ಹೋರಾಟ ಎನ್ನುವುದು ಯಾವತ್ತಿಗೂ ರೋಚಕವಾದದ್ದು ಅದರಾಚೆ ನಿಂತು ನೋಡುವವರಿಗೆ. ಆದರೆ, ಆ ಹೋರಾಟದ ಭಾಗವಾಗಿರುವವರಿಗೆ ಅದು 'ಉಸಿರು ನಿಲ್ಲುವ ಅಥವಾ 'ನಿಟ್ಟುಸಿರು ಬಿಡುವ' ಈ ಎರಡರಲ್ಲಿ ಯಾವುದಾದರೂ ಒಂದು ಆಗಿಹೋಗುವ ಭಯಾನಕ ಅವಧಿ. ಹೋರಾಟವೆಂದರೆ ಹೊಡೆದಾಟ, ಯುದ್ಧ, ಚಳುವಳಿ ಇತ್ಯಾದಿಗಳೇ ಆಗಬೇಕಿಲ್ಲ. ಮನುಷ್ಯ ಸಂಕುಲದಲ್ಲಷ್ಟೇ ಅಲ್ಲ, ಎಲ್ಲ ಜೀವಕೋಟಿಗಳಲ್ಲೂ ಇರುವ ಒಂದು ಸಾಮ್ಯತೆ ಇದು. ಕೋಟ್ಯಂತರ ವೀರ್ಯಾಣುಗಳಲ್ಲಿ ಒಂದು ವೀರ್ಯಾಣು ಮುನ್ನುಗ್ಗುವಿಕೆಯಿಂದ ಶುರುವಾಗಿ, ಪ್ರತಿ ನಿತ್ಯ ಪ್ರತಿ ಕ್ಷಣ ಉಸಿರನ್ನು ಒಳಗೆಳೆದುಕೊಂಡು ಹೊರಬಿಡುವುದರಿಂದ ಹಿಡಿದು, ಶಿಶುವಾಗಿದ್ದಾಗ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ, ಗೋಡೆ ಹಿಡಿದು ನಿಲ್ಲುವ ಪ್ರಯತ್ನಗಳಾದಿಯಾಗಿ ಮರಣಕ್ಕೂ ಮುನ್ನ ಯಾರನ್ನೋ ನೋಡುವ ಸಲುವಾಗಿ ಯಾರದೋ ಸ್ಪರ್ಶ, ಧ್ವನಿ ತರಂಗಗಳ ಅನುಭವದ ಸಲುವಾಗಿ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಕಾಯುವವರೆಗೆ ಇಡೀ ಒಂದು ಪ್ರಯಾಣ ಅಷ್ಟು ಸರಳವೂ ಅಲ್ಲ, ಸಾಮಾನ್ಯವೂ ಅಲ್ಲ. ಪ್ರಾಣಿ ಜಗತ್ತಿನಲ್ಲಿಯೂ ಅಷ್ಟೇ; ಆ ಕ್ಷಣಕ್ಕೆ ಸಿಕ್ಕ ಆಹಾರವನ್ನು ಉಳಿಸಿಕೊಳ್ಳುವ, ಸಂಗಾತಿಯನ್ನು ಆಕರ್ಷಿಸುವ, ತನ್ನ ಅಧಿಪತ್ಯವನ್ನು ಉಳಿಸಿಕೊಳ್ಳುವ, ಪ್ರಕೃತಿಯಲ್ಲಾಗುವ ಸಹಜ, ಅಸಹಜ ಬದಲಾವಣೆಗೆ ನಿರಂತರವಾಗಿ ಗ್ರಾಹಿಯಾಗಿರುವ ಸಂಗತಿ ಸಣ್ಣದಲ್ಲ. ಆದರೆ, ಎಲ್ಲವೂ ಮುಖ್ಯವಾಹಿನಿಯಲ್ಲಿ ಚರ್ಚಿಸಲ್ಪಡುವುದಿಲ್ಲ. ಅವೆಲ್ಲವೂ ಈ ಲೋಕದ ಪಾಡು ಎನ್ನುವ ಹಾಗೆ ಸಹಜವಾಗಿ ನಡೆದುಹೋಗುತ್ತವೆ ಮತ್ತು ಅವು ಯಾರನ್ನೂ ತಮ್ಮತ್ತ ಸೆಳೆಯುವಂಥವುಗಳಲ್ಲ. ನಮಗೆಲ್ಲಾ ಒಮ್ಮೊಮ್ಮೆ ಜಡತೆ ಆವರಿಸುತ್ತದೆ. ಎಲ್ಲವುಗಳಲ್ಲಿಯೂ ನಿರಾಸಕ್ತಿ ಅಥವಾ ಯಾವುದೋ ಒಂದನ್ನು ಮಾಡಿಮುಗಿಸಬಹುದಾದ ಇಚ್ಛಾಶಕ್ತಿಯ ಕೊರತೆ ಕಾಡತೊಡಗುತ್ತದೆ. ಆಗ ಹೊಸತೇನನ್ನೋ ಹುಡುಕಿ ಹೊರಡುತ್ತೇವೆ, ಮತ್ತೆ ಬದುಕನ್ನು ನವೀಕರಿಸಿಕೊಳ್ಳುವ ಉತ್ತೇಜನಕ್ಕಾಗಿ ಹಂಬಲಿಸುತ್ತೇವೆ. ಹಲವಾರು ಬಾರಿ ಯಾವ್ಯಾವುದೋ ಕೃತಕ ವ್ಯಕ್ತಿತ್ವ ವಿಕಸನ ಭಾಷಣ, ಬರಹ, ಸಿನಿಮಾ ಇತ್ಯಾದಿಗಳ ಮೊರೆಹೋಗುತ್ತೇವೆ. ಕೆಲವೊಮ್ಮೆ ಅವು ಧನಾತ್ಮಕವಾಗಿಯೂ ಕೆಲಸ ಮಾಡಬಲ್ಲವು. ಆದರೆ, ಅವೆಲ್ಲವೂ ಬೇರೂರಿ ಕೊನೆಗೆ ಫಲ ಕೊಡಬೇಕಾಗಿರುವುದು ನಮ್ಮಲ್ಲಿಯೇ, ಆ ಆಳಕ್ಕಿಳಿಯುವ ಕಾರ್ಯ ಆಗದೇ ಇದ್ದಲ್ಲಿ ಎಲ್ಲವೂ ತಾತ್ಕಾಲಿಕ. ಇದು ಒಂದು ಕಡೆಯಾದಲ್ಲಿ, ಕೆಲವರ ಬದುಕೇ ಈ ಎಲ್ಲಾ ವ್ಯಕ್ತಿತ್ವ ವಿಕಸನ ತರಗತಿಗಳ ವಿಶ್ವವಿದ್ಯಾಲಯದಂತಿರುತ್ತದೆ. ಅದರಲ್ಲಿ ಪ್ರತ್ಯೇಕವಾಗಿ ಹೇರಿಕೊಂಡ ಸಂಗತಿಗಳಿರುವುದಿಲ್ಲ, ಯಾವುದೋ ಒಂದು ಸಮಯ, ಘಟನೆ, ವಿಷಯ ಅವರನ್ನು ಸಾಮಾನ್ಯ ಬದುಕಿನಿಂದ ಭಿನ್ನವಾದ ಮತ್ತು ಎತ್ತರದ ನೆಲೆಗೆ ಕೊಂಡೊಯ್ಯುತ್ತದೆ. ಆಗ ಆ ಇಡೀ ಬದುಕೇ ಸಹಜವಾದ ಸ್ಫೂರ್ತಿಯ ಆಕರವಾಗುತ್ತದೆ. ಅಂಥದ್ದೇ ಒಂದು ಮೈನವಿರೇಳಿಸುವ, ಕ್ಷಣಕ್ಷಣಕ್ಕೂ ಕೈ ಜಾರುತ್ತಿರುವ ಬದುಕನ್ನು ಮತ್ತೆ ಮತ್ತೆ ಗಟ್ಟಿಯಾಗಿ ಅಪ್ಪಿಕೊಳ್ಳುವ, ನಕ್ಷೆಯಲ್ಲಿ ಎಲ್ಲಿದ್ದೇವೆ ಎಂದು ಗೊತ್ತೂ ಆಗದ ಜಾಗದಿಂದ ಮತ್ತೆ ಹೊರಜಗತ್ತಿನೊಂದಿಗೆ ಬೆರೆಯುವ ದಾರಿಯನ್ನು ಹುಡುಕುವ, ಎಲ್ಲವೂ ಮುಗಿಯಿತು ಅನ್ನುವಾಗಲೇ ಮತ್ತೆ ಹೊಸತಾಗಿ ಶುರುವಾಗುವ, ನಂಬಿಕೆಗಳ ಜೊತೆ ನಿರಂತರವಾಗಿ ಸಂಘರ್ಷವೇರ್ಪಟ್ಟು ಸಮಯದ ಜೊತೆ ರಾಜಿಯಾಗದೇ ನಿಂತು, ಪ್ರಕೃತಿಯ ಅಗಾಧತೆಯನ್ನು ಪೂಜಿಸುತ್ತಾ ಪ್ರಕೃತಿಯೊಂದಿಗೇ ಹೋರಾಡಿ ಗೆಲ್ಲುವ, ಆಂಡೀಸ್ ಪರ್ವತ ಶ್ರೇಣಿಯ ಮಡಿಲಲ್ಲಿ ನಡೆದ ಮನುಕುಲದ ದಾರುಣ ಸ್ಥಿತಿಯಲ್ಲೂ ಜೀವನಪ್ರೀತಿಯನ್ನು ಸ್ಫುರಿಸುವ ಕಥಾನಕವೇ ಸಂಯುಕ್ತಾ ಪುಲಿಗಲ್ ( Samyuktha Puligal ) ಅವರು ಅನುವಾದಿಸಿದ ಪರ್ವತದಲ್ಲಿ ಪವಾಡ.
ನ್ಯಾಂಡೋ ಪರಾಡೊ ಬರೆದ, ಜೊತೆಗೆ ಜೀವಿಸಿದ ೭೨ ದಿನಗಳ ಅನುಭವ ಕಥನ ಮಿರಾಕಲ್ ಇನ್ ದಿ ಆಂಡೀಸ್ ( Miracle in the andes ) ಕೃತಿಯ ಕನ್ನಡ ಅನುವಾದ ಇದು. ಮಾನವೀಯ ತುಡಿತಗಳು ಮತ್ತು ಸಂಬಂಧಗಳ ಆರ್ದ್ರತೆಯನ್ನು ಕೊರೋನಾ ಸಮಯದಲ್ಲಿ ಬಹಳಷ್ಟನ್ನು ನೋಡಿದ್ದೇವೆ. ಅದೆಂಥದ್ದೇ ಗಟ್ಟಿಮನಸ್ಸಿನವರಾದರೂ ಒಮ್ಮೆ ಭಾವುಕರಾಗಬಹುದಾದ ಹಲವು ಸಂಗತಿಗಳನ್ನು ಕೇಳಿದ್ದೇವೆ, ಕಂಡಿದ್ದೇವೆ; ಅಲ್ಲ್ಯಾರೋ ವಯಸ್ಸಾದವರು ತನಗಾಗಿ ಮೀಸಲಾದ ಆಸ್ಪತ್ರೆಯ ಹಾಸಿಗೆಯನ್ನು ಇನ್ನ್ಯಾರೋ ಯುವಕನಿಗೆ ಬಿಟ್ಟುಕೊಟ್ಟು ತಾವು ಮೃತರಾದರಂತೆ, ಕೊರೋನಾ ರೋಗಿಗಳ ಸೇವೆ ಮಾಡುತ್ತಲೇ ವೈದ್ಯರು ತಮ್ಮ ಕುಟುಂಬದಿಂದ ದೂರಾದರಂತೆ, ಯಾರೋ ಒಂದಷ್ಟು ಜನ ಬೀದಿನಾಯಿಗಳಿಗೆ ಆಹಾರ ಒದಗಿಸುತ್ತಿದ್ದರಂತೆ, ನಿತ್ಯದ ಮುಗಿಯದ ಕೆಲಸಗಳ ಮಧ್ಯವೂ ಆಸ್ಪತ್ರೆಯ ಹಾಸಿಗೆ, ಔಷಧ, ಆಮ್ಲಜನಕ ಇತ್ಯಾದಿಗಳನ್ನು ಅಗತ್ಯ ಇರುವವರಿಗೆ ತಲುಪಿಸಲು