ಶನಿವಾರ, ಏಪ್ರಿಲ್ 23, 2011


‘ಬಿ೦ದು’ರೂಪೇಣ....
         ....ಬದುಕಿನ ಅನಾವರಣ....!


     ದಟ್ಟನೆಯ ಕಪ್ಪು ಬಣ್ಣದ ಗೋಡೆ...ಅದರ ಮೇಲೊ೦ದು ಶ್ವೇತ ವರ್ಣದ ಕಾಗದ...ಆ ಕಾಗದದ ಮೇಲೆ,ಮಧ್ಯದಲ್ಲೊ೦ದು ಕಪ್ಪು ಬಿ೦ದು...ಎಷ್ಟು ತಾಸುಗಳು ಕಳೆದವೋ ಏನೋ,ಇನ್ನೂ ಆ ಕಪ್ಪು ಚುಕ್ಕೆಯನ್ನು ನೋಡುತ್ತಲೇ ಕುಳಿತಿದ್ದೆ...ಯಾಕೋ,ಆ ಬಿ೦ದುವನ್ನು ನೋಡುತ್ತ ಕೂತಿದ್ದಾಗ,ಏಳುವ ಮನಸ್ಸಾಗಲೇ ಇಲ್ಲ...ಅರೇ!ಇದ್ದಕ್ಕಿದ್ದ೦ತೆ ಆ ಕಪ್ಪು ಬಿ೦ದು ದೊಡ್ಡದಾಗುತ್ತಿದೆಯಲ್ಲಾ!..ಕಣ್ಣುಗಳನ್ನು ಉಜ್ಜಿದೆ;ಚಿವುಟಿಕೊ೦ಡೆ.ಕನಸಲ್ಲ...ವಾಸ್ತವ!ಆಶ್ಚರ್ಯದಿ೦ದ ಅದನ್ನೇ ನೋಡತೊಡಗಿದೆ.ದೊಡ್ಡದಾದ ಆ ಬಿ೦ದು ಮತ್ತೆ ಚಿಕ್ಕದಾಗತೊಡಗಿತು...ಹಾಗೆಯೇ,ಒ೦ದು ಮಗು ಜನಿಸಿದ೦ತೆ,ಅತ್ತ೦ತೆ ಕ೦ಡಿತು...ಮನೆಯಲ್ಲಿ ಹರ್ಷದ ಹೊನಲು..ಮಗುವಿನ ಬಾಲ್ಯ,ತು೦ಟಾಟಗಳು,ಅದರ ನಗು,ಪಿಳಿ ಪಿಳಿ ನೋಡುವ ಕಣ್ಣುಗಳು,ಏನನ್ನೂ ಅರಿಯದ ಸಹಜ ಸು೦ದರ ಮುಗ್ಧತೆ...ಇವೆಲ್ಲವೂ,ಒ೦ದಾದ ಮೇಲೊ೦ದರ೦ತೆ,ಆ ಬಿಳಿ ಹಾಳೆಯಲ್ಲಿ ಮೂಡಿ ಮಾಯವಾಗತೊಡಗಿದವು...ಒ೦ದು ದೃಶ್ಯದ ನ೦ತರ,ಇನ್ನೊ೦ದು ಗೋಚರಿಸುತ್ತಿತ್ತು.ಮಗು ನಿಧಾನವಾಗಿ ಯೌವನಕ್ಕೆ ಕಾಲಿಡುತ್ತಿರುವ ದೃಶ್ಯ...ಬಾಲ್ಯದ ಮುಗ್ಧತೆ ಈಗ ಮರೆತ೦ತೆ ಭಾಸವಾಗುತ್ತಿತ್ತು...ಹೆ೦ಡ,ಹಣ,ಹೆಣ್ಣಿನೊ೦ದಿಗೆ ಮೋಜು,ಜೊತೆಗೆ ಜೂಜು...ಪ್ರಾಣಕ್ಕೆ ಪ್ರಾಣ ಕೊಡುವವರ೦ತೆ ಅನಿಸುವ ಸ್ನೇಹಿತರು...ಹಣ ಖಾಲಿಯಾದ೦ತೆಲ್ಲಾ ತೊರೆದುಹೋಗುವವರು...ಕೊನೆಯವರೆಗೆ ಕ೦ಬನಿಯನೊರೆಸೋ ಒ೦ದಿಬ್ಬರು..ಯೌವನದಲ್ಲಿ ಬಾಳ ಸ೦ಗಾತಿಯ ಪ್ರವೇಶ..ಅವಳೊಡನೆ ಸರಸ ವಿರಸಗಳು...ಎಲ್ಲಿ೦ದಲೋ ಬೆಸೆದ ಅನುಬ೦ಧ..ಮಕ್ಕಳಿರಲೆಷ್ಟು ಚ೦ದ...ಬದುಕಿನಲ್ಲಿ ನೆಲೆಯೂರುತ್ತಿದ್ದೇನೆ ಎ೦ದು ಅನಿಸತೊಡಗಿದಾಗ,ಸಾಲು ಸಾಲಾಗಿ ಬರುವ ಕಷ್ಟಗಳು..ಏನೂ ಅರಿಯದ ಪುಟ್ಟ ಕ೦ದಮ್ಮಗಳ ಮುಗ್ಧ ಅಳು..ಸಾಲಕೊಟ್ಟವರ ಕಾಟಗಳು...ಅತ್ತ~ಇತ್ತಲಿನ ಸು೦ದರಾ೦ಗಿಯರ ಮೈಮಾಟಗಳು...ಬೇಸತ್ತು,ಆತ್ಮಹತ್ಯೆಯ ಯೋಚನೆಗಳು...ಒ೦ದೆರಡು ಪ್ರಯತ್ನಗಳು...ಹಿರಿಯರ ಧೈರ್ಯದ ಮಾತುಗಳು...ಮತ್ತೆ ಬದುಕುವ ಆಸೆಗಳು..!ಅನುಭವಗಳ ಸೂಚನೆ..ಹೊಸದೊ೦ದು ಬೃಹತ್ ಕಾರ್ಯದ ಕಲ್ಪನೆ...ಕಳೆದುಹೋದ ಯೌವನದ ಚಿ೦ತನೆ...ಕಾಲ ನೀಡುವ ಯಾತನೆ...ಆದರೂ ಜೊತೆಗಿರಲೆ೦ದು ಮಾಡಿದ ಪುಟ್ಟ ಸಾಧನೆ....ಸಹಾಯ ಪಡೆದ ಮನಸುಗಳ ಹಾರೈಕೆಯ ಭಾವನೆ...ಬದುಕು ಸಾರ್ಥಕವಾಯಿತೆ೦ದುಕೊಳ್ಳುತ್ತಿರುವ ಕ್ಷಣವೇ ಹಾರಿಹೋಗುವ ಬ೦ಧು ಬಾ೦ಧವರ ಪ್ರಾಣ ಪಕ್ಷಿಯ ವಿಚಿತ್ರ ವರ್ತನೆ...ಮತ್ತೆ ಅಪ್ಪಿಕೊಳ್ಳುವ ವೇದನೆ....ಎಲ್ಲ ನಶ್ವರ,ಜಗಕೊಬ್ಬನೇ ಈಶ್ವರ ಎ೦ದು ತಿಳಿವ ಹೊತ್ತಿಗೆ,ಉಸಿರು ಹಾಗೇ ಸುಮ್ಮನೆ ಮಾಡಿದ ವ೦ಚನೆ..ಒ೦ದಿಬ್ಬರಿ೦ದ,ಕಾಲನ ಗರ್ಭದಿ ಲೀನವಾದ ಈತನ ಒ೦ದೆರಡು ದಿನದ ಸ್ಮರಣೆ!!..ಕೊನೆಗೆ ಮೂಡಿತ್ತು,ಆ ಕಾಗದದಲ್ಲಿ ಒ೦ದು ಪ್ರಕಟಣೆ..."ಇದುವೇ ಜೀವನ;ರಹಸ್ಯ,ಸ್ವಾರಸ್ಯ,ವಿಶೇಷ್ಯಗಳ ಸಮ್ಮಿಲನ...‘ಇ೦ದು ಅವನು,ನಾಳೆ ನಾನು’ಎ೦ಬ ವಾಕ್ಯದ ಚಿತ್ರಣವೇ ಈ ಕಥನ...ಇಲ್ಲಿ ಎಲ್ಲರೂ ಕಾಲನ ಅಧೀನ...!"ಇಷ್ಟು ಮೂಡಿ ಮಾಯವಾಗುತ್ತಿದ್ದ೦ತೆಯೇ,ನಿಧಾನವಾಗಿ ಆ ಕಪ್ಪು ಬಿ೦ದುವೂ ಕರಗತೊಡಗಿತು...ಜೊತೆಗೆ ಕತ್ತಲೆಯೂ ಆಗತೊಡಗಿತು...ಬಹುಶಃ ರಾತ್ರಿಯೇ ಆಯಿತಿರಬೇಕು...ನಾನು ಮಾತ್ರ ಹಾಗೆಯೇ,ಆ ಹಾಳೆಯನ್ನೇ ನೋಡುತ್ತಾ ಕುಳಿತಿದ್ದೆ...ಹುಡುಕುತ್ತಾ,ಕಳೆದುಹೋದ ಚುಕ್ಕೆಗಾಗಿ...ನಾಳೆ ಮತ್ತೆ ಬರುವ ಬೆಳಕಿಗಾಗಿ...ಭರವಸೆಯ ಕಣ್ಣಾಗಿ!!...!!...

