ಮಂಗಳವಾರ, ಮೇ 22, 2012


           "ಮುರುಕು ಸ್ವಪ್ನ ಬಿಂಬ"....
                                    ...ಬಿಡುಗಡೆಗೆ ಹಂಬಲಿಸುತಿಹ ಅಂತರ್ಮುಖಿಯ ನಭ....



         ಮೌನ...ಎದೆ ಕರಗಿಸುವ ಮೌನ..ಮರುಕ್ಷಣ ರಕ್ತಹೆಪ್ಪುಗಟ್ಟುವ ಆಕ್ರಂದನ..ಹೃದಯ ಮಿಡಿವ ಮೃದು ತಂಗಾಳಿಯಲ್ಲಿ ಬಿರುಗಾಳಿಯ ಭೋರ್ಗರೆತದ ಝೇಂಕಾರವೇಕೆ?ನಂದಗೋಕುಲದಂತಾಗಬೇಕಿದ್ದ ಮನೆಯ ನಂದಾದೀಪ ನಂದಿದ್ದೇಕೆ?ನೆಲಕ್ಕೆ ಏನೋ ಬಡಿದಂತೆ ಸದ್ದು..ಕಿಟಾರನೆ ಕಿರುಚಿಕೊಂಡಿದ್ದಾರೆ ಯಾರೋ!ದೇವರ ಕೋಣೆಯೊಳಗಿಂದ ಓಡಿಬಂದಳು ಜಾನಕಿ...ಕೆಲಸದವಳು ಗರಬಡಿದವರಂತೆ ನಿಂತುಬಿಟ್ಟಿದ್ದಾಳೆ.ಜಾನಕಿಗೆ ಗಾಬರಿ!ಹೇ!ಸೀಮಾ,ಏನಾಯ್ತೇ ಏನಾಯ್ತೇ?..ಸೀಮಾ ಮಾತನಾಡಲು ತೊದಲುತ್ತಿದ್ದಾಳೆ.ಅಮ್ಮಾ...ಅಮ್ಮಾ..ಅಲ್ಲಿ...ಅಲ್ಲಿ ನೋಡಿ...ಎಂದು ಕೈತೋರಿಸಿದಳು.ಜಾನಕಿಯ ಗಂಡ ರಘುನಾಥರಾಯರು ಪ್ರಜ್ಞೆ ತಪ್ಪಿಬಿದ್ದಿದ್ದರು.ಅವರ ಹಣೆಯಿಂದ ರಕ್ತ ಒಸರುತ್ತಿತ್ತು.ಜಾನಕಿ ನೋಡುನೋಡುತ್ತಿದ್ದಂತೆಯೇ ಕುಸಿದಳು.ಸೀಮಾ ತಡಮಾಡಲಿಲ್ಲ.ಅದೆಲ್ಲಿಂದ ಅವಳಲ್ಲಿ ಕರ್ತವ್ಯಪ್ರಜ್ಞೆ ಜಾಗೃತವಾಯಿತೋ,ತಕ್ಷಣ ಜಾನಕಿಯನ್ನು ಹಿಡಿದಳು ಮತ್ತು ಖುರ್ಚಿಯ ಮೇಲೆ ಕೂರಿಸಿದಳು.ಅವಳಿಗೆ ಎತ್ತ ಹೋಗಬೇಕೆಂದು ತಿಳಿಯುತ್ತಿಲ್ಲ;ಏನು ಮಾಡಬೇಕೆಂದು ಕೂಡಾ ತಿಳಿಯುತ್ತಿಲ್ಲ.ತತ್ಕ್ಷಣ ರಘುನಾಥರಲ್ಲಿಗೆ ಓಡಿದಳು.ರಾಯರೇ,ರಾಯರೇ...ಕೈ ಹಿಡಿದು ಅಲುಗಾಡಿಸುತ್ತಿದ್ದಾಳೆ.ಎಚ್ಚರಾಗುತ್ತಿಲ್ಲ.ನೀರು ತರಲಿಕ್ಕೆ ಮತ್ತೆ ಓಡಿದಳು.ಹಾಗೆಯೇ,ಅಲ್ಲಿಯೇ ಇದ್ದ ಜಾನಕಿಯ ಮುಖಕ್ಕೆ ನೀರು ಸಿಂಪಡಿಸಿ,ಮತ್ತೆ ರಘುನಾಥರಲ್ಲಿಗೆ ಬಂದಳು.ಅವರ ಮುಖಕ್ಕೆ ನೀರು ಹಾಕಿ,ಕರೆದಳು,ರಾಯರೇ,ಎದ್ದೇಳಿ ಎದ್ದೇಳಿ..ಅಷ್ಟೊತ್ತಿಗೆ,ಸಾವರಿಸಿಕೊಂಡ ಜಾನಕಿ ಅಲ್ಲಿಗೆ ಓಡಿಬಂದಳು.ರ್ರೀ...ಏಳ್ರೀ...ಏ...ರ್ರೀ..ಎದ್ದೇಳ್ರೀ..ಎರಡೂ ಭುಜ ಹಿಡಿದು ಅಲುಗಾಡಿಸಿದಳು..ಇಲ್ಲ ರಘುನಾಥರಿಗೆ ಎಚ್ಚರವಾಗುತ್ತಲೇ ಇಲ್ಲ.ಅಯ್ಯೋ ದೇವ್ರೇ!ಈಗ್ ಏನ್ ಮಾಡೋದಪ್ಪಾ..ಸೀಮಾ!ಹೋಗು,ಪ್ರಣವನಿಗೆ ಫೋನ್ ಮಾಡು,ಹೋಗು..ಜಾನಕಿ ಸೀಮಾಳನ್ನು ದೂಡಿದಳು.ಸೀಮಾ ಓಡಿಹೋಗಿ ಪ್ರಣವನಿಗೆ ಫೋನ್ ಮಾಡಿ ವಿಷಯ ತಿಳಿಸಿದಳು.ರಘುನಾಥರನ್ನು ಎಬ್ಬಿಸಲು ಜಾನಕಿಯ ಪ್ರಯತ್ನ ನಡೀತಾನೇ ಇತ್ತು...ರ್ರೀ..ಏಳ್ರೀ..ಅಯ್ಯೋ...ಏನಾಯ್ತ್ರೀ..ಏ...ರ್ರೀ..ಎದ್ದೇಳ್ರೀ...ರಘುನಾಥರ ಅಂಗೈ ಹಿಡಿದು ಉಜ್ಜಿದಳು.ಸೀಮಾ ರಘುನಾಥರ ಕಾಲುಗಳನ್ನು ಉಜ್ಜಲು ಹಿಡಿದುಕೊಂಡಾಗ,ಏನೋ ಒಂಥರ ತಲ್ಲಣ..ಮರಗಟ್ಟಿದಂತೆ ಭಾಸ..!ಆದರೂ ಕಾಲುಗಳನ್ನು ಉಜ್ಜುತ್ತಲೇ ಹೋದಳು.ಇತ್ತ ಜಾನಕಿ,ರಘುನಾಥರನ್ನು ಎಬ್ಬಿಸಲು ಪ್ರಯತ್ನಿಸುತ್ತಲೇ ಇದ್ದಾಳೆ.ಅಷ್ಟೊತ್ತಿಗೆ ಡಾಕ್ಟರ್ ಪ್ರಣವ್ ಬಂದರು.ನಾಡಿ ಹಿಡಿದಾಗ ಸಣ್ಣದಾಗಿ ಹೊಡೆದುಕೊಳ್ಳುತ್ತಲೇ ಇತ್ತು.ಡಾಕ್ಟರ್..ಡಾಕ್ಟರ್..ನೋಡಿ ನಮ್ಮೆಜಮಾನ್ರು...ರ್ರೀ...ಏಳ್ರೀ...ಎದ್ದೇಳ್ರೀ..ಏ..ರ್ರೀ..ಏಳ್ರೀ...ಅಮ್ಮಾ,ಭಯಪಡಬೇಡಿ,ಏನೋ ಆಗಲ್ಲ,ಇರಿ,ನಾ ನೋಡ್ತಿದ್ದೀನಲ್ಲಾ..ಪ್ರಣವ್ ಹೇಳ್ತಾ ಇದ್ದಾರೆ.ಪ್ರಣವ್ ರಘುನಾಥರಿಗೆ ಒಂದು ಚುಚ್ಚುಮದ್ದನ್ನು ಕೊಟ್ಟರು.ಪ್ರಣವ್ ರಘುನಾಥರ ಎದೆಯ ಮೇಲೆ ಕೈಯಿಟ್ಟು,ನಿಧಾನವಾಗಿ,ಮೃದುವಾಗಿ ಗುದ್ದಿದರು...ಎರಡು ಮೂರು ಸಲ ಹಾಗೇ ಮಾಡಿದರು.ರಘುನಾಥರ ಕಣ್ರೆಪ್ಪೆಗಳು ಅಲುಗಾಡಿದವು.ನನ್ ಮಗ..ನನ್  ಮಗ...ಮಲಗಿದಲ್ಲಿಯೇ ಮುಲುಗುತ್ತಿದ್ದಾರೆ.ಜಾನಕೀ..ಅಂತ ಒಮ್ಮೆಲೇ ಜೋರಾಗಿ ಕಿರುಚಿದರು...ಮತ್ತೆ ಪ್ರಜ್ಞೆ ತಪ್ಪಿದರು.ಡಾಕ್ಟರ್ ಪ್ರಣವ್ ಅರಿತುಕೊಳ್ಳುವಷ್ಟರಲ್ಲಿ ಪರಿಸ್ಥಿತಿ ಬದಲಾಗಿಬಿಟ್ಟಿತ್ತು.ಜಾನಕಿ ರೋದಿಸುತ್ತಿದ್ದಾಳೆ.ಸೀಮಾ ಜಾನಕಿಯತ್ತ ನೋಡಿದಳು.ಜಾನಕಿಯ ಹಣೆಯ ಮೇಲಿನ ಸಿಂಧೂರ ಕಾಣೆಯಾಗಿ,ಅವಳ ಹಣೆ ಬೋಳುಬೋಳಾಗಿತ್ತು.ಸೀಮಾಳ ಎದೆ ‘ಝಲ್’ ಎಂದಿತು.ರಘುನಾಥರತ್ತ ನೋಡಿದಳು.ಜಾನಕಿಯ ಹಣೆಬೊಟ್ಟು ರಘುನಾಥರ ಹಣೆಗೆ ಅಂಟಿಕೊಂಡಿತ್ತು.ಇತ್ತ ಪ್ರಣವ್ ರಘುನಾಥರ ನಾಡಿ ಹಿಡಿದು ಮತ್ತೆ ನೋಡಿದರು.ಹಿಡಿದ ನಾಡಿ ಮಿಡಿಯುತ್ತಿಲ್ಲ.ಪಟಪಟನೆ ಹೊಡೆದುಕೊಳ್ಳಬೇಕಾಗಿದ್ದ ಹೃದಯ ಸ್ತಬ್ಧವಾಗಿತ್ತು.ನಾಡಿ ಹಿಡಿದು ನೋಡಿ ರಘುನಾಥರ ಕೈ ಬಿಟ್ಟಾಗ,ಕೈ ಧಡ್ಡನೆ ನೆಲಕ್ಕೆ ಬಿತ್ತು.ಜಾನಕಿಗೆ ದಿಕ್ಕೇ ತೋಚುತ್ತಿಲ್ಲ.ಪ್ರಣವ್ ಎದ್ದುನಿಂತರು.ಅಮ್ಮಾ...ಧೈರ್ಯ ತಗೊಳ್ಳಿ...ಎಂದಷ್ಟೇ ಹೇಳಿ,ಹೊರಬಿದ್ದು,ಸೀಮಾಳನ್ನು ಕರೆದರು.ಸೀಮಾ,ಇವರ ಬಂಧುಬಳಗದವರಿಗೆಲ್ಲ ಬರಹೇಳು,ರಾಯರು ಹೋಗ್ಬಿಟ್ರು..ಅಂತಷ್ಟೇ ಹೇಳಿ ಪ್ರಣವ್ ಹೊರಟುಬಿಟ್ರು.ಸೀಮಾಳಿಗೆ ಕತ್ತಲು ಕವಿದಂತಾಯಿತು.ತಕ್ಷಣ ಸಾವರಿಸಿಕೊಂಡು ಒಳಗೆ ಬಂದಳು.ರಘುನಾಥರ ಹತ್ತಿರವೇ ಕುಳಿತಿದ್ದ ಜಾನಕಿ,ಸೀಮಾ,ಏನಂದ್ರೇ ಡಾಕ್ಟರ್ ಪ್ರಣವ್ ಏನಂದ್ರೇ?..ಅಂತ ಕೇಳಿದಳುಅಮ್ಮಾ..ಅಮ್ಮಾ...ಎಲ್ಲಾ ಮುಗೀತಮ್ಮಾ!...ಸೀಮಾ ಕೈ ತಿರುಗಿಸಿದಳು,ಹಾಗೇ ಮೇಲೆ ನೋಡಿದಳು...ಆ...ರ್ರೀ...ಜಾನಕಿ ಎದೆ ಬಡಿದುಕೊಳ್ಳತೊಡಗಿದಳು.ಅವಳ ಕೈಗಳೆರಡು ಪರಸ್ಪರ ಘರ್ಷಿಸಿ,ಅವಳ ಕೈಬಳೆಗಳು ಒಂದೊಂದಾಗಿ ಚೂರಾಗಿ ಬೀಳತೊಡಗಿದವು.ಅಯ್ಯೋ ದೇವ್ರೇ ಅಂತ ತಲೆಮೇಲೆ ಕೈಯಿಟ್ಟುಕೊಂಡು ಕೂದಲು ಕೆದರಿಕೊಂದಳು.ಬಿದ್ದು ಬಿದ್ದು ಹೊರಳಾಡಿದಳು.ಅಳಿದುಳಿದ ಬಳೆಗಳೂ ಚೂರುಚೂರಾಗಿ ನೆಲದ ಮೇಲೊರಗಿದವು;ಜಾನಕಿಯಂತೆಯೇ!ಇತ್ತ ಸೀಮಾ,ರಘುನಾಥರ ಹೆಣ್ಮಕ್ಕಳಿಗೆ,ಬಂಧುಬಳಗದವರಿಗೆಲ್ಲಾ ಫೋನ್ ಮೂಲಕ ವಿಷಯ ತಿಳಿಸಿದಳು.ಜಾನಕಿಯನ್ನು ಸಮಾಧಾನಪಡಿಸುವುದಾದರೂ ಹೇಗೆ?ಸೀಮಾಳಿಗೆ ಜಾನಕಿಯನ್ನು ಹೇಗೆ ಸಮಾಧಾನಿಸಬೇಕೆಂದೇ ತಿಳಿಯುತ್ತಿಲ್ಲ.ವಿಲವಿಲನೆ ಒದ್ದಾಡಿದಳು.ಹೇಗೆ,ಹೇಗೆ ಸಮಾಧಾನಿಸಲಿ?...ಅರ್ಥವೇ ಆಗುತ್ತಿಲ್ಲ.ಜಾನಕಿಯ ಹತ್ತಿರ ಬಂದಳು.ಅಮ್ಮಾ..ಅಮ್ಮಾ..ಎಂದು ರೋದಿಸುತ್ತಾ ಒಂದು ಕಡೆ ಕುಳಿತುಬಿಟ್ಟಳು.ಅಷ್ಟೊತ್ತಿಗೆ ಅವರ ರೋದನವನ್ನು ಕೇಳಿ,ಅಕ್ಕಪಕ್ಕದ ಮನೆಯವರೆಲ್ಲಾ ಬಂದುಸೇರಿದ್ದರು.ಎಲ್ಲರೂ ಮರುಕಪಡುವವರೇ!ಒಬ್ಬ ಮನುಷ್ಯನ ನಿಜವಾದ ಘನತೆ,ಬದುಕಿನ ಔನ್ನತ್ಯ ತಿಳಿಯುವುದು ಆತನ ಸಾವಿನಲ್ಲಂತೆ!ಎಲ್ಲರೂ ಸತ್ತ ರಘುನಾಥರಿಗಾಗಿ ಕಂಬನಿ ಮಿಡಿಯುವವರೇ!ಅವರನ್ನು ಹಾಡಿಹೊಗಳುವವರೇ!ಎಂತಹ ಮೃದುತ್ವವನ್ನು ಹೊಂದಿದವರಾಗಿದ್ದರು...ಅಂಥವರಿಗೆ ೫೮ನೇ ವರ್ಷಕ್ಕೇ ಸಾವೇ?ದೇವರು ಕ್ರೂರಿ,ಆತನಿಗೆ ಕರುಣೆಯೆಂಬುದೇ ಇಲ್ಲ..ಅಂತ ಒಬ್ಬರು ಹೇಳಿದರೆ,ಇನ್ನೊಬ್ಬರು,ನಿನ್ನೆ ಸಂಜೆ ನನ್ ಜೊತೆ ನಗ್ ನಗ್ತಾ ಮಾತಾಡಿದ್ರು..ಇವತ್ ಸಂಜೆ ವಾಕಿಂಗಿಗೆ ಹೋಗಿ,ದೇವಸ್ಥಾನಕ್ಕೆ ಹೋಗ್ಬರೋಣ ಅಂತ ಹೇಳ್ತಾ ಇದ್ರು...ಅಂತ ಹೇಳ್ತಾ ಇದ್ದಾರೆ.ಅಷ್ಟೊತ್ತಿಗಾಗಲೇ ಇಡೀ ಊರಿಗೇ ಸುದ್ದಿ ತಲುಪಿತ್ತು.ಎಲ್ಲರೂ ರಘುನಾಥರ ಮನೆ ಮುಂದೆ ಸೇರತೊಡಗಿದರು.ಎಲ್ಲರಿಗೂ ರಘುನಾಥರನ್ನು ಕಂಡರೆ ಅಕ್ಕರೆ,ಗೌರವ.ಆದರೆ,ಈಗ ರಘುನಾಥರ ಜೀವ, ವಿಧಿಯ ಬೊಕ್ಕಸ ಸೇರಿತ್ತು.ಎಲ್ಲರೂ ರಘುನಾಥರ ಗುಣಗಾನ ಮಾಡುತ್ತಿದ್ದಾರೆ.ರಘುನಾಥರ ಬಂಧುಬಳಗದವರೆಲ್ಲಾ ಸೇರತೊಡಗಿದರು.ಅವರ ಇಬ್ಬರು ಹೆಣ್ಮಕ್ಕಳು ಬಂದು ಸೇರಿದರು.ರಘುನಾಥರ ಹಿರಿಮಗಳು ಮತ್ತು ಅವಳ ಮಗಳು,ರಘುನಾಥರ ಕಿರಿಮಗಳು ಮತ್ತು ಅವಳ ಮಗ...ಹೀಗೆ ಎಲ್ಲರೂ ನೆರೆದಿದ್ದಾರೆ.ಆದರೂ,ಎಲ್ಲರೂ ಇನ್ನೂ ಒಬ್ಬರ ಬರುವಿಕೆಗಾಗಿ ಕಾಯ್ತಾ ಇದ್ದಾರೆ.ರಘುನಾಥರ ಹಿರಿಮಗಳು ಸಾರಿಕಾ,ಸೀಮಾ!ಸಿದ್ದಾರ್ಥನಿಗೆ ವಿಷ್ಯ ತಿಳ್ಸಿದ್ದೀಯಾ?ಅಂತ ಕೇಳಿದಳು.ಹೌದಮ್ಮಾ..ತಿಳ್ಸಿದ್ದೀನಮ್ಮಾ..ಹೌದಾ,ಅಂತ ಕೇಳಿ,ಫೋನ್ ಇಟ್ಬಿಟ್ರು..ಬರ್ತೀನೋ ಇಲ್ವೋ ಅಂತಾನೂ ಹೇಳಿಲ್ಲಮ್ಮಾ..ಅಂತ ಸೀಮಾ ಹೇಳಿದಾಗ,ಅವ್ನ್ ನಂಬರ್ ಕೊಡು,ನಾನ್ ಮಾತಾಡ್ತೀನಿ,ಅಂತ ಸಾರಿಕಾ ಸಿದ್ದಾರ್ಥನಿಗೆ ಕರೆ ಮಾಡಿದಳು.ಹಲೋ ನಮಸ್ತೇ..ಸಿದ್ದಾರ್ಥ ಇದ್ದಾನಾ...ಸ್ವಲ್ಪ ಕರೀತೀರಾ?..ಸಾರಿಕಾ ಕೇಳಿದಳು.ಆ ಕಡೆಯಿಂದ,ಹ್ಞ..ಮಾ ಅವ್ರು ತನಗೆ ಯಾವ್ದೇ ಕರೆ ಬಂದ್ರೂ ಈಗ ಆಗೋದಿಲ್ಲಾ ಅಂತ ಹೇಳ್ಲಿಕ್ ಹೇಳಿದ್ದಾರೆ...ಅಂತ ಆತ ಹೇಳಿದ.ಇಲ್ಲ,ತುಂಬಾ ತುರ್ತು ವಿಷಯ..ನೀವು ಆತನನ್ನು ಕರೀಲೇಬೇಕು..ದಯಮಾಡಿ ಕರೀರಿ,ಅವ್ನ ತಂದೆಯವರು ತೀರ್ಕೊಂಡಿದ್ದಾರೆ,ದಯವಿಟ್ಟು ಕರೀರಿ..ಸಾರಿಕಾ ಹೇಳಿದಳು.ಆತ,ಹ್ಞ, ಕರೀತೀನಮ್ಮಾ ಅಂತ ಹೇಳಿದ.ಎರಡು ಕ್ಷಣ ಬಿಟ್ಟು...ಹ್ಹ,ಹೇಳಿ ಮಾ..ಅನ್ನೋ ಪ್ರಶಾಂತವಾದ ಧ್ವನಿ.ಏ ಸಿದ್ದಾರ್ಥ್,ನಾನು ಕಣೋ,ಅಮ್ಮ ಅಲ್ಲ,ನಿನ್ನ ಅಕ್ಕ ಸಾರಿಕಾ ಮಾತಾಡ್ತಿದ್ದೀನಿ..ಹ್ಹ,ಗೊತ್ತಾಯ್ತು,ಆದರೆ,ನಾನೀಗ ನನಗಿಂತ ಹಿರಿಯ ಸ್ತ್ರೀಯರೆಲ್ಲರನ್ನೂ ‘ಅಮ್ಮಾ’ ಅಂತಾನೇ ಕರೆಯೋದು..ಹೇಳಿ...ಅಂತ ಮತ್ತೆ ಅಷ್ಟೇ ಪ್ರಶಾಂತವಾದ ಧ್ವನಿಯಲ್ಲಿ ಆತ ಹೇಳಿದ.ಇವಳಿಗೆ ಆಶ್ಚರ್ಯ,ಇನ್ನೊಂದೆಡೆ ಆತಂಕ.ಇತ್ತ ಎಲ್ಲರೂ ಬಿಕ್ಕಿ ಬಿಕ್ಕಿ ಅಳ್ತಾ ಇದ್ದಾರೆ.ಹೇ ಸಿದ್ದಾರ್ಥ್..ಅಪ್ಪ...ಅಪ್ಪ ಹೋಗ್ಬಿಟ್ರು ಕಣೋ..ನೀನು ಆದಷ್ಟ್ ಬೇಗ ಬಾರೋ..ಎಲ್ರೂ ನಿನಗೋಸ್ಕರ ಕಾಯ್ತಾ ಇದ್ದೀವಿ.ಬೇಗ್ ಬಾರೋ..ಅಳ್ತಾ ಹೇಳ್ತಾಳೆ.ಆದ್ರೆ ನಾನೀಗ ಬರೋ ಹಾಗಿಲ್ಲ,ಬರೋವಂಥ ಸ್ಥಿತೀಲೂ ನಾನಿಲ್ಲ.ಬರ್ಲಿಕ್ಕಾಗೋದಿಲ್ಲಮ್ಮಾ...ಸಿದ್ದಾರ್ಥನ ದೃಢವಾದ ಮತ್ತು ಮತ್ತಷ್ಟೇ ಪ್ರಶಾಂತವಾದ ಧ್ವನಿ..ಹೇ ಸಿದ್ದಾರ್ಥ್,ನಿಂಗ್ ಏನ್ ತಲೆ ಕೆಟ್ಟಿದ್ಯೇನೋ?ಅಪ್ಪ ಸತ್ತಿದ್ದಾರೆ,ಬಾರೋ ಅಂದ್ರೆ ಬರೋಕ್ಕಾಗಲ್ಲ ಅಂತಿದ್ದೀಯಲ್ಲೋ.ಹುಚ್ಚು ಹಿಡ್ದಿದ್ಯೇನೋ?...ಫೋನಲ್ಲೇ ಬಿಕ್ಕಳಿಸ್ತಾ,ಗದರ್ತಾ ಇದ್ದಾಳೆ,ಸಾರಿಕಾ.ಕ್ಷಮಿಸಮ್ಮಾ,ಎಲ್ಲವನ್ನು ಬಿಟ್ಟುಬಂದವನಿಗೆ ಇನ್ನೆಲ್ಲಿಯ ಸಂಬಂಧ!ಸಂಬಂಧ ಬಿಂದುಗಳ ಪರಿಧಿಯಿಂದ ಆಚೆ ಬಂದವನಿಗೆ ಇನ್ನೆಲ್ಲಿಯ ಅಪ್ಪನೆಂಬ ಬಾಂಧವ್ಯ!ಎಲ್ಲವನ್ನೂ ತೊರೆದಾಗಿದೆ..ಮತ್ತ್ಯಾಕೆ ಸಂಸಾರದ ಮೋಹದ ಪರದೆಯನ್ನು ನನ್ನ ಸುತ್ತಲೂ ಹರಡುತ್ತಿದ್ದೀರಾ?ಜಾಲು ಜಾಲಾದ ಬಲೆಯೊಳಗೆ ಜಗತ್ತಿಲ್ಲ,ಪರದೆ ಸರಿಸಿ,ಪರಿಧಿಯನ್ನು ದಾಟಿದವನನ್ನು ಮತ್ತ್ಯಾಕೆ ಕಾಯುತ್ತೀರಾ?ಮುಂದಿನ ಕೆಲಸಗಳನ್ನು ನೆರವೇರಿಸಿ...ವಿಚಿತ್ರ ಧ್ವನಿಯಲ್ಲಿ ಆತ ಉಸುರಿದ.ಇತ್ತ ಸಾರಿಕಾಳಿಗೆ ಸಿಡಿಲು ಬಡಿದಂತಾಯಿತು.ಹೆತ್ತ ಅಪ್ಪನ ಹೆಣ ನೋಡಲೂ ಬರೋದಿಲ್ಲ ಅಂತ ಹೇಳ್ತಿದ್ದೀಯಲ್ಲೋ,ತಲೆ ನೆಟ್ಟಗಿಲ್ವೇನೋ ನಿಂಗೆ...ಹ್ಹೇ..ಯಾಕೋ ಯಾಕೋ ಹೀಗ್ ಮಾಡ್ತಾ ಇದ್ದೀಯಾ?..ಜೋರಾಗಿ ಕಿರುಚ್ತಾನೇ ಹೇಳ್ತಿದ್ದಾಳೆ.ತಕ್ಷಣ ಸಾರಿಕಾಳ ಮಗಳು ಸ್ವಪ್ನಾ ಫೋನ್ ತೆಗೆದುಕೊಂಡಳು.ಮಾವ..ದಯವಿಟ್ಟು ಬನ್ನಿ ಮಾವ..ನಿಮಗೋಸ್ಕರ ಎಲ್ರೂ ಕಾಯ್ತಿದಾರೆ..ಅಂತ ಹೇಳ್ತಿದ್ದಾಳೆ.ಸಾರಿಕಾ ತನ್ನ ಮಾವನ ಹತ್ತಿರ,ಮಾವ ಅವನು ಬರೋದಿಲ್ವಂತೆ..ಅಂತ ಗೋಳಾಡ್ತಾ ಇದ್ದಾಳೆ.ಆಗ ಸ್ವಪ್ನಾಳ ಕೈಯಿಂದ ಸಾರಿಕಾಳ ಮಾವ ಫೋನ್ ತೆಗೆದುಕೊಂಡರು.ಸಿದ್ದಾರ್ಥ..ನಾನು ಸಾರಿಕಾಳ ಮಾವ ಅರವಿಂದ ಮಾತ್ನಾಡ್ತಾ ಇರೋದು..ಯಾಕಪ್ಪಾ,ಏನಾಯ್ತು?ಹೆತ್ತ ತಂದೆ ಸತ್ತಿರುವ ಸಮಯದಲ್ಲೂ ಆತನನ್ನು ನೋಡೋದಿಕ್ಕೆ ಬರೋದಿಲ್ಲ ಅಂತ ಹೇಳ್ತಿದ್ದೀಯಲ್ಲಾ,ಯಾಕಪ್ಪಾ,ಯಾಕಪ್ಪಾ ಈ ದ್ವೇಷ?..ಅಂತ ಅರವಿಂದರಾಯರು ಹೇಳಿದರು.ಕ್ಷಮಿಸಿ..ನಾನು ಬರೋದಿಲ್ಲ.ದ್ವೇಷವಲ್ಲ,ಸಂಬಂಧಗಳನ್ನು ತ್ಯಜಿಸಿ ನಿಂತ ನನಗೆ ಮತ್ತೆಲ್ಲಿಯ ಸಂಬಂಧಗಳ ಗಂಟು?ಯಾಕಾಗಿ ಬರಲಿ ನಾನಲ್ಲಿಗೆ?..ಸಿದ್ದಾರ್ಥ ಪ್ರಶ್ನಿಸುತ್ತಾನೆ.ನೋಡು ಸಿದ್ದಾರ್ಥ,ಇದು ವಾದ ಮಾಡಬೇಕಾದ ಸಮಯವಲ್ಲ ಅಥವಾ ಸಂಸಾರದೊಳಗಿನ ಬದುಕು ಮತ್ತು ಸಂಸಾರದಾಚೆಗಿನ ಬದುಕಿನ ಬಗ್ಗೆ ಚರ್ಚಿಸಿ,ನಿಧಾನವಾಗಿ ನಿರ್ಧಾರ ತೆಗೆದುಕೊಳ್ಳುವ ಸಮಯವೂ ಅಲ್ಲ.ನಿನಗೆ ಕೈ ಮುಗಿದು ಕೇಳ್ಕೋತೀನಿ,ಹೆತ್ತವರ ಋಣ ತೀರಿಸುವ ನೆಪಕ್ಕಾದರೂ ದಯವಿಟ್ಟು ಬಾ..ಮಗನಾದ ನಿನ್ನ ಪಾಲಿನ ಕರ್ತವ್ಯಗಳನ್ನು ಮರೆಯಬೇಡ.ನೀನು ಬಂದ ನಂತರ,ಮುಂದಿನ ಬದುಕಿನ ಬಗ್ಗೆ ವಿಮರ್ಶಿಸೋಣ.ನಿನ್ನ ಈ ಭೂಮಿಗೆ ತಂದ ತಪ್ಪಿಗೆ,ಸತ್ತ ನಿನ್ನ ತಂದೆ ಪಶ್ಚಾತ್ತಾಪಪಡಲಿ.ನಿನ್ನಲ್ಲಿ ಬದುಕನ್ನಿಟ್ಟುಕೊಂಡು,ಬದುಕಿನ ಅರ್ಥವನ್ನೇ ಕಳೆದುಕೊಂಡ,ನಿನ್ನ ಆ ನತದೃಷ್ಟ ತಂದೆಯ ಮುಖವನ್ನು ಕೊನೇ ಬಾರಿ ಒಮ್ಮೆ ನೋಡಲಿಕ್ಕಾದರೂ ಬಾರೋ.ಮತ್ತೆಂದೂ ಆ ಪುಣ್ಯಾತ್ಮನ ಮುಖ ನಿನಗೆ ನೋಡೋದಿಕ್ಕೆ ಸಿಗೋದಿಲ್ಲಾ..ಕೈಮುಗೀತೀನಿ ಕಣೋ..ಹೇಳುತ್ತಲೇ ಇದ್ದಾರೆ.ದಯವಿಟ್ಟು ಕ್ಷಮಿಸಿ,ತಾವು ಹಿರಿಯರು,ನನಗೆ ಕೈಮುಗಿಯುವುದು ಅಷ್ಟೊಂದು ಸಮಂಜಸವಲ್ಲ.ಬರುತ್ತೇನೆ,ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿ.ನಾನು ಬರುವ ದಾರಿಯಲ್ಲಿ ಮೂರು ಹಣತೆಗಳನ್ನು ಹಚ್ಚಿಡಿ.ಒಂದೊಂದು ಹಣತೆಯ ಬಳಿಯೂ ಒಂದೊಂದು ಹೂವನ್ನಿಡಿ..ಅಂತ ಸಿದ್ದಾರ್ಥ ಹೇಳುತ್ತಾನೆ.
          ಎಲ್ಲರ ಮುಖದಲ್ಲೂ ಪ್ರಶ್ನಾಭಾವ!ಎಲ್ಲಿ,ರಘುನಾಥರ ಮಗನೆಲ್ಲಿ?ಈಗ ಆತ ಎಲ್ಲಿದ್ದಾನೆ?ಏನು ಮಾಡುತ್ತಿದ್ದಾನೆ?ಆತ ಊರಿಗೆ ಬಂದದ್ದನ್ನು ನೋಡಿ ಮೂರ್ನಾಲ್ಕು ವರ್ಷಗಳೇ ಕಳೆದುಹೋಗಿವೆ..ಈಗ ನಿಮ್ಮ ಮನದಲ್ಲೂ ಎದ್ದಿರಬೇಕಲ್ಲವೇ ಈ ಎಲ್ಲ ಪ್ರಶ್ನೆಗಳು?ಯಾರು ಈ ಸಿದ್ದಾರ್ಥ ಅಂತ,ಯಾಕೆ ಆತ ಹಾಗೆಲ್ಲಾ ಹೇಳುತ್ತಿದ್ದಾನೆ ಅಂತ!ನಿಮ್ಮ ಎಲ್ಲ ಪ್ರಶ್ನೆಗಳಿಗೂ ಮುಂದೆ ಓದ್ತಾ ಓದ್ತಾ ಉತ್ತರ ಸಿಗುತ್ತೆ...
          ಅರವಿಂದರಾಯರು ಸಿದ್ದಾರ್ಥ ಬರುತ್ತಾನಂತೆ ಅಂತ ಹೇಳುತ್ತಾರೆ.ಸಾರಿಕಾ ನಿಟ್ಟುಸಿರುಬಿಡುತ್ತಾಳೆ.ಸಿದ್ದಾರ್ಥ ವಿಮಾನದಲ್ಲಿ ಬರುತ್ತಾನೆ.ಮನೆಗೆ ಬರುವಾಗ ಸಂಜೆ ಸುಮಾರು ೫ ಗಂಟೆ.ಮನೆಯಲ್ಲಿ ಬೆಳಿಗ್ಗೆಯಿಂದ ಯಾರೂ ಅನ್ನಾಹಾರ ಸೇವಿಸಿಲ್ಲ.ಎಲ್ಲರೂ ಆತನ ಬರುವಿಕೆಗಾಗಿ ಕಾಯುತ್ತಲೇ ಇದ್ದರು.ಸಿದ್ದಾರ್ಥ ಮನೆ ಬಾಗಿಲಿಗೆ ಬಂದಿಳಿದ.ಆತ ಹೇಳಿದಂತೆಯೇ,ಮೂರು ಹಣತೆಗಳು ಬೆಳಗುತ್ತಿದ್ದವು.ಹಣತೆಗಳಿಗೆ ಅಲ್ಲಿಯೇ ಇದ್ದ ಹೂಗಳನ್ನು ತಾಗಿಸಿದ.ಹಣತೆಗಳಿಗೆ ಕೈಮುಗಿದ.ಮನಸ್ಸಿನಲ್ಲೇ ಧ್ಯಾನಿಸಿದ...ಹೇ ಹಣತೆಗಳೇ!..ನಿಮ್ಮನ್ನೇ ಬ್ರಹ್ಮ ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳನ್ನಾಗಿ ಕಲ್ಪಿಸಿಕೊಳ್ಳುತ್ತಿದ್ದೇನೆ.ಹೇ ಶಕ್ತಿಯೇ..ಮುಸುಕಿದ ಮಾಯೆಯ ಮಸುಕನ್ನು ಕಳೆದು ದೇದೀಪ್ಯಮಾನವಾದ ಬೆಳಕನ್ನು ನೀಡುತ್ತೀದ್ದೀಯೆಂದೇ ಭಾವಿಸುತ್ತೇನೆ.ನನ್ನ ಮನಸ್ಸಿನಲ್ಲಿ ದುಗುಡವಿಲ್ಲ;ಆದರೆ..ಈಗೀಗ ದ್ವಂದ್ವ ಶುರುವಾಗುತ್ತಿದೆ.ಆ ದ್ವಂದ್ವ ಕಳೆದು ಏಕತ್ವದೊಂದಿಗೆ ಸಂಧಾನವಾಗಬೇಕು.ಹರಸಿರಿ..ಈಗ ನಾನು ಮಾಡುತ್ತಿರುವ ಕಾರ್ಯ ಸರಿಯೋ ತಪ್ಪೋ ತಿಳಿಯುತ್ತಿಲ್ಲ,ಮನ್ನಿಸಿ...ತಂದೆಯ ಅಪರಕ್ರಿಯೆಗಳನ್ನು ಮಾಡಲಿಕ್ಕೆ ಮನೆಯೊಳಗೆ ಅಡಿಯಿಡುತ್ತಿದ್ದೇನೆ.ಅಪರಿಮಿತ ಆಶೀರ್ವಾದಗಳಿರಲಿ,ಅನುಗ್ರಹವಿರಲಿ..ಮನೆಯ ಹೊಸ್ತಿಲನ್ನು ದಾಟಿ ಒಳಗೆ ಪ್ರವೇಶಿಸುತ್ತಾನೆ.ಒಂದು ಕ್ಷಣ ಮೈ ‘ಜುಂ’ ಅನ್ನುತ್ತದೆ.ಕ್ಷಣಕಾಲ ಕಣ್ಮುಚ್ಚಿ ನಿಂತು,ಕಣ್ತೆರೆಯುತ್ತಾನೆ.ಎಲ್ಲರೂ ಅವನತ್ತಲೇ ನೋಡುತ್ತಿದ್ದಾರೆ.ಆತನ ಕಣ್ಣುಗಳಲ್ಲಿ ತೇಜಸ್ಸು ಸ್ಫುರಿಸುತ್ತಿದೆ.ಕಂಗಳ ಕಾಂತಿ,ಮುಗುಳ್ನಗುವ ವದನ ತಿಂಗಳ ಹುಣ್ಣಿಮೆಯಂತೆ ಕಂಗೊಳಿಸುತ್ತಿದೆ.ಆ ಕಣ್ಣುಗಳಲ್ಲಿ ಯಾವುದೋ ಕಾಣದೊಂದು ಆಹ್ಲಾದ ದಿವ್ಯ ಧ್ಯಾನವಿದೆ...ಮಂದಸ್ಮಿತ ಲಾಸ್ಯವಾಡುತ್ತಿದೆ.ಪ್ರಶಾಂತವಾದ ಮೊಗದಲ್ಲಿ ಪ್ರಸನ್ನತೆಯಿದೆ.ನಿಂತ ಆ ಶೈಲಿಯಲ್ಲಿ ಗಾಂಭೀರ್ಯವಿದೆ.ದೇಹದ ಸುತ್ತ ಏನೋ ಒಂಥರದ ಪ್ರಭೆಯಿದ್ದಂತೆ ಗೋಚರಿಸುತ್ತಿದೆ.ಬೆಳಕಿನ ಸ್ಯಂದನವೋ ಎಂಬಂತೆ ತೋರುತ್ತಿದ್ದಾನೆ.ಸ್ಫುರದ್ರೂಪಿ ಸಿದ್ದಾರ್ಥನ ತನುವಿನಲ್ಲಿ ಯೌವನ ನಳನಳಿಸುತ್ತಿದೆ.ದೇಹ ಸದೃಢವಾಗಿದೆ;ಆತನ ಮನಸ್ಸಿನಂತೆಯೇ!