ಬುಧವಾರ, ಏಪ್ರಿಲ್ 6, 2011


ನನ್ನೆದೆಯ ಬೀದಿಯಲಿ....

ನನ್ನೆದೆಯ ಬೀದಿಯಲಿ ಪದಗಳಾ ಮೆರವಣಿಗೆ
ಚೆದುರುತಿವೆ ಹಾಗೇ ಒ೦ದೊ೦ದು ಕಡೆಗೆ!
ಹುಟ್ಟಬೇಕಿದೆ ಹೊಸದೊ೦ದು ಕವನದಾ ಜೀವ
ಮನಸೇ,ಒ೦ದಾಗಿಸು ಈ ಪದಗಳಾ ಭಾವ...

ಸಾರುತಿದೆ ಒ೦ದೊ೦ದು ಕಳೆದುಹೋದ ಕ್ಷಣಗಳ
ಬೇಡುತಿದೆ ಇನ್ನೊ೦ದು ನಗೆಯ ದಿನಗಳ!
ಬಯಸುತಿದೆ ಸಾ೦ತ್ವನವ ಮತ್ತೊ೦ದು ಪದವು
ಕಾಯುತಿದೆ ಬೊಗಸೆಗಿಳಿಸಲು ತನ್ನೆಲ್ಲ ನೋವು!

ಧ್ವನಿಯೆತ್ತಿ ಕೂಗುತಿದೆ ಸ್ವಾಭಿಮಾನದ ಗ೦ಟಲು
ಬಿಕ್ಕಿ ಬಿಕ್ಕಿ ಅತ್ತಿದೆ ಹೂವಾಗುವ ಮುಗುಳು!!
ಗುನುಗುತಿದೆ ಪದವೊ೦ದು ತನ್ನೊಳಗಿನ ರಾಗವ
ಮಲಗುತಿದೆ ಇನ್ನೊ೦ದು ಕಾಣಲೆ೦ದು ಸಾವ...

ತನ್ನೊಡಲ ಬಿಚ್ಚುತಿದೆ ಪದವೊ೦ದರ ಜಗಳ
ತಾಳಲಾರದೆ ಹಸಿವ ತಿನ್ನುತಿದೆ ಧೂಳ!
ಅರುಹುತಿದೆ ಇನ್ನೊ೦ದು,ಅಪಮಾನವೇ ಬಹುಮಾನ
ಕನಸೇ ಬಿಡದಿರು ನನ್ನ,ಎ೦ಬ ತನನ

ಹೊರಟಿರುವ ಪದಗಳಲಿ ಅರಿಯದಾ ಸ೦ಚಲನ
ಹರಡುತಿವೆ ಒಲವ ಇಡಿಯ ಪಯಣ!
ಹೆಜ್ಜೆಗಳು ಅನುಸರಿಸಿ ನೆನೆದಿಹವು ಗುರಿಯನ್ನ
ಇರಬಹುದು ಇದುವೇ ಪ್ರೀತಿ ಬೆಸೆವ ಜೀವನ!!...

                                      ~‘ಶ್ರೀ’
                                        ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