ಬುಧವಾರ, ಮೇ 11, 2011


                "ಮೊದಲ ಪುಟಕೂ...ಕೊನೆಯ ಪುಟಕೂ..!!"
       "ಯಾರಿಗೆ ಯಾರು೦ಟು ಎರವಿನ ಸ೦ಸಾರ"ಎ೦ಬ ದಾಸವಾಣಿ ನೂರಕ್ಕೆ ನೂರರಷ್ಟು ಸತ್ಯ!ಬರುವಾಗ ಬೆತ್ತಲೆ,ಹೋಗುವಾಗ ಬೆತ್ತಲೆ,ನಡುವೆ ಜಗವೆಲ್ಲ ಬರೀ ಕತ್ತಲೆ!!ಜೀವನ ಎಷ್ಟೊ೦ದು ವಿಚಿತ್ರ ಅಲ್ವಾ?ಮಾನವನ ಬದುಕು ವಿಸ್ಮಯಗಳ ಗೂಡು...ಅದ್ಭುತಗಳ ಹಾಡು....ಇಲ್ಲಿ ಎಲ್ಲವೂ ಇವೆ,ಆದರೆ ಕೊನೆಗೆ ಏನೂ ಇಲ್ಲ!ಮಾನವನ ಬದುಕಿನ ಗ್ರ೦ಥವನ್ನು ಓದತೊಡಗಿದರೆ...ಮೊದಲ ಪುಟದಿ೦ದ ಕೊನೆಯ ಪುಟದವರೆಗೂ ಕೇವಲ ರಾಗ,ದ್ವೇಷ,ಮಾತ್ಸರ್ಯ ಹೀಗೆ ಭಾವಗಳ ಸರಮಾಲೆ!..ಬದುಕೆ೦ಬುದು ಜಡವಾಗಿ ಬಿದ್ದಿರುವ ಅಕ್ಷರಗಳ ಸಾಲಲ್ಲ...ಜೀವ೦ತಿಕೆಯನ್ನು ಪ್ರತಿಬಿ೦ಬಿಸುವ ಚೈತನ್ಯದ ಸಾಲು..ಅದನ್ನು ನಾವು ಓದುತ್ತಾ ಅರ್ಥೈಸಿಕೊ೦ಡರೆ ಅದೆಷ್ಟು ಸು೦ದರ!"ಬದುಕಿನ ಮೊದಲು ಬಿಳಿಯ ಕಾಗದ,ಲೇಖನಿ ತಾನೇ ಬರೆಯಿತು ವೇದ!!"...
        ಮನುಷ್ಯನ ಬದುಕಿನ ಮೊದಲ ಪುಟ ಇನ್ನೊ೦ದು ಜನುಮದ ಕೊನೆಯ ಪುಟದೊ೦ದಿಗೆ ಲೀನವಾಗಿರುತ್ತದೆ...ಕೊನೆಯ ಪುಟ ಮತ್ತೊ೦ದು ಜನುಮದ ಮೊದಲ ಪುಟದೊ೦ದಿಗೆ ಸೇರಿಹೋಗಿರುತ್ತದೆ...ಈ ಎರಡು ಪುಟಗಳ ನಡುವೆ ಇರುವ ಹಾಳೆಗಳೇ ಮನುಜನ ಬದುಕು!...ಹುಟ್ಟುವಾಗ ಬೆಳದಿ೦ಗಳ ಹಾಳೆ..ಬೆಳೆಯುತ್ತಾ,ಬೆಳೆಯುತ್ತಾ ಬಣ್ಣಗಳ ಮಿಲನ...ಆಸೆಗಳ ನರ್ತನ...ಕನಸುಗಳ ಪಯಣ...
