ಬುಧವಾರ, ಜುಲೈ 16, 2014

"ಮತ್ತೆ ಮೂಡುವ.."

"ಮತ್ತೆ ಮೂಡುವ.."

ಅಸ್ತಮಿತ ಆಸೆಗಳ
ಅಂತರಂಗದ ಬಣ್ಣಗಳು
ಕಳೆದ ಸಂಜೆಗೆ
ಮೆರಗು ನೀಡಿಹೋಗಿವೆ
ಅಸ್ತಮಕೂ ಮುನ್ನವೇ..

ಬಾನ ಹೆದ್ದಾರಿಯಲಿ
ತಾರೆಗಳೊಂದೊಂದು ಮೈಲಿಗಲ್ಲು
ಚಂದಿರನ ತೇರಿಗೆ..
ಕಾರಿರುಳ ನೆಳಲಿನಲಿ
ಕತೆಗಳೆಲ್ಲವೂ ಚೆದುರಿಹವು
ಅವರವರ ಪಾಲಿಗೆ..

ಬರೆಹವಾಗದೇ ಉಳಿದ
ನನ್ನದೆಯ ಬಿಡಿ ಭಾವಗಳ
ನಿಡುಮೌನದ ತರಹ;
ಬೀಸಣಿಕೆಯ ನಶೆಯಲ್ಲಿ
ತಂಪು ಕಂಡಿದೆ
ನಡುರಾತ್ರಿಯ ವಿರಹ...

ಮತ್ತೆ ಮೂಡುವ
ಅರುಣನಿಗೋ
ಬಣ್ಣಗಳ ಚಟ..
ಮಡಿಕೆಗಳ ಮಡಿಲಲ್ಲಿ
ನೆರಳಿನಾ ಆಟ..
ಕರಗಿಲ್ಲ ದ್ವಂದ್ವ
ಯಾವುದು ಸತ್ಯ;
ಕತ್ತಲೆಯ ನೆರವೋ..
ಇಲ್ಲಾ,ಬೆಳಕಿನಾಸರೆಯೋ...

                                ~'ಶ್ರೀ'
                                    ತಲಗೇರಿ

2 ಕಾಮೆಂಟ್‌ಗಳು:

  1. ’ಬರೆಹವಾಗದೇ ಉಳಿದ
    ನನ್ನದೆಯ ಬಿಡಿ ಭಾವಗಳ
    ನಿಡುಮೌನದ ತರಹ;’
    ಒಳ್ಳೆಯ ಸಾಲುಗಳು.

    ಪ್ರತ್ಯುತ್ತರಅಳಿಸಿ
  2. ಪ್ರತೀ ಕವಿತೆಗೂ ಪ್ರೀತಿಯಿಂದ ಪ್ರತ್ಯುತ್ತರ ನೀಡೋ ತಮಗೆ ಹೃತ್ಪೂರ್ವಕ ಧನ್ಯವಾದ ಬದರಿ ಸರ್...

    ಪ್ರತ್ಯುತ್ತರಅಳಿಸಿ