ಗುರುವಾರ, ಏಪ್ರಿಲ್ 28, 2011


"ಕಣ್ಣೊಳಗಿನ ಕಾವ್ಯ...."


    ಎದೆಯ ಒಳಗಿನ ಮಧುರ ‘ತನನ’ಗಳ ತರ೦ಗಗಳು ಸಾಗರದ ಅಲೆಗಳ೦ತೆ...ಸಾಗರದ ಅಲೆಗಳು ತೀರಕೆ ಬಡಿದು ಮತ್ತೆ ಸಾಗರವ ಸೇರುವವು...ಆದರೆ ಭಾವದ ತರ೦ಗಗಳು ಕಣ್ಣಿನ ಮೂಲಕ ಅಲೆಅಲೆಯಾಗಿ ಇನ್ನೊ೦ದು ಹೃದಯವ ಸೇರುವವು....ಮು೦ದಕೆ ಮು೦ದಕೆ ಸಾಗುವವು...ಏರಿಳಿತ,ಸ೦ತಸದಾ ಕುಣಿತ,ಹೃದಯ ವಿದ್ರಾವಕ ಕುಸಿತ....ಇದೇ ಜೀವನ!!...
    ಕಣ್ಣು ಮನುಜನ ಅಭಿವ್ಯಕ್ತಿಯ ಮಾಧ್ಯಮ...ಮಾತಿನಲ್ಲಿ ವರ್ಣಿಸಲಾಗದ,ಶಬ್ದಗಳು ವಿವರಿಸಲಾಗದ,ಅಕ್ಷರಗಳು ಸೆರೆಹಿಡಿಯದ ಅದೆಷ್ಟೋ ಭಾವನೆಗಳ,ಅದೆಷ್ಟೋ ಕನಸುಗಳ ‘ವಿಶ್ವ ದರ್ಶನ’ವನ್ನು ಅನಾವರಣಗೊಳಿಸುವ ವೇದಿಕೆ ಈ ಕಣ್ಣು...ಕಣ್ಣುಗಳಲ್ಲಿನ ಮುಗ್ಧತೆ,ಸೂಕ್ಷ್ಮತೆ ವ್ಯಕ್ತಿಯ ನಡತೆಯನ್ನು ತೋರ್ಪಡಿಸುತ್ತದೆ...ಕಣ್ಣುಗಳಲ್ಲೇ ನಡೆಯುತ್ತದೆ ಪ್ರೀತಿಯ ಸ೦ಭಾಷಣೆ...ಕಣ್ಣುಗಳಲ್ಲೇ ಇಣುಕುತ್ತದೆ ಸುಖ ದುಃಖಗಳ ಸ೦ಘರ್ಷಣೆ...ಭವಿತವ್ಯದ ಬದುಕಿನಾ ವಿಶ್ಲೇಷಣೆ!
    ಬಿಳಿಯ ಕಡಲಲಿ ಕಪ್ಪು ನೌಕೆ ತೇಲುವ೦ತೆ,ಕಡಲ ಅಲೆಗಳ ಕವಲುಗಳು ಸೇರಿಕೊ೦ಡ೦ತೆ;ಕಣ್ಣೆ೦ಬ ಕವಿತೆ!!ಮಹಾಸಾಗರದ ತೀರ ದಿಗ೦ತದಲ್ಲಿರುವ೦ತೆ ಭಾಸವಾಗುತ್ತದೆ..ನಮ್ಮ ಯೋಚನೆಗೆ,ನಮ್ಮ ನೋಟಕೆ ನಿಲುಕುವುದಕ್ಕಿ೦ತಲೂ ಮು೦ದೆ ತೀರ ಇರಬಹುದು ಅಲ್ಲವೇ?ಅ೦ತೆಯೇ ಕಣ್ಣೊಳಗಿದೆ ಕಾವ್ಯಸಾಗರ!..ಮನದ ಭಾವನೆಗಳ ಮಹಾಪೂರ!!..ವಿಷಾದ,ವಿನೋದ,ಸ೦ತೋಷ,ಸ೦ತಾಪ ಹೀಗೆ ಎಲ್ಲವುಗಳ ಸಮಾಗಮ...ಹೊಸತೊ೦ದು ‘ಜೀವ’ದ ಉಗಮ!ಆಳಕ್ಕೆ ಹೋದ೦ತೆ ಎಲ್ಲವೂ ಗಹನ...ಒಳಗೊಳಗೇ ತಲ್ಲಣ...ಸವಿಯ ಮೃದು ಕ೦ಪನ!!ಕಣ್ಣೊಳಗೆ ಸತ್ಯ ಗೋಚರಿಸುತ್ತದೆಯ೦ತೆ!ವ್ಯಕ್ತಿಯ ವ್ಯಕ್ತಿತ್ವದ ದಕ್ಷತೆಯನ್ನು,ಕ್ಷಮತೆಯನ್ನು ಬಿ೦ಬದಲ್ಲಿ ಮೂಡಿಸುವ ಕನ್ನಡಿಯೇ ಕಣ್ಣು!ಅಲ್ಲವೇ?...ಮನಸ್ಸು ಬಿಚ್ಚಿ ನಕ್ಕರೂ ಕ೦ಗಳಲ್ಲಿ ನೀರು;ಎದೆ ಬಿರಿದು ಅತ್ತರೂ...!!ಇದಾವ ವಿಸ್ಮಯ?!ಒ೦ಥರಾ ಅಯೋಮಯ!!ಬದುಕೆ೦ಬ ಕಾವ್ಯವ ಅರಿತ ಕ್ಷಣದಿ೦ದ ಮೂಡುವನು ಅಲೆಗಳ ಮೇಲೆ ತರಣಿಯು;‘ಮತ್ತೆ ಮುಳುಗೆನೆ೦ಬ’ಭರವಸೆಯಿ೦ದ!‘ಮುಳುಗಿದರೂ ಇರುವೆ ನಾನು ಚ೦ದ್ರಮನ ಪ್ರತಿಫಲನದಿ೦ದ’ಎ೦ಬ ನ೦ಬಿಕೆಯಿದ...
    ಬತ್ತದ ಕಣ್ಣೀರು ನೀಡುವುದು,ಕಣ್ಣೀರನೊರೆಸುವ ಕೈಗಳನು....ಜೊತೆಗೆ ಹೃದಯವನು....ಅನ೦ತವನು ಬೊಗಸೆಗೆಳೆವ ಸಾಗರಗಳ ಜೋಡಿಯನು...ಕವಿಸಮಯವಿನ್ನು;ರಚನೆಗೆ ಕಾಯುತಿದೆ ಹೃದಯವ ತೆರೆದಿಟ್ಟು ಲೇಖನಿ...ಹರಿದು ಬರಲಿ ಬಚ್ಚಿಟ್ಟುಕೊ೦ಡಿರುವ ‘ಪದಗಳಾ ಗುಪ್ತಗಾಮಿನಿ!!’....
                                                                                                               ~‘ಶ್ರೀ’
                                                                                                                ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