ಈ ಎಲ್ಲ ಕಾಂತಿಯೊಂದಿಗಿನ ಆತ ಯಾವುದೋ ಒಂದು ಮನೋಹರ ಸುಂದರ ಅಗೋಚರ ಶಕ್ತಿಯಂತೆ ಗೋಚರಿಸುತ್ತಿದ್ದಾನೆ.ಆತ ಮುಂದೆ ಮುಂದೆ ನಡೆದುಬಂದು,ತಂದೆಯ ಶವದ ಬಳಿಗೆ ಬಂದ.ಶವದ ಮುಂದೆ ಕುಳಿತ.ಶವವನ್ನು ಮುಟ್ಟಲು ಮುಂದಾದ.ಇದ್ದಕ್ಕಿದ್ದಂತೆ,ನಿಲ್ಲು..ಮುಟ್ಟಬೇಡ..ಎಂಬಂತಹ ಕರ್ಕಶ ಧ್ವನಿ..ಯಾರದ್ದು ಆ ಧ್ವನಿ?..ಆತನ ತಾಯಿ ಜಾನಕಿಯಲ್ಲಿ ಆಕ್ರೋಶ ಭುಗಿಲೆದ್ದಿತ್ತು.ಮುಟ್ಬೇಡ...ಬೇಡ..ಮನುಷ್ಯ ಸಂಬಂಧಗಳ ಮೌಲ್ಯವೇ ಗೊತ್ತಿರದ,ಹೆತ್ತವರ ಮೇಲೆ ಗೌರವ ಪ್ರೀತ್ಯಾದರಗಳಿರದ,ಅನಾಗರಿಕತೆಯ ಪಿಪಾಸು ನೀನು...ಹಸಿಮಾಂಸ ತಿನ್ನುವ ಅಘೋರಿಗಳಂತೆ ನೀ ನನಗೆ ಗೋಚರಿಸ್ತಾ ಇದ್ದೀಯಾ!..ಮುಟ್ಟಬೇಡ..ಅವರ ಸಾವಿಗೆ ಕಾರಣ ನೀನೇ..ನೀನೇ...ನೀನೇ...ಕೊಂದೇಬಿಟ್ಯಲ್ಲೋ ಪಾಪೀ...ಜಾನಕಿ ಬಿಕ್ಕಳಿಸುತ್ತಾಳೆ.ಆದರೆ,ಆತನ ಮುಖದಲ್ಲಿ ಪಶ್ಚಾತ್ತಾಪ ಇಲ್ಲ.ದೃಢವಾದ ನೋಟ,ಮತ್ತದೇ ಮಾಸದ ಮಂದಹಾಸ!..ಹೇಳುತ್ತಾನೆ,ಎಲ್ಲರೂ ಅವರವರ ಸಮಯ ಬಂದಾಗ ಸಾವಿನ ಪರದೆಯ ಹಿಂದೆ ಸರಿಯಲೇಬೇಕು..ಯಾರ ಸಾವಿಗೆ ಯಾರೂ ಕಾರಣರಲ್ಲ..ನೀವು ಕೊಡುವ ಕಾರಣಗಳೆಲ್ಲ ನೆಪಗಳಷ್ಟೇ..!ಸಾವು ಶಾಶ್ವತವಾದದ್ದು,ಸಾವು ನಿಶ್ಚಿತವಾದದ್ದು...!ಎಂದಷ್ಟೇ ಹೇಳಿದ.ಹೆತ್ತ ಕರುಳು ರೋಧಿಸುತ್ತಿತ್ತು.ಜಾನಕಿ ಮತ್ತೆ ಕೂಗಿದಳು,ಮಗನಾಗಿ ಮಾಡಬೇಕಾದ ಎಲ್ಲ ಕಾರ್ಯಗಳನ್ನು ಮುಗಿಸುತ್ತೀಯಾ ಎಂದಾದಲ್ಲಿ ಮಾತ್ರ ಅವರ ಶವವನ್ನು ಮುಟ್ಟು..ಇಲ್ಲವಾದಲ್ಲಿ ಅದನ್ನು ಮುಟ್ಟುವ ಅಧಿಕಾರ ನಿನಗಿಲ್ಲ,ಹೊರಟೋಗು ಇಲ್ಲಿಂದ!!..ನನಗಿರುವ ಹೆಣ್ಮಕ್ಕಳಲ್ಲಿ ಒಬ್ಬಳನ್ನು ಮಗನೆಂದು ತಿಳಿದು,ಅವಳ ಕೈಯಿಂದಲೇ ಎಲ್ಲ ಕ್ರಿಯೆಗಳನ್ನು ಮಾಡಿಸುತ್ತೇನೆ.ಮದದಿಂದ ಕೊಬ್ಬಿದ ಮಗನ ಹಂಗು ನನಗಿಲ್ಲ!..ಎಂದು ಹೇಳುತ್ತಾ ಮೂರ್ಛೆಹೋದಳು.ಕಿರಿಯ ಮಗಳು ಲತಿಕಾ,ತನ್ನ ತಾಯಿ ಜಾನಕಿಯನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಳು.ಮಂದಮಂದ ಮಕರಂದದ ನಗುವಿನೊಂದಿಗೆ ಸಿದ್ದಾರ್ಥ ಕುಳಿತಿದ್ದ.ಸ್ಥಿತಪ್ರಜ್ಞತೆಯೆಂದರೆ ಇದೇ ಇರಬೇಕು!ತಾಯಿಯೆಡೆಗೆ ನೋಡಿದ.ಕಣ್ಮುಚ್ಚಿ,ತನ್ನ ಚೀಲದಿಂದ ವಿಭೂತಿಯನ್ನು ತೆಗೆದು,ಬೊಗಸೆಯಲ್ಲೇ ಹಿಡಿದು ಧ್ಯಾನಿಸಿದ.ನೀರವ ಮೌನ...ಆ ವಿಭೂತಿಯನ್ನು ತನ್ನ ತಂದೆಯ ಶವಕ್ಕೆ ಸಂಪೂರ್ಣವಾಗಿ ಲೇಪಿಸಿದ.ಕೈಮುಗಿದು ಎದ್ದು ನಿಂತ.ನೆಪಕ್ಕೂ ಕೂಡ ಆತನಿಗೆ ಕಣ್ಣೀರಿನ ನೆನಪಾಗಲಿಲ್ಲ.ಒಂದು ತೊಟ್ಟು ಕಂಬನಿಯೂ ಬಸಿಯಲಿಲ್ಲ!ತಾಯಿಗೆ ಎಚ್ಚರವಾಯಿತು.ಆತ ಕೈಸನ್ನೆಯ ಮೂಲಕವೇ,ಮುಂದುವರೆಸಿ ಎಂದು ಎಲ್ಲರಲ್ಲೂ ವಿನಂತಿಸಿಕೊಂಡ.ಹೆತ್ತ ಬಸಿರಿನ ಉಸಿರ ಕಲಕುವ ಆಕ್ರಂದನ ಮಾರ್ದನಿಸುತ್ತಲೇ ಇತ್ತು.೩೫ ವರ್ಷಗಳ ಜಾನಕಿಯ ದಾಂಪತ್ಯದ ಕೊಂಡಿ ಬಲವಂತವಾಗಿ ಹರಿಯಲ್ಪಟ್ಟಿದೆ.ಎದೆಯ ತಳಮಳ,ತವಕ ತಲ್ಲಣಗಳಿಗೆ ಸಾಕ್ಷಿಯಾಗಿದ್ದ,ಸಾಂತ್ವನವಾಗಿದ್ದ ಒಂದು ದೇಹ ಈಗ ಎಲ್ಲ ಜಂಜಾಟಗಳಿಂದ ಮುಕ್ತವಾಗಿ ಮಣ್ಣೊಳಗೆ ಜಾರಿಹೋಗುತ್ತಿದೆ.ಕರುಳು ಹಿಂಡುವ ಆ ಹೃದಯವಿದ್ರಾವಕ ದೃಶ್ಯಕ್ಕೆ ಸಾಕ್ಷಿಯಾದ ಸಿದ್ದಾರ್ಥನ ಮೊಗದ ಮೇಲೆ ಮಗುವಿನ ಆ ಮುಗ್ಧ ಮಂದಹಾಸ ಇನ್ನೂ ಮಾಸದೇ,ಹಾಗೆಯೇ ಇದೆ.ರಘುನಾಥರ ದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.ಅವರ ದೇಹ ಪಂಚಮಹಾಭೂತಗಳಲ್ಲಿ ಲೀನವಾಯಿತು..
           ಸ್ನಾನಾದಿಗಳನ್ನು ಮುಗಿಸಿದ ಸಿದ್ದಾರ್ಥ,ಏಕಾಂತದಲ್ಲಿ ತನ್ನೊಳಗೆ ತಾನೇ ತನಗೇ ತಾನು ಮುಖಾಮುಖಿಯಾಗುತ್ತಿರುವ ಸಂದರ್ಭ..!ಸೂತಕದ ಕರಿಛಾಯೆಯ ಮಂಪರು ಇನ್ನೂ ಸರಿದಿರಲಿಲ್ಲ.ಮೋಹಕ,ಮಾದಕ ಬಟ್ಟೆ ತೊಟ್ಟ ಸ್ವಪ್ನಾ ಸಿದ್ದಾರ್ಥನ ಕೋಣೆಯನ್ನು ಪ್ರವೇಶಿಸುತ್ತಾಳೆ.ಮಾವ...ಮಾದಕವಾಗಿ ಉಲಿಯುತ್ತಾಳೆ.ಸಿದ್ದಾರ್ಥ ತಲೆ ಎತ್ತಿದ;ಏನು ಎಂಬಂತೆ ಪ್ರಶ್ನಾರ್ಥಕವಾಗಿ ಆಕೆಯತ್ತ ನೋಡಿದ.ಆತನ ಹತ್ತಿರ ಬಂದಳು.ಆತನ ಪಕ್ಕದಲ್ಲೇ ಅವನ ಮೈಗೆ ಅವಳ ಮೈ ತಾಕುವಂತೆ ಕುಳಿತಳು..ಆತ ಅಲ್ಲಿಂದ ಏಳಲು ಮುಂದಾದಾಗ,ಆತನ ಕೈ ಹಿಡಿದೆಳೆದಳು.ಕೈ ಬಿಡಿಸಿಕೊಂಡ.ಮಾವ...ಇಷ್ಟು ವರ್ಷ ನಿನಗೋಸ್ಕರ ಕಾಯ್ತಾ ಇದ್ದೆ...ಫೋನಲ್ಲಿ ಮಾತಾಡುವಾಗಿನ ಬಹುವಚನ ಈಗ ಏಕವಚನಕ್ಕೆ ತಿರುಗಿತ್ತು.ಹೇಳುತ್ತಿದ್ದಾಳೆ..ವಿರಹವೇದನೆಯಲ್ಲೇ ಕ್ಷಣಕ್ಷಣವೂ ಬೆಂದು ‘ನೀರಸ’ವಾಗಿದ್ದೆ.ನಿನ್ನಾಗಮನಕ್ಕಾಗಿ ಮನಸ್ಸು ತವಕಿಸುತ್ತಿತ್ತು.ಈಗ ‘ನೀ’ಬಾಳ‘ರಸ’ವಾಗಿ ಬಂದಿದ್ದೀಯಾ..ನಿನ್ನ ದೇಹದ ಬಿಸಿಗೆ ಬೆಣ್ಣೆಯಾಗಬೇಕೆಂದಿದ್ದೇನೆ...ಸಿದ್ದಾರ್ಥ ಬೇರೇನೋ ಯೋಚಿಸುತ್ತಿದ್ದಾನೆ,ಅವಳು ಹೇಳುತ್ತಲೇ ಇದ್ದಾಳೆ.ನಿನ್ನ ಸ್ಪರ್ಶದ ಪಾಶದಲ್ಲಿ ಖೈದಿಯಾಗಬೇಕೆಂದಿದ್ದೇನೆ,ಬಾ ಬಂಧಿಸು ನಿನ್ನ ತೋಳ್ಗಳಿಂದ...ಅವನನ್ನು ತಬ್ಬಲು ಮುಂದಾಗುತ್ತಾಳೆ.ಅವಳ ಕೈಗಳಿಂದ ಬಿಡಿಸಿಕೊಂಡು,ಸಿದ್ದಾರ್ಥ ಎದ್ದುನಿಲ್ಲುತ್ತಾನೆ.ಸ್ವಪ್ನಾ...ಆತ ಕರೆದ.ಆಹಾ!ಎಂಥ ಮಧುರ ಗಂಭೀರ ಧ್ವನಿ...ಧ್ವನಿಯಲ್ಲಿ ಅದೆಂಥ ಸಂಗೀತದ ನಾದವಿದೆ!..ಸ್ವಪ್ನಾ ಮನದಲ್ಲೇ ಯೋಚಿಸುತ್ತಿದ್ದಾಳೆ.ಸ್ವಪ್ನಾ...!ಇದೇನ್ ಮಾಡ್ತಾ ಇದ್ದೀಯಾ?ತಂದೆಯ ಶವವನ್ನು ಸುಟ್ಟುಬಂದು ಮಾಡಿದ ಸ್ನಾನದ ಮೈಯಿನ್ನೂ ಒಣಗದೇ ಹಸಿಯಾಗಿಯೇ ಇದೆ.ಸೂತಕದ ಮೂಕಸಾಕ್ಷಿಯಾಗಿ ಇಡೀ ಊರು ಶೋಕಿಸುತ್ತಿದೆ.ಇಂಥ ಸಮಯದಲ್ಲಿ ನಿನಗೆ ಪ್ರಣಯದ ಗುಂಗೇ?ಸ್ವಪ್ನಾ..ನಿನಗೆ ತಿಳಿದೇ ಇದೆ..ರಘುನಾಥರ ಒಬ್ಬನೇ ಮಗ ನಾನು.ಲಕ್ಷ ಲಕ್ಷ ಸಂಬಳ ಎಣಿಸುತ್ತಿದ್ದ ನಾನು,ಈ ಎಲ್ಲವುಗಳನ್ನು ತ್ಯಜಿಸಿದ್ದೇನೆ.ತಿಳಿದೇ ಇದೆ ಅಲ್ವಾ?ಐಹಿಕ ಲಾಲಸೆಗಳನ್ನು ಮೋಹಿಸದೆ ಪಾರಮಾರ್ಥಿಕ ಪಾರಮ್ಯದೆಡೆಗೆ ನಡೆಯುತ್ತಿರುವವನು ನಾನು..ಸಂಸಾರದ ಎಲ್ಲ ಬಾಂಧವ್ಯಗಳ ಸಂಕೋಲೆಗಳನ್ನು ಹರಿದು,ಕಿತ್ತೆಸೆದು ಸನ್ಯಾಸಿಯಾಗಬಯಸಿದವನು ನಾನು...ಬುದ್ಧನಾಗಬೇಕೆಂದಿದ್ದೇನೆ!ನನ್ನಲ್ಲಿ ನಿನಗದೆಂಥ ಕಾಮ?ಆತ ಪ್ರಶ್ನಿಸುತ್ತಾನೆ.ಮಾವ..ನೀನು ನನ್ನವನಾಗಬೇಕೆಂದು ಪರಿತಪಿಸುತ್ತಿದ್ದವಳು ನಾನು...ಈ ಸಮಯವನ್ನು ನಾನು ಕಳೆದುಕೊಂಡರೆ,ನೀ ನನಗೆಂದೆಂದೂ ಮತ್ತೆ ಸಿಗುವುದೇ ಇಲ್ಲ.ನಿನ್ನ ಪಡೆದುಕೊಳ್ಳಲಿಕ್ಕೆ ನನಗಿರುವುದು ಈ ಕಾಲವೊಂದೇ...!ಒಬ್ಬ ಹೆಣ್ಣಾಗಿಯೂ ನನ್ನೆಲ್ಲಾ ನಾಚಿಕೆಗಳನ್ನು ಬಿಟ್ಟು ನಿನ್ನಲ್ಲಿಗೆ ಬಂದಿದ್ದೇನೆ.ಮದನನ ಮೋಹದ ಕುಸುಮಶರವು ನನ್ನ ಅಂಗಾಂಗಗಳಲ್ಲಿ ಕಚಗುಳಿಯಿಡುತ್ತಿದೆ.ಬಾ,ನಿನ್ನನ್ನು ಸುಂದರ ಸ್ವಪ್ನಗಳ ಮಾಯಾಲೋಕದಲ್ಲಿ ತೇಲಾಡಿಸುತ್ತೇನೆ.ಹಪಹಪಿಸುವ ಯೌವನದ ಪರಿಮಳದಲ್ಲಿ ಹೊರಳಿಸುತ್ತೇನೆ.ಹಿತವಾಗಿ,ಮೃದುವಾಗಿ,ಸುಖವಾಗಿ ನರಳಿಸುತ್ತೇನೆ!ಏನಂದೆ ನೀನು?ಬುದ್ಧನಾಗಬೇಕೆಂದಿದ್ದೇನೆ,ಎಂದಲ್ಲವೇ?ಬುದ್ಧನಾಗಬಹುದು...ಆಗು,ನನ್ನದೇನೂ ಅಭ್ಯಂತರವಿಲ್ಲ!ಆದರೆ..ಈಗ ಬುದ್ಧನಾಗುವುದಕ್ಕಿಂತ ಮೊದಲಿನ ಸಿದ್ದಾರ್ಥನಾಗು,ಸಾಕು...ಆ ಸಿದ್ದಾರ್ಥ ಸಂಸಾರದ,ಸಂಭೋಗದ ಎಲ್ಲ ಸುಖಗಳನ್ನೂ ಅನುಭವಿಸಿದ್ದನಲ್ಲವೇ?ನನ್ನೊಡಲ ಮೋಹದ ಕಿಚ್ಚನ್ನು ತಣ್ಣಗಾಗಿಸು ಬಾ..ಹೇಳುತ್ತಾಳೆ ಸ್ವಪ್ನಾ.ತರಳೆ!..ಹ್ಹಹ್ಹಹ್ಹಾ...ಒಡಕು ಬಿಂಬಗಳ ಮುರುಕು ಸ್ವಪ್ನದ ದರ್ಶನ ನನಗೆ ಬೇಕಿಲ್ಲ.ಪೌರ್ಣಿಮೆಯ ಪೂರ್ಣಚಂದ್ರಪ್ರಭಾಬಿಂಬಕ್ಕಾಗಿ ಕಾತರಿಸುತ್ತಿರುವವನು ನಾನು..ಸ್ವಪ್ನ ಎಂಬ ಕಾಲ್ಪನಿಕ ಮಾಯೆಯ ಹಂಗು ನನಗೆ ಬೇಕಿಲ್ಲ ಕೂಡಾ..!ಸ್ವಪ್ನದಲ್ಲಿ ಕಂಡ ಸುಪ್ತ ಮನಸ್ಸಿನ ಸಂಗತಿಗಳು ಕೇವಲ ಕಾಲ್ಪನಿಕವೂ ಆಗಬಹುದಲ್ಲವೇ?ಸತ್ಯವೇ ಆಗುತ್ತವೆ ಎಂದೇನಿಲ್ಲವಲ್ಲ.ಸತ್ಯವಾಗಲೇಬೇಕು ಎಂದೂ ಕೂಡಾ ಇಲ್ಲ ಅಲ್ಲವೇ?ನಾನು ರುಥದ ಹುಡುಕಾಟದಲ್ಲಿದ್ದೇನೆ.ಸುಪ್ತ ಮನಸ್ಸು ಕೂಡಾ ಜಾಗೃತವಾಗಲೆಂದೇ ಕಾತರಿಸುತ್ತಿದ್ದೇನೆ.ಆ ಋತುವಿಗಾಗಿ ಕನವರಿಸುತ್ತಿದ್ದೇನೆ.ಸಾಧಿಸಬೇಕಾಗಿದೆ ಸತ್ಯವನ್ನು!..ಆರಾಧನೆಯೆಂಬುದು ಸನಾತನವೂ ಹೌದು,ನೂತನವೂ ಹೌದು.ಅದು ನಮ್ಮೊಳಗೆ ತಾನಾಗೇ ಸ್ಫುರಿಸಿಬರಬೇಕು.ಕಾಮವನ್ನು ಪುರುಷಾರ್ಥಗಳ ಮುಖೇನ ನೋಡು.ವಿಕೃತ ಆಸೆಗಳಿಗೆಲ್ಲ ಒಂದು ಶುಭದ ಸಂಕ್ರಮಣ ಬರಲಿ.ಗಂಡು ಹೆಣ್ಣಿನ ಮಧ್ಯೆ ಇರುವ ಮೋಹದ ಗೆರೆಯನ್ನು ದಾಟಿ ಈಚೆ ಬಾ..ಸನ್ಯಾಸಿಯಾಗುವಾಗ ನಮ್ಮ ಅಪರಕ್ರಿಯೆಗಳನ್ನು ನಾವೇ ಮಾಡಿಕೊಂಡು,ಈ ಲೋಕದಿಂದ ಬಿಡುಗಡೆ ಹೊಂದುತ್ತೇವೆ.ಈ ಕಳೇಬರದೊಂದಿಗೆ ನಿನಗದಾವ ಸುಖ?ಪೈಶಾಚಿಕ ಆನಂದಕ್ಕಾಗಿ ಹಾತೊರೆಯುತ್ತೀಯಾ?ಬದುಕನ್ನು ನಂಬು,ಪ್ರೀತಿ ಸಿಗುತ್ತದೆ.ಪ್ರೇಮ ಕಾಮದ ಸಂಘರ್ಷದಲ್ಲಿ ಮೂಕವಾಗಿ ತಿಕ್ಕಾಟಕ್ಕೆ ಒಳಗಾಗಿ ಸುಕ್ಕಾಗಬೇಡ..!ಸ್ಫುಟವಾಗು...ಹೋಗು,ಒಂದೊಳ್ಳೆಯ ಬದುಕು ಕಟ್ಟಿಕೋ..ಅತ್ಯಂತ ಪ್ರಶಾಂತನಾಗಿ ಅಷ್ಟೇ ಪ್ರಬುದ್ಧನಾಗಿ ಸಿದ್ದಾರ್ಥ ಹೇಳಿದ.ಸ್ವಪ್ನಾ ಅಳುತ್ತಾ ಹೊರಗೋಡಿದಳು.ಸಿದ್ದಾರ್ಥ ಯೋಚಿಸುತ್ತಲೇ ಇದ್ದ...ಮನುಷ್ಯ ತುಡಿತುಡಿವ ಕ್ಷಣಿಕತೆಗಾಗಿ ಅದೆಷ್ಟು ಹಂಬಲಿಸುತ್ತಾನೆ.ಸೂತಕದ ಜಾಗದಲ್ಲೂ ಸಂಭೋಗದ ಸಂಭ್ರಮಕ್ಕಾಗಿ ಅದೆಷ್ಟು ಹಪಹಪಿಸುತ್ತಾನೆ!!ಆದಷ್ಟು ಬೇಗ ಈ ಭೀಕರ ಸಂಸಾರದಂಗಳದಿಂದ ದೂರಾಗಿಬಿಡಬೇಕು...!!
         ಬಾನಲ್ಲಿ ಶಶಿ ಅಸ್ತಮಿಸೆ,ದಿನಮಣಿಯು ತೊದಲುತ್ತ ಬಂದ!ಇತ್ತ ಸಿದ್ದಾರ್ಥ ಹೊರಟುನಿಂತಿದ್ದಾನೆ.ತಾಯಿ ಜಾನಕಿಯ ಅತ್ತೂ ಅತ್ತೂ ಕೆಂಪಾದ ಕಣ್ಣುಗಳಿನ್ನೂ ಸಹಜ ಸ್ಥಿತಿಗೆ ಬಂದಿರಲಿಲ್ಲ.ಮತ್ತೆ ಬೊಬ್ಬಿಡುತ್ತಿದ್ದಾಳೆ....ಹೆತ್ತ ತಾಯಿಯನ್ನು ಒಬ್ಬಂಟಿಯಾಗಿ ಬಿಟ್ಟು,ಮತ್ತೆಲ್ಲಿಗೋ ಹೋಗಿ,ಅರ್ಥವಾಗದ ಪ್ರಶ್ನೆಯ ಕಗ್ಗಂಟಾಗಿ ಯಾಕೆ ಉಳಿಯುತ್ತೀಯಾ? ಎಲ್ಲರೂ ಹೆತ್ತವರ ಋಣ ತೀರಿಸಲು ಹೆಣಗುತ್ತಾರೆ.ಆದರೆ,ನೀನು..ಥೂ...ಹೆತ್ತವರ ಹೆಣ ಕೆಡವಲು ಹವಣಿಸುತ್ತಿದ್ದೀಯಲ್ಲಾ!ನಿನ್ನ ಕೊರಗಿನಲ್ಲೇ ನಿನ್ನ ತಂದೆ ಪ್ರಾಣ ಬಿಟ್ಟರು.ಅವರ ಸಾವಿಗೆ ನೀನೇ ಕಾರಣವಾದೆ!ಸಾಯುವಾಗಲೂ ಅವರು "ನನ್ ಮಗ" ಅಂತಾನೇ ಸತ್ತೋದ್ರು.ಈಗ ನಿನ್ನ ತಾಯಿಯ ಸಾವಿಗೂ ನೀನೇ ಕಾರಣವಾಗುತ್ತೀಯಾ?.ದಯವಿಟ್ಟು ಹೇಳಿಬಿಡು,ಇನ್ನೆಷ್ಟು ಜೀವಗಳ ಬಲಿಗಾಗಿ ನೀನು ಪರಿತಪಿಸುತ್ತಿದ್ದೀಯಾ?..ಸನ್ಯಾಸಿಯಂತೆ!ಹೆತ್ತವರ ಒಡಲಲ್ಲಿ ಬೆಂಕಿಯಿಟ್ಟು ತಪ್ತವಾಗುವುದೆಂಥ ತಪಸ್ಸು?!ಹೆತ್ತ ತಾಯಿಗಿಂತ ಮೊನ್ನೆ ಮೊನ್ನೆ ಹುಟ್ಟಿಕೊಂಡ ಸನ್ಯಾಸದ ಆಸೆಯೇ ಸತ್ವವಾಯಿತಾ?ನವಮಾಸಗರ್ಭದ ಋಣ,ಬುದ್ಧಿ ಬಲಿತು ಮಾಗುವವರೆಗಿನ ಅನ್ನದ ಋಣ,ಮತ್ತೆ ಮತ್ತೆ ನೆನಪಾಗುವ ವಾತ್ಸಲ್ಯದ ಋಣ,ಕಲ್ಮಶವೇ ಗೊತ್ತಿರದ ಆ ಪ್ರೀತಿಯ ಋಣ..ಈ ಎಲ್ಲವುಗಳ ಲೆಕ್ಕ ಚುಕ್ತಾ ಆಯಿತೇ?ಅಥವಾ ಇವೆಲ್ಲ ಗೌಣವಾದವೇ?ಸತ್ಯ ಸತ್ಯ ಎಂದು ಸಂಭ್ರಮಿಸುತ್ತೀಯಲ್ಲಾ,ತವಕಿಸುತ್ತೀಯಲ್ಲಾ,ತಾಯಿ ಎನ್ನುವವಳೂ ಕೂಡಾ ಒಂದು ಸುಳ್ಳಾದಳೇ ಹಾಗಾದರೆ?...ನಿನ್ನ ಆ ಸತ್ಯದ ಪಟ್ಟಿಯಲ್ಲಿ ತಾಯಿ ಎನ್ನುವವಳೊಬ್ಬಳಿಲ್ಲವೇ ಹಾಗಾದರೆ?ನಿನ್ನ ಆ ಸಂಭ್ರಮದ ಸರಹದ್ದಿನಲ್ಲಿ ತಾಯಿ ಎನ್ನುವವಳು ಸತ್ಯದ ಸಂಭ್ರಮವಾಗಲೇ ಇಲ್ಲವೇ ಹೇಳು ಸಿದ್ದಾರ್ಥ ಹೇಳು...ಹೇಳು ಕಂದಾ...!ಅಮ್ಮಾ..ಸಿದ್ದಾರ್ಥ ಅರುಹತೊಡಗುತ್ತಾನೆ...ಮಹಾತ್ಮನಾಗಲು ಹೊರಟ ಈ ನಿಮ್ಮ ಮಗನನ್ನು ನೋಡಿ ಹರಸಬೇಕಾಗಿತ್ತು ನೀವು!ಆದರೆ?...ಅಮ್ಮಾ,ಸಮಾಧಿಯಾದ ಸಂಗತಿಗಳ ಮುಂದೆ ಹಣತೆ ಹಚ್ಚಿಬಿಡಿ ಅಮ್ಮಾ,ಬೆಳಕಾದರೂ ತುಂಬಿಕೊಳ್ಳುತ್ತದೆ.ಯಾರ ಗೋರಿಯ ಮೇಲೂ ಆತನ ಸಂಸಾರದ ವರದಿಯಿರುವುದಿಲ್ಲ.ಯಾರನ್ನು ಸುಡಬೇಕಾದರೂ,ಆತನ ಜೊತೆ ಆತನ ಪತ್ನಿ,ಮಕ್ಕಳ್ಯಾರೂ ಬೂದಿಯಾಗಲು ಚಿತೆಯನ್ನಲಂಕರಿಸುವುದಿಲ್ಲ ಅಲ್ಲವೇನಮ್ಮಾ?ಬದುಕಿನ ಸಾರದ ಪೂರ್ಣರೂಪವೇ ಅಲ್ಲವೇನಮ್ಮಾ ಮೋಕ್ಷ!ಸನ್ಯಾಸವೆಂಬುದು ಸಾಮಾನ್ಯವಲ್ಲಮ್ಮ...ಸಹಸ್ರ ಸಹಸ್ರ ಜನುಮಗಳ ಸುಕೃತಗಳ ಸಾರದ ಅಮೂರ್ತ ರೂಪದ ಮೂರ್ತ ಜನುಮ ಕಣಮ್ಮಾ...ಸಂತನಾಗುವುದೆಂದರೆ,ಬದುಕಿನ ವಸಂತವಮ್ಮಾ!...ಹೇಳುತ್ತಿದಾನೆ ಸಿದ್ದಾರ್ಥ...ಬಾಯ್ಮುಚ್ಚು,ಹೆತ್ತ ತಾಯಿಯ ಬದುಕಿಲ್ಲಿ ಧಗಧಗಿಸುತ್ತಿರುವಾಗ ನಿನಗದೆಲ್ಲಿಯ ವಸಂತ?ಶಂಕರರೂ ಸನ್ಯಾಸಿಗಳಾದರು.ಆದರೆ,ಶಂಕರರು ತಾಯಿಯ ಅಣತಿಯನ್ನು ಪಡೆದೇ ಸನ್ಯಾಸಿಯಾದರು.ಸರ್ವಸಂಗಪರಿತ್ಯಾಗಿಯಾದ ಮೇಲೂ ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಆಗಮಿಸಿದರು...ನಮ್ಮ ಈ ಜನಾಂಗ,ನಮ್ಮ ಈ ಪರಂಪರೆ,ನಮ್ಮ ಈ ಪುರಾಣೇತಿಹಾಸಗಳು ಜಡಚೇತನಗಳಲ್ಲೂ ಕೂಡಾ ಮಾತೃತ್ವವನ್ನು ಕಂಡಿವೆ.ಮಾತೃತ್ವವನ್ನು ಆದಿಶಕ್ತಿ ಎಂದು ಆರಾಧಿಸುತ್ತಿವೆ.ಈ ಎಲ್ಲ ಮಹಾನ್ ಮಹಾನ್ ಮಹಾತ್ಮೆಗಳಿಗಿಂತ ದೊಡ್ಡವನೇನಲ್ಲವಲ್ಲ ನೀನು!ಹೆತ್ತವರನ್ನೇ ಸರಿಯಾಗಿ ಪಾಲಿಸದ ನೀನು,ಜಗತ್ತಿಗೇನು ಕೊಡಬಲ್ಲೆ?ಸಚ್ಚಿದಾನಂದಸ್ವರೂಪವೇನೆಂದರೇನೆಂದರಿಯದ ಪಾಮರಳು ನಾನೆಂದುಕೊಂಡೆಯಾ?ಸಂಸಾರದೊಳಗೊಮ್ಮೆ ಧುಮುಕಿ ನೋಡು.ತೀರವಿರದ ಆ ಸಾಗರದಲ್ಲಿ ಈಜುವುದೇ ಒಂಥರದ ರೋಮಾಂಚನ!..ಕ್ಷಣಕ್ಷಣವೂ ಮೈದಡವುವ ಪ್ರೀತಿಯ ಆಲಿಂಗನ!..ನಮ್ಮ ನಮ್ಮ ತೀರಗಳನ್ನು ನಾವು ನಾವೇ ಸೃಷ್ಟಿಸಿಕೊಳ್ಳುವಂತೆ ಮಾಡುವುದೇ ಅದರ ಜಾಯಮಾನ..!ಸತ್ತ ನಂತರದ ಮೋಕ್ಷಕ್ಕಿಂತ ಬದುಕಿನೊಳಗಿನ ಐಕ್ಯ ಚೆಂದ,ಅಲ್ಲವೇ?ಮೋಕ್ಷ ಸಿಗುತ್ತದೋ ಇಲ್ಲವೋ ತಿಳಿದವರಾರು?ಆದರೆ,ನೆಚ್ಚಿಕೊಂಡ ಹಚ್ಚಿಕೊಂಡ ಬದುಕಿನಲ್ಲಿ ಪ್ರೀತಿ ಸಿಗುತ್ತದೆ.ಆ ಪ್ರೀತಿಯಲ್ಲೇ ನೀ ಹುಡುಕುವ ಸಚ್ಚಿದಾನಂದ ಸ್ವರೂಪವಿದೆ...ದೀಪ ಹಚ್ಚುವುದು ಸುಲಭ.ಆದರೆ,ಆರದಂತೆ ನೋಡಿಕೊಳ್ಳುವುದು ಕಷ್ಟ ಕಣೋ!..ಸಂಸಾರವೆಂಬುದು ಒಂದು ಸುಂದರ ಅನುಭೂತಿ!ಅನುಭವಿಸಿ ನೋಡು,ಅರ್ಥವಾಗುತ್ತದೆ!!ಅರ್ಥಗಳು ತಾನಾಗಿ ಹುಟ್ಟುವುದಿಲ್ಲ.ಅವುಗಳ ಸೆಲೆಗಳಿಗಾಗಿ ಅನ್ವೇಷಿಸಬೇಕು.ಅವುಗಳ ಹುಟ್ಟಿಗಾಗಿ ಧೇನಿಸಬೇಕು.ಹೋಗ್ಬೇಡ್ವೋ...ಅಂತ ಜಾನಕಿ ಸಿದ್ದಾರ್ಥನ ಕಾಲಗಳನ್ನು ಹಿಡಿದುಕೊಂಡಳು.ಅಮ್ಮಾ!ಇದೇನ್ ಮಾಡ್ತಾ ಇದ್ದೀರಿ,ನೀವು?ದೇವತೆಯ ಪ್ರತಿರೂಪದಂತಿರುವ ತಾಯಿ,ಮಗನ ಕಾಲನ್ನೆಲ್ಲಾ ಹಿಡಿಯಬಾರದಮ್ಮಾ...ಅಂತ ಹೇಳುತ್ತಾ,ಮನೆಯ ಹೊಸ್ತಿಲೆಡೆಗೆ ಬಂದ.ತನ್ನ ಕೈಲಿದ್ದ ಚೀಲವನ್ನು ತೆಗೆದು,ಅಲ್ಲೇ ಕೆಳಗಿಟ್ಟು,ದೇಹದ ಅರ್ಧಭಾಗ ಮನೆಯ ಒಳಗೂ,ಇನ್ನರ್ಧ ಭಾಗ ಮನೆಯ ಹೊರಗೂ ಇರುವಂತೆ,ಹೊಸ್ತಿಲ ಮೇಲೆ ಕಣ್ಮುಚ್ಚಿ ಕುಳಿತುಬಿಟ್ಟ.ಆಚೆ ಹೋಗಲೋ,ಇಲ್ಲೇ ಇರಲೋ ಎಂಬ ದ್ವಂದ್ವ ಮನಸ್ಥಿತಿ..ಮನಸ್ಸು ಡೋಲಾಯಮಾನವಾಗತೊಡಗಿತ್ತು...ತಂತಾನೇ ಕಣ್ಣಿಂದ ಎರಡು ಹನಿ ಉದುರಿತ್ತು.ಪಶ್ಚಾತ್ತಾಪಕ್ಕೋ,ಅಥವಾ ಸನ್ಯಾಸದ ಪರಿತಾಪಕ್ಕೋ ತಿಳಿಯುತ್ತಿಲ್ಲ.ಆದರೆ,ಸ್ವಪ್ನಾ ಓಡಿಬಂದು,ಆತನ ಕೆನ್ನೆಯ ಮೇಲಿಂದಿಳಿದ ನೀರಿನ ಬಿಂದುಗಳನ್ನು ತನ್ನ ಬೊಗಸೆಯಲ್ಲಿ ಹಿಡಿದಳು.ಬದುಕಿಗೆ ಬೇಕಿರುವುದೂ ಕೂಡಾ,ಕಣ್ಣೀರೊರೆಸುವ ಕೈಗಳೇ ಅಲ್ಲವೇ?ಆತ ಕಣ್ಮುಚ್ಚಿ ಹೊಸ್ತಿಲ ಮೇಲೆ ಹಾಗೇ ಪದ್ಮಾಸನದಲ್ಲಿಯೇ ಕುಳಿತಿದ್ದ..ದಾರಿಯಲ್ಲಿ ಹೋಗುತ್ತಿದ್ದ ಭೈರಾಗಿಯೊಬ್ಬ ಇವನನ್ನು ನೋಡಿ ನಗುತ್ತಾನೆ..ಸಂಸಾರವೇ ಹಾಗೆ..ಮರಳಿ ಮರಳಿ ಸುತ್ತಿಕೊಳ್ಳುವ ಮಾಯಾವರ್ತುಲ..ಮನಸ್ಸು ಪಕ್ವವಾಗಬೇಕು..ನಮ್ಮೊಳಗಿನ ನಮ್ಮಲ್ಲಿ ನಾವು ಒಂದಾಗಬೇಕು..ಸನ್ಯಾಸ ಸುಲಭವಾಗಿ ದಕ್ಕುವಂಥದ್ದಲ್ಲ..!!ವೈರಾಗ್ಯದ ಮೇಲೆ ಅನುರಾಗವುದಿಸಬೇಕು...ಎಲ್ಲರಿಗೂ ಒದಗದ ಈ ಸುಯೋಗದಿಂದ ಆತನನ್ನು ಈ ಜನ ವಂಚಿಸುತ್ತಿದ್ದಾರೆ...ನಶ್ವರತೆ ಅರಿವಾಗುವುದರೊಳಗೆ ಆಚೆಗಿನ ತೀರ ತಲುಪುವುದು ಸ್ವಪ್ನವೇ ಆಗಿಹೋಗುತ್ತದೆ..ಋತು ಚಕ್ರ ಮರಳಿ ಮರಳಿ ತಿರುಗುತ್ತಿದೆ,ತಿರುಗುತ್ತಲೇ ಇರುತ್ತದೆ...ಹ್ಹಹ್ಹಹ್ಹಾ..ಹ್ಹಹ್ಹಹ್ಹಾ...ಎನ್ನುತ್ತಾ ಆ ಭೈರಾಗಿ ಮತ್ತೆ ಈ ಮನೆಯತ್ತ ತಿರುಗಿಯೂ ನೋಡದೇ ಹಾಗೇ ನಡೆದುಬಿಟ್ಟ..ಸಿದ್ದಾರ್ಥ ಹಾಗೆಯೇ ಕುಳಿತಿದ್ದಾನೆ...ಒಂದು ಕಡೆ ಬುದ್ಧನಾಗುವ ಮನಸ್ಸು ಹೊತ್ತು..ಇನ್ನೊಂದೆಡೆ ಸಂಸಾರಸ್ವಪ್ನದ ಖೈದಿಯಾಗಿದ್ದಾನೆ;ನೆನೆದು ಅಮ್ಮನ ಕೈತುತ್ತು..!!...


