ಗುರುವಾರ, ಮೇ 19, 2016

"ಸ್ವತ್ತು"...

ಬಿಕ್ಕಿದ ಮಳೆಯಲ್ಲಿ
ಬಣ್ಣ ಕಳೆದುಕೊಂಡ
ಪಾತರಗಿತ್ತಿಗಳ ರೆಕ್ಕೆಯನ್ನು
ಓರೆಗಣ್ಣಿಂದ ನೋಡುತ್ತ
ಮಾತನಾಡುತ್ತಾರೆ
ಅವರವರ ನೋಟಕ್ಕೆ
ನಿಲುಕಿದಷ್ಟನ್ನು...

ಹೆಸರು ಹೇಳಲು
ಹೊರಟವನು ಕಂಗಾಲಾಗುತ್ತಾನೆ
ತನ್ನೊಳಗೇ ಇರುವ
ಹೆಣ್ಣು ಗಂಡಿನ ಮಿಶ್ರ ಭಾವಕ್ಕೆ!
ಗಳಿಸಿಕೊಂಡಿದ್ದೇ ಈ ಹೆಸರನ್ನು?
ಅಥವಾ, ಉಳಿಸಿಕೊಂಡಿದ್ದೇ!..

ಆಗಸದಲ್ಲಿರುವ ಬಿರುಕುಗಳ
ಹೊಲಿಯುವೆನೆಂದು ಹೋದಾತನ
ಚರ್ಮದ ರಂಧ್ರಗಳಲ್ಲಿ ಬೆವರು..
ಚಂದ್ರನ ಮೇಲಿರುವ
ಹೆಜ್ಜೆ ಗುರುತುಗಳ ಕಂಡು
ನನಗ್ಯಾಕೆ ಇಲ್ಲದ ಉಸಾಬರಿ!
ಬೆಳಕು ಸೋರಿದ್ದು ದೀಪಗಳ
ಹಚ್ಚಲೆಂದಲ್ಲ; ಕಳೆಯಲೆಂದು
ಬೇಸರ, ಆ ನೇಸರ...

ಉದ್ಯಾನದ ಕಲ್ಲಿನಾಸನಗಳು
ಅದೆಷ್ಟು ಬೆವರ ವಾಸನೆಯ
ಹೀರಿವೆಯೋ; ಪ್ರಣಯದ
ಪಿಸುಮಾತುಗಳ ಇದಿರು
ನಾಚಿ ಕೆರಳಿವೆಯೋ!
ಆದರೂ, ಒಂದಿನಿತು ತನ್ನ
ಗುಟ್ಟು ಬಿಟ್ಟುಕೊಡದ ನಿರ್ಲಿಪ್ತ...

ನಾ ಬಿಡಿಸಿಟ್ಟುಕೊಂಡಿದ್ದ ಚಿತ್ತಾರಗಳಿಗೆ
ನಿನ್ನ ಚಾದರದಲ್ಲೇನು ಕೆಲಸ!..
ಪ್ರಾಮಾಣಿಕನಾಗಿದ್ದರೆ ಕೇಳು,
ಬೇಲಿ ಹಾಕಿದ್ದು ನೀ ನನಗಲ್ಲ,
ಕನಸಿನ ಒಂದೆರಡು
ಬಿಡಿ ಸರಕುಗಳಿಗಷ್ಟೇ!...

                             ~‘ಶ್ರೀ’
                                 ತಲಗೇರಿ

2 ಕಾಮೆಂಟ್‌ಗಳು:

  1. ಹಲವು ಸುಂದರ ಮತ್ತು ಹೃದಯಕ್ಕೆ ಸನಿಹವೆನಿಸುವ ಎಳೆಗಳೊಳಗೊಂಡ " ಸ್ವತ್ತು " ಸುಂದರ ಕವನ. ಕಾವ್ಯ ರಚಿಸುವ ಕೃತುಶಕ್ತಿಯು ನಿಮ್ಮ ಸ್ವತ್ತಾಗಿದೆ. " ನಾ ಬಿಡಿಸಿಟ್ಟುಕೊಂಡಿದ್ದ ಚಿತ್ತಾರಗಳಿಗೆ...." ಸಾಲುಗಳು ಬಹಳ ಇಷ್ಟವಾದವು. :-)

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ತುಂಬು ಮನದ ಧನ್ಯವಾದಗಳು ನಿನ್ನ ಪ್ರತಿಕ್ರಿಯೆಗೆ ರಂಜನಾ... ಈ ಭೇಟಿ ಸದಾ ಇರಲಿ... :) :) :)

      ಅಳಿಸಿ