"ಹನಿ ಹನಿಯ ಋತು ಪರ್ವ...."!!
ಕಪ್ಪು ಮುಗಿಲ ತನುವಿನ ತುಂಬ ಬೆಳಕಿನ ಬಳ್ಳಿ ಹಬ್ಬಿದಾಗ,ಕರಿಯ ಬಂಡೆಯಲಿ ಶ್ವೇತ ಬಿರುಕುಗಳೋ ಎಂಬಂತೆ ರೇಖೆಗಳ ಸೆಲೆಯೊಂದು ಹೊರಳಿದಾಗ,ತಣಿತಣಿವ ಹಕ್ಕಿಯೊಡಲ ಹಾಡು,ಸುಳಿಸುಳಿವ ಪರಿಮಳದ ಜಾಡು ಹಿಡಿದ ಗೆದ್ದಲಿನ ಗೂಡುಗಳ ಅವಸಾನದ ಪಾಡು,ಸುಡುಸುಡುವ ಎದೆಯೊಳಗಣ ತುಮುಲಗಳ ಸಹವಾಸದಿ ಪರವಶವಾಗಿಹ ಎದೆಗೂಡಿನ ಜಿದ್ದನು ನೋಡು..ಕರಗಿ ಕರಗಿ ಧಾರೆಯಾಗಿ ಧರೆಗಿಳಿವ ಕಂಬನಿಯ ಕಾರುಬಾರು..ಎಲೆ ಎಲೆಗಳ ಮೇಲೆ ಬಿದ್ದು,ಮುದ್ದಾಗಿ ಮುತ್ತಾಗುವ ಹನಿಹನಿಗಳದೇ ದರ್ಬಾರು..
ಹೃದಯದೊಳಗೆ ಕಟ್ಟಿಕೊಂಡಿಹ ಕೋಟೆಯೊಳಗೆ ಹೆಪ್ಪುಗಟ್ಟಿಹ ನೋವಿನೆಳೆಗಳ ನೆರಳುಗಳೆಲ್ಲ ಸುಳಿಸುಳಿಯಾಗಿ ಬಳಗವಾಗಿ ಹನಿಯಾಗುತಿವೆ..ಎಂಥದ್ದೋ ಅವ್ಯಕ್ತ ಭ್ರಮೆಯ ಸಂಭ್ರಮದ ವಿಭ್ರಮದಲ್ಲಿ ಅಳುತ್ತಿದೆ ವಿಹ..ಅದಕೂ ಕಾರಣ ವಿರಹ!ಬಾನು ಭುವಿಗಳ ಮಿಲನಪರ್ವ,ಕನಸಿನ ಧ್ಯಾನಗರ್ವವೇ ಆಗಿಹೋಗಿದೆಯೇ?..ಕ್ಷಿತಿಜದಲ್ಲಿ ಸಮಾಗಮವೆಂಬುದಲ್ಲ ಸತ್ಯ!ಅಂತ್ಯವಿಲ್ಲದ ಪರಿಧಿಗೆ ಆದಿಯೆಂಬುದೇ ಮಿಥ್ಯ!..ಮೃದುಲ ಕ್ಷಿತಿಯ ಮಡಿಲ ಒಡಲಿಗೆ ಚಾಚಿಕೊಳುವ ಕಾತರ..ವಿರಹ ತಾಪದಿ ತಪ್ತವಾದ ಹೃದಯಕ್ಕೆ ಲಗ್ಗೆಯಿಟ್ಟು,ಆಪ್ತವಾಗುವ ಉಪಾಸನೆಯ ತಪಸ್ಸು..ನೊಂದ ಜೀವಕ್ಕೆ ಸಾಂತ್ವನದ ಸಹಸ್ಪರ್ಶ ನೀಡುವ ಅವಸರ..ನವಿಲಿಗೋ,ಅಳುವ ಮುಗಿಲ ಕಣ್ಣ ಹನಿಗಳಲಿ ಮಿಂದು,ನೃತ್ಯ ಮಾಡುವ ಆತುರ..ಗರಿಬಿಚ್ಚಿ ಬೆರಗಾಗಿ,ಸ್ವರತನ್ಮಯವಾಗಿ ಆಸ್ವಾದಿಸುವ ಆ ಕ್ಷಣದ್ದೆಂಥ ಚಮತ್ಕಾರ..ಸೃಷ್ಟಿ ಗೀಚಿದ ಸುರುಳಿರೇಖೆಗೆ ಬಣ್ಣ ಹಚ್ಚಿಹನ್ಯಾರೋ ಒಬ್ಬ ಪೋರ..!ಸೊಗಡಿಗೇ ಸೋಗು ಹಾಕಿ,ಬೆಡಗಿಗೇ ಬೀಗವಿಕ್ಕಿ,ಜೋಪಾನವಾಗಿ ಎದೆಯ ಜಗುಲಿಯಲ್ಲಿ ಜಾಗಕೊಡುವ ಹೃದಯಂಗಮ ಸೌಂದರ್ಯದ ಸಂಗಮವಲ್ಲವೇ ಈ ಚಿತ್ರ!!..
