನು ಕರಗಬೇಕು!
ಬಿತ್ತರಿಸು ಮನದ ಮುಗಿಲನು
ಹಿತವು ಸೋಕಿದೊಡೆ ಸ್ವಾಗತಿಸು ವರ್ಷವನು!
ನಿನ್ನ ಕ೦ಬನಿ;ಜೀವ ವಾಹಿನಿ
ಬನ್ನ ಉ೦ಡಿಹ ನಿನ್ನ ಉದರಕೆ
ಕಣ್ಣು ಮುಚ್ಚುವ ನಿನ್ನ ಉಸಿರಿಗೆ
ಮಣ್ಣು ತಬ್ಬುವ ನಿನ್ನ ತನುವಿಗೆ
ಸಣ್ಣ ಗೆಲುವಿನ ಹನಿಯು ಇಳಿದರೆ?!
ಜನುಮ ಜನುಮದ ದಿವ್ಯ ಸಾಧನೆ!
ಕಣ್ಣ ಬಿ೦ದುವೇ ನೀ ಬತ್ತದಿರು
ಬೇಕೆನಗೆ ಮತ್ತೆ ನೀ ನದಿಯಾಗಿ
ಸೋತ ಮುಖವ ತೊಳೆಯಲು!
ಮತ್ತೆ ಕ೦ಗಳು ಚೈತ್ರ ಕಾಣಲು
ವಿಜಯ ಚಿಲುಮೆ ಹಾಗೆ ಒಲುಮೆ
ಮೂಡಿಬರುತಿದೆ ತುಟಿಯ ಅ೦ಚಲಿ
ಮೃದುಲ ಬದುಕ ಸ್ಪರ್ಶಿಸಲು!!......
~‘ಶ್ರೀ’
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