ಒಂದು ಕವಿತೆ, ಒಂದು ಕತೆ, ಒಂದು ಕಾದಂಬರಿ ಅಥವಾ ಒಂದು ಪುಸ್ತಕ ಓದುವಾಗ ಕೊಡುವ ಅನುಭವಕ್ಕಿಂತ, ಓದಿ ಮುಗಿದ ಮೇಲೆ ಕೊಡುವ ಅನುಭವದ ಗಾಢತೆಯನ್ನು ಆಧರಿಸಿ ಅದರ ಕುರಿತಾಗಿ ಬರೆಯುವುದು ನನ್ನ ಪದ್ಧತಿ. ಹಾಗಾಗಿಯೇ ಓದಿದ ಕೂಡಲೇ ಅದರ ಕುರಿತಾಗಿ ಬರೆಯುವುದಕ್ಕೆ ಹೋಗುವುದಿಲ್ಲ; ಒಂದೊಮ್ಮೆ ಆ ಕ್ಷಣಕ್ಕೆ ಆ ಪ್ರಭಾವಲಯದಲ್ಲಿ ಸಿಲುಕಿ ಓದಿನ ತೀವ್ರತೆಯಿಂದಾಗಿ ಒಂದಷ್ಟು ಉತ್ಪ್ರೇಕ್ಷೆಗಳು ಇಣುಕಬಹುದು ಅನ್ನುವುದು ಒಂದು ಕಾರಣವಾದರೆ, ಆ ಓದು ಎಷ್ಟು ತೀವ್ರವಾಗಿತ್ತು, ಗಹನವಾಗಿತ್ತು ಮತ್ತು ಯಾವ ಥರದ ಪರಿಣಾಮವನ್ನು ಉಂಟುಮಾಡಿದೆ ಅನ್ನುವುದನ್ನು ನನಗೇ ನಾನು ಖಾತ್ರಿ ಮಾಡಿಕೊಳ್ಳುವ ಸಲುವಾಗಿಯೂ ಒಂದೆರಡು ದಿನ ಕಾಯುವುದು ಇದೆ. ಅರೇ, ಅದರಲ್ಲೇನಿದೆ, ಪುಸ್ತಕದ ಕುರಿತಾಗಿ ಬರೆಯುವುದಕ್ಕೆ ಇಷ್ಟೆಲ್ಲಾ ನಾಟಕಗಳ್ಯಾಕೆ, ಸುಮ್ಮನೆ ಪರಿಚಯಾತ್ಮಕವಾಗಿ ಬರೆದರೆ ಆಗುವುದಿಲ್ಲವಾ ಅನ್ನುವ ಪ್ರಶ್ನೆ ನನ್ನಲ್ಲೂ ಹುಟ್ಟಿತ್ತು. ಹೀಗೆ ಪರಿಚಯಾತ್ಮಕವಾಗಿ ಬರೆಯಬಹುದಾದರೂ ಅದು ನನ್ನ ಪದ್ಧತಿಗೆ ಸರಿ ಹೊಂದದ ಕಾರಣ, ಸುಲಭವಾದರೂ ಆ ದಾರಿಯನ್ನು ಆಯ್ದುಕೊಳ್ಳುವುದು ನನ್ನಿಂದಾಗದ ಕೆಲಸ. ಇಷ್ಟೆಲ್ಲಾ ಪೀಠಿಕೆ ಯಾಕೆ ಅನ್ನುವುದಕ್ಕೂ ಕಾರಣವಿದೆ. ನಮ್ಮ ಕನ್ನಡ ಓದುಗ ವರ್ಗದಲ್ಲಿ "ಚೆನ್ನಾಗಿದೆ", "ಇಷ್ಟ ಆಯ್ತು" ಹಾಗೂ ಇನ್ನಿತರ ಸಾಲುಗಳನ್ನು ಬಿಟ್ಟು ಅದೆಷ್ಟರ ಮಟ್ಟಿಗೆ ಒಂದು ಕೃತಿಯ ಕುರಿತಾಗಿ ಬರೆಯುತ್ತೇವೆ ಇತ್ತೀಚಿನ ದಿನಗಳಲ್ಲಿ? ನನಗೆ ವಿಮರ್ಶೆ ಎಲ್ಲಾ ಬರೋದಿಲ್ಲ, ಹಾಗಾಗಿ ನಾನು ಬರೆಯೋದಿಲ್ಲ ಅನ್ನುವುದು ಹಲವರ ಅಭಿಪ್ರಾಯವಾದರೂ, ಒಂದು ಪುಸ್ತಕದ ಕುರಿತಾಗಿ ನನಗೇನು ಇಷ್ಟವಾಯಿತು, ಯಾಕಾಗಿ ಇಷ್ಟವಾಯಿತು, ಇದು ಏನನ್ನು ನೆನಪಿಸಿತು, ಇದು ನನ್ನಲ್ಲಿ ಏನೇನು ಯೋಚನೆಗಳನ್ನು ಹುಟ್ಟುಹಾಕಿತು ಅನ್ನುವುದರ ಕುರಿತಾಗಿ ಪ್ರತಿಯೊಬ್ಬರಲ್ಲೂ ಒಂದಷ್ಟು ಅಭಿಪ್ರಾಯವಂತೂ ಖಂಡಿತಾ ಇದ್ದೇ ಇರುತ್ತದಲ್ಲಾ; ಅಂಥ ಅಭಿಪ್ರಾಯಗಳನ್ನು ದಾಖಲಿಸುವುದನ್ನೇ ಬರೆಹವಾಗಿಸಬಹುದಲ್ಲ! ಒಂದು ಪುಸ್ತಕದ ಕುರಿತಾಗಿ ಒಂದಷ್ಟು ಚರ್ಚೆಗಳಾಗಬೇಕು, ಚರ್ಚೆಗಳಲ್ಲದಿದ್ದರೂ ಹೊಸ ಹೊಸ ಹೊಳಹುಗಳು, ದೃಷ್ಟಿಕೋನಗಳು ಮುನ್ನೆಲೆಗೆ ಬರಬೇಕು. ಕೇವಲ ಕೆಲವೇ ಕೆಲವು ಹಳೆಯ ಹಾಗೂ ಪ್ರಸಿದ್ಧ ಬರೆಹಗಾರರ ಕುರಿತಾಗಿ ಮತ್ತು ಅವರ ಕೃತಿಗಳ ಕುರಿತಾಗಿ ಮಾತ್ರ ಬರೆಯದೇ, ಒಂದಷ್ಟು ಹೊಸ ನೀರಿನ ರುಚಿಯನ್ನೂ ನೋಡಬೇಕು. ಆದರೆ, ನಮ್ಮಲ್ಲಿ ಬಹುದೊಡ್ಡ ಸಮಸ್ಯೆಯೆಂದರೆ, ನಾವು ಇನ್ನೂ ಬೇರೆ ಬೇರೆ ವಿಷಯಗಳತ್ತ ಗಮನಹರಿಸದೇ ಒಂದಷ್ಟು ನಿರ್ದಿಷ್ಟ ವಿಷಯಗಳ ಕುರಿತಾಗಿನ ಬರೆಹಗಳನ್ನಷ್ಟೇ ಓದುತ್ತಿದ್ದೇವೆ. ಅದು ತಪ್ಪಲ್ಲದಿದ್ದರೂ ಅದೆಷ್ಟೋ ಹೊಸ ಪುಸ್ತಕಗಳು ಮುಖ್ಯ ವೇದಿಕೆಯನ್ನು ಅಷ್ಟಾಗಿ ಪ್ರವೇಶಿಸದೇ ಇರುವುದಕ್ಕೆ ಇಂಬು ಕೊಟ್ಟಂತಾಗುತ್ತದೆ ಅಂತ ಬಹುಶಃ ಒಪ್ಪಿಕೊಳ್ಳಬಹುದೇನೋ. ಹೀಗೆ ಯಾವುದರ ಕುರಿತು ಮಾತಾಡಬೇಕೋ ಅಂಥ ಪುಸ್ತಕಗಳ ಸಾಲಿಗೆ ಸೇರಬಹುದಾದ ಹಲವು ಪುಸ್ತಕಗಳಲ್ಲಿ ಒಂದು ಶ್ರೀ ನಾಗರಾಜ್ ವಸ್ತಾರೆ ಅವರ 'ಪ್ರಿಯೇ ಚಾರುಶೀಲೆ'..
