ಆ ಊರು..
...ಗದ್ದಲದ ನಡುವಣ ತಣ್ಣನೆಯ ಶೋಕ...
ಎಲ್ಲಿ ನೋಡಿದರಲ್ಲಿ ಕಲ್ಲು, ಹೆಬ್ಬಂಡೆ.. ಉರಿ ಬಿಸಿಲು ಒಂದು ಕಡೆಯಾದರೆ , ಧೂಳಿನ ದಟ್ಟತೆ ಇನ್ನೊಂದು ಕಡೆ.. ಬಣ್ಣ ಕಳೆದುಕೊಂಡ ಗಿಡಮರದ ಎಲೆಗಳು ಹಸಿರಿಗಾಗಿ ಬಹುಶಃ ಮರುಗುತ್ತಿರಬಹುದು.. ಪುಟ್ಟ ಪುಟ್ಟ ಬೀದಿ, ಇಷ್ಟೆಂದರೇ ಇಷ್ಟೇ ಇರುವ ಓಣಿಗಳು.. ಸಗಣಿ ಹಾಕಿ ಸಾರಿಸಲ್ಪಟ್ಟಿವೆ ಕೆಲವು ಕಡೆ, ಪುಟಾಣಿ ಮತ್ತು ಮಧ್ಯಮ ಗಾತ್ರದ ರಂಗೋಲಿಗಳು ಅಲ್ಲೇ ಎಲ್ಲೋ ಕಾಣಲ್ಪಡುತ್ತವೆ.. ಎಲ್ಲಾ ಬೀದಿಯನ್ನ ಹಬ್ಬಿಕೊಂಡಿರುವುದು ಅಂಗಡಿ ಮತ್ತು ಹೋಟೆಲ್ಗಳು.. ಜೊತೆಗೆ ಅತಿಥಿ ಗೃಹಗಳು.. ಎಲ್ಲಾ ವರ್ಗದ ( ಇದ್ದಲ್ಲಿ ) , ಎಲ್ಲಾ ಥರದ ಜನರಿಗೆ ಇಷ್ಟವಾಗುವ ಹಾಗೆ ಮಾಡಿಕೊಂಡ ಹಲವು ಕಸರತ್ತುಗಳ ನಡುವೆಯೂ ಈ ಊರು ಆಪ್ತವಾಗುತ್ತದೆ, ಇರುವಷ್ಟು ದಿನವೂ ಕೌತುಕವಾಗುತ್ತದೆ.. ರಸ್ತೆಯ ಪಕ್ಕ ಎಲ್ಲಿಂದಲೋ ಹಾರಿ ಬಂದು ಬಿದ್ದ ಕಲ್ಲೂ ತನ್ನದೇ ಕತೆಯ ಭಿತ್ತಿಪತ್ರ ಹಿಡಿದು ನಿಂತಿರುತ್ತದೆ.. ಆ ಊರಿನ ಎದೆಯ ಬೀದಿಯ ತಿರುವುಗಳಲ್ಲಿ ಒಮ್ಮೆ ಓಡಾಡೋಣ ಬನ್ನಿ..ಅರೇ, ಆ ಊರಾದ್ರೂ ಯಾವ್ದು ಅಂತಾನಾ?!..ಅದೇ, ಅಂಗಾಂಗ ಮುರಿದರೂ ಸಾವರಿಸಿ ಉಳಿದ ನಮ್ಮ ಹಂಪಿ..
