ಅನಾವರಣ....
ಇಲ್ಲ,
ನಾನ್ಯಾಕೆ ನೀನಾಗಲಿಲ್ಲ?!
ಕಲ್ಲಾಗಿ ಕುಳಿತು ನೀ
ಸೂಸುತಿಹೆ ಹೂನಗೆ
ಜಗದಗಲದೆಲ್ಲ ದುಗುಡವ
ಮರೆತು,
ಅಥವಾ
ಸಂತಸದ ಮರ್ಮವೆಲ್ಲವ
ಅರಿತು
ಲಾಸ್ಯವಾಡುತಿಹ
ನಗೆಯೇ ಅದು?
ಅರ್ಥವಾಗುತ್ತಿಲ್ಲ ನನಗೆ!
ವೈರುಧ್ಯ,ವೈವಿಧ್ಯಗಳಲ್ಲೆಲ್ಲ
ಬೆರೆತು,
ಚಿನ್ನದ ಹೊಳಪೊಳಗೆ
ಕಳೆತು,
ನಕ್ಕರೂ,
ನನಗಿಲ್ಲ ನಿನ್ನಂಥ ಮೆರಗು!
ಹೇಗೆ ಕುಳಿತಿಹೆ ಹಾಗೆ!
ನೂರಾರು ವರ್ಷಗಳಿಂದ..
ವರ್ಷವಿಳಿದಿದೆ ಧರೆಗೆ
ಸ್ಪರ್ಶ ಬೇಕೆನಿಸಲಿಲ್ಲವೇ
ನಿನಗೆ;ಚಳಿಗೆ?
ಬಿಸಿಲಲ್ಲಿ ಬೆವೆತು
ಕೊಡೆ ಹಿಡಿದಿಲ್ಲವೇಕೆ?
ಬಾಯ್ತೆರೆದು ಕಾದಿಲ್ಲವೇ
ಭರ್ತಿಯಾಗದ ಜೋಳಿಗೆ!
ಹೊರಳಾಡಲಿಲ್ಲವೇ
ಒಮ್ಮೆಯೂ ನಾಲಿಗೆ?
ಸುತ್ತಮುತ್ತಲ ಘಟನೆಗೆ
ಒಮ್ಮೆಯೂ ಸೇರಿಲ್ಲವೇ
ಕಣ್ರೆಪ್ಪೆಗಳು ಒ೦ದು ಗಳಿಗೆ!
ತುಂಬಲಿಲ್ಲವೇ ನೀರು
ಕೆರೆಯ ಮರೆಗೆ?!
ಓಹ್!ನೀನು ಕಲ್ಲಲ್ಲವೇ!
ಆದರೂ,
ನಿನ್ನಲ್ಲಿ ಅದೆಂಥ ಜೀವನಗೆ!...
ಅಲ್ಲ,
ನಾನು ನಿನ್ನಂಥಲ್ಲ...
ನನಗೆ
ಮೂಕಸಾಕ್ಷಿಯಾಗಲು
ಬರುವುದಿಲ್ಲ...
ಜಾರಿಹೋಗುವ ಬಿಂದುಗಳ
ಹಿಡಿಯಲು
ತಡಕುವವು ಬೊಗಸೆಗಳು!
ಕೆನ್ನೆ ಮೇಲೆ ಹಾಗೇ
ತೆವಳಲು
ನೀರಾಗುತ್ತದೆ ಬೆರಳು!
ಆಗುವುದಿಲ್ಲ ನನಗೆ
ನಿನ್ನಂತೆ ಕುಳಿತಿರಲು..
ಕಾಯುತ್ತಿದೆ,
ನನ್ನೊಳಗಿನ ಮುಗುಳು!
ತೋಯುತ್ತಿವೆ
ಹೃದಯದೊಳಗಣ ಭಾವಗಳು
ಸಂಗಮಕ್ಕೊ,
ಸಂಭ್ರಮಕ್ಕೊ,
ಬದಲಾವಣೆಯ ಜಗಳಕ್ಕೊ!
ಅಲ್ಲವೇ ಅಲ್ಲ!,
ನಾನು ಎಂದೂ ನಿನ್ನಂಥಲ್ಲ...
ನೀನು ನಡೆಯಲಾರೆ..
ನನಗೋ,
ತೀರದಿ ತೀರದ ಮಳಲಿದೆ
ಮೌನದಿ ತನ್ನೆದೆ ತೆರೆದಿದೆ..
ಹಸಿಹಸಿ ನೆನಪ
ಮೂಡಿಸು ಎಂದಿದೆ!
ನಾ ನಡೆವೆ ಅಲೆಮಾರಿಯಂತೆ
ಸೂರಿನಡಿ ಬೇಕಿಲ್ಲ ದೇಹಕೆ
ಆದರೂ,
ನಿನ್ನಂತಾಗುವ ಬಯಕೆ!..
ಹೇಳು,
ನೀನಾಗುವ ಬಗೆ ಹೇಗೆ?
ಕಪ್ಪಿದ್ದರೂ,
ಮುಪ್ಪಾದರೂ
ನಿನ್ನಲ್ಲಿ ಸುಕ್ಕುಗಟ್ಟಿಲ್ಲ ಚರ್ಮ
ನಿನಗಿಲ್ಲವೇ ಅದರ ಅಭಿಮಾನ?!
ಮನವಿಲ್ಲದ ಮನೆ
ನಿನ್ನ ತನುವು!
ನೋಡು ನೋಡು
ಅದೆಂಥ ಸಿಹಿ ಸ್ವಪ್ನ ನಗು!
ಹೇಳಿಬಿಡು...
ಅರ್ಥವಾಗಲಿ ನನಗೂ!!
ನೀನು ಹೇಳುವುದಿಲ್ಲ!
ಎಲ್ಲ ತ್ಯಜಿಸಿ,
ದೇವನೆನಿಸಿಹ
ನೀನೊಬ್ಬ ವಿರಾಗ ಪ್ರೇಮಿ...
ನೀನು ಜಂಗಮನಲ್ಲ
ವರುಷಗಳ ಸಂಭ್ರಮ!
ತಪ್ತ ಜೀವದ ಪೂರ್ಣ ಚಂದ್ರಮ!!
ಅದಕೆಂದೇ ನೀನಾಗಿಹೆ
ಬುದ್ಧ!
ನಾನಿನ್ನೂ ನೀನಾಗುವ
ದಾರಿಯುದ್ದ
ಹೆಜ್ಜೆಯಾಗಿಹೆ,
ಗೆಜ್ಜೆಯಾ ಜೊತೆಗೆ,
ಆಲಿಸುತ ನನ್ನೊಳಗಿನ
ಸದ್ದ....!!....
~‘ಶ್ರೀ’
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