ಶನಿವಾರ, ಫೆಬ್ರವರಿ 11, 2023

ವೃತ್ತಗಳ ಆಚೆ ಈಚೆ : ದ್ವೀಪವ ಬಯಸಿ...

 


ವೃತ್ತಗಳ ಆಚೆ ಈಚೆ : ದ್ವೀಪವ ಬಯಸಿ... 

ಅಲೆಮಾರಿ ಮನುಷ್ಯ ಒಂದು ಕಡೆ ನೆಲೆ ನಿಂತ ಅನ್ನುವುದು ನಾಗರಿಕತೆಯ ಶುರುವಾದರೂ, ನೆಲೆ‌ ನಿಂತ ಮನುಷ್ಯ ಮತ್ತೆ ಅಲೆಮಾರಿತನದ ಕನಸಿನೊಂದಿಗೆ ಬದುಕತೊಡಗಿದ. ಒಂದು ಊರಿನಿಂದ ಇನ್ನೊಂದು ಊರಿಗೆ, ಹಳ್ಳಿಯಿಂದ‌ ನಗರಕ್ಕೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಕೊನೆಗೆ ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಹೋಗುವುದೂ ಮನುಷ್ಯನ ಅಲೆಮಾರಿತನದ ಭಾಗವೇ ಆಗಿಹೋಗಿದೆ. ಉದ್ಯೋಗ, ಬದುಕಿನ ಗುಣಮಟ್ಟದ ಉನ್ನತಿಗಾಗಿ, ಬೇರೆ ಬೇರೆ ಜಾಗ, ಜನ ಜೀವನ, ಸಂಸ್ಕೃತಿಗಳನ್ನು ತಿಳಿಯುವುದಕ್ಕಾಗಿ, ಓದಿಗಾಗಿ, ನೆಮ್ಮದಿಗಾಗಿ ಹೀಗೆ ಹತ್ತು ಹಲವು ಕಾರಣಗಳೇ ನೆಪವಾಗಿ ಅಲೆದಾಟ ನಾಗರಿಕತೆಯ ಭಾಗವೂ ಆಯಿತು. ಕೆಲವೊಮ್ಮೆ ತಾವಿರುವ ಜಾಗದಲ್ಲಿ ತಮಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲವೆಂದು ವಿದೇಶಗಳಿಗೆ ಉದ್ಯೋಗಕ್ಕಾಗಿ ಹೋಗುವವರು ಒಂದು ಕಡೆಯಾದರೆ, ಇನ್ನೊಂದು ಬದಿಯಲ್ಲಿ ತಾವಿರುವ ಕಡೆಯಲ್ಲಿ ಮನ್ನಣೆ ದೊರೆತು, ಮನ್ನಣೆಯ ಮುಂದುವರಿದ ಭಾಗವಾಗಿಯೇ ವಿದೇಶಕ್ಕೆ ಹೋಗುವವರು. ಇನ್ನು ಕೆಲವರು, ನೀರ ಹರಿವಿಗೆ ಅನುಗುಣವಾಗಿ ನೀರಲ್ಲಿ ಉದುರಿದ ಎಲೆಗಳು ಸಾಗುವ ಹಾಗೆ. ಅವಕಾಶಗಳು ಎಲ್ಲೆಲ್ಲಿ ಕರೆದೊಯ್ಯುತ್ತವೆಯೋ ಅಲ್ಲೆಲ್ಲಾ ಹೋಗುತ್ತಾರೆ. ಈ ಪಾತ್ರದಲ್ಲಿ ಬರುವ ದಂಪತಿಗಳ ಕತೆಯೂ ಹೆಚ್ಚೂ ಕಡಿಮೆ ನೀರ ಹರಿವಿನೊಂದಿಗೆ ಸಾಗುವ ಎಲೆಗಳ ಹಾಗೆಯೇ. ಆದರೆ, ಇದು ಬರೀ ಅಸಹಾಯಕತೆಯಲ್ಲ, ಹರಿವಿನೊಂದಿಗೆ ಈಜು ಕಲಿತು, ಆಮೇಲೆ ಅದರ ವಿರುದ್ಧ ಈಜುವ ಪ್ರಕ್ರಿಯೆಯ ಭಾಗವೂ ಆಗಿರಬಹುದೇನೋ ಅನ್ನುವ ಹಾಗೆ! ಅಂದ ಹಾಗೆ, ಕಾದಂಬರಿಯ ಹೆಸರು 'ದ್ವೀಪವ ಬಯಸಿ', ಬರೆದವರು ಎಂ ಆರ್ ದತ್ತಾತ್ರಿ ಅವರು.