                                                                                                 ~‘ಶ್ರೀ’
                                                                                                   ತಲಗೇರಿ

ಮಂಗಳವಾರ, ಮೇ 8, 2012


                    "ವಿಸ್ಮಯ"....


         ಕಟ್ಟಿರುವ ಪ್ರತಿ ಗೋರಿಗೂ
         ಭೂತಲೋಕದ ಕತೆಯಿದೆ
         ಹಬ್ಬಿರುವ ಪ್ರತಿ ಬಳ್ಳಿಗೂ
         ಕರಗೋ ಕಾಲನ ನೆನಪಿದೆ!

         ಬೆಳೆವ ಬಳ್ಳಿಗೂ
         ಸರಿದ ನೆರಳಿಗೂ
         ವರ್ತಮಾನವೇ ಕೈಸೆರೆ!
         ಸನಿಹ ಸಂಭ್ರಮ ವಿರಹ ವಿಭ್ರಮ
         ಎಲ್ಲ ಚೆಲುವಿಗೂ
         ಪ್ರೀತಿಯೊಂದೆಯೇ ಆಸರೆ!

         ಸತ್ತಿರುವ ಪ್ರತಿ ರಾತ್ರಿಗೂ
         ಸೂರ್ಯ ಹುಟ್ಟದ ವ್ಯಥೆಯಿದೆ
         ಅತ್ತಿರುವ ಪ್ರತಿ ಕಣ್ಣಲೂ
         ತಂಪು ಚಂದ್ರನ ಸುಳಿವಿದೆ!...

         ಮರಳಿ ಬರೆಯುವ
         ಸುರುಳಿ ರೇಖೆಗೆ
         ಸ್ಪರ್ಶವೊಂದೆಯೇ ಸಾಕಿದೆ!
         ಪರದೆಯೊಳಗೆ ಮೂಕ ಹೆರಿಗೆ
         ಪರಿಧಿ ಬಿರಿಯಲು
         ಸಾವೇ ಹೆದರಿದೆ ಕಾಂತಿಗೆ!!...


                                   ~‘ಶ್ರೀ’
                                     ತಲಗೇರಿ

ಮಂಗಳವಾರ, ಮೇ 1, 2012


                 "ಸರಿದ ನೆರಳ ದಾರಿಯಲ್ಲಿ"...


                ಮುಸುಕು ಕವಿದ ಇರುಳ ಸಮಯ
                ನೋಡದಿರಿ ನನ್ನ ಮುಖವ ಇಣುಕಿ
                ಉಸಿರ ಬಿಸಿಯ ತಣಿಸೋ ಹೃದಯ
                ಕಾಡದಿರು ಮತ್ತೆ ನೆನಪ ಕೆದಕಿ...

                ಚಂದ್ರನಿಲ್ಲ ಬಾನಿನಲ್ಲಿ
                ಹಾಗೇ ನರಳಿದೆ ಕೊನೆಗೆ
                ಸುಳಿದು ಕರಿಮೋಡ!
                ಮಣ್ಣಕಣ್ಣ ಗುಂಗಿನಲ್ಲಿ
                ನೋಟ ನೆರಳ ಬದಿಗೆ
                ತೆಗೆದು ಮುಖವಾಡ!!..

                ಉಳಿಯಲಿಲ್ಲ ದೀಪದಲ್ಲಿ
                ಹಾರಿ ಉದುರಿದ ಮಿಡತೆ
                ಉರಿದು ಬರಿಬೇಗೆ
                ಬಣ್ಣಬಣ್ಣ ಸೋಗಿನಲ್ಲಿ
                ಸಾವ ಬರೆದಿದೆ ಚರಿತೆ
                ಬೆಳಕು ಅರಿವಾಗೆ!

                ಸರಿದ ನೆರಳ ದಾರಿಯಲ್ಲಿ
                ನಡೆವ ನಾನು ಅನಾಮಿಕ
                ಗೆಳತಿ ನಿನ್ನ ಪ್ರೀತಿಯಲ್ಲಿ
                ಸ್ಫುರಿತ ನಾ ಚೆಂದ ರೂಪಕ..

                ಗುರುತಿಸಬಲ್ಲೆ ನೀನು ಮಾತ್ರ
                ರಾಗಭರಿತ ನನ್ನ ಮೊಗವ
                ಹೊಸೆಯಬಲ್ಲೆ ಹೊಸತು ಸೂತ್ರ
                ಒಂದು ಮಾಡಿ ಕವಲು ಕವಲು ಭಾವ..!


                                              ~‘ಶ್ರೀ’
                                                ತಲಗೇರಿ

ಶುಕ್ರವಾರ, ಏಪ್ರಿಲ್ 27, 2012


                       "ಆ ತಂಗಿಗೆ"....


               ಬರೆವ ಬಿಳಿ ಹಾಳೆಯ ಮೇಲೆ
               ನಿನ್ನ ಸಹಿಯ ಮೆರವಣಿಗೆ!
               ಬಿರಿದ ನನ್ನೆದೆಯ ತುಂಬ
               ನಿನ್ನದೇ ನೆನಪುಗಳ ಹಳೆ ನಡಿಗೆ...

               ಅಳಿಯಲಿಲ್ಲ ಅಳೆದುಹೋದ
               ಬೃಂದಾವನದ ಪರಿಮಳ
               ಕಳೆಯಲಿಲ್ಲ ತಳೆದುಹೋದ
               ಮನಸುಗಳ ನಿಜ ತಳಮಳ

               ಅಳುವ ಕಂಗಳ ಅಂಚ ತುಂಬ
               ಸುಳಿಯುತಿವೆ ಅವಳ ಬಿಂಬ
               ಬಿಳಿಯ ಬದುಕಿಗೆ ಬಣ್ಣ ಬಳಿದು
               ನಲಿಯಬೇಕೇ ಕನಸು ಎಂದು?

               ಕಟ್ಟಿದಾ ಗೂಡೊಳಗೆ ಹಕ್ಕಿಯಿಲ್ಲ
               ಗೂಡು ಇನ್ನು ಜಂಟಿಯಲ್ಲ!
               ಬೆಳಕಿಲ್ಲದಾ ಅರಮನೆಯ ಪಾಡು
               ಸ್ವರವಿರದೆ ಸತ್ತಿದೆ ಗೂಡಿನಾ ಹಾಡು!

               ಸೂತಕದ ಮೌನದ ಸದ್ದಿಗಿಂತ
               ಸಾವಿರ ಸಾವಿನಾ ಜಿದ್ದೇ ಚೆಂದ!
               ಪ್ರೀತಿಯಾ ಪರಿಧಿಯಾ ಬೇಲಿಯಲ್ಲಿ
               ಅರಳಿ ಮಿಡಿಯಲಿ ಭ್ರಾತೃ ಬಂಧ!!...


                                                 ~‘ಶ್ರೀ’
                                                   ತಲಗೇರಿ

ಸೋಮವಾರ, ಏಪ್ರಿಲ್ 23, 2012


                   "ಸೋದರಿಗೆ".....


             ಸೋತುಬಿಟ್ಟೆ ಕಣೇ
             ನೆನಪುಗಳ ಕದನದಲ್ಲಿ
             ಮನಸುಗಳ ಮಿಲನದಲ್ಲಿ
             ಅರ್ಥವಿಲ್ಲದ
             ಭಾವರಸಕೂಟದಲ್ಲಿ!
             ಕಳೆದುಹೋದೆ ನನ್ನಲ್ಲೇ
             ತಂಗಿ ನಿನ್ನ
             ಹಠದ ಮುನಿಸಿನಲ್ಲಿ...

             ಬರಿಯ ಜೋಳಿಗೆಯೆಂದು
             ಈ ಜಂಗಮನ ನೀ ತೊರೆದುಬಿಟ್ಟೆ
             ತಿಳಿದಿಲ್ಲ ನಿನಗೆ
             ತುಂಬಬಹುದು ಅದರೊಳಗೂ
             ಹೋಳಿಗೆಯನ್ನ
             ಕಟ್ಟಬಹುದು ಅಮೂರ್ತ
             ಪ್ರೀತಿ ಮಳಿಗೆಯನ್ನ
             ತೆರೆಯಬಹುದು
             ನಾಳೆಗಳ ಬಾಗಿಲನ್ನ...

             ನರಳುತಿದೆ ಬಿಸಿಯುಸಿರು
             ನಿತ್ಯ ಕಾಡುತಿದೆ ಮೌನ
             ಬೇಡುತಿದೆ ಈ ಬಸಿರು
             ಕೊಂದುಬಿಡು ನನ್ನನ್ನ
             ಉಸಿರ ಕಸಿಯುವ ಮುನ್ನ
             ಇಲ್ಲಾ,
             ಅಪ್ಪಿಬಿಡು ನನ್ನನ್ನ
             ಮುನಿಸು ಮಾಗುವ ಮುನ್ನ..!!

             ತಿಳಿದಿಹುದು ನಿನಗೂ
             ಸೆಲೆಯಿಂದ ನೆಲೆವರೆಗೂ
             ಪ್ರೀತಿ ಸೇತುವೆ ಬೇಕು
             ನದಿಯೇ ಸೇತುವೆಯಾಗಿ
             ಸೇತುವೆಯೇ ಒಲವ ಜಲವಾಗಿ
             ನಿತ್ಯಗಾಮಿನಿಯಾಗಬೇಕು..
             ಸೋಕಿಬಿಡು ಹೀಗೊಮ್ಮೆ
             ಪ್ರೀತಿ ಆರುವ ಮುನ್ನ..
             ಕಾಯುತಿಹ ನಿನ್ನಣ್ಣ
             ಮುಗ್ಧ ಮೃದುಸ್ಪರ್ಶವನ್ನ...




                                         ~‘ಶ್ರೀ’
                                           ತಲಗೇರಿ

                         ‘ರವಿ’ತೆ...!!!


                    ಕತ್ತಲೆಯ ಕೋಣೆಯಲಿ ನರಳುತ್ತಿದೆ
                    ನನ್ನ ಕವಿತೆ
                    ಸತ್ತಿರುವ ಭಾವಗಳು ಒಸರುತ್ತಿವೆಯೇ
                    ನೋಡಿ ನೋಡಿ ಬೆವೆತೆ!

                    ಸಂದುಗಳಲ್ಲಿ ಅಡಗಿರುವ ಸಂಗತಿಗಳೆಲ್ಲ
                    ಸಂಧಾನಕ್ಕಾಗಿ ಸಿದ್ಧಗೊಂಡಿವೆ
                    ಮಧುಬಾಲಚಂದ್ರಿಕೆಯ ನೆನಪುಗಳೆಲ್ಲ
                    ಕಾಲಾಂತರದಿ ಮಿಂದಾಗಿವೆ...

                    ಮುಚ್ಚಿರುವ ಬಾಗಿಲಿನ ಆಚೆಯಲಿ
                    ಹೊಸಗೆಜ್ಜೆಯ ನಾದ
                    ಬೆಚ್ಚುತಿದೆ ಕವಿತೆ ಬಾಗಿಲನು
                    ಬಿಡದೆ ಬಡಿವ ಸದ್ದಿನಿಂದ!

                    ಸುತ್ತಲಿನ ಕತ್ತಲಿನ ಪ್ರೀತಿಯಲಿ
                    ತನ್ನೊಳಗೆ ಬೆತ್ತಲಾಗಿದೆ
                    ನವನಾದ ಮಂದ್ರತೆಯ ಮಾತುಗಳೆಲ್ಲ
                    ಪಿಸುಗುಡುತ ಕೊಸರಾಡಿವೆ..

                    ಹೊಸದಾದ ವಸನವ ತೊಟ್ಟು ತಾನು
                    ಹೊಸಿಲ ದಾಟಿದ ಕ್ಷಣವೆ
                    ಸ್ಫುರಿಸುತಿದೆ ಕವಿತೆ ಬೆಳಕನು
                    ರವಿಯೇ ತಾನಾದ ಗುಂಗಿನಿಂದ....




                                                 ~‘ಶ್ರೀ’
                                                   ತಲಗೇರಿ

                    "ಹಕ್ಕಿಯಿರದ ಗೂಡಿಗೆ"...


             ಗೆಳತಿ,
             ನೀ ನನ್ನ ಉಸಿರಿನ ಒಡತಿ
             ಬರುವ ಬೆಳಕಿಗೆ ಸ್ಫೂರ್ತಿ
             ಮುದ್ದು ಮುದ್ದಾದ
             ನವಿಲೂರ ಚೆಂದಗಾತಿ....

             ಮೊದಲ ತೊದಲಿನಿಂದ
             ಅಮ್ಮನೊಲುಮೆಯವರೆಗೂ
             ಅದಲು ಬದಲಾಗಿ
             ಬೆರೆತ ಹೃದಯಗಳು
             ಕಡಲ ದಡಗಳಲಿ
             ಸುಮ್ಮನಾಗುವ ಅಲೆಗಳಿಗೂ
             ಸಾಲು ಸಾಲು ಸುಳಿವುಗಳು..

             ನೀ ಬರಿಯ ಸಖಿಯಲ್ಲ
             ಭಣಗುಡುವ ನನ್ನೊಡಲ
             ಏಕಾಂತಕೆ ಸಂಗಾತಿಯಾದ
             ಮಧು ಮೃದುಲ ಸಂಗತಿ
             ನೀ ಬರಿಯ ಉಸಿರಲ್ಲ
             ಕಸವಿರುವ ನನ್ನೆದೆಯ
             ಹೊಸತನಕೆ ಸಂಧಿಸಿದ
             ಸೃಜಿಪ ಜೀವ ಪ್ರಕೃತಿ

             ಶಬ್ದಗಳು ಸೆರೆಹಿಡಿಯದ
             ಮುಗುಳು ಮೌನಗಳ ಸಂವಹನ
             ಸನಿಹ ಸನಿಹಕೆ ಸೆಳೆವ
             ಏನೋ ದಿವ್ಯದ ಸಂಚಲನ
             ಹೆಸರಿಸಲೇ ಇದನೇ
             ಜೀವ ಜೀವಗಳ ಕಾವ್ಯವೆಂದು
             ತನನಗಳ ಸ್ಫುರಣ ಧ್ಯಾನವೆಂದು...

             ನಿನ್ನ ಮಡಿಲ ಮಗುವಾಗಿ
             ಆಟವಾಡುವ ಬಯಕೆ
             ಹನಿಹನಿಸೋ ಇಬ್ಬನಿಯ
             ನಗುವಾಗಿ ಕೆನ್ನೆಗಳಲಿ
             ನೆಲೆನಿಲ್ಲುವ ಹಂಬಲಕೆ
             ಹೆಸರನಿಟ್ಟಿಹೆ ನಾನು
             ಸ್ನೇಹ‘ಸಿಂಚನ’ವೆಂದು..
             ಉದುರಗೊಡೆನು ನಿನ್ನ
             ಕಂಗಳಲ್ಲಿ ನೀರ ಬಿಂದು..

             ಬರೆಯಲಾರೆ ನಾನೆಲ್ಲ!
             ಕರಗಿಹೋದರೆ ಕೊನೆಗೆ,
             ಕಾಯ್ದುಕೊಂಡಿರುವ
             ಅಮೂರ್ತ ರೂಪ?
             ತಂಗಾಳಿ ಕೂಡ
             ಬೇಸರದ ಶ್ರುತಿ
             ಮೀಟಿದಂತೆ ಅನಿಸೀತು
             ಹಕ್ಕಿಯಿರದ ಗೂಡಿಗೆ
             ತಬ್ಬಿಕೊಂಬುದು
             ಒಂಟಿತನದ ಶಾಪ...!!


                                  ~‘ಶ್ರೀ’
                                    ತಲಗೇರಿ  

                   ಬೆಂಗಾವಲು...


           ಓ ಚೆಂದ ಚಂದಿರನೇ
           ನೀ ಚೆಲ್ಲದಿರು ಬೆಳಕನ್ನು
           ನಿನ್ನೆಗಳ ನೆನಪುಗಳ ಮೇಲೆ
           ತುಂಬಿಕೊಂಡಿಹುದು
           ಕಂಬನಿಯ ಕಾರ್ಮುಗಿಲ ಮಾಲೆ
           ಜೊತೆಗೆ ನೀರಿರದ
           ಬಿಳಿಯ ಮೋಡಗಳ ಸಾಲೇ!

           ನಿನ್ನ ಬೆಳದಿಂಗಳು
           ಪ್ರೀತಿಯದಾದರೂ,
           ನನ್ನ ನೆಳಲು
           ಬೇರಾಗಿ ನಿಲುವುದು
           ಕರಗಿಬಿಡು ನೀ
           ನಿನ್ನೊಳಗೆ
           ಕುಳಿಯ ಕಲೆಯೊಳಗೆ!
           ನೆಳಲೂ ಕೂಡ
           ನನ್ನಲ್ಲೇ ಬೆರೆವುದು!

           ಗೆಳತಿ ನೀ ಹಚ್ಚು
           ಬಾ ಹಣತೆಯನು
           ಜಾರಿಹೋದ ಅವನು
           ಭೂತಕಾಲದ
           ಮಡಿಕೆಯೊಳಗೆ
           ಮಬ್ಬುಗತ್ತಲು ಕವಿದಿಹ
           ಹೊಂಬಣ್ಣದ ಸಮಯದಿ
           ವರ್ತಮಾನದ
           ಮೊಗವ ತೋರುವ
           ಬೆಳಕಿಗಾಗಿ ಮಿಡಿಯುವಾ!
           ಹೆದರದಿರು ನೀನು
           ನೆರಳು ಕೂಡ
           ಬೆನ್ನಾಗಿ ನಿಲುವುದು!..


                             ~‘ಶ್ರೀ’
                               ತಲಗೇರಿ

ಬುಧವಾರ, ಏಪ್ರಿಲ್ 18, 2012


                                 ಭೃಂಗದ ಬೆನ್ನೇರಿ...


                            ಕಿರಣಗಳು ಮೈಯ ಬಳಸೆ
                            ಸ್ಫುರಿಸಿತೊಲವ ಹೂವ ಮಂದಹಾಸ
                            ಮರಣಗಳು ನಾಳೆಯಳಿಸೆ
                            ತೆರೆದುಕೊಳ್ಳಲಿ ಜೀವ ಭಾವಕೋಶ...

                            ಭೃಂಗದ ಬೆನ್ನೇರಿ
                            ಬೆರೆವ ಗಂಧದ ಹಾಡು
                            ಶೃಂಗದ ಗರಿಯಾಗಿ
                            ಕರೆವ ಶೂನ್ಯದ ತೇರು!
                            ನಿನ್ನೆಯ ಸುಳಿವೆಲ್ಲ ನಾಳೆಯೊಳಗೆ
                            ಕಣ್ಣಿನ ನೆಳಲೆಲ್ಲ ಬಿಂಬದೊಳಗೆ!..

                            ವಿಭ್ರಮ ಪರ್ವಕೆ
                            ಸುರಿವ ಸೋನೆಯ ಮಳೆ
                            ಸಂಭ್ರಮ ಸೆಳವಿಗೆ
                            ಬಿರಿವ ಬರೆಯುವ ನಾಳೆ
                            ಮಣ್ಣಿನ ಮುನಿಸೆಲ್ಲ ಪ್ರೀತಿಯೊಳಗೆ
                            ಬಾಳಿನ ಮುಗಿಲೆಲ್ಲ ನೀರಿನೊಸಗೆ!...

                            ಅಂಬರ ಬೆದರಿದೆ
                            ಧ್ವನಿಸಿದೆ ಝೇಂಕಾರದ ಕೊರಳು
                            ಭ್ರಮರವು ಹೊರಳಿದೆ
                            ಅರಳಿಸಿ ಅನುಬಂಧದ ಮುಗುಳು!
                            ಸಂಬಂಧ ಬಿಂದುಗಳು ನೂಲಿನೊಳಗೆ
                            ಬೆಸೆದು ನಿಂತಿದೆ ತಾನೇ ಪ್ರೀತಿ ಮಳಿಗೆ!!...

                                                              ~‘ಶ್ರೀ’
                                                                ತಲಗೇರಿ

                          "ನಾ ಅಲೆಮಾರಿ"...

                      ನುಲಿವ ಕೊಳಲ ಸ್ವರದ
                      ಅಲೆಯ ಕವಲು ನಾನು
                      ಬರಿದೆ ಬೆರಳ ಸುಳಿಗೆ
                      ಹೊಸತು ನಡಿಗೆ ಗಳಿಗೆ!
                      ಕರಿಯ ನೆರಿಗೆಯ ಮೀರಿ
                      ಪರಿಧಿ ಬರೆಯಬರದ
                      ನಾ ಸಂಚಾರಿ...

                      ಸಂಧಾನ ಸೆಳವಿನ
                      ಕಾಡೋ ನೆನಪ ಕಾರುಬಾರು
                      ನರಳೋ ಮನದ ಬೀದಿಲಿ
                      ಅಲೆದಿಹುದು ಚೆಂದ ತೇರು
                      ಕನಸಿನಾ ಜಾಡು ಹಿಡಿದು
                      ಅನಂತಕೊಂದು ಸೂರು ಕೊಡುವ
                      ನಾ ಪ್ರೀತಿಪದ ಜೋಗಿ...

                      ಹಂಗಾಮಿ ಡೇರೆಯ
                      ನಿತ್ಯ ಆಳೋ ರಾಯಭಾರಿ
                      ಕರಗೋ ನೆರಳಿನ ಜೊತೆಗೆ
                      ಸವೆಸಿಹೆನು ಕಾಲುದಾರಿ
                      ಬೆಳಕಿನಾ ಕೋಲು ಹಿಡಿದು
                      ದಿಗಂತಕೊಂದು ರೇಖೆಯೆಳೆವ
                      ನಾ ಹುಚ್ಚು ಅಲೆಮಾರಿ...!!


                                              ~‘ಶ್ರೀ’
                                                ತಲಗೇರಿ

                         "ಹನಿಗಳಿಗೆ ಮಾರಿಬಿಡು"...


                      ಏಕಾಂತದ ಬಿಸಿಯುಸಿರ
                      ನೀ ಕರೆಯದಿರು ಮೌನ
                      ತಂತಾನೇ ಎದೆಯೊಳಗೆ
                      ಹುಟ್ಟಿಕೊಳ್ಳಲಿ
                      ಹೆಸರಿಲ್ಲದಾ ಕವನ!

                      ಮಾತಿಲ್ಲದಾ ಮನಸುಗಳ
                      ನೀ ತೊರೆದುಬಿಡು ಮೌನ
                      ಮುಂಜಾನೆ ಮಂಜೊಳಗೆ
                      ತಬ್ಬಿಕೊಳ್ಳಲಿ
                      ಮುನಿಸಿಲ್ಲದಾ ಪವನ!

                      ಅವಳ ಜೊತೆ
                      ನಡೆದ ಹೆಜ್ಜೆಗಳೆಡೆಗೆ
                      ಮತ್ತೆ ಇಣುಕದಿರು ಮೌನ
                      ನವಿಲು ಗರಿಯ
                      ಬಣ್ಣಗಳಿಗೆ ಹಚ್ಚದಿರು
                      ಮಾಸಿಹೋಗುವ ಜೀವನ...

                      ಅಲೆಯ ಸಾಲೇ
                      ಬಡಿದ ತೀರಗಳಲಿ
                      ಹೆಸರ ಹುಡುಕದಿರು ಮೌನ
                      ಸರಿವ ನಾವೆಯ
                      ಬೆನ್ನುಗಳಿಗೆ ಅಟ್ಟದಿರು
                      ಇಡಿಯ ನಾಳೆಯ ಜನನ!

                      ಸುರಿವ ಜಡಿಮಳೆಯ
                      ಹನಿಗಳಿಗೆ ಮಾರಿಬಿಡು
                      ಕಳೆದ ನೆನಪುಗಳ ಕವಲ..
                      ಸೆರೆಯ ಅರಮನೆಯ
                      ಬಾಗಿಲನು ದಾಟಿಬಿಡು
                      ಬರೆದು ಮೌನ ಸಹಿಯ ನೆರಳ...


                                                ~‘ಶ್ರೀ’
                                                  ತಲಗೇರಿ

                   "ಸ್ವರ ಪರ್ವ"....


                ಮೀಟುತಿದೆ ಒರಟು ತಂಬೂರಿ
                ಅಪಶ್ರುತಿಯ ಸರಿಗಮವ
                ದಾಟುತಿದೆ ಬದುಕು ಎಲ್ಲ ಮೀರಿ
                ನೆನೆದು ಯಾವುದೋ ದಿವ್ಯವ...

