"ನೆನಪು ಗೀಚಿದ ಸಾಲಿಗೂ..."
ಸ್ವಪ್ನಗಳ ಸಾರಥಿಯೇ
ಹರೆಯ ಸೆಳೆದಿದೆ ಋತುವ
ಪರಿಚಯದ ಭ್ರಾಂತಿಯೇ
ಮರೆವು ಕಳೆದಿದೆ ಹೆಜ್ಜೆ ಹೂವ..
ಬೆರಳು ಜಾರಿದ ಅವಧಿ
ಮೂಕವಾಗಿದೆ ಅಂಬರ..
ಮತ್ತೆ ಸೇರದ ನೆರಳಿಗೇಕೆ
ದೂರ ಎಣಿಸುವ ಕಾತರ..
ಎಲೆಗಳುದುರದ ರೆಂಬೆಗೂ
ಕಟ್ಟಲಿಲ್ಲ ಹಕ್ಕಿಗೂಡು..
ಅಗಲ ಬಾನಿನ ಬಿಸಿಲು
ಹೀರುವುದು ಎದೆಯೆದೆಯ ಹನಿಯ..
ಹೆಗಲಿಗೊರಗದ ಮುಗಿಲು
ಮೂಡಿಸದೇ ಮಳೆಬಿಲ್ಲ ಕಲೆಯ..
ಸರಿಯಲೊಲ್ಲದ ಸಲಿಗೆ
ಸೇರಲಿಲ್ಲ ಒಲವ ಜಾಡು..
ನೆನಪು ಗೀಚಿದ ಹಲವು ಸಾಲಿಗೂ
ತಾವೇ ಹುಟ್ಟಿವೆ ಬದಲು ಉತ್ತರ..
ಅರ್ಥವಾಗದೇ ಉಳಿಯಿತೇ ಕೊನೆಗೂ
ಎರಡು ಪದಗಳ ನಡುವಿನಾ ಅಂತರ..
~‘ಶ್ರೀ’
ತಲಗೇರಿ
ಎರಡು ಪದಗಳ ನಡುವಿನಾ ಅಂತರ ಅರ್ಥವಾಗದ ಹೊರತು ನೆನಪೂ decode ಆಗದು ಸಲೀಸಾಗಿ!
ಪ್ರತ್ಯುತ್ತರಅಳಿಸಿnija badari sir :) :) :) aa antara arthavaadare ella sulalita :)
ಪ್ರತ್ಯುತ್ತರಅಳಿಸಿ