ಕಾರ್ಪೊರೇಟ್ ಜಗತ್ತು ಅಂದ ತಕ್ಷಣ ಒಂದಷ್ಟು ಅದೇ ಹಳಸಲು ರೂಪಕಗಳು, ಈಗಾಗಲೇ ತಿಕ್ಕಿ ತಿಕ್ಕಿ ಬರೆದು ಬರೆದು ತೆಳುವಾದ ಅಭಿವ್ಯಕ್ತಿಗಳೇ ಹೆಚ್ಚಾಗಿ ನಮ್ಮ ಕಣ್ಣ‌ಮುಂದೆ ಬರುತ್ತವೆ. ಆದರೆ, ಈ ಕಾದಂಬರಿ ಭಿನ್ನವಾಗುವುದೇ ಇಲ್ಲಿ. ಇದು ಕಾರ್ಪೊರೇಟಿನ ಕತೆಯಾದರೂ, ಅದೊಂದು ದ್ವೀಪವಷ್ಟೇ; ಅಂಥದ್ದೇ ಇನ್ನೂ ಹಲವು ದ್ವೀಪಗಳಿವೆ ಇಲ್ಲಿ! ಕಾರ್ಪೊರೇಟಿನ ಯಾವತ್ತಿನ ಸಂಗತಿಗಳ ಜೊತೆಜೊತೆಗೆ ಇಲ್ಲಿ ಮನುಷ್ಯರ ಕತೆಗಳಿವೆ. ಮನುಷ್ಯರ ಸಂಬಂಧಗಳ, ಮನೋವ್ಯಾಪಾರಗಳ ಕತೆಗಳಿವೆ. ವೀಕೆಂಡು, ಬಾಸಿಗೆ ಬೈಗುಳ ಇಷ್ಟಕ್ಕೇ ಸೀಮಿತವಾಗದೇ, ಕಾರ್ಪೊರೇಟಿನ ಒಳಸುಳಿಗಳೂ ಕೆಲವಷ್ಟಿವೆ. ಒಂದು ಸಂಗತಿಯನ್ನು ಕಾರ್ಪೊರೇಟ್ ಅಥವಾ ರಾಜಕೀಯ ಹೇಗೆ ತನ್ನ ಸಂಪನ್ಮೂಲಗಳನ್ನು ಬಳಸಿಕೊಂಡು ಜನರ ಮುಂದಿಡುತ್ತದೆ ಹಾಗೂ ಅದನ್ನು ನಂಬಿಸುವಲ್ಲಿ ಸಫಲವಾಗುತ್ತದೆ ಅನ್ನುವುದನ್ನು ಹೇಳುವುದರ ಜೊತೆಜೊತೆಗೆ, ಇಲ್ಲಿ ಹುಡುಕಾಟದ ಕತೆಯಿದೆ. ಜಗತ್ತು ಒಂದೇ ಆದರೂ, ಅಲ್ಲಲ್ಲಿ ಅಲ್ಲಲ್ಲಿ ಪುಟ್ಟ ಪುಟ್ಟ ದ್ವೀಪಗಳು. ಪ್ರತಿ ದ್ವೀಪವನ್ನು ತಲುಪುವುದಕ್ಕೂ ಬೇರೆ ಬೇರೆಯದೇ ದಾರಿ. ಪ್ರತಿ ದ್ವೀಪದ ಒಳ ಪ್ರಪಂಚ ಬೇರೆ ಬೇರೆ. 

ನಮಗೆ ಮಾತು ಎಷ್ಟು ಮುಖ್ಯವೋ ಮೌನವೂ ಅಷ್ಟೇ ಮುಖ್ಯ. ಒಂದು ಹಂತದವರೆಗೆ ದೇಹ ಸೌಂದರ್ಯವನ್ನೂ ನೋಡಿ ಮದುವೆಯಾದವರಿಗೆ ವರುಷಗಳು ಉರುಳಿದ ಹಾಗೆ, ಅದು ದೇಹಕ್ಕಿಂತಲೂ ಮನಸ್ಸುಗಳ ಬೆಸುಗೆಯಾಗಿ ಸಂಬಂಧ ಗಟ್ಟಿಯಾಗುತ್ತ ಹೋಗುತ್ತದೆ.‌ ದೇಹ ಒಂದು ಸಾಧನವಷ್ಟೇ, ಬಂಧ ಇರುವುದು ಮನಸ್ಸುಗಳ‌ ಸಂಬಂಧದಲ್ಲಿ. ಬಹುಶಃ ಈ ಮಾತು ಮತ್ತು ಮೌನಗಳ ಸಂಗತಿಯೂ ಹೀಗೇ ಇರಬಹುದು ಅನಿಸುತ್ತದೆ. ಮಾತು, ಸಂವಹನದ ಮಾಧ್ಯಮವೇ ಆದರೂ ಮೌನದ ಸಾನ್ನಿಧ್ಯವನ್ನು ಹಾಗೂ ಅದರ ಅಗತ್ಯವನ್ನು ಗುರುತಿಸಲಾರದವರು ಮಾತಿನ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾರರೇನೋ ಅನಿಸುತ್ತದೆ. ಈ ಕಾದಂಬರಿಯಲ್ಲಿ ಒಂದು ಸಾಲಿದೆ; "ನಮ್ಮ ನಮ್ಮ ಮೌನ ಭಾಷೆಯನ್ನು ಕೇಳಬಲ್ಲ ಮತ್ತೊಂದು ಜೀವವನ್ನು ಗುರುತಿಸಿಕೊಟ್ಟಿತ್ತು". ಸಂಗಾತಿಯಾಗುವುದೆಂದರೆ ಮಾತುಗಳನ್ನು ಕೇಳುವುದಷ್ಟೇ ಅಲ್ಲ, ಮೌನವನ್ನು ಆಲಿಸುವುದು ಕೂಡಾ ಬಹುಮುಖ್ಯ, ಮುಂದೊಂದು ದಿನ ಬದುಕಿನ ಮಹತ್ವದ ನಿರ್ಧಾರಗಳಿಗೆ ಬೆನ್ನೆಲುಬಾಗುವುದು ಈ ಮೌನ ಭಾಷೆಗಳ ನಡುವಿನ ಸಂವಹನ ಅನ್ನುವುದು ಒಂದು ವಿಸ್ಮಯಕಾರಿ ವಿಷಯ. 