                ಹರಿವ ಸ್ವರಗಳ
                ಮಿಲನ ಮಧುವಿಗೆ
                ಕಟ್ಟಲಿಲ್ಲ ಬಾನಿನಲ್ಲಿ ಕಾಮನಾ ಬಿಲ್ಲು
                ಬಿರಿವ ಬಿಂಬಗಳ
                ಚಲನ ಚೆಲುವಿಗೆ
                ಹಂಚಲಿಲ್ಲ ಗೊಂಚಲಲ್ಲಿ ಸಂಚಿನಾ ಸಾಲು

                ತುಡಿವ ತಂತಿಗಳ
                ತೊದಲು ಯಾನಕೆ
                ಅಡ್ಡವಿಲ್ಲ ಹಾದಿಯಲ್ಲಿ ಸಾವಿನ ಬೇಲಿ
                ಸುಡುವ ಭಾವಗಳ
               ‘ಬದಲು ಕವಿತೆ’ಗೆ
                ಸೋಕಲಿಲ್ಲ ಪ್ರೀತಿಯಲ್ಲಿ ಅರ್ಥದಾ ಗಾಳಿ!!

                ಎಲ್ಲೋ ದೂರದಿ,ತೀರದಂತೆ
                ತೇಲಿಬಂತು ಮುರಳಿಗಾನ
                ಅಲ್ಲೇ ನಾದದ ಜೀವಸಂತೆ
                ಸೇರಿಹೋಯ್ತು ಒರಟು ಧ್ಯಾನ!
                ಮುರುಕು ತಂಬೂರಿ
                ಮೀಟತೊಡಗಿದೆ
                ಮರೆತು ಎಲ್ಲ ಅಪಸ್ವರ...
                ಬೆಳಕ ರಹದಾರಿ
                ತೆರೆಯತೊಡಗಿದೆ
                ಅದಕು ಸಾಕ್ಷಿಯಾಗುವ ಅವಸರ!!...


                                                ~‘ಶ್ರೀ’
                                                  ತಲಗೇರಿ

ಗುರುವಾರ, ಏಪ್ರಿಲ್ 12, 2012


                                      ಮತ್ತೆ ಮರಳದ ನಿನ್ನೆಗೆ...



                                ಕಾಡುತಿಹೆ ನೀನೇತಕೆ
                                ರಜನಿ ಕಳೆವಾ ಚಂದ್ರಿಕೆ

                                ಮೌನ ಧ್ಯಾನದಲಿ
                                ತನ್ಮಯತೆಯ ಸ್ಥಿತಿ
                                ಮೋಹ ಬಿದಿಗೆಯು
                                ಮೃನ್ಮಯವಾದ ಸಂಗತಿ
                                ಹುಡುಕತೊಡಗಿಹೆ ಸುಮ್ಮನೆ
                                ಸಾವ ಕಾಣದ ಸಂಗವ
                                ಮಾಡಲಾಗದೆ ಸೋತಿಹೆ
                                ನಿನ್ನ ಮೌನದಾ ಅನುವಾದವ...

                                ಶೂನ್ಯ ಕತ್ತಲಲಿ
                                ಹುಡುಕಾಟದಾ ಗತಿ
                                ನೆರಳ ನೆರಿಗೆಯು
                                ಬೆರೆತುಬಿಡುವಾ ಮಾಹಿತಿ
                                ಬಳಿಯುತಿಹೆನೇ ಸುಮ್ಮನೆ
                                ತೊಗಲು ಹೊದಿಕೆಗೆ ಬಣ್ಣವ
                                ಮತ್ತೆ ಮರಳದ ನಿನ್ನೆಗೆ
                                ನಿತ್ಯ ಕಾಡುವ ಗುಣವಿದೆ....

                       "ಗೋರಿಯ ಮೇಲೆ ಗಡಿಯಾರವಿಟ್ಟಿಲ್ಲ"...!!


                   ಮನಸ್ಸಿನ ಕನ್ನಡಿಯಲ್ಲಿ
                   ಬಿಂಬ ಕಾಣದಿರೆ
                   ತಮಸ್ಸಿನ ಸನ್ನಿಧಿಯಲ್ಲಿ
                   ಬಂಧಿ ನಾನು!...

                   ಗೋಡೆಗಳ ಮಧ್ಯೆ
                   ಕತ್ತಲೂ ಕೂಡ
                   ಬಂಧಿಸಲ್ಪಟ್ಟಿದೆ ನನ್ನಂತೆಯೇ
                   ಸಂದುಗಳಲ್ಲಾದರೂ
                   ಸಂಧಿಸುವವೇ
                   ಸಂದಿರುವ ಸಂಗತಿಗಳು,ತಿಳಿಯೆ!

                   ಗತಿಸಿಹೋದ
                   ಸಂಗತಿಗಳ ಸಂಗ್ರಹಿಸಿ
                   ಗ್ರಹಿಸಲಾಗುತ್ತಿಲ್ಲ
                   ಅಂತರ್ಗತ
                   ಸಂಬಂಧಗಳ ಪರಿಧಿಯೊಳಗೆ
                   ಸಂಧಾನವಾಗುತ್ತಲೇ ಇಲ್ಲ...

                   ಸರಿದ ಕಾಲದ
                   ಪರಿಚಯಕ್ಕಾಗಿ
                   ಪರಿತಪಿಸತೊಡಗಿಹೆ
                   ಸಂವಹನವಾಗುತ್ತಿಲ್ಲ
                   ಕ್ಷಣಕ್ಷಣದ
                   ಸದ್ದಿನೊಂದಿಗೆ
                   ಜಿದ್ದಾಗಬೇಕೆಂದುಕೊಂಡರೆ
                   ಗೋರಿಯ ಮೇಲೆ ಗಡಿಯಾರವಿಟ್ಟಿಲ್ಲ
                   ವರ್ತಮಾನಕ್ಕೆ ತುರ್ತಾಗಿ
                   ಮುಖಾಮುಖಿಯಾಗಲು
                   ಆಗುತ್ತಲೇ ಇಲ್ಲ!

                   ಸಾವಿನಾ ಹಂಗಿನ
                   ಸೋಗು ಕಳಚಿ
                   ಮುಂಗಾರಿನಾ ಮಳೆಯ
                   ಮಣ್ಣ ಗಂಧದಂತೆ
                   ಜಗವ ಕಾಡಬೇಕು
                   ನನ್ನ ಪರಿಮಳ
                   ನನ್ನೆಲ್ಲ ತಳಮಳಗಳ
                   ಸಾಕ್ಷಿಯಾಗಿ ಸುಳಿಯಲಿ
                   ಜೀವಜೀವಗಳ
                   ಅಂತರಂಗಗಳ...!!


                                      ~‘ಶ್ರೀ’
                                        ತಲಗೇರಿ

ಸೋಮವಾರ, ಜನವರಿ 2, 2012


                               ‘ಸಂಗತಿ’.....

                           ನನ್ನೆದೆಯ ಗೋಡೆಗಳಲಿ
                           ಬರೆದ ನಿನ್ನೆಸರು
                           ಹುಲ್ಲಾಗಿ ಚಿಗುರಿಹುದು!..
                           ಒಲವ ಮಳೆಗೋ
                           ಸುಳಿವ ಚಳಿಗೋ
                           ತಲ್ಲಣದ ತವಕ
                           ಹುಲ್ಲಿನಾ ಮೇಲಲ್ಲಲ್ಲಿ
                           ಮುತ್ತಾಗಿ ಮಿನುಗುವ
                           ಮುದ್ದಾದ
                           ನೆನಪ ಮಿಹಿಕಾ!
                           ಸದ್ದಿಲ್ಲದೆ ನಡೆವ
                           ಚಂದ ರೂಪಕ!..

                           ಅರ್ಥವಾಗುವ ಸಮಯದಿ
                           ಅರ್ಥವಾಗದ ಅರ್ಥಗಳು
                           ನನ್ನೆದೆಯ ಬೀದಿಯಲಿ
                           ಕಟ್ಟಿಹವು ಮನೆಯ
                           ಕತ್ತಲೆಯ ರಾತ್ರಿಯಲೂ
                           ನೀಲಿ ತಾರೆಯ ನೆನಪು
                           ಚೆಲ್ಲಿಹುದು
                           ಬೆಳದಿಂಗಳ
                           ಹಗಲಾಗಿಸಿ ಮಹಡಿಯ!
                           ಬೆಳಗಿಸಬೇಕು ನೀನೇ
                           ನಡುಮನೆಯ..

                           ಕಲ್ಪನೆಯ ತೇರಿನಲಿ
                           ನಿನ್ನ ರೂಪ
                           ನಿಶ್ಚಲದ ನೀರಿನಲಿ
                           ಪೂರ್ಣಚಂದ್ರ ಬಿಂಬ
                           ಕಾಡು ಕಾಡು
                           ನವಿಲಂತೆ ನೀನು
                           ನಿನ್ನೆ ಬಿದ್ದಿಹ
                           ಗರಿಯ ಹೆಕ್ಕುತ್ತ
                           ಅಲೆವ,ನೆನಪ
                           ರಾಯಭಾರಿ ನಾನು...
                           ಮಾತಾಗಿಸಬೇಕಿದೆ
                           ಮೌನದೊಳಗಿನ ಪ್ರೀತಿಯ
                           ಉಳಿಸಿಕೊಡುವೆಯಾ ನೀನು
                           ಈ ಹಂಗಾಮಿ ಸಂಗತಿಯ...!!..


                                           ~‘ಶ್ರೀ’
                                             ತಲಗೇರಿ

ಬುಧವಾರ, ಅಕ್ಟೋಬರ್ 26, 2011


                                ‘ಜಂಗಮ’...
                                         .....ಮನ್ವಂತರದ ನವ ಪೂರ್ಣಿಮಾ...