ಇಡೀ ಜಗತ್ತಿಗೆ ಹೇಗೆ ಒಂದು ರೂಪ ಇದೆಯೋ ಹಾಗೆಯೇ ಒಂದು ನಗರಕ್ಕೆ ಕೂಡಾ.. ಅಂತೆಯೇ ಒಂದು ಊರಿಗೂ ಕೂಡ ಆಕಾರ ಮತ್ತು ಶ್ವಾಸ ಇದೆ.. ಯಾವುದೇ ಒಂದು ಊರು ಅಥವಾ ಒಂದು ಪ್ರದೇಶ ಅಲ್ಲಿನ ಜನಾಂಗದ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಉಸಿರಾಡುತ್ತದೆ.. ಮನುಷ್ಯನ ಜೀವನಶೈಲಿಯ, ನಾಗರಿಕತೆಯ ಮತ್ತು ವಿಕಾಸದ ಕುರುಹುಗಳು ಇಡೀ ಊರಿನ ಬಾಹ್ಯ ಮತ್ತು ಆಂತರಿಕ ಅಭಿವ್ಯಕ್ತಿಯ ಮೇಲೆ ತುಂಬಾನೇ ಪ್ರಭಾವ ಬೀರುತ್ತವೆ. ನಮ್ಮ ದೇಹದ ಯಾವುದೋ ಒಂದು ಚಿಕ್ಕ ಭಾಗಕ್ಕೆ ಏಟಾದರೂ ಅಥವಾ ನೋವಾದರೂ ಇಡೀ ದೇಹದ ಸಮತೋಲನದಲ್ಲೇನೋ ಸಣ್ಣ ಏರುಪೇರಾಗುತ್ತದೆ , ಯಾವತ್ತಿನಂತಿರುವುದಿಲ್ಲ ದಿನಚರಿ.. ಅಂತಹುದರಲ್ಲಿ ವಿಸ್ತಾರವಾಗಿ ಹರಡಿದ್ದಂಥ ಒಂದು ಬೃಹತ್ ಸಾಮ್ರಾಜ್ಯದ ಮೇಲೆ ಧಾಳಿ ನಡೆದಾಗ ಅದರ ಪ್ರತಿರೋಧ ಎಂಥದ್ದಿರಬಹುದು.. ಅಥವಾ, ಪ್ರತಿರೋಧವನ್ನೂ ಮೀರಿ, ನಡೆಸಿದ ಅನಾಹುತಗಳ ಪರಾಕ್ರಮದ ಪ್ರಭಾವ ಎಂಥದ್ದಿರಬಹುದು.. ಅಥವಾ ಕ್ರೌರ್ಯದ ಪರಮಾವಧಿಯ ತೀಕ್ಷ್ಣತೆ ಎಂಥದ್ದಿರಬಹುದು.. ಯಾಕೆ ಯಾವಾಗಲೂ ಕಲಾ ಪ್ರಕಾರಗಳ ಮೇಲೆಯೇ ಧಾಳಿಯಾಗುವುದು ಎಂಬ ಇಂಥದ್ದೊಂದು ವಿಷಯವನ್ನ ಹೀಗೇ ಧನ್ಯಾಳ ಹತ್ತಿರ ಮಾತನಾಡೋವಾಗ ಅವಳು, ಯಾವುದೇ ಸಾಮ್ರಾಜ್ಯ ಇತ್ತು ಅಂತ ಹೇಳುವುದಕ್ಕೆ ಇರುವ ಸಾಕ್ಷಿ ಅಂದರೆ ಅಲ್ಲಿನ ಕಲಾ ಪ್ರಕಾರಗಳು ಅಥವಾ ರಚನಾ ಶೈಲಿ.. ಒಂದು ವೇಳೆ ಅದೇ ಕಲಾ ಪ್ರಕಾರಗಳ ಮೇಲೆಯೇ ಧಾಳಿಯಾದಲ್ಲಿ , ಅದನ್ನೂ ಕೂಡ ಇದೇ ಕಲಾ ಪ್ರಕಾರಗಳು ಮುಂದಿನ ಪೀಳಿಗೆಗೆ ದಾಟಿಸುತ್ತವೆ.. ಒಂದು ಸಾಮ್ರಾಜ್ಯದ ಪ್ರತಿಷ್ಠೆಗೂ ಮತ್ತು ಅದೇ ಸಾಮ್ರಾಜ್ಯ ನಲುಗಿದ ಕತೆಗೂ ಅಭಿವ್ಯಕ್ತಿಯ ಮಾಧ್ಯಮವೆಂದರೆ ಕಲೆ ಮಾತ್ರ ಎಂದಳು.. ಬಹುಶಃ ಎಲ್ಲಾ ಸಾಮ್ರಾಜ್ಯದ ಅವನತಿಯ ಹಿಂದೆ, ಕಲೆಯ ಮೇಲೆ ನಡೆದಂಥ ಅತ್ಯಾಚಾರದ ಕಣ್ಣೀರು ಹೆಪ್ಪುಗಟ್ಟಿ ಜಿಡ್ಡಾಗಿ ಅಂಟಿಕೊಂಡಿರಬಹುದು.. ಹಂಪಿಯ ವಿಷಯದಲ್ಲಿಯೂ ಆಗಿದ್ದು ಇದೇ.. ಚದರ ಚದರ ವಿಸ್ತೀರ್ಣದಲ್ಲಿ ಹಬ್ಬಿಕೊಂಡ ಸಾಮ್ರಾಜ್ಯವೊಂದು ವೈಭವ ಕಳೆದುಕೊಳ್ಳುವುದೇ ಊಹಿಸಲು ಕಷ್ಟ ಸಾಧ್ಯ.. ಆದರೆ ಚಾರ್ಲ್ಸ್ ಡಾರ್ವಿನ್ನಿನ ಸಿದ್ಧಾಂತದಂತೆ , ಹೊಂದಿಕೊಳ್ಳುವುದಕ್ಕೆ ಸಮರ್ಥವಾದುದು ಮಾತ್ರವೇ ಬದುಕಲು ಸಾಧ್ಯ ಅನ್ನುವಂತೆ, ಸೃಷ್ಟಿಯಲ್ಲಿ ನಿರ್ಮಾಣ ಮತ್ತು ನಾಶ ನಿರಂತರ ಪ್ರಕ್ರಿಯೆ; ಹುಟ್ಟು ಸಾವು ಅದರ ಇತರ ನಾಮವೋ ಅಥವಾ ಪ್ರಬೇಧವೋ!.. ಒಂದು ತಿಂಗಳ ಮೇಲಾಯಿತು ಹೋಗಿಬಂದು ಮತ್ತು ಈಗಲೂ ಏನೋ ಅತೃಪ್ತಿ ಮತ್ತು ಅಸಮಾಧಾನ ಹಾಗೂ ಇಷ್ಟು ದಿನ ಬೇಕಾಯಿತು ಬರೆಯಬೇಕು ಅಂತನ್ನಿಸುವುದಕ್ಕೆ , ಹಂಪಿ ಇನ್ನೂ ಪೂರ್ಣವಾಗಿ ತೆರೆದುಕೊಳ್ಳುವುದು ಬಾಕಿಯೇ ಉಳಿಯಿತು ಅನ್ನುವ ಸಣ್ಣ ಕೊರಗು.. ಹೊಸಪೇಟೆಯಿಂದ ಹಂಪಿಗೆ ಹೋದಲ್ಲಿ , ವಿರೂಪಾಕ್ಷ ದೇವಸ್ಥಾನದ ಹತ್ತಿರದ ಬಜಾರ್ ನಮ್ಮನ್ನ ಸ್ವಾಗತಿಸುತ್ತದೆ. ಚಿನ್ನವನ್ನ ಬಳ್ಳದಲ್ಲಿ ಮಾರಾಟ ಮಾಡುತ್ತಿದ್ದರು ಅನ್ನುವುದನ್ನ ಬಾಲ್ಯದಲ್ಲಿ ಕೇಳಿದ್ದ ನಾವು ಅದೇ ನೆಲದಲ್ಲಿ ನಿಂತಾಗ ಇತಿಹಾಸಕ್ಕೂ ಮತ್ತು ವರ್ತಮಾನಕ್ಕೂ ಅತ್ಯಂತ ಆಪ್ತ ಸಂಬಂಧವೊಂದು ಹುಟ್ಟಿಕೊಂಡುಬಿಡುತ್ತದೆ.. ಹಂಪಿ ಹೀಗೆ ತನ್ನೊಳಗಿನ ಕತೆಯನ್ನ ಹೇಳಲು ಶುರುಮಾಡುತ್ತದೆ ಮತ್ತು ಆ ಕತೆಯನ್ನು ಕೇಳಲು ತಯಾರಾಗಿ ಹೋಗಿದ್ದು ರಾಧಿಕಾ ಅಕ್ಕಾ , ಸುಮುಖಣ್ಣಾ , ಸಹನಕ್ಕಾ , ಶ್ರೀಗೌರಿ , ಅಭಿಜಿತ್.. ನನ್ನ ಬಹುದಿನದ ಕನಸೊಂದಕ್ಕೆ ರೆಕ್ಕೆ ಕೊಟ್ಟಿದ್ದಕ್ಕೆ ನಿಮಗೆಲ್ಲರಿಗೂ ನಾನು ಚಿರ ಋಣಿ..
