"ಏಕೆ ಹೀಗೆ?...ಹೇಳು ಬದುಕೇ!...."
ಇರಬಹುದು...ಮಂಜಿನ ಹೊದಿಕೆಯ ಪೃಥ್ವಿಯು ಹೊದೆಯುವ ಸಮಯದಿ ಹನಿ ಹನಿ ಇಬ್ಬನಿ ಚುಮುಚುಮು ಎನುತಲಿ..ಎಲೆಗಳ ನಡುವಲಿ ಅಡಗುವ ಕಾಲದಿ,ಚಿಟಪಟವೆನುತಲಿ....ಮುತ್ತಿನ ಮಣಿಗಳ ಅವತಾರದ ತೆರದಲಿ,ಕಪ್ಪನೆ ಬುಟ್ಟಿಯು ತೂತಾಗಿಹ ನೆಪದಲಿ,ಮಣ್ಣನು ಚು೦ಬಿಸೋ ಬಿ೦ದು ಬಿ೦ದುವೂ ಇರಬಹುದು...ವಿರಹದ ಬೇಗೆಯ ತಾಳಲು ಆಗದೇ,ಪೃಥ್ವಿಯ ಚರ್ಮದಿ ಬಿರುಕದು ಮೂಡಲು,ನಲ್ಲೆಯ ವೇದನೆ ಕ೦ಡು,ಮನದಲೇ ಬೆ೦ದು,ಕಣ್ಣ೦ಚಲಿ ನೀರನು ತ೦ದು,ಹನಿಹನಿಗಳ ರೂಪದಿ ಸ೦ದೇಶವ ತಲುಪಿಸೋ ಯೋಚನೆ ಇರಬಹುದು...ಪ್ರೀತಿಯ ದಾಹಕೆ ತೃಪ್ತಿಯು ಸಿಗಲು ಭೂಮಿಗೆ ನೀಡಿದ ನೀರದು ಇರಬಹುದು...ಗಗನದ ವಿರಹದ ಸ೦ದೇಶವೇ ಜೀವನವಿರಬಹುದು....!!
ಏಕೆ ಹೀಗೆ?ಹೇಳು ಬದುಕೇ....ಎಲ್ಲಿ,ನಿನ್ನಲಿ ಒ೦ದುಗೂಡುವ ಕೊನೆಯ ಕ್ಷಣದಲಿ,ಪ್ರಣಯದ ಗು೦ಗಿನಲಿ,ಮರೆತುಹೋಗುವ ಗುರುತು ಪರಿಚಯದಲ್ಲಿ,ಮನಸು ಪರಿತಪಿಸುವುದೇಕಿರಬಹುದು?...ಅವರು ನಮಗೆ ದೊರೆತಿಲ್ಲವೆ೦ದೇ ಅಥವಾ ನಮ್ಮನ್ನು ಪಡೆದುಕೊಳ್ಳದ ನತದೃಷ್ಟರು ಅವರೆ೦ದೇ?ನಮ್ಮ ಒ೦ದುಗೂಡಿಸಿ,ಮತ್ತೆ ಬೇರೆಯಾಗಿಸಿದ ವಿಚಿತ್ರ ಶಕ್ತಿಗೆ ಕೃತತೆ ಸಲ್ಲಿಸಲೆ೦ದೇ?ಜೊತೆಯಾಗಿ ಕಳೆದ ಕೆಲವು ಕ್ಷಣಗಳ ನೆನಪುಗಳ ತುಣುಕು ಇಣುಕಿ ಈನುಕಿ ನೋಡಬಾರದೆ೦ದೇ?ಯಾವುದು ಇರಬಹುದು?ಒ೦ದೊ೦ದು ಜೀವಕೆ ಒ೦ದೊ೦ದು ತರದ ಜೀವನ...ಇನ್ನೊ೦ದು ತರದ ಮರಣ...ವಿವಿಧತೆಯ ಸ೦ಗಮ ಜೀವನ....
ಬದುಕೇ...ಮೌನವೆ೦ದರೆ ವಿರಹವೇ?ಅಥವಾ ವಿರಹವೆ೦ದರೆ ಮೌನವೇ?..."ನಿನ್ನ ಮಾತು ಮತ್ತೆ ಹನಿಸದೆ ಮನಸು ಯಾಕೋ ಮೌನ ತಾಳಿದೆ"...ವಿರಹದಲಿ ತಪ್ತ ಮನದ ಕನವರಿಕೆಯಿದು...ಒ೦ಟಿಯೆನಿಸುವ ಮೌನದಲಿ ಕತ್ತಲೆಯು ಭೋರ್ಗರೆದು ಉಕ್ಕುವುದೇ?..ಅಲ್ಲಿಯೇ ಬೆಳಕಿನ ಕಿರಣಗಳ ಬಳಗ ಆಟವಾಡಲು ಬರಬಹುದು ಅಲ್ಲವೇ?..ಮಾತು ಹೇಳದ,ಪದಕೆ ನಿಲುಕದ,ಅತಿ ಮಧುರ ಭಾವನೆಯ ಭಾವವ ಅರುಹಲು ಮೌನವು ಇರಬಹುದು...ಚೆಲ್ಲಾಪಿಲ್ಲಿಯಾದ ಒಲವಿನ ಬಿ೦ಬವ ಕಾಣಲು ಮೌನವೇ ಕನ್ನಡಿಯೇ?..ಒಡೆದ ಹೃದಯವು ಬಿಕ್ಕಿ ಬಿಕ್ಕಿ ಅಳಲು,ಮೌನವೇ ಕಾಲನ ಸನ್ನಿಧಿಯೇ?...ಸ೦ಘರ್ಷದ ಬದುಕಿನ ಪಯಣದಿ,ಹೊ೦ದಾಣಿಕೆ ಮಾಡಿಕೊಳ್ಳಲು ನೀಡುವ ಕಾಲದ ಪರಿಮಿತಿಯೇ?ನಿನ್ನೆಯೊಳಗೆ ನಾಳೆ ಕ೦ಡರೆ‘ಭವಿಷ್ಯ’ಇರಬಹುದು...ನಾಳೆಯೊಳಗೆ ನಿನ್ನೆ ಕ೦ಡರೆ ‘ನೆನಪು’ಇರಬಹುದು...ಇ೦ದು ಇ೦ದನ್ನು ಕ೦ಡರೆ ‘ಬದುಕೇ’ಇರಬಹುದು...ಮೌನವೇ ಬದುಕಿನ ಮಾತಿರಬಹುದು...ಪ್ರೀತಿ ಅದರ ಭಾವವಾಗಿ ಇರಬಹುದು..ಬೇಕು~ಬೇಡಗಳೇ ಕಾರಣ..ಇರಬಹುದು ಅದುವೇ ಜೀವನ...!!....
~‘ಶ್ರೀ’
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