ಈ ಪುಸ್ತಕದ ಕುರಿತಾಗಿ ಯಾರ್‍ಯಾರು ಏನೇನು ಬರೆದಿರಬಹುದು ಅನ್ನುವ ಕುತೂಹಲದೊಂದಿಗೆ ಒಂದಷ್ಟು ಹುಡುಕಾಡಿದೆ. ನನಗೆ ಸಿಕ್ಕಿದ್ದು ಮೂರ್ನಾಲ್ಕು ಬರೆಹಗಳು ಮಾತ್ರ. ಅದರಲ್ಲೂ ಒಂದು ಬರೆಹದಲ್ಲಿ ಇಡೀ ಕಾದಂಬರಿಯ ಸಾರಾಂಶವನ್ನು ನೇರವಾಗಿ, ಯಾವ ಕುತೂಹಲವನ್ನೂ ಇಟ್ಟುಕೊಳ್ಳದ ಹಾಗೆ ಬರೆದು ಮುಗಿಸಿದ್ದಾರೆ. ಓದುವಿಕೆಯ ಅನುಭವವನ್ನು ಹಾಳುಗೆಡವುವ ಇಂಥ ಬರೆಹಗಳಾದರೂ ಯಾಕೆ ಅನ್ನುವ ಸಿಟ್ಟೂ ನಾನೀಗ ಇಲ್ಲಿ ಬರೆಯುತ್ತಿರುವುದಕ್ಕೆ ಒಂದು ಕಾರಣ ಅಂತಂದರೆ ಅತಿಶಯೋಕ್ತಿ ಅಲ್ಲ ಅಂತಲೇ ಭಾವಿಸುತ್ತೇನೆ. ಕತೆ, ಕಾದಂಬರಿ, ಸಿನೆಮಾದ ಕುತೂಹಲವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡದೇ, ಓದುಗನಲ್ಲಿ, ನೋಡುಗನಲ್ಲಿ ಕುತೂಹಲವನ್ನು ಹುಟ್ಟುಹಾಕುವುದಕ್ಕೆ ಬೇಕಾದಷ್ಟು ಕತೆಯನ್ನು (ತೀರಾ ಅಗತ್ಯವಿದ್ದರೆ) ಮಾತ್ರವೇ ತೆರೆದಿಡುವುದಕ್ಕೆ ಪ್ರಯತ್ನ ಇರಲಿ ಅಂತ ಒಂದು ವಿನಮ್ರ ವಿನಂತಿ. ಇನ್ನು, ಕೇವಲ ಅಂತರ್ಜಾಲದಲ್ಲಿ ಹುಡುಕಾಡಿದ್ದು ನನ್ನ ಮಿತಿಯೂ ಇರಬಹುದು!