           ಅವಳು ನಡೆಯುತ್ತಿದಾಳೆ;ಬರಿಗಾಲಿನಲ್ಲಿ,ಬರಿದಾದ ಮನಸ್ಸಿನಲ್ಲಿ...ವೈರುಧ್ಯ ವೈವಿಧ್ಯಗಳಲ್ಲೆಲ್ಲ ಬೆರೆತು,ಬದುಕು ನಡೆಸಬೇಕೆಂದು ಬಯಸಿದ್ದಳು.ಆದರಿಂದು ಬಯಕೆಗಳೆಲ್ಲಾ ಬೇಲಿಯನ್ನು ಹಾರಿ ಕಾಣದಾಗಿದ್ದವು.ಬೇಲಿಯೂ ಕೂಡ ಕಾಣದಾಗಿತ್ತು.ಖಾಲಿ ಖಾಲಿ...ಭಾವಗಳ ಸಂಘರ್ಷವಿರುತ್ತಿದ್ದ,ಕನಸುಗಳ ಕನವರಿಕೆ,ಚಡಪಡಿಕೆಯಿರುತ್ತಿದ್ದ ಮನಸ್ಸಿಂದು ಏನೂ ಇಲ್ಲದೇ ಬಿಕೋ ಎನ್ನುತ್ತಿತ್ತು...ಮನಸಿನ ಅಂಗಳದಲ್ಲಿ ಮುತ್ತಿದ್ದ ನೆನಪಿನ ಹೆಜ್ಜೆ ಗುರುತುಗಳನ್ನು ಅಳಿಸುವ ಎಲ್ಲ ಪ್ರಯತ್ನಗಳೂ ನಡೆದಿದ್ದವು.ಬಹುಪಾಲು ನೆಲವು ಹೆಜ್ಜೆ ಗುರುತುಗಳಿಂದ ಮುಕ್ತವಾಗಿತ್ತು.ಮರೆಯಬೇಕೆಂದುಕೊಂಡಿರುವ ಅವಳ ಬದುಕಿನಂತೆಯೇ,ಅವಳ ಮನದ ಅಂಗಳದಲ್ಲಿ ನಡೆದಾಡಿದ ಹೆಜ್ಜೆಯ ದನಿಗಳೂ ಕೂಡ ಮರೆತುಹೋಗಿದ್ದವು.ನಶೆಯೇರಿದ್ದ ಮನಸ್ಸು ಕಸಿವಿಸಿಗೊಳಗಾಗಿ ಕೃಶವಾಗಿತ್ತು.ಉಸಿರಿನೊಂದಿಗೆ ಹೊಸೆದುಕೊಂಡ ಹೆಸರುಗಳನ್ನೆಲ್ಲಾ ಹರಿದುಹಾಕುವ,ತರಿದುಹಾಕುವ ಅವಳ ಪ್ರಯತ್ನ ಫಲಿಸತೊಡಗಿತ್ತು.ತನ್ನಂತರಂಗವನ್ನು ಬಹಿರಂಗವಾಗಿಸಿಕೊಂಡು ನೋಡಿದಾಗ,ಅವಳಿಗೆ ಕಂಡದ್ದು ತನ್ನೊಳಗಿನ ಕಲ್ಮಶಗಳು,ಹೊಲಸುಗಳು...ತನ್ನೊಳಗಿನ ಕ್ರೌರ್ಯ,ಹಸಿದ ಯೌವನದ ಬಿಸಿಗೆ ತಣಿದಿದ್ದು ಎಲ್ಲವೂ ಅವಳಿಗೆ ಈಗ ಅಸಹ್ಯವಾಗಿದ್ದವು.ಅದಕ್ಕೆಂದೇ ನಡೆಯುತ್ತಿದ್ದಾಳೆ;ಸಾವೆಂಬ ಬೀಜವನ್ನು ಮನದಲ್ಲಿ ನೆಟ್ಟು,ಇಷ್ಟು ದಿನ ನೀರೆರೆಯುತ್ತಿದ್ದವಳು...ಈಗ ಒಂದೇ ಸಮನೆ ಟಿಸಿಲೊಡೆಯಬೇಕೆಂಬ ಹಂಬಲ..ಕ್ಷಣದ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಆತ್ಮಹತ್ಯೆ ಒಂದೇ ಅಲ್ಲವೇ?ನಿಜ,ಅವಳು ತಾನಂದುಕೊಂಡಂತೆಯೇ ವೈವಿಧ್ಯತೆಯಲ್ಲಿ ಜೀವಿಸಿದ್ದಾಳೆ.ಎಲ್ಲೆ ಮೀರಿ ಎಲ್ಲವುಗಳಿಗೆ ಬಲಿಯಾಗಿದ್ದು ಅವಳಿಗೆ ಈಗ ತನ್ನ ಜೀವನದ ಇನ್ನೊಂದು ಮುಖವನ್ನು ಪರಿಚಯಿಸಿದೆ.ಯಾವ ಕ್ಷಣದಲ್ಲೋ ಅವಳ ಯೋಚನೆಯ ಲಹರಿ ಬದಲಾಗಿಬಿಟ್ಟಿತ್ತು.ಅವಳಿಗೆ ಈಗ ಎಲ್ಲವುಗಳಿಂದ ಮುಕ್ತವಾಗಬೇಕಿದೆ.ಪ್ರಶಾಂತ ಮೌನದೊಳಗೆ ಬೆರೆಯಬೇಕಾಗಿದೆ.ನೀರವತೆಯೊಳಗೆ ನೀರಾಗಬೇಕಿದೆ.ಎಲ್ಲ ಕುತೂಹಲಗಳ ತಾಣವಾದ,ಅಭೇದ್ಯ ರಹಸ್ಯವಾದ ಸಾವಿನ ಮನೆಯೊಳಗೆ ಅಡಿಯಿಟ್ಟು ಮಲಗಬೇಕಿದೆ...!ಅವಳು ಈಗ ಅಳುತ್ತಿಲ್ಲ.ಅದು ಈಗ ಅವಳಿಗೆ ಬೇಕಿಲ್ಲ ಕೂಡಾ!ಗಾಮಿನಿಯೇ ಬತ್ತಿರುವಾಗ ನೀರಧಿಗೆಲ್ಲಿಯ ಜಲವು,ಒಲವು?ಇಲ್ಲ,ಅವಳಿಗೆ ಈಗ ಯಾವುದೂ ಬೇಕಾಗಿಲ್ಲ.ಎಲ್ಲವನ್ನು ತೊರೆದು,ಚಿಂತೆಯಿರದ ಚಿತೆಯೇರುವ ಬಯಕೆಯೊಂದು ಉಳಿದುಕೊಂಡಿತ್ತು,ಬೆಳೆದುಕೊಂಡಿತ್ತು..ಒಂದು ಗೂಟದಿಂದ ಬೇಲಿ ಆಗುವುದಿಲ್ಲ ಅಲ್ಲವೇ?ಸಾವೇ ಅವಳಲ್ಲಿನ ಒ೦ಟಿ ಬಯಕೆ!ನಡೆಯುತ್ತಾ ನಡೆಯುತ್ತಾ ಈಗ ಅವಳು ಆಳವಾದ ಕಣಿವೆಯ ಎದುರು ಬಂದು ನಿಂತಿದ್ದಾಳೆ.ಒಂದೇ ಸಮನೆ ಕೆಳಗೆ ಜಾರಿಬಿಡಬೇಕೆಂಬ ತೀವ್ರತೆ..ಇಷ್ಟು ದಿನದ ಈ ಎಲ್ಲ ಗದ್ದಲಗಳಿಗೆ,ಮುಗಿದ ಅಧ್ಯಾಯಗಳಿಗೆ ಬೆನ್ನುಡಿ ದೊರೆವ ಕ್ಷಣ ಹತ್ತಿರವಾಯಿತೆಂಬ ಆನಂದ...ಜೀವಂತ ಪಾತ್ರಗಳ ತೆರೆಮರೆಯ ನಾಟಕಕ್ಕೆ ಇಂದು ಪರದೆ ಬೀಳುವುದೆಂಬ ತುಡಿತ...ನಿಧಾನವಾಗಿ ಕತ್ತಲಾಗತೊಡಗಿತ್ತು..ಅವಳಲ್ಲೇ ತಮಸ್ಸು ತುಂಬಿರುವಾಗ,ಅದಕ್ಕೇ ಹೆದರದವಳು,ಈಗ ಈ ಬಾಹ್ಯ ಕತ್ತಲೆಗೆ ಹೆದರುತ್ತಾಳೆಯೇ?ಕತ್ತಲಾಗುತ್ತೆ ಅಂದುಕೊಂಡವಳಿಗೆ,ಆ ಗಗನದಿ ಚಂದಮಾಮ ಉದಯಿಸುತ್ತಿರುವುದು ಕಂಡಿತು.ಹಾರಿಬಿಡಬೇಕು ಎಂದು ಹೆಜ್ಜೆ ಮುಂದಿಟ್ಟವಳಿಗೆ ಆಶ್ಚರ್ಯ!.."ನಿಲ್ಲು ಮಿಹಿಕಾ,ಆತುರಪಡಬೇಡ"ಎಂಬ ಕಾಳಜಿಯ ಕೂಗು!...ಅರೇ!ಏನಿದು ಅಚ್ಚರಿ..ನನ್ನ ಭ್ರಮೆಯಿರಬೇಕು;ದ್ವಂದ್ವವೇಕೆ?..ಸಾಯಲು ಹಾತೊರೆಯುತ್ತಿರುವ ತನುವನ್ನು,ಮನಸ್ಸು ಕರೆಯುತ್ತಿರಬಹುದೇ?ಇರಬಹುದು,ನನ್ನ ಈ ಹೆಸರು ಈ ಊರಲ್ಲಿ ಯಾರಿಗೆ ತಿಳಿದಿದೆ?ಬಾಲ್ಯದಲ್ಲಿ ತಂದೆ ತಾಯಿ ಇಟ್ಟ ಹೆಸರು‘ಮಿಹಿಕಾ’!ನಾನೀಗ ನನ್ನ ಹೆಸರನ್ನು‘ಚಂದ್ರಿಕಾ’ಎಂದು ಬದಲಿಸಿಕೊಂಡಿದ್ದೇನೆ.ಹೊತ್ತು ಗೊತ್ತಿಲ್ಲದ ಈ ಸಂಜೆಯಲ್ಲಿ ಮನಸ್ಸಿಗೇಕೆ ಇಂತಹ ಹುಚ್ಚು?ಮತ್ತೆ ಹೆಜ್ಜೆ ಎತ್ತುವಷ್ಟರಲ್ಲಿ ಮತ್ತದೇ ಕೂಗು!ಉಸಿರ ಕೊಲ್ಲುವ ಈ ಹೊಸತು ವೇಳೆಯಲ್ಲಿ,ಹೆಸರ ಕರೆವ ಮನುಜನಾರು?ನಾನು ಕನಸುಗಳನ್ನೆಲ್ಲಾ ಎಂದೋ ಕಳೆದುಕೊಂಡುಬಿಟ್ಟಿದ್ದೇನೆ.ಇದ್ದ ಬಿದ್ದ ಹರಕು ಗುಡಿಸಲುಗಳಲ್ಲಿ ಮಲಗಿದ್ದ,ಬಣ್ಣವಿಲ್ಲದ ಜೀವಗಳು ನನ್ನೊಳಗಿನ ತಾಪಕ್ಕೆ ಬೆಂದು,ಕಮಟಿಹೋಗಿವೆ.ಅದರ ಸುಳಿವಿನ ಹೊಗೆಯೂ ಈಗ ನನ್ನೊಳಗಿಲ್ಲ.ಛೇ!ಮದದ ಘರ್ಷಣೆಗೆ ಸಿಕ್ಕಿರುವುದು ಸಾಕೆಂದು,ದುಗುಡಗಳ ದಂಗೆಯಿರದ,ಮಧುರತೆಯ ಹಂಗಿರದ,ಜಂಗಮತೆಯ ಗುಂಗಿರದ ಸಾವಿನರಮನೆಗೆ ತೆರಳಬೇಕೆಂದುಕೊಂಡರೆ,ಪದೇ ಪದೇ ಮನಸ್ಸಿನ ತಕರಾರು!..ಎಂದುಕೊಳ್ಳುತ್ತಾ,ಮತ್ತದೇ ಭ್ರಮೆ ಎಂದು ಉಸುರಿದಳು...ಆಗ,‘ಇದು ಕಲ್ಪನೆಯ ನರ್ತನವಲ್ಲ;ವಾಸ್ತವದ ಸಂಭ್ರಮ,ಮಿಹಿಕಾ’ಎನ್ನುವ ನುಡಿಗಳು..ಏನೋ ನೆನಪಾದಂತೆ ತಟ್ಟನೆ ತಿರುಗಿದಳು.ಯಾರೋ ನಗುತ್ತ ನಿಂತಿದ್ದಾರೆ.ಅದೆಂಥ ಸಮ್ಮೋಹಕ,ಪ್ರಶಾಂತ ನಗು!ಮುಗುಳ್ನಗು ಎನ್ನಬೇಕೋ,ಚಂದದ ಸಿಹಿಸ್ವಪ್ನ ನಗೆಯೆನ್ನಬೇಕೋ ತಿಳಿಯುತ್ತಿಲ್ಲ ಅವಳಿಗೆ..ಕಣ್ಣುಗಳಲ್ಲಿನ ಕಾಂತಿ ಬೆಳಕು ಕೊಡುವಂತೆ ತೋರುತ್ತಿದೆ.ತೇಜಸ್ಸು ಉಕ್ಕಿ ಹರಿಯುತ್ತಿದೆ.ಅವನು ಕರೆದ ಆ ಧ್ವನಿಯಲ್ಲಿ ಔನ್ನತ್ಯವಿದೆ,ಕಾಳಜಿಯ ಸಾಂಗತ್ಯವಿದೆ,ಗಾಂಭೀರ್ಯದ ಮಾಧುರ್ಯವಿದೆ...ನಗುತ್ತ ನಿಂತಿದ್ದಾನೆ.ಯಾರೀತ?ಸ್ಮೃತಿಯೊಳಗೆ ಅಸ್ಪಷ್ಟ ಚಿತ್ರಣ..ಎಂದೋ ನೋಡಿದಂತೆ,ಮಾತಾಡಿದಂತೆ ಭಾಸ!ಮುಖದಲ್ಲಿ ಸೌಂದರ್ಯ ಮನೆಮಾಡಿದೆ.ಅಗಲವಾದ ಹಣೆ..ಎದೆಯ ಮೇಲೆ ಹದವಾಗಿ ಮಲಗಿರುವ ಗಡ್ಡ..ಮತ್ತೆ ಮತ್ತೆ ಆ ಕಣ್ಣುಗಳು ಕಾಡುತ್ತಿವೆ;ಎಂದೂ ಮಾಸದ ಆ ನಗುವಿನಂತೆ....ಅರೇ!..ಅರೇ!..ಇವನು..ಇವನು..ತನ್ನಲ್ಲಿಯೇ ತಡವರಿಸುತ್ತಿದ್ದಾಳೆ.ಏನು ಹೇಳಿದ ಆತ?‘ಇದು ಸಂಭ್ರಮ’ಎಂದಲ್ಲವೇ?ನಿಜ,ಆತ ಹೇಳಿದ್ದು ನಿಜ..!ಜಗದೆಲ್ಲ ಬಂಧನಗಳಿಂದ ಮುಕ್ತಳಾಗುತ್ತಿರುವ ನನಗೆ ಇದು ಸಂಭ್ರಮವೇ!ನನ್ನ ಬದುಕಿನ ಪುಸ್ತಕದಲ್ಲಿನ ಹಲವು ಹಾಳೆಗಳನ್ನು ಖಾಲಿಬಿಡುವ ಒಂಥರಾ ಸಂಭ್ರಮ!ಪುಟಗಳು ಮುಗಿಯುವ ಮೊದಲೇ ಅಕ್ಷರಗಳ ಸಂಗಮ ಮುಗಿಯುವ ಸಂಭ್ರಮ!ಇನ್ನೊಂದೆಡೆ,ಈತನನ್ನು ನೋಡುತ್ತಿರುವ ಸಂಭ್ರಮ!..ಇವನು,ಅವನೇ ಅಲ್ಲವೇ?..ನಾನು ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿ ನನ್ನ ಸಹಪಾಠಿಯಾಗಿದ್ದವನು.ಓದಿನಲ್ಲೂ ಮುಂದು,ಆಟಗಳಲ್ಲೂ ಕೂಡ ಇವನದು ಮೊದಲ ಸ್ಥಾನವೇ!ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿ.ಹುಡುಗಿಯರ ಕನಸಿನ ರಾಜಕುಮಾರ,ಹೃದಯ ಗೆಲ್ಲುವ ಚೋರ ಇವನೇ ಆಗಿದ್ದನಲ್ಲವೇ?ನಾನು ಅವನಲ್ಲಿ ಅನುರಕ್ತಳಾದೆನಲ್ಲವೇ?ಅವನಲ್ಲಿ ನನ್ನ ಪ್ರೇಮವನ್ನು ನಿವೇದಿಸಿಕೊಂಡಾಗ,ಆತ ಹೇಳಿದ್ದು,"ಮಿಹಿಕಾ!ಪಯಣದ ಯಾವುದೋ ಒಂದು ಬಿಂದುವಿನಲ್ಲಿ ಸಂಬಂಧಗಳು ಬೆಸೆಯುತ್ತವೆ..ಇನ್ನೊಂದು ಬಿಂದುವಿನಲ್ಲಿ ಮಾಗುತ್ತವೆ..ಹೀಗೇ ಸಾಗುತ್ತವೆ...ಇನ್ನ್ಯಾವುದೋ ಬಿಂದುವಿನಲ್ಲಿ ಮರೆಯಾಗಲೂಬಹುದು..ಮತ್ತೆ ಮತ್ತೆ ಕಾಣಲೂಬಹುದು,ಕಾಡಲೂಬಹುದು...ಆ ಸಂಬಂಧ ಯಾವುದೇ ಆಗಿರಬಹುದು.ಮಾತೃತ್ವ,ಭ್ರಾತೃತ್ವ,ಗೆಳೆತನ ಹೀಗೇ..ಮತ್ತ್ಯಾವುದೋ ಬಿಂದುವಿನಲ್ಲಿ ತೆಗೆದುಕೊಂಡ ನಿರ್ಧಾರಗಳು ಬದುಕಿನ ದಿಕ್ಕನ್ನೇ ಬದಲಿಸಬಹುದು..ಗೆಳತಿ..ಈಗ ನೀನು ನನ್ನನ್ನು ಪ್ರೇಮಿಸುತ್ತಿರಬಹುದು.ಆದರೆ,ನನ್ನ ಬದುಕಿನ ಗಮ್ಯವೇ ಬೇರೆ.ನಾನು ಪ್ರೀತಿಸಬೇಕೆಂದಿರುವುದು ಈ ಜಗತ್ತನ್ನು..ಪ್ರೇಮ ಎಂಬ ಆಕರ್ಷಣೆಯ ಸುಳಿಗೆ ಸಿಲುಕಲು ನನಗೆ ಹುಮ್ಮಸ್ಸಿಲ್ಲ,ಜೊತೆಗೆ ಮನಸ್ಸೂ ಇಲ್ಲ..ಕಾಮ,ಮೋಹದಿಂದಾದ ಪ್ರೇಮವನ್ನು ನಾನು ಬಯಸುವುದಿಲ್ಲ.ನನಗೆ ಪರಿಶುದ್ಧವಾದ ಪ್ರೀತಿ ಬೇಕು.ಆಡಂಬರದ ದೊಂಬರಾಟದಲ್ಲಿ ಒಂದು ಪಾತ್ರವಾಗಲು ನಾನು ಇಚ್ಛಿಸುವುದಿಲ್ಲ.ಜಗದ ಎಲ್ಲ ಕಟ್ಟಳೆಗಳನ್ನು ಮೀರಿರುವ ಪ್ರೀತಿ ನನಗೆ ಬೇಕಾಗಿದೆ.ಪ್ರೀತಿಯೆಂಬ ಆ ಆನಂದದ ಸೆಲೆಯ ಹುಡುಕಾಟದಲ್ಲಿ ನಾನಿದ್ದೇನೆ.ವಾತ್ಸಲ್ಯಭರಿತ,ನಿಷ್ಕಲ್ಮಶ,ನಿರಾಡಂಬರ,ನಿರಾಕಾರ,ನಿರ್ಗುಣ ಪರಮಚೈತನ್ಯವಾದ ಪ್ರೀತಿಯ ಚೇತನಕ್ಕಾಗಿ ತಡಕಾಡುತ್ತಿದೇನೆ.ನಾನೊಬ್ಬ ಜಂಗಮ;ನನ್ನಂತರಗಂಗೆಯ ಹುಡುಕಾಟದಲ್ಲಿ ತೊಡಗಿರುವ ಸಂತ ನಾನು..ಈ ಬಣ್ಣದ ಬಾಹ್ಯ ಸಂತೆಯ ಮಾರಾಟದ ಆಟಿಕೆಯಾಗಲು ನಾನು ಬಯಸುವುದಿಲ್ಲ.ನಾನು ಆ ನಕ್ಷತ್ರವಾಗಲು ಬಯಸುತ್ತೇನೆ ಎಂದು,ಸೂರ್ಯನೆಡೆಗೆ ಕೈತೋರಿದವನಲ್ಲವೇ ಇವನು?ಆಗ ನಾನು,ಏಕೆ,ನಾನು ಸೌಂದರ್ಯವತಿಯಲ್ಲವೇ?ನನ್ನ ಪ್ರೇಮಕ್ಕೆ ಕಣ್ಣೀರ ಹನಿಗಳು ನಿನ್ನ ಕಾಣಿಕೆಯೇ?ಎಂದು ಮರುಪ್ರಶ್ನಿಸಿದ್ದೆ.ಅದಕ್ಕವನು,ಇಲ್ಲ ಗೆಳತಿ...ಮಲ್ಲಿಗೆಯಂತೆ ನೀನು...ಯಾವ ಸಮಯದಲ್ಲಿ ಯಾರ ಹೃದಯವನ್ನಾದರೂ ಅಪಹರಿಸುವ ಸೌಂದರ್ಯ ನಿನ್ನದು,ನಿಜ...ನನ್ನ ಬದುಕಿನ ಬೆಳಕು ಪ್ರೇಮವೇ ಆಗಿದ್ದಲ್ಲಿ,ನಾನು ಯಾವಾಗಲೋ ನಿನ್ನವನಾಗಿಬಿಡುತ್ತಿದ್ದೆ.ಆದರೆ,ಪ್ರೇಮವೆಂಬ ಕತ್ತಲೆಯೊಳಗೆ ಬೀಳಲು ನನಗಿಷ್ಟವಿಲ್ಲ..ನಿನಗೆ ಪ್ರೀತಿಯನ್ನು ಕೊಡಬಲ್ಲೆ,ಆದರೆ ಪ್ರೇಮಿಯಾಗಲಾರೆ..ನಾನು ಕೊಡುವ ಪ್ರೀತಿಯಲ್ಲಿ ಕಾಳಜಿಯಿರುತ್ತದೆ,ಆದರೆ ಕಾಮಾಂಧತೆಯಿರುವುದಿಲ್ಲ.ಪ್ರೇಮಿಯ ಪ್ರೇಮಕ್ಕಿಂತ ಮಿಗಿಲಾದ ಪ್ರೀತಿಯನ್ನು ಕೊಡುತ್ತೇನೆ ಎಂದು ಹೇಳಿ,ತನ್ನ ಕರವಸ್ತ್ರವನ್ನು ಹರಿದು,ನನ್ನಲ್ಲಿ ತನ್ನ ಕೈಗೆ ಕಟ್ಟು ಎಂದಿದ್ದ..ನಾನು ಕಟ್ಟಿದ್ದೆ.ವಿಪರ್ಯಾಸ;ಅಂದು ರಕ್ಷಾಬಂಧನದ ದಿನವೇ ಆಗಿತ್ತು.ನಂತರ ಆತ ಹೇಳಿದ್ದ..*ಮಿಹಿಕಾ!..ಎಂಥ ಸುಂದರ ಹೆಸರು..‘ಮಿಹಿಕಾ’ಎಂದರೆ ಇಬ್ಬನಿಯಂತೆ...ಗೆಳತಿ...ಇಬ್ಬನಿ,ಕ್ಷಿತಿಗೆ ಪೀತಿಯ ವರ್ಶವೆನಿಸೋ,ಬಾನ ಕಂಬನಿ...ಎಲೆಗಳಿಗೆ ಕಚಗುಳಿಯಿಡುವ ಪ್ರೀತಿ ಚುಂಬನದ ಸಂಜೀವಿನಿ!ನಿನ್ನ ಒಂದು ಸ್ಪರ್ಶಕ್ಕಾಗಿ ಎಲೆಗಳು ಕಾಯುತ್ತಿರುತ್ತವೆ..ನಿನ್ನ ಪ್ರೀತಿಯ ಆಲಿಂಗನಕ್ಕಾಗಿ ನೆಲದ ಹುಲ್ಲುಗಳು ಕನವರಿಸುತ್ತಿರುತ್ತವೆ..ಜೀವಕ್ಕೆ ತಂಪೆರೆವ ಜೀವನದಾಯಿನಿ,ಮಾತೃರೂಪಿಣಿ ನೀನು..‘ವರ್ಷ’ದ ಸೋದರಿ ನೀನು...ವರ್ಷವಾಗುತ್ತೇನೆ ನಾನು!ನೀನೊಂದು ಕಡೆ ಪ್ರೀತಿಯೆರೆದರೆ,ನಾನೊಂದು ಕಡೆ ಪ್ರೀತಿಯ ಹನಿಯಾಗುತ್ತೇನೆ,ಆಗಬಹುದಾ?ಎಂದಿದ್ದವನಲ್ಲವೇ ಈತ?ಅಂದು ನಾನು ಆತನನ್ನು ತಬ್ಬಿ ಅತ್ತುಬಿಟ್ಟಿದ್ದೆ.ಅಗ ಆತ,ಅಳಬೇಡ..ತಂಗಿ ಅಳುವುದನ್ನು ಅಣ್ಣ ಹೇಗೆ ತಾನೇ ಸಹಿಸಬಲ್ಲ?ಕಣ್ಣೀರೊರೆಸಿಕೋ ಎಂದು,ತಾನೇ ನನ್ನ ಕಣ್ಣುಗಳನ್ನು ಒರೆಸಿದ್ದ..ನಾನು ಆಗ,ನಾನು ಅಳುತ್ತಿಲ್ಲ..ಇಂತಹ ಅಣ್ಣನನ್ನು ಕೊಟ್ಟಿದ್ದಕ್ಕಾಗಿ ಆ ಕಾಣದ ದೇವರಿಗೆ ಕೃತಜ್ಞತೆ ಸಲ್ಲಿಸ್ದೆ ಕಣೋ,ಆಗ ಆ ಧನ್ಯತೆಯಿಂದ ಬಂದ ಆನಂದಭಾಷ್ಪವಿದು..ಎಂದಾಗ,ಅನ್ನ ಹಣೆಗೆ ಹೂಮುತ್ತೊಂದನ್ನಿಟ್ಟಿದ್ದ.ನಾನೂ ಕೂಡಾ ಅಂದೇ ಅಣ್ಣನ ಪ್ರೀತಿಯ ಮಳೆಯಲ್ಲಿ ಮಿಂದು ತಂಪಾಗಿದ್ದೆ,ಮತ್ತಷ್ಟು ಪವಿತ್ರವಾಗಿದ್ದೆ..ಕೆಲವು ದಿನಗಳ ನಂತರ ಆತ,ಹೋಗಿಬರುತ್ತೇನೆ ತಂಗೀ...ಎಂದಿದ್ದ.ಎಲ್ಲಿಗೆ ಎಂದು ಕೇಳಿದಾಗ,ನನ್ನೆದೆಯೊಳಗ್ನ ತುಮುಲಗಳನ್ನು ಮಲಗಿಸಿ,ಅಲ್ಲೊಂದು ಪ್ರೀತಿಯ ನದಿಯ ಹರಿಸಬೇಕಿದೆ.ಮುಂದೊಂದು ದಿನ ನಾನು ನಿನ್ನ ಬದುಕಿನಲ್ಲಿ ಬರುತ್ತೇನೆ,ಕಾಯುತ್ತಿರು...ಎಂದವನೇ ಅಲ್ಲವೇ ಇವನು?ಈಗ ಬಂದಿದ್ದಾನೆ ಅಲ್ಲವೇ?...ನೀನು...ನೀನು...ಎಂದು ಮತ್ತೆ ತಡವರಿಸುತ್ತಿದ್ದಾಳೆ....ನೀನು...ನೀನು...ಜೀವನ್ ಅಲ್ಲವೇ?..ಕೇಳಿದಳು.ಸೋದರಿ,ಅದು ನನ್ನ ಪೂರ್ವಾಶ್ರಮದ ಹೆಸರು.ನಾನೀಗ ಆತನಲ್ಲ!ಭವದ ಭೋಗಗಳಲ್ಲಿ ವೈರಾಗ್ಯ ತಾಳಿ,ಸನ್ಯಾಸ ಸ್ವೀಕರಿಸಿ,"ಪೂರ್ಣ ಚಂದ್ರ"ಎಂಬ ನಾಮಾಂಕಿತನಾಗಿದ್ದೇನೆ.ನನ್ನ ಬದುಕನ್ನು ನಾನಂದುಕೊಂಡಂತೆಯೇ ಬದಲಿಸಿಕೊಂಡಿದ್ದೇನೆ.ಸೋದರೀ..ಏನಾಯಿತು?ಶುಭ ಕಾರ್ಯಗಳಿಗೆ ಸಾಕ್ಷಿಯಾಗಬೇಕಿರುವ ಈ ಗೋಧೂಳಿ ಮುಹೂರ್ತದಲ್ಲೇಕೆ ಇಲ್ಲಿ ಬಂದು ನಿಂತಿರುವೆ?ಏಕೆ,ಆ ಕಣಿವೆಯೆಡೆಗೆ ನಿನ್ನ ಕಾಲುಗಳು ಚಲಿಸುತ್ತಿವೆ?ಕಣಿವೆಯ ಆಳ ನೋಡುವ ಹುಚ್ಚು ಸಾಹಸ ಸಲ್ಲದು ಅಲ್ಲವೇ?ಏನಾಯಿತು,ಹೇಳು ಸೋದರಿ...ಅವನೀಗ ಕಾಲದ ಪರದೆಯ ಮಡಿಕೆಯೊಳಗೆ ಹುದುಗಿಹೋಗಿದ್ದ ಆಕೆಯ ಗತಜೀವನದ ನೆನಪುಗಳ ತುಣುಕುಗಳನ್ನು ಪದರ ಪದರವಾಗಿ ಅನಾವರಣಗೊಳಿಸತೊಡಗುತ್ತಾನೆ.....
