ಗುರುವಾರ, ಮೇ 12, 2016

"ಹುಟ್ಟು"...

ನರಗಳಲ್ಲಿ ತುಂಬಿ ಹರಿವ
ರಕ್ತಕ್ಕೆ ಅದೆಂಥ ವಾಸನೆಯೋ..
ಮತ್ತೆ ಮತ್ತೆ ಕೆಂಪಾಗುತ್ತ
ಕಪ್ಪಾಗಿ ಹೆಪ್ಪಾಗುತ್ತದೆ
ಆಸೆಗಳ ತೆಕ್ಕೆಯಲ್ಲಿ..

ಚರ್ಮದಾ ವ್ಯಾಮೋಹದಲಿ
ಅಂಟಿಕೊಂಡ ರೋಮಗಳು
ನಿಲ್ಲುತ್ತವೆ ಭಗ್ಗನೆ
ಕಣ್ಣು ಕಿವಿಗಳ ಕೀರಲು ಸ್ವರದ
ಆಸ್ವಾದಕ್ಕೆ..

ಎಲ್ಲಿಯದೋ ಮಣ್ಣ ಕಣಕ್ಕೆ
ಯಾವ ಉಗುರ ಸಂಧಿಯ ಋಣವೋ!
ಕೊಳೆತಿದೆ ಬಿತ್ತಿದ್ದ ಬೀಜ;
ಹಸಿರ ಹಡೆಯುವ ವಿಷಯದಲ್ಲಿ
ನೀರು, ಬೆಳಕು, ಮಣ್ಣು ಸ್ತಬ್ಧವೀಗ..

ಕೀಲುಗಳಿಗೆಲ್ಲ ಎಣ್ಣೆ ಸವರಿ
ಬಯಲಿನಲ್ಲಿ ಬಿಟ್ಟಿದ್ದೇನೆ ಬೊಂಬೆಗಳ..
ಚಿಟ್ಟೆಯ ರೆಕ್ಕೆಗಳ ಬಣ್ಣದ ಹುಡಿ
ಗಾಳಿಯಲ್ಲಿ ಲೀನ ಯಾರಿಗೂ ಕಾಣದಂತೆ!
ತಮ್ಮನ್ನೇ ತಾವು
ಕಳೆದುಕೊಂಡಂತಾಡುತ್ತಿವೆ ಬೊಂಬೆಗಳು..!
ಕೃತಕವಾಗುತ್ತಿವೆ ಹಗಲು ರಾತ್ರಿ
ಬೇರ್ಪಡಿಸಲಾಗದಂತೆ..

ಬೇಲಿ ಕಟ್ಟಬೇಕೀಗ
ನನದೆಂಬ ವ್ಯಾಪ್ತಿಗೆ..!
ಎಳೆದಿದ್ದ ಗೆರೆಯನೆಲ್ಲ
ಕಂಗೆಡಿಸುವೆನೆಂದು
ಶಪಥ ತೊಟ್ಟಿದ್ದಾಳೆ ಅವಳು
ಗೋಡೆಗಳನೆಲ್ಲ ಕೆಡವಿ
ತುಂಡಾದ ಹಂಚಿನ ಮೇಲೆ
ಹಣತೆಯಿಟ್ಟು;
ಜರಿ ಉದುರಿದ ಸೀರೆಯನುಟ್ಟು..
ಹುಟ್ಟು ಯಾರೆದೆಯಲ್ಲಿ ಸೃಜಿಸಿದ
ಸತ್ಯ ಸ್ವಪ್ನವೋ!...

                           ~‘ಶ್ರೀ’
                               ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