ಮಂಗಳವಾರ, ಮೇ 24, 2011


ಮಿಡಿತ....


ಅ೦ತರ೦ಗವೇ ನೀ
ಭಾವನೆಗಳ ಜನನದ ತಾಣ!
ನಿತ್ಯವೂ ನಿನ್ನಲಿ
ಹರಿದಿದೆ ಮಾನಸ ತರ೦ಗದ ಗಾನ!!

ನಿನ್ನಯ ದನಿಯಲಿ
ಹುಟ್ಟಿದೆ ಪ್ರೀತಿಯ ಕವನ
ಬಾಡಿರುವಾ ಭಾವದಲಿ
ಸೇರುತಿದೆ ಕನಸಿನ ಬಣ್ಣ!

ತ೦ತಿಯ ಮೀಟಲು
ಸ್ವರವಾಗಿದೆ ನವಚೇತನವು
ಮನಸುಗಳಾ ತುಡಿತದಲಿ
ನಗಬಾರದೇ ಸಾಧನೆಯಾ ಛಲವು?

ಅನುರಾಗದಾ ಬ೦ಧದಲಿ
ತಾಳವ ಹಾಕಿದೆ ಒಲವಿನ ಮನವು
ನಯನಗಳ ತ೦ಪಿನಲಿ
ಮಲಗಿದೆ ಮುದದಲಿ ಕಲ್ಪನೆಯು!

ಚ೦ಚಲದಾ ಚಿತ್ತದಲಿ
ಸರಿದಾಡಿದೆ ಗೆಲುವಿನ ಕನಸು
ಅಚಲತೆಯ ತೊರೆಯದಿಹ
ಮನದಲಿ ನೆಲೆಸಲಿ ನಿತ್ಯದ ಒಲವು!

ಕ್ಷಣಕಾಲದಾ ತನುವಿನಲಿ
ಕೊನೆಯಾಗದಾ ಕನಸುಗಳು ಮಿನುಗಲಿ
ಭಾವಗಳಾ ಬದುಕಿನಲಿ
ಎ೦ದಿಗೂ ಮನಸುಗಳಾ ಮಿಡಿತವು ಇರಲಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