      ಅವಳು ನಿಧಾನವಾಗಿ ತನ್ನ ಯೌವನದ ಆರಂಭದ ದಿನಗಳಿಗೆ ಜಾರುತ್ತಾಳೆ.ಕಾಲ ಹಿಂದೆ ಸರಿಯತೊಡಗುತ್ತದೆ...ತನ್ನ ಜೀವನದ ಎಲ್ಲವುಗಳನ್ನುಈಗ ಆತನೆದುರು ಬಿಚ್ಚಿಡುತ್ತಿದ್ದಾಳೆ...ನೀನು ಬಿಟ್ಟುಹೋದ ಮೇಲೆ ನಾನು,ಅಪ್ಪ ಅಮ್ಮ ಇದ್ದರೂ,ಅನಾಥಳಾದಂತೆ ಅನಿಸತೊಡಗಿತು.ನೀನು ಅಂದು ಹೇಳಿದ ಮಾತುಗಳನ್ನೆಲ್ಲಾ ನಾನು ಮೆಲುಕುಹಾಕುತ್ತಿದ್ದೆ.ಹೀಗೇ ಕೆಲವು ದಿನಗಳು ಕಳೆದವು.ಒಂದು ದಿನ ನನ್ನ ತಂದೆ ತಾಯಿ ಇಹಲೋಕ ಯಾತ್ರೆ ಮುಗಿಸಿದರು.ಅತ್ತೆ,ಎದೆ ಬಿರಿವಂತೆ ಅತ್ತೆ...ಏಕೆಂದರೆ,ನಾನಾಗ ಯಾರೂ ಇಲ್ಲದ ಅನಾಥೆ.ನಿನ್ನ ಸಾಂತ್ವನದ ನುಡಿಗಳಿರಲಿಲ್ಲ.ಒರಗಲು ನಿನ್ನ ಪ್ರೀತಿಯ ಬೆಚ್ಚನೆಯ ಹೆಗಲಿರಲಿಲ್ಲ.ನನ್ನ ನೋವನ್ನು ಕೇಳುವ ಯಾವ ಜೀವಗಳೂ ಇರಲಿಲ್ಲ.ಕಂಬನಿಗಳೇ ನನ್ನ ಗೆಳತಿಯರಾದವು.ನಂತರ ಮತ್ತೆ ಕಾಲನ ಆಟ ಶುರುವಾಯಿತು.ನನ್ನ ಬದುಕಿನ ಮಗ್ಗಲು ಬದಲಾಯಿತು.ನಾನೊಬ್ಬನನ್ನು ಪ್ರೇಮಿಸಿದೆ.ಆತ ನನ್ನನ್ನು ಮದುವೆಯಾಗುತ್ತೇನೆಂದು ಮಾತು ಕೊಟ್ಟ.ನನ್ನನ್ನು ಸಂಪೂರ್ಣವಾಗಿ ಆತನಿಗೆ ಸಮರ್ಪಿಸಿಕೊಂಡೆ.ನನ್ನ ದೇಹದ ಸವಿಯನ್ನು ಇಂಚಿಂಚೂ ಬಿಡದೇ ಸವಿದ.ನನ್ನ ಸೌಂದರ್ಯದ ಸರೋವರದಲ್ಲಿನ ನೀರನ್ನು ಕುಡಿದು ತೇಗಿದ.ನಂತರ,ಎಲ್ಲ ಸವಿದು ಹಿಪ್ಪೆಯಾದ,ಸಿಪ್ಪೆಯಾದ ನನ್ನನ್ನು ತಿರಸ್ಕರಿಸತೊಡಗಿದ.ಅವನಲ್ಲಿ ಬೇಡಿಕೊಂಡಾಗ ಹೇಳಿದ್ದು,"ನಿನ್ನಲ್ಲಿನ ಸೌಂದರ್ಯದ ಸವಿ ಅನುಭವಿಸಾಗಿದೆ,ಮತ್ತೆ ಭೋಗಿಸಲು ಬೇಸರ.ನಿನ್ನಲ್ಲಿ ಹಣವಿಲ್ಲ,ಅದಿದ್ದಿದ್ದರೆ ಇನ್ನೂ ಏನೋ ಒಂಥರಾ ಪುಳಕವಿರುತ್ತಿತ್ತು."..ಕಾಲು ಹಿಡಿದುಕೊಂಡೆ.ಎದೆಗೆ ಒದ್ದ...ಅಸಹಾಯಕ ಹೆಣ್ಣು ನಾನು,ಏನು ತಾನೇ ಮಾಡಿಯೇನು?ಅವನ ಸಂಗದ ಫಲವೆಂಬಂತೆ,ಹೆಣ್ಣು ಮಗುವೊಂದಕ್ಕೆ ತಾಯಿಯಾದೆ...ಹಣ ಸಂಪಾದಿಸುವುದೇ ನನ್ನ ಗುರಿಯಾಯಿತು.ಅದಕ್ಕೇ..ಅದಕ್ಕೇ...ನನ್ನ ಸೌಂದರ್ಯವನ್ನೇ ಬಂಡವಾಳವಾಗಿಸಿಕೊಂಡೆ.ಹೆಣ್ತನವನ್ನೇ ಮಾರಾಟ ಮಾಡುವ ಹೀನಕೃತ್ಯದ ದಾಸಿಯಾದಳು ನಿನ್ನ ತಂಗಿ...ಬೇರೆ ದಾರಿಯಿರಲಿಲ್ಲವೇ..ಎಂದು ನೀನು ಕೇಳಬಹುದು.ಆದರೆ ತುಂಬು ಯೌವನೆಯಾಗಿದ್ದ ನನಗೆ ಕಾಮದ ಹುಚ್ಚು ಹತ್ತಿತ್ತು.ಹಾಸಿಗೆಯ ಮೇಲಿನ ಹೊರಳಾಟ,ನರಳಾಟಗಳೇ ಹಿತವೆನ್ನಿಸುತ್ತಿತ್ತು...ನಾನೊಂದು ಭೋಗದ ಗೊಂಬೆಯಾದೆ!ಚೆನ್ನಾಗಿ ಸಂಪಾದನೆಯಾಗತೊಡಗಿತ್ತು...ದಿನ ದಿನವೂ ಹೊಸ ಹೊಸ ದೇಹಗಳು ನನ್ನ ದೇಹದ ಮೇಲೆ ಹೊರಳಾಡತೊಡಗಿದವು.ದೇಹ ಸುಖದ ಮಂಪರಿನಲ್ಲಿದ್ದ ನನಗೆ,ಇದುವೇ ಸುಖದ ಜೀವನವಾಯಿತು.ಯೌವನದ ಬಿಸಿ ಏರುತ್ತಲೇ ಇತ್ತು.ನನ್ನ ಮಗು ನನ್ನ ಕೃತ್ಯವನ್ನು,ನನ್ನನ್ನು ನೋಡಿ ಹೇಸತೊಡಗಿದಾಗ,ಯಾವ ತಾಯಿಯೂ ಗೈಯದ ಅಮಾನವೀಯ ಕೃತ್ಯವನ್ನು ಮಾಡಿದೆ...ಎಂದು ಹೇಳಿ ಅಳತೊಡಗುತ್ತಾಳೆ.ಆತ,ಸೋದರೀ,ಅಳಬೇಡ,ವಿಷಯವನ್ನು ಹೇಳು..ತಪ್ಪುಗಳು ಸಹಜ.ಹೆಣ್ತನಕ್ಕೆ ತಾಯ್ತನವೇ ಭೂಷಣ,ಅಂತಹ ಅಪರಾಧವನ್ನೇನು ಮಾಡಿದೆ ನೀನು?ಎಂದು ಕೇಳುತ್ತಾನೆ.ಆಕೆ ಹೇಳುವುದನ್ನು ಮುಂದುವರೆಸುತ್ತಾಳೆ...ತಾಯಂದಿರ ಪ್ರಪಂಚಕ್ಕೇ ಘೋರವಾದೆ.ಮನುಷ್ಯತ್ವದ ಲವಲೇಶವೂ ಇಲ್ಲದೇ,ಜನನಿಯಾದ ನಾನೇ ರಾಕ್ಷಸಿಯಾದೆ.ಐದು ವರ್ಷದ ಆ ಹಸುಳೆಯನ್ನು ನನ್ನ ಕೈಯಿಂದಲೇ ಕತ್ತುಹಿಸುಕಿ ಕೊಂದೆ.ಅವಳು ಸಾಯುವಾಗ ಅಮ್ಮಾ ಅಮ್ಮಾ ಎಂದು ಚೀರಿದಾಗಲೂ ನಾನು ಕರಗದೇ,ವಿಷಯ ಸುಖದ ಮತ್ತಿನಲ್ಲಿ ಕಲ್ಲಿನಂತಾದೆ.ಅವಳ ಒದ್ದಾಟಕ್ಕೆ ಕೊನೆತೆರೆಯನ್ನೆಳೆದುಬಿಟ್ಟೆ.ಅವಳು ಅಮ್ಮಾ ಅಮ್ಮಾ ಎನ್ನುತ್ತಲೇ ಸತ್ತಳು.ಅತ್ತೂ ಅತ್ತೂ ಅವಳ ಮುಖವೆಲ್ಲಾ ಒದ್ದೆಯಾಗಿತ್ತು.ವಿಸ್ಮಯ ನೋಡು,ಅವಳ ಕಣ್ಣೀರಿನಿಂದಲೇ ನನ್ನ ಕೈ ಒರೆಸಿಕೊಂಡೆ.ಪಶ್ಚಾತ್ತಾಪದ ಲವಲೇಶವೂ ನನ್ನಲ್ಲಿರಲಿಲ್ಲ.ನನಗೆ ಯಾವ ಮುಸುಕಿನ ಮಾಯೆ ಜಾಲ ಬೀಸಿತ್ತೋ,ನನ್ನ ಭೋಗದ ತೀವ್ರತೆ ಮತ್ತೂ ಹೆಚ್ಚಾಗತೊಡಗಿತ್ತು!ಆದರೆ,ಕೊನೆಗೊಂದು ದಿನ,ಇದ್ದಕ್ಕಿದ್ದಂತೆ ನಿನ್ನ ನೆನಪಾಯಿತು ಅಣ್ಣಾ...ನೀನು ನುಡಿದ ಮಾತುಗಳೆಲ್ಲ ಮತ್ತೆ ನನ್ನೊಳಗೆ ಪ್ರತಿಧ್ವನಿಸತೊಡಗಿದವು..ಮತ್ತೆ ಮತ್ತೆ ಮಾರ್ದನಿಸಿದವು..ಯಾವತ್ತೂ ಕರಗದ ಮನಸ್ಸು ಅಂದು ನಿನ್ನ ಮಾತುಗಳನ್ನು ನೆನೆಸಿಕೊಂಡಾಗ,ನನಗರಿವಿಲ್ಲದಂತೆಯೇ ಕಣ್ಣುಗಳಲ್ಲಿನೀರಹನಿ ಇಣುಕತೊಡಗಿತ್ತು;ಪಶ್ಚಾತ್ತಾಪಕ್ಕೋ,ಪರಿತಾಪಕ್ಕೋ ತಿಳಿದಿಲ್ಲ ನನಗೆ..!ಬಿಕ್ಕಳಿಸತೊಡಗಿದೆ,ಜೋರಾಗಿ ಕಿರುಚಿದೆ,ತಲೆ ಚಚ್ಚಿಕೊಂಡೆ..ಮತ್ತೆ ಕಲ್ಲಾದೆ..ಕೊನೆಗೆ..ಕೊನೆಗೆ,ಒಂದು ನಿರ್ಧಾರಕ್ಕೆ ಬಂದೆ.ನೀನೇ ಹೇಳಿದ್ದೆಯಲ್ಲಾ,ಯಾವುದೋ ಒಂದು ಬಿಂದುವಿನಲ್ಲಿ ತೆಗೆದುಕೊಂಡ ನಿರ್ಧಾರಗಳು ಬಾಅದುಕಿನ ಗತಿಯನ್ನೇ ಬದಲಿಸಿಬಿಡುತ್ತವೆಂದು...ನಾನೂ ಕೂಡ ನಿರ್ಧರಿಸಿದೆ;ಇನ್ನು ಬದುಕಬಾರದೆಂದು...ನನಗಾಗಿ,ನೀನು ಬರುವ ದಾರಿಗಾಗಿ ಕಾದೆ..!ದಾರಿಯೂ ಕಾಣಲಿಲ್ಲ;ನೀನೂ ಕೂಡ..ದಿನದಿನಕ್ಕೆ ಸಾಯುವ ಆಸೆ ಹೆಚ್ಚಾಗತೊಡಗಿತು..ಆದರೆ,ನನ್ನೆಲ್ಲ ನೆನಪುಗಳನ್ನು ಅಳಿಸಿ,ಖಾಲಿಯಾಗಲು ಇಷ್ಟು ದಿನ ಬೇಕಾಯಿತು.ಆದರೆ,ಈಗಲೂ ನನಗೆ ಅರಿವಾಗುತ್ತಲೇ ಇದೆ,"ನೆನಪುಗಳು ಕಾಡುತ್ತವೆಂದು"...!ಎಲ್ಲವೂ ಖಾಲಿ ಖಾಲಿ ಆಗಿದೆ ಎಂಬ ಭ್ರಮೆಯಲ್ಲಿ ನಾನಿದ್ದೇನೆ..ಅಣ್ಣಾ..ಕ್ಷಮಿಸಿಬಿಡು,ಈ ನಿನ್ನ ತಂಗಿಯನ್ನು..ಸಾವಿನ ಬೀಜ ನೆಟ್ಟಾಗಿದೆ,ಅದು ಮೊಳಕೆಯೊಡೆಯುವ ಸಮಯ ಬಂದಿದೆ..ಸಾಕು,ಈ ಲೋಗದ,ಈ ಭಾಗದ ಬದುಕು;ಈ ಪರಿಯ ಹೊಲಸು...ತಣ್ಣನೆಯ ಮೌನ ಲೋಕಕ್ಕೆ ಮತ್ತೆ ಪಯಣಿಸಬೇಕಿದೆ.ಅಲ್ಲಿನ ಮೌನದೊಳಗೆ ಮತ್ತೆ ಮಗುವಾಗಿ ನಿದ್ರಿಸಬೇಕೆಂದಿದ್ದೇನೆ..ಅನುವು ಮಾಡಿಕೊಡು...ಆಕೆ ಹೇಳಿ ಮುಗಿಸಿ ಅಳತೊಡಗುತ್ತಾಳೆ.ಈತನ ಪಾದಗಳಲ್ಲಿ ಬೀಳುತ್ತಾಳೆ.ಈತ ಅವಳಾ ಭುಜಗಳನ್ನು ಹಿಡಿದು ನಿಲ್ಲಿಸುತ್ತಾನೆ,ತಲೆ ಸವರುತ್ತಾನೆ...ಸೋದರೀ..ನಿಜ,ತಪ್ಪುಗಳ ಕೂಪದೊಳಗೆ ಬಿದ್ದು ನೀನು ನಲುಗಿದ್ದು ನಿಜ...ಒಪ್ಪಿಕೊಳ್ಳುತ್ತೇನೆ,ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತವೆಂಬುದು ನಡೆಯಲೇಬೇಕು..ಅದು ಸೃಷ್ಟಿಯ ನಿಯಮ...ಅದನ್ನು ಮೀರುವ ಸಾಮರ್ಥ್ಯ ಯಾರಿಗೂ ಇಲ್ಲ.ಸೃಜಿಪ ಶಕ್ತಿಯ ಮುಂದೆ ತೃಣವಲ್ಲವೇ ಮಾನವ?..ನಿನ್ನೊಳಗಿನ ಮನಸ್ಸು ಮರುಗಿದೆ..ಕಲ್ಮಶಗಳೆಲ್ಲನಿನ್ನ ಕಣ್ಣೀರ ಪ್ರವಾಹದಲ್ಲಿ ಕೊಚ್ಚಿಹೋಗಿದೆಯಲ್ಲವೇ?ನೀನೇ ಹೇಳಿರುವೆ ನಾನು ಖಾಲಿಯೆಂದು..ನೆನಪಿನ ಗೆರೆಗಳನ್ನು ಅಳಿಸಿಯಾಗಿದೆ..ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ ಹುಡುಕಬೇಡ..."ನಹಿ ಭವತಿ ಯೇ ನ ಭಾವ್ಯಂ,ಭವಿತವ್ಯಂ ಭವತ್ಯೇವ"ಎಂಬ ತತ್ವಕ್ಕೆ ವಿಶ್ವವೇ ಬದ್ಧವಾಗಿರುವಾಗ,ನಾವೊಂದು ಅದಕ್ಕೆ ಅಪವಾದವಾಗಲಾದೀತೇ?ಬದುಕಿನ ಪುಟಗಳು ಖಾಲಿಯಿವೆ..ಮತ್ತೆ ಅಕ್ಷರಗಳ ಹಂಗಾಮ ಆರಂಭವಾಗಲಿ..ಬದುಕಿನ ಹೊಸ ಮನ್ವಂತರಕ್ಕೆ ಈ ದಿನವೇ ನಾಂದಿಯಾಗಲಿ...ನನಗಂದು ರಕ್ಷೆ ಕಟ್ಟಿದ್ದ ನೀನು,ಇಂದು ಮತ್ತೆ ಬದುಕುವ ದೀಕ್ಷೆಯ ಕಂಕಣ ತೊಡಬೇಕು.ಜೀವನದಲ್ಲಿ ತಪ್ಪುಗಳು ಇರಲೇಬೇಕು.ಬರೀ ಒಪ್ಪುಗಳೇ ಇದ್ದರೆ,ನಾವು ಬದುಕನ್ನು ಒಪ್ಪುವುದಿಲ್ಲ ಅಥವಾ ಬದುಕು ನಮ್ಮನ್ನು ಅಪ್ಪುವುದಿಲ್ಲ!ತಪ್ಪುಗಳ ವೃಂದವೇ ಮುಂದೆ‘ಅನುಭವ’ಎಂದೆನಿಸಿಕೊಳ್ಳುತ್ತದೆ.ಕಲ್ಲಾಗಿ ಕುಳಿತ ಅಹಲ್ಯೆ ರಾಮನ ಪಾದ ಸ್ಪರ್ಶ ಮಾತ್ರದಿಂದ ಮತ್ತೆ ಜೀವನ ನಡೆಸಿಲ್ಲವೇ?ಪಂಚ ಪತಿವ್ರತೆಯರಲ್ಲಿ ಒಬ್ಬಳಾಗಲಿಲ್ಲವೇ?ದರೋಡೆಕೋರನಾಗಿದ್ದವನೊಬ್ಬ ಮುಂದೆ ವಾಲ್ಮೀಕಿಯಾಲಿಲ್ಲವೇ?ಜೀವನ ಮೌಲ್ಯಗಳ ಮಹಾಗಣಿಯಾದ ರಾಮಾಯಣ ಮಹಾಕಾವ್ಯದ ಸೃಷ್ಟಿಗೆ ಕಾರಣನಾಗಲಿಲ್ಲವೇ?ಜಗದ ಎಲ್ಲ ಮತಗಳು,ಪಂಥಗಳು ತಪ್ಪುಗಳನ್ನು ತಿದ್ದಿಕೊಂಡು,ಬದಲಾವಣೆಯ ಗಾಳಿಗೆ ಮೈಯೊಡ್ಡಿ ನಡೆವವರಿಗೆ ಪಥವನ್ನು ತೋರಿವೆ,ತೋರಿಸುತ್ತಿವೆ,ಮುಂದೆಯೂ ತೋರುತ್ತವೆ...ನಿನ್ನ ಬದುಕಿನ ಖಾಲಿ ಪುಟಗಳಲ್ಲಿ ನೀನು ಏನು ಬೇಕಾದರೂ ಬರೆಯಬಹುದು,ಅಲ್ಲವೇ?ಪಶ್ಚಾತ್ತಾಪದ ಬೇಗುದಿಯಲ್ಲಿ ಸುಟ್ಟು ಪವಿತ್ರವಾಗಿರುವ ನಿನಗೆ ಇನ್ನಾವ ಪ್ರಾಯಶ್ಚಿತ್ತವೂ ಬೇಕಿಲ್ಲ.ನಿನ್ನೊಳಗಣ ವೇದನೆಯೇ ನಿನ್ನನ್ನು ಪವಿತ್ರವಾಗಿಸಿದೆ!ಅದಕ್ಕಾಗಿಯೇ ಮನದೊಳಗೆ ಎಂದೂ ಕದನವೊಂದು ನಡೆಯಲೇಬೇಕು!ನೀನೀಗ ಪರಿಶುದ್ಧಳು..ಮಿಹಿಕಾ!ನೀನು ಮತ್ತೆ ಎಲೆಗಳ ಮೇಲೆ ಕುಳಿತು,ಚಂದ್ರಮನ ಬೆಳಕಲ್ಲಿ ಮುತ್ತಾಗಿ ಮಿನುಗಬೇಕು..ಹಸಿರು ವಸನಕೆ ಮಣಿಗಳ ಚಿತ್ತಾರವಾಗಬೇಕು..ಮಬ್ಬನೆಯ ಮಸುಕಲ್ಲಿ ಮುಂಬರುವ ಬೆಳಕಿಗಾಗಿ ಕಾದಿದ್ದು ಸಾಕು..ಬಂದಿರುವ ಹೊಂಬೆಳಕಿನ ಬದುಕನ್ನು ಸ್ವಾಗತಿಸು..ಬೆಳಕಿನಲ್ಲೇ ಲೀನಳಾಗು..ಪ್ರೀತಿಯ ಸೃಜನಕ್ಕೆ ಕಾರಣಳಾಗು...ನಿನಗೆ ಗೊತ್ತಾ ಮಿಹಿಕಾ,ಪ್ರೀತಿಯ ಭಾಷೆಯೇ ಮೌನ..ನೀನು ಹೇಳುತ್ತಿರುವ ಆ ಮೌನವೇ ನಿನ್ನೊಳಗಿನ ತನನ..!ನಾನೊಂದು ಹೊಸ ಬದುಕು ಕೊಡುತ್ತೇನೆ ಒಪ್ಪಿಕೊಳ್ಳುತ್ತೀಯಾ?..ಆಕೆ ಮತ್ತೆ ಕಣ್ಣೀರಾಗುತ್ತಾಳೆ.ಅಣ್ಣಾ,ಅದೆಂಥ ಪ್ರೀತಿ ನಿನ್ನದು!ಅನೈತಿಕ ಅಪವಿತ್ರ ಹೆಣ್ಣಾದ ನನ್ನನ್ನು ಈಗಲೂ ಅಷ್ಟೊಂದು ಪ್ರೀತಿಸುತ್ತಿದ್ದೀಯಲ್ಲಾ!ನಿನ್ನ ಕೈಯಲ್ಲಿ ಮಗುವಾಗಿ ಮುದ್ದಿಸಿಕೊಳ್ಳಬಾರದೇ ಎಂದೆನಿಸುತ್ತಿದೆ..ಅಣ್ಣಾ,ನಿನ್ನ ಮಾತಿಗೆ ಇಲ್ಲವೆಂದ ಕ್ಷಣವಿದೆಯೇ?ಮತ್ತೆ ಬದುಕಬೇಕೆಂದು ಇಚ್ಛೀಸುತ್ತಿದ್ದೀಯಾ?ಹೀಗೆ ಮತ್ತೆ ಬದುಕಿ,ಇನ್ನೆಷ್ಟು ಪಾಪಗಳಿಗೆ ಎಡೆಯಾಗಲಿ?ಬೇಡ ಅಣ್ಣಾ,ಕಳಚಿಕೊಂಡುಬಿಡುವೆ ಈ ಜಗತ್ತಿನಿಂದ...ಈ ಕೊಳಕು ತನುವು ಮಣ್ಣಿನಲ್ಲಾದರೂ ಕೊಳೆತುಹೋಗಲಿ..ಈತ ಅವಳ ಕಣ್ಣುಗಳಲ್ಲಿನ ಕಣ್ಣೀರನ್ನು ತನ್ನ ಬೊಗಸೆಯೊಳು ಹಿಡಿದು ಹೇಳುತ್ತಾನೆ,...ಈ ಕಣ್ಣೀರೇ ಹೊಸದೊಂದು ಜೀವ ಸೃಜನಕ್ಕೆ ಕಾರಣವಾಗಲಿ...ಎಲ್ಲ ಬಂಧನಗಳಿಂದ ಮುಕ್ತಳಾಗಿ ಬಾಂಧವ್ಯದ ಬಂಧುವಾಗು,ಪ್ರೀತಿಯ ಬಿಂದುವಾಗು..ಹೊಳೆವ ಸಿಂಧೂರವಾಗು...ಇಂದು ಪೌರ್ಣಿಮೆ,ಇಂದೇ ನಿನ್ನ ನೂತನ ಬದುಕಿನ ಆರಂಭ..ನೋಡಲ್ಲಿ,ಚಂದ್ರ ಉದಯಿಸಿದ್ದಾನೆ;ಬೆಳಕು ನೀಡಲು...ಸೂರ್ಯನ ಬೆಳಕನ್ನು ಪ್ರತಿಫಲಿಸುವುದಷ್ಟೇ ಆತನ ಕೆಲಸ ಅಲ್ಲವೇ?ನಮ್ಮ ಕಾರ್ಯವೂ ಅದೇ ತಾನೇ?ಪರಮಚೈತನ್ಯ ದಿವ್ಯವನ್ನು ಪ್ರತಿಫಲಿಸುವ ಕನ್ನಡಿಗಳು ನಾವೆಲ್ಲಾ..ಅಲ್ಲವೇ?ಎಲ್ಲ ವೇದನೆಗಳಿಂದ ಮುಕ್ತಳಾದ ನೀನು,ಬುದ್ಧಳಾಗಬೇಕಿದೆ..!ಆ ಶಶಿಯ ಬೆಳದಿಂಗಳಂತೆ ನಿರ್ಮಲ ಬೆಳಕಾಗಬೇಕಿದೆ...ಎಷ್ಟೋ ಜೀವಗಳ ದನಿಯಾಗಬೇಕಿದೆ..ಚಕ್ರವಾಕ ಪಕ್ಷಿಗಳ ಸಮ್ಮಿಲನಕ್ಕೆ ಸಾಕ್ಷಿಪರ್ವವಾಗಬೇಕಿದೆ..ಅದೆಷ್ಟೋ ಬದುಕುಗಳ ಕಾವ್ಯಕ್ಕೆ ಸ್ಫೂರ್ತಿಯಾಗಬೇಕಿದೆ...ದಿಗ್ದಿಗಂತಗಳಿಂದ ಸ್ಫುರಿಸಿಬರುತ್ತಿರುವ ಬೆಳಕನ್ನು ನಿನ್ನೊಡಲಲ್ಲಿ ತುಂಬಿಕೋ...ಸೆಲೆಯಾಗು,ಬೆಳಕಿನ ನೆಲೆಯಾಗು...!ನೀನೀಗ ಪರಿಶುದ್ಧಳಾಗಿದ್ದೀಯ...ನಿನ್ನ ನಿರ್ಮಲತೆಗೆ ಚಂದಿರ ಕೂಡ ನಾಚುತ್ತಿದ್ದಾನೆ,ನೋಡಲ್ಲಿ...ಎನ್ನುತ್ತಿದ್ದಂತೆಯೇ,ಚಂದ್ರ ಕೂಡ ಮೋಡದೊಳಗೆ ಒಮ್ಮೆ ಮರೆಯಾದ...ಸ್ಫುಟವಾದ ಬೆಳದಿಂಗಳ ಕನ್ಯೆಯಾಗಿ,ನಿರಾಭರಣ ಸುಂದರಿಯಾಗಿ ಇಂದು ನಿನಗೆ ಪುನರ್ಜನ್ಮ..ಇಂದಿನಿಂದ ನಿನ್ನ ಹೆಸರು"ಪೂರ್ಣಿಮಾ"...ಸನ್ಯಾಸಿನಿಯಾಗಿ ಬದುಕುವೆಯೆಂದಾದರೆ,ನನ್ನ ಜೊತೆಗೆ ಬೆಳಕಿನೆಡೆಗೆ ದಿವ್ಯತೆಗಾಗಿ ಹೆಜ್ಜೆಯಾಗು..ಇಲ್ಲದಿದ್ದಲ್ಲಿ ಆ ಕತ್ತಲಿನ ಕಣಿವೆಯಲ್ಲಿ ಬಲಿಯಾಗಿ ಮರೆಯಾಗು...ಎಂದು ಹೇಳಿ ಈತ ನಡೆಯತೊಡಗುತ್ತಾನೆ.ಅವಳೂ ಕೂಡ ಆತನ ಹೆಜ್ಜೆಗೆ ಗೆಜ್ಜೆಯಾಗುತ್ತಾಳೆ...ಆತನ ನೆಳಲಾಗುತ್ತಾಳೆ..ಮತ್ತೆ ಚಂದ್ರಮ ಮೋಡದಿಂದಾಚೆ ಬಂದಿದ್ದಾನೆ.ಮತ್ತಷ್ಟು ಮೆರಗಿನಿಂದ,ಕಾಂತಿಯಿಂದ ಆಹ್ಲಾದಕವಾಗಿ ಕಂಗೊಳಿಸುತ್ತಿದ್ದಾನೆ...ಆ ಸಂತ ಹಿಂದಿರುಗಿ ಒಮ್ಮೆ ನೋಡಿ,ಮತ್ತದೇ ಮಂದಸ್ಮಿತನಾಗಿ,ಮತ್ತೆ ನಡೆಯುತ್ತಿದ್ದಾನೆ;ಪ್ರೀತಿಯ ಜಂಗಮನಾಗಿ,ತಪ್ತ ಜೀವಕ್ಕೆ ‘ಪೂರ್ಣ ಚಂದ್ರ’ಮನಾಗಿ!!...ಆಕೆ ನೆಟ್ಟಿದ್ದ ಸಾವಿನ ಬೀಜ ಈಗ ಬದುಕಾಗಿ ಚಿಗುರಿತ್ತು;ಮರವಾಗಿ,ಸಾಸಿರ ಬಳ್ಳಿಗಳಿಗೆ ಆಶ್ರಯವಾಗಿ,ನೆಳಲು ಕೊಡುವ ಕನಸ ಹೊತ್ತು..ಭರವಸೆಯ ಹೆತ್ತು!..ತನ್ನೊಲವಿನ ಅಣ್ಣನೊಂದಿಗೆ ಕತ್ತಲೆಯ ಕಣಿವೆಗೆ ಬೆನ್ನು ಹಾಕಿದ್ದಾಳೆ ಪೂರ್ಣಿಮಾ..ತನ್ನಂತರಂಗವ ಆತನ ಮುಂದೆ ಬೆತ್ತಲಾಗಿಸಿ...ಮತ್ತೆ ಅವನಿಂದಲೇ ಪಡೆದು ಪ್ರೀತಿಯ ಹೊಸ ಜನುಮ..ಈಗ ನಭಕೂ ಕ್ಷಿತಿಗೂ ಹಾಲ್ಬೆಳದಿಂಗಳ ಪರ್ವದ ಸಂಭ್ರಮ.....!!....


