ಸೋಮವಾರ, ಸೆಪ್ಟೆಂಬರ್ 19, 2016

"ಹೌದು, ಗಡಿಯಾರಗಳು ಮಾತನಾಡುತ್ತವೆ"...

                    

     ಇಷ್ಟಿಷ್ಟೇ ಮಾತನ್ನು ತಡೆತಡೆದು ಹೇಳಬಹುದೇ, ಅಷ್ಟೇನೂ ಗಮನಿಸದೆ ವಾಕ್ಯಗಳ ತಿದ್ದದೇನೆ.. ಪಾರಿಜಾತದ ನಗೆಯ ನಿನ್ನ ಕಂಗಳ ಕುಡಿಯ ಮೇಲುದುರಿದ ಇಬ್ಬನಿಯ ಕತೆಗಳನು ಹೆಕ್ಕಿ ಹೆಕ್ಕಿ ತಂದು ನಾ ಬರೆಯಲೇನು.. ಪರಿಚಯದ ಪುರವಣಿಯ ಗರಿಗರಿಯ ಹಾಳೆಗಳ ಎದೆಯೊಳಗೆ ಬೆಚ್ಚಗೆ ನಿನ್ನನ್ನು ಇರಿಸಲೇನು.. ನಾ ಒರಗಲೇನು ಹಾಗೇ ತಬ್ಬಿಕೊಂಡು.. ನೆನಪುಗಳನು ಮುದ್ದಾಗಿ ಹೊದ್ದುಕೊಂಡು...ಹೌದಂತೆ ಗೆಳತೀ.. ಈ ನೆನಪುಗಳಿಗೂ ಮತ್ತು ಕನಸುಗಳಿಗೂ ಒಂದೇ ರೂಪವಂತೆ.. ಸುರುಳಿ ಸುರುಳಿ ಮೆದುಳಿನಲಿ ಅಲ್ಲಲ್ಲಿ ಅಂಟಿ ಕೂತ ಇಬ್ಬರದೂ ಒಂದೇ ಗಮಕವಂತೆ.. ನುಸುಳಿಬರುವ ಪದಗಳಲ್ಲಿ ಪಲುಕು ಮಾತ್ರ ಬೇರೆಯಂತೆ!.. ಎಲ್ಲಕ್ಕೂ ಮೂಲ ಕಾಲವಂತೆ...

     ತುಂಬಾನೇ ವಿಚಿತ್ರ ಕಣೇ ಹುಡುಗಿ.. ಬದಲಾವಣೆಯನೇ ಕಾಲವೆಂದರೋ ಇಲ್ಲಾ, ಕಾಲವನೇ ಬದಲಾವಣೆಯೆಂದರೋ.... ಅಲ್ಲಿ ಇಲ್ಲಿ ಅದಲು ಬದಲೋ ಅಥವಾ ಒಂದೇ ತೊಗಲೋ.. ಗಟ್ಟಿ ಬಿಗಿದ ಮಾಂಸಖಂಡ ಹವೆಯ ಹಟದಲಿ, ಜೋತುಬೀಳೋ ತನಕ ತಿಕ್ಕಿಕೊಂಡ ‘ನಾನೂ’ ಕೂಡ ಹದಕೆ ಬರುವ ಹರಿವಿಗೆಂದೂ ತುಂಬು ಪ್ರಾಯವೇ?.. ಅಲ್ಲೂ ಎಳೆಯ ಮಧ್ಯ ಮುಪ್ಪುಗಳ ನ್ಯಾಯವೇ!.. ಅನುಕ್ರಮದ ಸರಣಿಯಲ್ಲಿ ಕಾಲವೆಂಬುದು ಭ್ರಮೆಯೇ.. ಅಥವಾ ತೀರಲಾರದ ಉಪಮೆಯೇ!.. ಒಂದಷ್ಟು ಕಿಸೆಗಳನು ಹೊಲಿದುಕೊಡು ಮಾರಾಯ್ತೀ, ನೆನಪುಗಳನು ಜೋಪಾನವಾಗಿ ಇಟ್ಟುಕೊಳ್ಳುತ್ತೇನೆ ಎದೆಗೆ ತುಂಬ ಹತ್ತಿರದಲ್ಲಿ... ತೇಪೆ ಹಚ್ಚಿದ ಎದೆಯೊಳಗೆ ತಡವಿಕೊಂಡಂತೆಲ್ಲಾ.., ಎಂದೋ ಮಾಸಿದ ನುಣುಪು, ಮೊನ್ನೆಯಷ್ಟೇ ಹೊಲಿದುಕೊಂಡ ಹಸಿ ಹುರುಪು, ಜೊತೆ ಜೊತೆಗೇ ಅರ್ಧರ್ಧ ಬಿಟ್ಟ ದಾರದ ಸೋಂಕು.. ಇರಲಿಬಿಡು, ನೆನಪುಗಳಲಾದರೂ ನೀನು ಪಾಲುದಾರಳಾದೆಯಲ್ಲ!.. ನೇರಳೆ ಮರದ ನೆರಳ ಕೆಳಗೆ ನವಿಲುಗರಿ ತಂದು ಬಣ್ಣಗಳ  ಬೇರ್ಪಡಿಸು ಎಂದಿದ್ದೆಯಲ್ಲ.. ಕಾಲುದಾರಿಯ ಬೇಲಿತುದಿಗೆ ಅಡಗಿಕೊಂಡ ಮೊಗ್ಗ ತಂದು ಹೆರಳ ಸಲಿಗೆಯ ಕೇಳಿಕೊಂಡ ನನಗೆ ಪೂರ್ತಿ ಹಕ್ಕು ಕೊಟ್ಟ ಮೇಲೂ, ಬಾಡಲಿಲ್ಲ ಮೊಗ್ಗು.. ಅರಳಿಕೊಂತು ಬಿಸಿಲು ಬಿದ್ದ ಹಾಗೆ..! ಅಂದು ಒಮ್ಮೆ ಕೆಸರಿನಲ್ಲಿ ಹೆಸರ ಬರೆದು ಕೆನ್ನೆಗೊಂದು ಬೊಟ್ಟು ಇಟ್ಟ ಮೇಲೆ ಸ್ಪರ್ಶಕೊಂದು ಅರ್ಥ ಬಂದಿತ್ತು..

