ಶನಿವಾರ, ಮೇ 7, 2016

"ಬಂಧ"...

ಅದೆಷ್ಟೋ ಆಸೆಗಳ
ಅಷ್ಟಷ್ಟೇ ಶೇಖರಿಸಿ
ತವಕದಾ ಬಿಸಿಗೆ ಮೈ ಬಿರಿದು
ಹಂಬಲದ ಹಸಿವಿನಾ ಪರಿಮಳವ
ಸೂಸುತ್ತ ಮಲಗಿಹುದು ಭೂಮಿ..
ಉಸಿರ ಲಯದಿ ಮೆಲ್ಲ
ಹೊಕ್ಕಿತು ಮಿಲನ ಗಾಳಿ..
ಸೃಷ್ಟಿಯೆಲ್ಲ ಸಖ್ಯ ಸುಧೆಯು
ಎದೆಯ ಸೇರಿತ್ತು ಮಳೆಯ ಹನಿಗಳಲಿ...

ಅವನು ಇವಳು
ಹೊಸೆದು ಬರೆದ ಮುಗಿಲ ಬಿಲ್ಲು..
ಒಂದೆಂದ ಕ್ಷಣಕೀಗ
ಯಾವ ಬಣ್ಣ!
ಹೆಜ್ಜೆ ನಾಚಲು
ಅಲ್ಲೇ ಮುಲುಗಿತು ನವಿಲು..
ನುಸುಳುವ ಬಿಸಿಲ ಅಲೆಗೆ
ಬೇಲಿಗಳ ಕಿತ್ತೆಸೆದು
ಬೆರಗು ಮೌನದಿ ಈಗ
ಧ್ಯಾನಸ್ಥ ಬಯಲು...

ದಿಕ್ಕು ದಿಕ್ಕಲಿ ವಕ್ರ ವಾರ್ತೆಯ
ಚೆಲ್ಲಿ ಕೂರುವ ಅಪಸ್ವರ..
ಚಂದ್ರ ಚಲನೆಯ ಅಂಕುಡೊಂಕಿಗೆ
ಕಡಲ ಎದೆಯಲಿ ಏರುಪೇರು..
ಉಳಿಸುವುದು ಹೇಗೆ
ಮಳಲ ಮೇಲೆ
ನೆರಳು ಬರೆದ ಹೆಸರ..!

ಅಂಟಿಕೊಳ್ಳುವ ಆಸೆಯಿದ್ದರೆ
ಶಂಖ ಚಿಪ್ಪುಗಳ ಭಿತ್ತಿ ಚಿತ್ತಾರ
ಮತ್ತೆ ಮಗುಚಲು ಇರುಳು..
ಬೆಸೆದ ಬೆರಳಿವೆ ತೀರದಾಚೆಗೂ..
ಕಾದ ಕಿವಿಯಿದೆ ಮುರಲಿಗೂ..!
ಮತ್ತೆ ಬೆಳಕಿನ ರಾತ್ರಿ
ಸಮಯ ಕೊಡುವುದು ಚಕ್ರವಾಕ
ಜಂಟಿಯಾಗಿ ಕೂತು
ಅವನಿಗೂ, ಇವಳಿಗೂ...

                            ~‘ಶ್ರೀ’
                                ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