ಪ್ರೇಮದ ಕುರಿತಾಗಿ ಅದೆಷ್ಟೇ ಬರೆದರೂ, ಮತ್ತೆ ಮತ್ತೆ ಬೇರೆ ಬೇರೆ ಪೀಳಿಗೆ ಬೇರೆ ಬೇರೆಯದೇ ಅಭಿವ್ಯಕ್ತಿಯೊಂದಿಗೆ ಪ್ರೇಮದ ಕುರಿತಾಗಿ ಬರೆಯುತ್ತಲೇ ಬಂದಿದೆ. ಮನುಷ್ಯ ಸಂಘಜೀವಿ ಅಂತಲೇ ನಾವೆಲ್ಲಾ ಕಲಿತಿರುವುದು; ಆದರೆ, ಬಹುಶಃ ಮನುಷ್ಯ ನಿಜವಾಗಲೂ ಒಂಟಿ, ಆ ಒಂಟಿತನವನ್ನು ಕಳೆದುಕೊಳ್ಳುವುದಕ್ಕೋಸ್ಕರ ಸಂಘಜೀವಿಯ ಸೋಗು ಹಾಕಿ ಕಾಲ ಕಳೆಯುತ್ತಾನೆ. ಇಲ್ಲಿ ಸೋಗು ಎನ್ನುವುದಕ್ಕೆ ಕಪಟ ಅಂತ ಭಾವಿಸಬೇಕಾಗಿಲ್ಲ; ಅದೊಂದು ವೇಷ, ಆರೋಪಿಸಿಕೊಳ್ಳುವಂಥದ್ದು ಅನ್ನುವ ಧ್ವನಿಯಷ್ಟೇ ಮುಖ್ಯ. ಹೀಗೆ ಒಂಟಿತನದಲ್ಲಿರುವ ಮನುಷ್ಯ ಸಂಘಜೀವಿಯ ವೇಷವನ್ನು ನಡೆಸಿಕೊಂಡು ಹೋಗುವುದಕ್ಕೆ ಒಂದಷ್ಟು ಮೂಲದ್ರವ್ಯಗಳ ಮೊರೆಹೋಗುತ್ತಾನೆ; ಅದರಲ್ಲಿ ಪ್ರೇಮವೂ ಒಂದು. ಪ್ರೀತಿ, ಮಮತೆ, ವಾತ್ಸಲ್ಯ, ಕರುಣೆ, ನಂಬಿಕೆ, ತ್ಯಾಗ ಇತ್ಯಾದಿಗಳ ಮೂಲಕವೂ, ದ್ವೇಷ, ಅಸೂಯೆ, ಅಹಂಕಾರ, ಸಿಟ್ಟು, ಲೋಭಗಳಿಂದಲೂ ತನ್ನ ಸುತ್ತಮುತ್ತ ಒಂದಷ್ಟು ಸಂಬಂಧಗಳನ್ನು ಹುಟ್ಟುಹಾಕಿಕೊಳ್ಳುತ್ತಾನೆ. ಆ ಸಂಬಂಧಗಳೊಂದಿಗಿನ ನಿತ್ಯ ಸಂವಾದ, ಸಂಘರ್ಷಗಳಿಂದಾಗಿ ತನ್ನ ಒಂಟಿತನದ ತೀವ್ರತೆಯನ್ನು ಮರೆಯುವ, ಬದುಕಿನ ಬೇರೆ ಬೇರೆ ಮಗ್ಗುಲುಗಳಿಗೆ ಹೊರಳಿಕೊಳ್ಳುವ ಪ್ರಕ್ರಿಯೆಯನ್ನು ಜೀವಂತವಾಗಿಡುತ್ತಾನೆ.
