ಇಂಥದ್ದೊಂದು ಸಿನೆಮಾ ಬೇಕಿತ್ತು!
********
ಅಷ್ಟ್ ನಿಧಾನ ಸಿನೆಮಾ, ಅಲ್ಲಾ, ಈಗೆಲ್ಲಾ ಯಾರ್ ಹಾಂಗ್ ಇರ್ತಾರೆ? ಇದು ವಾಸ್ತವಕ್ಕೆ ಹತ್ತಿರಾನೇ ಇಲ್ಲಪಾ, ಕತೇನೂ ಇಲ್ಲ ಸಿನೆಮಾದಲ್ಲಿ, ಚೂರೂ ಇಷ್ಟ ಆಗಿಲ್ಲ, ತುಂಬಾ ಬೇಜಾರ್ ಬಂತು, ಕವಿತೆ ಥರ ಇದ್ಯಪಾ, ಎಲ್ಲಾ ಒಂಥರಾ ಚೆಂದ ಚೆಂದ ಫ್ರೇಮುಗಳು, ನನ್ ಸಮುದ್ರ ನೀನು ಅನ್ನೋ ಹೊಸ ಭಾಷೇನೇ ಹುಟ್ಟಾಕ್ತಪಾ, ಕಣ್ಣಲ್ ನೀರ್ ಬರ್ದೇ ಥಿಯೇಟರ್ ಇಂದ ಆಚೆ ಬರೋದಿಲ್ಲ, ನಾನೆಲ್ಲಿ ಅತ್ತ್ಬಿಡ್ತೀನೋ ಅಂತ ಭಯಕ್ಕೆ ಇನ್ನೂ ಸಿನೆಮಾ ನೋಡಿಲ್ಲ ಅಂತೆಲ್ಲಾ ನೂರಾರು ಅಭಿಪ್ರಾಯಗಳ ಮಧ್ಯ ನನಗೆ ಅನಿಸಿದ್ದು ಇಂಥದ್ದೊಂದು ಸಿನೆಮಾ ಬೇಕಿತ್ತು ನಮ್ಮ ಕನ್ನಡಕ್ಕೆ! ಹೇಗೆ ಕೆಜಿಎಫ್ ಥರದ ಸಿನೆಮಾವೊಂದು ಕನ್ನಡದ ಮಾರುಕಟ್ಟೆಗೆ ಅಗತ್ಯವಿತ್ತೋ, ಹೇಗೆ ಲೂಸಿಯಾ ಥರದ ಸಿನೆಮಾವೊಂದು ಕನ್ನಡದ ಚಿತ್ರರಂಗದ ಏಕತಾನತೆಯನ್ನು ಮುರಿಯುವುದಕ್ಕೆ ಅವಶ್ಯಕವಿತ್ತೋ, ಹೇಗೆ ಉಳಿದವರು ಕಂಡಂತೆ ಥರದ ಸಿನೆಮಾವೊಂದು ಕನ್ನಡದ ಕತೆಯ ಹೇಳುವಿಕೆಗೆ ಅಗತ್ಯವಿತ್ತೋ, ಹಾಗೆಯೇ ಇಂಥದ್ದೊಂದು ಸಿನೆಮಾ ಈ ಹೊತ್ತಿಗೆ ಬಹಳ ಅಗತ್ಯವಿತ್ತು. ಕ್ರೌರ್ಯ, ರಕ್ತ, ಕಾಮ, ಭೋಗ, ಲೋಭ, ಮದ ಇವಿಷ್ಟೇ ಸದ್ಯದ ಚಿತ್ರಗಳ ಕಥಾವಸ್ತುಗಳು. ಬದುಕಿನ ಯಾವುದೋ ಒಂದು ಏಕಾಂತದ ಮಧ್ಯಾಹ್ನದಲ್ಲೋ, ಅಥವಾ ಶನಿವಾರದ ಸಂಜೆಯಲ್ಲೋ ಸುಮ್ಮನೆ ಕೂತು ನೋಡುವಂಥ ಚಿತ್ರಗಳು ಬರದೇ ಅದೆಷ್ಟು ದಿನಗಳಾಗಿದ್ದವು! ಎಲ್ಲರೂ ಕ್ರೌರ್ಯದ ಹಿಂದೆ ಓಡುತ್ತಿರುವಾಗ, ಅರ್ಥವೇ ಇಲ್ಲದ ವಿಜೃಂಭಣೆಗೆ ಒತ್ತು ಕೊಡುತ್ತಿರುವಾಗ, ಒಂದು ಅಪ್ಪಟ ಹಾಗೂ ಶುದ್ಧ ಪ್ರೇಮದ ಕತೆಯನ್ನು ಹೇಳುವುದು ಸುಲಭವಲ್ಲ. ಜೊತೆಗೆ, ನಮ್ಮ ಇಡೀ ಜನಾಂಗವೇ ರೀಲ್ಸ್ ಸ್ಕ್ರಾಲ್ ಮಾಡಿದಷ್ಟು ಸುಲಭವಾಗಿ ಬೇರೆ ಬೇರೆ ಸಂಬಂಧಗಳಿಗೆ ಟಕಟಕಟಕ ಅಂತ ಬದಲಾಗುತ್ತಿರುವಾಗ, ತನಗೆ ಸಿಗದವರು ಇನ್ನ್ಯಾರಿಗೂ ಸಿಗಬಾರದು ಅಂತಲೋ, ಅಥವಾ ತನಗೆ ಸಿಗಲಿಲ್ಲವಲ್ಲ ಅಂತ ನೆನಪುಗಳಲ್ಲೇ ಹಲಬುತ್ತಾ ಬದುಕಿಡೀ ಕೊರಗುವವರ ಮಧ್ಯದಲ್ಲಿ, ಬದುಕನ್ನು ಹೇಗೆ ಚೆಂದವಾಗಿಸಬಹುದು ಅಥವಾ ಬದುಕೇ ಆಗಿದ್ದ ಒಬ್ಬರು ಯಾವುದೋ ಕಾರಣಗಳಿಗಾಗಿ, ಪರಿಸ್ಥಿತಿಗಳಿಂದಾಗಿ ನಮಗೆ ಸಿಕ್ಕದೇ ಹೋದಾಗ, ಅದನ್ನು ಹೇಗೆ ನಿಭಾಯಿಸಬಹುದು, ಪ್ರೀತಿಯ ಅಂತಿಮ ಗುರಿ ಏನು ಇತ್ಯಾದಿಗಳನ್ನೆಲ್ಲವನ್ನೂ ಒಟ್ಟಿಗೆ ನಮ್ಮ ಮುಂದಿಡುವ ಚಿತ್ರ 'ಸಪ್ತ ಸಾಗರದಾಚೆ ಎಲ್ಲೋ'
ನಿರ್ದೇಶಕರು ಹಾಗೂ ನಟ ಇಬ್ಬರೂ ಹೇಳಿದ ಹಾಗೆ ಈ ಚಿತ್ರ ಒಂದು ಕಾವ್ಯ. ಕಾವ್ಯದ ಗುಣವೇ ಅದು. ಎಲ್ಲರಿಗೂ ರುಚಿಸುವುದಿಲ್ಲ. ಎಲ್ಲರಿಗೂ ಅರ್ಥವಾಗುವುದೂ ಇಲ್ಲ. ಎಲ್ಲರಿಗೂ ಇದು ಅಗತ್ಯ ಅಂತ ಅನ್ನಿಸುವುದೂ ಇಲ್ಲ. ಕಾವ್ಯ ಯಾವತ್ತಿಗೂ ನಮ್ಮ ನಮ್ಮ ಪಾಲಿಗೆ ದಕ್ಕಿದಷ್ಟೇ! ಸಿನೆಮಾದ ಮೊದಲ ಭಾಗದಲ್ಲಿ ನಡೆದಂಥ ಒಂದು