ಸೋಮವಾರ, ಸೆಪ್ಟೆಂಬರ್ 21, 2020

ಆ ಊರು...ಗದ್ದಲದ ನಡುವಣ ತಣ್ಣನೆಯ ಶೋಕ...

 ಆ ಊರು..

      ...ಗದ್ದಲದ ನಡುವಣ ತಣ್ಣನೆಯ ಶೋಕ...



ಎಲ್ಲಿ ನೋಡಿದರಲ್ಲಿ ಕಲ್ಲು, ಹೆಬ್ಬಂಡೆ.. ಉರಿ ಬಿಸಿಲು ಒಂದು ಕಡೆಯಾದರೆ , ಧೂಳಿನ ದಟ್ಟತೆ ಇನ್ನೊಂದು ಕಡೆ.. ಬಣ್ಣ ಕಳೆದುಕೊಂಡ ಗಿಡಮರದ ಎಲೆಗಳು ಹಸಿರಿಗಾಗಿ ಬಹುಶಃ ಮರುಗುತ್ತಿರಬಹುದು.. ಪುಟ್ಟ ಪುಟ್ಟ ಬೀದಿ, ಇಷ್ಟೆಂದರೇ ಇಷ್ಟೇ ಇರುವ ಓಣಿಗಳು.. ಸಗಣಿ‌ ಹಾಕಿ ಸಾರಿಸಲ್ಪಟ್ಟಿವೆ ಕೆಲವು ಕಡೆ, ಪುಟಾಣಿ ಮತ್ತು ಮಧ್ಯಮ ಗಾತ್ರದ ರಂಗೋಲಿಗಳು ಅಲ್ಲೇ ಎಲ್ಲೋ ಕಾಣಲ್ಪಡುತ್ತವೆ.. ಎಲ್ಲಾ ಬೀದಿಯನ್ನ ಹಬ್ಬಿಕೊಂಡಿರುವುದು ಅಂಗಡಿ ಮತ್ತು ಹೋಟೆಲ್ಗಳು.. ಜೊತೆಗೆ ಅತಿಥಿ ಗೃಹಗಳು.. ಎಲ್ಲಾ ವರ್ಗದ ( ಇದ್ದಲ್ಲಿ ) , ಎಲ್ಲಾ ಥರದ ಜನರಿಗೆ ಇಷ್ಟವಾಗುವ ಹಾಗೆ ಮಾಡಿಕೊಂಡ ಹಲವು ಕಸರತ್ತುಗಳ ನಡುವೆಯೂ ಈ ಊರು ಆಪ್ತವಾಗುತ್ತದೆ, ಇರುವಷ್ಟು ದಿನವೂ ಕೌತುಕವಾಗುತ್ತದೆ.. ರಸ್ತೆಯ ಪಕ್ಕ ಎಲ್ಲಿಂದಲೋ ಹಾರಿ ಬಂದು ಬಿದ್ದ ಕಲ್ಲೂ ತನ್ನದೇ ಕತೆಯ ಭಿತ್ತಿಪತ್ರ ಹಿಡಿದು ನಿಂತಿರುತ್ತದೆ.. ಆ ಊರಿನ ಎದೆಯ ಬೀದಿಯ ತಿರುವುಗಳಲ್ಲಿ ಒಮ್ಮೆ ಓಡಾಡೋಣ ಬನ್ನಿ..ಅರೇ, ಆ ಊರಾದ್ರೂ ಯಾವ್ದು ಅಂತಾನಾ?!..ಅದೇ, ಅಂಗಾಂಗ ಮುರಿದರೂ ಸಾವರಿಸಿ ಉಳಿದ ನಮ್ಮ ಹಂಪಿ.. 


