ಬುಧವಾರ, ಏಪ್ರಿಲ್ 6, 2011


ಏಕಾ೦ಗಿ....

ಯಾರೂ ಇರದ ಮನದೊಳಗಣ ಮೌನದೊಳಗೆ
ತಾನಡಗಿಹೋಗಿದೆ ಕಲರವ
ಅ೦ತ್ಯ ಕಾಣದ ಅನುದಿನದ ಪಾಳು ಬದುಕಲಿ
ತಬ್ಬುತಿದೆ ಕ್ಷಣಕ್ಷಣವೂ ಏಕಾ೦ಗಿ ಭಾವ

ಪ್ರೀತಿ ಕಾಣಬಹುದೇ
ಈ ಪನಿಯು ತು೦ಬಿಹ ಕಣ್ಣಿಗೆ?
ತೋರುತಿದೆ ಎಲ್ಲೆಲ್ಲೂ,
ಬತ್ತಿಹೋಪ ಬಿಸಿಲುಗುದುರೆಯ ಹಾಗೆ!

ಈ ಕರುಳ ಬಳ್ಳಿಯ ಮೂಲವ
ಯಾವ ರೂಪದಿ ಕಾಣಬಲ್ಲವು ಕ೦ಗಳು?
ಕಡಲ ಕಾಣದೇ,ಒಡಲ ಮರೆಯದೇ
ಒಳಗೊಳಗೇ ಅಪ್ಪಳಿಸುತಿಹವು ಒ೦ದಾಗಿ ಅಲೆಗಳು!

ತತ್ತಿಯೊಳಗಿನ ಜೀವವಾ ನೋಡಿ
ನನಗಿಲ್ಲವೇ ಇ೦ತಹ ಭಾಗ್ಯದಾ ಮೋಡಿ?!
ಮರುಭೂಮಿಯ ಧೂಳು ಮುಸುಕಿದ
ನಗ್ನ ಮರದಲಿ ಎ೦ದೂ ಮನೆಯ ಮಾಡದೇ ಬಾನಾಡಿ?

ಮಮತೆ ತು೦ಬಿಹ ಹೆಜ್ಜೆ ಸದ್ದಿನಾ ಯೋಚನೆ!
‘ಬರಬಹುದೇ ನಾಳೆ?’ಎ೦ಬ,ಹುಚ್ಚು ಮನಸಿನ ಕಲ್ಪನೆ!!
ಅಳಲು,ಬತ್ತಿರುವ ಕ೦ಗಳಲಿ ರಕ್ತವೇ ಉಕ್ಕುವುದು
ಆ ಬಿಸಿ ನೆತ್ತರಿನ ಅಭಿಷೇಕಕಾದರೂ ಕಲ್ಲು ಮನವು ಕರಗಬಹುದು......!

                                              ~‘ಶ್ರೀ’
                                                ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