     ಆಗಾಗ ಹಲುಬುತ್ತೇನೆ ಹುಡುಗೀ.. ಒಮ್ಮೆ ಜೋರಾದ ಮಳೆಯಲ್ಲಿ ತುಂಬಾನೇ ನೆನೆಯಬೇಕು.. ನಿನಗೆಂದೇ ನಾ ಹಚ್ಚಿಕೊಂಡ ಬಣ್ಣಗಳೆಲ್ಲಾ ತೊಳೆದುಹೋಗಿ ಖಾಲಿಯೆಂಬ(?) ನಾನುಳಿಯಬೇಕು.. ಬೆರಕೆ ಬಣ್ಣಗಳು ನೀರಿನಲಿ ಅದೆಷ್ಟು ಚಿತ್ರ ಬಿಡಿಸುವವೋ, ನಾ ಕಾದು ನೋಡಬೇಕು.. ಬೇಡ, ಬೇಡ.. ಮಳೆ ಬರುವುದೇ ಬೇಡ.. ನಿನಗೆಂದೇ ನಾ ಒಣಗಿಸಿಟ್ಟ ನಿನ್ನದೇ ಚಹರೆಗಳವು ಗೆಳತೀ.. ಹೇಳಿದೆನಲ್ಲ, ಮತ್ತೊಂದು ಮಗ್ಗುಲಲ್ಲಿ ಕನಸುಗಳಿವೆ.. ನನ್ನತನವ ಅಡವಿಡಬೇಕಿಲ್ಲವಂತೆ ಕನಸು ಕಾಣೋದಿಕ್ಕೆ.. ನೆನಪುಗಳೇ ಕನಸುಗಳೆಂದು, ಕನಸುಗಳೇ ನೆನಪುಗಳೆಂದು ಬಿಕರಿಗಿಡುತ್ತೇನೆ.. ದರ ಮಾತ್ರ ಕೇಳಬೇಡ; ಇದು ಮನಸಿನ ವ್ಯಾಪಾರ.. ! ಇನ್ನೊಂದಿಷ್ಟು ದಿನದಲ್ಲಿ ಹೊಸ ಒಪ್ಪಂದ ಶುರುವಾಗಬಹುದು.. ಮತ್ತ್ಯಾವುದೋ ಲೇಖನಿ ಇನ್ನೊಂದು ಶೀರ್ಷಿಕೆಯ ಬರೆಯಬಹುದು.. ನಾನು ಕೇಳಿಸಿಕೊಳ್ಳುತ್ತೇನೆ; ಹೌದು, ಇನ್ನು ಮುಂದೆ ಗಡಿಯಾರಗಳು ಮಾತನಾಡುತ್ತವೆ...


~‘ಶ್ರೀ’
  ತಲಗೇರಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