ಫೋಟೋಗಳ ಪ್ರಪಂಚ ಬಹುಶಃ ಎಲ್ಲರಿಗೂ ಇಷ್ಟವಾಗುವ ಪ್ರಪಂಚ. ಒಂದೊಂದು ಥರದ ಫೋಟೋಗಳು ಒಬ್ಬೊಬ್ಬರಿಗೆ ಇಷ್ಟವಾಗುತ್ತವೆ. ಆದರೆ, ಎಲ್ಲದರಲ್ಲೂ ಒಂದು ಸಾಮಾನ್ಯ ಸಂಗತಿಯೆಂದರೆ, ಆ ಫೋಟೋ ಇಷ್ಟವಾಗುವುದರ ಅಥವಾ ಅದು ಆತ್ಮೀಯವಾಗುವುದರ ಹಿಂದೆ ಯಾವುದೋ ಒಂದು ಕತೆಯಿರುತ್ತದೆ. ಅದು ನಮ್ಮ ಹಿನ್ನೆಲೆಯೊಂದಿಗೆ ತಳುಕು ಹಾಕಿಕೊಳ್ಳುತ್ತದೆ. ನಾವು ಬದುಕಿದ ಪರಿಸರ ಅಥವಾ ನಮ್ಮ ಕನಸಿನ ಪರಿಸರ, ನಮ್ಮ ಜೀವನದ ಎಷ್ಟೋ ಘಟನೆಗಳು ಹಾಗೂ ಅದರ ಸುತ್ತಲೂ ಹಬ್ಬಿಕೊಂಡ ನಮ್ಮ ಭಾವಗಳು, ನಾವು ಇಷ್ಟಪಡುವ ಅಥವಾ ಹೆಚ್ಚಾಗಿ ಹಚ್ಚಿಕೊಂಡ ವ್ಯಕ್ತಿಗಳು ಹೀಗೆ ಹಲವು ಕಾರಣಗಳು ಒಂದು ಫೋಟೋವನ್ನು ನಮಗೆ ಹತ್ತಿರವಾಗಿಸುತ್ತವೆ. ಕೆಲವೊಮ್ಮೆ 'ಇಷ್ಟ'ದ ಫೋಟೋ ಅನ್ನುವುದಕ್ಕಿಂತ ಅದನ್ನು 'ಕಾಡಿದಂಥ' ಫೋಟೋ ಅಂತಲೂ ಅನ್ನಬಹುದು. ಒಂದು ಫೋಟೋ ಅದ್ಯಾಕೆ‌ ನಮ್ಮೊಂದಿಗೆ ತಳುಕು ಹಾಕಿಕೊಳ್ಳುತ್ತದೆ ಅನ್ನುವುದಕ್ಕೆ ಒಂದು ಸಂದರ್ಭ ಇದೆ ಈ ಕಾದಂಬರಿಯಲ್ಲಿ. ಅಲ್ಲಿ ಬರುವ ಮಾತುಗಳು ಹೆಚ್ಚೂ ಕಡಿಮೆ ಸ್ಟೀಫನ್ ಶೋರ್ (stephen shore)  ಅವರ ಮಾತುಗಳನ್ನು ನೆನಪಿಸಿತು. ಮಜದ ಸಂಗತಿಯೆಂದರೆ ಈ ಕಾದಂಬರಿಯಲ್ಲಿ ಬರುವ ಈ ಸಂದರ್ಭವನ್ನು ಓದಿದ್ದು ಮತ್ತು ಸ್ಟೀಫನ್ ಅವರ ಸಾಲುಗಳನ್ನು ಓದಿದ್ದು ಒಂದೇ ದಿ‌ನ! ಸ್ಟೀಫನ್ ಅವರ ಸಾಲುಗಳು ಹೀಗಿವೆ: "The context in which a photograph is seen affects the meaning the viewer draws from it" - ಯಾವ ಸಂದರ್ಭದಲ್ಲಿ ಒಂದು ಫೋಟೋ ನೋಡಲ್ಪಟ್ಟಿತು ಅನ್ನುವುದು, ಅದನ್ನು ಅರ್ಥೈಸಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ. 

