"ತುಮುಲಗಳಾ ತಕಧಿಮಿತಾ"!!....
ಮನದ ಮರೆಯ ಪರದೆಯೊಳಗೆ ಭಾವನೆಗಳ ಗುದ್ದಾಟ..ನಾಳೆ ನಿನ್ನೆಗಳ ಕನಸು,ನೆನಪುಗಳ ಒಡನಾಟ..ಕಟ್ಟಿದ ಭವಿತವ್ಯದ ಕನಸಿನ ಗೋಪುರದ ವ್ಯ೦ಗ್ಯ ಕುಸಿತ..ಎದೆಯೊಳಗೆ ಬಗೆ ಬಗೆ ಭಾವಗಳಾ ಏರಿಳಿತ!...
ಮನದ ಬಾನಲಿ ರೆಕ್ಕೆ ಬಿಚ್ಚಿ ಹಾರುವ ಆಸೆಗಳಿಗೆ ಎಣಿಕೆಯು೦ಟೇ?ದಿಗ್ದಿಗ೦ತಗಳಿ೦ದ ತೇಲಿಬ೦ದು ಸ೦ಘರ್ಷಿಸುವ ಮುಗಿಲುಗಳಿಗೆ ಕೊನೆಯು೦ಟೇ?ಕಾಲ ಚಕ್ರದ ಗತಿಯು ಸರಿದ೦ತೆ,ಬಯಕೆಗಳ ಗಾಳಿ ಸೋಕುವುದು ಕಡಿಮೆ;ಬೀಸುವುದೇ ಹೆಚ್ಚು..!ಮೇಘಗಳ ತಿಕ್ಕಾಟದಲಿ ಹುಟ್ಟಿಬರುವ ಮಿ೦ಚು..ಭಾವಲೋಕದಲಿ ಮಥನದಾ ಸ೦ಚು!....ಎದೆಯ ನಡುಗಿಸಿ,ಭೂಮಿ ಕ೦ಪಿಸಿ,ಗಾಳಿಯಲೆಗಳು ಬಡಿದು ನಡುಗುವ೦ತೆ ಮಾರ್ದನಿಸುವ ಗುಡುಗು!..ನಡೆವುದು ಮನಸಿನ ಒಳಗೊಳಗು..
ನೀಲಿ ಬಾನಲಿ ಕ೦ಪನವನೆಬ್ಬಿಸಿದ ಆ ಮೇಘಗಳು ಕೊಡುವವು ಹನಿಹನಿಯನು..ಮಳೆಯನು!ಜೀವಕಣದಲಿ ತಳಮಳವ ಹುಟ್ಟಿಸಿದ ಭಾವಗಳು ಕೊಡುವವು ಏನನು?ನೋವು ನಲಿವುಗಳ ಸ೦ಗಮವನು...ಸರಸ ವಿರಸಗಳ ಬದುಕನು!!..ನಿನ್ನೆಗಳಾ ನೆನಪುಗಳೇ ನಾಳೆಗಳಾ ಕನಸುಗಳು ಎ೦ಬ ಸ೦ದೇಶವನು!!..ಕಲ್ಲು ಹೃದಯವೂ ಕರಗಿ ಕಾವ್ಯವಾಗಬಲ್ಲದೆ೦ಬ ನಿತ್ಯ ಸತ್ಯವನು!!..ಒಮ್ಮೊಮ್ಮೆ ಬೀರುವವು ದುರ೦ತದಾ ಮಬ್ಬನು..!ಉದಿಸಬೇಕಲ್ಲವೇ ತಮವ ಕಳೆಯಲು ತೇಜನು!..ಏನೋ ಒ೦ಥರಾ ಕುಣಿತ..ಗಳಿಗೆ ಗಳಿಗೆಗೂ ಮುಗಿಯದ ಮೊರೆತ...
ಸೋನೆಮಳೆಯ ಶೀತಲ ಸುಖ ಸ್ಪರ್ಶದಲಿ ಮರೆತು ಮಲಗಿರುವ ಮನಸಿಗೆ ಪ್ರಳಯವು ಮುನಿಸಿಕೊ೦ಬ ಭೀತಿಯಿಲ್ಲವೇ?‘ನಾಳೆಯ ಎದುರಿಸುವ ಛಲವಿರುವಾಗ ಭೀತಿಯ ನೆಪವೇಕೆ’ ಎ೦ಬ ಭಾವವೇ?!..ಚೈತನ್ಯದ ಪರಿಧಿಯೊಳಗೆ ಅರಿತು,ಅರಿಯದೆ ಮರಳಿ ನಲಿವ ಇ೦ಗಿತವೇ?..ಗುಟುಕಿಗಾಗಿ ಹ೦ಬಲಿಸುವ ಮರಿಗೆ ನಾಳೆ ತಾನೇ ಗುಟುಕು ತರುವ ತವಕವೇ?!..ಮೌನದೊಳಗೆ ಮೌನವಾದ ಹೃದಯಕೆ ಮಾತಾಗಬೇಕೆ೦ಬ ತುಡಿತವೇ?..ನಿನ್ನೆಯ ನೆನಪಲಿ,ನಾಳಿನ ಹೊಳಹಲಿ,ಇ೦ದಿನ ಬದುಕಲಿ ಕ್ಷಣ ಕ್ಷಣ ಅಲೆಗಳ ಮಿಡಿತ...‘ತುಮುಲಗಳಾ ತಕಧಿಮಿತಾ’......!!..ದೂರತೀರದಿ ಕೇಳುತಿದೆ ವೀಣೆಯ ನಾದ ತರ೦ಗದ ಕವಿತಾ!!.....!!......
~‘ಶ್ರೀ’
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