"ಮೌಲ್ಯ..."
ಗುಡಿಸಲಿನ ಕಿಂಡಿಗಳಲಿ ಬೆಳ್ಳಿ ಕಿರಣ
ಸಹಜ ಕಲೆಯ ನೈಜ ವ್ಯಾಕರಣ..
ಹಸಿದ ಗಳಿಗೆ ತಿಳಿಯಿತೆನಗೆ
ಅಗಳಿಗೂ ಬೆಲೆಯ ಕೊಡುವ ಕಾರಣ..
ಹರಕು ಚಾಪೆಯ ಮೇಲೆ ಮಲಗಿದಾಗಲೇ
ತಿಳಿದದ್ದು ಭೂತಾಯಿಯಾ ಪ್ರೀತಿ..
ತಿಳಿನೀರು,ಗಂಟಲಲಿ ಇಳಿದಾಗಲೇ
ಅರಿವಾಯ್ತು ಸೃಷ್ಟಿಯಾ ನಿಜ ಶಕ್ತಿ..
ಹೂವಿರದ,ಹಣ್ಣಿರದ,ಎಲೆ ಮಾತ್ರ ಇರುವ
ಮರದಲ್ಲೂ ಇಹುದು ಬತ್ತದಾ ಮಮತೆ..
ದಣಿದ ದೇಹಕೆ,ಗೂಡಿಡುವ ಹಕ್ಕಿಗೆ
ಮಾತ್ರ ಸೀಮಿತ ಮಡಿಲಿನಾ ಕತೆ..
ಅರಮನೆಯ ಗಾಳಿಗೆ ದರ್ಪದಾ ಬಿಗುಮಾನ
ಚಂದಿರನ ಚಾವಡೀಲಿ ಚೆಲುವುಗಟ್ಟುವಾ ಪವನ..
ಪುಟಗಳಲಿ ಬೆಚ್ಚಗಿನ ನವಿಲಗರಿಗಿಂತ
ಹನಿಗಳಲಿ ಹದವರಿತು ನೆನೆವುದೇ ಮಧುರ ತನನ..
ನಕ್ಷತ್ರವೊಂದು ಚೆಂದದಾ ಆಸೆ
ಕೈದೀಪ ಜೊತೆಯಿರುವ ಒಲವಿನಾ ಬೊಗಸೆ..
ಕೊನೆತನಕ ಕರಗದೇ ಉಳಿಯಬೇಕೆಂದಿಲ್ಲ
ದಾರಿಹೋಕನ ಕಣ್ಣ ಖುಷಿ ಅದರ ಪಾಲಿಗೆಲ್ಲಾ...
~‘ಶ್ರೀ’
ತಲಗೇರಿ
ನಿಮ್ಮ " ಮೌಲ್ಯ" ಮೌಲ್ಯಯುತವಾದ ಕವನ. ದೂರವಾದಾಗಲೇ ವ್ಯಕ್ತಿಗಳ, ವಸ್ತುಗಳ ಅಗತ್ಯ ಅರಿವಿಗೆ ಬರುವುದು. ಸೊಗಸಾದ ಕವನದಲಿ ಸುಂದರ ಸಾಲುಗಳು...
ಪ್ರತ್ಯುತ್ತರಅಳಿಸಿನಿಜ ರಂಜನಾ..ಮೌಲ್ಯ ತಿಳಿಯುವುದು ಪಡೆಯುವುದಕ್ಕಿಂತ ಮೊದಲು ಮತ್ತು ಪಡೆದದ್ದನ್ನ ಕಳೆದುಕೊಂಡಾಗ.. ಅದರ ಬದಲು,ಇರುವಾಗಲೇ ಮೌಲ್ಯವರಿತರೆ,ಬದುಕು ಇನ್ನೂ ಚೆಂದ ಆಗೋದ್ರಲ್ಲಿ ಸಂದೇಹ ಇಲ್ಲ... :) :) :)
ಪ್ರತ್ಯುತ್ತರಅಳಿಸಿಧನ್ಯವಾದಗಳು... :) :) :)
ಪ್ರತ್ಯುತ್ತರಅಳಿಸಿ