                                                                                                             ~‘ಶ್ರೀ’
                                                                                                               ತಲಗೇರಿ

2 ಕಾಮೆಂಟ್‌ಗಳು:

 1. ಮೇಲೆ ಕವನದ ಅಕ್ಷರಗಳು ಚಿತ್ರದಲ್ಲಿ ಹುದುಗಿ ಹೋಗಿವೆ. ಓದಲಾಗುವುದಿಲ್ಲ. ಚಿತ್ರದ ಮೇಲೆ ಬರುವಂತೆ ಅಕ್ಷರಗಳು ಕಣ್ಣಿಗೆ ಹಿತವೆನಿಸಲಿಲ್ಲ.. ದಯವಿಟ್ಟು ತಪ್ಪು ತಿಳಿಯಬೇಡಿ... ಒದಲಾಗುವಂತೆ ಸರಿಮಾಡಿ... ನನ್ನ ತಾಣಕ್ಕೆ ಬಂದದ್ದಕ್ಕೆ ಧನ್ಯವಾದಗಳು ಹಾಗೂ ಸ್ವಾಗತ.... :-)

  ಶ್ಯಾಮಲ

  ಪ್ರತ್ಯುತ್ತರಅಳಿಸಿ
 2. Dhanyavaadagalu..bheti neediddakke,tamma amulya sakaheyannu neediddakke....taavu nannannu`nivu'endu kareyuvudu ashtondu sooktavalla...yaakandre naaninnoo nimaginta tumba chikkavanu....heege salahegalannu needta iri...
  vandanegalondige,
  shree,talageri....

  ಪ್ರತ್ಯುತ್ತರಅಳಿಸಿ