ಮನುಷ್ಯ ಲೋಕವೇ ಒಂದು ವಿಸ್ಮಯದ ಲೋಕ. ಇಲ್ಲಿ ಯಾವ ವ್ಯಕ್ತಿಯನ್ನಾದರೂ ನಾವು ಎಷ್ಟು ಅರ್ಥೈಸಿಕೊಂಡಿದ್ದೇವೆ ಅಂದುಕೊಂಡರೂ, ಯಾವತ್ತೋ ನಮಗೆ ಗೊತ್ತಿಲ್ಲದ ಯಾವುದೋ ಹೊಸ ಗುಣದೊಂದಿಗೆ, ಹೊಸ ಅಂಶದೊಂದಿಗೆ ನಮ್ಮೆದುರು ಬರುತ್ತಾರೆ. ವ್ಯಕ್ತಿಯನ್ನು ಅರಿತುಕೊಂಡಷ್ಟೂ, ಅರಿಯದೇ ಹೋದದ್ದು ಬಹಳಷ್ಟಿದೆ ಅನ್ನುವುದರ ಅರಿವಾದರೆ, ಬಹುಶಃ ಬದುಕು ಇನ್ನಷ್ಟು ಸಲೀಸಾದೀತೇನೋ. ಮೊದಮೊದಲಿಗೆ ಇಬ್ಬರು ವ್ಯಕ್ತಿಗಳು ಪರಿಚಿತರಾದಾಗ, ಇಬ್ಬರಿಗೂ ಮಾತಾಡುವುದಕ್ಕೆ ಬಹಳಷ್ಟಿರುತ್ತದೆ. ಕಾರಣ, ಒಬ್ಬರನ್ನೊಬ್ಬರು ಅರಿತುಕೊಳ್ಳುವ ಕುತೂಹಲ. ಆದರೆ, ಒಂದೆರಡು ವರ್ಷಗಳ ನಂತರವೂ ಆ ಬಾಂಧವ್ಯ, ಆ ಮಾತುಕತೆಗಳು ಹಾಗೆಯೇ ಇದ್ದರೆ, ಅದನ್ನು ಖಂಡಿತವಾಗಿಯೂ ವಿಶೇಷ ಸಂಬಂಧವೆಂದೇ ಪರಿಗಣಿಸಬಹುದೇನೋ. ಕುತೂಹಲ ತಣಿದ ಮೇಲೆ ಮನುಷ್ಯರಿಗೆ ಆಸಕ್ತಿ ಕಡಿಮೆಯಾಗುವುದು ಸಹಜ ಗುಣ. ಹಾಗಾಗಿಯೇ ಹಲವು ಸಂಬಂಧಗಳು ಒಂದೆರಡು ವರ್ಷಗಳ ನಂತರ ಸಡಿಲವಾಗುತ್ತವೆ. ಮಾತುಕತೆಗಳು ನಿಲ್ಲುತ್ತವೆ. "ಪ್ರತಿ ವ್ಯಕ್ತಿಯೊಂದಿಗೂ ನಾವು ಗುರುತಿಸಿ ಪದಗಳಿಗೆ ರೂಪಾಂತರಿಸಬಲ್ಲ ಚಹರೆಗಳು ಒಂದಿಷ್ಟಿದ್ದರೆ ಅವ್ಯಕ್ತವಾಗಿ ಹೊರಹೊಮ್ಮುವ ಚಹರೆಗಳು ಸಾವಿರವಿರುತ್ತವೆ" ಅಂತ ಲೇಖಕರು ಒಂದು ಕಡೆ ಹೇಳಿದ್ದಾರೆ.

ಜಾಗತಿಕವಾದ ಅಥವಾ ವಿಶ್ವಾತ್ಮಕವಾದ ಸತ್ಯ ಒಂದೇ ಇರುವುದು ಅನ್ನುವುದು ನಿಜವಾದರೂ, ಆ ಕ್ಷಣದ ಸತ್ಯಗಳು ಹಲವು. ಯಾವ ಪರಿಸರದಲ್ಲಿ, ಯಾವ ಸಂದರ್ಭದಲ್ಲಿ ನಾವು ಒಂದು ಸಂಗತಿಯನ್ನು ನೋಡುತ್ತೇವೆಯೋ ಅದಕ್ಕೆ ಅನುಗುಣವಾಗಿ ನಾವು ಅರ್ಥಗಳನ್ನು ಹುಡುಕಿಕೊಳ್ಳುತ್ತೇವೆ. ಎಲ್ಲವೂ ಸತ್ಯದ ಒಂದೊಂದು ಭಾಗವಾಗಿರುತ್ತವೆಯೇ ಹೊರತೂ 'ಪೂರ್ಣ ಸತ್ಯ'ವಾಗಿರುವುದಿಲ್ಲ. ಹಾಗೆ, ಪೂರ್ಣ ಸತ್ಯ ಅರಿವಾಗಬೇಕಾದರೆ, ಎಲ್ಲಾ ಕೋನಗಳಿಂದಲೂ ಆ ಸತ್ಯದ ನೋಟ ಸಿಗಬೇಕು. ಹಾಗಾಗಿಯೇ ವ್ಯಕ್ತಿಯಿಂದ ವ್ಯಕ್ತಿಗೆ ಸತ್ಯ ಬದಲಾಗುತ್ತದೆ. ನಿಜ ಹೇಳಬೇಕೆಂದರೆ, ಅದು ಸತ್ಯ ಬದಲಾಗುವುದಲ್ಲ. ಆದರೆ, ಸತ್ಯದ ತುಣುಕುಗಳಷ್ಟೇ ದಕ್ಕುವುದು. ಅದೇ ಅವರವರ ಪಾಲಿನ ಸತ್ಯ. 

ಲೈಫ್ ಆಫ್ ಪೈ' ( Life of Pi ) ಪುಸ್ತಕ ಹಾಗೂ ಸಿನೆಮಾದಲ್ಲಿ ಒಂದು ಮಾತಿದೆ. "I suppose in the end, the whole of life becomes an act of letting go, but what always hurts the most is not taking a moment to say goodbye" - ಕೊನೆಯಲ್ಲಿ, ಇಡೀ ಬದುಕು ಬೀಳ್ಕೊಡುಗೆಯ ಒಂದು ಪ್ರಕ್ರಿಯೆಯೇ ಆಗಿಹೋಗುತ್ತದೆ. ಆದರೆ, ನೋವು ಕೊಡುವ ಸಂಗತಿಯೆಂದರೆ, ಹಾಗೆ ಬೀಳ್ಕೊಡುವಾಗ, ಒಂದು ಸರಿಯಾದ ವಿದಾಯವನ್ನು ಹೇಳಲಿಕ್ಕೆ ಒಂದು ಕ್ಷಣವನ್ನು ಕೂಡಾ ತೆಗೆದುಕೊಳ್ಳದೇ‌ ಹೋಗುವುದು. ಬಹುಶಃ ಎಲ್ಲ ನಿರ್ಗಮನಗಳೂ ಹಾಗೆಯೇ. ಎಲ್ಲಿಯೇ ಹೋದರೂ, ನಿರ್ಗಮನದ ದಿನ ಭಾವುಕತೆ ಜಾಸ್ತಿ. ಅದರಲ್ಲೂ ಅಲ್ಲಿನ ಜಾಗ, ಮನುಷ್ಯರು, ಸಂಸ್ಕೃತಿ ಇತ್ಯಾದಿಗಳು ಇಷ್ಟವಾದರಂತೂ ಮುಗಿಯಿತು. ತುಸು ಹೆಚ್ಚೇ ಮನಸ್ಸು ಚಡಪಡಿಸುತ್ತದೆ. ಹಾಗಿರುವಾಗ, ಈ 'ಕೊನೆಯ ದಿನ' ಅನ್ನುವುದು ಬಹಳಷ್ಟನ್ನು ಹೇಳುತ್ತದೆ ಕೂಡಾ. ಜಪಾನಿನಲ್ಲಿ ಒಂದು ಸಂಸ್ಕೃತಿಯಿದೆ. ಸತ್ತಮೇಲೆ ದೇಹವನ್ನು ಶುಚಿಯಾಗಿಸಿ,‌ ಅಲಂಕರಿಸಿ ತಯಾರು ಮಾಡಲಾಗುತ್ತದೆ. ನಮ್ಮಲ್ಲಿನ ಭಾರತೀಯ ಸಂಸ್ಕೃತಿಯಲ್ಲೂ ಹೀಗೆಯೇ ದೇಹವನ್ನು ಶುದ್ಧೀಕರಿಸುವ ಆಚರಣೆಯಿದೆ. ಯಾಕೆಂದರೆ, ಯಾವತ್ತಿಗೂ "ಒಂದು ಗೌರವಯುತವಾದ ಬೀಳ್ಕೊಡುಗೆ ಬೇಕು". 

