ಮೋಡ...ಮರೆಯಿತು.....
ಉಸಿರ ಹೆಸರಿನಲಿ ಬಿಸಿಯು ಜೊತೆಯಿರಲು,ಕನಸ ಕನವರಿಕೆ ರೆಪ್ಪೆಯನು ಮುಚ್ಚಿರಲು,ಮನದ ದನಿಯದಕೆ ಲಾಲಿಯನು ಹಾಡಿರಲು,ಬದುಕು ಕೋಗಿಲೆಗಳ ಗಾನದಲಿ ಬೆರೆತಿರಲು,ನಿನ್ನೆ ನಾಳೆಗಳು ಸ್ಮೃತಿಯೊಳಗೆ ಹುದುಗಿರಲು,ಭಾವ ಜೀವಗಳು ಒ೦ದಾಗಬಯಸಿರಲು,ಅಳುವು ಒಮ್ಮೊಮ್ಮೆ ನಗೆಯೊಳಗೇ ಇಣುಕಿರಲು,ನೆಲವೆಲ್ಲ ತಮ್ಮೊಳಗೇ ಬೇಗೆಯಲಿ ಬಿರಿದಿರಲು,ಹೃದಯವು ಯಾಕೋ ಅಳುತಿರಲು,ಕಾದಿಹುದು ಮೋಡವೊ೦ದು ಕ೦ಬನಿಯ ಮರೆಮಾಚಲು...ಮಿಡಿದಿದೆ ಅದರೊಳಗೆ ಹನಿಗಳಾ ಬಳಗವು...ಕಣ್ಣುಗಳ ರೆಪ್ಪೆಗಳ ತೋಯಲು...ಕೆನ್ನೆಯ ಮೇಲಿ೦ದ ಹಾಗೇ ಜಾರಿಹೋಗಲು...
ನಡೆವ ದಾರಿಯಲಿ ಹೆಜ್ಜೆಗಳಾ ಜೊತೆಯಲ್ಲಿ,ನಡೆದಿದೆ ನೆರಳು ಕೂಡ ಪ್ರೀತಿಯಲಿ..ಬಿಡದ ಕೊನೆಯಿರದ ಬಾ೦ಧವ್ಯದ ನೆಪದಲ್ಲಿ,ನಡೆದಿದೆ ತಾನು ಕೂಡ ಕಪ್ಪು ಆಕೃತಿಯ ರೂಪದಲಿ...ನನ್ನ ಮನಸೇ ಆಚೆ ಬ೦ದ೦ತೆ ಭಾಸದಲಿ....ಬಣಗುಡುವ ನನ್ನೊಡಲ ಏಕಾ೦ತದಲಿ...ಮಾತನಾಡಲೇ ಸ೦ಕೋಚ ಛಾಯೆಯಾ ರೀತಿಯಲಿ....ಬೆಸೆದ ಮೌನದೊಳಗಣ ಭಾವವ ಕಾವ್ಯವಾಗಿಸುವ ಕಿರುಗನಸು ಹನಿಗಳಾ ಬಳಗದಲಿ....ಅದಕೆ೦ದೇ ಮೋಡವೊ೦ದು ಮೇಲಿದೆ...ನನ್ನ ನಡೆಯ ಜೊತೆಯಲ್ಲೇ ಬರುತಿದೆ...ನಾ ನಡೆವ ಹಾದಿಯಲಿ ಕಲ್ಲು ಕೂಡ ಕೂತಿದೆ...ಪ್ರೀತಿ ತು೦ಬಿದ ಮಳೆಹನಿಯ ಸ್ಪರ್ಶಕೇನೋ ಅನಿಸುತಿದೆ...ಗಿಡ ಮರವು ಬಗ್ಗಿ,ಬಗ್ಗಿ ನೋಡಿದೆ....ಅ೦ಬರವೇ ಮೇಘವಾಗಲೆ೦ದೇ?...ಗಗನಕೊ೦ದು ಹನಿಯ ಸೇತು ಆಗಿಹೋಗಲೆ೦ದೇ?...ಪ್ರೀತಿಯು ಪ್ರತಿ ಕ್ಷಣವೂ ಪ್ರವಹಿಸುತಲೇ ಇರಲಿ ಎನುವ ಭಾವ ಉದಯಿಸಿತೇ ಪ್ರೀತಿಯಿ೦ದೇ?...ಅಳುತಿರುವ ಕ೦ದ ಕೂಡ ಕ್ಷಣಕಾಲ ಸುಮ್ಮನಾದ...ನನ್ನ ಜೊತೆಗೇ ಸಾಗುತಿರುವ ಮೋಡದಿ೦ದ...ಸಾಯುವ ಗಳಿಗೆಯಲ್ಲೂ ಬದುಕಿಹೋದ ಮುದುಕನು...ನನ್ನ೦ತೆಯೇ ದಾರಿಹೋಕ ಅವನು...!
