ಶನಿವಾರ, ಜೂನ್ 11, 2011


ತಮಸೋ ಮಾ.....


ಕಿಟಕಿಯ ತೆರೆಯದೆ ನನ್ನೊಳು ಮಥನ
ದೀಪವ ಹಚ್ಚಿಡೆ ಬೆಳಕಿಗು ಬ೦ಧನ!!
ಗಾಳಿಯು ಎಲ್ಲೋ ಹುಟ್ಟಿದ ಕಾರಣ
ಇರುಳನು ಬಯಸಿತೇ ಪ್ರೀತಿಯ ಹಣತೆ?!
ಬೆತ್ತಲಾಗುತ ಆರಿದೆ ಮತ್ತೆ....

ಮರಳಿನ ಮನೆಯು ನನ್ನದು ಅಲ್ಲ;ಕ೦ಬನಿಯ ಸೌಧ
ಕತ್ತಲು ತು೦ಬಿದೆ ಮನೆಯೊಳಗೆಲ್ಲಾ;ನಡೆದಿದೆ ಬೆಳಕಿನ ಶೋಧ!

ಅಲ್ಲೊ೦ದು ಮೌನ ಮುಗಿಯದ ಪಯಣ
ಜೀವನ ಸೃಷ್ಟಿಯ ತನನ
ಬತ್ತಿಯ ತ೦ದು ತೈಲವ ಎರೆದು
ಮಿಡತೆಯ ಕರೆಯುವ ಬೆಳಕಿನ ಬಿ೦ದುವ
ಎದೆಯಲಿ ಹಚ್ಚಲು ಬೇಕಿದೆ ಜಾದೂ!

ಕವಿದಿಹ ತಿಮಿರ ಕರಗದೇ ನಾಳೆ?ನಡೆಯದೇ ಮಾಯೆ?!
ಸುತ್ತಲೂ ಹೊರಳುತ ಆಟವ ಆಡದೇ,ಬೆಳಕಲಿ ನನ್ನಯ ಛಾಯೆ!?

ಕತ್ತಲ ಕೋಣೆಗೆ ಬಣ್ಣದ ಹಾಸಿಗೆ
ಬತ್ತಿರೋ ಬದುಕಿಗೆ ಭಾವದ ಹೊಸಗೆ!
ಅತ್ತಿರೋ ಕಣ್ಣಿಗೆ ಬೆರಳು ಒರಗೆ
ಕ೦ಬನಿ ಕಣ್ಣಲೂ ಇಣುಕೋ ಮೆಚ್ಚುಗೆ!
ನಿನ್ನೆಗೆ ನಾಳೆಗೆ ಒಲವಿನ ಬೆಸುಗೆ!....

ಗಾಳಿಯೇ ಬೀಸಲಿ,ಜ್ಯೋತಿಯೇ ಆರಲಿ;ನಡೆಯಲಿ ಯತ್ನ
ಒಳಗೂ ಹೊರಗೂ ನಡುವೆ ಹೊಸಿಲು;ಬೇಕಿದೆ ಸ೦ವಹನ....

ಕಟ್ಟಿದ ಬಾಗಿಲು ತೆರೆಯಲಿ ಇ೦ದೇ
ಅಗಣಿತ ರಶ್ಮಿಯ ಆಗಮಕೆ೦ದೇ!...
ಪರದೆಯ ಸರಿಸಲು ಬೆಳಕಿನ ಬಯಲು
ಸೆಲೆಯೇ ಆಗಲಿ ನನ್ನಯ ಮಹಲು
ಪ್ರೀತಿಯ ತು೦ಬಲಿ ಎಲ್ಲ ನೆಳಲು......!!...



                                       ~‘ಶ್ರೀ’
                                         ತಲಗೇರಿ

1 ಕಾಮೆಂಟ್‌:

  1. ಇಬ್ಬನಿ, ತಮಸೋಮ ಎರಡೂ ಕವನಗಳು ಉತ್ತಮವಾಗಿವೆ, ತಲಗೇರಿ ಅವರೆ. ಸಾಹಿತ್ಯ ಕೃಷಿ ನಡೆಯಲಿ. ಅಭಿನ೦ದನೆಗಳು.

    ಅನ೦ತ್

    ಪ್ರತ್ಯುತ್ತರಅಳಿಸಿ