*ಮಿಹಿಕಾ-ನೇಮಿಚಂದ್ರರ ಕಥೆಯಿಂದ ಪ್ರೇರಿತ ಹೆಸರು.

                                                                                                      ~‘ಶ್ರೀ’
                                                                                                        ತಲಗೇರಿ

ಸೋಮವಾರ, ಅಕ್ಟೋಬರ್ 17, 2011


                              ಅವಳು....



                     ಹಚ್ಚುತಿವೆ ಕೈಗಳು
                     ಸಾಲು ದೀಪಗಳನ್ನು
                     ಮುಸ್ಸಂಜೆಯಾ
                     ರಂಗಲ್ಲಿ,
                     ದಿನಕರನ
                     ನೆನಪಲ್ಲಿ
                     ಚಂದ್ರಮನ
                     ಗುಂಗಲ್ಲಿ...
                     ಬೆಳಕಿನಾ ರಂಗೋಲಿ...

                     ಮಬ್ಬುಗತ್ತಲು
                     ಕವಿಯುವ ಮುನ್ನ
                     ಹಣತೆ ತುದಿಗೆ
                     ಹೊನ್ನ ಬೆಳಕಿನ ಜನನ
                     ಜೊತೆಗೆ ಅವಳ
                     ಬಳೆಗಳ
                     ಕನವರಿಕೆಯ ತನನ..
                     ನಭಕೂ ಕ್ಷಿತಿಗೂ
                     ದಿಗಂತದಿ
                     ಸಂಭ್ರಮದ ಮಿಲನ...

                     ಕಾಯುತಿಹ ಚಂದ್ರಮ
                     ಕತ್ತಲೆಯಲ್ಲಿ
                     ಸೆರಗು ಜಾರುವುದೆಂದು!
                     ತಿಳಿದಿಲ್ಲ ಅವನಿಗೆ,
                     ಬೆಳಕಿನಾ ಬಳ್ಳಿಯೇ
                     ಅವಳೆಂದು!
                     ಬದುಕಿಗೊಂದು
                     ಗುಟುಕ ಕೊಡುವ
                     ಉಸಿರಿಗೊಂದು
                     ಹೆಸರ ಹೊಸೆವ
                     ಮಾತೃರೂಪಿ
                     ಕನ್ನಿಕೆಯೆಂದು...
                     ಮರೆತಿಹನು ಅವನು
                     ಪ್ರತಿಫಲಿಸೋ
                     ಕನ್ನಡಿಯು ತಾನೆಂದು..

                     ಮುಂಗುರುಳು
                     ಕನಲಿವೆ
                     ಆ ಗಾಳಿಯ
                     ಶೀತಲ
                     ಸುಖ ಸ್ಪರ್ಶಕೆ...
                     ತಾರೆಗಳು
                     ಬಳಲಿವೆ
                     ಅವಳೆದುರು
                     ನಿಲಲಾಗದೆ
                     ಆ ಮಳಲಲಿ
                     ಮಲಗಿವೆ...
                     ಅಲೆಗಳಲ್ಲಿ
                     ಹಾಗೇ ತೇಲಿವೆ..

                     ಹಗಲಾಗಿದೆ
                     ಹೊರಗೆ
                     ಅವಳ
                     ಬೆರಳುಗಳ ಮೋಡಿಗೆ..
                     ಆದರೆ,
                     ಕತ್ತಲೆಯಿದೆಯಿನ್ನೂ
                     ನನ್ನೊಳಗೆ...
                     ಅವಳು ತಟ್ಟಲಿ
                     ಎಂದು
                     ಕದವ ಹಾಕಿರುವೆ..
                     ಮಲಗಿರುವ
                     ನಾನು
                     ಏಳಬೇಡವೇ?..

                     ಬಂದುಬಿಡು
                     ನನ್ನೆಡೆಗೆ..
                     ಬೊಗಸೆಯೊಳು
                     ಹಿಡಿದು
                     ಒಲವಿನಾ ದೀವಿಗೆ..
                     ಕಸವಿಡದೆ
                     ಗುಡಿಸಿಹೆನು
                     ನೀನು ನಿರ್ಮಲಳೆಂದು..
                     ಹೊಸಿಲ ದಾಟಲಿ
                     ನಿನ್ನ ಹೆಜ್ಜೆಗಳಿಂದು,
                     ತಮಸಿಗು ಬೆಳಕಿಗು
                     ಸಂವಹನಕೆಂದು...
                     ನೀ ನನ್ನಲಿ
                     ನೆಲೆಸು ಎಂದೆಂದೂ..
                     ಓ!ಬೆಳಕಿನ ಬಂಧು..!!
                     ಪ್ರೀತಿಯ
                     ನೆಳಲಲಿ ಬಂದು...



                                    ~‘ಶ್ರೀ’
                                      ತಲಗೇರಿ

ಮಂಗಳವಾರ, ಅಕ್ಟೋಬರ್ 11, 2011



                                  ಕಾಡಿಬಿಡು....



                          ಮನಸುಗಳ ಸಂತೆಯಲಿ
                          ಕನಸುಗಳ ಹಾವಳಿ
                          ಗ್ರಾಹಕರಿಲ್ಲದ
                          ಅಂಗಡಿಯಲ್ಲೂ
                          ಬಣ್ಣಗಳ ಓಕುಳಿ!
                          ನಯನಗಳ ತಂಪಿಗೆ
                          ಹೃದಯಗಳ ಇಂಪಿಗೆ
                          ಹಂಗಾಮಿ ಜೋಕಾಲಿ!

                          ನಾಳೆ ಎನುವುದು
                          ಖಾಲಿ ಹಾಳೆಯಾಗಿರುವಾಗ
                          ಬೇಕಿಲ್ಲ ನನಗೆ
                          ಇಲ್ಲದಾ ಸಾಲುಗಳ
                          ಅನುವಾದ...
                          ಬರೆಯಬಲ್ಲೆ ಬೇರೇನೇ
                          ನಿನ್ನ ಪ್ರೀತಿಯ
                          ಶಾಯಿ
                          ಖಾಲಿಯಾಗುವ ಮುನ್ನ...
                          ಕಾಡಿಬಿಡು ನನ್ನೊಲವೇ
                          ನೆನಪಿನಾ ಗೆರೆಗಳು
                          ಅಕ್ಷರವಾಗುವುದನ್ನ...

                          ಜಾರದಿರಲಿ ಕಣ್ಣಲಿ
                          ಬೇಸರದಿ
                          ಒಂದು ಹನಿ..
                          ನಿನ್ನೊಳಗೆ ಇರುವ
                          ನಾ
                          ಚೆದುರಿಹೋಗುವೆ
                          ಬಿಳಿಯ ಹಾಳೆಯ
                          ಮೇಲೆ ಬೀಳೆ...
                          ಕಾಗದವೇ ನನ್ನ
                          ಮನೆಯಾಗಬಹುದೇ?
                          ಅಲೆಯಾಗಿ ಹೊರಳುವುದೇ
                          ನನ್ನ
                          ದನಿಯಾಗಬಹುದೇ?...


                                         ~‘ಶ್ರೀ’
                                           ತಲಗೇರಿ




ಸೋಮವಾರ, ಅಕ್ಟೋಬರ್ 10, 2011


                          ಅನಾವರಣ....