ಹೆಸರೊಂದನ್ನು ಬಿಟ್ಟು ಇನ್ನೇನೂ ಗೊತ್ತಿರದೇ, ಯಾವ ಪೂರ್ವಗ್ರಹಗಳೂ ಇಲ್ಲದೇ ಓದಲು ಶುರುಮಾಡಿದ ಕಾದಂಬರಿ 'ಪ್ರಿಯೇ ಚಾರುಶೀಲೆ'. ನಾಗರಾಜ ವಸ್ತಾರೆ ಅವರ ಯಾವ ಪುಸ್ತಕವನ್ನು ಓದಿರದೇ ಇದ್ದುದರಿಂದ ಯಾವುದೇ ನಿರೀಕ್ಷೆಯ ಚೌಕಟ್ಟಿರಲಿಲ್ಲ. ಹಳೆ ತಲೆಮಾರಿನ ಭಾಷೆಯೊಂದಿಗೆ, ಹೊಸ ತಲೆಮಾರಿನ ಭಾಷೆಯನ್ನು ಬೆಸೆಯುವುದಕ್ಕೆ ಶ್ರೀಯುತರು ಪ್ರಯತ್ನಿಸಿದಂತೆ ಕಾಣುತ್ತದೆ. ಒಮ್ಮೊಮ್ಮೆ ಹೊಸ ತಲೆಮಾರಿನ ಪ್ರೇಮಕತೆಯಂತೆಯೂ, ಇನ್ನು ಕೆಲವೊಮ್ಮೆ ಅದೆಷ್ಟೇ ತಲೆಮಾರುಗಳು ಕಳೆದರೂ ಬದಲಾಗದ ಪ್ರೇಮದ ಮೂಲವನ್ನು ಹುಡುಕುವ ಕತೆಯಂತೆಯೂ ಕಂಡರೆ ಆಶ್ಚರ್ಯವೇನಿಲ್ಲ. ಬರೀ ಪ್ರೇಮವಷ್ಟೇ ಕಂಡರೆ ತಪ್ಪೂ ಅಲ್ಲ; ಪೂರ್ತಿ ಸರಿಯೂ ಅಲ್ಲ! ಹೊರಗಿನ ಪ್ರಪಂಚವನ್ನು ನೋಡುವ ಮನುಷ್ಯನಿಗೆ ತಾನು ಮಾತ್ರ ದುಃಖದಲ್ಲಿರುವುದಾಗಿಯೂ, ತನ್ನೊಬ್ಬನನ್ನು ಬಿಟ್ಟು ಇಡೀ ಜಗತ್ತು ಸುಖದ ಸಂಭ್ರಮದ ಅಮಲಲ್ಲಿ ತೇಲುತ್ತಿರುವುದಾಗಿಯೂ ಕಾಣುವುದು ಸಹಜ. ತನ್ನ ಸದ್ಯದ ಬದುಕಿಂದ ಕೆಲ ಕಾಲ ಹೊರ ಬಂದು ಹೊಸ ಅನುಭವಗಳನ್ನು ಪಡೆದುಕೊಳ್ಳಬೇಕು ಎಂದು ಹಂಬಲಿಸುವವರು ಹಲವರಾದರೂ, ಕಾರ್ಯಪ್ರವೃತ್ತರಾಗುವವರು ಬೆರಳೆಣಿಕೆಯಷ್ಟು. ಬೀದಿಯಲ್ಲಿ ನಡೆಯುವಾಗ ಪರಿಚಯದ ಯಾವ ಮುಖಗಳೂ ಕಾಣದೇ, ಹೆಸರಿಡಿದು ಕರೆಯುವ ಯಾವ ಧ್ವನಿಗಳೂ ಇದಿರಾಗದೇ, ತಮ್ಮನ್ನೇ ತಾವು ಹೊಸದಾಗಿ ಹುಡುಕಿಕೊಳ್ಳಬಹುದಾದ ಒಂದು ಅವಕಾಶಕ್ಕಾಗಿ ದಿನಂಪ್ರತಿ ಪ್ರಾರ್ಥಿಸುವ ಮನುಷ್ಯರೇನು ಕಡಿಮೆ ಇಲ್ಲವಲ್ಲ ! ಅದೆಷ್ಟೇ ಅಪರಿಚಿತ ಪ್ರದೇಶಕ್ಕೆ ಹೋದರೂ ಪರಿಚಯ ಆಗಲೇ ಬೇಕಲ್ಲ , ಹೊಸ ಹೊಸ ಸಂಬಂಧಗಳು ಹುಟ್ಟಲೇಬೇಕಲ್ಲ! ಹಾಗೆ ಹುಟ್ಟುವ ಸಂಬಂಧ ಮತ್ತದರ ಕಥಾನಕವನ್ನು ತೆರೆದಿಡುವುದೇ 'ಪ್ರಿಯೇ ಚಾರುಶೀಲೆ'.