ನಮಗೆಲ್ಲಾ ಅದೆಷ್ಟೋ ಸಲ ಅನಿಸಿದ್ದಿದೆ. ಬಹುಶಃ ಪ್ರತಿದಿನವೂ ಅನಿಸುತ್ತದೆ. ನಮ್ಮೆಲ್ಲರ ಬದುಕು ಯಾಕಿಷ್ಟು ವಿಚಿತ್ರ. ಪ್ರತಿಯೊಬ್ಬರೂ ಅವರವರ ಆರ್ಥಿಕ ಮಟ್ಟಕ್ಕಿಂತ ಮೇಲಿನವರನ್ನು ನೋಡಿ, " ಅವರಿಗೇನು, ಸುಖದ ಸುಪ್ಪೊತ್ತಿಗೆ" ಅಂತಲೇ ಅನ್ನುವುದು. ಆದರೆ, ಪ್ರತಿಯೊಬ್ಬರಿಗೂ ಅವರವರ ಕಷ್ಟಗಳು ಇರುವಂಥದ್ದೇ. "ಜೀವನ ಯಾಕಿಷ್ಟು ಸಂಕೀರ್ಣವಾಗಬೇಕು. ನೂರು ಕಷ್ಟಗಳನ್ನು ಅನುಭವಿಸಿಯೂ ಒಂದು ಸುಖ ಕಾಣದಿದ್ದರೆ, ಅಂತಹ ಜೀವನವನ್ನು ಮುಂದುವರೆಸುವುದರಲ್ಲಿ ಯಾವ ಅರ್ಥವಿದೆ" ಅನ್ನುವ ಪ್ರಶ್ನೆ ಒಂದಲ್ಲಾ ಒಂದು ಸಂದರ್ಭದಲ್ಲಿ ನಮ್ಮೆಲ್ಲರಲ್ಲಿಯೂ ಹುಟ್ಟಿರುವಂಥದ್ದೇ. ಹಾಗೆಯೇ, ಅದಕ್ಕೆ ಬೇಕಾದ ಸಮಜಾಯಿಷಿಗಳನ್ನೂ ನಮ್ಮ ಬದುಕೇ ಒದಗಿಸಿಕೊಡುತ್ತದೆ ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಆ ಪ್ರಶ್ನೆಗೆ ಸರಿಯಾದ 'ತಿಳಿವಳಿಕೆ'ಯನ್ನು ನಮ್ಮ ಬದುಕೇ ನಮ್ಮಲ್ಲಿ ಬಿತ್ತುತ್ತದೆ. ಪ್ರತೀ ಬದುಕಿಗೂ ಅದರದ್ದೇ ಆದ ಮಹತ್ವವಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯ ಬದುಕು, ಜಗತ್ತಿನ ಇನ್ನೊಂದು ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯ ಬದುಕಿನ ಮೇಲೆ ಹೇಗೆ ಪರಿಣಾಮ ಬೀರೋದಕ್ಕೆ ಸಾಧ್ಯ ಅಂತನ್ನುವುದು ವಿಚಿತ್ರ ಕುತೂಹಲವಾದರೂ, ಒಂದು ಮನೆಯಲ್ಲಿರುವ ಪ್ರತಿ ವ್ಯಕ್ತಿಯ ನಡೆಯೂ, ಅದೇ ಕುಟುಂಬದ ಇನ್ನೊಂದು ವ್ಯಕ್ತಿಯ ನಡೆಯ ಮೇಲೆ ಪರಿಣಾಮ ಬೀರುವುದಿಲ್ಲ ಅಂತ ಹೇಳಲಾದೀತೇ, ಇಲ್ಲ ತಾನೇ? ಜಗತ್ತೇ ಒಂದು ಕುಟುಂಬ ಕಾಲದ ಸೂರಿನ ಕೆಳಗೆ. 

ಈ ಕಾದಂಬರಿಯಲ್ಲಿ, ಒಂದು ಬಹುಮುಖ್ಯವಾದ ಹಾಗೂ ಬಹುತೇಕರು ಗುರುತಿಸುವ ಸಂಗತಿಯೆಂದರೆ ನಮ್ಮಲ್ಲಿನ ಒಳ ಹೊರ ಎರಡು ವೃತ್ತಗಳ‌ ಕುರಿತಾಗಿ ಮತ್ತು ಭಿನ್ನ ವ್ಯಕ್ತಿತ್ವಗಳ ಕುರಿತಾಗಿ ಇರುವಂಥ ಸಾಲುಗಳನ್ನು. ನಮ್ಮೆಲ್ಲರಲ್ಲಿಯೂ ಎರಡು ಪ್ರಪಂಚಗಳು. ಒಂದು ಹೊರ ಪ್ರಪಂಚ, ಇನ್ನೊಂದು ಒಳ ಪ್ರಪಂಚ. ಎಷ್ಟೋ ಸಂಗತಿಗಳಲ್ಲಿ ಹೊರಗಡೆ ನಾವು 'ತೋರಿಸಿಕೊಳ್ಳುವ' ರೀತಿಯೇ ಬೇರೆ, ಒಳಗಡೆ ಇರುವ ರೀತಿಯೇ ಬೇರೆ. ಇದು ಕಪಟತೆಯ ಪ್ರಶ್ನೆ ಅಲ್ಲ, ಅದಕ್ಕಿಂತ ಮಿಗಿಲಾದ ಒಂದು ಸಹಜ ಮಾನವ ಲೋಕದ ಪ್ರತಿಫಲನ ಅಷ್ಟೇ. ಆ ಒಳಗಿನ ವೃತ್ತಕ್ಕೆ ಕೆಲವರಿಗಷ್ಟೇ, ಇಷ್ಟೇ ಇಷ್ಟು ಮಾತ್ರವೇ ಪ್ರವೇಶವಿರುವುದು, ಆ ಒಳಗಿನ ವೃತ್ತದಲ್ಲಿ ಮನುಷ್ಯ ಬಹುತೇಕ ಒಂಟಿಯೇ! ಇದು ಒಂದು ಕಡೆಯಾದಲ್ಲಿ, ಇನ್ನೊಂದು ಕಡೆ, ಈ ಜಗತ್ತಿನ ಸಂಗತಿಗಳಂತೂ ಬಲು ಸೋಜಿಗ. "ಎಡಮನೆಯಲ್ಲೊಬ್ಬ ಪ್ರೇಮಿಯಿದ್ದರೆ ಬಲಮನೆಯಲ್ಲೊಬ್ಬನಿಗೆ ವೈರಾಗ್ಯ ಅಂಕುರಿಸಿರುತ್ತದೆ" ಅನ್ನುತ್ತಾರೆ ಲೇಖಕರು. 