ನಿದ್ದೆಗೆಟ್ಟು, ಊಟ ತಿಂಡಿಗಳನ್ನು ಬಿಟ್ಟು ಪ್ರಯತ್ನಿಸಿದರಂತೆ, ಯಾರೋ ಇನ್ನ್ಯಾರದೋ ಅನಾಥ ಮೃತಶರೀರಕ್ಕೆ ಸಿಗಬೇಕಾದ ಅಂತಿಮ ವಿಧಿಗಳನ್ನು ಪೂರೈಸಿದರಂತೆ ಹೀಗೆ ಹತ್ತು ಹಲವಾರು. ಇವೆಲ್ಲವೂ ಮನುಷ್ಯ ಮನುಷ್ಯನೊಳಗಿನ ಬಾಂಧವ್ಯವನ್ನು, ಭರವಸೆಯನ್ನು ದಟ್ಟವಾಗಿ ಹೆಣೆಯುವ ಘಟನೆಗಳು. ಅಸಂಖ್ಯಾತ ಅಪನಂಬಿಕೆಗಳ, ಮೋಸದ, ಭ್ರಷ್ಟ ವ್ಯವಸ್ಥೆಗಳ, ಸ್ವಾರ್ಥ ಹಪಹಪಿಗಳ ನಡುವೆ ಇವೆಲ್ಲವೂ ಮಾನವ ಸಂಕುಲಕ್ಕೆ ಮನುಷ್ಯ ಪದದ ಅರ್ಥವನ್ನು ಮತ್ತೆ ಕಟ್ಟಿಕೊಡುವ ಸಂದರ್ಭಗಳು. ಅಂಥ ಸಂದರ್ಭಗಳು ದಿನಂಪ್ರತಿಯೂ ಒಂದಲ್ಲಾ ಒಂದು ಕಡೆ ಆಗುತ್ತಲೇ ಇರುತ್ತದೆ. ಆದರೆ, ಕೊರೋನಾ ಸಮಯದಲ್ಲಿ ನೋಡಿದ್ದು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿನ ಮನುಷ್ಯರು ಒಂದೇ ಸಮಯದಲ್ಲಿ ಈ ಅನುಭವಕ್ಕೆ ಸಾಕ್ಷಿಯಾಗಿದ್ದರು. ಇಡೀ ಜಗತ್ತನ್ನು ಅಂತರ್ಜಾಲ ಬೆಸೆಯುವ ಪ್ರಯತ್ನ ಮಾಡಿತು. ಮನೆಯಲ್ಲಿ ವಯಸ್ಸಾದವರಿದ್ದಾರೆ ಅಂತ ಮನೆಗೆ ಹೋಗದೇ ಉಳಿದ ಮಗ ಮಗಳು, ನಾನು ಊರಿಗೆ ಹೋಗಿ ತನ್ನೂರಿಗೆ ಏನಾದರೂ ಆದರೆ ಅಂತಂದುಕೊಂಡ ಉದ್ಯೊಗಕ್ಕಾಗಿ ಊರು ಬಿಟ್ಟು ಬಂದವ, ಯಾರೋ ನಗರ ಪ್ರದೇಶದಿಂದ ಬಂದಾಗ ಅವರು ಬಂದರು ಅನ್ನುವ ಕಾರಣಕ್ಕೇ ಇಬ್ಭಾಗವಾದ ಒಂದೇ ಊರಿನ ಜನರು, ದಣಿವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿದ ವೈದ್ಯಲೋಕ, ಭಯಗ್ರಸ್ತ ಮನಸುಗಳಿಗೆ ಧೈರ್ಯ ತುಂಬಿದ ಅದೆಷ್ಟೋ ಮಂದಿ, ಅದರ ಜೊತೆಜೊತೆಗೆ ದಂಧೆ ಎನ್ನುವ ಕರಾಳ ಜಗತ್ತು ಕೂಡ. ಇವಿಷ್ಟನ್ನೂ, ಅಥವಾ ಇದಕ್ಕಿಂತಲೂ ಹೆಚ್ಚಿನದನ್ನು ಜಗತ್ತು ನೋಡಿದೆ. ೧೯೭೨ರಲ್ಲಾದ ಒಂದು ವಿಮಾನ ಅಪಘಾತ ಹಾಗೂ ಇಡೀ ಜಗತ್ತಿನ ಸಂಪರ್ಕವೇ ಕಡಿದುಹೋದ ಆ ಕ್ಷಣದಲ್ಲಿ, ರಕ್ಷಣಾ ಸೇನೆ ಇವರಿರುವ ಜಾಗವನ್ನು ಪತ್ತೆಹಚ್ಚಬಹುದಾ ಇಲ್ಲವಾ ಅನ್ನುವುದರ ಕುರಿತಾಗಿಯೂ ಅನುಮಾನ ಇರುವಾಗ, ಸುತ್ತಲೂ ಎತ್ತರೆತ್ತರದ ಹಿಮಾವೃತ ಪರ್ವತಗಳ ಬುಡದಲ್ಲಿ ಬಿದ್ದ ಗಾಯಾಳುಗಳು ಮತ್ತೆ ವಾಪಸ್ ತಮ್ಮ ತಮ್ಮ ಮನೆಯ ಗೋಡೆಗಳಿಗೆ ಒರಗಿ ಕೂರುವ ಕ್ಷಣಗಳನ್ನು ನೆನೆಸಿಕೊಂಡು ಅದೆಷ್ಟು ಹಂಬಲಿಸಿರಬಹುದು. ಬಹುಶಃ ಬದುಕಿಗಿಂತ ಬೇರೆ ಸ್ಫೂರ್ತಿ ಇರಲಾರದೇನೋ, ಹೇಗಾದರೂ ಬದುಕಲೇಬೇಕು ಹಾಗೂ ಮತ್ತೊಮ್ಮೆ ಈ ಬದುಕನ್ನು ತೃಪ್ತಿಯಿಂದ ಅನುಭವಿಸಬೇಕು ಅನ್ನುವ ಕನಸು ಮತ್ತು ಆ ಕನಸಿನ ಬೆನ್ನುಹತ್ತಿ ಹೋಗುವ ಕತೆ ರೋಚಕವಾಗದೇ ಇದ್ದೀತಾದರೂ ಹೇಗೆ! ಮೂಲ ಕಾದಂಬರಿಯನ್ನು ನಾನಿನ್ನೂ ಓದಿಲ್ಲ, ಕೇವಲ ಅನುವಾದವನ್ನಷ್ಟೇ ಓದಿದೆ. ಕಾದಂಬರಿಯ ಮೊದಲ ಮಾತಿನಲ್ಲಿ ಲೇಖಕಿ ಹೇಳಿದ ಹಾಗೆ ಇದು ಬದುಕನ್ನು ದ್ವೇಷಿಸಿದ ವ್ಯಕ್ತಿಯೊಬ್ಬ ಬದುಕಿನ ಅಗಾಧ ಪ್ರೇಮವನ್ನು ಹುಡುಕಿ ಹೋಗುವ ಕಥನ. ಎಲ್ಲವೂ ಸರಿಯಾಗಿದ್ದಾಗಲೇ ನಮ್ಮ ಹತ್ತಿರ ಬದುಕಿನ ಕುರಿತಾಗಿ ಹಲವು ದೂರುಗಳಿರುತ್ತವೆ. ಏನೂ ಇಲ್ಲದಾದಾಗ ನಮ್ಮ ಪ್ರತಿಕ್ರಿಯೆ ಹೇಗಿರಬಹುದು ಅಥವಾ ಆ ಕ್ಷಣದ ನಮ್ಮ ದೃಷ್ಟಿಕೋನ ಹೇಗಿರಬಹುದು ಅನ್ನೋ ಪ್ರಶ್ನೆಗಳೆಲ್ಲಾ ಓದುವುದಕ್ಕೆ ಅಷ್ಟೇನು ಆಸಕ್ತಿದಾಯಕವಾಗದೇ ಹೋಗಬಹುದು, ಆದರೆ ಅದರ ಉತ್ತರಗಳು ಮಾತ್ರ ನಾವು ಪಯಣಿಸಿಯೇ ಇರದ ದಾರಿಗಳನ್ನು ತೆರೆದಿಡುತ್ತವೆ.