ಘಟನೆ ಹಾಗೂ ಅದರಿಂದ ಬಹುದೊಡ್ಡ ಕನಸನ್ನು ಕಟ್ಟಿಕೊಂಡಿರುವ ಹುಡುಗನೊಬ್ಬ ತೆಗೆದುಕೊಂಡ ಸಾಮಾನ್ಯವಾದ ಸಣ್ಣ ನಿರ್ಧಾರವೊಂದು ಆ ಹುಡುಗನ ಇಡೀ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತಲ್ಲಾ ಅಂತ ನೆನೆದಾಗಲೆಲ್ಲಾ ಎದೆ ಬಡಿತ ಜೋರಾಗುತ್ತದೆ. ಇಂಥ ತಪ್ಪುಗಳನ್ನು ಮಾಡಿ ಈ ಹೊತ್ತಿನಲ್ಲಿ ಅದೆಷ್ಟು ಜನ ಜೈಲುಗಳಲ್ಲಿ ಇದ್ದಿರಬಹುದು ಹಾಗೂ ಅವರೆಲ್ಲರ ಅಷ್ಟು ವರ್ಷಗಳ ಆ ಬದುಕು ಕೇವಲ ಒಂದು ನಿರ್ಧಾರದಿಂದ ಅದೆಷ್ಟು ಭಿನ್ನವಾಯಿತಲ್ಲಾ ಅಂತ ನೆನೆಸಿಕೊಂಡರೆ ಉಸಿರು ಭಾರವಾಗುತ್ತದೆ. ಸಿನೆಮಾ ನೋಡುವಾಗಲೂ ಇಂಥದ್ದೇ ಭಾರದ ಉಸಿರು ಬಾರಿ ಬಾರಿ ಎದುರಾಗುತ್ತಿತ್ತು. ಮೊದಲ ಭಾಗ ಮುಗಿದಾಗ ಅದೆಷ್ಟು ಜನರು "ಎರಡನೇ ಭಾಗದಲ್ಲಾದರೂ ಅವರನ್ನು ಒಂದಾಗಿಸಿ ನಿರ್ದೇಶಕರೇ" ಅಂತ ಅಂದವರಿಲ್ಲ! ಅಂಥದ್ದೊಂದು ಮಾತನ್ನು ಇತ್ತೀಚಿನ ಯಾವ ಸಿನೆಮಾಗಳಿಗೆ ನಾವು ಕೇಳಿದ್ದೆವು! ಎರಡು ಭಾಗಗಳಲ್ಲಿ ಬಂದಿದ್ದರೆ ಕೇಳುತ್ತಿದ್ದೆವೇನೋ ಅನ್ನಬಹುದು. ಆದರೆ, ಎರಡು ಭಾಗಗಳಲ್ಲಿ ಹೇಳುವುದಕ್ಕೆ ಕತೆಯೊಂದು ಇರಬೇಕಲ್ಲಾ! ಅಂಥ ಕತೆ ಇತ್ತೀಚಿನ ದಿನಗಳಲ್ಲಿ ಬಹಳ ಕಡಿಮೆ. ಪ್ರೇಮಕತೆಗಳನ್ನು ಎಷ್ಟು ಅಂತ ಹೇಳಬಹುದು ಅಂತ ಅಂದುಕೊಳ್ಳುತ್ತಿರುವಾಗಲೇ, ಹೀಗೊಂದು ಪ್ರಾಮಾಣಿಕವಾದ ಕತೆ ಸಿಕ್ಕಿದರೆ ಅದಕ್ಕಿಂತ ಚೆಂದದ ಸಂಗತಿ ಇನ್ನೇನಿದೆ.
ಮೊದಲನೇ ಭಾಗದಲ್ಲಿ ಇದ್ದಂಥ ದೃಶ್ಯ ಸೂಕ್ಷ್ಮತೆಗಳು "ಆಹ್ಞಾ, ವ್ಹಾ!" ಅನ್ನಿಸುವಷ್ಟು ಚೆಂದ. ಬಸ್ಸಿನಲ್ಲಿ ನಿತ್ಯವೂ ನಡೆವ ಘಟನೆ ಹೇಗೆ ಕೊನೆಯಲ್ಲಿ ಇಡೀ ಚಿತ್ರದ ಹಾಗೂ ಬದುಕಿನ ದಾರಿಯನ್ನು ಸೂಚಿಸುತ್ತದೋ, ಹಾಗೆಯೇ ಭಾಗ ಎರಡರ ಶುರುವಿನಲ್ಲಿ ನಟ ಗೊಂಬೆಯನ್ನು ಹೇಗೆ ಎತ್ತಿಕೊಂಡು ಹೋಗುತ್ತಾನೆ ಅಂತ ತೋರಿಸುವ ದೃಶ್ಯ ಮುಂದಿನ ಇಡೀ ಕಥಾಹಂದರವನ್ನು ಸೂಚಿಸುತ್ತದೆ. ಇಂಥ ಸೂಚ್ಯ ದೃಶ್ಯಗಳು ಚಿತ್ರದ ಜೀವಾಳ. ಕವಿತೆ ಅಂದರೂ ಅದೇ ಅಲ್ವಾ! ವಾಚ್ಯವಾಗದೇ ಸೂಚ್ಯವಾಗುವುದು. ಖುಷಿಯ ವಿಷಯವೆಂದರೆ ಎಲ್ಲಿಯೂ ಕತೆಯ ಮೂಲ ಆಶಯದಿಂದ ಆಚೆ ಹೋಗದೇ, ಅದೇ ವಿಷಯಕ್ಕೆ ಅಂಟಿಕೊಂಡಿದ್ದು. "ಒಂದು ಕನಸು ಕಂಡೆ. ಆದರೆ, ಮತ್ತೆಂದಿಗೂ ಆ ಕನಸಿಗೆ ವಾಪಸ್ಸು ಹೋಗುವುದಕ್ಕೆ ಸಾಧ್ಯವಾಗಲೇ ಇಲ್ಲ" ಅಂತ ಅಂದಾಗ, ಆ ಕನಸೇ ಬದುಕಿನ ಅಂತಿಮ ಗುರಿ ಹಾಗೂ ಅದಕ್ಕಿಂದ ಭಿನ್ನವಾದ ಆಸೆಗಳೇನೂ ಇಲ್ಲ ಅಂದಾಗ ಅಂಥ ಕನಸಿಗೆ ಹತ್ತಿರವಾದ ವಾಸ್ತವವನ್ನು ಕಟ್ಟಿಕೊಳ್ಳುವುದೇ ಬಹುಶಃ ಅತ್ಯಂತ ಸಮರ್ಪಕವಾದ ಕೆಲಸ ಅಂತನ್ನಿಸದೇ ಹೋಗುವುದಿಲ್ಲ. ಬೇರೆ ಕನಸು ಕಾಣಬಹುದಿತ್ತು. ಬೇರೆ ಬದುಕು ಬಾಳಬಹುದಿತ್ತು. ಆದರೆ, ಕೊನೆಯಲ್ಲಿ ಎಲ್ಲವೂ ನಮ್ಮ ಆಯ್ಕೆಗಳೇ ಅಲ್ಲವಾ! ಆಯ್ಕೆಗಳು ಬದಲಾದರೆ, ಬದುಕಿನ ದಾರಿ ಬದಲಾಗುತ್ತದೆ. ಆದರೆ, ಆಯ್ಕೆಗಳೇ ಬೇಡ ಅಂತಂದುಕೊಂಡಾಗ ದಾರಿಯೂ ಒಂದೇ, ನಡೆಯುವುದು ಹೇಗೆಲ್ಲಾ ಅನ್ನುವುದನ್ನು ಮಾತ್ರವೇ ನೋಡಿಕೊಳ್ಳಬೇಕಷ್ಟೇ!