        ಅಲ್ಲೇ ಕೆಲವೊಮ್ಮೆ ಕೇವಲ ಕಾಮನೆಗಳೇ ಮುದ್ರೆಯೊತ್ತಿಬಿಡುತ್ತವೆ....ಅದನ್ನು ಒರೆಸಿ ‘ಸಾಧನೆ’ಯನ್ನು ಬರೆವ ಸಾಮರ್ಥ್ಯ ನಮ್ಮದಾಗಬೇಕು...ಬದುಕು ಎನ್ನುವುದು ಕೇವಲ ಕಾಮನೆಗಳ ವಿಲಾಸವಾಗಬಾರದು..ಭಾವನೆಗಳ ಸ೦ಯೋಜನೆ ಆಗಬೇಕು!...ಅಲ್ಲಲ್ಲಿ ಹರಿವ ಹಾಳೆಯಲ್ಲೂ ಮರೆಯಾ ಒಳಗೆ ಅಡಗಿ ಕುಳಿತ ಸೂತ್ರಧಾರನ ಛಾಯೆಯಿರಬೇಕು..ನಮ್ಮ ಹೆಜ್ಜೆ ಗುರುತುಗಳು ಕೇವಲ ಅಸ್ತಿತ್ವವನ್ನು ಒಪ್ಪಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಬಾರದು...ವಿಶ್ವ ಚೇತನನ ಚೈತನ್ಯ ಲೋಕದೆಡೆಗೆ ಹಾದಿ ತೋರುವ ಸ೦ಗಾತಿಗಳಾಗಬೇಕು..."ಪುಸ್ತಕಗಳು ದಾರಿದೀಪಗಳು" ಎ೦ಬ ಮಾತಿನ೦ತೆ ನಮ್ಮ ಬದುಕು ದೀಪದ ತೇಜಸ್ಸನ್ನು ಹೊ೦ದಬೇಕು..ಪ್ರತೀ ಪುಟದ,ಪ್ರತೀ ಸಾಲಿನ,ಪ್ರತೀ ಅಕ್ಷರಗಳು ಹೊಸತೊ೦ದು ಚಿ೦ತನೆಗಾಗಿ ತುಡಿಯುತ್ತಿರಬೇಕು...ಮಾನವರಾದ ನಮ್ಮ ಬದುಕಿನ ಪ್ರತೀ ಪುಟಗಳಲ್ಲೂ‘ಮಾನವೀಯತೆ’ಯ ಛಾಪಿರಬೇಕು..ಈ ಪುಸ್ತಕವು ಕೇವಲ ಜಿಜ್ಞಾಸಿಗಳಿಗೆ ಮಾತ್ರ ಸೀಮಿತವಾಗಬಾರದು..ನಮ್ಮ ಬದುಕು ಜನಸಾಮಾನ್ಯರ ಹೃದಯದ ಬಾಗಿಲನ್ನು ತಟ್ಟಬೇಕು...ಹೃದಯಗಳ ಸ್ವಚ್ಛದಾದ ಭಾವಗಳು ಬದುಕಿನ ತುಣುಕುಗಳು..!ಎರಡೂ ಪುಟಗಳ ನಡುವಿನ ಈ ಬಾ೦ಧವ್ಯ ಅಮೊಘ...ದೊರೆತರೆ ಎರಡೂ ಪುಟಗಳು ದೊರೆಯುತ್ತವೆ..ಇಲ್ಲದಿದ್ದರೆ,ಮೊದಲ ಪುಟಕೂ ಕೊನೆಯ ಪುಟಕೂ ನಡುವೆ ಹರಡಿದ ಮುತ್ತುಗಳನ್ನು ಹೆಕ್ಕಿಕೊಳ್ಳುವುದು ನಮ್ಮ ಕೆಲಸವೇ...ಈ ಎರಡು ಪುಟಗಳ ನಡುವೆ ಕೆಲವೊ೦ದು ಬಿಳಿ ಹಾಳೆಗಳು,ಕೆಲವೊ೦ದು ನಿನ್ನೆಯ ನೆನಪುಗಳು,ಕೆಲವೊ೦ದು ಬರಿಯ ನಾಳೆಗಳು...!ಭರವಸೆಯ ಹೊಳಹುಗಳು....!!


                                                                                                               ~‘ಶ್ರೀ’
                                                                                                                ತಲಗೇರಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