ಇಡೀ ಜಗತ್ತಿಗೆ ಹೇಗೆ ಒಂದು ರೂಪ ಇದೆಯೋ ಹಾಗೆಯೇ ಒಂದು ನಗರಕ್ಕೆ ಕೂಡಾ.. ಅಂತೆಯೇ ಒಂದು ಊರಿಗೂ ಕೂಡ ಆಕಾರ ಮತ್ತು ಶ್ವಾಸ ಇದೆ.. ಯಾವುದೇ ಒಂದು ಊರು ಅಥವಾ ಒಂದು ಪ್ರದೇಶ ಅಲ್ಲಿನ ಜನಾಂಗದ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಉಸಿರಾಡುತ್ತದೆ.. ಮನುಷ್ಯನ ಜೀವನಶೈಲಿಯ, ನಾಗರಿಕತೆಯ ಮತ್ತು ವಿಕಾಸದ ಕುರುಹುಗಳು ಇಡೀ ಊರಿನ ಬಾಹ್ಯ ಮತ್ತು ಆಂತರಿಕ ಅಭಿವ್ಯಕ್ತಿಯ ಮೇಲೆ ತುಂಬಾನೇ ಪ್ರಭಾವ ಬೀರುತ್ತವೆ. ನಮ್ಮ ದೇಹದ ಯಾವುದೋ ಒಂದು ಚಿಕ್ಕ ಭಾಗಕ್ಕೆ ಏಟಾದರೂ ಅಥವಾ ನೋವಾದರೂ ಇಡೀ ದೇಹದ ಸಮತೋಲನದಲ್ಲೇನೋ ಸಣ್ಣ ಏರುಪೇರಾಗುತ್ತದೆ , ಯಾವತ್ತಿನಂತಿರುವುದಿಲ್ಲ ದಿನಚರಿ.. ಅಂತಹುದರಲ್ಲಿ ವಿಸ್ತಾರವಾಗಿ ಹರಡಿದ್ದಂಥ ಒಂದು ಬೃಹತ್ ಸಾಮ್ರಾಜ್ಯದ ಮೇಲೆ ಧಾಳಿ ನಡೆದಾಗ ಅದರ ಪ್ರತಿರೋಧ ಎಂಥದ್ದಿರಬಹುದು.. ಅಥವಾ, ಪ್ರತಿರೋಧವನ್ನೂ ಮೀರಿ, ನಡೆಸಿದ ಅನಾಹುತಗಳ ಪರಾಕ್ರಮದ ಪ್ರಭಾವ ಎಂಥದ್ದಿರಬಹುದು.. ಅಥವಾ ಕ್ರೌರ್ಯದ ಪರಮಾವಧಿಯ ತೀಕ್ಷ್ಣತೆ ಎಂಥದ್ದಿರಬಹುದು.. ಯಾಕೆ ಯಾವಾಗಲೂ ಕಲಾ ಪ್ರಕಾರಗಳ ಮೇಲೆಯೇ ಧಾಳಿಯಾಗುವುದು ಎಂಬ ಇಂಥದ್ದೊಂದು ವಿಷಯವನ್ನ ಹೀಗೇ ಧನ್ಯಾಳ ಹತ್ತಿರ ಮಾತನಾಡೋವಾಗ ಅವಳು, ಯಾವುದೇ ಸಾಮ್ರಾಜ್ಯ ಇತ್ತು ಅಂತ ಹೇಳುವುದಕ್ಕೆ ಇರುವ ಸಾಕ್ಷಿ ಅಂದರೆ ಅಲ್ಲಿನ ಕಲಾ ಪ್ರಕಾರಗಳು ಅಥವಾ ರಚನಾ ಶೈಲಿ.. ಒಂದು ವೇಳೆ ಅದೇ ಕಲಾ ಪ್ರಕಾರಗಳ ಮೇಲೆಯೇ ಧಾಳಿಯಾದಲ್ಲಿ , ಅದನ್ನೂ ಕೂಡ ಇದೇ ಕಲಾ ಪ್ರಕಾರಗಳು ಮುಂದಿನ ಪೀಳಿಗೆಗೆ ದಾಟಿಸುತ್ತವೆ.. ಒಂದು ಸಾಮ್ರಾಜ್ಯದ ಪ್ರತಿಷ್ಠೆಗೂ ಮತ್ತು ಅದೇ ಸಾಮ್ರಾಜ್ಯ ನಲುಗಿದ ಕತೆಗೂ ಅಭಿವ್ಯಕ್ತಿಯ ಮಾಧ್ಯಮವೆಂದರೆ ಕಲೆ ಮಾತ್ರ ಎಂದಳು.. ಬಹುಶಃ ಎಲ್ಲಾ ಸಾಮ್ರಾಜ್ಯದ ಅವನತಿಯ ಹಿಂದೆ, ಕಲೆಯ ಮೇಲೆ ನಡೆದಂಥ ಅತ್ಯಾಚಾರದ ಕಣ್ಣೀರು ಹೆಪ್ಪುಗಟ್ಟಿ ಜಿಡ್ಡಾಗಿ ಅಂಟಿಕೊಂಡಿರಬಹುದು.. ಹಂಪಿಯ ವಿಷಯದಲ್ಲಿಯೂ ಆಗಿದ್ದು ಇದೇ.. ಚದರ ಚದರ ವಿಸ್ತೀರ್ಣದಲ್ಲಿ ಹಬ್ಬಿಕೊಂಡ ಸಾಮ್ರಾಜ್ಯವೊಂದು ವೈಭವ ಕಳೆದುಕೊಳ್ಳುವುದೇ ಊಹಿಸಲು ಕಷ್ಟ ಸಾಧ್ಯ.. ಆದರೆ ಚಾರ್ಲ್ಸ್ ಡಾರ್ವಿನ್ನಿನ ಸಿದ್ಧಾಂತದಂತೆ , ಹೊಂದಿಕೊಳ್ಳುವುದಕ್ಕೆ ಸಮರ್ಥವಾದುದು ಮಾತ್ರವೇ ಬದುಕಲು ಸಾಧ್ಯ ಅನ್ನುವಂತೆ, ಸೃಷ್ಟಿಯಲ್ಲಿ ನಿರ್ಮಾಣ ಮತ್ತು ನಾಶ ನಿರಂತರ ಪ್ರಕ್ರಿಯೆ; ಹುಟ್ಟು ಸಾವು ಅದರ ಇತರ ನಾಮವೋ ಅಥವಾ ಪ್ರಬೇಧವೋ!.. ಒಂದು ತಿಂಗಳ‌ ಮೇಲಾಯಿತು ಹೋಗಿಬಂದು ಮತ್ತು ಈಗಲೂ ಏನೋ ಅತೃಪ್ತಿ ಮತ್ತು ಅಸಮಾಧಾನ ಹಾಗೂ ಇಷ್ಟು ದಿನ ಬೇಕಾಯಿತು ಬರೆಯಬೇಕು ಅಂತನ್ನಿಸುವುದಕ್ಕೆ , ಹಂಪಿ ಇನ್ನೂ ಪೂರ್ಣವಾಗಿ ತೆರೆದುಕೊಳ್ಳುವುದು ಬಾಕಿಯೇ ಉಳಿಯಿತು ಅನ್ನುವ ಸಣ್ಣ ಕೊರಗು.. ಹೊಸಪೇಟೆಯಿಂದ ಹಂಪಿಗೆ ಹೋದಲ್ಲಿ , ವಿರೂಪಾಕ್ಷ ದೇವಸ್ಥಾನದ ಹತ್ತಿರದ ಬಜಾರ್ ನಮ್ಮನ್ನ ಸ್ವಾಗತಿಸುತ್ತದೆ. ಚಿನ್ನವನ್ನ ಬಳ್ಳದಲ್ಲಿ ಮಾರಾಟ ಮಾಡುತ್ತಿದ್ದರು ಅನ್ನುವುದನ್ನ ಬಾಲ್ಯದಲ್ಲಿ ಕೇಳಿದ್ದ ನಾವು ಅದೇ ನೆಲದಲ್ಲಿ ನಿಂತಾಗ ಇತಿಹಾಸಕ್ಕೂ ಮತ್ತು ವರ್ತಮಾನಕ್ಕೂ ಅತ್ಯಂತ ಆಪ್ತ ಸಂಬಂಧವೊಂದು ಹುಟ್ಟಿಕೊಂಡುಬಿಡುತ್ತದೆ.. ಹಂಪಿ ಹೀಗೆ ತನ್ನೊಳಗಿನ ಕತೆಯನ್ನ ಹೇಳಲು ಶುರುಮಾಡುತ್ತದೆ ಮತ್ತು ಆ ಕತೆಯನ್ನು ಕೇಳಲು ತಯಾರಾಗಿ ಹೋಗಿದ್ದು ರಾಧಿಕಾ ಅಕ್ಕಾ , ಸುಮುಖಣ್ಣಾ , ಸಹನಕ್ಕಾ , ಶ್ರೀಗೌರಿ , ಅಭಿಜಿತ್.. ನನ್ನ ಬಹುದಿನದ ಕನಸೊಂದಕ್ಕೆ ರೆಕ್ಕೆ ಕೊಟ್ಟಿದ್ದಕ್ಕೆ ನಿಮಗೆಲ್ಲರಿಗೂ ನಾನು ಚಿರ ಋಣಿ..  


ಒಂದು ಕಡೆ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ, ಇನ್ನೊಂದು ಕಡೆ ರಾಮಾಯಣದ ಹೊಳಹು. ಇತಿಹಾಸದ ಎಲ್ಲ ಪಾತ್ರಗಳೂ ಸಾಲಾಗಿ ನಿಂತಂತೆ ಯಾವುದೇ ಕಾಲಾವಧಿಯ ಪ್ರತ್ಯೇಕ ಗುರುತಿಲ್ಲದೇ, ಮತ್ತು ನಾವು ವರ್ತಮಾನದಲ್ಲಿ ಅದಕ್ಕೆ ಮುಖಾಮುಖಿಯಾದಂತೆ.. ಹಲ್ಲು ಕಳೆದುಕೊಂಡ ಅಜ್ಜ ಅಜ್ಜಿಯರ ಕತೆಗಳೇ ಎಷ್ಟು ಆಪ್ತವಾಗುತ್ತಿದ್ದವು , ಇನ್ನು ನಿರಂತರ ಧಾಳಿಯಿಂದ ಸಮಸ್ತವನ್ನೂ ಕಳೆದುಕೊಂಡು ಉಸಿರಾಡುತ್ತಲೇ ಇರುವ ಅಲ್ಲಿನ ಮಡುಗಟ್ಟಿದ ಮೌನದ ಕತೆ ಇನ್ನೆಷ್ಟು ಹತ್ತಿರವಾಗಿರಲಿಕ್ಕಿಲ್ಲ ಹೇಳಿ.. ನಮ್ಮ ಹೆಸರು ಪರಿಚಯ ಇವೆಲ್ಲವುಗಳಿಂದ ಮುಕ್ತವಾಗಿ ಅಲೆಯುವ ಒಂದು ಅನುಭವ ಬಹುಶಃ ವಿಲಕ್ಷಣವೋ ಅಥವಾ ವಿಶೇಷಣವೋ.. 


ಇಡೀ ಸರಹದ್ದಿನ ಒಳಾಂಗಣದಲ್ಲಿ ಅಲ್ಲಲ್ಲಿ ಎಲ್ಲೆಲ್ಲೂ ಹರಡಿಕೊಂಡಿರುವ ದಪ್ಪ ದಪ್ಪ ಕಲ್ಲುಗಳಲ್ಲಿ ಕೆತ್ತಿದ ಬೇರೆ ಬೇರೆ ಶೈಲಿಯಂತೆ ಕಾಣುವ, ಆದರೆ ಯಾವುದೋ ಒಂದು ರೀತಿಯನ್ನ ಅನುಸರಿಸುವ ವಾಸ್ತುಶಿಲ್ಪ , ಬೃಹತ್ ದೇವಸ್ಥಾನಗಳು, ಅದರ ಗೋಡೆಗಳಲ್ಲಿ , ಕಂಬಗಳಲ್ಲಿ ಅದೆಷ್ಟೋ ವರ್ಷಗಳ ಬಿಸಿಲು ಮಳೆ ಚಳಿ ಮತ್ತು ಗಾಳಿ ಧೂಳನ್ನ ನೋಡುತ್ತಾ ಕಳೆದ ಆಯಸ್ಸನ್ನ ಅದರೊಟ್ಟಿಗೇ ಮತ್ತೆ ಮತ್ತೆ ಹೊಸದಾಗಿಸಿಕೊಳ್ಳಲು ಹಂಬಲಿಸುತ್ತಿರುವ ಚಿತ್ರಗಳು ಒಂದು ಕಡೆಯಾದಲ್ಲಿ , ಪ್ರವಾಸಿಗರನ್ನ ಸೆಳೆಯುವುದಕ್ಕೆ ತಮ್ಮದೇ ನಡವಳಿಕೆಗಳನ್ನ ರೂಪಿಸಿಕೊಂಡ ಜನರ ಚಿತ್ರ ಇನ್ನೊಂದು ಕಡೆ.. ಹಿಂಭಾಗ ಕಳೆದುಕೊಂಡ ಕಲ್ಲಿನ ಆನೆ , ಕೈ ಕಳೆದುಕೊಂಡ ನರಸಿಂಹ , ಏನು ಎಂದು ಗುರುತಿಸಲೂ ಆಗದ ಹಾಗೆ ಮುಖವನ್ನೇ ಕಳೆದುಕೊಂಡ ಒಂದಷ್ಟು ವಿಗ್ರಹಗಳು, ಕಲಾ ಚಿತ್ರಗಳು, ಮತ್ತು ಕಲ್ಲಿನ‌ ಕಂಬಗಳನ್ನೇ ಕತ್ತರಿಸಬಲ್ಲ ಕತ್ತಿಯ ಏಟುಗಳನ್ನು ನೋಡಿದಾಗ, ಆ ಕತ್ತಿಗಳ ಬಲಿಷ್ಠತೆ ಮತ್ತು ಹಿಡಿದ ಕೈಗಳ ಕ್ರೌರ್ಯ ಮತ್ತು ವಿಕೃತ ಮನಸ್ಥಿತಿ.. ವಿರೂಪಾಕ್ಷ ದೇವಾಲಯದಲ್ಲಿ ತಲೆಕೆಳಗಾಗುವ ನೆರಳು , ಅದೇ ದೇವಸ್ಥಾನದ ಪ್ರಾಂಗಣದಲ್ಲೇ ಮಲಗಿ ರಾತ್ರಿ ಕಳೆಯುವ ಜನರು , ಕಂಬಗಳ ಸಂಗೀತ , ಅಜೇಯರಾಗಿಯೇ ಉಳಿವ ಆಕಾಂಕ್ಷೆಯಲ್ಲಿ ಕೆತ್ತಿದ ಕಲ್ಲಿನ ರಥ ಇವುಗಳೆಲ್ಲವೂ ಇನ್ನೊಂದಷ್ಟು ವಿಸ್ಮಯದ ಬುತ್ತಿಗಳಾಗಿ ತೋರುತ್ತವೆ.. ಮಾತಂಗ ಎನ್ನುವ ಮಹರ್ಷಿ ತಪಸ್ಸು ಮಾಡಿದ ಎನ್ನಲಾಗುವ ಆ ಬೆಟ್ಟವನ್ನು ಹತ್ತುವಾಗಿನ ಜಾಗರೂಕತೆ ಮತ್ತು ಹತ್ತುವವರೆಗಿನ‌ ಸಂಯಮ ಬದುಕಲ್ಲೂ ಇರಬಹುದಿತ್ತು ಅನಿಸುತ್ತದೆ.. ಬೆಳಗಿನ ಸೂರ್ಯೋದಯವನ್ನ ನೋಡುವಾಗ ಅಲ್ಲೆಲ್ಲೋ ದೂರದ ಹಸಿರು ದಿಬ್ಬದ ಮೇಲೆ ಬಿಸಿ ಬಿಸಿಯ ಚಿನ್ನದ ದ್ರಾವಣವನ್ನ ನಿಧಾನವಾಗಿ ಚೆಲ್ಲುತ್ತಾ ಬಂದಂತೆ.. ಇಡೀ ಹಂಪಿಯ ಸಮಗ್ರ ಚಿತ್ರಣ ಒಮ್ಮೆಲೇ ತೆರೆದಿಟ್ಟಂತೆ.. ಮತ್ತು ಎತ್ತರಕ್ಕೆ ಹೋದಂತೆ ಹೋದಂತೆ ಭೂಮಿಯ ಗಡಿಗಳೆಲ್ಲವೂ ಅದೃಶ್ಯವಾದಂತೆ.. ಅಗಾಧ ವಿಶ್ವದ ಎದುರು ಕ್ಷುದ್ರ ಕೂಸೊಂದು ನಾಳೆಗಾಗಿ ಹಪಹಪಿಸಿ ಕೂತಂತೆ.. ನಾಗರೀಕತೆ, ಆಧುನಿಕತೆ , ಪ್ರಾಚೀನತೆ, ಇತಿಹಾಸ , ಜಗತ್ತು , ಹೋರಾಟ , ಆಸೆ , ಕಾಲ, ವಯಸ್ಸು ಎಲ್ಲವನ್ನೂ ಮರೆತು ಕೇವಲ ಪ್ರಕೃತಿ ಮತ್ತು ನಮ್ಮ ನಡುವಿನ ಸಂಭಾಷಣೆಯನ್ನ ಮತ್ತೆ ಮತ್ತೆ ಅನುಭವಿಸಲೇಬೇಕೆಂಬ ಹಂಬಲ ಮತ್ತೆ ಮತ್ತೆ ಚಿಗುರಿದಲ್ಲಿ ಮಾತಂಗ ಪರ್ವತದ ತಪ್ಪೇನಿಲ್ಲ..ಇನ್ನು ಹೇಮಕೂಟದ ಸೂರ್ಯಾಸ್ತದ ಬಗ್ಗೆ ಹೇಳಲೇಬೇಕು.. ಸಂಜೆ ಆಗ್ತಾ ಇದ್ದಂತೆ ದೇಶಿ, ವಿದೇಶಿ , ಜಾತಿ , ಲಿಂಗ ಯಾವುದರ ನೆನಪೂ ಇಲ್ಲದೇ ಸೃಷ್ಟಿಯೆಂಬ ಕಲಾವಿದ ಆಕಾಶ ಅನ್ನೋ ಕಾಗದದ ಮೇಲೆ ಬಿಡ್ಸೋ ಸೂರ್ಯಾಸ್ತದ ಚಿತ್ರಕ್ಕಾಗಿ ಸೇರುವ ಜನ ಸಮೂಹ, ವಿಸ್ಮಿತವಾಗಿ ನೋಡುತ್ತಾ ಕೂತುಬಿಡುತ್ತದೆ ಒಂದೇ ಸೂರಿನಡಿಯೆಂಬಂತೆ.. ಸಂಜೆಯ ಆ ಕಡುಗೆಂಪು ಇನ್ನೂ ಜಿಡ್ಡಾಗಿಯೇ ಇರುವ ಪ್ರಾಚೀನ‌ ರಕ್ತದ ಕಲೆಯೇ ಅಂತನ್ನಿಸಿದರೆ ಅತಿಶಯೋಕ್ತಿ ಅಲ್ಲವೇನೋ ಬಹುಶಃ.. ಇವೆಲ್ಲವುಗಳ ಮಧ್ಯ , ನಿರಂತರವಾಗಿ ಹೊಸ ಹೊಸ ನೀರು ಹರಿಯುತ್ತಲೇ ಇದೆ ತುಂಗೆಯಲ್ಲಿ ಮೌನವಾಗಿ.. ಪುರಂದರ ಮಂಟಪದ ನೀರವತೆ ಮತ್ತು ತುಂಗೆಯ ಜುಳು ಜುಳು, ಧ್ಯಾನಸ್ಥ ಸ್ಥಿತಿಯನ್ನ ಮತ್ತೆ ಮತ್ತೆ ಪ್ರತಿಷ್ಠಾಪಿಸಲು ಹೆಣಗುತ್ತಿರುವಂತೆ ಗೋಚರಿಸುತ್ತದೆ.. ರಾತ್ರಿ ೮ ಗಂಟೆ ಆಗ್ತಾ ಇದ್ದಂತೆ ಹಂಪಿಯಲ್ಲಿನ ದೀಪಗಳಿಗೆ ವಿಶೇಷ ಬಣ್ಣ ಮತ್ತು ಅರ್ಥ ಬರುತ್ತದೆ ಹಾಗೂ ಇಡೀ ಹಂಪಿ ನಿಧಾನಕ್ಕೆ ಮಲಗುತ್ತದೆ ಮತ್ತು ಇತರ ಊರೊಂದಿಗಿನ ಸಂಪರ್ಕವನ್ನ ಕಡಿದುಕೊಂಡು ಗುಟ್ಟಿನ ಜಾಗವಾಗುತ್ತದೆ.. 