ಈ ಸಿನೆಮಾ ಸುಮ್ಮನೆ 'ನಂದೂ ಒಂದಿರ್ಲಿ' ಅಂತ ಮಾಡಿದ ಸಿನೆಮಾವಲ್ಲ. ಸಿನೆಮಾ ಮಾಡುವಾಗ ಸಿನೆಮಾದ ಕುರಿತಾಗಿನ ಕಾಳಜಿಯಿದೆ. ಸಿನೆಮಾದ ಕತೆಯ ಕುರಿತಾಗಿನ ಕಾಳಜಿಯಿದೆ. ಅಲ್ಲಿ ಬರುವ ಪಾತ್ರಗಳ ಕುರಿತಾಗಿಯೂ, ಆ ಪಾತ್ರಗಳ ವಸ್ತ್ರಗಳ ಕುರಿತಾಗಿಯೂ, ಇಡೀ ಚಿತ್ರದಲ್ಲಿ ಬರುವ ಬಣ್ಣಗಳ ಕುರಿತಾಗಿಯೂ ನಿರ್ದೇಶಕರು ಯೋಚಿಸಿದ್ದಾರೆ. ಅದರಲ್ಲೂ ಕನ್ನಡದ ಪ್ರಸಿದ್ಧ ಕವಿತೆಯ ಸಾಲೊಂದನ್ನು ಇಟ್ಟುಕೊಂಡು, ಅದರಲ್ಲೂ ಆಧ್ಯಾತ್ಮಿಕವಾಗಿ ಬಹಳ ಆಳದ ಸಂಗತಿಯೊಂದನ್ನು ಹೇಳುವ ಕವಿತೆಯ ಸಾಲೊಂದನ್ನು ಇಟ್ಟುಕೊಂಡು, ಅಷ್ಟೇ ಚೆಂದದ ಪ್ರೇಮದ ಸಿದ್ಧಾಂತವನ್ನು ಹೇಳುವುದು ಸುಲಭವಲ್ಲ. ನೀನೂ ಆ ಕಡಲಿನ ಭಾಗ, ನಾನೂ ಆ ಕಡಲಿನ ಭಾಗ, ನಮ್ಮಿಬ್ಬರ ದಡಗಳು ಮಾತ್ರ ಬೇರೆ ಅನ್ನುವ ಅರಿವಿಟ್ಟುಕೊಂಡು ಕಡಲನ್ನೇ ಸೇರದ ನದಿಯ ಬಳಿಗೆ ಕಡಲೂ ಹೋಗದೇ, ಆದರೆ, ನದಿಯ ಹರಿವು ಮಾತ್ರ ಕಳೆದುಹೋಗದ ಹಾಗೆ ನೋಡಿಕೊಳ್ಳುವ ಕಡಲಿನ ಗುಣ ಬೇಕಲ್ಲವೇ ಈ ಹೊತ್ತಿಗೆ! ಪುಟ್ಟ ಶಂಖವೊಂದನ್ನು ಕಿವಿಗಿಟ್ಟುಕೊಂಡಾಗಲೆಲ್ಲಾ ಕಡಲಿನ ಅಲೆಗಳ ಸದ್ದೇ ಕೇಳುತ್ತದೆ ಅಂತ ನಾಯಕ ಅಂದುಕೊಂಡಾಗಲೆಲ್ಲಾ ನಾನೂ ಒಮ್ಮೆ ಕಿವಿಗಿಟ್ಟು ನೋಡಬೇಕು ಅಂತ ನನಗೆ ಆ ಕ್ಷಣಕ್ಕೆ ಅನಿಸಿದ್ದು ಸುಳ್ಳಲ್ಲ. ಅದು ಅಂಥ ದೃಶ್ಯಗಳ ತಾಕತ್ತು. ಒಡೆದ ಕನ್ನಡಿಯ ಬಿಂಬ, ವ್ಯಕ್ತಿಗಳ ಇತಿಹಾಸವನ್ನು ಕೆದಕದೇ ಸದ್ಯದ ಬದುಕಿಗೆ ಅಂಟಿಕೊಳ್ಳುವುದು, ಸ್ಥಗಿತವಾದ ರೈಲು ಹೇಗೆ ಅವನ ಬದುಕಿನ ಕತೆಯನ್ನು ಕಟ್ಟಿಕೊಡುತ್ತದೋ, ಭ್ರಮೆಯಲ್ಲಿಯೂ ವಾಸ್ತವದ ನೆರಳು ಇವೆಲ್ಲವೂ ಕತೆಯ ಸೂಕ್ಷ್ಮ ಹೆಣಿಗೆಗಳು.
