ಬುಧವಾರ, ಅಕ್ಟೋಬರ್ 1, 2014

"ಅಮಲಿನ ತಂತು.."

     "ಅಮಲಿನ ತಂತು.."

ರೆಕ್ಕೆಯ ಬಡಿದಿದೆ ಎದೆಯ ಅಂಚಿಗೆ
ಗೆರೆಯನು ಗೀಚುತ ಮುಗಿಲಿನ ಹಕ್ಕಿ
ಕರಗಿದೆ ನೆರಳು,ಕಾಣದ ಕ್ಷಣದಲಿ
ಕಾರಣ ಅರಸಿದೆ ಅರಳದ ಚುಕ್ಕಿ..

ಕಂಪನ ಕಾಮದ ಸೊಂಪಿನ ತಂಪಿಗೆ
ಋತು ಬರೆದಿದೆ ಒಲವಿನ ಸಾರ
ಅವಿರತ ಅಮಲಿನ ಅರಿವಿನ ಧಾಟಿಗೆ
ಸ್ವರ ಹೊಸೆದಿದೆ ಹರೆಯದ ಪೂರ

ಬೆರಗು ಬಾನಿನ ಮೌನದ ಗರಿಗೆ
ಬಣ್ಣದ ಹೊಸನಶೆ ಕಾಮನಬಿಲ್ಲು
ನೆರಿಗೆ ನಾಚುವ ಸೀರೆಯ ತುದಿಗೆ
ಕುಸುರಿಯ ಕರೆದಿದೆ ಗೊಲ್ಲನ ಕೊಳಲು..

ಹಸಿವಿನ ಹೊಸನಗು ತುಟಿಯಾ ಮುಡಿಗೆ
ಇಂಗಿದೆ ಹಂಗಿನ ನೆಲದಲಿ ಬಿಸಿಲು..
ಬಿರಿಯುವ ಮೊಗ್ಗಿನ ಪಕಳೆಯ ಮೈಗೆ
ಕಾದಿದೆ ತವಕದಿ ಚಿಟ್ಟೆಯ ಕಾಲು..

ಕರಗುವ ಮೇಣದ ಬೆಳಕಿನ ರಾಶಿಗೆ
ಕತ್ತಲ ಪ್ರಸವದ ಕನಸಿನ ಲಹರಿ..
ತಂತಿಯ ಒಳಗೂ ನರಳುವ ಕೂಗಿಗೆ
ಸರಿಗಮ ಕಲಿಸಿದೆ ಬದುಕಿನ ತಂಬೂರಿ..

                              ~‘ಶ್ರೀ’
                                ತಲಗೇರಿ

1 ಕಾಮೆಂಟ್‌:

  1. "ಬಿರಿಯುವ ಮೊಗ್ಗಿನ ಪಕಳೆಯ ಮೈಗೆ
    ಕಾದಿದೆ ತವಕದಿ ಚಿಟ್ಟೆಯ ಕಾಲು.."
    ವಾವ್ ಕವಿಯೇ, ನಿಮ್ಮ ಪ್ರತಿಭೆ ಹೊಳೆಯಲಿ ವಜ್ರದಂತೆ.

    ಪ್ರತ್ಯುತ್ತರಅಳಿಸಿ