ಗುರುವಾರ, ಮೇ 12, 2011


"ಧರೆಗವತರಣಿಸು".....


ಬಾ ಚೈತನ್ಯವೇ ಬಾ
ನೀ ಭಾವಾನ೦ದ ಬಾ

ಪೃಥ್ವಿಯಲ್ಲಿನಾ ಮಣ್ಣಿನಲ್ಲಿ
ಬೆರೆತುಹೋಗೋ ತನುವಿನಲ್ಲಿ
ನವಚೇತನವೇ ನೀನಾಗಿ ಬಾ
ಸಾವ ಕಾಣದೆ ಅಮರವಾಗಿ ಬಾ...ಬಾ...ಬಾ...

ಧರೆ ಸೇರುತಿರುವಾ ಗೋಪುರದಲ್ಲಿ
ಕರಗುತಿರುವಾ ಕಲ್ಪನೆಯಲಿ
ಬಣ್ಣದಾ ಮಹಲು ನೀನೇ ಬಾ
ಕನಸಿನಾ ತಳಪಾಯ ಸ್ಥಿರವಾಗಿ ಬಾ...ಬಾ...ಬಾ...

ಅಳುತಲಿರುವಾ ಕಣ್ಣುಗಳಿಗೆ
ಸೋರುತಿರುವಾ ಕ೦ಬನಿಗೆಲ್ಲ
ಸಾ೦ತ್ವನದ ಕರವೇ ನೀನಾಗಿ ಬಾ
ಆಶಯದ ಸಾಕಾರಕೆ ಬೆಳಕಾಗಿ ಬಾ...ಬಾ...ಬಾ...

ಬರಿದಾಗುತಿರುವಾ ಶರಧಿಯಲ್ಲಿ
ಸೊರಗುತಿರುವಾ ಜೀವಗಳಿಗೆ
ಮಳೆಹನಿಯಾಗಿ ನೀನಿಳಿದು ಬಾ
ಭರವಸೆಯ ಜಲವಾಗಿ ಹಿತವಾಗಿ ಬಾ...ಬಾ...ಬಾ...

ಛಿದ್ರವಾದ ಹೃದಯವಿನ್ನು
ರಕ್ತಕಾರಿ ಸಾಯುತಿರಲು
ಅಮೃತದಾ ಬಿ೦ದು ನೀನೇ ಬಾ
ಬದುಕಿನಾ ಹೊಸ ಭಾಷ್ಯದಾ ಸ್ಫೂರ್ತಿ ಬಾ...ಬಾ...ಬಾ...

ವ್ಯರ್ಥವೆನಿಸಿಹ ಕಠಿಣ ಕಲ್ಲನು
ರೂಪವಿರದ ಬರಡು ಶಿಲೆಯನು
ದೈವವಾಗಿಸೋ ಶಿಲ್ಪಿ ನೀನಾಗಿ ಬಾ
ಜೀವನದಾಟವಾ ಆಡಿಸೋ ಸೂತ್ರ ಬಾ...ಬಾ...ಬಾ...

ನೋವಿನಲ್ಲೇ ಸೋತುಹೋದ
ವೇದನೆಯಲ್ಲೇ ಕಾಲವಾದ
ಅ೦ತರಾತ್ಮದಾ ಶಕ್ತಿ ನೀನೇ ಬಾ
ವಿಶ್ವ ಬೆಳಗುವ ಯಶದ ದೀವಟಿಗೆ ಬಾ...ಬಾ...ಬಾ...


                                                 ~‘ಶ್ರೀ’
                                                   ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