ಮತ್ತೆ ಬೆಳಗಿನ ಜಾವ ಪ್ರವಾಸಿಗರನ್ನ ಸೆಳೆಯಲು "ರೂಮ್ ಚಾಹಿಯೇ ಕ್ಯಾ" ಎನ್ನುತ್ತಾ ಶುರುವಾಗುವ ಗದ್ದಲ "ಕನ್ನಡ ಬರತ್ತೆ ಸಾರ್" ಅನ್ನುತ್ತಾ , ವ್ಯಾಪಾರೀಕರಣದ ಬೇರೆ ಬೇರೆ ಮಜಲುಗಳಿಗೆ ವಿಸ್ತರಿಸಿಕೊಳ್ಳುತ್ತದೆ.. ಅಲ್ಲಿನ ಜನರ ಬಹುತೇಕ‌ ಉದ್ಯೋಗವೇ ಪ್ರವಾಸಿಗರನ್ನ‌ ಸೆಳೆಯುತ್ತಾ ಅವರನ್ನ ಖುಷಿಪಡಿಸುವುದೇ ಆಗಿರುವಾಗ ಭಾಷೆಯ ಬಗೆಗಿನ ಕಾಳಜಿ ಯಾರಿಗಿರಲು ಸಾಧ್ಯ.. ನಿತ್ಯದ ಹೊಟ್ಟೆಯ ಹಾಡು ಮತ್ತು ಅದರ ಮೇಲಿನ ಮೋಜು ಪ್ರವಾಸಿಗರ ತೃಪ್ತಿಯಲ್ಲೇ ಇದೆ ಅನ್ನುವ ಸತ್ಯ ತಿಳಿದಾಗಿನಿಂದ ಹಂಪಿ ಹಾಗೆಯೇ ಉಳಿದುಬಿಟ್ಟಿತು.. ಹಂಪಿ ಹಾಳಾಗಿಯೇ ಇರಬೇಕು, ಆಗಲೇ ಅದು ತನ್ನ ಚರಿತ್ರೆಯನ್ನ ಹೇಳಬಲ್ಲದು.. ಅದಕ್ಕಾಗಿ ಕೆಲವು ಉದುರುತ್ತಿರುವ ದೇವಸ್ಥಾನಗಳನ್ನ ಕೃತಕವಾಗಿ ಮೊದಲಿನಂತೆ ಕಟ್ಟಲು ಪಡುತ್ತಿರುವ ಹರಸಾಹಸಗಳು ಸಾಕ್ಷಿಯಾಗುತ್ತವೆ.. ಹಂಪಿಯಲ್ಲಿ ಇರುವಷ್ಟೂ ದಿನ ನಾವು ಯಾವುದೋ ಒಂದೋ ಅಗೋಚರ ಶಕ್ತಿಯ ಆಜ್ಞೆಯನ್ನ ಪಾಲಿಸಿದಂತೆ ಮತ್ತು ಅಲ್ಲಿನ ಎಲ್ಲವೂ ಪೂರ್ವ ನಿರ್ಧರಿತವಾದಂತೆ ಅನ್ನುವ ಸಣ್ಣ ಸಂಶಯವೊಂದು ಬಂದರೆ ಅದೊಂದು ಸೂಕ್ಷ್ಮದ ವಿಷಯ ಖಂಡಿತಾ.. ಅಲ್ಲಿಗೆ ಅದರದ್ದೇ ಆದ ವ್ಯವಸ್ಥೆಯಿದೆ , ಅದರದ್ದೇ ಆದ ಗುಣ ಲಕ್ಷಣಗಳಿವೆ, ಅದರದ್ದೇ ಆದ ದಿನಚರಿಯಿದೆ, ಸೂರ್ಯ ಚಂದ್ರರೊಂದಿಗೆ ಹಗಲು ರಾತ್ರಿಗಳಾದರೂ ಅದಕ್ಕೆ ಅದರದ್ದೇ ಆದ ಕಾಲಮಾನವಿದೆ.. ಅದಷ್ಟೂ ವ್ಯಾಪಾರೀಕರಣ, ಮನುಷ್ಯನ ಹಪಹಪಿತನದ ನಡುವೆಯೂ ಒಂದು ಪ್ರೀತಿಯ ಸ್ಪರ್ಶಕ್ಕಾಗಿ ಹಂಪಿಯ ದೇವಸ್ಥಾನದ ಕಂಬಗಳು ಕಾಯುತ್ತಿವೆ, ಕಲ್ಲಿನ ನಂದಿ ಕತ್ತಲೆಯಲ್ಲಿ ಮುಲುಗುತ್ತಿದೆ, ಕಿತ್ತುಕೊಂಡು ಹೋದ ದೇವರ ಮೂರ್ತಿಗಳು ಈಗಲೂ ಜನರ ನಂಬಿಕೆಯಲ್ಲಿ ತಮ್ಮ ಅಸ್ತಿತ್ವವನ್ನ ಗಟ್ಟಿಯಾಗಿಸಿಕೊಂಡಿವೆ.. ರಾಣಿಯರ ಸ್ನಾನಗೃಹವಾಗಿತ್ತಂತೆ , ಇಲ್ಲಿ ಆನೆಗಳ ಸಾಲು ಸಾಲನ್ನ ಕಟ್ಟುತ್ತಿದ್ದರಂತೆ ಎಂಬ ಚರಿತ್ರೆಯ ನೆನಪುಗಳೊಂದಿಗೆ , ಇಲ್ಲೇ ಅಕ್ಕತಂಗಿಯರಿಬ್ಬರು ಕಲ್ಲಾಗಿಹೋದರಂತೆ ಎನ್ನುವ ಕತೆಗಳೂ ಪ್ರಚಲಿತದಲ್ಲಿರುವ ಹಂಪಿಯಲ್ಲಿ ಒಂದು ಅಪ್ರಕಟಿತ ಶೋಕವಿದೆ.. ಒಂದು ಅನಾಥ ಮೌನವಿದೆ.. ಇಷ್ಟೆಲ್ಲ ಮಾನವ ಜನಾಂಗದ ಗದ್ದಲದ ನಡುವೆ ಬೇರೆಯಾಗಿಯೇ ಉಳಿದ, ಬೆರೆಯದೇ ಹೋದ ಅಳಲಿದೆ..ಇದಕ್ಕಾಗಿಯೇ ಅದು ಇನ್ನಷ್ಟು ಆಪ್ತವಾಗುತ್ತದೆ.. ಕೇವಲ ಚೌಕಟ್ಟಿನಲ್ಲಿ ಛಾಯಾಚಿತ್ರವಾಗುವ ಎಲ್ಲಾ ಕಲ್ಲಿನ ಚೂರಿಗೂ ಅಲ್ಲಿನ ಬಾನಿಗೂ ಅದರದ್ದೇ ಆದ ಬಣ್ಣವಿದೆ.. ಅಲ್ಲಿನದೇ ಕಲ್ಲಿನ ಕಂಬಕ್ಕೆ ತಲೆಯಾನಿಸಿ ಕೂತಾಗ, ಕಾಮ,ಕ್ರೋಧ,ಲೋಭ,ಮೋಹ,ಮದ, ಮಾತ್ಸರ್ಯ ಇತ್ಯಾದಿಗಳೂ, ಸಿಟ್ಟು , ಪ್ರೀತಿ ,ಗಾಂಭೀರ್ಯ, ಸೇಡು, ನಗು , ದುಃಖ , ರೌದ್ರ , ಭೀಭತ್ಸ , ಭಯ, ಹಾಸ್ಯ , ಅದ್ಭುತ, ಶಾಂತ ಇತ್ಯಾದಿ ಇತ್ಯಾದಿ ರಸಗಳೂ ಅತ್ಯಂತ ಕ್ಷೀಣ ದನಿಯಲ್ಲಿ ಚಡಪಡಿಸುತ್ತಿರುವುದು ಕೇಳಿದರೆ ಹುಚ್ಚನೆನ್ನದಿರಿ.. ಯಾಕೆಂದರೆ , ಹಂಪಿ ಗತ ವೈಭವದ ಗಂಭೀರ ಆತ್ಮ ಚರಿತ್ರೆ.. 