ಪತ್ರ ಬರೆವ ಚಾಳಿಗೆ ಪಾತ್ರವಿರದೆ,ಬಿತ್ತರಗೊಳ್ಳದೆಯೇ ಸತ್ತಿವೆಯೇ ಭಾವಗಳು?!ಕಂತಿರದ ಬದುಕಿನ ಅಧ್ಯಾಯವ,ಹೊಸಕಂತಿನ ಕ್ರಾಂತಿಗೆ ವಿಸ್ತರಿಸುವ ಅಲೆಮಾರಿಯ ತಲೆಮಾರಿನ ಪರ್ವವೇ?ಬೀಸುವ ವಿರಸದ ಬಿಸಿಗಾಳಿಗೂ ತುಸುತುಸು ಪ್ರೀತಿಯ ತಾನೊಯ್ಯುವ ಹಸಿವಿದೆ..ಮಡಿಚಿಟ್ಟ ಮನಸಿನ ಮಡಿಕೆಗಳ ಮಗ್ಗುಲಲ್ಲೂ ತುಡಿತುಡಿವ ಮೌನದ ಸಂವೇದನೆ!..ಮುದುಡಿರುವ ಮೌನಕ್ಕೆ ಹದವಾಗಿ ಬದಲಾಗಿ,ಕತೆಯಾಗುವ ಯೋಚನೆ!ಬದಿಬದಿಗೆ ತಹಬದಿಗೆ ಬರದ ಮಿಲನಗಳಿಗೆಯದೇ ಯಾಚನೆ!..ದಿನದಿನವೂ ಎದುರುಬದುರಾಗಿ ನಿಂದು,ಅವಕಾಶದಿ ಚುಂಬನವ ಇದಿರುಗೊಳ್ಳುವ ಕಾಮನೆ..ಇನಿಯೆಯ ಸ್ಪರ್ಶದಿ ನಶೆಯ ವಶವಾಗುವ ಇಂಗಿತ..ಹನಿ ಹನಿ ಕಂಬನಿ,ಇಳೆಯ ತಬ್ಬುವ ವೇಳೆಗೆ ಕಲ್ಲಲ್ಲೂ ಅಲೆಯುವುದು ಅಲೆಅಲೆಯ ಸಂಗೀತ..ಅಟ್ಟಹಾಸದ ಸದ್ದಿನಲ್ಲಿ,ಮಂದಹಾಸದ ಸುದ್ದಿಯಲ್ಲಿ ಅಂದಗಟ್ಟಿದೆ ಈ ಮಧುಚಂದ್ರವಿರದ ಮಿಲನ ಮನ್ವಂತರದ ಋತು..ಸೆರೆಯಾಯಿತು ವಿಧಿ,ಎದೆಗರ್ಭದ ಪ್ರೀತಿಗೆ ಸೋತು...!
ವಿಷಾದದ ಬಸಿರಲ್ಲಿ ವಿನೋದದ ಸಂವಾದ..ಶೈಶವದ ಶೀಷೆಯಲಿ ಮಲಗಿರುವ ಅವಶೇಷಗಳು ಇತಿಹಾಸವ ಧ್ವನಿಸುತ್ತವೆ;ಹಿತದ ಕಚಗುಳಿಯಾಗುತ್ತವೆ..ಅಂತೆಯೇ,ಈ ಹನಿಗಳ ಚಳುವಳಿಯು..ಅಂತರಾಳದ ಸ್ವರಸ್ಯಂದನ ಮುನ್ನಡೆದಿರೆ,ಪ್ರೀತಿಯ ಪರಿಚಯವು..ಮರುಭೂಮಿಗೂ ಖುಷಿಕೊಡುವುದು ಹನಿಗಳ ತಂಪನೆ ಸಿಂಚನವು..ಕಂಬನಿಯೇ ಜಾಹ್ನವಿಯಾಗಿ,ಜೀವ ಸೃಜನಕ್ಕೆ ಮುನ್ನುಡಿಯಾಗಿ,ಮಗುವಿನ ಮಂದಸ್ಮಿತ,ಸ್ಫಟಿಕದ ತೆರ ಕಣ್ಣುಕುಕ್ಕುವ ವೇಳೆಗೆ,ಮತ್ತದೇ ಗಗನದಿ ಮುಗಿಲು,ಕಾಮನಬಿಲ್ಲಿನ ಜೊತೆ ಮಗುವಾಗುವುದು..ಹೊಸ ಬಾಂಧವ್ಯದ ಸೇತು,ಕತೆಯಾಗಲು ಕನವರಿಸುವುದು...!!!....
~‘ಶ್ರೀ’
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