ಭಾನುವಾರ, ಜುಲೈ 13, 2014

"ರೇಖೆಗಳು ಕರಗುವ ಸಮಯ.."

"ರೇಖೆಗಳು ಕರಗುವ ಸಮಯ.."

ಮೆಲ್ಲನೆ ನಕ್ಕಿತು ಮಲ್ಲಿಗೆಯ ಹೂವೊಂದು
ಉದುರಿತು ಅದರಿಂದ ಚಂದ್ರನಾ ಚೂರೊಂದು
ಪರಿಮಳದ ಗಾಳಿಯಲಿ ಹಾರುತಿದೆ ನವಿಲುಗರಿ
ದಾರವನು ಸೇರುತಿದೆ ನಾಚುತಲಿ ಬುಗುರಿ...

ಶ್ರಾವಣದ ತಿಳಿಸಂಜೆ ಅಧರಗಳು ಬೆದರಿ
ಗೋಡೆಗಳು ನಿಂತಿಹವು ಒಳಗೊಳಗೇ ಬೆವರಿ..
ಬೀದಿದೀಪಕೆ ಕಳೆದ ಕಾರ್ಮುಗಿಲ ಕಡು ಶಾಪ
ಹವೆಯ ಕವಿದಿದೆ ಈಗ ಅವಳದೇ ಮೈಧೂಪ..
ನಾ ಬರೆದ ರೇಖೆಗಳು ಕರಗುವಾ ಸಮಯ
ಕಾಗದನ ಮನೆಯಲ್ಲಿ ಬಣ್ಣಗಳ ಪರಿಣಯ..

ಚಾದರದ ಚಿತ್ರದಲಿ ತಿರುವುಗಳ ಹುಡುಕಾಟ
ಮೇರೆಗಳಿಗೆ ಸಾಕ್ಷಿಯಿಲ್ಲಿ ಒಂದು ಹಳೆಯ ಭೂಪಟ..
ಭ್ರಮರದಾ ಸ್ವರದಲ್ಲಿ ಮಧುವಿನಾ ಗೊಣಗಾಟ
ಹೂವೆದೆಯ ಮೆದುವಿನಲಿ ನೆಟ್ಟಿರಲು ಬಾವುಟ...
ನಾ ಬರೆದ ರೇಖೆಗಳು ಕರಗುವಾ ಸಮಯ
ಕಾಗದನ ಮನೆಯಲ್ಲಿ ಬಣ್ಣಗಳ ಪರಿಣಯ..

ಕಮಾನು ಕಟ್ಟಿಹುದು ನನ್ನವಳ ಪಿಸುಮಾತು
ಹಾದಿಯಾ ಹಾಸಿಹುದು ಹರೆಯಕೆ,ಕಾಮನಾ ಸೇತು..
ಗಮ್ಯವದು ಮರೆತೀತೇ ರಮ್ಯ ರಸಗಳಿಗೆಯಲಿ
ಮತ್ಸ್ಯ ಮಿಥುನ ಸುರತ,ಸೌಮ್ಯ ಶರಧಿಯಲಿ..
ನಾ ಬರೆದ ರೇಖೆಗಳು ಕರಗುವಾ ಸಮಯ
ಕಾಗದನ ಮನೆಯಲ್ಲಿ ಬಣ್ಣಗಳ ಪರಿಣಯ...

                                                  ~'ಶ್ರೀ'
                                                      ತಲಗೇರಿ

2 ಕಾಮೆಂಟ್‌ಗಳು:

  1. best of best:
    "ನಾ ಬರೆದ ರೇಖೆಗಳು ಕರಗುವಾ ಸಮಯ
    ಕಾಗದನ ಮನೆಯಲ್ಲಿ ಬಣ್ಣಗಳ ಪರಿಣಯ.."

    "ಕಮಾನು ಕಟ್ಟಿಹುದು ನನ್ನವಳ ಪಿಸುಮಾತು
    ಹಾದಿಯಾ ಹಾಸಿಹುದು ಹರೆಯಕೆ,ಕಾಮನಾ ಸೇತು.."

    ಪ್ರತ್ಯುತ್ತರಅಳಿಸಿ