~`ಶ್ರೀ'

    ತಲಗೇರಿ

ಶನಿವಾರ, ಮೇ 2, 2020

ದಿವ್ಯ ಸಾನ್ನಿಧ್ಯದ ಸಾಂಗತ್ಯ ‌ಪತ್ರ...






ಗೆ,
ರಾಧಾ,
ಗೋಕುಲ

ಸಖೀ ರಾಧೆ,

ಇಷ್ಟುದ್ದ ಈ ಹಾಳೆಯ ಮೇಲೆ ಕೃಷ್ಣನ ಕೈಯಚ್ಚಿನ ನೆರಿಗೆ ಮೂಡುವ, ದೇವರೆಂಬ ಧಾತುವಿನೊಳಗೆ ನಡೆವ ಆಗುಹೋಗುಗಳ, ಕಪಟವಿಲ್ಲದ ಅಕ್ಷರಗಳಲ್ಲಿ ಮತ್ತೆ ಹುದುಗಿಸುವ ಸಮಯ ಬಂದಿದೆಯೀಗ. ಬರೆದ ಮೊದಲೆರಡು ಪತ್ರಗಳು ನಿನ್ನ ಮಡಿಲಲ್ಲಿ ನಿತ್ಯ ಸುಖದಲ್ಲಿ ಆಪ್ತ ಹವೆಯಲ್ಲಿ ಬೆಚ್ಚಗಿವೆಯೆಂದುಕೊಳ್ಳುತ್ತೇನೆ. ಹಳೆಯದಾದಷ್ಟೂ ಪತ್ರಗಳ ಪರಿಮಳ ಹೆಚ್ಚುತ್ತದಂತೆ. ಹಳೆಯದಾದಷ್ಟೂ ನೆನಪುಗಳು ಮಾಗುತ್ತವಂತೆ. ಹಳೆಯದಾದಷ್ಟೂ ಉಳಿದ ಪ್ರೀತಿ ಸಲಹುತ್ತದಂತೆ. ಯಾರನ್ನು? ಎಂದು ಮರು ಪ್ರಶ್ನಿಸದಿರು.. 'ಈ ಜಗತ್ತನ್ನು',  ಎಂದು ನಾನು ಉತ್ತರಿಸುವೆನೆಂದು ನಿನಗೂ ತಿಳಿಯದೇ ಏನಲ್ಲ! ಕೃಷ್ಣನಿಗೆ ವೈಯಕ್ತಿಕ ಅನ್ನುವುದು ಉಳಿದದ್ದಾದರೂ ಯಾವುದು ರಾಧೆಯ ಹೊರತಾಗಿ, ರಾಧೆಗಾಗಿ ಬಿಟ್ಟ ಕೊಳಲಿನ ಹೊರತಾಗಿ. ಬಿಡು ಬಿಡು, ನೆನಪು ನಶೆಯಂತೆ. ಕಪಟಿ, ಚತುರ, ಮೋಸಗಾರ, ವ್ಯಾಮೋಹಿ, ಪಕ್ಷಪಾತಿ, ದ್ರೋಹಿ, ಆಪದ್ಬಾಂಧವ, ಮಿತ್ರ, ಕುಟಿಲ ತಂತ್ರಿ , ಮಾಯಾವಿ ಒಂದೇ ಎರಡೇ ಕೃಷ್ಣನು ಪಡೆದ‌ ಹೆಸರುಗಳು. ಆದರೆ ಇವತ್ತು ಕೃಷ್ಣ ಹೇಳಹೊರಟಿರುವುದು ಈ ಅಂಕಿತಗಳಾಚೆಗಿನ ಸಂಗತಿಗಳನ್ನು.. ಧರ್ಮ ಅಧರ್ಮದ ಮರ್ಮದಲಿ ದಾಳವಾದ ಪರಾಕ್ರಮಿಯ ಕಣ್ಣುಗಳಲ್ಲಿ ಕೃಷ್ಣನನ್ನು ನೋಡುವೆಯಂತೆ.. ಹಾಗೇ, ಕಿವಿಯಾಗುವೆಯಂತೆ ಇವೆಲ್ಲವುಗಳಿಗೂ ಜೀವಂತ ಸಾಕ್ಷಿಯಾದ ಸಾರಥಿ, ರಾಯಭಾರಿ, ರಾಜಕಾರಣಿ, ಯುದ್ಧ ನಿಪುಣ ಕೃಷ್ಣನ ಸಂಗತಿಗಳಲ್ಲಿ ಉಳಿದ ಆ ಪರಾಕ್ರಮಿಯ ಪ್ರಾರಬ್ಧಕ್ಕೆ !
ಊಹೆ ನಿಜ ರಾಧೇ, ವಸುಸೇನ‌ನ ಕುರಿತಾಗಿಯೇ ಇವತ್ತು ನಾನು ಹೇಳಹೊರಟಿರುವುದು. ಲೋಕ ನಿಂದಿಸಲಿ ನನ್ನ, ಲೋಕ ದ್ವೇಷಿಸಲಿ ನನ್ನ, ಲೋಕ ಜರೆಯಲಿ ನನ್ನ, ಲೋಕ ಮರುಗಲಿ ಕಂಡು ಅವನ...

ಭೋರ್ಗರೆದು ಬಿಕ್ಕಳಿಸುವ ಡೋಲು,ನಗಾರಿ, ಶಂಖ,ಕಹಳೆ, ಜಾಗಟೆಗಳು. ಅಬ್ಬರಿಸಿ ಅಬ್ಬರಿಸಿ ಸುಸ್ತಾದ ಆನೆ,ಕುದುರೆಗಳು. ತಲೆಯ ಮೇಲೆ ಠೀವಿಯಿಂದ ಕೂತಿದ್ದ‌ ಕಿರೀಟಗಳು ಉದುರಿಬಿದ್ದಿವೆ ಆಧಾರವಿಲ್ಲದೇ. ಬಿಸಿ ಬಿಸಿ ನೆತ್ತರ ಇನ್ನೂ ಸುರಿಸುತ್ತಲೇ ಅಲುಗುತ್ತಿರುವ ಕಡಿದ ಬೆರಳಿನ ಚೂರು. ಕಣ್ಣುಗಳ ಮುಚ್ಚಲೂ ಸಮಯ ಸಿಗದೇ ಉಳಿದ ಕತ್ತರಿಸಿದ ರುಂಡ, ವಸ್ತ್ರದ ಬಣ್ಣವೇ ಬದಲಾದ ಮುಂಡ, ಮಾರ್ದನಿಸುತಿದೆ ಕಾಲಾಳುಗಳ ಆಕ್ರಂದನ.. ಈ ಭೀಭತ್ಸ ರಣರಂಗದಲ್ಲೇ ಬಿದ್ದಿತ್ತು ಇನ್ನೊಂದು ಶರೀರ ರಥಕ್ಕೊರಗಿ. ಅದರಲ್ಲೇನು ವಿಶೇಷ ಕೃಷ್ಣ, ಯುದ್ಧವೆಂದಮೇಲೆ ಹೆಣಗಳ ರಾಶಿ, ರಕ್ತದ ಹೋಳಿ, ಊರಲ್ಲುಳಿದ ಹೆಂಗಸರಿಗೆ ವಿಧವೆಯ ಪಟ್ಟ ಹಾಗೂ ಮಾನಕ್ಕಾಗಿ ಹೋರಾಟ ಸಾಮಾನ್ಯವಲ್ಲವೇ ಮೋಹನ, ಅನ್ನದಿರು. ಪಾಂಡವರ ನಿಷ್ಠೆ, ಧರ್ಮ, ಪರಾಕ್ರಮ, ಸ್ವಾರ್ಥ, ಭಕ್ತಿ ಇವೆಲ್ಲವನ್ನೂ ಮೀರಿ ಎದೆನಡುಗಿಸಿದವನ‌ ಕತೆಯಿದು. 'ಇದಿರಿಲ್ಲ ಎನಗೆ' ಎಂದು ಮೆರೆಯುತ್ತಿದ್ದ ಸವ್ಯಸಾಚಿಯ ಕೈಗಳಿಗೆ ನಡುಕಹುಟ್ಟಿಸಿದವನ ಕತೆ. ಹೌದು, ಇದು ಕ್ಷತ್ರಿಯ ಬ್ರಾಹ್ಮಣ ಸೂತ ಯೋಧ ಕರ್ಣನ ‌ಕತೆ. "ಕೇಳಿದ್ದೇನೆ ಮಾಧವಾ, ನಿನ್ನ ಕುಟಿಲತೆಯಿಂದ ಅವ ಸತ್ತನಂತೆ ಅನ್ನುವುದನ್ನ", ಅಂತನ್ನಬೇಡ. ಲೋಕಕ್ಕೆ ತಿಳಿದ ಗೋಚರಗಳು ಒಂದೆಡೆಯಾದರೆ, ಕರ್ಣ ಮತ್ತು ಕೃಷ್ಣನಲಿ ವಿನಿಮಯವಾದ ಸಾನ್ನಿಧ್ಯವೇ ಬೇರೆ.. "ಭಗವಂತ ನೀನು, ವಿನಿಮಯವಾಗಲೇಬೇಕಲ್ಲವೇ?", ಅಂತನ್ನುವ ಆ ಪ್ರಶ್ನಾರ್ಥಕ ಕಣ್ಣುಗಳನ್ನ ನನ್ನತ್ತ ನೇರವಾಗಿ ಚಾಚಿದಂತೆ ಭಾಸವಾಗುತ್ತಿದೆ ನನಗೆ, ಇವತ್ತಿನ ಈ ಪತ್ರ ಆವತ್ತಿನ ಪ್ರತಿಫಲನ.

