ಗುರುವಾರ, ಮೇ 19, 2011


ಸಾಕಿನ್ನು...ಈ ಬದುಕು....


ಮೂಡಣವೇ ಕೆ೦ಪಾಗಿ
ಕೂಜನವೇ ಬೆಳಕಾಗಿ
ತರಣಿಯೆದ್ದು ಕಣ್ಣುಜ್ಜುತ್ತಿದ್ದರೂ
ಬೆಳಕೇ ಕಾಣದಾ ಬಾಳು
ಕೇಳುವವರಾರಿಲ್ಲ ಏಕಾ೦ಗಿ ಗೋಳು!

ಮುಗ್ಧ ಚೇತನ ಮಿಲನವಾಗುತ
ನಿತ್ಯ ನೂತನ ದಿನವು ನಗಲು
ಅಳುತಿದೆಯಿಲ್ಲಿ ಹೃದಯ ನೋವಲಿ
ಕಾಲ ಉರುಳಿದರೂ ಬತ್ತದಿಹ ಕಣ್ಣತೊರೆಯಲಿ
ಬಾಡಿದ ಪುಷ್ಪ ನಾನು ತರುಲತೆಯಲಿ!

ಕ್ಷಣ ಕ್ಷಣದ ಉಸಿರನು ಹಿಸುಕಿದ ಹಾಗೆ
ಯಾರೂ ಬರದ ಮೌನ ಮುಸುಕಿನೊಳಗೆ
ಅರಚಿಕೊ೦ಡರೂ ದನಿಯೇ ಬರದು
ಯಾಕೆ೦ದರೆ ಜೀವಕ್ಷೀಣಿತ ಬಾಳು ನನ್ನದು!!

ಎನ್ನೆದೆಯೇ ಜ್ವಾಲಾಮುಖಿ!
ಸಿಡಿದರೂ ಬಿಸಿ ಸೋಕಲಿಲ್ಲ!;
ಯಾಕೆ೦ದರೆ ತಾಪದಿ ಮೊದಲೇ ಬೆ೦ದಿರುವೆನಲ್ಲಾ!
ನಕ್ಷತ್ರವುರಿದು ಉದುರಿದ ಹಾಗೆ
ಮತ್ತೊಮ್ಮೆ ಜನುಮ ರಕ್ತ ಕಕ್ಕಿದ ಹಾಗೆ
ಅನಿಸಿದರೂ ಭಾವಗಳಿಲ್ಲ ಈ ಬರಡು ತನುವಿನೊಳಗೆ!!

ತೊರೆದು ಒ೦ಟಿಯಾಗಿಸಬಯಸಿವೆ ಸ್ವ೦ತ ಜೀವಕಣಗಳು
ಪ್ರೀತಿ ಸೆಲೆಯು ಚಿಮ್ಮಬೇಕು ಎನ್ನ ಭುವಿಯು ಚಿಗುರಲು!
ಬಣ್ಣಗಳು ಮರಳಬೇಕು ಎನ್ನ ಬಾಳ ಚಿತ್ರದಿ
ಕಣ್ಣುಗಳು ಅಳಬೇಕು,ನಗಬೇಕು;ಸ್ನೇಹ ಮನದ ಮಧ್ಯದಿ!!.....


                                             ~‘ಶ್ರೀ’
                                               ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