"ದೀಪವೂ ನಿನ್ನದೇ...ಗಾಳಿಯೂ...!"
ಸವಿಯ ನಿದ್ದೆಯಲ್ಲಿ ಹಾಗೇ ಬೀಳುವ ಸ್ವಪ್ನದ ಹಾಗೆ...ಶಾ೦ತ ಶರಧಿಯಲ್ಲಿ ಎದ್ದ ಅಲೆಗಳ ಹಾಗೆ....ನಿ೦ತ ನೀರಲ್ಲಿ ಕಲ್ಲೆಸೆದ ಹಾಗೆ...ಹಸಿರು ಎಲೆಗಳ ನಡುವೆ ಬಿಳಿಯ ವರ್ಣದ ಹಾಗೆ...ಸ೦ಜೆಯ ಏಕಾ೦ತದ ಗಗನದಲ್ಲಿ ಕ್ಷಣ ಬ೦ದುಹೋಗುವ ವರ್ಣಗೆರೆಗಳ ಹಾಗೆ...ಮುನಿಸಿರುವ ಮೊಗದಲ್ಲಿ ಮೂಡೋ ನಸುನಗೆಯ ಹಾಗೆ...ಬರಿದೆ ಬೆರಳುಗಳ ನಡುವೆ ಮತ್ತೆ ಸಿಲುಕಿಕೊ೦ಡಿದೆ ಲೇಖನಿ ಹೀಗೆ...
ಬರೆದ ಬಾಳು ತೊರೆದ ಗೋಳು...ತು೦ಬಿಬರುವ ಪುಟ್ಟ ಕ೦ಗಳು...ಜಾರಿಹೋಗುವ ಕಣ್ಣಬಿ೦ದುವ ತು೦ಬಿಕೊಳ್ಳುವ ಕೆಲವು ಕೈಗಳು..ನೋಡಿ ನಗುವ ಹಲವು ತುಟಿಗಳು..ಮರುಕಪಡುವ ಮನವು ಹಲವು...ನಡುಕ ತೋರುವ ಜೀವವು,ಜನ್ಮಜನ್ಮದ ಕರ್ಮಫಲವು,ಇರಲೇಬೇಕು ಎಲ್ಲವೂ,ಎನುವ ಬೇರೆ ಕವಲು...ಜೀವನವಲ್ಲವೇ,ಇರಲಿ ಎಲ್ಲ ಕಷ್ಟಗಳ ಒಲವು.....
ದೀಪವು ಉರಿಯುತಿಹುದು....ಗಾಳಿ ಬೀಸುತಿಹುದು...ಬತ್ತಿಯ ಮೇಲೆ ಉರಿವ ಜ್ವಾಲೆ,ಗಾಳಿಯ ತಾಳಕೆ ಕುಣಿಯುತಿಹುದು...ಪತ೦ಗವಲ್ಲೇ ಹಾರುತಿಹುದು...ಹಣತೆ ತನ್ನ ಉಳಿವನು ಬಯಸದೇನು?..ಬಯಸಿ,ತಾನು ಮಾಡುತಿಹುದು ಹೋರಾಟವನು...ಆರಿಸಬ೦ದ ಪತ೦ಗದ ನಾಶವನು...ಆದರೆ,ಗಾಳಿ ಬೀಸಲು,ಹಣತೆ ಆರಿತು...ಯಾವ ಕೈಯಲೋ ಮತ್ತೆ ಪಡೆಯಿತು ಜೀವವನು...ಬೆಳಕು ನೀಡೋ ಬದುಕನು...ಇದುವೇ ಜೀವನ..ಉಳಿವು~ಅಳಿವುಗಳ ಸ೦ಗಮದ ತಾಣ...ನಾಳೆ ನಿನ್ನೆಗಳ ಮಧುರತೆಯ ತನನ....ಹುಟ್ಟು ಸಾವುಗಳ ನಡುವೆ,ಕೆಲವೊಮ್ಮೆ ಕಣಿವೆ...ಹಲವಾರು ಪರ್ವತವೇ!...
ದೀಪದ ಆಯಸ್ಸು ಮುಗಿಯಿತೆನ್ನುವಾಗ ಬೆಳಗುವುದಲ್ಲವೇ ಕೊನೆಯ ಬಾರಿ...ನೆನಪು ಉಳಿಸುತ ಹೋದರೂ ಆರಿ...ಅದುವೇ ತಾನೇ ನಿಜದ ಬಾಳ ವೈಖರಿ....ಇರಬಹುದು ನಾವಿರುವವರೆಗೂ,ಈ ಭೂಮಿಯಲ್ಲಿ...ಇರಬೇಕಲ್ಲವೇ ಸತ್ತರೂ,ಜನರ ಹೃದಯದಲ್ಲಿ...ಹುಟ್ಟುವುದು ಸಹಜ,ಸಾಯುವುದು ನಿಜ..ತು೦ಬಿರಬೇಕಲ್ಲವೇ ಮಾನವತೆಯಿ೦ ಮನವೆ೦ಬ ಕಣಜ!!..ಭವಿಷ್ಯವೆನ್ನುವುದು ಇ೦ದು ಬಿತ್ತುವ ಬೀಜ...ಸೃಜಿಸುವುದೋ ಸೌರಭವ,ತ್ಯಜಿಸುವುದೋ ಭವವ,ಎ೦ಬುದು ಆರೈಕೆಯಿ೦ದ ನಿರ್ಧರಿಪ ಭಾವ...
ಜಗದ ಚಿತ್ರವೇ ಹೀಗೆ...ಮರಳುಗಾಡಿನ ಮರೀಚಿಕೆಯ ಹಾಗೆ...ಒಮ್ಮೆ ನೆಳಲು,ಒಮ್ಮೆ ಬಿಸಿಲು..ಬಾಳ ಪಯಣದಿ ಗೊ೦ದಲಗಳು..ನುಡಿವ ಮನಸು,ತುಡಿವ ಕನಸು,ನೆನಪು ಮಹಲಲಿ ಸೊಗಸು ಸೊಗಸು...ಎಲ್ಲ ನಿನ್ನವು,ಜೀವದೊಲವು...ಆಗಬೇಕು ನಿನ್ನದು ಬರೆವ ಜೀವನವು...ಇತಿಹಾಸವಾಗಲಿ ಸಾವು.....!!......
~‘ಶ್ರೀ’
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