ನಾಗರಾಜ ವಸ್ತಾರೆಯವರು ಭಾಷೆಯನ್ನು ಬಳಸಿಕೊಂಡ ಹಾಗೂ ದುಡಿಸಿಕೊಂಡ ಬಗೆಯೇ ಇಡೀ ಕಾದಂಬರಿಯ ಜೀವಾಳ; ಕೆಲವೊಮ್ಮೆ ಒತ್ತಾಯಪೂರ್ವಕವಾಗಿಯೂ! ಇಲ್ಲಿ ಸಾಹಿತ್ಯದ ಶಾಸ್ತ್ರೀಯ ವಾಕ್ಯಗಳೂ ಇವೆ; ಇತ್ತೀಚಿನ ದಿನಗಳಲ್ಲಿ ನಿತ್ಯ ಮಾತಾಡುವ ಕನ್ನಡವೂ ಇದೆ, 'ಐ ಮೀನ್' ಕಂಗ್ಲೀಷೂ ಇದೆ; ಹಾಗೆ ಹೇಳಬಹುದಾದಲ್ಲಿ.. ಅವರು ಹೇಳಬೇಕಾಗಿರುವುದನ್ನು ಹೇಗಾದರೂ ಹೇಳಲೇಬೇಕಾಗಿತ್ತು, ಹಾಗಾಗಿ ಅಲ್ಲಿಯೂ ಅವರು ಜಾಣ್ಮೆಯನ್ನು ತೋರಿದ್ದಾರೆ. ಒಮ್ಮೊಮ್ಮೆ ದಾರಿ ತಪ್ಪುವ ನಿರೂಪಣೆಯನ್ನು ಅಲ್ಲಿನ ಪಾತ್ರದ ಮೂಲಕವೇ ದಾರಿ ತಪ್ಪಿಸುತ್ತಾರೆ ಹಾಗೂ ಆ ದಾರಿ ತಪ್ಪುವ ಎಚ್ಚರವೂ ಅವರಿಗಿದೆ; ಆ ಪಾತ್ರಕ್ಕೂ ! ಹಾಗಾಗಿ ಇದನ್ನು ಒಂದು ಪ್ರಯೋಗ ಅಂತಲೇ ಭಾವಿಸಬೇಕೇ ಹೊರತೂ, ಅರಿವಿಲ್ಲದೇ ಆದ ನಿರೂಪಣೆಯಲ್ಲ. ಆದರೆ, ಓದಿನ ಓಘಕ್ಕೆ ಒಮ್ಮೊಮ್ಮೆ ಅದೇ ತೊಡಕಾಗುವ ಸಾಧ್ಯತೆಗಳು ದಟ್ಟವಾಗಿ ಕಾಣಿಸಿದ್ದಂತೂ ಹೌದು. ವಿವರಗಳೇ ತುಂಬಿಕೊಂಡಾಗ ಆಸಕ್ತಿಯಿದ್ದರೂ ಕತೆಯ ದಿಕ್ಕು ತಡಕಾಡಿಸುತ್ತದೆ ಆದರೂ, ಅದೂ ಒಂಥರಾ ಮಜವಾಗಿದೆ.