ಮನುಷ್ಯಲೋಕದ ವಿಸ್ಮಯಗಳು ಮುಗಿಯುವಂಥದ್ದಲ್ಲ. ಹೂವಿಗೆ ಗಂಧ ಹೇಗೋ ಹಾಗೆಯೇ, ಮನುಷ್ಯರಿಗೆ ನೆನಪುಗಳು. ಈ ನೆನಪುಗಳೇ ಮನುಷ್ಯರ ನಾಳೆಗಳನ್ನು ರೂಪಿಸುತ್ತವೆ. ಈ ನೆನಪುಗಳೇ ಮನುಷ್ಯರ ಬದುಕುಗಳನ್ನು ಕಟ್ಟಿಕೊಡುತ್ತವೆ. ಈ ನೆನಪಿನ ಪ್ರಪಂಚದಲ್ಲಿ ಏನೆಲ್ಲಾ ಆಗಿರಬಹುದು, ಆದರೆ ಅದರಲ್ಲಿ ಎಲ್ಲವೂ ನೆನಪಿರುವುದಿಲ್ಲ. ಒಳ್ಳೆಯದೇ ಆಗಿರಲಿ ಅಥವಾ ಕೆಟ್ಟದ್ದೇ ಆಗಿರಲಿ, ಅದು ಮನುಷ್ಯರೊಳಗಿನ ಒಳವೃತ್ತವನ್ನು ಸೋಕದ ಹೊರತು, ನೆನಪಿನ ಪ್ರಪಂಚದಲ್ಲಿ ಅಚ್ಚಾಗುವುದಿಲ್ಲವೇನೋ ಅಥವಾ ಕಾಲಕ್ರಮೇಣ ಅಳಿಸಿಯೂ ಹೋಗಬಹುದು. ಆದರೆ, ಅಂಥ‌ ನೆನಪುಗಳಿರುವುದರಿಂದಲೇ ಮನುಷ್ಯರು ಬರೆಯಬಲ್ಲರು. ವಾಸ್ತವಗಳನ್ನೂ ಮೀರಿದ ಹಲವು ಪ್ರಪಂಚಗಳನ್ನು ತೆರೆದಿಡಬಲ್ಲರು. ಕಲೆ ಮತ್ತು ಕಲಾವಿದ ಇರುವುದೇ ನೆನಪುಗಳಿಂದಾಗಿ ಅಂದರೆ ಜಾಸ್ತಿಯೇನೂ ಆಗುವುದಿಲ್ಲ ಅನಿಸುತ್ತದೆ. ನೆನಪುಗಳು ವಸ್ತುಗಳೊಂದಿಗೆ, ಕ್ಷಣಗಳೊಂದಿಗೆ ಅಂಟಿಕೊಂಡಿರುವುದರಿಂದಲೇ ಮನುಷ್ಯರ ಭಾವಪ್ರಪಂಚ ಅಷ್ಟು ಚೆಂದ. 

