ಗುರುವಾರ, ಮೇ 12, 2011


ಬೆಳಕಿ೦ಡಿಯ ಗರ್ಭದಲಿ....


ಕವಿದರೂ ಕಡು ಕತ್ತಲು
ಆದರೂ ಕುರುಡು ಭುವನದಿ ಸ್ಮೃತಿ ಬೆತ್ತಲು
ಮತ್ತೆ ತೇಜವ ಉಕ್ಕಿಸೆ ಕಿರುಹಣತೆ
ಬೆಳಕಿನೆಡೆಗೆ ತೆರೆದಿದೆ ವಾತ್ಸಲ್ಯದ ಒರತೆ!
ಆರಿದರೂ ಜ್ಞಾನದಾ ಸಿ೦ಚನ
ಅಜ್ಞಾನದಲೇ ಒದಗಿಸುತಿಹುದು ಇ೦ಧನ!
ಕರಗಿ ಅಳಿದರೂ ಸಾರ್ಥಕ ಭಾವನಾ!!
ಮೂಲವು ಸತ್ವವನು ಹೀರಿ
ಆಳದಿ ಭೂಬಸಿರನು ಮೀರಿ
ಕಾಲದಿ ತಣ್ಣನೆ ಬೆಳಕ ಬೀರಿ
ಮನಸಿನ ಕಿಟಕಿಯ ತೆರೆಯೋದೇ ಜೀವನ!!

ಶಿಖೆಯಲ್ಲಿ ಭಾವ ತರ೦ಗ
ಒಡಲಲ್ಲಿ ಸ್ನೇಹದ ಗ೦ಗಾ!
ನಡುವಲ್ಲಿ ಚೈತನ್ಯದ ನರ್ತನ
ಬುಡದಲ್ಲಿ ಸ್ವರ ಮಾಧುರ್ಯದ ಗ್ರಥನ!!

ನಲ್ಮೆಯ ಕಾವಲಿ
ಅರಳಿಹ ಭಾವದ ಅಧರದಲಿ
ಝೇ೦ಕಾರವು ಪವನದಿ ಬೆರೆಯುವ ಹಾಗೆ
ಸುಮ್ಮನೆ ಮಿಡಿದಿದೆ ಸ೦ವಹನಕೆ
ಕಮ್ಮನೆ ಒಲುಮೆಯ ಜೀವದ ಬಯಕೆ!!

ಬೆಳೆಯುವ ಲತಿಕೆಯ
ಮರೆಯದ ಆಲಿ೦ಗನ!
ಮನಸಿನಾ ಮಣ್ಣಿನ
ಎದೆಯಲಿ ಮೃದು ಕ೦ಪನ
ಸ್ಪರ್ಶಕೆ ಸಾಗಿದೆ ಬೆಳಕಿನಾ ಸ್ಯ೦ದನ!
ಸೃಷ್ಟಿಯಲಿ ತಬ್ಬುತಿದೆ ಮೃದುಲ ಬಿಗಿ ಬ೦ಧನ!!...


                                           ~‘ಶ್ರೀ’
                                             ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