ಎಲ್ಲಿ೦ದಲೋ ಆರಿಹೋದ ಕ೦ಬನಿಯು ಹೆಪ್ಪುಗಟ್ಟಿ ಮೋಡವಾದ ಸೂಚನೆಯು...ಇರಬಹುದು ನನ್ನೊಡಲ ತಣಿಸುವಾ ಯೋಚನೆಯು,ಅಥವಾ ವಿರಹ ವೇದನೆಯ ಬಿಚ್ಚಿಡುವಾ ಯೋಜನೆಯು...ಹೂಗಳನ್ನು ಬಾಡದ೦ತೆ ಕಾಯೋ ಕಲ್ಪನೆಯೋ?..ಭೂಮಿಯೊಡನೆ ಸರಸಗೈವ ಇ೦ಗಿತವೋ?..ಯಾವ ನಾಲಿಗೆಯಿಟ್ಟ ಅ೦ಕಿತವೋ?..ಯಾವ ಇತಿಹಾಸದ ಜನನಕೆ ಬರೆದ ಮುನ್ನುಡಿಯೊ,ಯಾರ ಸಾವಿನ ಕೊನೆಯ ಉತ್ಸವಕೆ ಇಟ್ಟ ಬೆನ್ನುಡಿಯೋ?...ಅರಿತ೦ತೆ ಬೆಳೆಯುವುದು ನಿಗೂಢಗಳ ಹುತ್ತ..ನನ್ನೊ೦ದಿಗೇ ಇದ್ದ ಆ ಮೋಡದಾ ಸುತ್ತ...!ಎಲ್ಲಿ೦ದಲೋ ಬ೦ದ ಗಾಳಿಯು ಬೀಸಿತಿಲ್ಲಿ ಸುಮ್ಮನೆ...ಕುಸಿದುಹೋಯಿತು ಪ್ರೀತಿ ತು೦ಬಿದ ನೆನಪಿನರಮನೆ...ಹಾರಿಹೋಯಿತು ನೋಡಾ!ಆ ಮೋಡ...ಬರಬಹುದು ಇನ್ನೊ೦ದು;ಕಾಯುತಿದೆ ನನ್ನಯಾ ತನುವೆ೦ಬ ಗಿಡ...ಬರುವನಕ ನನ್ನಲ್ಲೇ ಉಳಿಯುವುದು ಎಲ್ಲ ದುಗುಡ...ಇನ್ನೊ೦ದು ಗಾಳಿಗೆ ಬರಬಹುದು ಇನ್ನೊ೦ದು ಮೇಘ....ಹುಡುಕುತಿಹೆನು ಪ್ರೀತಿ ದೊರೆವ ಜಾಗ...ಬದುಕು ಬಯಸುವುದು ಎ೦ದೂ ಪ್ರೀತಿ ತು೦ಬಿದ ತ್ಯಾಗ.....!!....
~‘ಶ್ರೀ’
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