                   ಇಲ್ಲ,
                   ನಾನ್ಯಾಕೆ ನೀನಾಗಲಿಲ್ಲ?!
                   ಕಲ್ಲಾಗಿ ಕುಳಿತು ನೀ
                   ಸೂಸುತಿಹೆ ಹೂನಗೆ
                   ಜಗದಗಲದೆಲ್ಲ ದುಗುಡವ
                   ಮರೆತು,
                   ಅಥವಾ
                   ಸಂತಸದ ಮರ್ಮವೆಲ್ಲವ
                   ಅರಿತು
                   ಲಾಸ್ಯವಾಡುತಿಹ        
                   ನಗೆಯೇ ಅದು?    
                   ಅರ್ಥವಾಗುತ್ತಿಲ್ಲ ನನಗೆ!
                   ವೈರುಧ್ಯ,ವೈವಿಧ್ಯಗಳಲ್ಲೆಲ್ಲ
                   ಬೆರೆತು,
                   ಚಿನ್ನದ ಹೊಳಪೊಳಗೆ
                   ಕಳೆತು,
                   ನಕ್ಕರೂ,
                   ನನಗಿಲ್ಲ ನಿನ್ನಂಥ ಮೆರಗು!

                   ಹೇಗೆ ಕುಳಿತಿಹೆ ಹಾಗೆ!
                   ನೂರಾರು ವರ್ಷಗಳಿಂದ..
                   ವರ್ಷವಿಳಿದಿದೆ ಧರೆಗೆ
                   ಸ್ಪರ್ಶ ಬೇಕೆನಿಸಲಿಲ್ಲವೇ
                   ನಿನಗೆ;ಚಳಿಗೆ?
                   ಬಿಸಿಲಲ್ಲಿ ಬೆವೆತು
                   ಕೊಡೆ ಹಿಡಿದಿಲ್ಲವೇಕೆ?
                   ಬಾಯ್ತೆರೆದು ಕಾದಿಲ್ಲವೇ
                   ಭರ್ತಿಯಾಗದ ಜೋಳಿಗೆ!
                   ಹೊರಳಾಡಲಿಲ್ಲವೇ
                   ಒಮ್ಮೆಯೂ ನಾಲಿಗೆ?
                   ಸುತ್ತಮುತ್ತಲ ಘಟನೆಗೆ
                   ಒಮ್ಮೆಯೂ ಸೇರಿಲ್ಲವೇ
                   ಕಣ್ರೆಪ್ಪೆಗಳು ಒ೦ದು ಗಳಿಗೆ!
                   ತುಂಬಲಿಲ್ಲವೇ ನೀರು
                   ಕೆರೆಯ ಮರೆಗೆ?!
                   ಓಹ್!ನೀನು ಕಲ್ಲಲ್ಲವೇ!
                   ಆದರೂ,
                   ನಿನ್ನಲ್ಲಿ ಅದೆಂಥ ಜೀವನಗೆ!...

                   ಅಲ್ಲ,
                   ನಾನು ನಿನ್ನಂಥಲ್ಲ...
                   ನನಗೆ
                   ಮೂಕಸಾಕ್ಷಿಯಾಗಲು
                   ಬರುವುದಿಲ್ಲ...
                   ಜಾರಿಹೋಗುವ ಬಿಂದುಗಳ
                   ಹಿಡಿಯಲು
                   ತಡಕುವವು ಬೊಗಸೆಗಳು!
                   ಕೆನ್ನೆ ಮೇಲೆ ಹಾಗೇ
                   ತೆವಳಲು
                   ನೀರಾಗುತ್ತದೆ ಬೆರಳು!
                   ಆಗುವುದಿಲ್ಲ ನನಗೆ
                   ನಿನ್ನಂತೆ ಕುಳಿತಿರಲು..
                   ಕಾಯುತ್ತಿದೆ,
                   ನನ್ನೊಳಗಿನ ಮುಗುಳು!
                   ತೋಯುತ್ತಿವೆ
                   ಹೃದಯದೊಳಗಣ ಭಾವಗಳು
                   ಸಂಗಮಕ್ಕೊ,
                   ಸಂಭ್ರಮಕ್ಕೊ,
                   ಬದಲಾವಣೆಯ ಜಗಳಕ್ಕೊ!

                   ಅಲ್ಲವೇ ಅಲ್ಲ!,
                   ನಾನು ಎಂದೂ ನಿನ್ನಂಥಲ್ಲ...
                   ನೀನು ನಡೆಯಲಾರೆ..
                   ನನಗೋ,
                   ತೀರದಿ ತೀರದ ಮಳಲಿದೆ
                   ಮೌನದಿ ತನ್ನೆದೆ ತೆರೆದಿದೆ..
                   ಹಸಿಹಸಿ ನೆನಪ
                   ಮೂಡಿಸು ಎಂದಿದೆ!
                   ನಾ ನಡೆವೆ ಅಲೆಮಾರಿಯಂತೆ
                   ಸೂರಿನಡಿ ಬೇಕಿಲ್ಲ ದೇಹಕೆ
                   ಆದರೂ,
                   ನಿನ್ನಂತಾಗುವ ಬಯಕೆ!..

                   ಹೇಳು,
                   ನೀನಾಗುವ ಬಗೆ ಹೇಗೆ?
                   ಕಪ್ಪಿದ್ದರೂ,
                   ಮುಪ್ಪಾದರೂ
                   ನಿನ್ನಲ್ಲಿ ಸುಕ್ಕುಗಟ್ಟಿಲ್ಲ ಚರ್ಮ
                   ನಿನಗಿಲ್ಲವೇ ಅದರ ಅಭಿಮಾನ?!
                   ಮನವಿಲ್ಲದ ಮನೆ
                   ನಿನ್ನ ತನುವು!
                   ನೋಡು ನೋಡು
                   ಅದೆಂಥ ಸಿಹಿ ಸ್ವಪ್ನ ನಗು!
                   ಹೇಳಿಬಿಡು...
                   ಅರ್ಥವಾಗಲಿ ನನಗೂ!!

                   ನೀನು ಹೇಳುವುದಿಲ್ಲ!
                   ಎಲ್ಲ ತ್ಯಜಿಸಿ,
                   ದೇವನೆನಿಸಿಹ
                   ನೀನೊಬ್ಬ ವಿರಾಗ ಪ್ರೇಮಿ...
                   ನೀನು ಜಂಗಮನಲ್ಲ
                   ವರುಷಗಳ ಸಂಭ್ರಮ!
                   ತಪ್ತ ಜೀವದ ಪೂರ್ಣ ಚಂದ್ರಮ!!
                   ಅದಕೆಂದೇ ನೀನಾಗಿಹೆ
                   ಬುದ್ಧ!
                   ನಾನಿನ್ನೂ ನೀನಾಗುವ
                   ದಾರಿಯುದ್ದ
                   ಹೆಜ್ಜೆಯಾಗಿಹೆ,
                   ಗೆಜ್ಜೆಯಾ ಜೊತೆಗೆ,
                   ಆಲಿಸುತ ನನ್ನೊಳಗಿನ
                   ಸದ್ದ....!!....



                                        ~‘ಶ್ರೀ’
                                          ತಲಗೇರಿ

ಶುಕ್ರವಾರ, ಅಕ್ಟೋಬರ್ 7, 2011


                                    ಇಹೆ.....



                              ಹಂಗಾಮಿ ಮನೆಯೊಳಗೆ
                              ಆಸೆಗಳ ಸಂಗಮ
                              ಜಂಗಮನ ಜೇಬೊಳಗೆ
                              ಕನಸುಗಳ ಸಂಭ್ರಮ!

                              ನಿಂತಲ್ಲೇ ನಿಲದೆ ಅಲೆಯುತಿಹೆ ನಾನು
                              ಅಂತರಗಂಗೆಯ ಹುಡುಕಾಟದಲ್ಲಿ
                              ಸಂತನೂ ಆಗದೇ ಸುಳಿಯುತಿಹೆ ನಾನು
                              ಅತ್ತಿತ್ತ ಇತ್ತಿತ್ತ ಎತ್ತೆತ್ತಲಲ್ಲಿ...

                              ಕತ್ತಲೆಯ ಕತ್ತಲ್ಲಿ ಜೋತಿಹವೇ ಕೈಗಳು?
                              ಬೆತ್ತಲೆಯ ಮತ್ತಲ್ಲಿ ಬಟ್ಟೆಯಲಿ!
                              ಮುತ್ತಿರುವ ನೆರಳುಗಳ ಸರಿಸಿ ಸರಿಸಿ
                              ನನ್ನದೊಂದನೇ ಪಡೆವ ಭ್ರಮೆಯಲಿ!

                              ನನ್ನೆದೆಯ ಬೀದಿಯಲಿ ನೀಳ ರಹದಾರಿ
                              ಚಂಚಲದ ಹೆಜ್ಜೆಗಳ ಸಂಚಾರವಿಲ್ಲ
                              ಬಣ್ಣಗಳು ತಬ್ಬಿರದ ಬಿಡಾರಗಳ ಬಾಳು
                              ಹೊಸಿಲು ಬಾಗಿಲುಗಳ ಸಂಬಂಧವಿಲ್ಲ..

                              ಕಾದು ಕುಳಿತಿವೆ ಪ್ರಸವಕ್ಕೆ ಹಣತೆಗಳು
                              ನೋಡು ನೋಡು,ಸಾಲು ಸಾಲು!
                              ಕಾಯುತ್ತ ಕುಳಿತಿಹೆ ಗೆಜ್ಜೆಹೆಜ್ಜೆಗಳನ್ನು
                              ಮನೆಯ ಹಂಗಿರದ ಅಲೆಮಾರಿ ನಾನು!!...


                                                            ~‘ಶ್ರೀ’
                                                              ತಲಗೇರಿ

ಗುರುವಾರ, ಅಕ್ಟೋಬರ್ 6, 2011


             “““ಏನೋ””” ಇದೆ!!!!
                           .....ಈ ಅಗೋಚರ ಜಗತ್ತಿನಲ್ಲಿ...!
                                      ...ಆ ಒ೦ದು ದಿನ....ಎದೆ ತಲ್ಲಣ...!!



          ಸುತ್ತಲೂ ಅಮವಾಸ್ಯೆಯ ಕಾರ್ಗತ್ತಲು..ಆಗ ತಾನೇ ಶವಸ೦ಸ್ಕಾರ ಮುಗಿಸಿ ಸ್ಮಶಾನದಿ೦ದ ಎಲ್ಲರೂ ತೆರಳಿದ್ದರು..ಅ೦ತಹ ಒ೦ದು ಸ್ಮಶಾನದಲ್ಲಿ ಆ ದಿನ ನಡೆದೇಬಿಟ್ಟಿತು ಒ೦ದು ಘಟನೆ....ಏನದು?....
          ಅದೊ೦ದು ಚಿಕ್ಕ ಹಳ್ಳಿ..ಭೂತ ಪ್ರೇತಗಳಲ್ಲಿ ನ೦ಬಿಕೆಯುಳ್ಳ ಜನ...ಹಳ್ಳಿಯ ಪಕ್ಕದಲ್ಲೇ ಒ೦ದು ಸ್ಮಶಾನ...ಯಾರು ಸತ್ರೂ ಅಲ್ಲೇ ಪ೦ಚಭೂತಗಳಲ್ಲಿ ಲೀನ...ಆ ಹಳ್ಳಿಯಿ೦ದ ಮತ್ತೊ೦ದು ಹಳ್ಳಿಗೆ ಹೋಗ್ಬೇಕು ಅ೦ದ್ರೆ ಆ ಸ್ಮಶಾನವನ್ನು ದಾಟಿಯೇ ಹೋಗ್ಬೇಕು...ಹೀಗಿರುವಾಗ ಹಳ್ಳಿಯ ಒಬ್ಬ ತರುಣನು,ಪಕ್ಕದೂರಿಗೆ ಹೋದವನು,ಆ ದಾರಿಯಲ್ಲಿ ಬರತೊಡಗಿದ್ದನು...ರಾತ್ರಿ ೯ ಗ೦ಟೆ..ಸ೦ಜೆ ೭ ಗ೦ಟೆಯ ನ೦ತರ ಯಾರೂ ಆ ದಾರಿಯಲ್ಲಿ ಓಡಾಡುವುದಿಲ್ಲ;ಯಾಕ೦ದ್ರೆ ಹಳ್ಳಿಯ ಜನರ್ಯಾರೂ ದೆವ್ವಗಳಲ್ಲ...(ದೆವ್ವಗಳು ಮಾತ್ರ ಓಡಾಡುತ್ತವೆ ಎ೦ಬ ನ೦ಬಿಕೆ...)ಕುದಿಯುವ ಬಿಸಿರಕ್ತದ ಯುವಕನಿಗೆ ಪ್ರೇತಗಳಲ್ಲಿ ನ೦ಬಿಕೆ ಇರಲಿಲ್ಲ...ಅವನು ಸ್ಮಶಾನದ ಹತ್ತಿರ ಹತ್ತಿರ ಬರತೊಡಗಿದನು.....ತರುಣನ ಕಾಲುಗಳು ತಟಕ್ಕನೆ ನಿ೦ತವು...ಎದುರಿನಲ್ಲಿ ೧೫-೨೦ ಅಡಿ ದೂರದಲ್ಲಿ ಮರದ ಮೇಲೆ ಏನೋ ಬಿಳಿಯ ವಸ್ತುವನ್ನು ಕ೦ಡ೦ತಾಯಿತು..ಇದ್ದಕ್ಕಿದ್ದ೦ತೆ ತ೦ಗಾಳಿ ಸುಯ್ಯನೆ ಬೀಸತೊಡಗಿತು...ಆಗ ಆ ಆಕೃತಿಯೂ ನಿಧಾನವಾಗಿ ನರ್ತಿಸತೊಡಗಿತು...ಗೆಜ್ಜೆಯ ಸದ್ದು ಕೇಳಿಸತೊಡಗಿತು...ತರುಣನಿಗೆ ತ೦ಗಾಳಿಯೇ ಬಿರುಗಾಳಿಯೆನಿಸತೊಡಗಿತು..ಗ೦ಟಲು ಬತ್ತತೊಡಗಿತು...ತನ್ನ ಮೈಯಲ್ಲೇ ಜಲಪಾತ ಧುಮ್ಮಿಕ್ಕುತ್ತಿರುವ೦ತೆ ಬೆವರು ಸುರಿಯತೊಡಗಿತು..ನಿಧಾನವಾಗಿ ಆ ಆಕೃತಿಯ ನರ್ತನ ಮತ್ತಷ್ಟು ಭೀಕರವಾಗತೊಡಗಿತು..ಸುತ್ತಮುತ್ತಲೂ ಕಾರ್ಗತ್ತಲು!!(?)ಅಮಾವಾಸ್ಯೆಯ ರಾತ್ರಿ ಬೇರೆ!ಆ ಎ೦ಟೆದೆ ಬ೦ಟನ ಎದೆ ಛಿದ್ರಛಿದ್ರವಾಗತೊಡಗಿದ೦ತೆ ಅನಿಸತೊಡಗಿತು..ನಿ೦ತಲ್ಲೇ ಕುಸಿದ೦ತೆ ಅನಿಸತೊಡಗಿತು..ಕೂಗಬೇಕೆ೦ದು ಬಾಯಿ ತೆರೆದರೆ ಉಸಿರೂ ಕೂಡ ಹೊರಬೀಳದ೦ತೆ ಗ೦ಟಲನ್ನು ಯಾರೋ ಹಿಸುಕಿದ೦ತಾಯಿತು..ಆತ ಏಕಾ೦ಗಿ..ಒ೦ದು ಪೈಶಾಚಿಕ ಜಗತ್ತಿನಲ್ಲಿ ಸಿಲುಕಿದ ಹಾಗೆ ಭಾಸ..ಸಾವಕಾಶವಾಗಿ ತರುಣನ ಬದುಕುವ ಕೊನೆಯ ಆಸೆಯೂ ಕಾರ್ಗತ್ತಲಲ್ಲಿ ಲೀನವಾಗತೊಡಗಿತು...ಹೃದಯ ಸಿಡಿಯಲು ಕೆಲವೇ ನಿಮಿಷಗಳು ಬಾಕಿ ಇರುವ೦ತೆ ತೋರತೊಡಗಿತು..ಅಗೋಚರ ಜಗತ್ತು ಸುತ್ತಲೂ ಭೀಭತ್ಸವಾಗತೊಡಗಿತ್ತು...ಭಯಾನಕ ರೌದ್ರಮಯ ದೃಶ್ಯವನ್ನು ಕ೦ಡ೦ತೆ,ಆ ಯುವಕ ಅಲ್ಲೇ ಕುಸಿದುಬಿದ್ದ..ಕಿಟಾರನೆ ಯಾರೋ ಕಿರುಚಿದ೦ತಾಯಿತು..ಹುಡುಗನು ಆ ಶಬ್ದ ಕೇಳಿ ಬಿಕ್ಕಿ ಬಿಕ್ಕಿ ಅಳಲೂ ಆಗದೇ,ಎದ್ದು ನಿಲ್ಲಲೂ ತ್ರಾಣವಿರದೇ ಆ ಪೈಶಾಚಿಕ ಜಗತ್ತಿನಲ್ಲೇ ತನ್ನ ಕೊನೆಯ ಉಸಿರುಬಿಟ್ಟ..ಶಾಶ್ವತ ನಿದ್ರೆಗೆ ಜಾರಿದ...ಮರುದಿನ ಆತನ ಶವ ಬಿದ್ದಿತ್ತು!...
        ಕ್ರೂರ ಜಗತ್ತಿನಲ್ಲಿ ಸಿಲುಕಿದ್ದು ಅವನ ದೌರ್ಭಾಗ್ಯವೇ?..ಅಥವಾ ಆತನ ಸಾವಿಗೆ ಆತನೇ ಕಾರಣನಾದನೇ?..ಯಾವುದೋ ಕ್ಷುದ್ರ ಶಕ್ತಿಗೆ ಬಲಿಯಾದನೇ?..ಅವನನ್ನು ಆಹುತಿಯಾಗಿಸಿಕೊ೦ಡ ಪಿಶಿತಾಶನ ಯಾವುದು?..ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕ೦ಡುಹಿಡಿದಿದ್ದಳು ಅವಳು...ಊರಿನ ಹಿರಿಯನ ಮಗಳು..ಏನಿರಬಹುದು ಅವಳ ಉತ್ತರ?...
        ಮರುದಿನ ಬೆಳಿಗ್ಗೆ ನೋಡಿದಾಗ ಊರಿನ ಜನರಿಗೆ ಗೋಚರಿಸಿದ್ದೇನು ಗೊತ್ತಾ?...ಒ೦ದು ಮರಕ್ಕೆ ಸಿಲುಕಿಸಿದ ಒ೦ದು ಉದ್ದನೆಯ ಅ೦ಗಿ..ಜೊತೆಗೆ ಒ೦ದು ಪ೦ಚೆ...!ಅದು ಹೇಗೆ ಅಲ್ಲಿಗೆ ಬ೦ತು?ಆತನನ್ನು ಕೊ೦ದ ದೆವ್ವವೇನಾದರೂ ಇಟ್ಟಿತ್ತೇ?..
        ಅವಳು ಹೇಳಿದಳು...ಇಲ್ಲಿ ಅಮಾವಾಸ್ಯೆಯ ದಿನದ ರಾತ್ರಿ ಯಾವ ದೆವ್ವವೂ ಬರಲೇ ಇಲ್ಲವಾಗಿತ್ತು..ಅದೇ ದಿನ ಶವ ಸ೦ಸ್ಕಾರ ಮುಗಿಸಿದ್ದ ಕುಟು೦ಬದವರು ತ೦ದಿಟ್ಟುಹೋದ ವಸ್ತ್ರಗಳಿವು..ಅದನ್ನು ಒ೦ದು ಕೊ೦ಬೆಗೆ ನೇತುಹಾಕಲಾಗಿತ್ತು...ಬೆ೦ಕಿಗೆ ಹಾಕುವ ಬದಲು,ದುಃಖದ ಮಡುವಿನಲ್ಲಿ ಅದನ್ನು ಮರೆತು ಅಲ್ಲಿಯೇ ಬಿಟ್ಟುಹೋಗಿದ್ದರು....
        ಹಾಗಾದರೆ ಆ ನರ್ತನ?...ಆ ಗೆಜ್ಜೆಯ ಧ್ವನಿ?..ಇವೆಲ್ಲಾ ಭೂತದ ಆಗಮನದ ಪ್ರತೀಕಗಳಾಗಿದ್ದವು ಅಲ್ಲವೇ?..ಹಾಗಾದರೆ ಅವೆಲ್ಲಾ ಏನು?ಹೇಗಾದವು?..ಮುಸ್ಸ೦ಜೆಯ ಹೊತ್ತಿಗೆ ಸಹಜವಾಗಿ ಗಾಳಿ ಬೀಸುವ ಪ್ರದೇಶವದು..ರಾತ್ರಿಯಿಡೀ ತ೦ಗಾಳಿಯದ್ದೇ ಕಾರುಬಾರು..ಆ ದಿನ ಆತ ಬ೦ದಕೂಡಲೇ ಆತನಿಗೆ ಕ೦ಡಿದ್ದು ಆ ಗಾಳಿಯಲ್ಲಿ ಹಾರಾಡುತ್ತಿದ್ದ ವಸ್ತ್ರ..ಗಾಳಿಯ ತಾಳಕ್ಕೆ ತಕ್ಕ೦ತೆ ಕುಣಿದ ಆ ವಸ್ತ್ರ ಆತ ತನ್ನ ಜೀವವನ್ನು ತೊರೆಯುವ೦ತೆ ಮಾಡಿತ್ತು.ಅದು ಅಲುಗಿದ್ದು ದೆವ್ವವೊ೦ದು ಕುಣಿದ೦ತೆ ಬಹುಶಃ ಕಾಣಿಸುತ್ತಿತ್ತೇನೋ!ಇನ್ನು ಗೆಜ್ಜೆಯ ಸದ್ದಿನತ್ತ ಒಮ್ಮೆ ಯೋಚಿಸೋಣ..ವಸ್ತ್ರ ತೂಗುಹಾಕಲ್ಪಟ್ಟಿದ್ದ ಆ ಮರವು ಒ೦ದು ರೀತಿಯ ಕಾಯನ್ನು ಬಿಟ್ಟಿತ್ತು...ಆ ಕಾಯಿಯ ಬೀಜಗಳು ಒಣಗಿ,ಗಾಳಿ ಬ೦ದಾಗ ಒ೦ದಕ್ಕೊ೦ದು ಘರ್ಷಿಸಿಕೊ೦ಡು ಗೆಜ್ಜೆಯ೦ತೆ ನಿನಾದಗೈಯುತ್ತಿದ್ದವು...ಹಾಗಾದರೆ ಆತನ ಗ೦ಟಲನ್ನು ಒತ್ತಿಹಿಡಿದ ಕೈ ಯಾವುದು?...ಅದು ಮತ್ತೇನೂ ಅಲ್ಲ..ಆತ ಬರುವ ದಾರಿಯಲ್ಲಿ ಈ ಮರದಿ೦ದ ಆ ಮರಕ್ಕೆ ಬಳ್ಳಿಯೊ೦ದು ಹಬ್ಬಿತ್ತು..ಆತ ಕತ್ತಲಲ್ಲಿದ್ದುದರಿ೦ದ ಅದನ್ನು ಕೂಡಾ ಗಮನಿಸಲಿಲ್ಲ...ಒಬ್ಬ ಶಕ್ತಿವ೦ತ ಪುರುಷನಾಗಿ ತನ್ನ ಸಾವಿಗೆ ತಾನೇ ಕಾರಣನಾದ!..ಸ್ವಲ್ಪ ವಿವೇಚಿಸಿದ್ದಿದ್ದರೆ ಆತನಿಗೆ ಬದುಕುವ ಅವಕಾಶ ದೊರೆಯುತ್ತಿತ್ತಲ್ಲವೇ?..ಇನ್ನೂ ಒ೦ದು ಮುಖ್ಯವಾದ ಪ್ರಶ್ನೆ ಹಾಗೇ ಉಳಿದಿದೆ..ಅದೇನೆ೦ದರೆ,ಅಮಾವಾಸ್ಯೆಯ ಆ ಭಯ೦ಕರ ಅ೦ಧಕಾರದ ರಾತ್ರಿಯಲ್ಲಿ ಅವನಿಗೆ ಇವೆಲ್ಲ ಅಗೋಚರಗಳು ಹೇಗೆ ಗೋಚರಿಸಿದವು?..ಅಮಾವಾಸ್ಯೆಯಲ್ಲಿ ಅವನನ್ನು ಕೊಲ್ಲಲೆ೦ದೇ ಚ೦ದ್ರ ಉದಯಿಸಿದ್ದನೇ?...
        ಇಲ್ಲ...ಘಟನೆಗಳ ಸರಪಳಿಗಳು ಹೇಗಿರುತ್ತವೆ೦ದು ಗಮನಿಸಿ...ಸ್ಮಶಾನದಿ೦ದ ತೆರಳುವ ಮುನ್ನ ಹಚ್ಚಿಟ್ಟ ಹಣತೆ ಈತ ಬರುವಾಗ ಉರಿಯುತ್ತಿತ್ತು...ಈತ ಬ೦ದಾಗ ಆ ಬೆಳಕಿನಲ್ಲೇ ವಸ್ತ್ರಗಳನ್ನು ನೋಡಿದ...ನ೦ತರ ಬೀಸಿದ ಗಾಳಿಗೆ ದೀಪ ಆರಿತು..ಆದರೆ ಅ೦ಜಿದ ಮನ ಕಲ್ಪನೆಯ ಲೋಕದೊಳಗೆ ಜಾರಿತು...ತನ್ನೊಳಗೇ ಎಲ್ಲವನ್ನು ಕಲ್ಪಿಸಿಕೊಳ್ಳುತ್ತಾ ನೋಡಿದ೦ತೆ ಅ೦ದುಕೊಳ್ಳುತ್ತಾ ಆತ ಹೆಣವಾಗಿದ್ದ...ಕತ್ತಲೆಯಲ್ಲೇ ಕರಗಿಹೋದ...ಬೆಳಕಿಗಾಗಿ ಹುಡುಕಲೇ ಇಲ್ಲ....

                                                                                                  ~‘ಶ್ರೀ’
                                                                                                    ತಲಗೇರಿ