ಹಾಗಂತ ಸಿನೆಮಾದಲ್ಲಿ ಎಲ್ಲವೂ ಸರಿಯಿತ್ತಾ? ಅಂದರೆ, ಒಬ್ಬೊಬ್ಬರಿಗೆ ಒಂದೊಂದು ಅಂಶಗಳು ಸರಿಯಿಲ್ಲ ಅಂತನ್ನಿಸಿರಬಹುದು. ನನಗೆ ಚಿತ್ರದ ಶೀರ್ಷಿಕೆ ಹಾಡೇ ಇಷ್ಟವಾಗಲಿಲ್ಲ; ಅದಕ್ಕೆ ಕಾರಣವೂ ಆ ಶೀರ್ಷಿಕೆಯೂ ಹಾಗೂ ಆ ಶೀರ್ಷಿಕೆಗಿರುವ ಹಿನ್ನೆಲೆಯೂ! ಅದರ ಜೊತೆಗೆ ಚಿತ್ರದ ಕೊನೆ ಭಾವನಾತ್ಮಕವಾಗುವ ಭರದಲ್ಲಿ ಚೂರು ವಾಸ್ತವಕ್ಕಿಂತ ದೂರವಾಯಿತು ಅಂತ ಅನಿಸಿದ್ದು ಹೌದು. ಮನಸ್ಸನ್ನು ಕದಡದ ಕಾವ್ಯ ಬಹುಶಃ ಒಳ್ಳೆಯ ಕಾವ್ಯವಾಗಿರಲಿಕ್ಕಿಲ್ಲ ಅನ್ನುವುದು ಒಂದು ನಂಬಿಕೆ. ಹಾಗಂತ ಎಲ್ಲಾ ಕಾವ್ಯಗಳು ಬರೀ ದುಃಖವನ್ನೇ ತುಂಬಿಕೊಂಡಿದ್ದರೆ ಮಾತ್ರ ಅವು ಒಳ್ಳೆಯ ಕಾವ್ಯ ಅಂತಲ್ಲ. ಈ ಎಲ್ಲಾ ನೋವುಗಳನ್ನು ಮಡುಗಟ್ಟಿಸಿ ಕಾವ್ಯ ಹುಟ್ಟುವುದು. ಹಾಗಾಗಿಯೇ ಕಾವ್ಯದ ಒಂದೊಂದು ಸಾಲೂ ಬಹಳಷ್ಟನ್ನು ಹೇಳುತ್ತದೆ. ಯಾಕೆಂದರೆ, ಅದು ತೆಳುವಾದದ್ದಲ್ಲ. ತೇಲಿಸುವಿಕೆ ಅಲ್ಲ. ಅದು ಭಾರವಾದದ್ದು, ಮುಳುಗಿಸುವಂಥದ್ದು, ಕಡಲಿನಂಥದ್ದು.
ಇವತ್ತಿನ ಜನಾಂಗಕ್ಕೆ ಇದು ತಾರ್ಕಿಕತೆ ಮತ್ತು ವಾಸ್ತವವಿಲ್ಲದ ಸಿನೆಮಾದಂತೆ ಕಂಡರೂ, ಈ ಸಿನೆಮಾದಲ್ಲೊಂದು ಕನಸಿದೆ. ಮತ್ತೆ, ನಾವು ಆ ಕನಸಿಗೆ ವಾಪಸ್ಸು ಹೋಗಬಹುದಾ!
ನಿಜ, ಈ ಹೊತ್ತಿಗೆ ನಮಗೊಂದು ಇಂಥ ಕಡಲ ಕತೆ ಬೇಕಿತ್ತು!
ಧನ್ಯವಾದಗಳು Hemanth M Rao , Hemanth M Rao , Rakshit Shetty ನಿಮ್ಮಿಬ್ಬರಿಗೂ!
~`ಶ್ರೀ'
ತಲಗೇರಿ