ಕೆಸರಲ್ಲಿ ಕುಳಿತು, ರಥಕ್ಕೊರಗಿ ನಿಕೃಷ್ಟ ನೋಟ ಬೀರುತ್ತಿದ್ದ ಕರ್ಣ, " ಕೊನೆಗೂ‌ ಕೊಲ್ಲಿಸಿದೆಯಲ್ಲಾ" ಅನ್ನುವಂತೆ. ಅರ್ಜುನ ಸಾರಥಿ ಕೃಷ್ಣ ರಥದಿಂದ ಇಳಿದು ಬರಲೇಬೇಕಾಯ್ತು ಪರಾಕ್ರಮಿಯ ಬಳಿಗೆ. ಅದೆಷ್ಟು ಪ್ರಶ್ನೆಗಳು ಓಡುತ್ತಿರಬಹುದಲ್ಲಾ, ಉತ್ತರಿಸಬೇಕಾದುದು‌ ಆದ್ಯ ಕರ್ತವ್ಯ. ಸಾಯುವ ಗಳಿಗೆಯಲ್ಲಿ‌ ಮನುಷ್ಯ ಪವಿತ್ರನಾಗುತ್ತಾನೆ. ಇಹದ ಕೊಂಡಿ ಕಳಚಿಬೀಳುವ ಕ್ಷಣದಲ್ಲಿ ಅಹಂ ಚೆಲ್ಲಾಪಿಲ್ಲಿಯಾಗಿ ಚೆದುರಿರುತ್ತದೆ. ರಥದಿಂದ ಇಳಿದವನೇ ಹೋದೆ ಕರ್ಣನ‌ ಬಳಿಗೆ, ಹೀಗೇ ಹೋಗಿದ್ದೆ ಯುದ್ಧದ ಹಿಂದಿನ ದಿನವೂ ಕೂಡಾ.. "ಪಾಂಡವರ ಸೇರು, ರಾಜ್ಯ ಮತ್ತು ಪಟ್ಟ ನಿನ್ನದಾಗುತ್ತದೆ ಅಂತ ಹೇಳುವುದಕ್ಕೆ", ಅಂತ ಮಾತ್ರವೇ ಗ್ರಹಿಸಿತು ಲೋಕ. ಕರ್ಣನ ಮನಸ್ಸನ್ನು ಕದಡಲು ಹೋದೆ, ಅಂತ ಮಾತ್ರವೇ ಮಾತಾಡಿತು ಲೋಕ. ಅದೆಷ್ಟೇ ಆಮಿಷಗಳನ್ನೊಡ್ಡಿದರೂ ಕರ್ಣ ಅದನ್ನ ಕಾಲ್ಬೆರಳ ತುದಿಯಲ್ಲಿ ಕೂಡಾ ಮುಟ್ಟದೇ ತಿರಸ್ಕರಿಸಿದಂಥ ಋಣಬದ್ಧ, ಕೃತಜ್ಞತೆಯ ಮೂರ್ತರೂಪ ಅನ್ನುವುದನ್ನ ಇನ್ನು ಹೇಗೆ ಹೇಳಬಹುದಿತ್ತು ಈ ಲೋಕಕ್ಕೆ ನಾನು? ಕುಲವೆಂಬುದೇ ಯಾವುದೆಂದು ತಿಳಿಯದೇ ಅನುಭವಿಸಿದ ಅವಮಾನಗಳ ನಡುವೆ ಅರಸಿಬಂದ ಸ್ನೇಹಕ್ಕಾಗಿ ಸಮಸ್ತವನ್ನೂ ತ್ಯಜಿಸಲು ಸಿದ್ಧನಾಗಿದ್ದ ಕರ್ಣ ಒಬ್ಬ ಅಪ್ಪಟ ಮಗುವಿನಂಥ ಸ್ನೇಹಿತನೆಂಬುದನ್ನ ಜಗತ್ತಿಗೆ ಅದು ಹೇಗೆ ಹೇಳಬಹುದಿತ್ತು ನಾನು?

ಕರ್ಣನ‌ ಸಾವು ನಿಶ್ಚಯವಾಗಿತ್ತು. ಸಾವಿನ ಎದುರು ಕೂತು ಹುಟ್ಟಿನ ಕತೆ ಕೇಳುವ ವಿಪರ್ಯಾಸ ಅವನದು. ಆವತ್ತೇ ಯಾಕೆ‌ ಹೇಳಬೇಕಿತ್ತು, ಮತ್ತೆ ದಿನವೆಲ್ಲಿತ್ತು? ಸೂತ ಕುಲದ ರಾಧೆಯ ಮಗ ನಾನು ರಾಧೇಯ ಅಂತಂದುಕೊಂಡವಗೆ, ಬಾಲ್ಯದಾಟದ ಕುಂತಿಗೆ ಯೌವನದ‌ ವರ ಸಿಕ್ಕಿ, ನಡೆದ ಅಚಾತುರ್ಯದ, ಸೂರ್ಯ ಅಂಶದ ಗರ್ಭ ನೀನು‌ ಅಂತನ್ನುವುದು ಅದೆಷ್ಟು ಸಮಂಜಸ ಎಂದು ಪ್ರಶ್ನಿಸುವೆಯಾ ರಾಧಾ.. ಹೇಳಿದ್ದಷ್ಟೇ ಅಲ್ಲದೇ, ಪಾಂಡವರೈವರಿಗೆ ಹಾನಿಗೈಯುವುದಿಲ್ಲವೆಂದು ಮಾತು ಕೊಡುವಂತೆ ಇಕ್ಕಟ್ಟಿಗೆ ಸಿಲುಕಿಸಿದೆಯಲ್ಲಾ ಚತುರನೇ ಅನ್ನುತಿಹೆಯಾ? ಯಾಕಿಷ್ಟೊಂದು ಉಪಾಯಗಳು ಹರಿಯೇ ಅಂದ,‌ ಯಾಕೆ ನನ್ನನ್ನು ಚಂಚಲನನ್ನಾಗಿಸುತ್ತಿರುವೆಯೆಂದ. ದ್ರೌಪದಿಯ ಕಣ್ಣಿಂದ ಉದುರಿದ ಆ ಹನಿಯಲ್ಲಿ ಗಹಗಹಿಸಿದ ಕರ್ಣನ‌ ಚಿತ್ರವಿತ್ತೋ ಕೌಂತೇಯ ಅಂದೆ, ತತ್ತರಿಸಿದ. ಅವಮಾನಕ್ಕೆ ಉತ್ತರ ಕೊಡಬೇಕಾದುದು ಕ್ಷತ್ರಿಯ ಧರ್ಮವೇ, ಆದರೆ ಅಂದು ಅದು ಆ ಸ್ತ್ರೀಯ ಮೇಲಾಗಿತ್ತಲ್ಲ; ಅದು ಸಮ್ಮತ ಉತ್ತರವಲ್ಲವಾಗಿತ್ತು. ಅವಳ ಸೀರೆಯ ತುದಿಗೆ ಇನ್ನೂ ಕರ್ಣನ ಬೆರಳಿನ ಕಲೆಯಿತ್ತು. ಅದಿರಲಿ, ಮತ್ತೆ ಕುಂತಿಯನೂ ಕಳುಹಿಸಿದೆಯಲ್ಲಾ ಅವನ ಬಳಿಗೆ, ಇದು ಅವನನ್ನ ಗದ್ಗದಿತನನ್ನಾಗಿಸಲಲ್ಲದೇ ಇನ್ನೇನು ಅಂತ ನೀನೂ ಕೇಳುತ್ತಿರುವೆಯಾ ರಾಧಾ.. ಹೆತ್ತವಳಿದ್ದೂ ಅವಳ ಅಪ್ಪುಗೆಯಿಲ್ಲದೇ ಅವ ಕೊನೆಯುಸಿರೆಳೆಯುವುದು ದುರಂತವಾಗುತ್ತದಲ್ಲವೇ? ಈಗಾಗಿದ್ದೇನು ಅನ್ನಬೇಡ ಮತ್ತೆ.. ತಾಯಿ ಮಗನ‌ ಅಪೂರ್ವ ಮಿಲನಕ್ಕೆ ಬೇರೆ ಘಟಿಗಳು ಇರಲಿಲ್ಲ. ಅದೆಷ್ಟೇ ಸ್ವಾರ್ಥವಿದ್ದರೂ ಮಮತೆ ಉಕ್ಕುವುದು , ಅದೆಷ್ಟೇ ದ್ವೇಷವಿದ್ದರೂ ಹೃದಯ ಬಿಕ್ಕುವುದು, ಅದನ್ನೇ ಅಲ್ಲವೇ ಜಗತ್ತು ನೋಡಿದ್ದು ಈ ಭೇಟಿಯಲ್ಲಿ. ಕುಂತಿ ಎರಡು ವರ ಕೇಳಲು ಅಲ್ಲಿಗೆ ಹೋದಳಷ್ಟೇ ಅಂದುಬಿಡಬಹುದು ಸುಲಭವಾಗಿ, ರಕ್ತ ಸಂಬಂಧದ ಗಾಢತೆಯನ್ನ ಮತ್ತು ವಿಧಿಯ ವಿವರಗಳನ್ನ ಇನ್ನೆಂತು ತೋರಿಸಲಿ ನಾನು? ತನ್ನ ಕೈ ಸೋಲುತ್ತಿದೆ ಎಂದು ಗೊತ್ತಿದ್ದರೂ ಕೇಳಿದ್ದನ್ನು ಕೊಡದೇ ಇರಲಾರ ಕರ್ಣ ಅನ್ನುವುದು ಹೇಗೆ ತಿಳಿದೀತು ಇದರ ಹೊರತಾಗಿ ಅಲ್ಲವೇ?

ಕೈಯಲ್ಲಿ ಧನುರ್ಬಾಣಗಳಿಲ್ಲದೇ, ಶಸ್ತ್ರರಹಿತನಾದ ಕ್ಷತ್ರಿಯನ ಕೊಲ್ಲುವ ತುರ್ತೇನಿತ್ತು ನಿನಗೆ, ನಿನ್ನ‌ ಗಾಂಢೀವಿ ಸೋಲುವನೆಂಬ ಭಯವೇ? ಇರಬಹುದು ಇರಬಹುದು, ಅಡ್ಡದಾರಿ ಹಿಡಿದ ಕೃಷ್ಣ ಎಂದು ಎಷ್ಟೆಲ್ಲಾ ನಿಂದಿಸಿದರಲ್ಲಾ.. ಅಪ್ರತಿಮ ಯುದ್ಧೋನ್ಮಾದದಿಂದ ಚಕ್ರವ್ಯೂಹವನ್ನ ಹೊಕ್ಕಿದ ಅಭಿಮನ್ಯುವಿನ‌ ಅಂತ್ಯಕ್ಕಾಗಿ ಸಕಲ ಶಾಸ್ತ್ರ ಪಾರಂಗತನಾದ ಕರ್ಣ, ಯಾವ ಧರ್ಮವನ್ನ ಮೀರಿದನಲ್ಲಾ, ಪಾಪ ಪುಣ್ಯವೀಗ ದುರ್ಯೋಧನನ ಲೆಕ್ಕವೆಂಬ ಮಾತ ಕೇಳಿ, ಹಿಂದಿನಿಂದ ಕೈ ಕತ್ತರಿಸಿದನಲ್ಲಾ,  ಅದೇ ಧರ್ಮ ಈಗ ಅವನ ಎದೆಗೆ ನಾಟಿತು. ಇದೇನು ಕೃಷ್ಣಾ, ನೀನೂ ಸಾಮಾನ್ಯ ಮನುಷ್ಯರಂತೆ ದ್ವೇಷಕ್ಕೆ ದ್ವೇಷ, ಮೋಸಕ್ಕೆ ಮೋಸ ಎಂದುಬಿಟ್ಟೆಯಲ್ಲಾ ಅಂತಂದುಕೊಳ್ಳದಿರು. ಸತ್ಯದ ಅರಿವಾಗಬೇಕಿತ್ತು ಕರ್ಣನಿಗೆ, ಅವನು ದುರ್ಯೋಧನನ ಸ್ನೇಹದ ಹೆಜ್ಜೆಯ ಅಮಲಿನಲ್ಲಿ ಎಲ್ಲಿ‌ ಎಡವಿದ ಅನ್ನುವುದನ್ನ ಮನದಟ್ಟು ಮಾಡಲೇಬೇಕಿತ್ತು. ಬಾಣ ನೆಟ್ಟ ಮೇಲೂ ದಾನ‌ ಕೇಳಿದನಂತೆ ಅವ ಸಾಯದಿದ್ದರೆ ಅಂತ, ಎಂದೆಲ್ಲಾ ಜನ ನಿನಗೆ ಹೇಳಿದರೇ? ಪರಮಾತ್ಮನೂ ಒಮ್ಮೊಮ್ಮೆ ಶರಣಾಗುತ್ತಾನೆ‌ ಕರ್ಣನಂಥ ದಾನಶೂರನೆದುರು.. ದಾನ ಕೇಳಿದ್ದು ನಿಜ, ಅವನ ಹಿಂದಿನ‌ ಜನ್ಮದ ಲೆಕ್ಕವೊಂದು ಬಾಕಿಯಿತ್ತಲ್ಲಾ.. ಜೊತೆಗೆ, ಭಗವಂತನಿಗೇ ದಾನ‌ಕೊಟ್ಟ ಕರ್ಣ ಅನ್ನುವುದು ಜಗಜ್ಜಾಹೀರಾಗಲಿ, ಸಾಯುವಾಗಲೂ ದಾನಕ್ಕೆ ಹಿಂಜರಿಯಲಿಲ್ಲ ಆತ ಅಂತೆಲ್ಲಾ ಜನ ತಡಬಡಿಸಲಿ, ದಂಗಾಗಲಿ ಅಂತ ಅಂದುಕೊಳ್ಳುವುದು ತಪ್ಪಾ ರಾಧಾ.. ದುರಂತದ ಬದುಕಿಗೊಂದು ಅರ್ಥವತ್ತಾದ ವಿದಾಯ ಬೇಕಿತ್ತಲ್ಲವೇ!

ಮುರಿದು ಬಿದ್ದ ಕರ್ಣನ‌ ರಥದ ಗಾಲಿ, ಅವನ ಜನನ ಮರಣಗಳ ಚಕ್ರ ಮುರಿದು ಬಿದ್ದಂತೆ ನನಗೆ ಕಂಡಿತ್ತು. ಅವನ ಬಳಿ ಹೋಗಿ ಕೂತೆ, ಏನಾಯಿತು ಕೃಷ್ಣಾ, ಕರ್ಣ ಯಾವ ಸುಖಕ್ಕೂ ಯೋಗ್ಯನಾಗದೇ ಹೋದನೇ ಅಂತ ಪ್ರಶ್ನಿಸಿದ ಕೈಹಿಡಿದು. ಎಲ್ಲರ ಹುಟ್ಟಿಗೂ ಎಲ್ಲರ ಸಾವಿಗೂ ಅರ್ಥವಿದೆ ಕೌಂತೇಯ, ಹುಟ್ಟಿನಿಂದ ಸಾವಿನ ತನಕವೂ ನಿನ್ನದು ಅನಿಶ್ಚಿತತೆಯೇ, ನಿನ್ನದು ದೌರ್ಭಾಗ್ಯವೇ, ನಿನ್ನದು ಹೋರಾಟವೇ.. ಆದರೆ, ಅವೆಲ್ಲವುಗಳನ್ನೂ ಮೀರಿ ಬೆಳೆದವ ನೀನು, ಜಗತ್ತಿಗೆ ಮತ್ತೊಬ್ಬ ನಿನ್ನಂಥ ದಾನಿ ಸಿಗಲಾರ ಅದೆಷ್ಟೇ ಸಹಸ್ರ ವರ್ಷಗಳಾದರೂ.. ಅಲ್ಲಿಗೆ ನಿನ್ನ ಬದುಕಿಗೆ ಅರ್ಥ ದಕ್ಕಿತಲ್ಲಾ ರಾಧೇಯ ಎಂದೆ. ಮುಂದುವರೆದು ಕೇಳಿದೆ, ನನಗೂ ನಿನಗೂ ಒಂದು ಸಾಮ್ಯತೆಯಿದೆ ತಿಳಿದಿದೆಯಾ ಕುಂಡಲಧರ? ಬಳಲಿದ ಕಣ್ಣುಗಳಿಂದ ನನ್ನ ನೋಡಿದ. ನಮ್ಮಿಬ್ಬರದೂ ಒಂದೇ ಕತೆ ಕರ್ಣಾ, ಹೆತ್ತಬ್ಬೆಯಿಂದ ದೂರಾಗಿ ಇನ್ಯಾರದೋ ಆಶ್ರಯದಲ್ಲಿ ಬೆಳೆದವರು ನಾವು. ಇಬ್ಬರೂ ಹೆತ್ತಮ್ಮನ ಎದೆಗೆ ಸಹಜವಾಗಿ ಗುದ್ದಿ ಕುಡಿವ ಹಾಲಿಂದ ವಂಚಿತರೇ. ಇಬ್ಬರೂ ಹೆತ್ತಮ್ಮನ ಲಾಲಿಯನ್ನ ಕೇಳದವರೇ. ಇಬ್ಬರೂ ಹೆತ್ತವ್ವನ ಹೊಟ್ಟೆಗೊದ್ದು ಅವಳಿಂದ ಮುದ್ದಿಸಿಕೊಳ್ಳದವರೇ. ಇಬ್ಬರೂ ತೊಟ್ಟಿಲು ತೂಗುವ ಹೆತ್ತವಳ ಕಿರುನಗೆಗೆ ಕಿಲಕಿಲನೆ ಬೊಚ್ಚುಬಾಯಿ ಬಿಟ್ಟು ನಗಲು ಸಿಗದವರೇ.. ಇವಿಷ್ಟನ್ನೂ ಕರ್ಣನ ಕಣ್ಣುಗಳಲ್ಲಿ ಕಣ್ಣಿಟ್ಟು ಅಂದೆ. ಅವನ ಬಳಲಿಕೆ ಕೊಂಚ ತಗ್ಗಿತು, ಅರ್ಥವಾಗಿತ್ತು ಅವನಿಗೆ, ಕಣ್ಣುಗಳಲ್ಲಿ ತೃಪ್ತಿಯ ಮೊಹರುಗಳಿದ್ದವು. ಕಾಲಮೇಲೆ ಮಲಗಿದ, ಹಾಗೇ ಕಾಲದಲ್ಲಿ ಮಲಗಿದ!

ಮಲಗಿದೆಯಾ ರಾಧೆ, ಓದುತ್ತಾ ಓದುತ್ತಾ? ನಿನಗೆಂದೇ ಎರಡು ನವಿಲುಗರಿಗಳ ಇಟ್ಟಿದ್ದೇನೆ ನೋಡು, ಕಪಿಲೆ ಯಮುನೆಯರನು ಕೇಳಿದೆ ಅಂತ ತಿಳಿಸು, ಹುಲ್ಲುಗಾವಲಿನ ಪ್ರವೇಶದಲ್ಲಿ ದೊಡ್ಡ ಮರವಿತ್ತಲ್ಲಾ, ಅಲ್ಲಿದ್ದ ಗಿಳಿಗಳ ಹೊಸ ಸಂತತಿ ಹುಟ್ಟಿರಬಹುದೀಗ, ಅವುಗಳಿಗೆ ನನ್ನ ಮತ್ತು ಅವರ ಪೂರ್ವಜರ ಒಡನಾಟದ ಕತೆ ಹೇಳು, ಕತೆಯಲ್ಲಿ ನಿನ್ನನ್ನೂ ಸೇರಿಸಿಕೊಂಡೇ ಹೇಳಬೇಕು ಮರೆಯಬೇಡ. ಬೃಂದಾವನದ ಸಖಿಯರಿಗೆ ಬೇಕಿದ್ದರೆ ಚೂರು ಹೊಟ್ಟೆಯುರಿಸು ಕೃಷ್ಣ ನನಗೆ ಮಾತ್ರ ಪತ್ರ ಬರೆದನೆಂದು. ಕೊಳಲ ಮೇಲಿನ ಧೂಳೊರೆಸು. ಬಂಡೆಗಳ ಮೇಲೆ ಹಚ್ಚಿಟ್ಟ ಬೆರಣಿಗಳ ಹೆಕ್ಕು. ಗಡಿಗೆಯಿಂದ ಇಷ್ಟಿಷ್ಟೇ ಇಷ್ಟಿಷ್ಟೇ ತೆಗೆದು, ನನ್ನ ಗೋಕುಲದ‌ ದಿನಗಳಿಗೆ ಬೆಣ್ಣೆ ಹಚ್ಚು. ಕೃಷ್ಣ ಸಿಗುತ್ತಾನೆ ಒಡೆದ‌ ಮಡಕೆಯ ಚೂರುಗಳಲ್ಲಿ, ಕೃಷ್ಣ ಸಿಗುತ್ತಾನೆ ಕಳ್ಳ ಹೆಜ್ಜೆಗಳ ಪುಟ್ಟ ಮಕ್ಕಳ ಸಲಿಗೆಯಲ್ಲಿ, ಕೃಷ್ಣ ಸಿಗುತ್ತಾನೆ ಕದ್ದು ನೋಡುವ ಕಳ್ಳ ಯೌವನದ ನಾಚಿಕೆಯಲ್ಲಿ, ಕೃಷ್ಣ ಸಿಗುತ್ತಾನೆ ನೀನು ಸವರುವ ಆ ಕೊಳಲಿನ‌ ರಂಧ್ರಗಳಲ್ಲಿ, ಕೃಷ್ಣ ಸಿಗುತ್ತಾನೆ ನಿನ್ನ ಪರವಶದ ನಿದ್ರೆಯಲ್ಲಿ.. ಕೃಷ್ಣ ಸಿಗುತ್ತಾನೆ ನಿನ್ನ ನಿತ್ಯ ದ್ವಂದ್ವಗಳಲ್ಲಿ, ಕೃಷ್ಣ ಸಿಗುತ್ತಾನೆ ನೀನು ಅಂಟಿಕೊಳ್ಳುವ ಕತ್ತಲುಗಳಲ್ಲಿ, ಕೃಷ್ಣ ಸಿಕ್ಕೇ ಸಿಗುತ್ತಾನೆ ನೀನು ಬದುಕುವ ರೀತಿಯಲ್ಲಿ.. ಕೃಷ್ಣ ಸಿಗದೇ ಎಲ್ಲಿ ಹೋಗುತ್ತಾನೆ ರಾಧೆಯ ಪ್ರೀತಿಯ ನೆರಳಿನಲ್ಲಿ...
ಮತ್ತೆ ಪತ್ರ ಬರೆಯುತ್ತೇನೆ ಕೃಷ್ಣ ಕದಡಿದಾಗ, ರಾಧೆ ಮುದುಡಿದಾಗ..

ಇಂತಿ ನಿನ್ನ,
ಗೋಪಾಲ

~`ಶ್ರೀ'
    ತಲಗೇರಿ