ಮನುಷ್ಯ ತನ್ನ ವಾಸ್ತವದಿಂದ ಓಡುವುದಕ್ಕೆ ಯಾವತ್ತೂ ಪ್ರಯತ್ನಿಸುತ್ತಲೇ ಇರುತ್ತಾನೇನೋ ಅಂತನ್ನಿಸದೇ ಹೋಗುವುದಿಲ್ಲ. ಕೆಲವು ಸಂಬಂಧಗಳು ಹುಟ್ಟಿಕೊಳ್ಳುವುದಕ್ಕೆ ವರ್ಷ ವರ್ಷಗಳ ಕಾಲ ಕೂತು ತೂಗಿ ಅಳೆದು ಅವುಗಳನ್ನು ನಿರ್ವಹಿಸಬೇಕಾದ ಅಗತ್ಯತೆ ಇರುವುದಿಲ್ಲ. ಸರಿಯಾದ ಸಂದರ್ಭ ಮತ್ತು ಮನೋಭೂಮಿಕೆ ಸರಿಯಾದ ಸಮಯದಲ್ಲಿ ಒಂದಕ್ಕೊಂದು ಇದಿರಾದಾಗ ಬೇಡ ಬೇಡವೆಂದರೂ ಸಂಬಂಧಗಳು 'ಗಂಟು' ಬೀಳುತ್ತವೆ. ಹಾಗಾಗಿ ಮನುಷ್ಯನ ಬದುಕಿನಷ್ಟು ಸಂಕೀರ್ಣವಾದ ಇನ್ನೊಂದು ಬದುಕು ಬಹುಶಃ ಇರಲಿಕ್ಕಿಲ್ಲ. ಕಾರಣ, ಒಂದೊಂದು ಭಾವವೂ ಒಂದೊಂದು ದಿಕ್ಕಿಗೆ ಎಳೆದೊಯ್ಯಬಲ್ಲ ಸಾಮರ್ಥ್ಯ ಹೊಂದಿರುವಂಥವುಗಳು. ಮತ್ತೆ ಮತ್ತೆ ಎಳೆ ತಂದು ಒಂದೇ ತಂತಿಗೆ ಜೋಡಿಸಬೇಕಾಗಿರುವುದು ನಮ್ಮ ಹಾಡಿನ ಪಾಡು.
ಈ ಕಾದಂಬರಿಯನ್ನು ಓದುತ್ತಿದ್ದಾಗ ತುಂಬಾ ಕಡೆ ಇದು ಸಿನೆಮಾವಾದರೆ ಎಷ್ಟು ಚೆಂದ ಅಂತ ಅನಿಸಿದ್ದಿದೆ. ಕೆಲವು ಸನ್ನಿವೇಶಗಳನ್ನು ಅಷ್ಟು ವೈಭವೋಪೇತವಾಗಿ ಅಕ್ಷರಗಳಲ್ಲೇ ಲೇಖಕರು ಕಟ್ಟಿಕೊಟ್ಟಿದ್ದಾರೆ. ಅದು ಅವರ ಭಾಷೆಗಿರುವ ಗಟ್ಟಿತನ. ಕೆಲವು ಮೈನವಿರೇಳಿಸುವ ಸಂಗತಿಗಳೂ ಇವೆ ನಮ್ಮ ನಮ್ಮ ಕಲ್ಪನಾಶಕ್ತಿಯನ್ನು ಆಧರಿಸಿ! ಕೆಲವು ಕಡೆ ಸ್ವಲ್ಪ ನಾಟಕೀಯತೆಯೂ ಇರುವುದು ಕತೆಯ ಬೆಳವಣಿಗೆಗೆ ಅಂತಲೇ ಆದರೂ, ವಾಸ್ತವದ ನೆಲೆಗಟ್ಟಿನಲ್ಲಿ ಸರಿಯಾಗಿ ಕೂರದೇ ಒದ್ದಾಡುತ್ತವೆ. ಉದಾಹರಣೆಗೆ, ಜಗತ್ತಿನ ಅನೇಕ ಸಂಗತಿಗಳ ಕುರಿತು ಗೊತ್ತಿರುವ ವ್ಯಕ್ತಿಗೆ ಸರಿ ಸುಮಾರು ಒಂದೇ ಎನ್ನಬಹುದಾದ ತನ್ನದೇ ರಂಗದ ಪ್ರಸಿದ್ಧ ಹೆಸರೊಂದು ತಿಳಿಯದೇ ಇರುವುದು. ಎಲ್ಲರಿಗೂ ಎಲ್ಲವೂ ತಿಳಿದಿರಲೇಬೇಕು ಅಂತೇನಿಲ್ಲ , ಸಚಿನ್ ತೆಂಡೂಲ್ಕರ್ ಯಾರೆಂದು ತನಗೆ ಗೊತ್ತೇ ಇಲ್ಲ ಅಂತ ಮರಿಯಾ ಶರಪೋವಾ ಹಿಂದೊಮ್ಮೆ ಹೇಳಿದಾಗ ಬಹಳಷ್ಟು ಜನ ಸಿಟ್ಟಿಗೆದ್ದಿದ್ದು ನಮ್ಮ ಕಣ್ಣ ಮುಂದಿದೆ. ಆದರೆ, ಯಾವಾಗ ಪಾತ್ರವೊಂದರ ಕಟ್ಟುವಿಕೆ 'ಬಹಳಷ್ಟು ತಿಳಿದಿದೆ' ಅನ್ನುವುದನ್ನೇ ಮೂಲವಾಗಿಸಿಕೊಂಡಿರುತ್ತದೋ, ಆಗ 'ಗೊತ್ತಿಲ್ಲ' ಅನ್ನುವುದು ದುರ್ಬಲವೂ, ಬಾಲಿಶವೂ ಅಂತನ್ನಿಸಿದರೆ ಓದುಗನ ತಪ್ಪಲ್ಲವೆಂದು ಮನ್ನಿಸಬೇಕಾಗಿ ಕೋರಿಕೆ!
ಇನ್ನೂ ಬಹಳಷ್ಟನ್ನು ಈ ಕೃತಿಯ ಕುರಿತಾಗಿ ಹೇಳಬೇಕಿತ್ತು; ಆದರೆ, ಕತೆಯ ಅಂಶಗಳನ್ನು ಇಷ್ಟೇ ಇಷ್ಟು ಕೂಡಾ ಬಿಟ್ಟುಕೊಡುವುದಕ್ಕೆ ಮನಸ್ಸಿಲ್ಲದ ಕಾರಣ ಜಾಸ್ತಿ ಹೇಳದೇ ನಿಲ್ಲಿಸುವೆ. ಒಂದು ಕೃತಿ ಒಳ್ಳೆಯದೋ ಕೆಟ್ಟದ್ದೋ, ಸಾಮಾನ್ಯದ್ದೋ ಅಸಾಮಾನ್ಯದ್ದೋ ಅನ್ನುವುದನ್ನು ತೀರ್ಮಾನಿಸುವುದಕ್ಕೂ ಮೊದಲು ಆ ಕೃತಿಯ ಕುರಿತಾಗಿ ಚರ್ಚಿಸೋಣ, ಆ ಕೃತಿಯನ್ನು ಪರಿಚಯಿಸೋಣ, ಆ ಕೃತಿಯನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನ ಮಾಡೋಣ. ಎಲ್ಲವೂ ಎಲ್ಲರಿಗೂ ಇಷ್ಟವಾಗಲೇಬೇಕು ಅಂತೇನಿಲ್ಲ. ಸಾಹಿತ್ಯವೇ ಆಗಿರಲಿ, ವ್ಯಕ್ತಿತ್ವವೇ ಆಗಿರಲಿ ಗಹನವಾದಷ್ಟೂ ದ್ವಂದ್ವಗಳು ಹೆಚ್ಚುತ್ತವೆ ಮತ್ತು ಅಂಥ ದ್ವಂದ್ವಗಳಲ್ಲೇ ಯೋಚನೆಗಳು ಕಡೆಯಲ್ಪಡುತ್ತವೆ. ಕಡೆದಷ್ಟೂ ಸಂಕೀರ್ಣವಾಗುತ್ತವೆ. ಸಂಕೀರ್ಣತೆಗೂ ಒಂದು ಸೌಂದರ್ಯವಿದೆ; ಮಾನವ ಜನಾಂಗದಂತೆಯೇ!
- 'ಶ್ರೀ'
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