ಒಂದು ಕಡೆ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ, ಇನ್ನೊಂದು ಕಡೆ ರಾಮಾಯಣದ ಹೊಳಹು. ಇತಿಹಾಸದ ಎಲ್ಲ ಪಾತ್ರಗಳೂ ಸಾಲಾಗಿ ನಿಂತಂತೆ ಯಾವುದೇ ಕಾಲಾವಧಿಯ ಪ್ರತ್ಯೇಕ ಗುರುತಿಲ್ಲದೇ, ಮತ್ತು ನಾವು ವರ್ತಮಾನದಲ್ಲಿ ಅದಕ್ಕೆ ಮುಖಾಮುಖಿಯಾದಂತೆ.. ಹಲ್ಲು ಕಳೆದುಕೊಂಡ ಅಜ್ಜ ಅಜ್ಜಿಯರ ಕತೆಗಳೇ ಎಷ್ಟು ಆಪ್ತವಾಗುತ್ತಿದ್ದವು , ಇನ್ನು ನಿರಂತರ ಧಾಳಿಯಿಂದ ಸಮಸ್ತವನ್ನೂ ಕಳೆದುಕೊಂಡು ಉಸಿರಾಡುತ್ತಲೇ ಇರುವ ಅಲ್ಲಿನ ಮಡುಗಟ್ಟಿದ ಮೌನದ ಕತೆ ಇನ್ನೆಷ್ಟು ಹತ್ತಿರವಾಗಿರಲಿಕ್ಕಿಲ್ಲ ಹೇಳಿ.. ನಮ್ಮ ಹೆಸರು ಪರಿಚಯ ಇವೆಲ್ಲವುಗಳಿಂದ ಮುಕ್ತವಾಗಿ ಅಲೆಯುವ ಒಂದು ಅನುಭವ ಬಹುಶಃ ವಿಲಕ್ಷಣವೋ ಅಥವಾ ವಿಶೇಷಣವೋ..
ಇಡೀ ಸರಹದ್ದಿನ ಒಳಾಂಗಣದಲ್ಲಿ ಅಲ್ಲಲ್ಲಿ ಎಲ್ಲೆಲ್ಲೂ ಹರಡಿಕೊಂಡಿರುವ ದಪ್ಪ ದಪ್ಪ ಕಲ್ಲುಗಳಲ್ಲಿ ಕೆತ್ತಿದ ಬೇರೆ ಬೇರೆ ಶೈಲಿಯಂತೆ ಕಾಣುವ, ಆದರೆ ಯಾವುದೋ ಒಂದು ರೀತಿಯನ್ನ ಅನುಸರಿಸುವ ವಾಸ್ತುಶಿಲ್ಪ , ಬೃಹತ್ ದೇವಸ್ಥಾನಗಳು, ಅದರ ಗೋಡೆಗಳಲ್ಲಿ , ಕಂಬಗಳಲ್ಲಿ ಅದೆಷ್ಟೋ ವರ್ಷಗಳ ಬಿಸಿಲು ಮಳೆ ಚಳಿ ಮತ್ತು ಗಾಳಿ ಧೂಳನ್ನ ನೋಡುತ್ತಾ ಕಳೆದ ಆಯಸ್ಸನ್ನ ಅದರೊಟ್ಟಿಗೇ ಮತ್ತೆ ಮತ್ತೆ ಹೊಸದಾಗಿಸಿಕೊಳ್ಳಲು ಹಂಬಲಿಸುತ್ತಿರುವ ಚಿತ್ರಗಳು ಒಂದು ಕಡೆಯಾದಲ್ಲಿ , ಪ್ರವಾಸಿಗರನ್ನ ಸೆಳೆಯುವುದಕ್ಕೆ ತಮ್ಮದೇ ನಡವಳಿಕೆಗಳನ್ನ ರೂಪಿಸಿಕೊಂಡ ಜನರ ಚಿತ್ರ ಇನ್ನೊಂದು ಕಡೆ.. ಹಿಂಭಾಗ ಕಳೆದುಕೊಂಡ ಕಲ್ಲಿನ ಆನೆ , ಕೈ ಕಳೆದುಕೊಂಡ ನರಸಿಂಹ , ಏನು ಎಂದು ಗುರುತಿಸಲೂ ಆಗದ ಹಾಗೆ ಮುಖವನ್ನೇ ಕಳೆದುಕೊಂಡ ಒಂದಷ್ಟು ವಿಗ್ರಹಗಳು, ಕಲಾ ಚಿತ್ರಗಳು, ಮತ್ತು ಕಲ್ಲಿನ ಕಂಬಗಳನ್ನೇ ಕತ್ತರಿಸಬಲ್ಲ ಕತ್ತಿಯ ಏಟುಗಳನ್ನು ನೋಡಿದಾಗ, ಆ ಕತ್ತಿಗಳ ಬಲಿಷ್ಠತೆ ಮತ್ತು ಹಿಡಿದ ಕೈಗಳ ಕ್ರೌರ್ಯ ಮತ್ತು ವಿಕೃತ ಮನಸ್ಥಿತಿ.. ವಿರೂಪಾಕ್ಷ ದೇವಾಲಯದಲ್ಲಿ ತಲೆಕೆಳಗಾಗುವ ನೆರಳು , ಅದೇ ದೇವಸ್ಥಾನದ ಪ್ರಾಂಗಣದಲ್ಲೇ ಮಲಗಿ ರಾತ್ರಿ ಕಳೆಯುವ ಜನರು , ಕಂಬಗಳ ಸಂಗೀತ , ಅಜೇಯರಾಗಿಯೇ ಉಳಿವ ಆಕಾಂಕ್ಷೆಯಲ್ಲಿ ಕೆತ್ತಿದ ಕಲ್ಲಿನ ರಥ ಇವುಗಳೆಲ್ಲವೂ ಇನ್ನೊಂದಷ್ಟು ವಿಸ್ಮಯದ ಬುತ್ತಿಗಳಾಗಿ ತೋರುತ್ತವೆ.. ಮಾತಂಗ ಎನ್ನುವ ಮಹರ್ಷಿ ತಪಸ್ಸು ಮಾಡಿದ ಎನ್ನಲಾಗುವ ಆ ಬೆಟ್ಟವನ್ನು ಹತ್ತುವಾಗಿನ ಜಾಗರೂಕತೆ ಮತ್ತು ಹತ್ತುವವರೆಗಿನ ಸಂಯಮ ಬದುಕಲ್ಲೂ ಇರಬಹುದಿತ್ತು ಅನಿಸುತ್ತದೆ.. ಬೆಳಗಿನ ಸೂರ್ಯೋದಯವನ್ನ ನೋಡುವಾಗ ಅಲ್ಲೆಲ್ಲೋ ದೂರದ ಹಸಿರು ದಿಬ್ಬದ ಮೇಲೆ ಬಿಸಿ ಬಿಸಿಯ ಚಿನ್ನದ ದ್ರಾವಣವನ್ನ ನಿಧಾನವಾಗಿ ಚೆಲ್ಲುತ್ತಾ ಬಂದಂತೆ.. ಇಡೀ ಹಂಪಿಯ ಸಮಗ್ರ ಚಿತ್ರಣ ಒಮ್ಮೆಲೇ ತೆರೆದಿಟ್ಟಂತೆ.. ಮತ್ತು ಎತ್ತರಕ್ಕೆ ಹೋದಂತೆ ಹೋದಂತೆ ಭೂಮಿಯ ಗಡಿಗಳೆಲ್ಲವೂ ಅದೃಶ್ಯವಾದಂತೆ.. ಅಗಾಧ ವಿಶ್ವದ ಎದುರು ಕ್ಷುದ್ರ ಕೂಸೊಂದು ನಾಳೆಗಾಗಿ ಹಪಹಪಿಸಿ ಕೂತಂತೆ.. ನಾಗರೀಕತೆ, ಆಧುನಿಕತೆ , ಪ್ರಾಚೀನತೆ, ಇತಿಹಾಸ , ಜಗತ್ತು , ಹೋರಾಟ , ಆಸೆ , ಕಾಲ, ವಯಸ್ಸು ಎಲ್ಲವನ್ನೂ ಮರೆತು ಕೇವಲ ಪ್ರಕೃತಿ ಮತ್ತು ನಮ್ಮ ನಡುವಿನ ಸಂಭಾಷಣೆಯನ್ನ ಮತ್ತೆ ಮತ್ತೆ ಅನುಭವಿಸಲೇಬೇಕೆಂಬ ಹಂಬಲ ಮತ್ತೆ ಮತ್ತೆ ಚಿಗುರಿದಲ್ಲಿ ಮಾತಂಗ ಪರ್ವತದ ತಪ್ಪೇನಿಲ್ಲ..ಇನ್ನು ಹೇಮಕೂಟದ ಸೂರ್ಯಾಸ್ತದ ಬಗ್ಗೆ ಹೇಳಲೇಬೇಕು.. ಸಂಜೆ ಆಗ್ತಾ ಇದ್ದಂತೆ ದೇಶಿ, ವಿದೇಶಿ , ಜಾತಿ , ಲಿಂಗ ಯಾವುದರ ನೆನಪೂ ಇಲ್ಲದೇ ಸೃಷ್ಟಿಯೆಂಬ ಕಲಾವಿದ ಆಕಾಶ ಅನ್ನೋ ಕಾಗದದ ಮೇಲೆ ಬಿಡ್ಸೋ ಸೂರ್ಯಾಸ್ತದ ಚಿತ್ರಕ್ಕಾಗಿ ಸೇರುವ ಜನ ಸಮೂಹ, ವಿಸ್ಮಿತವಾಗಿ ನೋಡುತ್ತಾ ಕೂತುಬಿಡುತ್ತದೆ ಒಂದೇ ಸೂರಿನಡಿಯೆಂಬಂತೆ.. ಸಂಜೆಯ ಆ ಕಡುಗೆಂಪು ಇನ್ನೂ ಜಿಡ್ಡಾಗಿಯೇ ಇರುವ ಪ್ರಾಚೀನ ರಕ್ತದ ಕಲೆಯೇ ಅಂತನ್ನಿಸಿದರೆ ಅತಿಶಯೋಕ್ತಿ ಅಲ್ಲವೇನೋ ಬಹುಶಃ.. ಇವೆಲ್ಲವುಗಳ ಮಧ್ಯ , ನಿರಂತರವಾಗಿ ಹೊಸ ಹೊಸ ನೀರು ಹರಿಯುತ್ತಲೇ ಇದೆ ತುಂಗೆಯಲ್ಲಿ ಮೌನವಾಗಿ.. ಪುರಂದರ ಮಂಟಪದ ನೀರವತೆ ಮತ್ತು ತುಂಗೆಯ ಜುಳು ಜುಳು, ಧ್ಯಾನಸ್ಥ ಸ್ಥಿತಿಯನ್ನ ಮತ್ತೆ ಮತ್ತೆ ಪ್ರತಿಷ್ಠಾಪಿಸಲು ಹೆಣಗುತ್ತಿರುವಂತೆ ಗೋಚರಿಸುತ್ತದೆ.. ರಾತ್ರಿ ೮ ಗಂಟೆ ಆಗ್ತಾ ಇದ್ದಂತೆ ಹಂಪಿಯಲ್ಲಿನ ದೀಪಗಳಿಗೆ ವಿಶೇಷ ಬಣ್ಣ ಮತ್ತು ಅರ್ಥ ಬರುತ್ತದೆ ಹಾಗೂ ಇಡೀ ಹಂಪಿ ನಿಧಾನಕ್ಕೆ ಮಲಗುತ್ತದೆ ಮತ್ತು ಇತರ ಊರೊಂದಿಗಿನ ಸಂಪರ್ಕವನ್ನ ಕಡಿದುಕೊಂಡು ಗುಟ್ಟಿನ ಜಾಗವಾಗುತ್ತದೆ..
