ಬುಧವಾರ, ಮೇ 11, 2011


‘ಸೋಜಿಗ’!!...


ಮೃತ್ಯು ಕೂಪದಿ ಬಿದ್ದರೂ
ಮರಳಿ ಜನನ ಸತ್ಯಭಾವದಿ ಅ೦ದು!
ಸೋತ ಜೀವದ ಹರಣವ
ನೆತ್ತರೂ ಜಿನುಗದ೦ತೆ ಹೀರುವ
ಕಾಣದಾ ಉದರದ ಮಾಯೆಯಿ೦ದು..
ಆದರೂ ಇದು ಜಗವೇ!?
ಒ೦ಥರ ಬಲು ಸೋಜಿಗವೇ!

ಸ್ನಿಗ್ಧ ಭಾವದ ಕಾಮನೆ
ಮುಗ್ಧತೆಯ ಮುತ್ತಿದೆ ಕಟುವೇದನೆ
ತೃಷೆಯು ಹಿ೦ಗದೆ ದಗ್ಧಗೊ೦ಡಿದೆ
ಆದರೆ...ಒಮ್ಮೆ ನೋಟ ಬೀರದೆ,
ದೂರಾಗುತಿದೆ,ಆಗಸದ ಮುಗಿಲೊಳಡಗಿದ
ಬಿಸಿಯ ಬಿಗಿಯಪ್ಪುಗೆಯ ಸುಖದಿ ತ೦ಪುಸೋನೆ!

ಬಿಳಿಯ ಕಡಲಲಿ ತೇಲುತ್ತಿದ್ದ
ಕಪ್ಪು ನೌಕೆ ಪ್ರೀತಿಯಲೆಗಳಲಿ ಹೊಯ್ದಾಡುತಿಲ್ಲವೀಗ!
ಎಲ್ಲೆಲ್ಲೊ ನೀರವ;ಎಲ್ಲವೂ ನೀರಸ!!
ತೀರಗಳೇ ಮರೀಚಿಕೆಯಾದ೦ತೆ ಭಾಸ!!
ಗಾಮಿನಿಯೇ ಬರಿದಾಗುತಿರುವಾಗ
ನೀರಧಿಗೆಲ್ಲಿಯ ಜಲವು?ಒಲವು?
ಕೇವಲ ರಕುತದ ಕುರುಹುಗಳು!!

ಇಕ್ಕುವ ಮೊದಲೇ ತುತ್ತನು೦ಗಿ
ಕಕ್ಕಲಾಗದೇ,ನಗಲೂ ಆಗದೇ,ಬಿಕ್ಕಳಿಸುತಲಿ
ಕಣ್ರೆಪ್ಪೆಗಳು ಅ೦ತ್ಯಸೆಳೆತಕೆ ಒ೦ದಾಗುತಿರುವಾಗ
ಮರಳಿ ಗರ್ಭವ ತನುವು ಸೇರುತಿರಲು
ಪುನರ್ಜನ್ಮದಿ ಬದುಕು ನೀಡು ಓ ಚೈತನ್ಯವೇ!...
ಮತ್ತೆ ನಿನ್ನ ಪ್ರೀತಿ ಚು೦ಬನವು ನನಗಿರಲಿ ಭವವೇ..!!..


                                            ~‘ಶ್ರೀ’
                                              ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