ನಾವು ಪದೇ ಪದೇ ಹೇಳಿಕೊಂಡು ಬರುತ್ತಿರುವ ಸಂಗತಿಯೆಂದರೆ ಪ್ರಕೃತಿಯ ಇದಿರು ನಾವ್ಯಾರೂ ಒಂದು ಲೆಕ್ಕವೇ ಅಲ್ಲ ಅನ್ನುವುದು. ಆದರೆ ಮನುಷ್ಯನಿಗೊಂದು ಚಾಳಿಯಿದೆ. ಇದ್ದುದನ್ನು ಇದ್ದ ಸ್ಥಿತಿಯಲ್ಲಿಯೇ ಇರುವುದಕ್ಕೆ ಬಿಡದೇ ಇರುವುದು. ವಿಕೃತ ಆನಂದವೊಂದು ದೊರೆಯುತ್ತದೆ ಅಂತಾದಲ್ಲಿ ಮೆದುಳು ಅದಕ್ಕಾಗಿ ಸಜ್ಜಾಗಿಯೇ ಬಿಡುತ್ತದೆ, ಆ ಕ್ಷಣಕ್ಕೆ ತಾನೇ ಸರ್ವರಲ್ಲಿಯೂ ಶಕ್ತಿಶಾಲಿ ಎಂದು ಬೀಗುತ್ತದೆ ಕೂಡಾ. ಆದರೆ, ಸಮತೋಲನ ಎನ್ನುವುದು ಪ್ರಕೃತಿಯ ಅವಿಭಾಜ್ಯ ಅಂಗ. ತನ್ನನ್ನು ತಾನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದಕ್ಕೆ ಗೊತ್ತೇ ಆಗದ ಹಾಗೆ ಪ್ರಕೃತಿ ಪ್ರತಿರೋಧ ಒಡ್ಡುತ್ತದೆ. ಪ್ರತಿ ಬಾರಿಯೂ ಬೇರೆ ಬೇರೆಯದೇ ರೀತಿಯಲ್ಲಿ. ಮನುಷ್ಯ ಅಲ್ಲಿಯೂ ಹೋರಾಡುತ್ತಾನೆ. ಯಾರು ಗೆಲ್ಲುತ್ತಾರೆ ನೋಡೇಬಿಡೋಣ ಅನ್ನುವ ಜಿದ್ದಿಗಿಂತ ಅದರ ಅಗಾಧತೆಯನ್ನು ಪೂಜಿಸಿ ಅದರ ಹತ್ತಿರವೇ ರಕ್ಷಿಸು ಅಂತ ದೈನ್ಯವಾಗಿ ಬೇಡಿಕೊಂಡು ನಂತರ ಪ್ರಯತ್ನ ಮುಂದುವರೆಸಿದರೆ ಆ ಹೋರಾಟಕ್ಕೆ ಸಿಗುವ ಆಯಾಮವೇ ಬೇರೆ. ಪೊರೆವವಳು ಮಡಿಲಲ್ಲಿಟ್ಟು ತೂಗದೇ ಇರುವಳೇ? ಎಷ್ಟೆಂದರೂ ಪರಾವಲಂಬಿಗಳಲ್ಲವೇ ನಾವು!
ಸೂಕ್ಷ್ಮ ಮನಸಿನವರಾದರೆ, ಮನಸ್ಸನ್ನು ಗಟ್ಟಿಮಾಡಿಕೊಂಡು ಓದಿ ನೋಡಿ. ಗಟ್ಟಿ ಮನಸ್ಸಿನವರಾಗಿದ್ದರೆ, ಅಂಥ ಗಟ್ಟಿತನವನ್ನು ಚೂರಾದರೂ ಅಲ್ಲಾಡಿಸಲಿಕ್ಕೆಂದೇ ಒಂದಷ್ಟು ಘಟನೆಗಳು ಪುಸ್ತಕದ ಒಳಗೆ ಕಾಯುತ್ತಿವೆ, ಅಗಾಧ ಹಿಮಶ್ರೇಣಿಗಳ ನಡುವೆ ಬದಲಾಗುತ್ತಲೇ ಇರುವ ಪ್ರತಿಕೂಲ ಹವಾಮಾನದ ಥರ! ಈ ಮುಖಾಮುಖಿ ಕೇವಲ ಕಾದಂಬರಿ ಹಾಗೂ ಓದುಗರದ್ದಲ್ಲ; ಈ ಬಾರಿ, ಬದುಕು ಮತ್ತು ಬದುಕಿನದ್ದು ಮಾತ್ರ...
~`ಶ್ರೀ'
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