ನಾವು ನೈತಿಕತೆಗಳ ಬಗ್ಗೆ ಬಹಳಷ್ಟು ಭಾಷಣ ಮಾಡುತ್ತೇವೆ. ಆದರೆ, ಯುದ್ಧದ ಮಧ್ಯ ನಿಂತು ಫೋಟೋ ತೆಗೆಯುವ ಛಾಯಾಗ್ರಾಹಕರನ್ನು ಅಥವಾ ಅದನ್ನು ವಿವಿಧ ಸುದ್ದಿ ಮಾಧ್ಯಮಗಳಿಗೆ ದಾಟಿಸುವ ವರದಿಗಾರರನ್ನು ಕೇಳಿ, ನೈತಿಕತೆ ಅಂದರೇನು? ಅಂತ. ಕಣ್ಣೆದುರಿಗೇ ಹೆಣಗಳು ಉದುರುತ್ತಿರುತ್ತವೆ. ಆದರೆ, ಆ ಪರಿಸರದಲ್ಲಿ ಹಸ್ತಕ್ಷೇಪ ಮಾಡುವ ಹಾಗಿಲ್ಲ. ಇದು ವಿಚಿತ್ರ ಅನ್ನಿಸಬಹುದು, ಜೊತೆಗೆ ಮನುಷ್ಯರಿಗೆ ನೆರವಾಗದ ಇನ್ನೊಬ್ಬ ಮನುಷ್ಯ ಇದ್ದು ಏನು ಪ್ರಯೋಜನ ಅಂತಲೂ ಅನ್ನಿಸಬಹುದು. ಆದರೆ, ಇದು ಇರುವುದೇ ಹಾಗೆ. ವನ್ಯಜೀವಿ ಛಾಯಾಗ್ರಾಹಕರ ಕಣ್ಣೆದುರೇ ಬೇಟೆ ನಡೆಯುತ್ತದೆ. ಆದರೆ, ತಪ್ಪಿಸುವ ಹಾಗಿಲ್ಲ. ಬೇಟೆ ತಪ್ಪಿಸಿದರೆ, ಜೀವ ಉಳಿಸಿದ್ದು ಹೌದು, ಆದರೆ ಇನ್ನೊಂದು ಪ್ರಾಣಿ ಉಪವಾಸವಿರುವುದೂ ಹೌದು. ವನ್ಯಜೀವಿ ಲೋಕದ ಕತೆಯಲ್ಲಿ ಬದುಕಿಗಾಗಿ ಮಾತ್ರವೇ ಬೇಟೆ. ಆದರೆ, ಮನುಷ್ಯಲೋಕದಲ್ಲಿ ಆಸೆಗಳಿಗಾಗಿ. ಆ ಆಸೆಗಳಿಗೆ ಭಿನ್ನ ಭಿನ್ನ ಕಾರಣಗಳು. ಯುದ್ಧದ ಭೀಕರತೆ ಮತ್ತು ಯುದ್ಧವನ್ನು ಸೆರೆಹಿಡಿಯುವ ಫೋಟೋಗ್ರಾಫರ್ರುಗಳ, ವರದಿಗಾರರ ಮನಸ್ಸಿನಲ್ಲಾಗುವ ಅಲ್ಲೋಲ‌ ಕಲ್ಲೋಲವನ್ನು ಈ ಕಾದಂಬರಿ ಆರ್ದ್ರವಾಗಿ ಹೇಳುತ್ತದೆ. ಇದನ್ನು ಓದುವಾಗ, ಸ್ಯೂಡಾನಿನ ಫೋಟೋ 'ರಣಹದ್ದು ಮತ್ತು ಪುಟ್ಟ ಹುಡುಗಿ' ( the vulture and the little girl ) ಹಾಗೂ ಅದನ್ನು ಸೆರೆಹಿಡಿದ ಫೋಟೋಗ್ರಾಫರ್ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದು ನೆನಪಾಗುತ್ತದೆ. ಯಾವುದು ನೈತಿಕತೆ ಅನ್ನುವ ಪ್ರಶ್ನೆಯೇ ಹೆಚ್ಚು ಕಾಡುತ್ತದೆ. 

'ದ್ವೀಪವ ಬಯಸಿ' ಕಾದಂಬರಿ ನಮ್ಮನ್ನು ಹಲವು ದ್ವೀಪಗಳಿಗೆ ಕರೆದೊಯ್ಯುತ್ತದೆ ಹಾಗೂ ಅಗಾಧವಾದ ಕಾರ್ಪೋರೇಟ್ ಕರಾಳತೆಯ ಚೂರೇ ಚೂರು ರುಚಿ ತೋರಿಸುತ್ತದೆ. ಭರವಸೆಯ ನಾಳೆಗಳನ್ನು ಮಾತಿನಲ್ಲಿಯೇ ತೋರಿಸುವ ಎಲ್ಲರೂ ನಿಜವಾಗಿಯೂ ಅಂಥ ನಿಮ್ಮ ನಾಳೆಗಳಲ್ಲಿ ಆಸಕ್ತರಾಗಿರುವುದಿಲ್ಲ ಅನ್ನುವ ಸತ್ಯವನ್ನೂ ತೆರೆದಿಡುತ್ತಾ ಹೋಗುತ್ತದೆ. ಬರೀ ಅಷ್ಟಕ್ಕೇ ನಿಲ್ಲದೇ, ನಮ್ಮೊಳಗಣ ವೃತ್ತವನ್ನೂ, ಅದರ ತಲ್ಲಣಗಳನ್ನೂ ಆತ್ಮೀಯವಾಗಿ ಅಪ್ಪಿಕೊಳ್ಳುವ ಕೆಲಸವನ್ನು ಮಾಡುತ್ತದೆ. ಬರೀ ಕತೆಯನ್ನಷ್ಟೇ ಹೇಳದೇ,‌ ಕತೆಯೊಂದಿಗೆ ಇನ್ನೂ ಏನನ್ನೋ ಹುಡುಕಿಹೊರಡುವ ಇಂಥ ಪುಸ್ತಕಗಳು ಇಷ್ಟವಾಗದೇ ಇರುವುದಾದರೂ ಹೇಗೆ!

ಗೂಗಲ್ ಪ್ಲೇ ಬುಕ್ಸಲ್ಲಿ ,ಇಂಗ್ಲೀಷ್ ಅಕ್ಷರದ ಒಂದಷ್ಟು ವಾಕ್ಯಗಳು ಸರಿಯಾದ ಫಾರ್ಮ್ಯಾಟಲ್ಲಿ ಇಲ್ಲ ಅಂದ ತಕ್ಷಣವೇ ಅವೆಲ್ಲವನ್ನೂ ಸರಿಪಡಿಸಿದ ವಸುಧೇಂದ್ರ ಸರ್-ಗೆ ವಿಶೇಷ ಧನ್ಯವಾದಗಳು. 

- 'ಶ್ರೀ'
   ‌ತಲಗೇರಿಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