ಮತ್ತೆ ಬೆಳಗಿನ ಜಾವ ಪ್ರವಾಸಿಗರನ್ನ ಸೆಳೆಯಲು "ರೂಮ್ ಚಾಹಿಯೇ ಕ್ಯಾ" ಎನ್ನುತ್ತಾ ಶುರುವಾಗುವ ಗದ್ದಲ "ಕನ್ನಡ ಬರತ್ತೆ ಸಾರ್" ಅನ್ನುತ್ತಾ , ವ್ಯಾಪಾರೀಕರಣದ ಬೇರೆ ಬೇರೆ ಮಜಲುಗಳಿಗೆ ವಿಸ್ತರಿಸಿಕೊಳ್ಳುತ್ತದೆ.. ಅಲ್ಲಿನ ಜನರ ಬಹುತೇಕ ಉದ್ಯೋಗವೇ ಪ್ರವಾಸಿಗರನ್ನ ಸೆಳೆಯುತ್ತಾ ಅವರನ್ನ ಖುಷಿಪಡಿಸುವುದೇ ಆಗಿರುವಾಗ ಭಾಷೆಯ ಬಗೆಗಿನ ಕಾಳಜಿ ಯಾರಿಗಿರಲು ಸಾಧ್ಯ.. ನಿತ್ಯದ ಹೊಟ್ಟೆಯ ಹಾಡು ಮತ್ತು ಅದರ ಮೇಲಿನ ಮೋಜು ಪ್ರವಾಸಿಗರ ತೃಪ್ತಿಯಲ್ಲೇ ಇದೆ ಅನ್ನುವ ಸತ್ಯ ತಿಳಿದಾಗಿನಿಂದ ಹಂಪಿ ಹಾಗೆಯೇ ಉಳಿದುಬಿಟ್ಟಿತು.. ಹಂಪಿ ಹಾಳಾಗಿಯೇ ಇರಬೇಕು, ಆಗಲೇ ಅದು ತನ್ನ ಚರಿತ್ರೆಯನ್ನ ಹೇಳಬಲ್ಲದು.. ಅದಕ್ಕಾಗಿ ಕೆಲವು ಉದುರುತ್ತಿರುವ ದೇವಸ್ಥಾನಗಳನ್ನ ಕೃತಕವಾಗಿ ಮೊದಲಿನಂತೆ ಕಟ್ಟಲು ಪಡುತ್ತಿರುವ ಹರಸಾಹಸಗಳು ಸಾಕ್ಷಿಯಾಗುತ್ತವೆ.. ಹಂಪಿಯಲ್ಲಿ ಇರುವಷ್ಟೂ ದಿನ ನಾವು ಯಾವುದೋ ಒಂದೋ ಅಗೋಚರ ಶಕ್ತಿಯ ಆಜ್ಞೆಯನ್ನ ಪಾಲಿಸಿದಂತೆ ಮತ್ತು ಅಲ್ಲಿನ ಎಲ್ಲವೂ ಪೂರ್ವ ನಿರ್ಧರಿತವಾದಂತೆ ಅನ್ನುವ ಸಣ್ಣ ಸಂಶಯವೊಂದು ಬಂದರೆ ಅದೊಂದು ಸೂಕ್ಷ್ಮದ ವಿಷಯ ಖಂಡಿತಾ.. ಅಲ್ಲಿಗೆ ಅದರದ್ದೇ ಆದ ವ್ಯವಸ್ಥೆಯಿದೆ , ಅದರದ್ದೇ ಆದ ಗುಣ ಲಕ್ಷಣಗಳಿವೆ, ಅದರದ್ದೇ ಆದ ದಿನಚರಿಯಿದೆ, ಸೂರ್ಯ ಚಂದ್ರರೊಂದಿಗೆ ಹಗಲು ರಾತ್ರಿಗಳಾದರೂ ಅದಕ್ಕೆ ಅದರದ್ದೇ ಆದ ಕಾಲಮಾನವಿದೆ.. ಅದಷ್ಟೂ ವ್ಯಾಪಾರೀಕರಣ, ಮನುಷ್ಯನ ಹಪಹಪಿತನದ ನಡುವೆಯೂ ಒಂದು ಪ್ರೀತಿಯ ಸ್ಪರ್ಶಕ್ಕಾಗಿ ಹಂಪಿಯ ದೇವಸ್ಥಾನದ ಕಂಬಗಳು ಕಾಯುತ್ತಿವೆ, ಕಲ್ಲಿನ ನಂದಿ ಕತ್ತಲೆಯಲ್ಲಿ ಮುಲುಗುತ್ತಿದೆ, ಕಿತ್ತುಕೊಂಡು ಹೋದ ದೇವರ ಮೂರ್ತಿಗಳು ಈಗಲೂ ಜನರ ನಂಬಿಕೆಯಲ್ಲಿ ತಮ್ಮ ಅಸ್ತಿತ್ವವನ್ನ ಗಟ್ಟಿಯಾಗಿಸಿಕೊಂಡಿವೆ.. ರಾಣಿಯರ ಸ್ನಾನಗೃಹವಾಗಿತ್ತಂತೆ , ಇಲ್ಲಿ ಆನೆಗಳ ಸಾಲು ಸಾಲನ್ನ ಕಟ್ಟುತ್ತಿದ್ದರಂತೆ ಎಂಬ ಚರಿತ್ರೆಯ ನೆನಪುಗಳೊಂದಿಗೆ , ಇಲ್ಲೇ ಅಕ್ಕತಂಗಿಯರಿಬ್ಬರು ಕಲ್ಲಾಗಿಹೋದರಂತೆ ಎನ್ನುವ ಕತೆಗಳೂ ಪ್ರಚಲಿತದಲ್ಲಿರುವ ಹಂಪಿಯಲ್ಲಿ ಒಂದು ಅಪ್ರಕಟಿತ ಶೋಕವಿದೆ.. ಒಂದು ಅನಾಥ ಮೌನವಿದೆ.. ಇಷ್ಟೆಲ್ಲ ಮಾನವ ಜನಾಂಗದ ಗದ್ದಲದ ನಡುವೆ ಬೇರೆಯಾಗಿಯೇ ಉಳಿದ, ಬೆರೆಯದೇ ಹೋದ ಅಳಲಿದೆ..ಇದಕ್ಕಾಗಿಯೇ ಅದು ಇನ್ನಷ್ಟು ಆಪ್ತವಾಗುತ್ತದೆ.. ಕೇವಲ ಚೌಕಟ್ಟಿನಲ್ಲಿ ಛಾಯಾಚಿತ್ರವಾಗುವ ಎಲ್ಲಾ ಕಲ್ಲಿನ ಚೂರಿಗೂ ಅಲ್ಲಿನ ಬಾನಿಗೂ ಅದರದ್ದೇ ಆದ ಬಣ್ಣವಿದೆ.. ಅಲ್ಲಿನದೇ ಕಲ್ಲಿನ ಕಂಬಕ್ಕೆ ತಲೆಯಾನಿಸಿ ಕೂತಾಗ, ಕಾಮ,ಕ್ರೋಧ,ಲೋಭ,ಮೋಹ,ಮದ, ಮಾತ್ಸರ್ಯ ಇತ್ಯಾದಿಗಳೂ, ಸಿಟ್ಟು , ಪ್ರೀತಿ ,ಗಾಂಭೀರ್ಯ, ಸೇಡು, ನಗು , ದುಃಖ , ರೌದ್ರ , ಭೀಭತ್ಸ , ಭಯ, ಹಾಸ್ಯ , ಅದ್ಭುತ, ಶಾಂತ ಇತ್ಯಾದಿ ಇತ್ಯಾದಿ ರಸಗಳೂ ಅತ್ಯಂತ ಕ್ಷೀಣ ದನಿಯಲ್ಲಿ ಚಡಪಡಿಸುತ್ತಿರುವುದು ಕೇಳಿದರೆ ಹುಚ್ಚನೆನ್ನದಿರಿ.. ಯಾಕೆಂದರೆ , ಹಂಪಿ ಗತ ವೈಭವದ ಗಂಭೀರ ಆತ್ಮ ಚರಿತ್ರೆ..
~`ಶ್ರೀ'
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